ನಮ್ಮೂರ ಶಾಲೆಗಳಿಗೆ ಕೊನೆಯ ಅವಕಾಶ!

7

ನಮ್ಮೂರ ಶಾಲೆಗಳಿಗೆ ಕೊನೆಯ ಅವಕಾಶ!

ಐ.ಎಂ.ವಿಠಲಮೂರ್ತಿ
Published:
Updated:

ಕಲಿಕಾ ಮಾಧ್ಯಮದ ವಿಷಯಕ್ಕೆ ಸಂಬಂಧಿಸಿ­ದಂತೆ ನನ್ನ ಶಾಲಾ ದಿನಗಳ ಅನುಭವ ಹಂಚಿ­ಕೊಂಡರೆ, ಅದು ನನ್ನ  ತಲೆಮಾರಿನವರ ಸಾಮಾನ್ಯ ಅನುಭವ­ವಾಗಬಹುದೆಂದು ಭಾವಿ­ಸು­ತ್ತೇನೆ.  ಕನ್ನಡ ಮಾಧ್ಯಮದಲ್ಲಿ ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿ­ದ್ದಾಗ ನನ್ನ ತಂದೆ ಮನೆಯಲ್ಲೇ ಇಂಗ್ಲಿಷ್‌ ಅಕ್ಷರಗಳನ್ನು ಕಲಿಸಿ ಇಂಗ್ಲಿಷ್‌ ಕಲಿಕೆಗೆ ಪರಿಚಯಿಸಿದರು.7ನೇ ತರಗತಿ­ಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತು 8ನೇ ತರಗತಿಗೆ ಬೇಲೂರಿನ ಮುನ್ಸಿಪಲ್‌ ಹೈಸ್ಕೂಲ್‌ಗೆ ಸೇರಿದೆ. ಶಾಲೆಯ ಪ್ರಾರಂಭದ ದಿನ ವಿದ್ಯಾರ್ಥಿ­ಗಳ ಹೆಸರು ಕರೆದು ನಮ್ಮನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿದರು. ‘ಎ’ ಮತ್ತು ‘ಬಿ’ ಸೆಕ್ಷನ್‌ ವಿದ್ಯಾರ್ಥಿಗಳೆಂದು ನಮ್ಮನ್ನು ಎರಡು ಕೊಠಡಿಗಳಿಗೆ ಕಳುಹಿಸಿದರು. ‘ಬಿ’ ಸೆಕ್ಷನ್‌ನಲ್ಲಿ ಕುಳಿತ ನನಗೆ ಪಟ್ಟಣದ ಶಾಲೆ, ಹೊಸ ಸಹಪಾಠಿ­ಗಳು ಒಂದು ಅಪರಿಚಿತ ವಾತಾವರಣ.ಪಿಎನ್‌ವಿ ನಮ್ಮ ಗಣಿತದ ಮೇಷ್ಟ್ರು.  ಲೆಕ್ಕ ಬರೆದು­­ಕೊಳ್ಳಲು ಹೇಳಿದರು. ‘ಹನು­ಮಂತ­ರಾವ್‌’ ಎಂದು ಶುರು ಮಾಡಿದರು. ನಾನು ಸಹಜ­­ವಾಗಿ ಅದನ್ನು ಕನ್ನಡದಲ್ಲಿ ಬರೆದು­ಕೊಂಡೆ. purchased a bicycle ಎಂದರು. ಗಲಿಬಿಲಿಗೊಂಡು ಅದನ್ನು ಇಂಗ್ಲಿಷ್‌ನಲ್ಲಿ ಬರೆ­ದುಕೊಂಡೆ. ನನಗೆ ಆಗಲೇ ಗೊತ್ತಾಗಿದ್ದು ನಾನು ಇಂಗ್ಲಿಷ್‌ ಮೀಡಿಯಂ ಸೆಕ್ಷನ್‌ನಲ್ಲಿ ಇದ್ದೇನೆಂದು.ಹೀಗೆ 8ನೇ ತರಗತಿಯಲ್ಲಿ ಬರೆದ ನೋಟ್‌ ಪುಸ್ತಕ ಇತ್ತೀಚಿನವರೆಗೆ ನಮ್ಮ ಊರಿನ ಮನೆಯ ಅಟ್ಟದ ಮೇಲಿತ್ತು. 7ನೇ ತರಗತಿಯಲ್ಲಿ ಇಂಗ್ಲಿಷ್‌ ಭಾಷೆ­ಯಲ್ಲಿ ಹೆಚ್ಚು ಅಂಕ ಗಳಿಸಿದ್ದವ­ರನ್ನು ಇಂಗ್ಲಿಷ್‌ ಮಾಧ್ಯಮ ವಿಭಾಗಕ್ಕೆ ಆಯ್ದು ಸೇರಿಸಿದ್ದರೆಂದು ನಂತರ ತಿಳಿಯಿತು. ಅಲ್ಲಿ ಕಲಿ­ಕೆಯ ಮಾಧ್ಯಮದ ಆಯ್ಕೆ ವಿದ್ಯಾರ್ಥಿ­ಯದ್ದು ಆಗಿರಲಿಲ್ಲ, ಪೋಷಕ­ರದ್ದೂ ಆಗಿರಲಿಲ್ಲ.ಒಂದು ಆಕಸ್ಮಿಕದಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿ­ಯಲು ಆಯ್ಕೆಯಾಗಿದ್ದೆ. ನನ್ನಂತೆ ರಾಜ್ಯದುದ್ದ­ಗಲಕ್ಕೂ ಹೀಗೆ ಹಲವಾರು ಆಕಸ್ಮಿಕ­ಗಳಿಂದ ವಿದ್ಯೆ ಕಲಿತು ದಡ ಸೇರಿದ ಉದಾ­ಹರಣೆಗಳು ಸಾಕಷ್ಟು ಇರಬಹುದು. ಕಾಲೇಜು ಕಲಿಯಲು ಬೆಂಗಳೂರಿಗೆ  ಬಂದ ನಂತರ ಮಾಧ್ಯಮ ಇಂಗ್ಲಿಷ್‌ ಆದರೂ ಕನ್ನಡದ ಉತ್ತಮ ವಾತಾವರ­ಣವಿತ್ತು.ರಾಷ್ಟ್ರಮಟ್ಟದಲ್ಲಿ ಖ್ಯಾತ­ನಾಮ­ರಾದ ಸಾಹಿತಿಗಳು, ನಾಟಕಕಾ­ರರು ಹಾಗೂ ನೈಜ ಕನ್ನಡ ಪ್ರೀತಿಯ ಚಳವಳಿಗಳು ಇತ್ಯಾದಿ. ಅನಕೃ ಅವರ ಭಾಷಾ ಪ್ರೇಮ,  ಪ್ರೇರೇ­ಪಿ­ಸುವಂತಹ ಭಾಷಣಗಳು, ವಾಟಾಳ್‌ ನಾಗ­ರಾಜ್‌ ಅಂತಹವರು ನಡೆಸುತ್ತಿದ್ದ ಬೀದಿ ಚಳವಳಿ­ಗಳು... ಹೀಗೆ ಬೆಂಗಳೂರು ನಿಜವಾ­ಗಿಯೂ ಕನ್ನಡ­ಮಯವಾಗಿತ್ತು.ಅಂದಿನ ಕನ್ನಡ ಸಿನಿಮಾ­ಗಳು, ನಾಟಕಗಳು ರಾಷ್ಟ್ರ ಮನ್ನಣೆ ಪಡೆದಿದ್ದವು. ಸಾಂಸ್ಕೃತಿಕವಾಗಿ ಕನ್ನಡಿಗನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದ ಕಾಲ. ರಾಜ್ಯದೆಲ್ಲೆಡೆ ಕನ್ನಡಕ್ಕೆ ಪ್ರಾಶಸ್ತ್ಯವಿದ್ದ ಕಾಲ ಅದು. ಕ್ರಮೇಣ ಅದು  ಕ್ಷೀಣಿಸಿ ಹೊಸ ಸವಾಲುಗಳನ್ನು ಎದುರಿಸುವ ಕಾಲ ಸನ್ನಿಹಿತವಾಯಿತು.ಉದ್ದಿಮೆಗಳ ಬೆಳವ­ಣಿಗೆ, ಪರಭಾಷಾ ವಲಸಿಗರ ಪ್ರವಾಹ,  ಜಾಗತೀ­ಕರಣ, ಬೆಂಗಳೂರು ಮಾಹಿತಿ ತಂತ್ರಜ್ಞಾನದ ಬೃಹತ್‌ ಕೇಂದ್ರವಾಗಿ ಬೆಳೆದು ವಿಶ್ವದೆ­ಲ್ಲೆಡೆ­ಗ­ಳಿಂದ ಬಂದ ಹೊಸ ತಲೆಮಾರಿನ ಜನ­ಸಮು­ದಾಯ ಬೆಂಗಳೂರಿನ ಸಾಂಸ್ಕೃತಿಕ ಚಿತ್ರಣವನ್ನೇ ಬದಲಿಸಿವೆ. ಕನ್ನಡದ ಪ್ರಾಮುಖ್ಯತೆಯ ಪ್ರಸ್ತುತ­ತೆ­ಯನ್ನು ಪ್ರಶ್ನಿಸುತ್ತಿವೆ. ಈ  ಬೆಳವಣಿಗೆಗಳಾಗುತ್ತಿದ್ದ ಕಾಲ­ಘಟ್ಟ­ದಲ್ಲೇ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದ ನನಗೆ ಆಡಳಿತದಲ್ಲಿ ಕನ್ನಡದ ಅನುಷ್ಠಾನದ ಜವಾಬ್ದಾರಿ ಹೆಗ­ಲೇರಿತು.ಭಾಷಾ ತಜ್ಞರ ನೆರವಿ­ನಿಂದ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನ­ಗೊಳಿ­ಸುವ ಕೆಲಸ ಮಾಡಬೇಕಾಯಿತು. ಸರ್ಕಾರ­ದಿಂದ ಹೊಸ ಹೊಸ ಆದೇಶ­ಗಳನ್ನು ಹೊರಡಿಸಿ, ವಿವಿಧ ಇಲಾಖೆಯ ಅಧಿಕಾರಿಗಳ ಬೆನ್ನು ಹತ್ತಿ­ದ್ದರೂ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಿದ್ದ­ರಾಮಯ್ಯ ಅವರನ್ನು ‘ಕನ್ನಡ ಕಾವಲು ಸಮಿತಿ’ ಅಧ್ಯಕ್ಷರಾಗಿ ನೇಮಿಸಿದರು. ಕನ್ನಡವನ್ನು ಕಾಯು­ವುದೋ ಅಥವಾ ಅಧಿಕಾರಿಗಳನ್ನು  ಕಾಯು­ವುದೋ  ಎಂಬುದು ಅವರಿಗೆ ತಿಳಿಯದಾಯಿತು.ನಂತರ ಅದು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’­ವಾಗಿ ರೂಪಾಂತರ­ಗೊಂಡಿತು. ಕನ್ನಡದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದವರು ಅದರ ಅಧ್ಯಕ್ಷ­ರಾದರು. ಕೆಲವರಂತೂ ಉತ್ತಮ ಪ್ರಯತ್ನ  ಮಾಡಿ ಸ್ವಲ್ಪ ಯಶಸ್ಸು ಗಳಿಸಿದರು. ಆದರೆ, ನಾನು ಸೇವೆಗೆ ಸೇರಿದ ದಿನದಿಂದ ಇಂದಿನವರೆಗೆ, ‘ಆಡುವ ಭಾಷೆ’ಗೂ ‘ಆಡಳಿತದ ಭಾಷೆ’ಗೂ ಏನೇನೂ ಸಂಬಂಧವಿಲ್ಲ­ವೆಂದು ಖಂಡಿತವಾಗಿ ಹೇಳಬಹುದು.ಒಮ್ಮೆ ಶ್ರೀಕೃಷ್ಣ ಆಲನಹಳ್ಳಿ ಅವರನ್ನು ಆಡಳಿತ ಕನ್ನಡ ಶಿಬಿರಕ್ಕೆ ಆಹ್ವಾನಿಸಿದ್ದೆ. ಅವರು  ಹೇಳಿ­ದರು, ‘ನೀವು ಆಡಳಿತ­ಗಾರರು ಬಳಸುವ ಕನ್ನಡ ಭಾಷೆ ಹಳ್ಳಿ­ಯಲ್ಲಿರುವ ಕನ್ನಡ ಗೊತ್ತಿರುವ ನಮ್ಮಪ್ಪನಿಗೂ ಅರ್ಥವಾಗಬೇಕು.  ಆದರೆ, ನಿಮ್ಮ ಆಡಳಿತ ಭಾಷೆ ಹೇಗಿದೆ­ಯೆಂದರೆ, ನನ್ನಂತ­ಹವನಿಗೂ ಅರ್ಥ­ವಾಗು­ವುದಿಲ್ಲ. ಅಷ್ಟೊಂದು ಗೋಜಲು ಮಾಡಿಟ್ಟಿದ್ದೀರಿ’ ಎಂದು ಛೇಡಿಸಿ-­ದರು.‘ಆಡುವ ಭಾಷೆಯೇ ಆಡಳಿತ ಭಾಷೆ­ಯಾಗ­ಬೇಕಾದರೆ, ಕನ್ನಡದಲ್ಲಿ ಯೋಚಿಸಿ ಕನ್ನಡ­ದಲ್ಲಿ ಬರೆಯಿರಿ. ಸಂಸ್ಕೃತ ಮತ್ತು ಇಂಗ್ಲಿಷ್‌ ಪದ­ಗಳ ಹಂಗಿನಲ್ಲಿರಬೇಡಿ’ ಎಂದರು. ‘ಸರ್ಕಾರ­ದಿಂದ ಇಂಗ್ಲಿಷ್‌ನಲ್ಲಿ ಪತ್ರ ಹೋದರೆ ಅದನ್ನು ಇಂಗ್ಲಿಷ್‌ ಬಲ್ಲವರಿಂದ ಓದಿಸಿ ತಿಳಿದು­ಕೊಳ್ಳ­ಬಹುದು. ಸಂಸ್ಕೃತಮಯ ಕನ್ನಡದಲ್ಲಿ ಬಂದರೆ ಯಾರಿಂದ ತಿಳಿದು­ಕೊಳ್ಳಬೇಕು’ ಎಂದು ಪ್ರಶ್ನಿಸಿದರು.‘ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ಮಕ್ಕಳ ಪೋಷಕರಿಗೆ ಬಿಟ್ಟಿದ್ದು’­ – ಇದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಇತ್ತೀಚಿನ ತೀರ್ಪು. ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ  ಹೊರಬಂದಿರುವ ಸರ್ಕಾ­ರದ ಆದೇಶಗಳು, ನ್ಯಾಯಾಲ­ಯದ ತೀರ್ಪು­ಗಳು ಮಕ್ಕಳನ್ನು, ಪೋಷಕ­ರನ್ನು, ಶಿಕ್ಷಣ ತಜ್ಞ­ರನ್ನು ವಿಚಿತ್ರ ಗೊಂದ­ಲಕ್ಕೆ ಸಿಕ್ಕಿಸಿವೆ.ಸರ್ಕಾರಿ ಶಾಲೆ­ಗಳು, ಅನುದಾನಿತ ಶಾಲೆಗಳು, ಖಾಸಗಿ ಶಾಲೆ­­ಗಳು, ಅಂತರರಾಷ್ಟ್ರೀಯ ಶಾಲೆಗ­ಳು... ಹೀಗೆ ತರಹೇವಾರಿ ಶಾಲೆಗಳಿವೆ. ವಿವಿಧ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ­ಯಿಂದ ಬಂದ ಮಕ್ಕಳ ಶಿಕ್ಷಣ, ವಿವಿಧ ವರ್ಗಭೇದದ ಶಾಲೆಗಳು, ಶಿಕ್ಷಣ ಮಾಧ್ಯಮದ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ.ಕನ್ನಡಕ್ಕೆ ಸಂಬಂಧಿಸಿದ ಪ್ರತಿಯೊಂದು ತುರ್ತು ಸಂದರ್ಭದಲ್ಲೂ ಸರ್ಕಾರ  ಸಾಹಿತಿ, ಕಲಾವಿ­ದರ, ಬುದ್ಧಿಜೀವಿಗಳ ಸಭೆ ಕರೆಯವುದು ಸಾಮಾನ್ಯ ವಾಡಿಕೆ. ಇಂಥದ್ದಕ್ಕೆ ಸರ್ಕಾರದಲ್ಲಿ ಸದಾ ಸಿದ್ಧವಿರುವ ಒಂದು ಆಹ್ವಾನಿಸ­ಬೇಕಾ­ದ­ವರ ಪಟ್ಟಿ ಇದೆ. ಕಳೆದ 30–35 ವರ್ಷಗಳಿಂದ ಅದು ಪರಿಷ್ಕೃತಗೊಂಡಿಲ್ಲ. ಪ್ರಪಂಚದೆಲ್ಲೆಡೆ ಎಷ್ಟೇ ಬದಲಾವಣೆಗ­ಳಾ-ಗಿದ್ದರೂ ಇವರ ವಿಚಾರಗಳು ಕಿಂಚಿತ್ತೂ ಬದಲಾಗಿಲ್ಲ.ಅಲ್ಲಿ ಬರುವ ಬಹುತೇಕರ ಮೊಮ್ಮಕ್ಕಳು ಅಂತರ­ರಾಷ್ಟ್ರೀಯ ಶಾಲೆಗಳಲ್ಲಿ ಕಲಿಯುತ್ತಿ­ದ್ದರೂ ನಾಡಿನ ಉಳಿದೆಲ್ಲಾ ಜನರ ಮಕ್ಕಳು ಕನ್ನಡ ಬಾವುಟವನ್ನು ಎತ್ತಿ ಹಿಡಿದು ಕನ್ನಡದ ದೀಪ ಆರದಂತೆ ಕಾಪಾಡಬೇಕು! ಆಹ್ವಾನಿತರಾದ ಗಣ್ಯರು ಸರ್ಕಾರಕ್ಕೆ ಸಲಹೆ ನೀಡಲೇ­ಬೇಕೆಂದು ಹಠ ಹಿಡಿದವರಂತೆ ಮಾತನಾ­ಡು­ತ್ತಾರೆ.ಇಡೀ ದೇಶದ ಮುಖ್ಯಮಂತ್ರಿ­ಗಳನ್ನೆಲ್ಲಾ ನಮ್ಮ ಮುಖ್ಯ­ಮಂತ್ರಿಗಳು ಒಗ್ಗೂಡಿಸಿ ನಾಯಕತ್ವ ವಹಿಸಿ ಮಾತೃ­­ಭಾಷೆ ರಕ್ಷಿಸಿ ಇತಿಹಾಸ ಪುರುಷರಾಗ­ಬೇಕೆಂದು ಬಯಸುತ್ತಾರೆ. ನಮ್ಮ ಪಕ್ಕದ ರಾಜ್ಯದ ಮುಖ್ಯಮಂತ್ರಿಗಳೇ (ತಮಿಳು­ನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ) ಗಡಿ ಹಾಗೂ ನೀರಿನ ವಿಷಯಗಳಲ್ಲಿ ನಮ್ಮೊಡನೆ ಸದಾ ಜಗಳ ಕಾಯುತ್ತಿರು­ವಾಗ, ಇಡೀ ದೇಶದ ಮುಖ್ಯ­ಮಂತ್ರಿ­­ಗಳನ್ನು ಒಗ್ಗೂಡಿಸಿ ಹೋರಾಡುವುದು ಸಾಧ್ಯವೇ?ಜಾಗತೀಕರಣದ ಹೊಸ ಸವಾಲುಗ­ಳನ್ನು ಎದುರಿಸಲು ನಮ್ಮ  ಶಿಕ್ಷಣ ವ್ಯವಸ್ಥೆ ವಿಫಲ­ವಾಗಿದೆ. ಶಾಲೆಗಳಲ್ಲಿ ಮೂಲ­ಸೌಕರ್ಯ ಸುಧಾರಣೆಗೆ ನಾವು ನೀಡ­ಬೇಕಾ­ದಷ್ಟು ಆದ್ಯತೆ ನೀಡಲಿಲ್ಲ. ಪ್ರಾರಂಭ­ದಲ್ಲಿ ಶಾಲಾ ಕೊಠಡಿಗಳ ಕೊರತೆಯಾದರೆ, ನಂತರದಲ್ಲಿ ಶಿಕ್ಷಕರ  ಕೊರತೆ, ಗುಣಮಟ್ಟದ ಕೊರತೆ. ಸರಿ­ಯಾಗಿ ಕಲಿಸುವ ಸಾಮರ್ಥ್ಯ ಮತ್ತು ಆಸಕ್ತಿ ಇಲ್ಲದ ಶಿಕ್ಷಕರು. ಇದರಿಂದ ಪೋಷಕರಿಗೆ ನೆಮ್ಮದಿ ಇಲ್ಲವಾಯಿತು.ಸರ್ಕಾರಿ ಶಾಲೆಗಳಲ್ಲಿನ ಕೊರತೆಯ ಲಾಭ ಪಡೆದು ಖಾಸಗಿ ಇಂಗ್ಲಿಷ್‌ ಮಾಧ್ಯಮದ ಶಾಲೆ­ಗಳು ಹುಟ್ಟಿದವು. ಪ್ರಭಾವಿ ವ್ಯಕ್ತಿಗಳು, ಅವರ ಹಿಂಬಾಲ­ಕರು, ಮಠಗಳು, ಸರ್ಕಾರಿ ಅಧಿಕಾರಿ­ಗಳು... ಹೀಗೆ ಹತ್ತು ಹಲವು ವರ್ಗದ ಜನರು ಖಾಸಗಿ ಶಾಲೆಗಳನ್ನು ಆರಂಭಿಸಿ ಸರ್ಕಾರಿ  ಶಾಲೆ­ಗಳಿಗೆ ಪ್ರತಿಸ್ಪರ್ಧೆ ನೀಡಿ­ದರು.ಸರ್ಕಾರಿ ಶಾಲೆ­ಗಳಲ್ಲಿ ವಿದ್ಯಾರ್ಥಿ­ಗಳ ಸಂಖ್ಯೆ ಕುಸಿಯುತ್ತಾ ಹೋಯಿತು. ಪುಕ್ಕಟೆ ಬಸ್‌ ಪಾಸ್‌ ಪಡೆದ ವಿದ್ಯಾರ್ಥಿ­ಗಳು ಪಟ್ಟಣದ ಇಂಗ್ಲಿಷ್‌ ಮಾಧ್ಯಮ  ಶಾಲೆಗಳಿಗೆ ಸೇರಿದರು. ನವ ಇಂಗ್ಲಿಷ್‌ ಶಾಲೆಗ­ಳಿಗೆ ಬೇಡಿಕೆ  ಹೆಚ್ಚಾಯಿತು. ಅಪಾರ ಸಂಖ್ಯೆ­ಯಲ್ಲಿ ಖಾಸಗಿ ಶಾಲೆ­ಗಳು ಹುಟ್ಟಿ ಶೋಷಣೆಯ ಕೇಂದ್ರಗಳಾ­ದವು. ಈ ಶಾಲೆಗಳಲ್ಲಿ ಏನೇನೂ ಮೂಲ­ಸೌಕರ್ಯ ಇಲ್ಲದಿದ್ದರೂ ‘ಇಂಗ್ಲಿಷ್‌ ಮಾಧ್ಯಮದ ಗಾಳ’ದಿಂದ ಮಕ್ಕಳನ್ನು ಸೆಳೆಯ­ಲಾಯಿತು. ಸರ್ಕಾರಿ ಶಾಲೆ­ಗಳಿಗೆ ಪೋಷಕರಾಗ­ಬೇಕಿದ್ದ ರಾಜ­ಕಾರ­ಣಿಗಳು, ಅಧಿಕಾರಿಗಳು  ಆಂಗ್ಲ ಶಾಲೆ-­­ಗಳ ಮಾಲೀಕರಾದರು. ಇದು ಎಷ್ಟು ಕ್ಷಿಪ್ರವಾಗಿ ನಡೆಯಿತೆಂದರೆ ಇದನ್ನು ನಿಯಂತ್ರಿಸಲು ಸರ್ಕಾರಕ್ಕೇ ಸಾಧ್ಯವಾಗದೆ  ಕೈಚೆಲ್ಲಿತ್ತು.ಈ ಮುಕ್ತ ಆರ್ಥಿಕ ಜಗತ್ತಿನಲ್ಲಿ ಸ್ಪರ್ಧಿಸಿ ಗೆಲ್ಲಲು ಇಂಗ್ಲಿಷ್‌ ಮಾಧ್ಯಮ ಅನಿವಾರ್ಯ­ವೆಂದು ನಂಬಿ ಹಠಕ್ಕೆ ಬಿದ್ದವರಂತೆ ಎಲ್ಲ ವರ್ಗದ ಜನರು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇಂಗ್ಲಿಷ್‌ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೂಕುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಕಲಿಕಾ ವಿಧಾನಗಳ ಬಗ್ಗೆ ಸಂಶೋಧನೆ ಮಾಡುತ್ತಾ ಭಾಷಾ ಮಾಧ್ಯಮದ ಬಗ್ಗೆ ಶಿಕ್ಷಣ ತಜ್ಞ­ರೊಂದಿಗೆ, ಪಂಡಿತರೊಂದಿಗೆ, ಬುದ್ಧಿ­ಜೀವಿ­ಗ­ಳೊಂದಿಗೆ ವರ್ಷಗಟ್ಟಲೆ ವಿಧಾನ­ಸೌಧ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಅಂಗಳ ಹೀಗೆ ವಿವಿಧ ವೇದಿಕೆಗಳಲ್ಲಿ ಎಡೆಬಿಡದೆ ವಿಚಾರ ಮಂಥನ, ಕಾನೂನು ಹೋರಾಟ ನಡೆಸುತ್ತಿ­ದ್ದಾಗ ಪೋಷಕರಿಗೆ  ಮಕ್ಕಳನ್ನು ಮನೆಯಲ್ಲಿಟ್ಟು­ಕೊಂಡು ಸರ್ಕಾರದ ತೀರ್ಮಾನಗಳಿಗೆ ಕಾಯಲು ಸಮಯವಿರಲಿಲ್ಲ.ಮಕ್ಕಳನ್ನು ಕನಿಷ್ಠ ಸೌಲಭ್ಯವೂ ಇಲ್ಲದ, ದಕ್ಷತೆ ಇಲ್ಲದ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯ ಮಂಕಾಗುವಂತೆ ಮಾಡಲು ಅವರು ಸಿದ್ಧರಿರಲಿಲ್ಲ. ಈ ಅತಂತ್ರ ಮತ್ತು ಅಸಹಾಯಕ ಸ್ಥಿತಿಯೇ ಖಾಸಗಿ ಶಾಲೆಗಳಿಗೆ ಬಂಡವಾಳ­ವಾಯಿತು. ಬಣ್ಣ ಬಣ್ಣದ ಸಮವಸ್ತ್ರ, ಹೊರೆಯ ಬೆನ್ನು ಚೀಲಗಳು, ವಾರಕ್ಕೆ­ರಡು ತರಹದ ಶೂಗಳು... ಹೀಗೆ ಪೋಷ­ಕ­ರನ್ನು ಸುಲಿಗೆ ಮಾಡಲು ಈ ಶಾಲೆಯ­ವರು ಎಲ್ಲ ಹುನ್ನಾರಗಳನ್ನು ಕಂಡು ಹಿಡಿ­ದರು. ಸಮವಸ್ತ್ರ­ದಲ್ಲಿ ಮುದ್ದು­ಮುದ್ದಾಗಿ ಕಾಣುವ ಮಕ್ಕಳನ್ನು ಕಂಡ ಪೋಷಕರು ಕನಸಿಗೆ ಜಾರಿದ್ದಾರೆ.ಸರ್ಕಾರಿ ಶಾಲೆಗಳು ಪ್ರಾರಂಭವಾದ ಆರು ತಿಂಗಳ ನಂತರವೂ ಸಮವಸ್ತ್ರ, ಪಠ್ಯಪುಸ್ತಕ ಬಂದಿಲ್ಲ­ವೆಂಬ ದೂರು, ನಂತರ ಅವು ಬಂದರೂ ಕಳಪೆ ದರ್ಜೆ­ಯವು ಎಂಬ ತಕರಾರು, ಇದೋ  ಈಗ ಬಂದೇಬಿಟ್ಟವು ಎಂಬ ಮಂತ್ರಿಗಳ ಹಾಗೂ ಅಧಿಕಾರಿಗಳ ಹೇಳಿಕೆ ವಾರ್ಷಿಕ ವಿಧಿಗಳಂತೆ ಮುಂದುವರೆದವು. ನಾನು ಕೆಲಸ ಮಾಡಿದ ಜಿಲ್ಲೆ­ಗಳಲ್ಲಿ ಪ್ರತಿ­ಯೊಂದು ಹಳ್ಳಿಗೆ ಹೋದಾ­ಗಲೂ ಸರ್ಕಾರಿ ಶಾಲೆ ಮತ್ತು ಸರ್ಕಾರಿ ವಸತಿ ನಿಲಯಗಳು ನನ್ನ ಆದ್ಯತೆಯ ಸ್ಥಳಗಳಾಗಿ­ರುತ್ತಿ­ದ್ದವು.ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿ­ನಿಧಿ­ಗಳು ‘ರಸ್ತೆಯ ಉದ್ಧಾರ’ಕ್ಕೆ ಖರ್ಚು ಮಾಡಲು ಉತ್ಸುಕರಾದಷ್ಟು ಶಾಲೆಗಳ ಅಭ್ಯುದಯಕ್ಕೆ ಯತ್ನಿಸುವು­ದಿಲ್ಲ. ಶಿಕ್ಷಕರು ಹಳ್ಳಿಗಳಲ್ಲಿ ಉಳಿದು ಕೆಲಸ ಮಾಡಲು ತಯಾರಿಲ್ಲ. ಅವರಿಗೆ ಪೂರಕ­ವಾದ ಸೌಲಭ್ಯಗಳಿಲ್ಲ. ಭೇಟಿ ನೀಡಿ ಮಾಯ­ವಾಗುವ (visit & vanish) ಶಿಕ್ಷಕರ ಸಂಖ್ಯೆಯೇ ಜಾಸ್ತಿ. ಕಲಿಸುವ ಗುಣಮಟ್ಟ, ಶಿಕ್ಷಕರ ಕೌಶಲ ಹೆಚ್ಚಿಸಲು ಶಿಕ್ಷಣ ಇಲಾಖೆ ಸತತ ಪ್ರಯತ್ನ ಪಡುತ್ತಲೇ ಇದೆ.ಕೆಲವು ಅಧಿಕಾರಿಗಳ ಶ್ರಮ, ಶ್ರದ್ಧೆ ಮತ್ತು ಬದ್ಧತೆ ಪ್ರಶ್ನಿಸುವಂತಿಲ್ಲ. ಆದರೆ, ಸರ್ಕಾರದಲ್ಲಿ­ರುವವರೇ ಖಾಸಗಿ ಶಾಲೆ­ಗಳ ಮಹಾ­ಪೋಷಕರಾದರೆ ಏನು ಮಾಡಲು ಸಾಧ್ಯ? ಶಿಕ್ಷಣ ವ್ಯಾಪಾರದಲ್ಲಿ ತೊಡಗಿ­ರುವ ವರ್ಗ ಸರ್ಕಾರದ ಮೇಲೆ ಹಿಡಿತ ಸಾಧಿಸಿರುವಾಗ ‘ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಿ’ ಎಂದು ಹೇಳುವ ನೈತಿಕತೆ ಸರ್ಕಾರ­ದಲ್ಲಿ ಈಗ ಯಾರಿಗೂ ಉಳಿದಿಲ್ಲ.

ಇಷ್ಟೆಲ್ಲಾ ಅವಾಂತರಗಳ ನಡು­ವೆಯೂ ಸರ್ಕಾರಿ ಶಾಲೆಗಳ ಪ್ರಸ್ತುತತೆ ಇಂದಿಗೂ ಇದೆ, ಎಂದೆಂದಿಗೂ ಇರು­ತ್ತದೆ. ಲಕ್ಷಾಂತರ ಮಕ್ಕಳು ಅವುಗಳನ್ನೇ ಅವಲಂಬಿಸುವ ಅನಿವಾರ್ಯ ಇದೆ.ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನು ಬಲ­ಪಡಿಸಲು ಮತ್ತು ಆ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆ­ಯಾಗಿ ಕಲಿಯಲು ಅನುಕೂಲ ಮಾಡಿ­ಕೊಟ್ಟರೆ ಆ ಮಕ್ಕಳು ತಮ್ಮ ಅಸಾಮಾನ್ಯ ಪ್ರತಿಭೆ­ಯಿಂದ ಯಶಸ್ಸು ಗಳಿಸಲು ಸಾಧ್ಯವಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ದೊಡ್ಡ ವಿಜ್ಞಾನಿಗಳಾಗಿದ್ದಾರೆ, ಆಡಳಿತಗಾರ­ರಾಗಿದ್ದಾರೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವಿಶ್ವದೆ­ಲ್ಲೆಡೆ ಸಾಧಕರಾಗಿದ್ದಾರೆ.ಈಗ ಸರ್ಕಾರಿ ಶಾಲೆ­ಗಳಲ್ಲಿರುವವರನ್ನು ಉಳಿಸಿ­ಕೊಂಡು ಉತ್ತಮ ಸೌಲಭ್ಯಗಳನ್ನು ಒದಗಿ­ಸುವುದು ಸರ್ಕಾರದ ಮುಂದಿ­ರುವ ಪ್ರಮುಖ ಸವಾಲು. ನಮ್ಮೂರ ಶಾಲೆಗಳನ್ನು ಉಳಿಸಿಕೊಳ್ಳಲು ಇದೊಂದು ಕೊನೆಯ ಅವಕಾಶ! ಕುವೆಂಪು ಅವರ ‘ಕನ್ನಡ ಡಿಂಡಿಮ’ ಮುನ್ನು­ಡಿಯ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿ­ಸುವುದು ಸೂಕ್ತ. ‘ಆಯಾ ಪ್ರಾಂತ್ಯಗಳಲ್ಲಿ ಆಯಾ ದೇಶ­ಭಾಷೆಗಳೇ ಆಡಳಿತ ಭಾಷೆ

ಯಾಗಿ­ರ­ಬೇಕು.ಅಲ್ಲಿಯ ಶಿಕ್ಷಣವೆಲ್ಲ ಎಲ್ಲ ಮಟ್ಟ­ದ­ಲ್ಲಿಯೂ ದೇಶಭಾಷಾ ಮಾಧ್ಯಮ­ದಲ್ಲಿಯೇ ಸಾಗ­ಬೇಕು..... ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾ-­ದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲೇ, ಕರ್ನಾಟಕದಲ್ಲೇ, ಇನ್ನೆಲ್ಲಿಯೂ ಅಲ್ಲ..... ನೀವು ಇಲ್ಲಿ ಕನ್ನಡಕ್ಕೆ, ಕನ್ನಡದವರಿಗೆ ಎಡೆ ಕೊಡ­ದಿದ್ದರೆ, ಸ್ಥಾನಮಾನ ಕೊಡದಿದ್ದರೆ, ಜಗತ್ತಿನ ಮತ್ತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವು­ದಿಲ್ಲ. ನೀವು ಕೈ ಬಿಟ್ಟರೆ ಅದಕ್ಕೆ ಸಮುದ್ರವೇ ಗತಿ.... ಅಂದ ಮಾತ್ರಕ್ಕೆ ನಾನು ಕನ್ನಡವನ್ನು ಬಲಾ­ತ್ಕಾರ ಭಾಷೆಯನ್ನಾಗಿ ಮಾಡಲು ಹೇಳು­ತ್ತಿಲ್ಲ. ಅದು ಪ್ರಥಮ ಭಾಷೆಯಾಗಿರಲಿ. ಮಾತೃ­ಭಾಷೆಗೆ ಸಿಕ್ಕಬೇಕಾದ ಎಲ್ಲ ಗೌರವವೂ ಅದಕ್ಕೆ ದೊರೆಯಲಿ ಎಂಬು­ದಷ್ಟೇ ನನ್ನ ಅಭಿಪ್ರಾಯ. ಅಂತಹ ಅವ­ಕಾಶ ಬಂದಾಗ ಕನ್ನಡ ಜನ ಕನ್ನಡಕ್ಕೆ ಪುರ­ಸ್ಕಾರ ಕೊಡದಿದ್ದರೆ, ಅದು ಅವರ ಪಾಡು. ನಾನು ಅದಕ್ಕಾಗಿ ಚಿಂತಿಸುವು­ದಿಲ್ಲ’.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry