ಶನಿವಾರ, ಜೂನ್ 19, 2021
27 °C

ನಮ್ಮ ಚುನಾವಣೆಗಳು ಎಷ್ಟು ಮುಕ್ತ, ನಿಷ್ಕಳಂಕ

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಈಚೆಗೆ ಚುನಾವಣೆಗಳು ಹಿಂದಿನ ಉತ್ಸವದ ಮೆರುಗನ್ನು ಕಳೆದುಕೊಂಡಿರುವುದು ನಿಜ. ಆ ಸಂಭ್ರಮ, ಸಡಗರಗಳು ಈಗ ನೆನಪಷ್ಟೆ. ಬೃಹತ್ ಮೆರವಣಿಗೆ, ವಾದ್ಯಗೋಷ್ಠಿ, ಭಾರಿ ಕಟೌಟ್ ಇತ್ಯಾದಿಗಳ ಮೇಲೆ ಚುನಾವಣಾ ಆಯೋಗ ಕೆಂಗಣ್ಣು ಬೀರಿದೆ.ಆದರೆ ಇಂತಹ ಕ್ರಮಗಳಿಂದ ಚುನಾವಣೆಗಳಲ್ಲಿ ಖರ್ಚಾಗುತ್ತಿದ್ದ ಹಣ ಕಡಿಮೆಯಾಗಿದೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಚುನಾವಣಾ ವೆಚ್ಚ ಹಿಂದಿಗಿಂತಲೂ ಹೆಚ್ಚಾಗುತ್ತಲೇ ನಡೆದಿದೆ !  ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಈಚೆಗೆ ನಡೆದ ಚುನಾವಣೆಗಳನ್ನು ಗಮನಿಸಿದರೆ ಅಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಹಣವನ್ನು ವ್ಯಯಿಸಲಾಗಿರುವುದು ಗೊತ್ತಾಗುತ್ತದೆ.

 

ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚಾಗಿರಬಹುದೆಂದು ಒಂದು ಅಂದಾಜು. ಹೀಗೆ ಹಣ ಚೆಲ್ಲಿರುವುದರಲ್ಲಿ ಪಂಜಾಬ್ ಅಗ್ರಸ್ಥಾನದಲ್ಲಿದೆ.ಇಂತಹ ಸಂದಿಗ್ಧತೆಯಲ್ಲಿ ಚುನಾವಣಾ ಆಯೋಗ ಏನು ಮಾಡಲು ಸಾಧ್ಯ? ರಾತ್ರಿ ನಿಗೂಢ ಸ್ಥಳಗಳಲ್ಲಿ ಹಣದ ವಿತರಣೆ ನಡೆಯುತ್ತದೆ. ಮತಗಳ ಖರೀದಿಯು ವೈಯಕ್ತಿಕ ನೆಲೆಗಳಲ್ಲೇ ನಡೆಯುವುದರಿಂದ ಯಾವುದೇ ಲೋಕಪಾಲವು ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರತಿ ಕ್ಷೇತ್ರಗಳಲ್ಲಿಯೂ ಭದ್ರತೆಯ ನೆಪದಲ್ಲಿ ನೂರಾರು ಮಂದಿ ಕಾರ್ಯಕರ್ತರನ್ನು ರಾಜಕೀಯ ಪಕ್ಷಗಳೇ ನೇಮಿಸಿಕೊಂಡಿರುತ್ತವೆ.ಅಂತಹ ಕಾರ್ಯಕರ್ತರು ಮೊದಲಿಗೆ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ಈ ರೀತಿ ಅಕ್ರಮ ಹಣದಲ್ಲಿ ತಾವೂ ಕೈಯಾಡಿಸಿರುವ ನೈತಿಕತೆಯ ಬಗ್ಗೆ ತಮ್ಮನ್ನು ತಾವೇ  ಕೇಳಿಕೊಳ್ಳಲಿ. ಆತ್ಮವಿಮರ್ಶೆ ಮಾಡಿಕೊಳ್ಳಲಿ. ಆದರೆ ಅಧಿಕಾರವೆಂಬ ಹುಚ್ಚುಕುದುರೆಯ ಬೆನ್ನೇರಿರುವ ಅವರನ್ನು ನೈತಿಕತೆಯ ಅಧಃಪತನದ ಪ್ರಶ್ನೆ ಕಾಡುತ್ತದೆಯೇ ?

ನಮ್ಮ ಕಾಲದಲ್ಲಿ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ತೆರಳುತ್ತಿದ್ದಾಗ ಅವರ ಕೈಯಲ್ಲಿ ಪುಟ್ಟ ಕೈಚೀಲವಿರುತ್ತಿತ್ತು.ಅದರೊಳಗೆ ಹೊಟ್ಟೆ ಹಸಿದಾಗ ತಿನ್ನಲು ನೆಲಗಡಲೆ ಇರುತ್ತಿತ್ತು. ಅದೆಷ್ಟೇ ದೂರವಿರಲಿ, ಅವರು ನಡೆದುಕೊಂಡೇ ಹೋಗುತ್ತಿದ್ದರು. ಜನರನ್ನು ತಲುಪುವ ದಿಸೆಯಲ್ಲಿ ಅಂದು ಪ್ರಚಾರದ ಮಾದರಿ ಆ ರೀತಿ ಇತ್ತು. ಆದರೆ ಇವತ್ತಿನ ಪರಿಸ್ಥಿತಿ ನೋಡಿ. ಸಾಮಾನ್ಯ ಕಾರ್ಯಕರ್ತನೂ ಪ್ರಚಾರಕ್ಕೆ ತೆರಳಲು ತನಗೆ ಜೀಪು ಬೇಕೇ ಬೇಕು ಎನ್ನುತ್ತಾನೆ.

 

ಜತೆಗೆ ಮುಂಜಾನೆಯಿಂದ ರಾತ್ರಿಯವರೆಗೂ ಭೂರಿ ಭೋಜನವೇ ಆಗಬೇಕು. ಆದರೆ ಎಡಪಕ್ಷಗಳ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಮಾತ್ರ ಇವತ್ತಿಗೂ ಸರಳವಾಗಿದ್ದುಕೊಂಡು, ತತ್ವ ವಿಚಾರಗಳ ಬಗ್ಗೆ ಬದ್ಧತೆ ತೋರುತ್ತಾರೆ. ಈಚೆಗಿನ ದಿನಗಳಲ್ಲಿ ಇಂತಹ ಕಾರ್ಯಕರ್ತರ ಸಂಖ್ಯೆ ಕೂಡಾ ಕಡಿಮೆಯಾಗುತ್ತಿದೆ.ಚುನಾವಣಾ ಆಯೋಗವು ಈಚೆಗೆ ಸುಮಾರು 50 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಗದು ಹಣ ಮತ್ತು ಮದ್ಯ ಸಾಗಿಸುತ್ತಿದ್ದ ಹಲವು ಟ್ರಕ್‌ಗಳನ್ನು ವಶಪಡಿಸಿಕೊಂಡಿದೆ. `ಕಾಸಿಗಾಗಿ ಸುದ್ದಿ~ ಪ್ರಕರಣಗಳ ಬಗ್ಗೆಯೂ ಆಯೋಗ ಬೆಟ್ಟು ಮಾಡಿದೆ. ಇಷ್ಟು ನಗದು ಮತ್ತು ಮದ್ಯ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಹಣದ ಕೇವಲ ಶೇಕಡ ಒಂದರಷ್ಟೂ ಅಲ್ಲ ಎನ್ನಬಹುದು. ಅದೇನೆ ಇರಲಿ, ಈ ಸಲದ ಚುನಾವಣೆಯಲ್ಲಿ ಹಿಂಸಾಚಾರದ ಪ್ರಕರಣಗಳು ತೀರಾ ಕಡಿಮೆಯಾಗಿರುವುದು ಸತ್ಯ.ಇದಕ್ಕೆ ಚುನಾವಣಾ ಆಯೋಗದ ಕಟ್ಟುನಿಟ್ಟು ಮತ್ತು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರ ಸಮರ್ಪಕ ಕಾರ್ಯತಂತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಚುನಾವಣೆ ನಡೆದ ಎಲ್ಲಾ ಐದೂ ರಾಜ್ಯಗಳಲ್ಲಿ ಯಾವುದೇ ಕ್ಷಣಕ್ಕೂ ಕೇಂದ್ರೀಯ ಭದ್ರತಾ ಪಡೆಗಳು ಲಭ್ಯವಾಗುವಂತೆ ಅವರು ವ್ಯವಸ್ಥೆ ಮಾಡಿದ್ದರು. ಎಪ್ಪತ್ತರ ದಶಕಕ್ಕೂ ಹಿಂದೆಲ್ಲಾ ಭದ್ರತಾ ವ್ಯವಸ್ಥೆಯನ್ನು ಆಯಾ ರಾಜ್ಯಗಳ ಪೊಲೀಸರೇ ನೋಡಿಕೊಳ್ಳುತ್ತಿದ್ದರು.ನಂತರದ ದಿನಗಳಲ್ಲಿ ಅಂತಹ ಪೊಲೀಸರು ಸ್ಥಳೀಯ ರಾಜಕೀಯ ಒತ್ತಡಗಳನ್ನು ಎದುರಿಸಬೇಕಾಗಿ ಬಂದಿತು. ಅವರಲ್ಲಿಯೂ ನೈತಿಕತೆ ಕುಸಿಯತೊಡಗಿತು.

ಈ ಸಲ ಚುನಾವಣಾ ನೀತಿಸಂಹಿತೆಯ ಬಗ್ಗೆ ಬಹಳಷ್ಟು ಮಾತುಗಳು ಕೇಳಿ ಬಂದಿವೆ. ಇಪ್ಪತ್ತು ವರ್ಷಗಳ ಹಿಂದೆಯೇ ಇಂತಹದ್ದೊಂದು ನೀತಿಸಂಹಿತೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿಗೆ ಸೂಚಿಸಿದ್ದವು.

 

ಆದರೆ ಈ ಸಲ ಕಾಂಗ್ರೆಸ್ ಪಕ್ಷ ಮಾತ್ರ ಚುನಾವಣಾ ಆಯೋಗದ ಮೇಲೆ ಕಾಲು ಕೆದರಿ ಜಗಳವಾಡಿತು. ಆಯೋಗ ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷವು ಆಯೋಗದ ಎದುರು ಹೋಗುವ ಬದಲು ಸಾಮಾನ್ಯ ನ್ಯಾಯಾಲಯದ ಕಟಕಟೆಗೆ ಹೋಗಿದೆ.ಈಚಿನ ಕೆಲವು ಘಟನೆಗಳನ್ನು ಗಮನಿಸಿದರೆ ಕಾಂಗ್ರೆಸ್ ಸಾಕಷ್ಟು ತಪ್ಪೆಸಗುತ್ತಲೇ ಬಂದಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಇದು ಈಚೆಗಿನ ಚುನಾವಣೆಯಲ್ಲೂ ನಿಚ್ಚಳವಾಗಿದೆ. ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರಿಂದ ಹಿಡಿದು `ರಾಜಕುಮಾರ~ ರಾಹುಲ್ ಗಾಂಧಿವರೆಗೆ ಎಲ್ಲರೂ ಚುನಾವಣಾ ನೀತಿ ಸಂಹಿತೆಯನ್ನು ಕಡೆಗಣ್ಣಿನಿಂದ ನೋಡಿದ್ದೇ ಹೆಚ್ಚು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಶೇಕಡ 27 ಮೀಸಲಾತಿಯೊಳಗೆ ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಶೇಕಡ 9ರಷ್ಟು ಮೀಸಲಾತಿಯನ್ನು ಒದಗಿಸಲಾಗುವುದು ಎಂದು ಆ ಪಕ್ಷ ಪ್ರಕಟಿಸಿತು. ಈ ಮೂಲಕ ಕಾಂಗ್ರೆಸ್ ಮತ ಗಳಿಸಲು ಮತೀಯ ರಾಜಕಾರಣವನ್ನೆಸಗಿತ್ತು (ಸಾಚಾರ್ ಸಮಿತಿಯ ವರದಿಯ ಪ್ರಕಾರ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ದಲಿತರಿಗಿಂತಲೂ ಕಡೆಯಾಗಿದೆ. ಶೇಕಡ 80ರಷ್ಟು ಮುಸಲ್ಮಾನರು ಹಿಂದುಳಿದವರು). ಮುಸಲ್ಮಾನರಿಗೆ ಮೀಸಲಾತಿ ನೀಡುವ ಕುರಿತು ಚುನಾವಣೆಯ ಸಂದರ್ಭದಲ್ಲಿ ಮಾತನಾಡಿದ್ದರ ಬಗ್ಗೆ ಚುನಾವಣಾ ಆಯೋಗ ಕಾನೂನು ಸಚಿವರನ್ನು ಪ್ರಶ್ನಿಸಿತು. ಆಗ ಮೊದಲಿಗೆ ಅವರು ಸಬೂಬುಗಳನ್ನು ಹೇಳತೊಡಗಿದರಾದರೂ, ಆಯೋಗ ಧ್ವನಿ ಏರಿಸಿದಾಗ ಕ್ಷಮಾಪಣಾ ಪತ್ರ ಬರೆದುಕೊಟ್ಟರು. ಬಹುಶಃ ಈ ವಿವಾದ ಇಲ್ಲಿಗೇ ಮುಗಿಯುತಿತ್ತೇನೊ. ಆದರೆ ಇನ್ನೊಬ್ಬ ಕೇಂದ್ರ ಸಚಿವ ಬೇನಿ ಪ್ರಸಾದ್ ಆ ವಿವಾದಕ್ಕೆ ಮತ್ತೆ ಕಿಡಿ ಹೊತ್ತಿಸಿದರು.ಇವರು ಆಯೋಗದ ಆಕ್ಷೇಪವನ್ನು ಸಾಮಾನ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಇಲ್ಲೊಂದು ಕುತೂಹಲಕರ ಸಂಗತಿ ಇದೆ. ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ ಕೊಡುವ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಧರ್ಮದ ನೆಲೆಯಲ್ಲಿ ಮೀಸಲಾತಿಯ ಬಗ್ಗೆ ಇವರು ಮಾತನಾಡಿದ್ದಾರೆ. ಆದರೆ, ಇದಕ್ಕೆ ನಮ್ಮ ಸಂವಿಧಾನದಲ್ಲಿಯೇ ಅವಕಾಶವ್ಲ್ಲಿಲ !ಈ ನಡುವೆ ರಾಹುಲ್ ಗಾಂಧಿ ಇನ್ನೊಂದು ವರಸೆ ತೆಗೆದಿದ್ದರು. ಭಾರತದ ಭವಿಷ್ಯದ ಪ್ರಧಾನಿಗೆ ಅರ್ಹವಲ್ಲದ ರೀತಿಯಲ್ಲಿ ಅವರು ನಡೆದುಕೊಂಡಿದ್ದರು. ಅವರು ವಿರೋಧ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಸಾರ್ವಜನಿಕವಾಗಿ ಹರಿದೆಸೆದರಲ್ಲದೆ, ಬೀದಿಬದಿಯ ಪಡ್ಡೆ ಹುಡುಗರೂ ನಾಚಿಕೊಳ್ಳುವಂತೆ ಕೆಟ್ಟಪದಗಳನ್ನು ಬಳಸಿ ಮಾತನಾಡಿದರು. ಕಾನ್‌ಪುರದಲ್ಲಿ ರೋಡ್‌ಶೋ ನಡೆಸುವಾಗ ಕೆಲವು ನೀತಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ರಾಹುಲ್ ಸುದ್ದಿಯಾದರು.ತಮಗೆ ನಿಗದಿಯಾದ ರಸ್ತೆಯಲ್ಲಿ, ನಿರ್ದಿಷ್ಟ ಅವಧಿಯಲ್ಲಿ ರೋಡ್‌ಶೋ ನಡೆಸಬೇಕಿದ್ದ ಇವರು ಅವುಗಳನ್ನು ಪಾಲಿಸಲಿಲ್ಲ. ಅವರು ಆಗಿದ್ದ ತಪ್ಪಿಗೆ ಆಗಲೇ ಕ್ಷಮಾಪಣೆ ಕೇಳಿದ್ದರೆ ಎಲ್ಲವೂ ಸರಿ ಹೋಗುತಿತ್ತೇನೊ. ಆದರೆ ರಾಹುಲ್ ಮತ್ತೆ ಮೊಂಡುತನ ಪ್ರದರ್ಶಿಸಿದರು.

ಈ ಸಲ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಂದಿ ಇಡೀ ಗಾಂಧಿ ಕುಟುಂಬವನ್ನೇ ನೋಡುವಂತಾಯಿತು. ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ, ಅವರ ಗಂಡ ರಾಬರ್ಟ್, ಈ ದಂಪತಿಯ ಪುಟ್ಟ ಮಕ್ಕಳು ಎಲ್ಲರೂ ಕಾಂಗ್ರೆಸ್ ಪರ ಓಡಾಡಿದರು.

 

ತಾವು ಮಾತ್ರ ಈ ದೇಶವನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲು ಸಾಧ್ಯ ಎಂದು ಈ ಕುಟುಂಬ ನಂಬಿಕೊಂಡಂತಿದೆ. ಇತರ ರಾಜಕೀಯ ಪಕ್ಷಗಳೆಲ್ಲವೂ ಪುಡಿ ಮತ್ತು ಪ್ರಾದೇಶಿಕ ನೆಲೆಯನ್ನಷ್ಟೇ ಹೊಂದಿರುವಂತಹವು ಎಂದು ಈ ಕುಟುಂಬ ಭಾವಿಸಿದಂತಿದೆ. ಕಳೆದ ಹಲವು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಹಿಂದಿನ ಮಟ್ಟಕ್ಕೆ ಏರಿಸುವ ದಿಸೆಯಲ್ಲಿ ಇಡೀ ಗಾಂಧಿ ಕುಟುಂಬವೇ ಜಿದ್ದಿಗೆ ಬಿದ್ದು ಹೋರಾಟಕ್ಕಿಳಿದಂತಿತ್ತು. ಈ ಕುಟುಂಬದ ಹಿರಿಯಜ್ಜ ಯಾವತ್ತೂ ಮತೀಯ ರಾಜಕಾರಣ ನಡೆಸಲಿಕ್ಕೆ ಅಥವಾ ತಮ್ಮ ರಾಜಕಾರಣದ ಔನ್ನತ್ಯದ ಹಾದಿಯಲ್ಲಿ ಧರ್ಮವನ್ನು ಬಳಸಿಕೊಳ್ಳಲು ಇಚ್ಛಿಸಿರಲಿಲ್ಲ.ಆದರೆ ಇವತ್ತು ಆ ಕುಟುಂಬದ ಈ ಎಳೆಯ ಕುಡಿಗಳು ಆ ಮಿತಿಯನ್ನೂ ಮೀರಿ ನಡೆದು ಬಿಟ್ಟಿದ್ದಾರೆ. ಅಪಾಯದಲ್ಲಿರುವ ಹಡಗಿನ ಕಪ್ತಾನ, ತನ್ನ ಹಡಗನ್ನು ಅಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಹಡಗಿನೊಳಗಿರುವ ಭಾರದ ಅಮೂಲ್ಯ ವಸ್ತುಗಳನ್ನೆಲ್ಲಾ ನೀರಿಗೆಸೆದು ಬಿಡುವಂತೆ, ಗಾಂಧಿ ಕುಟುಂಬದ ಈ ಕುಡಿಗಳು ನೆಹರು ತಮ್ಮ ಜೀವಿತಾವಧಿಯಲ್ಲಿ ಪಾಲಿಸಿಕೊಂಡಿದ್ದ ಕೆಲವು ಮೌಲ್ಯಗಳು ಮತ್ತು ಕಾಂಗ್ರೆಸ್ ಪಕ್ಷ ಉಳಿಸಿಕೊಂಡು ಬಂದಿದ್ದ ಕೆಲವು ನೀತಿಗಳನ್ನು ಉತ್ತರ ಪ್ರದೇಶದಲ್ಲಿ ಕೊನೆಯ ಅಸ್ತ್ರವಾಗಿ ನೀರಿಗೆ ಹಾಕಿಯೇ ಬಿಟ್ಟರು. ಆ ಮೌಲ್ಯಗಳಿಗೆ ತಿಲಾಂಜಲಿ ಅರ್ಪಿಸಿಬಿಟ್ಟರು.ರಾಜಕಾರಣದಲ್ಲಿ ಕೋಮುವಾದವನ್ನು ಬೆರೆಸುವುದು ಬಿಜೆಪಿಯ ಜಾಯಮಾನ. ಅದರ ನಡೆಗಳು ನಿರೀಕ್ಷಿತ. ಆದರೆ ಈಗ ಕಾಂಗ್ರೆಸ್ ಪಕ್ಷವೇ ಆ ದಿಕ್ಕಿನಲ್ಲಿ ಮೊದಲೇ ಕಲ್ಲೆಸೆದಿರುವಾಗ ಬಿಜೆಪಿಯ ಬಗ್ಗೆ ಏನು ಹೇಳಬೇಕು ? ಉತ್ತರ ಪ್ರದೇಶದಲ್ಲಿ ಗುಜರಾತ್‌ನಂತಹ ನರಮೇಧದ ಕಥೆ ಹೇಳಲು ನರೇಂದ್ರ ಮೋದಿ ಬರಬೇಕಿಲ್ಲ. ಉತ್ತರ ಪ್ರದೇಶದಲ್ಲಿ ಅದಾಗಲೇ ಮುಸ್ಲಿಮರ ಮೇಲೆ ಅದೆಷ್ಟು ವಿಷ ಕಾರಬೇಕೋ, ಅಷ್ಟನ್ನೂ ಉಮಾ ಭಾರತಿ ಕಾರಿಕೊಂಡಾಗಿದೆ.ಕೇಂದ್ರದಲ್ಲಿ ತಾವೇ ಪರ್ಯಾಯ ಎಂದುಕೊಳ್ಳುತ್ತಿರುವ ಬಿಜೆಪಿಗೆ ದೇಗುಲ ನಿರ್ಮಾಣವೇ ಅಂತಿಮ ಗುರಿ!ಇವತ್ತು ನಗರ ಪ್ರದೇಶಗಳಲ್ಲಿ ಕೂಡಾ ಜಾತಿ, ಉಪಜಾತಿಗಳ ರಾಜಕಾರಣ ಎದ್ದು ಕಾಣುತ್ತಿರುವುದು ದುರದೃಷ್ಟಕರ. ಜಾತಿ ಪದ್ಧತಿಯನ್ನು ಇನ್ನಿಲ್ಲದಂತೆ ವಿರೋಧಿಸುವ ಇಸ್ಲಾಮ್‌ನ ಒಳಗೂ ಈ ಜಾಡ್ಯ ಹರಡಿದೆ. ಸಾಮಾಜಿಕ ತಾರತಮ್ಯದ ಬೇಗೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಇಸ್ಲಾಮನ್ನು ಅಪ್ಪಿಕೊಂಡವರಿಗೂ ಅದರೊಳಗಿರುವ ತಾರತಮ್ಯದ ಬಿಸಿ ತಟ್ಟದೆ ಬಿಟ್ಟಿಲ್ಲ.ಚುನಾವಣೆಯು ಅತ್ಯಂತ ಮುಕ್ತ ವಾತಾವರಣದಲ್ಲಿ, ನಿರ್ಭೀತಿಯಿಂದ ಅಚ್ಚುಕಟ್ಟಾಗಿ ನಡೆದಿದೆ. ಈ ಯಶಸ್ಸಿಗೆ ಚುನಾವಣಾ ಆಯೋಗವನ್ನು ಅಭಿನಂದಿಸಲೇ ಬೇಕು. ಆದರೆ ಹಣ, ಜಾತಿ ಮತ್ತು ಧರ್ಮ- ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುವುದೆಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪಹಾಸ್ಯವಲ್ಲದೆ ಇನ್ನೇನು? ಇದನ್ನು ನಾವು ಮುಕ್ತ ಚುನಾವಣೆ ಎಂದು ಕರೆಯಲು ಸಾಧ್ಯವೇ. ಈ ಒಂದು ಪ್ರಶ್ನೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಪ್ರಾಮಾಣಿಕವಾಗಿ ಉತ್ತರಿಸಬೇಕಾದ ಅಗತ್ಯವಿದೆ.ಆತ್ಮವಿಮರ್ಶೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆಯೋಗದ ಉತ್ತರದ ಅಗತ್ಯವಿಲ್ಲ. ಆದರೆ ಆಯೋಗ ಮಾಡಿರುವ ಮನವಿಗೆ ಸರ್ಕಾರದ ಸ್ಪಂದನ ಸಿಕ್ಕಿದರೆ ಅದೇ ದೊಡ್ಡದು. ಕೊಲೆ, ಅತ್ಯಾಚಾರ, ಡಕಾಯಿತಿ ಪ್ರಕರಣಗಳಲ್ಲಿ ಸಿಲುಕಿರುವವರನ್ನು ಚುನಾವಣಾ ಪ್ರಕ್ರಿಯೆಗಳಿಂದ ದೂರವಿಡುವ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಸರ್ಕಾರವನ್ನು ಅನುಮತಿ ಕೇಳಿ ಹಿಂದೆಯೇ ಮನವಿ ಸಲ್ಲಿಸಿದೆ. ಅದಕ್ಕೆ ಸರ್ಕಾರ ಇನ್ನು ಸ್ಪಂದಿಸಿ ನಿರ್ಧಾರ ಕೈಗೊಳ್ಳಬೇಕಿದೆ.(ನಿಮ್ಮ ಅನಿಸಿಕೆ ತಿಳಿಸಿ : editpagefeedback@prajavani.co.in ) 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.