ನರೇಂದ್ರ ಮೋದಿ ಮಾತಿನ ಮೋಡಿ

7

ನರೇಂದ್ರ ಮೋದಿ ಮಾತಿನ ಮೋಡಿ

ಡಿ. ಮರಳೀಧರ
Published:
Updated:
ನರೇಂದ್ರ ಮೋದಿ ಮಾತಿನ ಮೋಡಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಶ್ರೀರಾಮ ವಾಣಿಜ್ಯ ಕಾಲೇಜ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸರಿಯಾಗಿ ಒಂದು ವಾರವಾಯಿತು. ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಈ ಕಾಲೇಜ್‌ನಲ್ಲಿ ಮೋದಿ ಮಾಡಿದ ಸ್ಫೂರ್ತಿದಾಯಕ ಭಾಷಣವು ಜನರ, ಅದರಲ್ಲೂ ವಿಶೇಷವಾಗಿ ಯುವ ಜನರ ಮನದಲ್ಲಿ ಇನ್ನೂ ಪ್ರತಿಧ್ವನಿಸುತ್ತಲೇ ಇದೆ.

ಯುವ ಜನಾಂಗದ ಅಭಿಪ್ರಾಯ ಅಭಿವ್ಯಕ್ತಿಯ ಜನಪ್ರಿಯ ತಾಣವಾಗಿರುವ `ಸಾಮಾಜಿಕ ಮಾಧ್ಯಮ'ಗಳ್ಲ್ಲಲಂತೂ ಮೋದಿ ಭಾಷಣ ಮೆಚ್ಚಿದ -ಶ್ಲಾಘಿಸಿದ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಆಲಸಿ, ಅಪ್ರಾಮಾಣಿಕ ಮತ್ತು ಸ್ಫೂರ್ತಿದಾಯಕವಲ್ಲದ ರಾಷ್ಟ್ರೀಯ ನಾಯಕತ್ವದಿಂದ ಬೇಸರಗೊಂಡಿರುವ ಯುವ ಜನಾಂಗವು, ಮೋದಿ ಅವರ ಮುತ್ಸದ್ದಿತನದಿಂದ  ಕೂಡಿದ ಮಾತುಗಳಿಂದ ತುಂಬ ಪ್ರಭಾವಿತಗೊಂಡಿದೆ.

`ಇಂದಿನ ಸವಾಲುಗಳ ಬಗ್ಗೆ ಮಾತನಾಡುವವ ನಾಯಕನಾಗಿರುತ್ತಾನೆ. ಮುಂದಿನ ತಲೆಮಾರಿನ ಭವಿಷ್ಯದ ಬಗ್ಗೆ ಮಾತನಾಡುವವ ಮುತ್ಸದ್ದಿಯಾಗಿರುತ್ತಾನೆ' ಎನ್ನುವ ಮಾತನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಅವಕಾಶಗಳು ಮತ್ತು ಸವಾಲುಗಳ ಕುರಿತು ರಾಷ್ಟ್ರೀಯ ನಾಯಕರೊಬ್ಬರು ಯುವ ಜನಾಂಗ ಉದ್ದೇಶಿಸಿ ಈ ಪರಿ ಭಾವೋದ್ರೇಕದಿಂದ ಮತ್ತು ಸಕಾರಾತ್ಮಕವಾಗಿ ಮಾತನಾಡಿದ ಇತ್ತೀಚಿನ ನಿದರ್ಶನಗಳೇ ನನಗೆ ನೆನಪಿಲ್ಲ. 

ಮೋದಿ ಅವರ ಅರ್ಥಪೂರ್ಣವಾದ ಮಾತುಗಳಿಗೆ ಇಂತಹ ಶೂನ್ಯ  ಭರ್ತಿ ಮಾಡುವ ಸಾಮರ್ಥ್ಯ ಇದೆ. ನಿರಾಶಾದಾಯಕ ಮನೋಭಾವವನ್ನು ಆಶಾವಾದವನ್ನಾಗಿ ಪರಿವರ್ತಿಸುವಲ್ಲಿ ಗುಜರಾತ್‌ನಲ್ಲಿ 4ನೆ ಬಾರಿಗೆ ಮುಖ್ಯಮಂತ್ರಿಯಾಗಿರುವ ಮೋದಿ  ಮಾತುಗಳು ಖಂಡಿತವಾಗಿಯೂ ನೆರವಾಗಲಿವೆ.

`ಯುವಕರು ದೇಶದ ಉಪ್ಪು ಇದ್ದಂತೆ. ಒಂದು ವೇಳೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ (ಯುವ ಜನಾಂಗಕ್ಕೆ) ಮತ್ತೆ ಉಪ್ಪು ಲೇಪಿಸಲು ಸಾಧ್ಯವಿಲ್ಲ'- ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಈ ಜನಪ್ರಿಯ ಮಾತುಗಳು ಸಮಕಾಲೀನ ಭಾರತಕ್ಕೆ ತುಂಬ ಸೂಕ್ತವಾಗಿ ಅನ್ವಯಿಸುತ್ತವೆ.

ಭಾರತವು `ತಾರುಣ್ಯದ ದೇಶ' ಎನ್ನುವುದನ್ನು ಹತ್ತಾರು   ಅಧ್ಯಯನಗಳು ಸಾಬೀತುಪಡಿಸಿವೆ. ಒಂದು ವೇಳೆ ಯುವ ಜನಾಂಗದ ಆಶೋತ್ತರಗಳೆಲ್ಲ ಈಡೇರಿದರೆ ಸಮೃದ್ಧ ಭಾರತದ ಕನಸು ಶೀಘ್ರದಲ್ಲಿಯೇ ನನಸಾಗಬಹುದು. ಯುವ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣದ ಉದ್ದಕ್ಕೂ ಇಂತಹ ಆಶಯವನ್ನೇ ಕಾಣಬಹುದು.

ಏಷ್ಯಾ ಅಭಿವೃದ್ಧಿ ಬ್ಯಾಂಕ್ ನಡೆಸಿದ್ದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ದೇಶದಲ್ಲಿ ಮುಂದಿನ 50 ವರ್ಷಗಳವರೆಗೆ ಪ್ರತಿ ತಿಂಗಳೂ 10 ಲಕ್ಷದಷ್ಟು ಯುವಕರು ಹೊಸ ಹೊಸ ಅವಕಾಶಗಳಿಂದಾಗಿ ಉದ್ಯೋಗ ರಂಗದಲ್ಲಿ ಸೇರ್ಪಡೆಯಾಗುತ್ತಾರೆ. ನಿಜಕ್ಕೂ ಇದೊಂದು  ದೊಡ್ಡ ಸಂಖ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ಸದವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ದೇಶದ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲೆಡೆ ನಾಯಕತ್ವ ಮತ್ತು ಆಡಳಿತದ ಗುಣಮಟ್ಟ ನಿರಂತರವಾಗಿ ಕುಸಿಯುತ್ತಲೇ ಸಾಗಿರುವಾಗ, `ಯುಪಿಎ' ಅಥವಾ `ಎನ್‌ಡಿಎ' ಸೇರಿದಂತೆ ಯಾವುದೇ ಪಕ್ಷವು ಇಂತಹ ಸವಾಲಿನ ಬಗ್ಗೆ ಗಂಭೀರ ಧೋರಣೆಯನ್ನೇ ತಳೆದಿಲ್ಲ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ,  ಭವ್ಯ ಭವಿಷ್ಯದ ಬಗ್ಗೆ ಕನಸುಗಳನ್ನು ಕಾಣುತ್ತಿರುವ ಯುವ ಜನಾಂಗಕ್ಕೆ ಮೋದಿ ಮಾತುಗಳು ಸಹಜವಾಗಿಯೇ ಕರ್ಣಾನಂದಕರವಾಗಿವೆ.

ಆರ್ಥಿಕ ಅಭಿವೃದ್ಧಿ, ಶಿಕ್ಷಣ, ಪ್ರಗತಿ, ಭಾರತದ ಬ್ರಾಂಡ್, ಮಾಹಿತಿ ತಂತ್ರಜ್ಞಾನ, ಸಂಪತ್ತು ಸೃಷ್ಟಿ, ಭಾರತದ ಬಗೆಗಿನ ವಿಶ್ವದ ದೃಷ್ಟಿಕೋನ, ಯಶಸ್ಸು, ಆದ್ಯತೆ, ಸಮರ್ಥ ನಾಯಕತ್ವದ ಆಡಳಿತ - ಹೀಗೆ ಹತ್ತಾರು ಸಕಾರಾತ್ಮಕ ಸಂಗತಿಗಳ ಬಗ್ಗೆಯೇ  ಮೋದಿ ಮಾತನಾಡಿದ್ದಾರೆ.

ಹೊಸ ಶಬ್ದ `ಪಿ2ಜಿ2'ದ ಮೂಲಕವೂ ಅವರು ಸಭಿಕರ ಗಮನ ಸೆಳೆದರು. `2ಪಿ' ಮತ್ತು `2ಜಿ' ನೀತಿ ಅಳವಡಿಸಿಕೊಂಡರೆ   (pro people / good governance) ಅದರಿಂದ ಖಂಡಿತವಾಗಿಯೂ ನಿರೀಕ್ಷಿತ ಯಶಸ್ಸು ದೊರೆಯಲಿದೆ ಎಂದು ಅವರು ವಿವರಿಸಿದ್ದಾರೆ. `ಜನಪರ ಮತ್ತು ಉತ್ತಮ ಆಡಳಿತ' ಮಂತ್ರವು ಗುಜರಾತ್‌ನಲ್ಲಿ ಹೇಗೆ ಯಶಸ್ವಿಯಾಗಿದೆ ಎನ್ನುವುದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದಾರೆ.

ಜನ ಪರವಾದ ಉತ್ತಮ ಆಡಳಿತ ನೀಡಲು ರಾಜಕೀಯ ಮುಖಂಡರಲ್ಲಿನ ಇಚ್ಛಾಶಕ್ತಿ ಕೊರತೆಯೇ ಮುಖ್ಯ ಅಡಚಣೆ ಆಗಿರುತ್ತದೆಯೇ ಹೊರತು, ವ್ಯವಸ್ಥೆ ಮತ್ತು ಆಡಳಿತಶಾಹಿ ಅಲ್ಲ ಎನ್ನುವುದು ಅವರ ಅನುಭವದ ಮಾತು. ಭಾಷಣದ ಉದ್ದಕ್ಕೂ ಮೋದಿ ಸಕಾರಾತ್ಮಕ ಸಂಗತಿಗಳ ಬಗ್ಗೆಯೇ ಮಾತನಾಡಿದರೆ ಹೊರತು, ದೇಶವನ್ನು ಕಾಡುತ್ತಿರುವ ವಿವಾದಾತ್ಮಕ ಜ್ವಲಂತ ಸಂಗತಿಗಳನ್ನು ಅವರು ಅಪ್ಪಿ ತಪ್ಪಿಯೂ ಉಲ್ಲೇಖಿಸುವ ಗೋಜಿಗೆ ಹೋಗಲಿಲ್ಲ.

`ಗುಜರಾತ್ ಸ್ಪಂದನ' ಶೃಂಗ ಸಭೆಯು ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ ಹೇಗೆ ಗಮನಾರ್ಹ ಕೊಡುಗೆ ನೀಡಲು ನೆರವಾಗಲಿದೆ ಎಂದು ಹೇಳಿಕೊಂಡ ಮೋದಿ, 162 ದಿನಗಳಲ್ಲಿಯೇ ಶೃಂಗಸಭೆ  ವ್ಯವಸ್ಥೆ ಮಾಡಿ ನಿರೀಕ್ಷೆಗೂ ಮೀರಿ ಯಶಸ್ಸು ಕಾಣಲಾಯಿತು ಎಂದರು. 125ಕ್ಕೂ ಹೆಚ್ಚು ದೇಶಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದವು. ಚುನಾವಣೆ ನಡೆದ ಎರಡೇ ವಾರದಲ್ಲಿ ನಡೆದ ಶೃಂಗಸಭೆಯು ಮೋದಿ ಸರ್ಕಾರದ  ಸಂಘಟನಾ ಸಾಮರ್ಥ್ಯವನ್ನೂ ಪರೀಕ್ಷೆಗೆ ಒಳಪಡಿಸಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಡಳಿತದ ಪ್ರತಿಯೊಂದು ಹಂತದಲ್ಲಿ ವೇಗಕ್ಕೆ ಮಹತ್ವ ನೀಡಬೇಕು ಎಂದೂ ಮೋದಿ ಬಲವಾಗಿ ಪ್ರತಿಪಾದಿಸಿದ್ದರು. ಕೌಶಲ, ವೇಗ ಮತ್ತು ಪ್ರಮಾಣ ತಮ್ಮ ಸರ್ಕಾರದ ಸಾಧನೆಯ ಸ್ಪಷ್ಟ ಹೆಗ್ಗುರುತುಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಹಿತಿ ತಂತ್ರಜ್ಞಾನ ರಂಗದಲ್ಲಿನ ಭಾರತದ ಸಾಧನೆಯನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತಾಗಲು ಭಾರತೀಯರ ಉದ್ಯಮಶೀಲತೆಯ ಉತ್ಸಾಹ ಮತ್ತು  ಯುವ ಜನಾಂಗದ ಐ.ಟಿ ಕೌಶಲ ಕಾರಣ. ಸರ್ಕಾರವು ಉದ್ಯಮ - ವಹಿವಾಟಿನಿಂದ ಹೊರ ಬರಬೇಕು. `ಆಡಳಿತ ನಿರ್ವಹಣೆ' ಬಗ್ಗೆಯಷ್ಟೇ ತಲೆಕೆಡಿಸಿಕೊಳ್ಳಬೇಕು ಎನ್ನುವುದು ಮೋದಿ ವಾದವಾಗಿದೆ.

`ಯುವಕ- ಯುವತಿಯರು ಕನಸುಗಳನ್ನು ಕಾಣಬೇಕು ಮತ್ತು ಯಾವುದೇ ಕಾರಣಕ್ಕೂ ಕನಸುಗಳನ್ನು ಬೆನ್ನತ್ತಿ ಹೋಗುವುದನ್ನು ಬಿಡಬಾರದು'  ಎಂದೂ ಮೋದಿ ಕಿವಿಮಾತು ಹೇಳಿದ್ದಾರೆ. `ದೇಶದ ಯುವಕರಿಗೆ ಸರಿಸಾಟಿಯಾದವರು ವಿಶ್ವದಲ್ಲಿಯೇ ಯಾರೂ ಇಲ್ಲ.  ಗೆಲ್ಲಲು ಇಡೀ ವಿಶ್ವವೇ ಅವರ ಎದುರಿಗೆ ಇದೆ' ಎಂದು ಹೇಳುತ್ತ ಮೋದಿ ಯುವ ಜನಾಂಗದ ಆಸೆಗಳಿಗೆ ಕಿಡಿ ಹತ್ತಿಸಿದ್ದಾರೆ, ಅವರಲ್ಲಿನ ಉತ್ಸಾಹಕ್ಕೆ  ಇನ್ನಷ್ಟು ಪ್ರೇರಣೆ ನೀಡಿದ್ದಾರೆ.

`ಭಾರತ ಬ್ರಾಂಡ್' ಎನ್ನುವುದು ಸಮರ್ಥ ಸಾಧನವಾಗಿದ್ದು, ಯುವಕರೇ   ಈ ಬ್ರಾಂಡ್‌ನ ನಿಜವಾದ ವಾರಸುದಾರರು ಆಗಿರುವರೇ ಹೊರತು, ರಾಜಕಾರಣಿಗಳಲ್ಲ ಎನ್ನುವ ವಾಸ್ತವವನ್ನೂ ಮನದಟ್ಟು ಮಾಡಿಕೊಟ್ಟಿದ್ದಾರೆ. ಮೋದಿ ಭಾಷಣ ಆಲಿಸಲು ಅಲ್ಲಿ ನೆರೆದಿದ್ದ 1800ರಷ್ಟು ವಿದ್ಯಾರ್ಥಿಗಳು  ಪ್ರತಿಯೊಂದು ಸ್ಫೂರ್ತಿಯುತ  ಮಾತುಗಳಿಗೆ ಚಪ್ಪಾಳೆ ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದರು. ಇನ್ನಷ್ಟು ಕೇಳುವ ಹಸಿವು - ಧಾವಂತ ಅವರಲ್ಲಿ ಕಂಡು ಬರುತ್ತಿತ್ತು.

ಮೋದಿ ಭಾಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಟಿವಿ ಚಾನೆಲ್‌ಗಳ ಚರ್ಚೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿಗಳೂ ಮೋದಿ ಶ್ಲಾಘಿಸಲು ಹಿಂದೇಟು ಹಾಕಲಿಲ್ಲ. ಯುವ ಜನಾಂಗವು ಮೋದಿ ಅವರನ್ನು ಗಂಭೀರವಾಗಿ ಪರಿಗಣಿಸಲಿದೆ. ಮೋದಿ ಮಾತುಗಳಲ್ಲಿ ಗಂಭೀರತೆ ಮತ್ತು ಪ್ರಾಮಾಣಿಕತೆ ಇರುವುದನ್ನು ಅವರು ಗಮನಿಸಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಪ್ರತಿಪಾದಿಸಿದರು. ಇತರ ಅನೇಕ ರಾಜಕಾರಣಿಗಳಂತೆ ಮೋದಿ ಕೂಡ ಹಲವಾರು ಭರವಸೆಗಳನ್ನು ನೀಡಿದ್ದಾರೆ ಮತ್ತು  ಗುಜರಾತ್‌ನಲ್ಲಿ ತಮ್ಮ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡಲಾಗುತ್ತಿದೆ  ಎನ್ನುವುದನ್ನು ಬಣ್ಣಿಸಿಕೊಂಡಿದ್ದಾರೆ  ಎಂದೂ ಈ ಮುಖಂಡರು ಒಪ್ಪಿಕೊಂಡಿದ್ದಾರೆ.

ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಲು ಮೋದಿ ಸಮರ್ಥವಾಗಿರುವುದನ್ನು ಅನೇಕ ಸಮೀಕ್ಷೆಗಳು ನೀಡಿರುವ ಅಭಿಪ್ರಾಯವನ್ನೂ ವಿದ್ಯಾರ್ಥಿ ಮುಖಂಡರು ಚರ್ಚೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೆಲ್ಲ ನೋಡಿದರೆ,  ಮೋದಿ ಭಾಷಣವು ಯುವ ಜನಾಂಗದ ಮನದಲ್ಲಿ ಅಳಿಸಲಾಗದ ಪ್ರಭಾವ ಬೀರಿದೆ ಎನ್ನುವ ಮಾತು ಮನದಟ್ಟಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry