ನಾಗರಿಕ ಸೇವೆ: ಆಶಾಭಾವ ಮೂಡಿಸಿದ ಫಲಿತಾಂಶ

7

ನಾಗರಿಕ ಸೇವೆ: ಆಶಾಭಾವ ಮೂಡಿಸಿದ ಫಲಿತಾಂಶ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ನಾಗರಿಕ ಸೇವೆ: ಆಶಾಭಾವ ಮೂಡಿಸಿದ ಫಲಿತಾಂಶ

ಯು.ಪಿ.ಎಸ್.ಸಿ. (ಕೇಂದ್ರ ಲೋಕಸೇವಾ ಆಯೋಗ) ನಡೆಸುವ ವಾರ್ಷಿಕ ನಾಗರಿಕ ಸೇವೆಗಳ (ಸಿವಿಲ್ ಸರ್ವೀಸಸ್) 2016ರ ಪರೀಕ್ಷೆಯ ಫಲಿತಾಂಶಗಳು ಕಳೆದ ವಾರ ಪ್ರಕಟವಾದವು. ಹದಿನಾರು ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕದ ಹೆಣ್ಣುಮಗಳೊಬ್ಬಳಿಗೆ ಅಗ್ರ ಶ್ರೇಯಾಂಕ ದೊರಕಿದೆ. 2000ನೇ ಸಾಲಿನ ಪರೀಕ್ಷೆಗಳಲ್ಲಿ ವಿಜಯಲಕ್ಷ್ಮಿ ಬಿದರಿಯವರಿಗೆ ಮೊದಲ ಸ್ಥಾನ ದೊರಕಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಬಾರಿ ಕೋಲಾರದ ನಂದಿನಿ ಕೆ.ಆರ್. ಮೊದಲ ಸ್ಥಾನ ಪಡೆದಿದ್ದಾರೆ ಹಾಗೂ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಪರೀಕ್ಷೆಯಲ್ಲಿ ತೆಗೆದುಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಅರ್ಹತೆ ಪಡೆದಿದ್ದಾರೆ. ಈ ಸಂಖ್ಯೆಯು ಇಂತಹ ಪರೀಕ್ಷೆಗಳಲ್ಲಿ ಸಾಂಪ್ರದಾಯಿಕವಾಗಿ ಅಧಿಕ ಯಶಸ್ಸನ್ನು ಗಳಿಸುತ್ತಿದ್ದ ಬಿಹಾರದಂತಹ ರಾಜ್ಯಗಳಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿನದು.

ಹೀಗೆ ಕರ್ನಾಟಕದ ಅಭ್ಯರ್ಥಿಗಳು ಯು.ಪಿ.ಎಸ್.ಸಿ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. 25 ವರ್ಷಗಳ ಹಿಂದೆ ಕರ್ನಾಟಕದ ಯಶಸ್ವಿ ಅಭ್ಯರ್ಥಿಗಳ ಸಂಖ್ಯೆ ಪ್ರತಿವರ್ಷವೂ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿತ್ತು. ಆಗ ಬೆಂಗಳೂರು ಸೇರಿದಂತೆ ರಾಜ್ಯದೊಳಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅವಕಾಶಗಳು ಕಡಿಮೆ ಇದ್ದವು. ತರಬೇತಿ ಸಂಸ್ಥೆಗಳಾಗಲಿ, ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯವಾಗಿದ್ದ ಪೂರಕ ವಾತಾವರಣವಾಗಲಿ ಲಭ್ಯವಿರಲಿಲ್ಲ. ಯಶಸ್ಸು ಗಳಿಸಬೇಕೆಂದರೆ ದೆಹಲಿಯಲ್ಲಿ ತರಬೇತಿ ಪಡೆಯಬೇಕು ಇಲ್ಲವೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಯಾಗಿರಬೇಕು ಎನ್ನುವ ಅನಿವಾರ್ಯ ಇತ್ತು. ದೆಹಲಿಯಲ್ಲಿ ಒಂದು ದಿನದಲ್ಲಿ ಪಡೆಯಬಹುದಾದ ಮಾಹಿತಿ ಮತ್ತು ಅಧ್ಯಯನ ಸಾಮಗ್ರಿಗಳು ಬೆಂಗಳೂರಿನಲ್ಲಿ ವರ್ಷಗಟ್ಟಲೆ ಹೆಣಗಿದರೂ ದೊರಕುತ್ತಿರಲಿಲ್ಲ.

ಇಂದು ಆ ಪರಿಸ್ಥಿತಿಯಿಲ್ಲ. ರಾಜ್ಯದ ವಿವಿಧೆಡೆ ತರಬೇತಿ ದೊರಕುತ್ತದೆ. ಉತ್ತಮ ಗುಣಮಟ್ಟದ ಅಧ್ಯಯನ ಸಾಮಗ್ರಿ ಲಭಿಸುತ್ತವೆ. ಜೊತೆಗೆ ಅಂತರ್ಜಾಲದ ಮೂಲಕ ಮಾಹಿತಿಯನ್ನು ಪಡೆಯುವುದು ಸುಲಭವಾಗಿದೆ. ಹಾಗಾಗಿ ಯು.ಪಿ.ಎಸ್.ಸಿ. ಪರೀಕ್ಷೆಗಳನ್ನು ತೆಗೆದುಕೊಳ್ಳುವವರ ಹಾಗೂ ವಿವಿಧ ಸೇವೆಗಳಿಗೆ ಅರ್ಹತೆ ಪಡೆಯುವ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದ ಮುಖ್ಯ ನಗರಗಳ ಸಾರ್ವಜನಿಕ ಗ್ರಂಥಾಲಯಗಳನ್ನು ಇಂದು ಅತಿಹೆಚ್ಚು ಬಳಸುವವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು. ಇಂತಹ ಯಶಸ್ಸು ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ. ಈ ಹಿಂದೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕರ್ನಾಟಕ ಮೂಲದ ಅಧಿಕಾರಿಗಳ ಅನುಪಸ್ಥಿತಿ ರಾಜ್ಯಕ್ಕೆ ನಷ್ಟವನ್ನು ಉಂಟುಮಾಡಿದೆ ಎನ್ನುವುದನ್ನು ಮರೆಯುವಂತಿಲ್ಲ. ಈಗ ಕರ್ನಾಟಕಕ್ಕೆ ಲಭ್ಯವಾಗುತ್ತಿರುವ ಯಶಸ್ಸು ಮುಂದಿನ ದಶಕಗಳಲ್ಲಿ ದೆಹಲಿಯಲ್ಲಿ ನಮಗೆ ದೊರಕಬೇಕಾಗಿರುವುದನ್ನು ಪಡೆಯಲು ಅನುಕೂಲ ಮಾಡಿಕೊಡಲಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಈ ಮೇಲಿನ ಅಂಶದಾಚೆಗೆ ಮತ್ತಷ್ಟು ಕುತೂಹಲಕರವಾದ, ಎಲ್ಲರೂ ಸಂಭ್ರಮಿಸಬಹುದಾದ ಕೆಲವು ವಿಚಾರಗಳನ್ನು ಯು.ಪಿ.ಎಸ್.ಸಿ. ಫಲಿತಾಂಶಗಳು ಹೊರಹಾಕಿವೆ. ಲಿಂಗ, ಜಾತಿ, ಧರ್ಮ, ಪ್ರದೇಶ, ಭಾಷೆ ಹಾಗೂ ದೈಹಿಕ ದೌರ್ಬಲ್ಯಗಳನ್ನು ಮೀರುವ ನೂರಾರು ಯಶಸ್ಸಿನ ಕಥೆಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತಿವೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟಗಳೆರಡಕ್ಕೂ ಅನ್ವಯವಾಗುವ ಮಾತು. ಉದಾಹರಣೆಗೆ, ಈ ಬಾರಿ ನಂದಿನಿಯವರು ಮೊದಲ ರ‍್ಯಾಂಕ್‌ ಪಡೆಯುವ ಮೂಲಕ ಕಳೆದ ಮೂರು ಪರೀಕ್ಷೆಗಳಲ್ಲಿ ಮಹಿಳೆಯರೇ ಯು.ಪಿ.ಎಸ್.ಸಿ. ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದಂತಾಗಿದೆ. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. 2015ರಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ ಐರಾ ಸಿಂಘಾಲ್ ಇಂತಹ ಯಶಸ್ಸನ್ನು ಗಳಿಸಿದ ಮೊದಲ ಅಂಗವಿಕಲರು. 2016ರಲ್ಲಿ ಪ್ರಥಮ ಸ್ಥಾನವನ್ನು ಪಡೆದ ಟೀನಾ ದಾಬಿಯವರು ದಲಿತ ಮಹಿಳೆ ಮತ್ತು ಅದು ಅವರ ಮೊದಲ ಪ್ರಯತ್ನವಾಗಿತ್ತು. ನಂದಿನಿ ಹಿಂದುಳಿದ ವರ್ಗಕ್ಕೆ ಸೇರಿದ ಶಾಲಾ ಶಿಕ್ಷಕರೊಬ್ಬರ ಪುತ್ರಿ. ಈ ಮೂವರ ಲಿಂಗ, ಸಾಮಾಜಿಕ ಹಿನ್ನೆಲೆ ಅಥವಾ ದೈಹಿಕ ಲಕ್ಷಣಗಳು ಅವರ ವ್ಯಕ್ತಿತ್ವಗಳನ್ನು ರೂಪಿಸುವುದಿಲ್ಲ. ಆದರೆ ರಾಷ್ಟ್ರದ ಉನ್ನತ ನಾಗರಿಕ ಸೇವೆಗಳಲ್ಲಿ ಕೆಲಸ ಮಾಡುವವರು ಒಂದೇ ವರ್ಗಕ್ಕೆ ಸೇರಿದ ಅಥವಾ ಒಂದೇ ಬಗೆಯ ಶೈಕ್ಷಣಿಕ ಹಿನ್ನೆಲೆಯವರು ಮಾತ್ರವಲ್ಲ. ಅವರು ನಮ್ಮ ಸಮಾಜದ ವಿವಿಧತೆಯನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಸಮಾಧಾನ ತರುವ ಸಂಗತಿ. 2017ರಲ್ಲಿ 253 ಮಹಿಳೆಯರು ಅರ್ಹತೆ ಪಡೆದಿದ್ದು, ಅವರ ಪೈಕಿ 7 ಮಂದಿ ಮೊದಲ 25 ಸ್ಥಾನಗಳೊಳಗಿದ್ದಾರೆ. ನಾಗರಿಕ ಸೇವೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಒಳ್ಳೆಯ ಲಕ್ಷಣವೇ.

ಈ ಬಾರಿಯ ಫಲಿತಾಂಶಗಳಲ್ಲಿಯೇ ನಾವು ಕಾಣಬಹುದಾದ ವಿವಿಧತೆಯ ಇನ್ನಷ್ಟು ಉದಾಹರಣೆಗಳನ್ನು ನೋಡಿ, ಕರ್ನಾಟಕದಿಂದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮೇಲೆ ಗುರುತಿಸಿದೆ. ಹಾಗೆಯೇ ಈಗ ಪ್ರತ್ಯೇಕತಾವಾದಿ ಚಟುವಟಿಕೆಗಳ ಕಾರಣದಿಂದ ಸುದ್ದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದಿಂದ 14 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರ ಪೈಕಿ ಹತ್ತನೆಯ ರ‍್ಯಾಂಕ್‌ ಪಡೆದಿರುವ ಬಿಲಾಲ್ ಮೊಹಿಯುದ್ದೀನ್ ಭಟ್ ಎಂಬ ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿಯೂ ಇದ್ದಾರೆ. ಕಳೆದ ವರ್ಷ ಎರಡನೆಯ ಸ್ಥಾನ ಕಾಶ್ಮೀರಿ ಯುವಕನೊಬ್ಬನ ಪಾಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. ಕಾಶ್ಮೀರದಲ್ಲಿ ಅಶಾಂತಿ ಮತ್ತು ಭಾರತವಿರೋಧಿ ಭಾವನೆಗಳ ನಡುವೆಯೂ ಯು.ಪಿ.ಎಸ್.ಸಿ. ಪರೀಕ್ಷೆಗಳನ್ನು ತೆಗೆದುಕೊಳ್ಳುವ ಹಾಗೂ ಭಾರತೀಯ ಸೇನೆಯಲ್ಲಿ ಭರ್ತಿಯಾಗಲು ಉತ್ಸುಕರಾಗಿರುವವರ ಸಂಖ್ಯೆಯು ಹೆಚ್ಚುತ್ತಿದೆ.

ಭಾಷೆಗೆ ಸಂಬಂಧಿಸಿದ ಮತ್ತೊಂದು ಅಂಶವನ್ನು ಗಮನಿಸಿ; ಸಾಮಾನ್ಯವಾಗಿ ಯು.ಪಿ.ಎಸ್.ಸಿ. ಪರೀಕ್ಷೆಗಳಲ್ಲಿ ಉತ್ತರ ಭಾರತದ ಹಿಂದಿ ಭಾಷಿಕರು ಇಲ್ಲವೇ ಇಂಗ್ಲಿಷ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ವರ್ಗದವರು ಮಾತ್ರ ಯಶಸ್ಸು ಪಡೆಯುವ ಕಾಲವೊಂದಿತ್ತು. ನಂದಿನಿಯವರು ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು ಎಂದು ಮೇಲೆ ಗುರುತಿಸಿದೆ. ಮೂರನೆಯ ಸ್ಥಾನವನ್ನು ಪಡೆದ ಗೋಪಾಲಕೃಷ್ಣ ರೋನಂಕಿಯವರದು ಮತ್ತೊಂದು ಗಮನಾರ್ಹ ಉದಾಹರಣೆ. ಆಂಧ್ರದ ಅತ್ಯಂತ ಹಿಂದುಳಿದ ಭಾಗದ ರೈತನೊಬ್ಬನ ಮಗನಾದ ರೋನಂಕಿ, 11 ವರ್ಷಗಳಿಂದ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ತೆಲುಗು ಸಾಹಿತ್ಯವನ್ನು ಐಚ್ಛಿಕವಾಗಿ ಆರಿಸಿಕೊಂಡು ಪರೀಕ್ಷೆ ಬರೆದರು. ತಮ್ಮ ಸಂದರ್ಶನವನ್ನೂ ತೆಲುಗಿನಲ್ಲಿಯೇ ಮಾಡಿದರು. ಇಂಗ್ಲಿಷ್‌ ಬರುವುದಿಲ್ಲ ಎಂದು ಹಲವಾರು ಬಾರಿ ಹೀಯಾಳಿಕೆಗೂ ಒಳಗಾಗಿದ್ದರು.

ಬಹುಶಃ ಈ ಬಾರಿಯ ಅತ್ಯಂತ ಸ್ಫೂರ್ತಿದಾಯಕ ಅಭ್ಯರ್ಥಿಯೆಂದರೆ 28 ವರ್ಷದ ಉಮ್ಮುಲ್ ಖೇರ್. ಬಾಲ್ಯದಿಂದಲೂ ದುರ್ಬಲ ಮೂಳೆಗಳ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಉಮ್ಮುಲ್ ಅವರಿಗೆ ಹೈಸ್ಕೂಲ್ ಮುಗಿಸಲು ಕುಟುಂಬದ ಸಹಕಾರವಿರಲಿಲ್ಲ. 9ನೆಯ ತರಗತಿಯನ್ನು ಸೇರಬಯಸಿದ ಉಮ್ಮುಲ್‌ ಅವರನ್ನು ಪೋಷಕರು ಕೈಬಿಟ್ಟರು. ದೆಹಲಿಯ ತ್ರಿಲೋಕಪುರಿಯ ಜುಗ್ಗಿಜೋಪಡಿಯಲ್ಲಿ ಒಬ್ಬಳೇ ವಾಸಿಸುತ್ತ, ನೆರೆಹೊರೆಯ ಮಕ್ಕಳಿಗೆ ಮನೆಪಾಠ ಹೇಳಿಕೊಟ್ಟು ಉಮ್ಮುಲ್ ತನ್ನ ಹೈಸ್ಕೂಲ್ ಶಿಕ್ಷಣವನ್ನು ಮುಂದುವರೆಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜು ಮತ್ತು ಜೆ.ಎನ್.ಯು.ಗಳಲ್ಲಿ ಅಧ್ಯಯನ ಮಾಡಿದ ಉಮ್ಮುಲ್, ಈ ಬಾರಿ ಐ.ಎ.ಎಸ್. ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ತನ್ನ ಅರ್ಧ ಜೀವನವನ್ನು ಏಕಾಂಗಿಯಾಗಿ ಕಳೆದಿರುವ ಉಮ್ಮುಲ್ ಅವರ ಪಡಸಾದ ಮೂಳೆಗಳು 16 ಬಾರಿ ಮುರಿದಿವೆ ಹಾಗೂ 8 ಬಾರಿ ಶಸ್ತ್ರಚಿಕಿತ್ಸೆಯಾಗಿದೆ.

ಅಂಗವಿಕಲರ ಪಟ್ಟಿಯಲ್ಲಿ ಇನ್ನೂ ಇಂತಹ ಹತ್ತಾರು ನಿದರ್ಶನಗಳಿವೆ. ಹೋದ ವರ್ಷವೂ ಆಯ್ಕೆಯಾಗಿದ್ದ 29 ವರ್ಷದ ಅಂಧ ವಿದ್ಯಾರ್ಥಿನಿ ಪ್ರಂಜಲ್ ಪಾಟೀಲ್ ಈ ಬಾರಿ  124ನೆಯ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದವರೇ ಆದ ದೃಷ್ಟಿಹೀನ ಅಭ್ಯರ್ಥಿ ಕೆಂಪಹೊನ್ನಯ್ಯ 340ನೆಯ ಸ್ಥಾನ ಪಡೆದಿದ್ದಾರೆ. ಅವರು ಈಗ ಮೈಸೂರಿನ ಒಂಟಿಕೊಪ್ಪಲು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು.

ಇಂತಹ ಸಾಧಕರ ಪಟ್ಟಿ ಹಿಂದಿಗಿಂತ ಇಂದು ದೊಡ್ಡದು ಮತ್ತು ಹೆಚ್ಚು ವೈವಿಧ್ಯಮಯವಾದುದು. ಫಲಿತಾಂಶ ಪ್ರಕಟವಾದ ನಂತರದಲ್ಲಿ ಇವರೆಲ್ಲರೂ ಆಡಿರುವ ಮಾತುಗಳಲ್ಲಿ ಆತ್ಮವಿಶ್ವಾಸ, ಛಲ ಮತ್ತು ಆದರ್ಶಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಇವರ ಮಹತ್ವಾಕಾಂಕ್ಷೆ ಕೇವಲ ವೈಯಕ್ತಿಕ ನೆಲೆಯದಲ್ಲ, ಬದಲಿಗೆ ಇವರೆಲ್ಲರಲ್ಲಿ ಸಾಮಾಜಿಕ ಕಾಳಜಿಯಿದೆ ಎನ್ನುವುದು ಎದ್ದು ಕಾಣುತ್ತದೆ. ಅವರು ಮುಂದಿನ ವರ್ಷಗಳಲ್ಲಿ, ದಶಕಗಳಲ್ಲಿ ಪಡೆಯುವ ಉನ್ನತ ಅಧಿಕಾರಗಳನ್ನು ನಿರ್ವಹಿಸುವಾಗ ಅವರ ಬದುಕಿನ ಅನುಭವ ಮತ್ತು ಸಾಮಾಜಿಕ ಹಿನ್ನೆಲೆಯ ವಿವಿಧತೆಗಳು ಸದಾ ಅವರ ಮನಸ್ಸಿನಲ್ಲಿರಲಿ ಎನ್ನುವುದು ನಮ್ಮ ಆಶಯ.

ವಿಪರ್ಯಾಸವೆಂದರೆ ಇಂದು ನಮ್ಮ ಸಾರ್ವಜನಿಕ ಜೀವನದ ಹಾಗೂ ಸರ್ಕಾರಗಳ ಕಾರ್ಯನಿರ್ವಹಣೆಯ ವಾಸ್ತವವು ಎಲ್ಲ ಆದರ್ಶಗಳನ್ನು, ಸಾಮಾಜಿಕ ಬದ್ಧತೆಗಳನ್ನು ಕರಗಿಸಿಬಿಡಬಲ್ಲ ಶಕ್ತಿಯನ್ನು ಪಡೆದಿದೆ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳು ರಾಜ್ಯದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ, ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಬದ್ಧತೆಯಿಂದ ಕೆಲಸ ಮಾಡಬಹುದು ಹಾಗೂ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಬಲ್ಲ ಧೈರ್ಯ ಯಾರಿಗೂ ಇಲ್ಲ.

ಪ್ರಾಮಾಣಿಕ ಅಧಿಕಾರಿಗಳು ದುರಂತ ನಾಯಕರಂತೆ ತೋರುತ್ತಿದ್ದಾರೆ. ಈ ವ್ಯವಸ್ಥೆಯನ್ನು ಒಳಗಿನಿಂದ ಸುಧಾರಿಸುವ ಯಾವ ಪ್ರಯತ್ನವೂ ಇದುವರೆಗೆ ಫಲ ನೀಡಿಲ್ಲ. ಸ್ವಲ್ಪಮಟ್ಟಿಗಾದರೂ ನಮ್ಮ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಅಧಿಕಾರಿ ವರ್ಗ ಇಂದು ಹೊರಹೊಮ್ಮಬೇಕೆಂದರೆ ಬಹುಶಃ ವಿಭಿನ್ನ ಹಿನ್ನೆಲೆಯ, ವಿಭಿನ್ನ ಸವಾಲುಗಳನ್ನು ಎದುರಿಸಿರುವವರು ನಾಗರಿಕ ಸೇವೆಗಳಿಗೆ ಆಯ್ಕೆಯಾದಾಗ ಸಾಧ್ಯವೇನೊ. ಈ ಬಾರಿಯ ಅಭ್ಯರ್ಥಿಗಳು ಅಂತಹವರಾಗಿರಲಿ ಎಂದು ಆಶಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry