ನಾಡ ಮುಕ್ತಿಯ ಧ್ಯೇಯಕೆ ಮರಣ ಅಪ್ಪಿದ ಧೀರರು

7

ನಾಡ ಮುಕ್ತಿಯ ಧ್ಯೇಯಕೆ ಮರಣ ಅಪ್ಪಿದ ಧೀರರು

ಸುಧೀಂದ್ರ ಬುಧ್ಯ
Published:
Updated:
ನಾಡ ಮುಕ್ತಿಯ ಧ್ಯೇಯಕೆ ಮರಣ ಅಪ್ಪಿದ ಧೀರರು

ಇಂದಿಗೆ ಸರಿಯಾಗಿ 87 ವರ್ಷಗಳ ಹಿಂದೆ, ಪಂಜಾಬಿನ ಕಾಂಗ್ರೆಸ್ ಧುರೀಣ ಭೀಮಸೇನ್ ಸಾಚಾರ್ ‘ನ್ಯಾಯಾಲಯದ ವಿಚಾರಣೆಯ ವೇಳೆ ನೀವುಗಳೇಕೆ ಬಲವಾದ ಪ್ರತಿವಾದ ದಾಖಲಿಸಲಿಲ್ಲ?’ ಎಂದಾಗ ಎದುರಿಗಿದ್ದ 23ರ ತರುಣ ‘ಕ್ರಾಂತಿಕಾರಿಗಳು ಸಾವಿಗೆ ಅಂಜಬಾರದು. ತ್ಯಾಗ, ಬಲಿದಾನಗಳಿಂದ ನಮ್ಮ ಧ್ಯೇಯಕ್ಕೆ ಪುಷ್ಟಿ ಸಿಗುತ್ತದೆಯೇ ವಿನಾ ಮೇಲ್ಮನವಿ, ತಪ್ಪೊಪ್ಪಿಗೆಯಿಂದಲ್ಲ’ ಎಂದು ಎದೆ ಸೆಟೆಸಿ ಹೇಳಿದ್ದ. ಈ ಮಾತು ಹೇಳುವಾಗ, ಸಾವು ಆತನಿಂದ ಕೆಲ ಗಂಟೆಗಳಷ್ಟು ದೂರದಲ್ಲಿತ್ತು. ಆತನ ಜೊತೆಯಲ್ಲಿ ಅವನದೇ ವಯಸ್ಸಿನ ಮತ್ತಿಬ್ಬರು ಗೆಳೆಯರಿದ್ದರು. ಈ ಬಿಸಿ ರಕ್ತದ ತರುಣರತ್ತ ಇಡೀ ದೇಶವೇ ಕಂಬನಿ ತುಂಬಿಕೊಂಡು ಮೆಚ್ಚುಗೆಯಿಂದ ನೋಡುತ್ತಿತ್ತು.

ಸಾಮಾನ್ಯವಾಗಿ ಲಾಹೋರ್ ಜೈಲಿನ ಕೈದಿಗಳನ್ನು ಬೆಳಗಿನ ಅವಧಿಯಲ್ಲಿ ಏನಾದರೂ ಕೆಲಸಗಳಲ್ಲಿ ತೊಡಗಿಸಿ,ಸೂರ್ಯಾಸ್ತ ಸಮೀಪಿಸುತ್ತಿದ್ದಂತೆಯೇ ಮರಳಿ ಕಾರಾಗೃಹಕ್ಕೆ ಕರೆತರುವುದು ವಾಡಿಕೆಯಾಗಿತ್ತು. ಅಂದು ಸಂಜೆ ನಾಲ್ಕು ಬಾರಿಸುವ ಮುನ್ನವೇ ಜೈಲು ನಿರ್ವಹಣಾಧಿಕಾರಿ ಕೈದಿಗಳನ್ನು ಒಳಹೋಗುವಂತೆ ಆದೇಶಿಸಿದರು. ‘ಏನೋ ಗಂಭೀರ ಕಾರಣವಿರಬೇಕು’ ಎಂಬ ಗುಸುಗುಸು ಕೈದಿಗಳ ಮಧ್ಯೆ ಕೇಳಿಬಂತು. ಅಷ್ಟರಲ್ಲಿ ಜೈಲಿನ ಕ್ಷೌರಿಕ ಒಂದೊಂದೇ ಸೆರೆಕೋಣೆಗೆ ವಿಷಯ ದಾಟಿಸಿದ. ‘ಇಂದು ರಾತ್ರಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇ

ರಿಸಲಾಗುತ್ತದೆ’ ಎಂಬ ವಿಷಯ ತಿಳಿಯುತ್ತಿದ್ದಂತೆ ಇಡೀ ಜೈಲು ನೀರವ ಮೌನಕ್ಕೆ ಜಾರಿತು. ಹಲವು ಕೈದಿಗಳು ಭಗತ್ ಸಿಂಗ್ ಕೋಣೆಯಿಂದ ಪೆನ್ನು, ಬಾಚಣಿಗೆ, ಕೈಗಡಿಯಾರ ಅಥವಾ ಸಿಕ್ಕ ಏನನ್ನಾದರೂ ನಮ್ಮ ನೆನಪಿಗಾಗಿ ತಂದುಕೊಡು ಎಂದು ಕ್ಷೌರಿಕನಲ್ಲಿ ದುಂಬಾಲು ಬಿದ್ದರು. ಗಂಟೆಗಳು

ಸರಿಯುತ್ತಿದ್ದಂತೆಯೇ ಎಲ್ಲ ಕೈದಿಗಳೂ ಮೌನ ಧರಿಸಿ, ಭಗತ್ ಸಿಂಗ್ ಕೊಠಡಿ ನಂ. 14ರತ್ತ ದೃಷ್ಟಿನೆಟ್ಟು ಕುಳಿತರು. ಆರು ತಿಂಗಳ ಅವಧಿಯಲ್ಲಿ ತಾವು ಕಂಡ ಈ ತರುಣರ ದಿನಚರಿ, ವ್ಯಕ್ತಿತ್ವ, ಅಸಾಧಾರಣ ಸ್ಥೈರ್ಯ ಅವರ ಕಣ್ಣ ಮುಂದೆ ಹಾದುಹೋಯಿತು.

1930ರ ಅಕ್ಟೋಬರ್ 30ರಂದು ಬ್ರಿಟಿಷ್ ಟ್ರಿಬ್ಯುನಲ್ ಮರಣದಂಡನೆಯ ಶಿಕ್ಷೆ ವಿಧಿಸಿ, ಜೈಲಿಗಟ್ಟಿದ ಬಳಿಕ ಜೈಲು ನಿರ್ವಾಹಣಾಧಿಕಾರಿ ಚರತ್ ಸಿಂಗ್ ಮತ್ತು ಭಗತ್ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಕಾರ್ಲ್ ಮಾರ್ಕ್ಸ್ ಬರಹಗಳು, ರಷ್ಯಾ ಕ್ರಾಂತಿಗೆ ಸಂಬಂಧಿಸಿದ ಕೃತಿಗಳು, ಲೆನಿನ್‌ರ ‘ಲೆಫ್ಟ್ ವಿಂಗ್ ಕಮ್ಯುನಿಸಂ’, ಬರ್ಟ್ರಂಡ್ ರಸೆಲ್‌ರ ‘WhyMen Fight’ ಕೃತಿ ಲಾಹೋರ್ ಜೈಲಿನೊಳಗೆ ಸಲೀಸಾಗಿಬರುತ್ತಿದ್ದವು. ಬಾಲ್ಯದಲ್ಲಿ ಅಂಟಿಕೊಂಡ ಓದಿನ ಗೀಳು, ಗಲ್ಲಿಗೇರುವ ಕೊನೆಯ ಗಂಟೆಯವರೆಗೂ ಮುಂದುವರೆದಿತ್ತು. ಸಮಾಜದ ಕ್ರೌರ್ಯವನ್ನು ಪ್ರಶ್ನಿಸುವ ನೈತಿಕತೆ, ಕ್ರಾಂತಿಕಾರಿ ನಿಲುವು ಮತ್ತು ಆ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಛಾತಿಯನ್ನು ಪುಸ್ತಕಗಳು ಒದಗಿಸಿದ್ದವು.

ಹಾಗೆ ನೋಡಿದರೆ, ಭಗತ್ ಸಿಂಗ್ ಹೋರಾಟಗಾರರ ಕುಟುಂಬದಿಂದಲೇ ಬಂದವರು. ಅಮೆರಿಕದಲ್ಲಿ ಆರಂಭವಾಗಿ ಲಾಲಾ ಹರದಯಾಳ್ ಮೂಲಕ ವಿವಿಧ ದೇಶಗಳಲ್ಲಿ ಮೊಳಗಿದ ಭಾರತ ಸ್ವಾತಂತ್ರ್ಯಾಗ್ರಹದ ಕಹಳೆ ಗದರ್ ಪಕ್ಷವಾಗಿ ಸಂಘಟಿತಗೊಂಡಿತ್ತು. ಭಗತ್ ತಂದೆ ಕಿಶನ್ ಸಿಂಗ್, ಚಿಕ್ಕಪ್ಪ ಅಜಿತ್ ಸಿಂಗ್ ಗದರ್ ಪಕ್ಷದ ಸದಸ್ಯರಾಗಿದ್ದರು. ಅಜಿತ್ ಸಿಂಗ್‌ರ ಸಾಹಸಗಳೂ ಕಡಿಮೆ ಇರಲಿಲ್ಲ, ಅವರ ಮೇಲೆ 22 ಕೇಸುಗಳು ದಾಖಲಾಗಿದ್ದವು. ಭಗತ್ ಸಿಂಗ್ ಹುಟ್ಟಿದ ದಿನವೇ ತಂದೆ ಕಿಶನ್ ಸಿಂಗ್ ಜೈಲಿನಿಂದ ಬಿಡುಗಡೆಗೊಂಡಿದ್ದರು. ಕುಟುಂಬಕ್ಕೆ ಸಂತಸ ಮತ್ತು ಸುಯೋಗ ತಂದ ಮಗುವಾದ್ದರಿಂದ ಭಗನ್ ಲಾಲ್ ಎಂದು ನಾಮಕರಣ ಮಾಡಲಾಯಿತು. ಚಿಕ್ಕಪ್ಪನ ಸಿಡಿದೇಳುವ ರಕ್ತ ಭಗತ್ ಮೈಯಲ್ಲೂ ಹರಿಯುತ್ತಿತ್ತು. 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ದುರಂತ 12 ವರ್ಷದ ಭಗತ್ ಮೇಲೆ ದಟ್ಟ ಪರಿಣಾಮ ಬೀರಿತ್ತು. ವಿದ್ಯಾಭ್ಯಾಸದಲ್ಲಿ ಚೂಟಿಯಾಗಿದ್ದ ಭಗತ್, ರಾಷ್ಟ್ರೀಯ ಪ್ರಜ್ಞೆಯನ್ನು ಪೋಷಿಸುತ್ತಲೇ ಬೆಳೆದರು.

ತಾರುಣ್ಯಕ್ಕೆ ಕಾಲಿಟ್ಟಾಗ ಮನೆಯಲ್ಲಿ ಮದುವೆಯ ಒತ್ತಾಯ ಬಂತು. ದೇಶಕ್ಕಾಗಿ ಬದುಕು ಅರ್ಪಿಸಲು ಸಿದ್ಧರಿದ್ದ ಭಗತ್ ಸಿಂಗ್, ಲಾಹೋರ್ ತೊರೆದು ಕಾನ್ಪುರಕ್ಕೆ ತೆರಳಿ ಗಣೇಶ ಶಂಕರ ವಿದ್ಯಾರ್ಥಿ ಅವರನ್ನು ಸೇರಿಕೊಂಡರು. ಆಗಲೇ ಇತರ ಕ್ರಾಂತಿಕಾರಿಗಳ ಸಖ್ಯ ಬೆಳೆದಿದ್ದು.

1920ರ ಕಾಕೋರಿ ರೈಲು ದರೋಡೆ ಪ್ರಕರಣದ ಬಳಿಕ ಕ್ರಾಂತಿಕಾರಿಗಳಿಗೆ ದಿಕ್ಕು ತೋಚದಂತಾಗಿತ್ತು. ಕ್ರಾಂತಿಕಾರಿ ಪಡೆಯ ಅಗ್ರನಾಯಕರಾಗಿದ್ದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಖ್ ಉಲ್ಲಾ, ಸಚೀಂದ್ರನಾಥ ಸನ್ಯಾಲ್ ಮತ್ತಿತರ ನಾಯಕರು ಬಂಧನಕ್ಕೆ ಒಳಗಾಗಿದ್ದರು. ನಾಯಕತ್ವದ ನಿರ್ವಾತ ಸೃಷ್ಟಿಯಾಗಿತ್ತು. ಆಗ ಕ್ರಾಂತಿಕಾರಿ ಪಡೆಗೆ ಚೈತನ್ಯವಾಗಿ ಒದಗಿದ್ದು ಭಗತ್ ಸಿಂಗ್. ತಿಲಕರ ಧ್ಯೇಯವನ್ನು ಒಪ್ಪಿಕೊಂಡಿದ್ದ, ಬ್ರಿಟಿಷರ ದರ್ಪಕ್ಕೆ ಕೆನ್ನೆ

ತೋರಿಸದೇ, ತಿರುಗಿಸಿ ಕೊಡಲು ಸಿದ್ಧರಿದ್ದ ತರುಣರು ‘ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್’ ಅಡಿಯಲ್ಲಿ ಸಂಘಟಿತರಾಗಿದ್ದರು. ಈ ಸಂಘಟನೆಗೆ ಭಗತ್ ಸಿಂಗ್ ಪ್ರವೇಶವಾಯಿತು. ಬಳಿಕ ‘ಸೋಷಿಯಲಿಸ್ಟ್’ ಎಂಬ ಪದ ಜೋಡಣೆಯಾಗಿ ಹೆಸರು ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ ಆಯಿತು. ಈ ಸಂಘಟನೆಯಲ್ಲಿ ಕ್ರಾಂತಿಕಾರಿಗಳ ಹಿರಿಯಣ್ಣನಂತೆ ಚಂದ್ರಶೇಖರ ಆಜಾದ್ ಇದ್ದರು. ಕಮ್ಯುನಿಸ್ಟ್ ಸಿದ್ಧಾಂತವನ್ನು ಅತಿಯಾಗಿ ನೆಚ್ಚಿಕೊಂಡಿದ್ದ ಸುಖದೇವ್ ಥಾಪರ್, ವಿಜಯ್ ಕುಮಾರ್ ಸಿನ್ಹಾ, ಶಿವ ವರ್ಮ, ಶಿವರಾಮ ರಾಜಗುರು ಮತ್ತಿತರರು ಸಂಘಟನೆಯ ಭಾಗವಾಗಿದ್ದರು.

ಸಂಘಟನೆ ಎರಡು ಕವಲುಗಳಲ್ಲಿ ಬೆಳೆದಿತ್ತು. ಸೈದ್ಧಾಂತಿಕ ನಿಲುವುಗಳನ್ನು ಪ್ರಚುರಪಡಿಸುವ ತಂಡದಲ್ಲಿ ಕೆಲವರಿದ್ದರು. ಬ್ರಿಟಿಷರ ಎದುರು ಸೆಟೆದು ನಿಲ್ಲುವ ಉತ್ಸಾಹಿಗಳ ಮತ್ತೊಂದು ತಂಡವಿತ್ತು. ಭಗತ್ ಸಿಂಗ್ ಎರಡೂ ತಂಡಗಳ ಕೊಂಡಿಯಾದರು. 20 ದಾಟುವ ಹೊತ್ತಿಗೇ ಭಗತ್ ಮನದಲ್ಲಿ ಸ್ಪಷ್ಟ ಚಿಂತನೆಗಳು ರೂಪುಗೊಂಡಿದ್ದವು. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆಯನ್ನು ನೀಡದ, ವ್ಯಕ್ತಿಯ ಘನತೆಯನ್ನು ಕೀಳಂದಾಜಿಸುವ ಯಾವುದೇ ಆಡಳಿತವನ್ನು ಕಿತ್ತೊಗೆಯಬೇಕು. ಸ್ವಾತಂತ್ರ್ಯ ಎಂದರೆ ಕೇವಲ ಪರಕೀಯರ ಆಡಳಿತ ವ್ಯವಸ್ಥೆಯನ್ನು ತೊಡೆದುಹಾಕಿ, ನಮ್ಮದೇ ಸರ್ಕಾರ ರಚಿಸುವುದಲ್ಲ. ಆರ್ಥಿಕವಾಗಿ ಏಳಿಗೆ ಸಾಧ್ಯವಾಗದ ವಿನಾ ಸ್ವರಾಜ್ಯ ಎನ್ನುವುದು ಇರುವ ವ್ಯವಸ್ಥೆಯ ಮತ್ತೊಂದು ಅವತರಣಿಕೆಯಾಗುತ್ತದೆ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯ ಅರ್ಥಹೀನ ಎಂಬುದು ಭಗತ್ ನಿಲುವಾಗಿತ್ತು. ಈ ಚಿಂತನೆಗಳು ಗಟ್ಟಿಯಾಗುತ್ತಿದ್ದ ಅವಧಿಯಲ್ಲಿ ಭಗತ್ ತನ್ನ ತಾಯಿ ವಿದ್ಯಾವತಿ ಕೌರ್ ಅವರಿಗೆ ಬರೆದ ಪತ್ರದಲ್ಲಿ ‘ಅಮ್ಮಾ, ಇಂದಲ್ಲಾ ನಾಳೆ ನನ್ನ ದೇಶ ಸ್ವತಂತ್ರಗೊಳ್ಳುತ್ತದೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ಬಿಳಿ ಸಾಹೇಬರ ಜಾಗದಲ್ಲಿ, ಕಂದು ವರ್ಣದ ಸಾಹೇಬರು ಕುಳಿತುಕೊಳ್ಳುತ್ತಾರೇನೋ ಎನ್ನುವ ಆತಂಕವಿದೆ’ ಎಂದು ಬರೆದಿದ್ದರು.

ಸಮಾಜವಾದ, ಮಾನವತಾವಾದ ಮತ್ತು ರಾಷ್ಟ್ರೀಯವಾದದ ಕೂಡು ವೃತ್ತದಲ್ಲಿ ನಿಂತು ಭಗತ್ ತಮ್ಮ ಹೋರಾಟ ಕಟ್ಟಿದರು. ಭಗತ್ ದೇಶದ ಮನೆಮಾತಾದದ್ದು ಸೈಮನ್ ಆಯೋಗದ ವಿರುದ್ಧ ನಡೆದ ಚಳವಳಿಯಲ್ಲಿ. 1928ರಲ್ಲಿ 7 ಸದಸ್ಯರನ್ನೊಳಗೊಂಡ ಸೈಮನ್ ಆಯೋಗ ಭಾರತಕ್ಕೆ ಬಂದಿಳಿಯಿತು. ಸಾಂವಿಧಾನಿಕ ಸುಧಾರಣೆಗೆ ಭಾರತ ಸಜ್ಜಾಗಿದೆಯೇ, ಸ್ವರಾಜ್ಯದ ಅನುಷ್ಠಾನಕ್ಕೆ ಕಾಲ ಪಕ್ವವಾಗಿದೆಯೇ ಎಂಬ ಬಗ್ಗೆ ಅಧ್ಯಯನ ಮಾಡುವುದು ಆಯೋಗದ ಕಾರ್ಯಭಾರವಾಗಿತ್ತು. ಅಸಲಿಗೆ ಪೂರ್ಣ ಸ್ವರಾಜ್ಯದ ಹಟಬಿಟ್ಟು, ಬ್ರಿಟಿಷ್ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರದ ಸ್ಥಾನ

ಮಾನ ಪಡೆಯಲು ಆಯೋಗದ ಮೂಲಕ ಭಾರತದ ನಾಯಕರನ್ನು ಮನವೊಲಿಸುವುದು ಬ್ರಿಟಿಷರ ಇಂಗಿತ ಆಗಿತ್ತು. ಕ್ರಾಂತಿಕಾರಿಗಳು ‘ಸೈಮನ್ ಆಯೋಗ ಒಂದು ಪಿತೂರಿ’ ಎಂದು ಬಹಿರಂಗ ಪ್ರತಿಭಟನೆಗೆ ಇಳಿದರು. ನಾಯಕತ್ವಕ್ಕೆ ‘ಪಂಜಾಬ್ ಕೇಸರಿ’ ಲಾಲಾ ಲಜಪತ್ ರಾಯ್ ಇದ್ದರು. ಆಯೋಗದ ಸದಸ್ಯರು ಅಕ್ಟೋಬರ್ 30ರಂದು ಲಾಹೋರ್ ರೈಲು ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಘೋಷಣೆ ಮೊಳಗಿತು. ಪೊಲೀಸರು ಪ್ರತಿಭಟನಾಕಾರರನ್ನು

ಹಿಮ್ಮೆಟ್ಟಿಸಲು ನೋಡಿದರು. ‘ಆಯೋಗದ ಸದಸ್ಯರು ಪ್ರತಿಭಟನಾಕಾರರನ್ನು ನೋಡಬಾರದು ಎಂಬ ಇಂಗಿತ ಸರ್ಕಾರದ್ದಾದರೆ, ಆಯೋಗದ ಸದಸ್ಯರ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿ ಸರ್ಕಾರಿ ಬಂಗಲೆಗೆ ನೇರ ಕರೆದುಕೊಂಡು ಹೋಗಲಿ’ ಎಂದು ಲಜಪತ್ ರಾಯ್ ಗುಡುಗಿದರು.

ಪೊಲೀಸ್ ವರಿಷ್ಠಾಧಿಕಾರಿ ಜೆ.ಎ. ಸ್ಕಾಟ್ ಲಾಠಿಚಾರ್ಜ್‌ಗೆ ಆದೇಶಿಸಿದರು. ಪೊಲೀಸರು ನೇರ ರಾಯ್ ಅವರಿಗೆ ಮನಸೋ ಇಚ್ಛೆ ಥಳಿಸಿದರು. ರಾಯ್ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದರು. ಲಜಪತ್‌ ರಾಯರಂತಹ ಮೇರುನಾಯಕನಿಗೆ ಉಂಟಾದ ಸ್ಥಿತಿ ಕಂಡು ಭಗತ್ ಮತ್ತು ಗೆಳೆಯರು ಪ್ರತೀಕಾರದ ಪ್ರತಿಜ್ಞೆ ಮಾಡಿದರು. 1928ರನವೆಂಬರ್ 17ರಂದು ಲಜಪತ್ ರಾಯ್ ತೀರಿಕೊಂಡರು. ಡಿಸೆಂಬರ್ 10ರಂದು ನಡೆದ HSRA ಸಭೆಯಲ್ಲಿ, ಭಗವತೀ ಚರಣ್ ವೋರಾ ಪತ್ನಿ ದುರ್ಗಾ ದೇವಿ ‘ನೀವಾರೂ ಅಲ್ಲದಿದ್ದರೂ ನಾನೇ ಲಜಪತ್ ರಾಯರ ಸಾವಿನ ಮುಯ್ಯಿತೀರಿಸುತ್ತೇನೆ’ ಎಂದು ಉದ್ವೇಗದಲ್ಲಿ ಮಾತನ್ನಾಡಿದರು. ಅಲ್ಲಿಗೆ ಜೆ.ಎ. ಸ್ಕಾಟ್ ಹತ್ಯೆಗೆ ಯೋಜನೆಯೊಂದು ರೂಪುಗೊಂಡಿತು. ಆದರೆ ಅನುಷ್ಠಾನದಲ್ಲಿ ಆದ ಚಿಕ್ಕ ತಪ್ಪಿನಿಂದ ಸ್ಕಾಟ್ ಬದಲಿಗೆ ಜಾನ್ ಸಾಂಡರ್ಸ್ ಬಲಿಯಾದರು.

ನಂತರದ ದಿನಗಳಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್‌ರಂತಹ ಕ್ರಾಂತಿಕಾರಿಗಳ ಕತೆಯನ್ನು ನಾಟಕಗಳ ಮೂಲಕ ಹೇಳುವ, ಜನರನ್ನು ಹೋರಾಟಕ್ಕೆ ಅಣಿಗೊಳಿಸುವ ಪ್ರಯತ್ನವನ್ನು ಭಗತ್ ಮಾಡಿದರು. ಭಾಷಣ, ನಾಟಕ, ಸತ್ಯಾಗ್ರಹಗಳು ಕ್ಷಿಪ್ರಫಲ ನೀಡಲಾರವು ಎಂದರಿತು, ಸಂಘಟನೆಯತ್ತ ಯುವಕರನ್ನು ಸೆಳೆಯಲು ಶೌರ್ಯ ಪ್ರದರ್ಶನದ ಯೋಜನೆಯೊಂದನ್ನು ಭಗತ್ ರೂಪಿಸಿದರು. ಇದಕ್ಕೆ ಫ್ರಾನ್ಸ್ ಕ್ರಾಂತಿಕಾರಿಯೊಬ್ಬ ಸಂಸತ್ತಿನ (‘ಚೇಂಬರ್ ಆಫ್ ಡೆಪ್ಯುಟೀಸ್’) ಮೇಲೆ ನಡೆಸಿದ ಬಾಂಬ್ ದಾಳಿ ಪ್ರೇರಣೆಯಾಗಿತ್ತು. 1929ರ ಏಪ್ರಿಲ್ 8 ರಂದು ಕೇಂದ್ರ ಶಾಸನ ಸಭೆಯ ಮೇಲೆ ಬಾಂಬ್ ದಾಳಿ ನಡೆಯಿತು. ಆದರೆ ದಾಳಿಯ ಉದ್ದೇಶ ಯಾರನ್ನೂ ಕೊಲ್ಲುವುದಾಗಿರಲಿಲ್ಲ, ಪ್ರತಿಭಟನೆಯನ್ನು ತೀವ್ರವಾಗಿ ದಾಖಲಿಸುವುದಷ್ಟೇ ಆಗಿತ್ತು. ಹಾಗಾಗಿ

ಹಿಂದಿನ ಸಾಲಿನ ಆಸನಗಳಲ್ಲಿ ಯಾರೂ ಕುಳಿತಿರದ್ದನ್ನು ಗಮನಿಸಿ, ಹೆಚ್ಚು ಅಪಾಯಕಾರಿಯಲ್ಲದ ಸಿಡಿಗುಂಡನ್ನು ಬಳಸಿ ದಾಳಿ ನಡೆಸಲಾಯಿತು. ಈ ಪ್ರಕರಣದ ಬಳಿಕ ಭಗತ್ ಬಂಧನಕ್ಕೊಳಗಾದರು, ಸಾಂಡರ್ಸ್ ಹತ್ಯೆ ಪ್ರಕರಣವೂ ಕೊರಳಿಗೆ ಸುತ್ತಿಕೊಂಡಿತು. ಗಲ್ಲು ಶಿಕ್ಷೆಯ ತೀರ್ಪು ಬಂತು!

ಜೈಲುವಾಸದ ಅವಧಿಯಲ್ಲಿ ಭಗತ್, ಓದಿನ ಜೊತೆ ಬರವಣಿಗೆಯನ್ನೂ ಮಾಡಿದರು. ಭಗತ್ ಸಿಂಗ್ ಜೈಲಿನಲ್ಲಿ ಕೂತು ರಚಿಸಿದ ಕೃತಿಗಳ ಹಸ್ತಪ್ರತಿಯನ್ನು ಜೈಲಿನಿಂದ ಗುಪ್ತವಾಗಿ ಹೊರತರಲಾಯಿತು ಮತ್ತು ಜಲಂಧರ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾಗಿದ್ದ ಕುಮಾರಿ ಲಾಜ್ಯವತಿ ಅವರ ಬಳಿಯಲ್ಲಿ ಇರಿಸಲಾಗಿತ್ತು. ಆದರೆ ವಿಪರ್ಯಾಸ, ನಂತರ ಅದು ಕೈ ಬದಲಾಯಿತು. ಭಾರತ ವಿಭಜನೆಯ ಸಂದರ್ಭದಲ್ಲಿ ಅದನ್ನು ಭಾರತಕ್ಕೆ ತರುತ್ತಿದ್ದ ವ್ಯಕ್ತಿ ದಿಗಿಲಿನಿಂದ ಮಾರ್ಗಮಧ್ಯದಲ್ಲೇ ಹಸ್ತಪ್ರತಿ ನಾಶಗೊಳಿಸಿದ. ಹಾಗಾಗಿ ಭಗತ್ ಸಿಂಗರ ಕೆಲವು ಬರಹಗಳಷ್ಟೇ ಮುಂದಿನ ಪೀಳಿಗೆಗೆ ಲಭ್ಯವಾಗುವಂತಾಯಿತು.

ಇನ್ನು, ಭಗತ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ ಬ್ರಿಟಿಷ್ ಅಧಿಕಾರಿಗಳಿಗೆ ದಿಗಿಲಿತ್ತು. ಅದಾಗಲೇ ಜೈಲಿನ ಮುಂಭಾಗದಲ್ಲಿ ನೆರೆದಿದ್ದ ಸಹಸ್ರಾರು ಜನರನ್ನು ನಿಭಾಯಿಸುವುದು ಹೇಗೆ? ಮೃತ ದೇಹವನ್ನು ಏನು ಮಾಡಬೇಕು ಎಂಬ ಸಂದಿಗ್ಧ ಅಧಿಕಾರಿಗಳಿಗೆ ಎದುರಾಯಿತು. ‘ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲು ಶಿಕ್ಷೆ ಕೂಡದು’ ಎಂದು ಒತ್ತಾಯಿಸುತ್ತಿದ್ದ ದೇಶದ ಅಸಂಖ್ಯ ಜನರಲ್ಲಿ ಸಾಕಷ್ಟು ಪ್ರಶ್ನೆಗಳು ಇದ್ದವು. ಈ ಕ್ರಾಂತಿಕಾರಿ ತರುಣರ ಗಲ್ಲುಶಿಕ್ಷೆಯ ಹಿಂದೆ ರಾಜಕೀಯ ಪಿತೂರಿ ಇದೆಯೇ, ಮಹಾತ್ಮ ಗಾಂಧಿ ಈ ವಿಷಯದಲ್ಲಿ ಏನಾದರೂ ಮಾಡಿಯಾರೇ? ಗಾಂಧೀಜಿ ಮತ್ತು ಭಗತ್ ಮೊದಲ ಬಾರಿಗೆ ಭೇಟಿಯಾದಾಗ ಗಾಂಧೀಜಿಗೆ 59 ವರ್ಷ, ಈ ತರುಣ 21ರ ಗಡಿ ದಾಟಿರಲಿಲ್ಲ. ಆದರೆ ತನ್ನ ಶೌರ್ಯ, ಸಾಹಸಗಳಿಂದಲೇ ದೇಶದ ಉದ್ದಗಲಕ್ಕೂ ಹರಡಿ ಹೋಗಿದ್ದ. History of Indian National Congress ಕೃತಿಯಲ್ಲಿ ಡಾ. ಪಟ್ಟಾಭಿ ಸೀತಾರಾಮಯ್ಯನವರು ‘ಪ್ರಸಿದ್ಧಿಯ ವಿಷಯದಲ್ಲಿ ಗಾಂಧೀಜಿ ಮತ್ತು ಭಗತ್ ಸಿಂಗ್ ಇಬ್ಬರೂ ಸಮನಾಗಿ ತೂಗುತ್ತಿದ್ದರು’ ಎಂದಿದ್ದಾರೆ. ಹಾಗಾದರೆ ಕ್ರಾಂತಿಕಾರಿಗಳ ಗಲ್ಲುಶಿಕ್ಷೆಯ ಹಿಂದೆ ಮುಂದೆ ನಡೆದ ಘಟನೆಗಳು ಏನು? ಜನರ ಪ್ರಶ್ನೆಗಳು ಇಂದಿಗೂ ಉಳಿದುಹೋದದ್ದೇಕೇ? ಕ್ರಾಂತಿಕಾರಿಗಳನ್ನು ಉಗ್ರಗಾಮಿಗಳು ಎಂದು ಹಿರಿಯ ನಾಯಕರು ಕರೆದಾಗ ಭಗತ್ ಏನು ಉತ್ತರಿಸಿದ್ದರು? ಬಿಡಿ, ಮೆಲುಕು ಹಾಕಬೇಕಾದ ಸಂಗತಿಗಳು ಸಾಕಷ್ಟಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry