ಶುಕ್ರವಾರ, ಡಿಸೆಂಬರ್ 13, 2019
19 °C

ನಾನೂ ಒಬ್ಬ ಏಕಲವ್ಯ

ಪ್ರಕಾಶ್ ರೈ Updated:

ಅಕ್ಷರ ಗಾತ್ರ : | |

ನಾನೂ ಒಬ್ಬ ಏಕಲವ್ಯ

ಮೊನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ. ಇಂದಿನ ರಾಜಕೀಯ ತಲ್ಲಣಗಳ ಬಗ್ಗೆ, ಹೆಡೆ ಎತ್ತಿರುವ ಕೋಮುವಾದಿಗಳ ಬಗ್ಗೆ, ‘ಸಂವಿಧಾನವನ್ನು ಬದಲಾಯಿಸಿ’ ಎನ್ನುತ್ತಿರುವ ಕೆಲವರ ಇಂಗಿತಗಳ ಬಗ್ಗೆ ಮಾತನಾಡಲು ಕರೆದಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿರುವಂತೆ ಒಂದಷ್ಟು ಜನ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿ ಹೋದರು.

ಇಂದಿನ ಪರಿಸ್ಥಿತಿಗಳ ಬಗೆಗಿನ ನನ್ನ ಅಂತರಾಳದ ಆತಂಕವನ್ನು ಕಂಡು, ‘ಪ್ರಕಾಶ್ ರೈ ತನ್ನ ಪಾಡಿಗೆ ತಾನು ನಟಿಸುವುದನ್ನು ಬಿಟ್ಟು ಸಮಾಜದ ಬಗ್ಗೆ ಕಳಕಳಿ ತೋರಿಸುವುದನ್ನು ನೋಡಿದರೆ ಅವರಿಗೆ ಯಾವುದೋ ದೆವ್ವ ಹಿಡಿದಂತಿದೆ’ ಎಂದು ಇತ್ತೀಚೆಗೆ ಕೆಲವರು ಕುಹಕದ ಮಾತುಗಳನ್ನಾಡಿದ್ದು ನೆನಪಿಗೆ ಬಂತು. ಮಾತಿನ ಮಧ್ಯೆ ಸಿಟ್ಟಿನಿಂದ ‘ಹೌದು ಸ್ವಾಮಿ ನನಗೆ ದೆವ್ವ ಹಿಡಿದಿದೆ, ಒಂದಲ್ಲ ಹಲವಾರು. ಲಂಕೇಶರ ದೆವ್ವ, ತೇಜಸ್ವಿಯ ದೆವ್ವ, ಕುವೆಂಪು ದೆವ್ವ, ಅಂಬೇಡ್ಕರ್ ದೆವ್ವ, ಗಾಂಧಿಯ ದೆವ್ವ... ಹೀಗೆ ಹಲವಾರು ದೆವ್ವಗಳು ಮೈಮೇಲೇರಿವೆ. ನಿಮ್ಮಂತೆ ಕೋಮುವಾದದ ದೆವ್ವ, ಮನುಷ್ಯರನ್ನು ಮನುಷ್ಯರಂತೆ ನೋಡದ ರಾಕ್ಷಸರ ದೆವ್ವ ಹಿಡಿದಿಲ್ಲ. ನನ್ನ ದೇಶದ ಭವಿಷ್ಯದ ಬಗ್ಗೆ ತಳಮಳಗೊಂಡ ದೆವ್ವ ಹಿಡಿದಿದೆ. ಬನ್ನಿ, ಯಾರ ದೆವ್ವ ಯಾರು ಬಿಡಿಸುತ್ತಾರೆ ನೋಡೇ ಬಿಡೋಣ’ ಎಂದು ಮಾತು ಮುಗಿಸಿ ಬಂದು ಕುಳಿತೆ.

ಒಂದರೆಕ್ಷಣ ಆ ಕೋಪ, ಆ ಮಾತುಗಳು ನನ್ನೊಳಗೆ ಎಲ್ಲಿಂದ ಬಂದವೆಂದು ಅರ್ಥವಾಗಲಿಲ್ಲ. ಲಂಕೇಶರ ದೆವ್ವ ನನ್ನ ಮೈಮೇಲೇರಿದೆ ಎಂದು ಹೇಳಿದಾಗ ಯಾಕೆ ನನಗೆ ಅರಿವಿಲ್ಲದೆ ಮೈಬಿಸಿಯಾಯಿತು ಎಂದು ಯೋಚಿಸತೊಡಗಿದೆ. ಕಾರ್ಯಕ್ರಮ ಮುಗಿಸಿ ಇಳಿಸಂಜೆಯಲ್ಲಿ ಶಿವಮೊಗ್ಗೆಯ ಬೀದಿಗಳಲ್ಲಿ ಕಾರು ಹೊರಟಿತ್ತು. ಹೂ ಹಣ್ಣು ತರಕಾರಿಗಳನ್ನು ಮಾರುವ ಸಂತೆಕಟ್ಟೆಯನ್ನು ದಾಟುತ್ತಿತ್ತು. ಮಾರುವ, ಕೊಳ್ಳುವ, ಹರಟೆ ಹೊಡೆಯುವ ಮನುಷ್ಯರನ್ನು ನೋಡುತ್ತಾ ಹೊರಟಿದ್ದೆ. ಕತ್ತಲಾಗುತ್ತಿತ್ತು. ಜನ ಯಥಾಪ್ರಕಾರ ತಮ್ಮ ಬದುಕನ್ನು ಬದುಕುತ್ತಿದ್ದರು. ಆದರೆ ಅಲ್ಲಲ್ಲಿ ಹುದುಗಿದ್ದ ಕತ್ತಲೊಳಗೆ ಇವೆಲ್ಲವನ್ನೂ ದಿಕ್ಕೆಡಿಸುವ ಶಕ್ತಿಗಳು ಅವಿತು ಹೊಂಚು ಹಾಕುವಂತಿತ್ತು. ನಾನೇಕೆ ಇಷ್ಟು ಆತಂಕದಲ್ಲಿದ್ದೇನೆ, ಕೋಪದಲ್ಲಿದ್ದೇನೆ ಎಂದು ಯೋಚಿಸುತ್ತಿದ್ದಂತೆ ಮತ್ತೆ ಲಂಕೇಶ್ ನೆನಪಾದರು.

ಪ್ರಪಂಚದಲ್ಲಿ ಅರ್ಜುನನಂತಹ ಶಿಷ್ಯರೇ ಅದೃಷ್ಟವಂತರೆನ್ನುತ್ತಾರೆ. ಅಂಥವರಿಗೆ ಯೋಗ್ಯರಾದ ಗುರು ಸಿಗುತ್ತಾರೆ. ಅರ್ಜುನನಂಥವರಿಗೆ ಸಾಕಷ್ಟು ದಕ್ಷಿಣೆ ಕೊಡುವ ಶಕ್ತಿ ಇರುತ್ತದೆ. ಬೇಕೆನಿಸುವಷ್ಟು ವಿದ್ಯೆಗಳನ್ನು ಕಲಿಯಬಹುದು. ಆದರೆ ಇಷ್ಟೆಲ್ಲಾ ಇದ್ದರೂ ಗುರುವನ್ನು ಮೀರಿಸಿದ ಶಿಷ್ಯನೆನ್ನಿಸಿಕೊಳ್ಳುವುದು ಅಪರೂಪ. ಲಕ್ಷದಲ್ಲಿ ಅಂಥ ಒಬ್ಬ ಶಿಷ್ಯ ದೊರಕಿದರೆ ಆಶ್ಚರ್ಯದ ವಿಷಯ.

ಒಬ್ಬ ಗುರು ಹಲವು ಪರೀಕ್ಷೆಗಳನ್ನಿಟ್ಟು ಪ್ರತಿಭಾವಂತನಾದ ಒಬ್ಬನನ್ನು ಆಯ್ಕೆ ಮಾಡಿ ‘ಇವನೇ ನನ್ನ ಶಿಷ್ಯ’ ಎಂದು ಹೇಳುವ ಪ್ರಯತ್ನಕ್ಕಿಂತ, ‘ಇಂಥವನೇ ನನ್ನ ಗುರು’ ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಆರಿಸುವ ಪಕ್ವತೆ ದೊಡ್ಡದು. ಮಾನಸಿಕವಾಗಿ ತನಗೆ ಬೇಕಾದ ಗುರುವನ್ನು ಹುಡುಕಿ ಕಲಿಯುವ ಶಿಷ್ಯನಿಗಿಂತ ಅವನಿಂದ ಒಪ್ಪಿತವಾದ ಗುರುವಿಗೆ ಗೌರವ. ಅದುವೇ ಆ ಗುರು ಬದುಕಿದ ಬದುಕಿಗೆ ಸಿಗುವ ಗೌರವ ಮತ್ತು ಮನ್ನಣೆ. ಅರ್ಜುನನಂತಹ ಶಿಷ್ಯನನ್ನು ಪಡೆದ ಗುರು ತನಗೆ ಗೊತ್ತಿದ್ದದ್ದನ್ನು ಮಾತ್ರ ತನ್ನ ಶಿಷ್ಯನಿಗೆ ಹೇಳಿಕೊಡಲು ಸಾಧ್ಯ. ಆದರೆ ಎಲ್ಲೋ ದೂರದಲ್ಲಿರುವ ಏಕಲವ್ಯ ಆ ಗುರುವಿನ ಬದುಕನ್ನು ನೋಡಿಯೇ ಬಹಳಷ್ಟು ಕಲಿತುಕೊಳ್ಳುತ್ತಾನೆ.

ಏಕಲವ್ಯನಂಥವರಿಗೆ ಯಾರೂ ಯಾವತ್ತೂ ಯಾವುದನ್ನೂ ಕಲಿಸಿಕೊಡುವುದಿಲ್ಲ. ಅವರೇ ಎಲ್ಲವನ್ನೂ ಕಲಿತುಕೊಳ್ಳುತ್ತಾರೆ. ಅಂಥವರಿಗೆ ಒಂದು ಒಳ್ಳೆಯ ರೋಲ್ ಮಾಡೆಲ್, ಮಾದರಿ ವ್ಯಕ್ತಿ ದೊರೆತರೆ ಅದುವೇ ಸಾಕು. ಗುರುವಿನ ಬದುಕಿಗೆ ಅರ್ಥ ಸಿಗುವುದೇ ಏಕಲವ್ಯರುಗಳಿಂದ. ಅಂತಹ ವಿದ್ಯಾರ್ಥಿಗಳನ್ನು ಬೆನ್ನುತಟ್ಟದೆ ಅವರ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಕೇಳುವ ಗುರುಗಳು ಎಷ್ಟು ದೊಡ್ಡ ಮೇಧಾವಿಗಳೇ ಆಗಿದ್ದರೂ ಸಣ್ಣ ಮನುಷ್ಯರೇ.

ಪಿ. ಲಂಕೇಶ್ ನನ್ನ ಬದುಕಿನಲ್ಲಿ ನಾನು ಮರೆಯಲಾಗದ ಮನುಷ್ಯ. ನನ್ನ ಮಾನಸಿಕ ಗುರು. ತಮ್ಮ ಪ್ರತಿಭೆಯಿಂದ, ಅರ್ಹತೆಯಿಂದ ವ್ಯಕ್ತಿತ್ವದಿಂದ ನನ್ನಂತಹ ಎಳೆಯರಿಗೆ ಆದರ್ಶವಾಗಿದ್ದವರು. ‘ಜನರಿಗೆ ಒಳಿತು ಮಾಡಬೇಕಾದ ವಿಷಯಗಳಲ್ಲಿ ಇಷ್ಟು ಬೇಜವಾಬ್ದಾರಿತನದಿಂದ ಪ್ರವರ್ತಿಸುವ ನಿನ್ನಂಥವನನ್ನು ರಾಜ್ಯದ ಮುಖ್ಯಮಂತ್ರಿ ಎಂದು ಹೇಗೆ ಮರ್ಯಾದೆ ಕೊಡುವುದು? ನಿಜವಾಗಿ ಹೇಳಬೇಕೆಂದರೆ ನೀನೊಬ್ಬ ಮೂರ್ಖ’ ಎಂದು ಬಹಿರಂಗವಾಗಿ, ನಿರ್ಭಿಡೆಯಾಗಿ ಒಬ್ಬ ಮುಖ್ಯಮಂತ್ರಿಯ ಬಗ್ಗೆ ಬರೆಯುತ್ತಿದ್ದ ಪತ್ರಿಕೆಯ ಸಂಪಾದಕರು.

ಅವರನ್ನು ಭೇಟಿ ಮಾಡುವ ಮುನ್ನ, ಅವರು ಬರೆದಿದ್ದ ನಾಟಕಗಳಲ್ಲಿ ನಟಿಸಿದ್ದೆ. ಜಾಣ ಜಾಣೆಯರ ಪತ್ರಿಕೆಯಾಗಿದ್ದ ‘ಲಂಕೇಶ್ ಪತ್ರಿಕೆ’ಯಲ್ಲಿ ಅವರ ಬರವಣಿಗೆಗಳನ್ನು ಓದಿದ್ದೆ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯವೂ ದೊರೆಯಿತು. ಎಲ್ಲರಂತೆ ನಾನೂ ಅವರನ್ನು ‘ಮೇಷ್ಟ್ರೇ’ ಎಂದು ನನಗೆ ಅರಿವಿಲ್ಲದೆಯೇ ಕರೆಯತೊಡಗಿದೆ. ಅವರ ಕಚೇರಿಯಲ್ಲಿನ ಸಂಜೆಗಳು ಮರೆಯಲಾಗದ ಪಾಠಗಳು. ಕನ್ನಡದ ಬಹಳ ಮುಖ್ಯ ಪ್ರತಿಭಾವಂತರ, ಚಿಂತಕರ ಮೆಹಫಿಲ್ ಆಗಿರುತ್ತಿತ್ತು ಅದು.

ಅವರು ಮನೆಗೆ ಹೋಗುವ ದಾರಿಯಲ್ಲೇ ನನ್ನ ಪುಟ್ಟ ಮನೆ ಇತ್ತು. ಆಗಾಗ ಅವರ ರಾತ್ರಿಯ ಸಹ ಪ್ರಯಾಣಿಕ ನಾನೇ. ‘ಮೂರ್ಖಾ, ನಿನ್ನ ವಾದದಲ್ಲಿ ಏನಾದರೂ ಅರ್ಥವಿದೆಯೇನೋ, ಮನೆಗೆ ನಡೆದುಕೊಂಡು ಹೋದರೇನೇ ನಿನಗೆ ಬುದ್ಧಿ ಬರೋದು’ ಎಂದು ಅರ್ಧ ದಾರಿಯಲ್ಲೇ ಕಾರಿನಿಂದ ಇಳಿಸಿ ಮಿಯಾಂವ್ ಎನ್ನುತ್ತಾ ಹೊರಟುಬಿಡುತ್ತಿದ್ದರು. ‘ಯಾಕ್ ಮೇಷ್ಟ್ರೇ, ಯಾವಾಗಲೂ ನನ್ನನ್ನು ಬೈಯ್ತಾ ಇರ್ತೀರಾ’ ಎಂದು ಕೇಳಿದರೆ, ‘ಆಗಾಗ ಬೈಯ್ತಾ ಬೈಯ್ತಾನೇ ನಿನ್ನನ್ನು ಕೆತ್ತಬೇಕು, ಇಲ್ಲದಿದ್ದರೆ ನಿನ್ನಲ್ಲಿರುವ ಗರ್ವ ನಿನ್ನ ಬಲವಾಗದೆ ಅದು ನಿನ್ನ ಬಲಹೀನತೆಯಾಗುತ್ತದೆ’ ಎನ್ನುತ್ತಿದ್ದರು. ‘ನೀನು ಏನನ್ನೂ ಕಲಿಯೋ ಥರ ಕಾಣ್ತಿಲ್ವಲ್ಲ, ಬಿಟ್ಟಿಯಾಗಿ ಕುಡಿಯೋಕೆ ಆಗಾಗ ಆಫೀಸ್‌ಗೆ ಅಲೀತೀಯಾ’ ಅಂತ ಎಲ್ಲರ ಎದುರಿಗೆ ಅವಮಾನ ಮಾಡಿದಾಗ, ಮರುದಿನ ಸ್ವಂತ ದುಡ್ಡಲ್ಲೇ ಗುಂಡು ತೆಗೆದುಕೊಂಡು ಹೋಗಿ ಅವರ ಮುಂದೆ ಕೂತು ಕುಡಿದಿದ್ದೆ. ‘ಈ ಕೊಬ್ಬಿದೆಯಲ್ಲ, ಇದೇ ನಿನ್ನ ಶಕ್ತಿ’ ಎಂದು ಮನಸಾರೆ ಅವರೂ ನಕ್ಕಿದ್ದರು.

‘ಪತ್ರಿಕೆಗೆ ನಾನು ಕೆಲಸ ಮಾಡಲೇ’ ಎಂದು ಯಾರೋ ಕೇಳಿದರೆ ‘ಪತ್ರಕರ್ತ ಯಾವಾಗಲೂ ನಿರಂತರವಾದ ಪ್ರತಿಪಕ್ಷವಾಗಿರಬೇಕು, ಯಾವ ಪರಿಸ್ಥಿತಿಯಲ್ಲೂ ಅವನು ಆಳುವ ಪಕ್ಷದ ಪರವಾಗಿರಬಾರದು, ಆ ಜವಾಬ್ದಾರಿಯನ್ನು ಕಾಪಾಡಿಕೊಳ್ಳುವುದಾದರೆ ಪತ್ರಿಕೆಯಲ್ಲಿ ಬರೆಯಿರಪ್ಪಾ’ ಎಂದು ಪ್ರತೀ ಸಂದರ್ಭದಲ್ಲೂ ಹೇಳುತ್ತಿದ್ದರು. ಒಬ್ಬ ಪತ್ರಕರ್ತನ ಬಗ್ಗೆ ಪತ್ರಿಕೆಯ ಸೀನಿಯರ್, ‘ನನ್ನ ಮಾತು ಕೇಳ್ತಾ ಇಲ್ಲ ಸರ್’ ಎಂದು ದೂರನ್ನು ತಂದಾಗ ‘ರೀ, ಅವನು ಏನ್ ಬರೀತಾನೋ ಅದನ್ನು ಬರೆಯೋಕೆ ಬಿಡ್ರಿ. ನಿಮ್ಮನ್ನೂ, ಸಂಪಾದಕನಾದ ನನ್ನನ್ನೂ ಮೆಚ್ಚಿಸೋಕೆ ಇವನು ಬರೆಯೋಕೆ ಶುರು ಮಾಡಿದರೆ, ನಾಳೆ ಒಬ್ಬ ಎಂಎಲ್‌ಎಯನ್ನೂ ಸಂತೋಷಪಡಿಸೋಕೆ ಬರೆಯಬೇಕು ಅಂತ ಅವನಿಗೆ ಅನ್ನಿಸೋಕೆ ಶುರುವಾಗತ್ತೆ. ಅವನ ಸ್ವಾತಂತ್ರ್ಯದೊಡನೆ ಬರೆಯೋಕೆ ಅವನಿಗೆ ಬಿಡಿ ಯೂ ಫೂಲ್...’ ಎಂದು ಗದರಿದ್ದರು. ‘ಸ್ಟುಪಿಡ್ ಫೆಲೋಸ್... ಗೆದ್ದವನನ್ನೇ ಮತ್ತೆ ಮತ್ತೆ ಹೊಗಳುತ್ತಾ ಇರುವುದು ಅನಾಗರಿಕತೆ ರೀ. ಅವಕಾಶ ಸಿಗದ ಹೊಸ ತಲೆಮಾರಿನವರನ್ನು ಹುಡುಕಿ ತಂದು ಅವರನ್ನು ಬೆಳೆಸಬೇಕು. ಗೆದ್ದ ಒಬ್ಬನ ದಯೆಯಲ್ಲಿ ನಾವೂ ಗೆದ್ದು ಬಿಡಬಹುದೆಂದು ಯಾವಾಗ ಯೋಚಿಸಲು ಆರಂಭಿಸುತ್ತೇವೋ ಆ ಕ್ಷಣದಿಂದಲೇ ನಮ್ಮೊಳಗಿನ ಕಲೆ, ಪ್ರತಿಭೆ ಸಾಯಲಾರಂಭಿಸುತ್ತದೆ’ ಎಂದು ಬಿಡಿಸಿ ಹೇಳುತ್ತಿದ್ದರು.

ಲಂಕೇಶರಿಗೆ ಲಂಚ ಕೊಡಲು ಪ್ರಯತ್ನ ಪಟ್ಟರೆ ಸಾಕು ಇನ್ನು ಜೀವನಪೂರ್ತಿ ಅವರ ವಿರೋಧಿಗಳಾಗಿಬಿಡುತ್ತಾರೆ ಎಂಬುದನ್ನು ಅವರ ವ್ಯಕ್ತಿತ್ವದಿಂದಲೇ ಸ್ಪಷ್ಟಪಡಿಸಿಬಿಟ್ಟಿದ್ದರು. ಹೇಳುವುದಕ್ಕಿನ್ನೂ ಎಷ್ಟೋ ಇದೆ. ಎರಡೇ ಮಾತಲ್ಲಿ ಹೇಳುವುದಾದರೆ ಸೂರ್ಯನಂತೆ ಪ್ರಖರವಾಗಿ ಬದುಕಿದ ಬದುಕು ಅದು. ಅದರ ಬೆಳಕಲ್ಲಿ ಬದುಕುವುದೋ ಉರಿದು ಬೂದಿಯಾಗುವುದೋ ನಮಗೆ ಬಿಟ್ಟದ್ದು.

‘ಚೆನ್ನಾಗಿ ಊಟ ಮಾಡುತ್ತೇನೆ, ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದೇನೆ, ಒಳ್ಳೆಯ ಮನೆಯಲ್ಲಿ ಬದುಕಿದ್ದೇನೆ, ಪ್ರತೀದಿನ ಗುಂಡು ಹಾಕುತ್ತೇನೆ, ಮನಸ್ಸಿಗೆ– ಮನಸ್ಸಾಕ್ಷಿಗೆ ಸರಿ ಎನ್ನಿಸಿದ ವಿಷಯವನ್ನು ಪ್ರಾಮಾಣಿಕತೆಯಿಂದ ಅಕ್ಷರವಾಗಿಸುತ್ತೇನೆ, ಹೀಗೆ ಒರಟನಂತೆ ಬದುಕುವುದರಲ್ಲಿ ನನಗೆ ಏನೂ ನಷ್ಟವಿಲ್ಲ’ ಎಂದು ತನ್ನನ್ನು ವಿಮರ್ಶಿಸುವವರಿಗೆ ಎದೆಯುಬ್ಬಿಸಿ ಉತ್ತರಿಸುವರು. ಹೀಗೇ ಬದುಕಬೇಕು ಎಂದು ನಮಗೆ ಹೇಳಿದವರೇ ಅಲ್ಲ. ಹೇಗಿರಬೇಕು ಅನ್ನುವುದನ್ನು ಬದುಕಿಯೇ ತೋರಿದ, ಹಲವರ ರೋಲ್ ಮಾಡೆಲ್. ಅವರನ್ನು ಮಾನಸಿಕವಾಗಿ ಮೇಷ್ಟ್ರೆಂದು ಒಪ್ಪಿಕೊಂಡ ಎಷ್ಟೋ ಏಕಲವ್ಯರಿದ್ದಾರೆ. ಅವರಲ್ಲಿ ನಾನೂ ಒಬ್ಬ ಏಕಲವ್ಯ.

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಈಗ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ದೊಡ್ಡವರಿಗೆ ಚುನಾವಣೆಗಳು ಬರುತ್ತಿವೆ. ಅದೂ ಒಂಥರಾ ನಮ್ಮ ಜವಾಬ್ದಾರಿಗಳನ್ನು ನಿರೂಪಿಸುವ, ನೆನಪಿಸುವ ಪರೀಕ್ಷೆಯೇ.

ನನ್ನ ಗೆಳೆಯನೊಬ್ಬನ ಮಡದಿ ಅಧ್ಯಾಪಕಿ. ಅವರ ಮನೆಗೆ ಹೋಗಿದ್ದೆ. ಮನೆಯಲ್ಲಿ ತನ್ನ ಮಗನಿಗೆ ಪಾಠ ಮಾಡುತ್ತಿದ್ದರು. ‘ಇವತ್ತು ಶಾಲೆಯಿಲ್ಲವೇ’ ಎಂದು ಕೇಳಿದೆ. ‘ಇದೆ, ಮೆಡಿಕಲ್ ಲೀವ್ ಹಾಕಿದ್ದೀನಿ, ಮಗನಿಗೆ ಪಾಠ ಹೇಳಿಕೊಡಬೇಕಲ್ಲ’ ಎಂದರು. ‘ಹಾಗಾದರೆ ಶಾಲೆಯಲ್ಲಿ ನಿಮ್ಮ ಬಳಿ ಕಲಿಯುವ ಉಳಿದ ಮಕ್ಕಳ ಗತಿ’ ಎಂದು ನಗುತ್ತ ಸ್ವಲ್ಪ ಸೀರಿಯಸ್ಸಾಗೇ ಕೇಳಿದೆ. ಶಾಕ್ ಹೊಡೆಯುವ ಹಾಗೆ ಉತ್ತರ ಬಂತು. ‘ಅದಕ್ಕೆ ನಾನೇನ್ ಮಾಡ್ಲಿ? ನಾನೊಬ್ಳೇನಾ ಹೀಗೆ ರಜಾ ತಗೊಳೋದು...?’

ನಮ್ಮ ದೇಶದ ಮುಖ್ಯವಾದ, ಬಹಳ ಗಂಭೀರವಾದ ಸಮಸ್ಯೆಗಳಲ್ಲಿ ಇದೂ ಒಂದು. ಸ್ವಾರ್ಥವೇ ಇಲ್ಲದ ರೋಲ್ ಮಾಡೆಲ್ ಅಧ್ಯಾಪಕರು ಬೇಕಾಗಿದ್ದಾರೆ. ಮೇಷ್ಟ್ರುಗಳು ಬೇಕಾಗಿದ್ದಾರೆ. ಏನ್ ಮಾಡೋಣ ನೀವೇ ಹೇಳಿ.

ಪ್ರತಿಕ್ರಿಯಿಸಿ (+)