ಭಾನುವಾರ, ಏಪ್ರಿಲ್ 18, 2021
23 °C

ನಾವಾಗಿಯೇ ಉಳಿಯುವ ಪ್ರಯತ್ನ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಜಪಾನಿನಲ್ಲಿ ಒಂದು ಪ್ರಖ್ಯಾತವಾದ ಬೌದ್ಧ ದೇವಾಲಯವಿತ್ತು. ಅದರ ಹೆಸರೇ ಸಾವಿರ ಬುದ್ಧನ ಮಂದಿರ. ದೇವಾಲಯ ಪೂರ್ತಿ ಮರದಿಂದಲೇ ಮಾಡಿದ್ದು. ಅಲ್ಲಿ ಸಾವಿರ ಮರದ ಬುದ್ಧನ ವಿಗ್ರಹಗಳನ್ನು ಸ್ಥಾಪಿಸಿದ್ದರು. ಒಂದಕ್ಕಿಂತ ಒಂದು ಚೆಂದವಾದ ವಿಗ್ರಹಗಳು. ಯಾರು ಯಾರೋ ಹರಕೆ ಹೊತ್ತು ಮಾಡಿಸಿದ ವಿಗ್ರಹಗಳು ಅವು.ಆ ದೇವಸ್ಥಾನದ ಸೌಂದರ್ಯ ಇಡೀ ದೇಶದಲ್ಲಿ ಮನೆ ಮಾತಾಗಿತ್ತು. ಈ ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಒಂದಷ್ಟು ಜನ ಬೌದ್ಧ ಭಿಕ್ಷುಗಳಿದ್ದರು. ಅವರೆಲ್ಲರಿಗೆ ಮಾರ್ಗದರ್ಶಕರಾಗಿದ್ದವರು ಒಬ್ಬ ಝೆನ್ ಗುರು. ಅವರ ಹೆಸರು, ಖ್ಯಾತಿ ಎಲ್ಲೆಡೆಗೆ ಹರಡಿತ್ತು. ದೇವಸ್ಥಾನ ನೋಡಲು ನೂರಾರು ಜನ ದಿನನಿತ್ಯ ಬರುತ್ತಿದ್ದರು. ಒಂದು ದಿನ ಒಬ್ಬ ತರುಣ ಪ್ರವಾಸಿಯಾಗಿ ಬಂದ. ದೇವಾಲಯ ಗಮನಿಸಿದ. ಅದೇ ಊರಿನಲ್ಲಿ ಉಳಿದು ನಿತ್ಯ ಅಲ್ಲಿಗೆ ದೇವಾಲಯಕ್ಕೆ ಪ್ರತಿಯೊಂದು ವಿಗ್ರಹದ ಬಗ್ಗೆ ಅಭ್ಯಾಸ ಮಾಡಿದ. ಬುದ್ಧನ ಚರಿತ್ರೆಯನ್ನು ಸಂಪೂರ್ಣವಾಗಿ ಓದಿ ಪ್ರಭಾವಿತನಾದ. ಸಮಯ ನೋಡಿಕೊಂಡು ಝೆನ್ ಗುರುಗಳನ್ನು ಕಂಡು ಕೇಳಿದ,  `ಸ್ವಾಮೀ, ನಾನು ಬಹಳ ದೂರದಿಂದ ಬಂದಿದ್ದೇನೆ.ದೇವಾಲಯದಿಂದ, ಇಲ್ಲಿಯ ಕಲಾಕೃತಿಯಿಂದ, ಇಲ್ಲಿ ನಡೆಯುವ ಜ್ಞಾನಸತ್ರದಿಂದ ತುಂಬ ಪ್ರಭಾವಿತನಾಗಿದ್ದೇನೆ. ದಯವಿಟ್ಟು ನನ್ನನ್ನು ತಮ್ಮ ಅಡಿಗಳಲ್ಲಿ ಸೇರಿಸಿಕೊಳ್ಳಿ. ತಮ್ಮ ಜ್ಞಾನದ ಬೆಳಕು ನನಗೂ ಸ್ವಲ್ಪ ದೊರಕಿದಲ್ಲಿ ಧನ್ಯನಾಗುತ್ತೇನೆ~ ಎಂದ. ಗುರುಗಳು ಅವನ ಮುಖ ನೋಡಿ,  `ಅಯ್ಯೊ, ನೀನು ಇಲ್ಲಿಗೆ ಬಂದದ್ದು ಸಂತೋಷ. ಆದರೆ, ಈ ದೇವಸ್ಥಾನದಿಂದ ನೀನು ಏನು ಅಪೇಕ್ಷೆ ಮಾಡುತ್ತೀಯಾ~ ಎಂದು ಕೇಳಿದರು. ತರುಣ,  `ಸ್ವಾಮೀ, ನನ್ನ ಮನಸ್ಸೆಲ್ಲ ಬುದ್ಧಮಯವಾಗಿ ಹೋಗಿದೆ. ನಾನು ಬುದ್ಧನಾಗಬೇಕೆಂದು ಬಯಸಿದ್ದೇನೆ. ತಮ್ಮ ಜೊತೆಗಿದ್ದರೆ ನಾನೂ ಬುದ್ಧನಾಗಬಹುದು~  ಎಂದ. ತಕ್ಷಣ ಗುರುಗಳ ಮುಖ ಉಗ್ರವಾಯಿತು, ಕಣ್ಣುಗಳು ಕೆಂಪಗಾದವು. ಅವರು ಕೋಪದಿಂದ, `ಏ ಮೂರ್ಖ, ನಡೆ ಇಲ್ಲಿಂದ. ಬುದ್ಧನಾಗಬೇಕೆನ್ನುತ್ತಾನೆ ಮೂರ್ಖ. ಯಾರಲ್ಲಿ ಇವನನ್ನು ಹೊರಗೆ ಹಾಕಿ. ನನಗೆ ಇಲ್ಲಿರುವ ಸಾವಿರ ಬುದ್ಧರೇ ಸಾಕಾಗಿದ್ದಾರೆ. ಇವ ಮತ್ತೊಬ್ಬ ಬುದ್ಧನಾಗಬೇಕೆನ್ನುತ್ತಾನೆ~  ಎಂದು ಕೂಗಾಡಿ ಇವನನ್ನು ಹೊರಗೆ ಕಳುಹಿಸಿದರು.

ಈ ತರುಣನೂ ದೃಢಮನಸ್ಸಿನವನೇ. ಒಂದು ವಾರ ಬಿಟ್ಟು ಮತ್ತೆ ಹೋದ.ಮತ್ತೆ ಅದೇ ರೀತಿ ಹೊರಗೆ ತಳ್ಳಿಸಿಕೊಂಡು ಬಂದ. ಮೂರು-ನಾಲ್ಕು ವಾರಗಳಾದ ಮೇಲೆ ಗುರುಗಳು,  `ನೀನು ಬುದ್ಧನಲ್ಲದೇ ಮತ್ತೇನಾದರೂ ಆಗಬೇಕೆಂದಿದ್ದರೆ ತಿಳಿಸು~  ಎಂದರು. ಅವನು  ತಮ್ಮ ಪರಂಪರೆಯಲ್ಲಿ ಅನೇಕ ಹಿರಿಯರ ಹೆಸರುಗಳನ್ನು ಹೇಳಿ ಅವರಂತಾದರೂ ಆಗಬೇಕು ಎಂದು ಬೇಡಿಕೊಂಡ. ಅವನ ಮಾತು ಮುಗಿಯುವಷ್ಟರಲ್ಲಿ ಅವನನ್ನು ಗುರುಗಳು ಹೊರಗೆ ತಳ್ಳಿಸಿಬಿಟ್ಟರು.ಆರು ತಿಂಗಳಿನ ಅನುಭವದ ನಂತರ ಈ ಬಾರಿ ಆತ ಧೈರ್ಯದಿಂದ ನಗುತ್ತ ಗುರುಗಳ ಮನೆ ಬಾಗಿಲನ್ನು ಬಡಿದು, `ಸ್ವಾಮೀ, ಈ ಬಾರಿ ನಾನು ಇನ್ನಾರೂ ಆಗಲು ಬಂದಿಲ್ಲ, ಕೇವಲ ನಾನೇ ನಾನಾಗಿ, ನನ್ನನ್ನು ಅರಿಯಲು ಬಂದಿದ್ದೇನೆ~  ಎಂದ. ಗುರುಗಳೂ ಅವನನ್ನು ಅಪ್ಪಿಕೊಂಡು, `ಬಾ ಮಗು, ನಿನ್ನಂತಹವನಿಗೇ ಈ ದೇವಾಲಯ ತೆರೆದಿದೆ~  ಎಂದು ಒಳಗೆ ಕರೆದುಕೊಂಡರು. ರಾಮ, ಕೃಷ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ ಇವರಾರೂ ಮತ್ತೊಮ್ಮೆ ಬರುವುದು ಸಾಧ್ಯವಿಲ್ಲ. ಒಮ್ಮೆ ಆಗಿಹೋದುದನ್ನು ಸೃಷ್ಟಿ ಎಂದಿಗೂ ಪುನರ್‌ಸೃಷ್ಟಿ ಮಾಡುವುದಿಲ್ಲ. ನಾವು ನಾವಾಗಿರುವುದು ಮಾತ್ರ ಸಾಧ್ಯ. ಇನ್ನೊಬ್ಬರಂತಾಗುವ ಭರಾಟೆಯಲ್ಲಿ ನಾವು ನಾವಾಗಿಯೇ ಉಳಿಯುವದಕ್ಕಾಗಿಯಾದರೂ ಸಜ್ಜನರ, ಜ್ಞಾನಿಗಳ ಸಂಗ ಮಾಡುವುದು ಅವಶ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.