ಶುಕ್ರವಾರ, ಮೇ 14, 2021
31 °C

ನಿಕಾನ್ ಕೂಲ್‌ಪಿಕ್ಸ್ ಪಿ330 ಪುಟಾಣಿ ಆದರೆ ಶಕ್ತಿಶಾಲಿ ಕ್ಯಾಮೆರಾ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ನಿಕಾನ್ ಕೂಲ್‌ಪಿಕ್ಸ್ ಪಿ330 ಪುಟಾಣಿ ಆದರೆ ಶಕ್ತಿಶಾಲಿ ಕ್ಯಾಮೆರಾ

ಕ್ಯಾಮೆರಾಗಳಲ್ಲಿ ಹಲವು ವಿಧ. ಅವುಗಳ ಬಗ್ಗೆ ಸವಿಸ್ತಾರವಾಗಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಸರಳವಾಗಿ ಹೇಳುವುದಾದರೆ ಎಸ್‌ಎಲ್‌ಆರ್ ಮತ್ತು ಏಮ್-ಆಂಡ್-ಶೂಟ್ (ಅಥವಾ ಪಾಯಿಂಟ್ ಆಂಡ್ ಶೂಟ್) ಕ್ಯಾಮೆರಾಗಳು ಎಂದು ಎರಡು ಪ್ರಮುಖ ವಿಭಜನೆ ಮಾಡಬಹುದು. ವತ್ತಿನಿರತರು ಬಳಸುವುದು ಎಸ್‌ಎಲ್‌ಆರ್ ಕ್ಯಾಮೆರಾ. ಸರಳ ಕ್ಯಾಮೆರಾ ಬೇಕು ಎನ್ನುವವರಿಗಾಗಿ ಏಮ್ ಆಂಡ್ ಶೂಟ್ ಕ್ಯಾಮೆರಾಗಳಿವೆ.

ಈ ಏಮ್ ಅಂಡ್ ಶೂಟ್ ಕ್ಯಾಮೆರಾಗಳ ಪ್ರಮುಖ ಕೊರತೆ ಎಂದರೆ ಅವುಗಳಲ್ಲಿ ಹೆಚ್ಚಿನವು ಸಂಪೂರ್ಣ ಸ್ವಯಂಚಾಲಿತ (ಆಟೊಮ್ಯೋಟಿಕ್) ಆಗಿರುವುದು. ಬಳಕೆದಾರನನ್ನು ಕೇಳದೆ ತನಗಿಷ್ಟ ಬಂದಂತೆ ಫೋಟೊ ತೆಗೆಯುವುದು ಇವುಗಳ ಸಮಸ್ಯೆ. ಆಯ್ಕೆಗಳು ನಮಗೆ ಅರ್ಥವಾಗುವುದಿಲ್ಲ, ಈ ಅಪೆರ್ಚರ್ ಎಂದರೇನು, ಷಟರ್ ಸ್ಪೀಡ್ ಆಯ್ಕೆ ಮಾಡಿಕೊಳ್ಳುವ ತಲೆನೋವು ಯಾರಿಗೆ ಬೇಕು ಎನ್ನುವವರಿಗಾಗಿ ಈ ಕ್ಯಾಮೆರಾಗಳಿವೆ.

ಸಾಮಾನ್ಯವಾಗಿ ಏಮ್-ಆಂಡ್-ಶೂಟ್ ಕ್ಯಾಮೆರಾಗಳು ಚಿಕ್ಕದಾಗಿ ಕಿಸೆಯಲ್ಲಿ ಹಿಡಿಸುವಂತಿರುತ್ತವೆ. ಅವುಗಳಲ್ಲೂ ಇತ್ತೀಚೆಗೆ ಮೆಗಾಝೂಮ್ (ಅಥವಾ ಸೂಪರ್ ಝೂಮ್) ಎಂಬ ದೊಡ್ಡ ಕ್ಯಾಮೆರಾಗಳು ಬರುತ್ತಿವೆ. ಅಂತಹ ಒಂದು ನಿಕಾನ್ ಕೂಲ್‌ಪಿಕ್ಸ್ ಎಲ್820 ಕ್ಯಾಮೆರಾದ ವಿಮರ್ಶೆ ಇದೇ ಅಂಕಣದಲ್ಲಿ ಮಾಡಲಾಗಿತ್ತು. ಅತ್ತ ಏಮ್-ಆಂಡ್-ಶೂಟ್ ಕ್ಯಾಮೆರಾದ ಸರಳತೆ ಮತ್ತು ಚಿಕ್ಕ ಗಾತ್ರವೂ ಬೇಕು, ಇತ್ತ ಎಸ್‌ಎಲ್‌ಆರ್ ಕ್ಯಾಮೆರಾದಂತೆ ಸ್ವಲ್ಪ ನಿಯಂತ್ರಣ ನಮ್ಮ ಕೈಯಲ್ಲಿರಬೇಕು (ಅಂದರೆ ಮ್ಯೋನ್ಯುವಲ್ ಆಯ್ಕೆ ಇರಬೇಕು) ಎನ್ನುವವರಿಗಾಗಿ ನಿಕಾನ್ ಕೂಲ್‌ಪಿಕ್ಸ್ ಪಿ330 (Nikon Coolpix P330) ಕ್ಯಾಮೆರಾ ಇದೆ. ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಏಮ್-ಆಂಡ್-ಶೂಟ್ ನಮೂನೆ, 5xಡಆಪ್ಟಿಕಲ್ ಝೂಮ್, 2x  ಡ ಡಿಜಿಟಲ್ ಝೂಮ್, 35 ಮಿ.ಮೀ. ಕ್ಯಾಮೆರಾಕ್ಕೆ ಹೋಲಿಸುವುದಾದರೆ 24 ಮಿ.ಮೀ. ಯಿಂದ 120 ಮಿ.ಮೀ. ಫೋಕಲ್ ಲೆಂತ್, 12 ಮೆಗಾಪಿಕ್ಸೆಲ್ ರೆಸೊಲೂಶನ್, ಪೂರ್ತಿ ಹೈಡೆಫಿನಿಶನ್ ವೀಡಿಯೊ ರೆಕಾರ್ಡಿಂಗ್ ಸೌಲಭ್ಯ, ಸ್ಟೀರಿಯೊ ಆಡಿಯೊ ರೆಕಾರ್ಡಿಂಗ್, 75 ಮಿ.ಮೀ. ಎಲ್‌ಸಿಡಿ ಪರದೆ, ಸಿಎಂಓಎಸ್ ತಂತ್ರಜ್ಞಾನ, ಊ/1.8 ರಿಂದ ಊ/5.6 ಅಪೆರ್ಚರ್, 1 ಸೆಕೆಂಡಿನಿಂದ 1/2000 ಸೆಕೆಂಡು ಷಟರ್ ವೇಗ, 80 ರಿಂದ 3200 ಐಎಸ್‌ಓ ಆಯ್ಕೆ, 15 ಮೆಗಾಬೈಟ್ ಮೆಮೊರಿ, ಹೆಚ್ಚಿಗೆ ಮೆಮೊರಿಗೋಸ್ಕರ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ. 

ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಣೆ, ವೀಡಿಯೊಗಾಗಿ ಚಿಕ್ಕ ಎಚ್‌ಡಿಎಂಐ ಕಿಂಡಿ, ಊ/1.8 ಲೆನ್ಸ್, ಹಲವು ನಮೂನೆಯ ದೃಶ್ಯಗಳ ಆಯ್ಕೆ, ಷಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಸಂಪೂರ್ಣ ಮ್ಯೋನ್ಯುವಲ್, ಸಂಪೂರ್ಣ ಆಟೊಮ್ಯೋಟಿಕ್, ವೈಫೈ, ಜಿಪಿಎಸ್, 103xಡ58.3xಡ32  ಮಿ.ಮೀ. ಗಾತ್ರ, 200 ಗ್ರಾಂ ತೂಕ ಇತ್ಯಾದಿ. ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ ಒಂದು ಮಟ್ಟಿನ ಉತ್ತಮ ಕ್ಯಾಮೆರಾದ ಗುಣವೈಶಿಷ್ಟ್ಯಗಳೆಲ್ಲ ಇದರಲ್ಲಿವೆ. ಇದರ ಮಾರುಕಟ್ಟೆ ಬೆಲೆ ಸುಮಾರು 15,500 ರೂ.ಈ ಲೇಖನ ಓದುವ ಮೊದಲು ಇದೇ ಅಂಕಣದಲ್ಲಿ ಈ ಹಿಂದೆ ನೀಡಿದಂತಹ ನಿಕಾನ್ ಕೂಲ್‌ಪಿಕ್ಸ್ ಎಲ್820 ಕ್ಯಾಮೆರಾದ ವಿಮರ್ಶೆಯನ್ನು ಓದಿಕೊಂಡರೆ ಒಳ್ಳೆಯದು. ಅದು ಸೂಪರ್ ಝೂಮ್ ಕ್ಯಾಮೆರಾ. ಇದು ಕೇವಲ 5xಡ ಝೂಮ್. ಇದು ಒಂದು ವ್ಯತ್ಯಾಸ ಹೊರತು ಪಡಿಸಿದರೆ ಎಲ್820 ಕ್ಯಾಮೆರಾದಲ್ಲಿರುವ ಎಲ್ಲ ಸವಲತ್ತುಗಳು ಪಿ330ರಲ್ಲಿ ಇವೆ. ಗುಣಮಟ್ಟದಲ್ಲೂ ಅಂದರೆ ಫೋಟೊ ಮತ್ತು ಶೂಟಿಂಗ್ ಗುಣಮಟ್ಟದಲ್ಲೂ ಎರಡು ಒಂದಕ್ಕೊಂದು ಸರಿಸಮಾನವಾಗಿವೆ. ಎರಡರಲ್ಲೂ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಲ್ಲಿರುವ ದೃಶ್ಯಗಳ ಆಯ್ಕೆ ಒಂದೇ ರೀತಿ ಇವೆ -ಪೋರ್ಟ್ರೈಟ್, ರಾತ್ರಿ, ಸಮುದ್ರ ಕಿನಾರೆ, ಕ್ರೀಡೆ, ವಸ್ತುಸಂಗ್ರಹಾಲಯ, ಪನೊರಾಮ, ಮೂರು ಆಯಾಮ, ಇತ್ಯಾದಿ. ಈ ಆಯ್ಕೆಗಳಲ್ಲಿ ಫೋಟೊ ತೆಗೆಯಲು ಯಾವ ರೀತಿಯ ಪರಿಣತಿಯೂ ಬೇಡ.

ಸುಮ್ಮನೆ ಪರದೆ ನೋಡುವುದು, ಕ್ಲಿಕ್ ಮಾಡುವುದು, ಅಷ್ಟೆ. ಈ ಆಯ್ಕೆಗಳಲ್ಲಿ ರಾತ್ರಿ ಫ್ಲಾಶ್ ಬಳಸಿ ತೆಗೆದಾಗ ಮಾತ್ರ ಫೋಟೊ ಅಷ್ಟೇನೋ ಉತ್ತಮವಾಗಿ ಮೂಡಿ ಬರಲಿಲ್ಲ. ಉಳಿದೆಲ್ಲ ಆಯ್ಕೆಗಳಲ್ಲಿ ಫೋಟೊ ಚೆನ್ನಾಗಿ ಬಂತು. ಪೋಟ್ರೈಟ್ ತೆಗೆಯಲು ಹೆಚ್ಚಿಗೆ ಸವಲತ್ತುಗಳಿವೆ. ಯಾರ ಫೋಟೊ ತೆಗೆಯುತ್ತೀರೋ ಆ ವ್ಯಕ್ತಿ ಕಣ್ಣು ಮುಚ್ಚಿದರೆ ಇದು ಎಚ್ಚರಿಸುತ್ತದೆ.ಇದರಲ್ಲಿ ವೈಫೈ ಸೌಲಭ್ಯ ಇದೆ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಅದಕ್ಕೆಂದೇ ವಿಶೇಷ ನಿಕಾನ್ ಆಪ್ ಉಚಿತವಾಗಿ ದೊರೆಯುತ್ತದೆ. ಅದರ ಮೂಲಕ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿಗೆ ಜೋಡಿಸಿ ಫೋಟೊಗಳನ್ನು ಕ್ಯಾಮೆರಾದಿಂದ ಸ್ಮಾರ್ಟ್‌ಫೋನಿಗೆ ವರ್ಗಾಯಿಸಬಹುದು. ನಂತರ ಫೋನಿನಿಂದ ಇಮೈಲ್ ಮೂಲಕ ಕಳುಹಿಸುವುದು, ಫೇಸ್‌ಬುಕ್‌ಗೆ ಸೇರಿಸುವುದು. ಟ್ವೀಟ್ ಮಾಡುವುದು, ಇತ್ಯಾದಿ ಮಾಡಬಹುದು.ನಿಕಾನ್ ಪಿ330 ಕ್ಯಾಮೆರಾದಲ್ಲಿ ಜಿಪಿಎಸ್ ಸೌಲಭ್ಯ ಇದೆ. ಅದನ್ನು ಚಾಲನೆ ಮಾಡಿಕೊಂಡರೆ ಫೋಟೊ ತೆಗೆಯುವಾಗ ಆ ಸ್ಥಳದ ಅಕ್ಷಾಂಶ ಮತ್ತು ರೇಖಾಂಶ ಫೋಟೊ ಜೊತೆ ದಾಖಲಾಗುತ್ತದೆ. ಉದಾಹರಣೆಗೆ ಹಾಸನ ಸಮೀಪದ ಬೆಳವಾಡಿ ಎಂಬ ಹಳ್ಳಿಯಲ್ಲಿರುವ ವೀರನಾರಾಯಣ ದೇವಸ್ಥಾನದ ಫೋಟೊಗಳನ್ನು ಜಿಪಿಎಸ್ ಚಾಲನೆ ಮಾಡಿಕೊಂಡು ತೆಗೆದು ನಂತರ ವಿಕಿಪೀಡಿಯಕ್ಕೆ ಸೇರಿಸಿದರೆ ಅದು ಫೋಟೊದ ವಿವರಗಳ ಜೊತೆ ಅಲ್ಲಿಯ ಅಕ್ಷಾಂಶ ರೇಖಾಂಶಗಳನ್ನೂ ನೀಡುತ್ತದೆ. ಜಿಪಿಎಸ್ ಬಳಸಿ ಅದೇ ಸ್ಥಳಕ್ಕೆ ಹೋಗಬೇಕು ಎನ್ನುವವರಿಗೆ ಇದು ಉತ್ತಮ ಸೌಲಭ್ಯ.ಇದರಲ್ಲಿ ಪೂರ್ತಿ ಹೈಡೆಫಿನಿಶನ್ ವೀಡಿಯೊ ತೆಗೆಯುವ ಸೌಲಭ್ಯ ಇದೆ. ಅದಕ್ಕೆಂದೇ ಇರುವ ಒಂದು ಗುಂಡಿ ಒತ್ತಿದರೆ ವೀಡಿಯೊ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ರೆಕಾರ್ಡ್ ಆದ ವೀಡಿಯೊವನ್ನು ಅದರ ಪರದೆಯಲ್ಲೇ ಪ್ಲೇ ಮಾಡಿ ನೋಡಬಹುದು ಅಥವಾ ಅವರೇ ನೀಡಿರುವ ಕೇಬಲ್ ಮೂಲಕ ಟೀವಿಗೆ ಜೋಡಿಸಿ ನೋಡಬಹುದು. ಇದರಲ್ಲಿ ಇನ್ನೊಂದು ವಿಶಿಷ್ಟ ಸೌಲಭ್ಯ ಇದೆ. ವೀಡಿಯೊ ರೆಕಾರ್ಡಿಂಗ್ ಆಗುತ್ತಿರುವಂತೆಯೇ ಮಧ್ಯ ಮಧ್ಯ ಸ್ಥಿರಚಿತ್ರಗಳನ್ನೂ ತೆಗೆಯಬಹುದು. ಇದೊಂದು ಅದ್ಭುತ ಸೌಲಭ್ಯ ಎನ್ನಬಹುದು.ಇದರಲ್ಲಿ ಇರುವುದು ರೀಚಾರ್ಜೆಬಲ್ ಬ್ಯಾಟರಿ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಕೇವಲ 200 ಫೋಟೊ ತೆಗೆಯಬಹುದಷ್ಟೆ. ಮಾಮೂಲಿ ಬ್ಯಾಟರಿ ಹಾಕುವ ಸೌಲಭ್ಯ ಇಲ್ಲ.

ಈ ಕ್ಯಾಮೆರಾದ ನಿಜವಾದ ಹೆಚ್ಚುಗಾರಿಕೆ ಇರುವುದು ಮ್ಯೋನ್ಯುವಲ್ ಆಯ್ಕೆಗಳಲ್ಲಿ. ಷಟರ್ ವೇಗ, ಅಪೆರ್ಚರ್, ಸಂಪೂರ್ಣ ಮ್ಯೋನ್ಯುಯಲ್, ಇತ್ಯಾದಿ ಆಯ್ಕೆಗಳಿವೆ. ಏಮ್-ಆಂಡ್-ಶೂಟ್ ಕ್ಯಾಮೆರಾ ಆಗಿದ್ದುಕೊಂಡು ಊ/1.8 ಲೆನ್ಸ್ ಇರುವುದು ನಿಜಕ್ಕೂ ಹೆಚ್ಚುಗಾರಿಕೆಯೇ.

ಲೆನ್ಸ್ ಉತ್ತಮವಾಗಿರುವುದರಿಂದ ಚಿತ್ರಗಳು ಉತ್ತಮವಾಗಿ ಮೂಡಿಬರುತ್ತವೆ. ಕ್ಯಾಮೆರಾದ ಮೇಲೆ ಸಂಪೂರ್ಣ ಹತೋಟಿ ಬೇಕು ಎಂದರೆ ಎಸ್‌ಎಲ್‌ಆರ್‌ನ ಸೌಕರ್ಯಗಳೂ ಬೇಕು ಜೊತೆಗೆ ಕ್ಯಾಮೆರಾ ಚಿಕ್ಕದಾಗಿರಬೇಕು ಎನ್ನುವವರಿಗೆ ಇದು ಸೂಕ್ತ ಕ್ಯಾಮೆರಾ.

ಗ್ಯಾಜೆಟ್ ಸಲಹೆ

ಲೋಕೇಶ್ ಅವರ ಪ್ರಶ್ನೆ: ನನಗೆ ಉತ್ತಮವಾದ ಹೆಚ್‌ಡಿ ವೀಡಿಯೊ ಸೌಲಭ್ಯವಿರುವ ಏಮ್  ಶೂಟ್ ಡಿಜಿಟಲ್ ಕ್ಯಾಮೆರಾ ಬೇಕಾಗಿದೆ. ಯಾವುದು ಉತ್ತಮವಾದುದು? ದಯಮಾಡಿ ಸಲಹೆ ನೀಡಿ.

ಉ: ಇದೇ ಸಂಚಿಕೆಯಲ್ಲಿ ಸೂಚಿಸಿದ ಕ್ಯಾಮೆರಾ ಕೊಳ್ಳಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.