ನಿಕಾನ್ ಡಿ7100 : ಪರಿಣತರಿಗಾಗಿ ಅತ್ಯುತ್ತಮ ಕ್ಯಾಮೆರಾ

7

ನಿಕಾನ್ ಡಿ7100 : ಪರಿಣತರಿಗಾಗಿ ಅತ್ಯುತ್ತಮ ಕ್ಯಾಮೆರಾ

ಯು.ಬಿ. ಪವನಜ
Published:
Updated:
ನಿಕಾನ್ ಡಿ7100 : ಪರಿಣತರಿಗಾಗಿ ಅತ್ಯುತ್ತಮ ಕ್ಯಾಮೆರಾ

ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾಗಳು ಅತಿ ಕಡಿಮೆ ಬೆಲೆಗೆ ಕೂಡ ದೊರೆಯುತ್ತಿವೆ. ಆದರೆ ಅವು ಅತ್ಯುತ್ತಮ ಗುಣಮಟ್ಟದವಲ್ಲ. ವೃತ್ತಿಪರಿಣತರು ಬಳಸುವುದು ಈ ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನಲ್ಲ. ಅವರು ಬಳಸುವುದು ಏನಿದ್ದರೂ ಜಾಸ್ತಿ ಬೆಲೆಯ, ಅಂತೆಯೇ ಅಧಿಕ ಗುಣಮಟ್ಟದ ಕ್ಯಾಮೆರಾಗಳನ್ನು. ಅಂತಹ ಒಂದು ಕ್ಯಾಮೆರಾ  ನಿಕಾನ್ ಡಿ೭೧೦೦ (Nikon D7100). ಇದರ ಬಗ್ಗೆ ಪೂರ್ತಿಯಾಗಿ ಬರೆಯಲು ಕಾಮನಬಿಲ್ಲು ಪುರವಣಿಯ ಎಲ್ಲ ಪುಟಗಳು ಬೇಕು. ಒಂದು ಪುಟದಲ್ಲಿ ಎಷ್ಟು ಬರೆಯಬಹುದೋ ಅಷ್ಟು ವಿಮರ್ಶೆ ಇಲ್ಲಿದೆ.

ಗುಣವೈಶಿಷ್ಟ್ಯಗಳು

೨೪.೧ ಮೆಗಾಪಿಕ್ಸೆಲ್, ಅತ್ಯಧಿಕ ಎಂದರೆ ೬೦೦೦ x ೪೦೦೦ ಪಿಕ್ಸೆಲ್ ರೆಸೊಲೂಶನ್, ಉದ್ದ ಅಗಲದ ಅನುಪಾತ ೩:೨ ಮತ್ತು ೧೬:೯, 23.5 x 15.6 ಮಿ.ಮೀ. ಗಾತ್ರದ ಸಿಮೋಸ್ (CMOS) ಸೆನ್ಸರ್, ೧೦೦ ರಿಂದ ೨೫, ೬೦೦ರ ತನಕ ಐಎಸ್‌ಓ ಆಯ್ಕೆಗಳು, ಸ್ವಯಂಚಾಲಿತ ಮತ್ತು ಮ್ಯಾನ್ಯುವಲ್ ಫೋಕಸ್, ೫೧ ಬಿಂದು ಫೋಕಸ್, ಹಲವು ನಮೂನೆಯ ದೃಶ್ಯಗಳ ಆಯ್ಕೆ, ಲೈವ್ ವ್ಯೂ, ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ,೩.೨ ಇಂಚು ಗಾತ್ರದ ಪರದೆ, ೩೦ ರಿಂದ 1/8000 ಸೆಕೆಂಡುಗಳ ತನಕ ಷಟರ್ ವೇಗ, ೧೨ ಮೀ. ವ್ಯಾಪ್ತಿಯ ಫ್ಲ್ಯಾಶ್, ಎರಡು ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ೯೫೦ ಫೋಟೊ ತೆಗೆಯಬಹುದಾದ ಬ್ಯಾಟರಿ,೭೬೫ ಗ್ರಾಂ ತೂಕ, ಇತ್ಯಾದಿ. ೧೮--–೧೦೫ ಮಿ.ಮೀ. ಝೂಮ್ ಲೆನ್ಸ್ ಸಮೇತ ಬೆಲೆ ಸುಮಾರು ೮೮ ಸಾವಿರ ರೂ.

ಇದೊಂದು ಮಧ್ಯಮ ಮೇಲ್ದರ್ಜೆಯ ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾ. ಗುಣಮಟ್ಟ ಅತ್ಯುತ್ತಮವಾಗಿದೆ. ಒಬ್ಬ ಪರಿಣತ ವೃತ್ತಿನಿರತನಿಗೆ ಬೇಕಾದ ಎಲ್ಲ ಸೌಕರ್ಯಗಳು ಇದರಲ್ಲಿವೆ. ಇದರ ರಚನೆ, ವಿನ್ಯಾಸ ಎಲ್ಲ ಡಿಎಸ್‌ಎಲ್‌ಆರ್‌ಗಳಂತೆಯೇ ಇದೆ. ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಬಳಸಿದ ಅನುಭವವಿರುವವರಿಗೆ ಸ್ವಲ್ಪ ತೂಕ ಅನ್ನಿಸಬಹುದು.ಆದರೆ ಇದಕ್ಕೂ ಹೆಚ್ಚು ಬೆಲೆಯ, ಸಂಪೂರ್ಣ ಲೋಹದ ದೇಹರಚನೆಯ ಕ್ಯಾಮೆರಾ ಬಳಸಿದ ಅನುಭವವಿರುವವರಿಗೆ ಇದು ಹಗುರ ಅನ್ನಿಸಬಹುದು! ಈ ಕ್ಯಾಮೆರಾ ಬಳಸಿರುವುದು ಮ್ಯಾಗ್ನಿಷಿಯಂ ಮಿಶ್ರಲೋಹ. ಗಾತ್ರ ಅತಿ ದೊಡ್ಡದು ಅಥವಾ ಅತಿ ಚಿಕ್ಕದು ಎನ್ನುವಂತಿಲ್ಲ.ಇದರ ಪರದೆಗೆ ಓಎಲ್‌ಇಡಿ (OLED) ಬಳಸಿರುವುದರಿಂದ ಅಕ್ಷರಗಳು ಸ್ಫುಟವಾಗಿ ಕಾಣುತ್ತವೆ. ಹಿಡಿದ ಚಿತ್ರವನ್ನು ತೋರಿಸುವಾಗ ಬಣ್ಣ ನೈಜ ಬಣ್ಣದ್ದಾಗಿರುತ್ತದೆ. ಇದರ ವ್ಯೂಫೈಂಡರ್ ಬಳಸುವುದು ಪೆಂಟಾಪ್ರಿಸಂ. ಫೋಟೊ ತೆಗೆಯುವ ಮುನ್ನ ಇದರ ಮೂಲಕ ನೋಡಿದಾಗ ಕಾಣುವ ದೃಶ್ಯ ದೊಡ್ಡದಾಗಿದೆ. ಇತರೆ ಕಡಿಮೆ ಬೆಲೆಯ ಕ್ಯಾಮೆರಾಗಳಲ್ಲಿ ಕಂಡಂತೆ ಚಿಕ್ಕದಾಗಿರುವುದಿಲ್ಲ.ಈ ಕ್ಯಾಮೆರಾದಲ್ಲಿ ಎರಡು ಮೆಮೊರಿ ಕಾರ್ಡ್ ಹಾಕಬಹುದು. ಒಂದನ್ನು ಸ್ಥಿರಚಿತ್ರಗಳಿಗೆ ಹಾಗೂ ಇನ್ನೊಂದನ್ನು ವಿಡಿಯೊಗಳಿಗೆ ಎಂದು ಆಯ್ಕೆ ಮಾಡಿಕೊಂಡು ಬಳಸುವ ಸ್ವಾತಂತ್ರ್ಯ ನಿಮಗಿದೆ. ಇದು ಉತ್ತಮ ಸೌಲಭ್ಯ. ೨೪ ಮೆಗಾಪಿಕ್ಸೆಲ್ ರೆಸೊಲೂಶನ್ ಇರುವುದರಿಂದ ಫೈಲ್‌ಗಾತ್ರ ದೊಡ್ಡದಾಗಿರುತ್ತದೆ. ಬೇಗ ಬೇಗನೆ ಫೋಟೊ ತೆಗೆಯಬೇಕಿದ್ದರೆ ವೇಗದ ಮೆಮೊರಿ ಕಾರ್ಡ್ (ಕ್ಲಾಸ್ ೧೦) ಬಳಸುವುದು ಉತ್ತಮ.ಕ್ಯಾಮೆರಾದ ಹಲವು ಆಯ್ಕೆಗಳನ್ನು ಬಳಸಲು ಕಲಿಯಲು ಸ್ವಲ್ಪ ಸಮಯ ಹಿಡಿಯಬಹುದು. ಅಷ್ಟು ನಮೂನೆಯ ಆಯ್ಕೆಗಳಿವೆ! ಆದರೂ ನನಗೆ ಸ್ವಲ್ಪ ಕಿರಿಕಿರಿ ಅನ್ನಿಸಿದ್ದು ಐಎಸ್‌ಓ ಸೆಟ್ಟಿಂಗ್. ಇದು ಮೆನುವಿನಲ್ಲಿದೆ. ಕ್ಯಾನನ್ ಕ್ಯಾಮೆರಾಗಳಲ್ಲಿರುವಂತೆ ಇದಕ್ಕೆಂದೇ ಪ್ರತ್ಯೇಕ ಬಟನ್ ಇಲ್ಲ. ವೇಗವಾಗಿ ಐಎಸ್‌ಒ ಬದಲಾಯಿಸಿ ಫೋಟೊಗಳನ್ನು ತೆಗೆಯಲು ಸಾಧ್ಯವಿಲ್ಲ.ಒಂದು ದೃಶ್ಯದ ಫೋಟೊ ತೆಗೆಯಬೇಕಿದ್ದರೆ ಯಾವ ಬಿಂದುವಿಗೆ ಫೋಕಸ್ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಲು ಎಲ್ಲ ಕ್ಯಾಮೆರಾಗಳಲ್ಲಿ ಸೌಲಭ್ಯ ಇರುತ್ತದೆ. ಇದರಲ್ಲೂ ಇದೆ. ಇದರಲ್ಲಿ ಅದು ೫೧ ಬಿಂದುಗಳದ್ದಾಗಿದೆ. ಅಂದರೆ ಅತಿ ಸೂಕ್ಷ್ಮವಾಗಿ ಹಾಗೂ ತೀಕ್ಷ್ಣವಾಗಿ ಫೋಕಸ್ ಮಾಡಬಹುದು. ಕಡಿಮೆ ಬೆಳಕಿನಲ್ಲೂ ಫೋಕಸ್ ಮಾಡುತ್ತದೆ. ಫೋಕಸ್ ವೇಗ ಚೆನ್ನಾಗಿದೆ. ಚಲಿಸುತ್ತಿರುವ ವಸ್ತುವನ್ನು ಅಷ್ಟೇ ವೇಗವಾಗಿ ಫೋಕಸ್ ಮಾಡಿ ಫೋಟೊ ತೆಗೆಯಬಹುದು.ಒಂದಾದ ನಂತರ ಒಂದರಂತೆ ಹಲವು ಫೋಟೊಗಳನ್ನು ತೆಗೆಯಬೇಕಿದ್ದಲ್ಲಿ ಅದಕ್ಕಾಗಿ ಇರುವ ಆಯ್ಕೆಯನ್ನು ಬಳಸಿದರೆ ಸೆಕೆಂಡಿಗೆ ಸುಮಾರು ೬ರ ತನಕ ಫೋಟೊ ತೆಗೆಯಬಹುದು. ನೆನಪಿಡಿ. ಇದು ೨೪ ಮೆಗಾಪಿಕ್ಸೆಲ್ ಕ್ಯಾಮೆರಾ. ಆದುದರಿಂದ ಅತಿ ವೇಗದ ಮೆಮೊರಿ ಕಾರ್ಡ್ ಬಳಸಿದರೆ ಮಾತ್ರ ಈ ಆಯ್ಕೆಯ ಪೂರ್ತಿ ಪ್ರಯೋಜನ ಮಾಡಿಕೊಳ್ಳಬಹುದು. ಈ ಕ್ಯಾಮೆರಾದಲ್ಲಿ ವಿಡಿಯೊ ಚಿತ್ರೀಕರಣ ಸೌಲಭ್ಯವಿದೆ. ಸೆಕೆಂಡಿಗೆ ೨೪ ಅಥವಾ ೩೦ ಫ್ರೇಮ್‌ಗಳಂತೆ ಶೂಟಿಂಗ್ ಮಾಡಬಹುದು. ಒಂದು ಬಹುದೊಡ್ಡ ಕೊರತೆ ಎಂದರೆ ವಿಡಿಯೊ ಶೂಟಿಂಗ್ ಮಾಡುವಾಗ ರೆಕಾರ್ಡಿಂಗ್ ಪ್ರಾರಂಭವಾದ ನಂತರ ಆಟೊಫೋಕಸ್ ಕೆಲಸ ಮಾಡುವುದಿಲ್ಲ. ಅಂದರೆ ಪೂರ್ತಿ ಶೂಟಿಂಗ್ ಸಮಯದಲ್ಲಿ ಕ್ಯಾಮೆರಾಕ್ಕೂ ವಸ್ತುವಿಗೂ ಇರುವ ದೂರ ಬದಲಾಗಬಾರದು. ವಿಡಿಯೊ ಶೂಟಿಂಗ್ ಮಾಡುವಾಗ ಜೊತೆಗಿನ ಆಡಿಯೊ ಸ್ಟಿರಿಯೊ ಆಗಿರುತ್ತದೆ. ಇದಕ್ಕಾಗಿ ಕ್ಯಾಮೆರಾದಲ್ಲೇ ಸ್ಟಿರಿಯೊ ಮೈಕ್ರೋಫೋನ್ ಇದೆ. ಜೊತೆಗೆ ಹೆಡ್‌ಫೋನ್ ಕಿಂಡಿಯೂ ಇದೆ. ಎಚ್ಚರಿಕೆಯಿಂದ ಸರಿಯಾಗಿ ಯೋಜನೆ ಮಾಡಿಕೊಂಡು ಬಳಸಿದರೆ ಉತ್ತಮ ಗುಣಮಟ್ಟದ ವಿಡಿಯೊ ತಯಾರಿಸಬಹುದು.ಕ್ಯಾಮೆರಾದಲ್ಲೇ ಎಚ್‌ಡಿಆರ್ ಸೌಲಭ್ಯವಿದೆ. ಇದರಲ್ಲಿ ಅಪರ್ಚರ್ ಆಯ್ಕೆಯಲ್ಲಿ +೫ ರಿಂದ --–೫ ರ ತನಕ ಅಧಿಕ ಯಾ ಕಡಿಮೆ ಆಯ್ಕೆಗಳಿವೆ. ಆದುದರಿಂದ ಈ ಕ್ಯಾಮೆರಾ ಬಳಸಿ ಎಚ್‌ಡಿಆರ್ ಫೋಟೊ ತೆಗೆದರೆ ಉತ್ತಮ ಫಲಿತಾಂಶ ಬರುತ್ತದೆ. ನಿಕಾನ್ ಡಿ೫೧೦೦ ಕ್ಯಾಮೆರಾದಲ್ಲಿ +೩ ರಿಂದ –-೩ ತನಕ ಮಾತ್ರ ಆಯ್ಕೆ ಇದೆ. ಅದಕ್ಕಿಂತ ಈ ಡಿ೭೧೦೦ ಬಳಸಿ ತೆಗೆದ ಎಚ್‌ಡಿಆರ್ ಫೋಟೊ ನಿಜಕ್ಕೂ ತೃಪ್ತಿದಾಯಕವಾಗಿದೆ. ಉದಾಹರಣೆಗೆ  ಮೈಸೂರು ಅರಮನೆಯ ಎಚ್‌ಡಿಆರ್ ಫೋಟೊ ನೋಡಿ.ಒಟ್ಟಿನಲ್ಲಿ ಹೇಳುವುದಾದರೆ, ನೀವು ಪರಿಣತ ಛಾಯಾಗ್ರಾಹಕರಾಗಿದ್ದು, ಕೈಯಲ್ಲಿ ಸಾಕಷ್ಟು ಹಣವಿದ್ದಲ್ಲಿ ಅತ್ಯುತ್ತಮ ಫಲಿತಾಂಶ ಬೇಕು ಎನ್ನುವರಿಗೆ ಇದು ನಿಜಕ್ಕೂ ಒಳ್ಳೆಯ ಆಯ್ಕೆ.

 ನಿಕಾನ್ ಡಿ೭೧೦೦ ಕ್ಯಾಮೆರಾದಿಂದ ತೆಗೆದ ಚಿತ್ರಗ್ಯಾಜೆಟ್ ಸಲಹೆ

ಬಿ.ಎಂ.ಎಂ ಮೂರ್ತಿಯವರ ಪ್ರಶ್ನೆ: ‘ವೈಫೈ’ ಎಂದರೇನು? ಅದನ್ನು ಬಳಸುವ ಬಗೆ ಹೇಗೆ ದಯವಿಟ್ಟು ತಿಳಿಸುವಿರಾ.

ಉ: ಸಾಮಾನ್ಯವಾಗಿ ಗಣಕ, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕ್ಯಾಮೆರಾ ಇತ್ಯಾದಿಗಳನ್ನು ಒಂದಕ್ಕೊಂದು ಅಥವಾ ಗಣಕಜಾಲಕ್ಕೆ ಸಂಪರ್ಕಪಡಿಸಲು ವೈಫೈ ಬಳಕೆಯಾಗುತ್ತದೆ. ಇದು ವಯರ್‌ಲೆಸ್ ಫಿಡಿಲಿಟಿ ಎನ್ನುವುದರ ಸಂಕ್ಷಿಪ್ತ ರೂಪ. ನಿಮ್ಮ ಗಣಕ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಚಾಲನೆ ಮಾಡಿದರೆ ಸುತ್ತಮುತ್ತ ಇರುವ ವೈಫೈ ಸಂಪರ್ಕಗಳನ್ನು ಅದು ತೋರಿಸುತ್ತದೆ. ಅವುಗಳಲ್ಲಿ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಂಪರ್ಕಗೊಳಿಸಬಹುದು. ಸಾಮಾನ್ಯವಾಗಿ ವೈಫೈ ಜಾಲವನ್ನು ಒಂದು ಗುಪ್ತಪದದ ಮೂಲಕ ಸುರಕ್ಷಗೊಳಿಸಿರುತ್ತಾರೆ. ಆ ಜಾಲಕ್ಕೆ ಸೇರ್ಪಡೆಗೊಳ್ಳಬೇಕಿದ್ದರೆ ನಿಮಗೆ ಆ ಪದ ತಿಳಿದಿರುವುದು ಅಗತ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry