ಭಾನುವಾರ, ಮೇ 16, 2021
25 °C

ನಿತ್ಯವೂ ದೂಳಿನ ಅಭ್ಯಂಜನ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ನಿತ್ಯವೂ ದೂಳಿನ ಅಭ್ಯಂಜನ

ಯಾವುದೇ ಸಂಸ್ಥೆಗೆ ಚಿನ್ನದ ಹಬ್ಬ ಎಂದರೆ ಸಡಗರ, ಸಂಭ್ರಮ ಹಾಗೂ ಹೆಮ್ಮೆಯ ವಿಷಯ. ಆದರೆ ಜನ್ಮ ತಳೆದು 50 ವರ್ಷವಾಗಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಚಾರದಲ್ಲಿ ಈ ಮಾತಿಗೆ ‘ಹೌದು’ ಎನ್ನಲಾಗದು. ಸಮರ್ಪಕ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ ಮತ್ತು ಉತ್ತಮ ರಸ್ತೆಗಳ ಒದಗಿಸುವಿಕೆ – ಇವಿಷ್ಟೇ ಸ್ಥಳೀಯ ಸಂಸ್ಥೆಗಳು ಮುಖ್ಯವಾಗಿ ನಿಭಾಯಿಸಬೇಕಾದ ಜವಾಬ್ದಾರಿಗಳು. ಐವತ್ತು ವರ್ಷಗಳಾದರೂ ಈ ಜವಾಬ್ದಾರಿಗಳನ್ನು ಇನ್ನೂ ಸಮರ್ಪಕವಾಗಿ ನಿಭಾಯಿಸಲು ಈ ಪಾಲಿಕೆಗೆ ಆಗಿಲ್ಲ ಎನ್ನುವುದಕ್ಕೆ ಹೆಜ್ಜೆ–ಹೆಜ್ಜೆಗೂ ಉದಾಹರಣೆಗಳು ಸಿಗುತ್ತವೆ. ಮಂಜಿನಂತೆ ಆವರಿಸುವ ದೂಳು ರಸ್ತೆಗಳ ಕಥೆಯನ್ನು ಸಂದೇಹಕ್ಕೆ ಆಸ್ಪದ ಇಲ್ಲದಂತೆ ಹೇಳುತ್ತದೆ.ಹಾಗಾಗಿಯೇ ನಗರದಲ್ಲಿ ಸುವರ್ಣ ಸಂಭ್ರಮ ಕಾಣುತ್ತಿಲ್ಲ. ಬದಲಿಗೆ ಹಳ್ಳ ಬಿದ್ದ ಹಾಗೂ ದೂಳು ಆವರಿಸಿದ ರಸ್ತೆಗಳೇ ಕಾಣುತ್ತಿವೆ. ಮೋಟರ್ ಬೈಕ್ ಸವಾರರು ಕೂಡ ಸರ್ಕಸ್ ಮಾಡುತ್ತಲೇ ಸಾಗಬೇಕಾದ ಪರಿಸ್ಥಿತಿ ಇದೆ. ಎದುರಿಗಿನ ವಾಹನ ಕಾಣದಷ್ಟು ದೂಳು ಆವರಿಸಿರುತ್ತದೆ. ಕಿತ್ತು ಹೋಗಿರುವ ಈ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಆದರೂ ಗುಂಡಿಗಳನ್ನು ಮುಚ್ಚಿಲ್ಲ ಎಂದರೆ ಪಾಲಿಕೆ ಇದೆ ಎನ್ನಲಾದೀತೇ? ಆದರೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವ ಸಭೆ–ಸಮಾರಂಭಗಳಲೆಲ್ಲಾ ಬರೀ ಅಭಿವೃದ್ಧಿ, ಅಭಿವೃದ್ಧಿ ಎಂಬ ಪದಗಳೇ ಮೊಳಗುತ್ತವೆ. ಅಲ್ಲಿಂದ ಹೊರಬಿದ್ದರೆ ಕಾಣಿಸುವುದು ಹಳ್ಳ ಬಿದ್ದ ರಸ್ತೆಗಳು; ಇಲ್ಲವೇ ದೂಳು ಆವರಿಸಿರುವ ಬೀದಿಗಳು. ಐದು ದಶಕಗಳ ಇತಿಹಾಸ ಹೊಂದಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸ್ಥಿತಿ ಇದು.ಜನರೂ ಛೀ... ಥೂ ಎಂದು ಬೈಯ್ದುಕೊಂಡೇ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಪಾಲಿಕೆಯ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ರಸ್ತೆಗಳ ದುಃಸ್ಥಿತಿ, ದೂಳಿನಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಮಾಧ್ಯಮಗಳು ಬಿಂಬಿಸಿದ್ದರೂ ಇತ್ತ ಗಮನಹರಿಸಲು ಅಧಿಕಾರಿಗಳಿಗೆ ಪುರುಸೊತ್ತಿಲ್ಲ ಎನಿಸುತ್ತದೆ. ಮೊದಲೇ ಹುಬ್ಬಳ್ಳಿ ಒಣಭೂಮಿ ಪ್ರದೇಶ. ದೂಳು ಹೆಚ್ಚು. ರಸ್ತೆಗಳ ಅಧ್ವಾನದಿಂದಾಗಿ ಇದು ಮತ್ತೂ ಜಾಸ್ತಿಯಾಗಿದೆ. ಹಾಗಾಗಿ ಶ್ವಾಸಕೋಶದ ತೊಂದರೆಯಿಂದ ನರಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಾಗರಿಕರ ಆರೋಗ್ಯದ ದೃಷ್ಟಿಯಿಂದಲಾದರೂ ಇವನ್ನು ಸರಿಪಡಿಸಬೇಕು ಎಂಬ ಪರಿಜ್ಞಾನ ಬೇಡವೇ?ಸಂಪನ್ಮೂಲದ ಕೊರತೆ ಇರುವ ಸ್ಥಳೀಯ ಸಂಸ್ಥೆಗಳಿಗೆ ರಸ್ತೆ ನಿರ್ವಹಣೆ ದೊಡ್ಡ ತಲೆನೋವು ಎಂಬುದು ನಿಜ. ಎಲ್ಲಕ್ಕೂ ಸರ್ಕಾರದ ಅನುದಾನವನ್ನೇ ಆಶ್ರಯಿಸಬೇಕು. ಅದೂ ಸಿಗುವುದು ಕಡಿಮೆ. ಇರುವ ಸಂಪನ್ಮೂಲದ ಜತೆಗೆ, ಸರ್ಕಾರದಿಂದ ವಿಶೇಷ ಅನುದಾನ ಪಡೆದುಕೊಂಡು ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಲು ಪಾಲಿಕೆ ಕ್ರಮ ತೆಗೆದುಕೊಳ್ಳಲೇಬೇಕು. ಜತೆಗೆ ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ರಾಜ್ಯ ಸರ್ಕಾರದ ಮೇಲೆ, ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ವಿವಿಧ ಯೋಜನೆಗಳ ಮೂಲಕ ಹೆಚ್ಚು ಅನುದಾನ ದೊರೆಯುವಂತೆ ಮಾಡಬೇಕು. ಮೇಲ್ಮಟ್ಟದಲ್ಲಿ ಈ ಜನಪ್ರತಿನಿಧಿಗಳು ಒಂದೇ ಧ್ವನಿಯಾಗಿ ನಿಂತು ಕೆಲಸ ಮಾಡಿಸಬೇಕು.ಹಿಂದಿನ ಐದು ವರ್ಷಗಳಲ್ಲಿ ಎಲ್ಲ ಪಾಲಿಕೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆ ಪ್ರಕಾರ ಇಲ್ಲಿಗೂ ಸಾಕಷ್ಟು ಹಣ ಬಂದಿದೆ. ಅದು ಖರ್ಚೂ ಆಗಿದೆ. ಆದರೂ ಜನರ ಬವಣೆ ಮಾತ್ರ ತಪ್ಪಿಲ್ಲ. ಇದಕ್ಕೆ ಮುಖ್ಯ ಕಾರಣ ಯೋಜಿಸಿ ಮತ್ತು ಯೋಚಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವುದು. ನಗರಗಳಲ್ಲಿ ನಾನಾ ಕಾರಣಗಳಿಗೆ ರಸ್ತೆ ಅಗೆಯುವುದು ಸಾಮಾನ್ಯ ಸಂಗತಿ. ಪಾಲಿಕೆಯಿಂದ ಅನುಮತಿ ಪಡೆದುಕೊಂಡು ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಲು ನಾಗರಿಕರು ರಸ್ತೆ ಅಗೆಯುತ್ತಾರೆ. ಅದಕ್ಕೆ ಅನುಮತಿ ನೀಡುವಾಗ ಶುಲ್ಕ ಕಟ್ಟಿಸಿಕೊಳ್ಳುವ ಪಾಲಿಕೆ ನಂತರ ಆ ಜಾಗವನ್ನು ಸಮರ್ಪಕವಾಗಿ ದುರಸ್ತಿಪಡಿಸುವುದಿಲ್ಲ. ಅದು ಹಾಗೆಯೇ ಉಳಿದು, ವಾಹನಗಳ ಓಡಾಟದಿಂದ ಇನ್ನಷ್ಟು ಹೆಚ್ಚಾಗಿ ಬಾಯಿ ತೆರೆದುಕೊಳ್ಳುತ್ತವೆ.

ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕಿಂತ ವಿಚಿತ್ರವಾದ ಸ್ಥಿತಿ ಇದೆ. ಇಲ್ಲಿ ನಾಗರಿಕರು ರಸ್ತೆ ಅಗೆದು ಹಾಳು ಮಾಡಿರುವುದಕ್ಕಿಂತ ಹೆಚ್ಚಾಗಿ ವಿವಿಧ ಕಾಮಗಾರಿಗಳನ್ನು (ಒಳಚರಂಡಿ, ಅಡುಗೆ ಅನಿಲ ಪೈಪ್‌ಲೈನ್‌, ಕುಡಿಯುವ ನೀರು ಪೂರೈಕೆ) ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಅಗೆದು ಹಾಕಿದ್ದಾರೆ. ಅದಕ್ಕೆ ಇಲ್ಲಿ ಯೋಚನೆ ಮತ್ತು ಯೋಜನೆ ಎರಡೂ ಇಲ್ಲ ಎನ್ನುವುದು.ಒಳಚರಂಡಿ ಯೋಜನೆಗೆ ಸರ್ಕಾರದ ಅನುಮೋದನೆ ದೊರೆತಿರುವುದು ಗೊತ್ತಿದ್ದರೂ ರಸ್ತೆ ಡಾಂಬರೀಕರಣ ಮಾಡುವುದು, ನಂತರ ಅದನ್ನು ಅಗೆಯುವುದು ಸಾರ್ವಜನಿಕರ ಹಣದ ಪೋಲು ಅಲ್ಲವೇ? ಯಾರೋ ಪ್ರಭಾವಿ ಪುರಪಿತೃರ ಮಾತು ಕೇಳಿಕೊಂಡು ರಸ್ತೆಗೆ ಹಣ ಸುರಿಯುವ ಬದಲಿಗೆ ಅವರಿಗೆ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಅಧಿಕಾರಿಗಳದ್ದು. ಇಂತಹ ಕೆಲಸಕ್ಕೆ ಅಧಿಕಾರಿಗಳು ಮುಂದಾಗದಿರುವುದರಿಂದಲೇ ಅವರ ಮೇಲೆ ಜನರಿಗೆ ಸಂಶಯ. ಅಲ್ಲದೇ ಇದನ್ನೇ ಗುತ್ತಿಗೆದಾರ–ಅಧಿಕಾರಿ–ರಾಜಕಾರಣಿಗಳ ಕೂಟ ಎಂದು ಜನರು ಕರೆಯುವುದು. ಅಲ್ಲಿ ಕೆಲಸ ಆದಂತೆಯೂ ಇರಬೇಕು.

ಹಣವೂ ಖರ್ಚಾಗಿರಬೇಕು. ಅದರ ಲಾಭ ಸೇರಬೇಕಾದವರಿಗೆ ಸೇರಲೂಬೇಕು. ಇನ್ನೊಂದು ಕಾಮಗಾರಿಗೆ ಮತ್ತೆ ರಸ್ತೆ ಅಗೆಯುವುದು ಅನಿವಾರ್ಯ ಎಂಬುದು ಗೊತ್ತಿರುವಾಗ ಅಲ್ಲಿ ಗುಣಮಟ್ಟದ ಕಾಮಗಾರಿ ಆಗಿರುತ್ತದೆ ಎಂಬುದಕ್ಕೆ ಗ್ಯಾರಂಟಿ ಏನು? ಒಂದು ಸಣ್ಣ ಮಳೆ ಆ ಕಾಮಗಾರಿಯ ಬಂಡವಾಳವನ್ನು ಬಯಲು ಮಾಡಿಬಿಡುತ್ತದೆ. ಒಂದು ಕಡೆ ರಸ್ತೆ ಅಗೆದಿರುವುದು, ಇನ್ನೊಂದೆಡೆ ಕಿತ್ತು ಹೋಗಿರುವುದರಿಂದ ಹುಬ್ಬಳ್ಳಿಯ ಅನೇಕ ಮುಖ್ಯರಸ್ತೆಗಳು ಹಾಳಾಗಿವೆ. ನಿಜವಾಗಿಯೂ ಇದು ಭಾರಿ ಮಳೆ ಬೀಳುವ ಪ್ರದೇಶವಾಗಿದ್ದರೆ ಕಾಂಕ್ರೀಟ್ ರಸ್ತೆ ನಿರ್ಮಿಸಿ, ಮತ್ತೆ ಗುಂಡಿ ಬೀಳದಂತೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದಲ್ಲ? ಅತ್ತ ಏಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಚಿತ್ತ ಹರಿಯುವುದಿಲ್ಲ?ಇಂದು ರಸ್ತೆ ನಿರ್ಮಾಣದ ತಂತ್ರಜ್ಞಾನ ಬಹಳ ಮುಂದುವರಿದಿದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವ ಉದ್ದೇಶ ನಿಜವೇ ಆಗಿದ್ದರೆ ಅದನ್ನು ಅಳವಡಿಸಿಕೊಳ್ಳಬಹುದಿತ್ತು.ಬರೀ ಬಾಯಿಮಾತಿನಲ್ಲಿ ಗುಣಮಟ್ಟದ ರಸ್ತೆಗಳು ಆಗಬೇಕು ಎಂದರೆ ಆಗುವುದಿಲ್ಲ. ಅದನ್ನು ಮಾಡಿ ತೋರಿಸುವ ಇಚ್ಛಾಶಕ್ತಿಯು ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ಇರಬೇಕು. ಇವರು ಹೇಳಿದಂತೆ ತಾನೇ ಗುತ್ತಿಗೆದಾರ ಕೆಲಸ ಮಾಡುವುದು.ಇಷ್ಟಕ್ಕೂ ಪಾಲಿಕೆಯು ಗುಣಮಟ್ಟಕ್ಕೆ ಒತ್ತು ನೀಡಲೇಬೇಕು ಎಂದರೆ ರಸ್ತೆಗೆ ವಿಮೆ ಮಾಡಿಸಬಹುದು. ಆ ಧೈರ್ಯವಾದರೂ ಪಾಲಿಕೆಗೆ ಇದೆಯೇ? ವಿಮೆಗೆ ಒಳಪಟ್ಟಿರುವ ಹುಬ್ಬಳ್ಳಿಯ ತಿಮ್ಮಸಾಗರಗುಡಿ ಬೀದಿ ವಿಮೆಗೆ ಒಳಪಟ್ಟಿದ್ದು ಅನೇಕ ವರ್ಷಗಳಿಂದ ಸುಸ್ಥಿತಿಯಲ್ಲಿದೆ. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರವೇ ಅನೇಕ ರಸ್ತೆಗಳಿಗೆ ವಿಮೆ ಮಾಡಿಸಿದೆ. ಇದನ್ನು ಇಲ್ಲಿಯೂ ಅಳವಡಿಸಿಕೊಂಡರೆ ರಸ್ತೆ ನಿರ್ವಹಣೆ ಬಹಳ ಸುಲಭವಾಗುತ್ತದೆ. ವಿಮೆಗೆ ಒಳಪಟ್ಟರುವ ನಗರದ ರಸ್ತೆಗೆ ತಾನೇ ನಿರಾಕ್ಷೇಪಣಾ ಪತ್ರ ನೀಡಿದ್ದರೂ ಪಾಲಿಕೆ ಇದನ್ನು ಇತರೆ ರಸ್ತೆಗಳಿಗೆ ವಿಸ್ತರಿಸಲು ಏಕೆ ಮುಂದಾಗಿಲ್ಲ? ರಸ್ತೆ ನಿರ್ವಹಣೆಗೆ ಹಣವಿಲ್ಲ ಎಂದಾಗ ಗುಣಮಟ್ಟಕ್ಕೆ ಒತ್ತು ನೀಡುವತ್ತ ಅಡಿ ಇಡದಿರುವ ಹಿಂದಿನ ಮರ್ಮ ಏನು?ಸರ್ಕಾರ ಕೂಡ ರಸ್ತೆಗಳಿಗೆ ವಿಮೆ ಮಾಡಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ನಗರಾಭಿವೃದ್ಧಿ ಇಲಾಖೆಯು ನಗರ–ಪಟ್ಟಣಗಳ ರಸ್ತೆಗಳನ್ನು ಕಡ್ಡಾಯವಾಗಿ ವಿಮೆ ವ್ಯಾಪ್ತಿಗೆ ತಂದರೆ ಜನರಿಗೆ ಬಹಳ ದೊಡ್ಡ ಉಪಕಾರ  ಮಾಡಿದಂತಾಗುತ್ತದೆ. ಗುಣಮಟ್ಟ ತಾನಾಗಿಯೇ ಸುಧಾರಿಸುತ್ತದೆ. ನಗರಾಭಿವೃದ್ಧಿ ಇಲಾಖೆ ಈ ಕುರಿತು ನೀತಿ ರೂಪಿಸುವ ಅಗತ್ಯವಿದೆ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಪ್ರಮುಖ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡಬೇಕು. ಸ್ಥಳೀಯ ಸಂಸ್ಥೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೂ ಸರ್ಕಾರ ಪ್ರತ್ಯೇಕವಾಗಿ ಹಣ ಒದಗಿಸುವ ವ್ಯವಸ್ಥೆಯಾಗಬೇಕು. ಕಾಟಾಚಾರಕ್ಕೆ ಅನುದಾನ ಬಿಡುಗಡೆಯಿಂದ ಪ್ರಯೋಜನವಿಲ್ಲ. ನಗರಗಳನ್ನು ಯೋಜಿತ ರೀತಿಯಲ್ಲಿ ಅಭಿವೃದ್ಧಿ­ಪಡಿಸಲು ಸರ್ಕಾರ ಮುಂದಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.