ನಿನ್ನ ಪಾಠಕ್ಕೆ ಹುಲಿ ಹಿಡಿಯಾ...

7

ನಿನ್ನ ಪಾಠಕ್ಕೆ ಹುಲಿ ಹಿಡಿಯಾ...

Published:
Updated:

ನಿರಂತರವಾಗಿ ಮಳೆ ಸುರಿಯುವ ಆ ಹಳ್ಳಿಗೆ ನಾನು ಹೋಗಿ ಇಳಿದಾಗ ಮಧ್ಯಾಹ್ನವಾಗಿತ್ತು. ವಿಚಾರಿಸಲು ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಹಾವಿನಂತೆ ಉದ್ದಕ್ಕೆ ಮಲಗಿದ್ದ ಡಾಂಬರ್ ರಸ್ತೆ. ಅಕ್ಕಪಕ್ಕ ಮುಗಿಲೆತ್ತರ ಬೆಳೆದ ಕಾಡು. ಜುಳುಜುಳು ಹರಿಯುವ ಹಳ್ಳ. ದೂರದಲ್ಲಿ ಕಾಣುವ ನದಿಯ ಹಿನ್ನೀರು. ಒಂದು ಸಲ ಇದೆಲ್ಲಾ ನೋಡಿ ರೋಮಾಂಚನವಾದರೂ ಒಳಗೊಳಗೆ ಸಣ್ಣ ಹೆದರಿಕೆಯೂ ಶುರುವಾಯಿತು. ಸದ್ದುಗದ್ದಲದ ಅರೆ ಮಲೆನಾಡಿನಿಂದ ಬಂದಿದ್ದವನಿಗೆ ಅಲ್ಲಿನ ನೀರವ ಮೌನ ವಿಚಿತ್ರ ಎನಿಸತೊಡಗಿತ್ತು.ರೀ.., ಇವರೇ.., ಇಲ್ಲಿ ಕಾಲೇಜು ಎಲ್ಲಿದೆ? ಎಂದು ಕಾಡಿನಿಂದ ದರಗಿನ ಹೊರೆಯೊಂದಿಗೆ ಇಳಿಯುತ್ತಿದ್ದ ಹೆಂಗಳೆಯೊಬ್ಬರಿಗೆ ಪ್ರಶ್ನಿಸಿದೆ. ನನ್ನ ಛಕ್ಕಂತ ನೋಡಿದ ಅವರು ಹೆದರಿದಂತೆ ಕಂಡರು. ದರಗಿನ ಹೊರೆಯನ್ನು ಬಿಸಾಡಿ ಗರಬಡಿದು ನಿಂತರು. ಮೊಣಕಾಲು ಮೇಲಕ್ಕೆ ಎತ್ತರಿಸಿ ಕಟ್ಟಿಕೊಂಡಿದ್ದ ಸೀರೆಯನ್ನು ಗಡಿಬಿಡಿಯಿಂದ ಸರಿಪಡಿಸಿಕೊಂಡರು. ಅಪರಿಚಿತನಾದ ನಾನು ಅವರಿಗೆ ಅನುಮಾನಾಸ್ಪದವಾಗಿ ಕಂಡಿರಬೇಕು. ಇಲ್ಲಿನ ಕಾಲೇಜಿಗೆ ಹೊಸ ಉಪನ್ಯಾಸಕನಾಗಿ ಬಂದಿದ್ದೇನೆ. ಕಾಲೇಜು ಎಲ್ಲಿದೆ ಅಂತ ಸ್ವಲ್ಪ ಹೇಳ್ತೀರಾ? ಎಂದು ವಿನಮ್ರವಾಗಿ ಕೇಳಿದೆ. ಸಣ್ಣ ದಿಬ್ಬದ ದಾರಿಯ ಕಡೆಗೆ ಬೆರಳು ತೋರಿದರು.ಅದು ಹಳ್ಳಿಯಲ್ಲಿ ಹೊಸದಾಗಿ ಶುರುವಾಗಿದ್ದ ಕಾಲೇಜು. ಹೀಗಾಗಿ ಅದಕ್ಕೊಂದು ಸ್ವಂತ ಕಟ್ಟಡವಾಗಲೀ, ಕಾಲೇಜೆಂಬ ಬೋರ್ಡ್ ಆಗಲೀ ಅಲ್ಲಿರಲಿಲ್ಲ. ಗ್ರಾಮ ಪಂಚಾಯಿತಿಯ ಹಳೇ ಕಚೇರಿಯ ಒಂದು ಮೂಲೆಯಲ್ಲಿ ಹತ್ತಿಪ್ಪತ್ತು ಹುಡುಗರು ಕೂರಲು ಒಂದಿಷ್ಟು ಜಾಗ ಮಾಡಿದ್ದರು. ಹಳೇ ಗೋಡೆಗೆ ಕಪ್ಪು ಬಣ್ಣ ಬಳಿದಿದ್ದರು. ಅದೇ ಬ್ಲಾಕ್ ಬೋರ್ಡ್. ಲಡ್ಡಾದ, ಒಂದಕ್ಕೊಂದು ಸಂಬಂಧವೇ ಇಲ್ಲದ ಐದಾರು ಬೆಂಚುಗಳಿದ್ದವು. ನನಗಿಂತ ಒಂದು ತಿಂಗಳ ಮೊದಲು ಅರ್ಥಶಾಸ್ತ್ರ ಉಪನ್ಯಾಸಕನಾಗಿ ಬಂದಿದ್ದ ಗೆಳೆಯ ಎಲ್ಲಿಗೆ ಬಂದು ಸಿಕ್ಕಿಹಾಕಿಕೊಂಡೆ ಎಂದು ಕಣ್ಣೀರಿಡುತ್ತಿದ್ದ. ಅವನಿಗೆ ನನ್ನನ್ನು ನೋಡಿ ಒಂದಿಷ್ಟು ಸಮಾಧಾನವಾಗಿರಬೇಕು.ಸಾರ್ ನಾನೊಬ್ಬನೇ ಆರೂ ಸಬ್ಜೆಕ್ಟಿಗೆ ಪಾಠ ಮಾಡ್ತಿದ್ದೆ ಸದ್ಯ ನೀವೊಬ್ಬರು ಬಂದಿರಲ್ಲ ಒಳ್ಳೇದಾಯಿತು ಬಿಡಿ. ಇನ್ನು ಮುಂದೆ ನಾನು ಮೂರು, ನೀವು ಮೂರು ಸಬ್ಜೆಕ್ಟ್ ಹಂಚಿಕೊಳ್ಳೋಣ ಎಂದು ಹೇಳಿ ನಿರಾಳನಾದ. ನಾನು ಕನ್ನಡ ಲೆಕ್ಚರರ್ ಕಣ್ರಿ. ಉಳಿದ ಸಬ್ಜೆಕ್ಟಿಗೆ ಹ್ಯಾಗೆ ಪಾಠ ಮಾಡೋದು ಹೇಳಿ ಎಂದು ತಲೆಮೇಲೆ ಕೈಹೊತ್ತುಕೊಂಡೆ.  ಅಯ್ಯೋ... ತಿಳಿದಷ್ಟು ವದರೋಣ ಬಿಡಿ ಸಾರ್. ಅವರಿಗೇನು ಗೊತ್ತಾಗುತ್ತೆ. ಪಾಪ ನಾವು ಏನ್ ಹೇಳಿಕೊಟ್ಟರೂ ಸುಮ್ನೆ ಕೇಳ್ತಾವೆ. ಪಾಸಾಗೋವಷ್ಟು ಬೊಗಳಿದರೆ ಆತಪ್ಪ. ನಾವೂ ಆಗಲ್ಲಾಂತ ಕೈ ಬಿಟ್ಟರೆ ಈ ಹುಡುಗರಿಗೆ ಈ ಕಾಡಲ್ಲಿ ಮತ್ಯಾರು ಗತಿ ಹೇಳಿ.ಎಷ್ಟೆಷ್ಟಾಗುತ್ತೋ ಅಷ್ಟಷ್ಟು ಹೇಳೋಣ. ಇದು ಕಾಲೇಜೇ ಅಲ್ಲಪ್ಪ ಹೈಸ್ಕೂಲು ಅಂದ್ಕೊಳ್ಳಿ. ಟೆನ್ಷನ್ ಕಮ್ಮಿ ಆಗುತ್ತೆ. ಮತ್ತೆ ಇಲ್ಲಿ ಟೈಮ್ ಪಾಸಾಗೋದೇ ಭಾಳ ಕಷ್ಟ ಸಾರ್. ಸುಮ್ಮನೇ ಕೂರೋದಕ್ಕಿಂತ ಏನಾದ್ರೂ ಒದರಿಕೊಂಡು ಇರಾನ ಬಿಡಿ. ನಾನೂ ಒಬ್ಬನೇ ಇದ್ದು ಇದ್ದು ಬೇಜಾರಾಗಿತ್ತು. ಸದ್ಯ ಮಾತಿಗೆ ನೀವೊಬ್ಬರಾದ್ರು ಬಂದ್ರಲ್ಲ. ಇಷ್ಟನೋ ಕಷ್ಟನೋ ಇರೋಣ. ಸರ್ಕಾರ ಸಂಬಳ ಕೊಡುತ್ತದಲ್ಲ ಇನ್ನೇನು ಬೇಕು ಹೇಳಿ. ಆದ್ರೆ ಇಲ್ಲಿ ಭಾಳ ಮಳೆ ಸಾರ್. ಇಲ್ಲಿನ ಜನ ಹೆಂಗಿರ್ತಾರೋ ಏನೋ? ನನಗಂತೂ ಈ ಒಳ ಉಡುಪು ಒಣಗಿಸಿ ಇಡೋದೇ ಒಂದು ದೊಡ್ಡ ಸಮಸ್ಯೆ ಯಾಗಿದೆ ಎಂದು ಕಹಿಯಾಗಿ ನಕ್ಕ. ನಾನು ಏಕೋಪಾಧ್ಯಾಯ ಶಾಲೆ ಕೇಳಿದ್ದೆ. ಏಕೋಪಾಧ್ಯಾಯ ಕಾಲೇಜನ್ನು ನೋಡಿರಲಿಲ್ಲ. ಈಗ ಅದೂ ನೋಡಿದಂಗಾಯಿತು ಬಿಡಿ ಎಂದೆ.ಅಲ್ಲಿ ನಾವು ನಿರೀಕ್ಷೆ ಇಟ್ಟುಕೊಂಡಿದ್ದ  ಕಾಲೇಜ್ ವಾತಾವರಣದ ಲವಲೇಶವೂ ಇರಲಿಲ್ಲ. ನಗರದ ದೊಡ್ಡ ಕಾಲೇಜಿನಲ್ಲಿ ಪಾಠ ಕೊಸೆದು ಹೋದ ನನಗೆ ಎಲ್ಲೋ ಎತ್ತಿ ಬಿಸಾಕಿದಂತಾಗಿತ್ತು. ಮಳೆ ಬಿದ್ದರೆ ಉಳುಮೆ ಕಾಲವೆಂದು ಹುಡುಗರೇ ಬರುತ್ತಿರಲಿಲ್ಲ. ಮದುವೆಯಾಗದ ಒಂದೆರಡು ಹುಡುಗರು ನಾಲ್ಕೈದು ಹುಡುಗಿಯರು ಪಾಪ ತಪ್ಪದೆ ಬರುತ್ತಿದ್ದವು. ಉಳಿದ ಬಹುತೇಕರಿಗೆ ಮದುವೆ ಯಾವತ್ತೋ ಆಗಿ ಹೋಗಿತ್ತು. ಅವರು ಎಸ್ಸೆಸೆಲ್ಸಿ ಮುಗಿಸಿ ಶತಮಾನಗಳೇ ಕಳೆದಿದ್ದವು. ಹೊಸ ಸರ್ಕಾರಿ ಕಾಲೇಜು ಊರಿಗೆ ಸಿಕ್ಕಿದೆ. ಅದನ್ನು ಏನಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಒತ್ತಡದಲ್ಲಿ ಊರಿನವರು ಮನೆಮನೆಗೆ ನುಗ್ಗಿ ತಾತಾ ಮುತ್ತಾತನ ಕಾಲದಲ್ಲಿ ಎಸ್ಸೆಸೆಲ್ಸಿ ಪೂರೈಸಿದವರನ್ನು ಹಿಡಿದು ತಂದು ಹೊಸ ಕಾಲೇಜಿಗೆ ತುರುಕಿದ್ದರು.  ತಮ್ಮ ಸಂಸಾರದ ಭಯಾನಕ ತಾಪತ್ರಯಗಳಲ್ಲಿ ಮುಳುಗಿ ಅನ್ಯಮನಸ್ಕರಾಗಿ ಕೂತಿರುತ್ತಿದ್ದ ಅವರಿಗೆ ನಾನು ಇತಿಹಾಸ, ಕನ್ನಡ, ಸಮಾಜಶಾಸ್ತ್ರ ಹೇಳಿಕೊಡುತ್ತಿದ್ದೆ. ಉಳಿದವನ್ನು ನನ್ನ ಗೆಳೆಯ ರಾಚಯ್ಯ ಹೇಳಿಕೊಡುತ್ತಿದ್ದ. ರಾತ್ರಿ ಕಬ್ಬಿನ ಗದ್ದೆಗೋ? ಇಲ್ಲ ಶಿಕಾರಿಗೋ ಹೋಗಿ ನಿದ್ದೆ ಗೆಟ್ಟು  ಬಂದವರು ಮುಲಾಜಿ ಲ್ಲದೆ ಕೂತಲ್ಲೇ ಮಲಗಿಬಿಡುತ್ತಿದ್ದರು. ಇನ್ನು ಪಿಯು ವಯಸ್ಸಿನ ಮಕ್ಕಳು ಪಾಠ, ಮೇಷ್ಟ್ರು, ಪ್ರೀತಿ, ಪ್ರೇಮ, ತಮಾಷೆಗಳ ಬಗ್ಗೆ ಪರಸ್ಪರ ಮಾತಾಡಿಕೊಳ್ಳುವುದು ಸಹಜ.ಆಶ್ಚರ್ಯವೆಂದರೆ; ಸಂಸಾರಿಗಳಾಗಿದ್ದ ನಮ್ಮ ಬಹುತೇಕ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಮನೆ, ಮಕ್ಕಳು, ಹೆಂಡತಿ, ಜಮೀನು, ಗೊಬ್ಬರ, ತೋಟ, ಬೀಜ, ಎತ್ತು, ಎಮ್ಮೆ, ಸಾಲಸೋಲಗಳ ವಿಷಯಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಸಂಸಾರದ ಕಷ್ಟ ಸುಖ ಮಾತಾಡಿಕೊಳ್ಳುತ್ತಿದ್ದರು. ನಾನು ಮತ್ತು ರಾಚಯ್ಯ ಇಬ್ಬರೂ ಅವಿವಾಹಿತರೂ ಕಿರಿಯರೂ ಆದ ಕಾರಣ ಅವರ ಜೀವನಾನುಭವದ ಎದುರು ನಾವಿಬ್ಬರು ಬಚ್ಚಾಗಳಾಗಿದ್ದೆವು. ಅವರು ನಮಗೆ ನಮಸ್ಕಾರ ಸಾರ್ ಎಂದು ಗೌರವಿಸಿದರೆ; ಅದನ್ನು ಸ್ವೀಕರಿಸಿ ಉತ್ತರಿಸಲು ನಮಗಿಬ್ಬರಿಗೂ ಸಂಕೋಚ ವಾಗುತ್ತಿತ್ತು. ಅದೊಂಥರ ವಯಸ್ಕರ ಶಿಕ್ಷಣ ಶಾಲೆಯೇ ಆಗಿತ್ತು.ಇನ್ನೂ ತಮಾಷೆಯೆಂದರೆ; ಆ ಹಳ್ಳಿಯ ಪ್ರಾಥಮಿಕ ಶಾಲೆಗೆ ಅಕಸ್ಮಾತ್ ರಜೆ ಕೊಟ್ಟರೆ, ಇಲ್ಲ ಮೀಟಿಂಗ್ ಅಂತ ಬೇಗ ಬಿಟ್ಟರೆ ನಾವೂ ನಮ್ಮ ಕಾಲೇಜನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತಿತ್ತು. ನಮ್ಮ ವಿದ್ಯಾರ್ಥಿಗಳ ಮಕ್ಕಳು ಅಪ್ಪಂದಿರನ್ನು ಹುಡುಕಿಕೊಂಡು ನಮ್ಮ ಕಾಲೇಜಿನ ಒಳಗೇ ನುಗ್ಗಿ ಬಂದು ಬಿಡುತ್ತಿದ್ದವು. ಹೊರಗೆ ಹೋಗಿ ಆಡಿಕೊಳ್ಳಿ ಎಂದು ನಾನೆಷ್ಟು ಸಲ ಹೇಳಿದರೂ ಅವು ಕೇಳುತ್ತಿರಲಿಲ್ಲ.  ನನ್ನ ವಿದ್ಯಾರ್ಥಿಗಳೂ, ಇವೂ ಇರಲೀ ಬಿಡಿ ಸಾರ್. ನಮ್ಮ ಪಕ್ಕ ಕೂತಿರ್ತಾವೆ ಎಂದು ವಿನಮ್ರವಾಗಿ ಕೋರಿಕೊಳ್ಳೋರು. ಏನೇನೂ ಮಾಡುವಂತಿರ ಲಿಲ್ಲ. ಹೀಗಾಗಿ, ಆ ಪಿಳ್ಳೆಗಳಿಗೂ ಸೇರಿಸಿಕೊಂಡೇ ಪಾಠ ಜಡಿಯುವುದನ್ನು ಅಭ್ಯಾಸ ಮಾಡಿಕೊಂಡೆ. ಆದ್ದರಿಂದ ಇದನ್ನು ಕಾಲೇಜು ಎನ್ನುವುದಕ್ಕಿಂತ ಪ್ರಾಥಮಿಕ ಮತ್ತು ವಯಸ್ಕರರ ಓದಿನಮನೆ ಎನ್ನುವುದೇ ಸೂಕ್ತವೇನೋ ಎಂದು ಬಹಳ ಸಲ ಅನ್ನಿಸುತ್ತಿತ್ತು.ಒಂದೊಂದು ಸಲ ನನ್ನ ತರಗತಿ ನಡೆಯುತ್ತಿದ್ದರೆ ಆ ಮಕ್ಕಳನ್ನು ರಾಚಯ್ಯ ಹೊರಗೆ ಸಂಭಾಳಿಸುವುದೂ, ಒಂದೊಮ್ಮೆ ಅವನು ಒಳಗೆ ಪಾಠ ಮಾಡುತ್ತಿದ್ದರೆ  ಇತ್ತ ನಾನು ನನ್ನ ವಿದ್ಯಾರ್ಥಿಗಳ ಮಕ್ಕಳ ಜೊತೆಗೆ ಆಟವಾಡುವುದು ನಡೀತಿತ್ತು. ಮೊದಮೊದಲು ಇದು ವಿಚಿತ್ರ ಎನ್ನಿಸಿದರೂ, ಆ ಮಕ್ಕಳ ಒಡನಾಟ, ಹಾಗೂ ಆಪ್ತತೆ ನಮಗೆ ಖುಷಿ ಎನಿಸಿತೊಡಗಿತು. ಕಾಲೇಜಿನಿಂದ ಹೋಗುವಾಗ ಆ ಮಕ್ಕಳೂ ಅವರವರ ಅಪ್ಪಂದಿರ ಜೊತೆ ಸೇರಿ ನಮಸ್ಕಾರ ಸಾರ್ ಎಂದು ಪೊಲೀಸ್ ಸೆಲ್ಯೂಟನ್ನು ಹೊಡೆದೇ ಹೋಗುತ್ತಿದ್ದರು. ಹಳ್ಳಿಯ ಮಕ್ಕಳು ಇಂದಿಗೂ ಈ ಪೋಲೀಸ್ ಸೆಲ್ಯೂಟನ್ನು ಮುಗ್ಧತೆಯಿಂದ ಮಾಡುತ್ತಾರೆ. ಅದೇನೋ ಗೊತ್ತಿಲ್ಲ. ಈ ನಮಸ್ಕಾರ ಅಂದ್ರೆ ಇವತ್ತಿಗೂ ನನಗೆ ಪಂಚಪ್ರಾಣ. ನನ್ನ ಪ್ರಕಾರ ಹಾಗೆ ನಮಸ್ಕರಿಸುವ ಮಕ್ಕಳಲ್ಲಿ ಅಗಾಧ ಪ್ರೀತಿ ಕಂಡಿದ್ದೇನೆ. ವಿನಯ ನೋಡಿದ್ದೇನೆ. ಗೌರವ ಗುರ್ತಿಸಿದ್ದೇನೆ. ನಮ್ಮ ಬಹಳಷ್ಟು ವಿದ್ಯಾರ್ಥಿಗಳು ಕಾಡಿನ ಒಂಟಿ ಮನೆಗಳ ಹಳ್ಳಿಗಳಿಂದ ಬರುತ್ತಿದ್ದರು. ಕಾಲೇಜಿಗೆ ಬರುವ ಮೊದಲು ಅವರು ರೇಷನ್ ಅಂಗಡಿಗೆ, ಸೊಸೈಟಿಗೆ ಹೋಗಿ ಮನೆಗೆ ಬೇಕಾದ ದಿನಸಿ, ತರಕಾರಿ, ದನದ ಹಿಂಡಿಗಳನ್ನು ಕೊಂಡು ತಂದು ತಮ್ಮ ಕಾಲೇಜಿನ ಕೈಚೀಲಗಳ ಜೊತೆಜೊತೆಗೇ ಜೋಡಿಸಿಟ್ಟುಕೊಂಡು ಕ್ಲಾಸಿನಲ್ಲಿ ಕೂರುತ್ತಿದ್ದರು. ಮೊದಲ ದಿನ ನಾನು ಪಾಠ ಮಾಡುತ್ತಿದ್ದಾಗ ದಿಢೀರೆಂದು ಎದ್ದು ನಿಂತ ಕೆಲವರು ತಮ್ಮ ತಮ್ಮ ಬ್ಯಾಗು, ಚೀಲಗಳನ್ನೂ, ತಮ್ಮ ಮಕ್ಕಳನ್ನೂ ಬಾಚಿಕೊಂಡು ರಸ್ತೆಯ ಕಡೆ ಮಿಂಚಿನಂತೆ ಓಡತೊಡಗಿದರು. ನನಗೆ ಅವರು ಏಕೆ ಹೀಗೆ ಅನಾಮತ್ತಾಗಿ ಎದ್ದು ಓಡಿ ಹೋಗುತ್ತಿದ್ದಾರೆಂದು ಫಕ್ಕನೆ ಅರ್ಥವಾಗಲಿಲ್ಲ. ಹಾಗೆ ಎದ್ದು ಓಡಿಹೋಗುವಂಥ ಪಾಠ ನಾನೇನು ಮಾಡಿರಬಹುದೆಂದು ಪುಸ್ತಕವನ್ನೊಮ್ಮೆ ನೋಡಿದೆ. ಅದು ಅಲ್ಲಮ್ಮನ ವಚನ. ಕೊಟ್ಟಕುದುರೆಯನ್ನು ಏರಲರಿಯದೆ, ಮತ್ತೊಂದು ಕುದುರೆಯ ಬಯಸುವವನು ವೀರನೂ ಅಲ್ಲ, ಧೀರನೂ ಅಲ್ಲ ಎಂಬುದಾಗಿತ್ತು. ಆದರೆ ಇವರು ತಾವೇ ಸ್ವಯಂ ಕುದುರೆಗಳಂತಾಗಿ ಬಿಟ್ಟು ನೆಗೆನೆಗೆದು ಓಡಿ ಹೋಗಿದ್ದರು.ಕಂಗಾಲಾಗಿ ನಿಂತಿದ್ದ ನನಗೆ ರಾಚಯ್ಯ ತುಂಬಾ ಆರಾಮಾಗಿ, ಅಲ್ನೋಡಿ ಸಾರ್ ಬಸ್ಸು ಬರ್ತಾ ಇದೆ. ಇದು ಅವರ ಊರಿಗೆ ಹೋಗುವ ಕೊನೇ ಬಸ್ಸು ಸಾರ್. ಇದನ್ನ ಕಳೆದುಕೊಂಡರೆ ಅವರು ನಾಳೆವರೆಗೂ ಇಲ್ಲೇ ಇರಬೇಕಾಗುತ್ತೆ. ಇಲ್ಲ ಇಪ್ಪತೈದು ಮೈಲಿ ನಡೀಬೇಕು. ಹಿಂಗಾಗಿ, ಈ ಬಸ್ಸು ನೋಡಿದ ತಕ್ಷಣ ಇವರು ಹೀಗೇನೆ ಸಾರ್. ಹೇಳದೆ ಕೇಳದೆ ಎದ್ದು ಓಡಿ ಹೋಗ್ತಿರ್ತಾರೆ. ನೀವೇನೂ  ಟೆನ್ಷನ್ ಮಾಡ್ಕೊಬೇಡಿ. ಉಳಿದವರಿಗೆ ಪಾಠ ಮಾಡಿ ಸಾರ್ ಎಂದು ಹೇಳಿದ. ನಾನು ತರಗತಿಯಲ್ಲಿ ಉಳಿದವರೆಷ್ಟು ಎಂದು ಎಣಿಸಿದೆ. ಮೂರೇ ಮೂರು ತಲೆಗಳು ನನ್ನನ್ನೇ ಕರುಣೆಯಿಂದ ದಿಟ್ಟಿಸುತ್ತಿದ್ದವು.ಮತ್ತೊಂದು ದಿನ ನನಗೆ ಇನ್ನೊಂದು ಶಾಕ್ ಕಾದಿತ್ತು. ನನ್ನ ತರಗತಿ ನಡೆಯುವಾಗ ಪಕ್ಕದ ಒಂದು ತುಂಡು ಹೋಟೆಲಿನಿಂದ ಅದರ ಮಾಲೀಕ ತನ್ನಿಬ್ಬರು ಮಕ್ಕಳೊಂದಿಗೆ ಓಡೋಡಿ ಬಂದ. ಸದಾ ವ್ಯಾಪಾರವಿಲ್ಲ್ಲದೆ ನೊಣ ಹೊಡೆಯುತ್ತಿದ್ದ ಅವನ ಒಣದೋಸೆ, ಕೆಟ್ಟ ಟೀಗೆ ನಾವಷ್ಟೇ ಕಾಯಂ ಗಿರಾಕಿಗಳಾಗಿದ್ದೆವು. ಇವನೇಕೆ ಹೀಗೆ ಉಸಿರುಕಟ್ಟಿ ಓಡಿ ಬರುತ್ತಿದ್ದಾನೆಂಬುದು ನನಗೆ ಅರ್ಥವಾಗಲಿಲ್ಲ. ಕ್ಲಾಸಿನೊಳಗೆ  ನುಗ್ಗಿ ಬಂದವನೆ ಕೂತಿದ್ದ ಹುಡುಗರಿಗೆ ಎಲ್ಲಾ ಬೇಗ ಎದ್ದೇಳ್ರಿ ಮಾರಾಯ್ರೆ ಎಂದು ರೇಗಿದ. ನಾನು ಏನಾಯಿತು ಭಟ್ಟರೆ ಏನಿದೆಲ್ಲಾ ಎಂದು ಕೇಳಿದೆ. ಅದೆಲ್ಲಾ ಆಮೇಲೆ ಹೇಳ್ತೀನಿ. ನನಗೆ ಟೂರಿಸ್ಟ್ ಗಿರಾಕಿಗಳು ಬಂದಿದ್ದಾರೆ. ಅಲ್ಲಿ ಗಿರಾಕಿಗೆ ಕೂರೋದಕ್ಕೆ ಬೆಂಚಿಲ್ಲ. ಈ ಬೆಂಚೆಲ್ಲಾ ಅರ್ಜೆಂಟಾಗಿ ಬೇಕು ಮಾರಾಯ್ರೆ. ನನ್ನ ಮಂಡೆ ಬಿಸಿ ಆಗ್ತಾ ಉಂಟು ಎಂದು ಅವಸರಿಸುತ್ತಲೇ ಕ್ಲಾಸಿನಲ್ಲಿದ್ದ ಅಷ್ಟೂ ಬೆಂಚುಗಳನ್ನು ಎಳೆಸಿ, ಹೆಗಲಮೇಲೆ ಎತ್ತಿಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗಿಬಿಟ್ಟನು. ನಮ್ಮ ಹುಡುಗರು ಕೂರಲು ಜಾಗವಿಲ್ಲದೆ ಪಿಳಿಪಿಳಿ ಕಣ್ಣು ಬಿಡುತ್ತಾ ಸುಮ್ಮನೆ ನಿಂತುಬಿಟ್ಟವು.ಭಟ್ಟನ ಹೀಗೆ ದಿಢೀರ್ ಜಪ್ತಿ ಕಾರ್ಯಕ್ರಮ ನನ್ನನ್ನು ಕಂಗಾಲು ಮಾಡಿತು. ಅರೆ... ಯಾರಿಗೂ ಕೇರ್ ಮಾಡ್ದೆ ಕ್ಲಾಸಿನೊಳಗೆ ನುಗ್ಗಿ ಕಾಲೇಜಿನ ಬೆಂಚುಗಳನ್ನೇ ಅನಾಮತ್ತಾಗಿ ಹೊತ್ಕೊಂಡು ಹೋದನಲ್ಲ? ಎಲಾ ಇವನಾ! ಇವನೆಂಥ ಹಗಲು ದರೋಡೆಕೋರ. ಇವನ ಹೋಟೆಲಿಗೆ ಗಿರಾಕಿಗಳು ಬಂದರೆ ಅದಕ್ಕೆ ನಮ್ಮ ಕಾಲೇಜಿನ ಬೆಂಚುಗಳೇ ಬೇಕಾ? ಈ ಭಟ್ಟನದು ಅಧಿಕಪ್ರಸಂಗವಾಯಿತು. ನಾನೇ ಹೋಗಿ ವಿಚಾರಿಸುತ್ತೇನೆ ಎಂದು ಬಹಳ ವೀರಾವೇಶದಿಂದ ಅವನ ಹೋಟೆಲಿನ ಕಡೆ ನುಗ್ಗಿ ಹೋದೆ. ಹುಡುಗರು ಹಿಂದಿನಿಂದ ಸಾರ್ ಬ್ಯಾಡ ಬನ್ನಿ ಸಾರ್ ಎಂದು ಕೂಗುತ್ತಲೇ ಇದ್ದರು. ಫುಲ್ ಗರಂ ಆಗಿದ್ದ ನಾನು ಇದ್ಯಾವುದಕ್ಕೂ ಕೇರ್ ಮಾಡದೆ ಅವನ  ತುಂಡು ಹೋಟೆಲಿನೊಳಗೆ ನುಗ್ಗೇ ಬಿಟ್ಟೆ.ಏನು ಭಟ್ಟರೆ, ನೀವು ಮಾಡಿದ್ದು ಸರೀನಾ. ನಮ್ಮ ಕಾಲೇಜಿನ ಬೆಂಚುಗಳನ್ನ ಹೀಗೆ ಹೇಳದೆ ಕೇಳದೆ ಎತ್ತಿಕೊಂಡು ಬಂದಿರಲ್ಲ. ಅದು ಸರ್ಕಾರದ ಆಸ್ತಿ ಅಲ್ಲವೋ? ಯಾವ ಹಕ್ಕಿನಿಂದ ನೀವು ಹೀಗೆ ಎತ್ತಿಕೊಂಡು ಬಂದಿರಿ. ನೀವು ಊರಿವನರಾಗೇ ಹೀಗೆ ಮಾಡಿದರೆ ನಾವು ಪಾಠ ಮಾಡುವುದು ಹೇಗೆ ಹೇಳಿ ಎಂದು ಜೋರು ದನಿಯಲ್ಲಿ ಪ್ರಶ್ನಿಸಿದೆ. ಗಿರಾಕಿಗಳಿಗೆ ದೋಸೆ, ಟೀ ಹಂಚುವುದರಲ್ಲಿ ಬಿಝಿಯಾಗಿದ್ದ ಭಟ್ಟ ನನ್ನ ಕಡೆ ಕೆಕ್ಕರಿಸಿಕೊಂಡು ನೋಡಿ ಯಾವ ಸರ್ಕಾರ ಸ್ವಾಮಿ ನಿಮ್ಮದು, ಯಾವ ಹಕ್ಕಿನ ಮಾತಾಡ್ತಿದ್ದೀರಿ, ನಿಮ್ಮ ಕಾಲೇಜಿನಲ್ಲಿರುವ ಬೆಂಚು ಕುರ್ಚಿ ಎಲ್ಲಾ ಯಾರದ್ದು  ನಿಮಗೆ ಗೊತ್ತುಂಟ? ಓಯ್.. ಇಲ್ಲಿ ಕೇಳಿ, ಅದೆಲ್ಲಾ ನನ್ನಪ್ಪ ಮಾಡಿಸಿದ್ದು. ನಿಮ್ಮ ಶಾಲೆಯಲ್ಲಿರುವ ಫರ್ನಿಚರೆಲ್ಲಾ ನಮ್ಮ ಹೋಟೆಲಿನ ಆಸ್ತಿ ಗೊತ್ತಾಯಿತೋ?ಏನೋ ವ್ಯಾಪಾರ ಕಡಿಮೆ ಉಂಟೂಂತ ಬಿಟ್ಟಿಗೆ ಕೊಟ್ಟರೆ  ಅದು ನಿಮ್ಮ ಸ್ವಂತವಾಗಿ ಬಿಟ್ಟಿತೆ? ಅದು ಯಾವಾಗ ಸ್ವಂತವಾದ್ದು ಸ್ವಾಮಿ? ನಿಮಗೆ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲವೋ? ಇಷ್ಟು ಕಾನೂನು ನೀವು ಮಾತಾಡಿದ ಮೇಲೆ ಇನ್ನು ಕಥೆ ಮುಗಿಯಿತು ಬಿಡಿ. ಏ ಇವನೇ ಆ ಶಾಲೆಗೆ ಹೋಗಿ ಉಳಿದ ಎಲ್ಲಾ ಮೇಜು ಕುರ್ಚಿ ಬಾಚ್ಕೊಂಡು ಬಾರೋ ಮಗ. ಇವನ ಕಾಲೇಜು, ಶಾಲೆ ಎಲ್ಲಾ ಹಳ್ಳಕ್ಕೆ ಬಿದ್ದು ಹೋಗಲಿ. ಇವನ ಪಾಠಕ್ಕೆ ಹುಲಿ ಹಿಡೀಲಿ. ಓಯ್ ಮೇಷ್ಟ್ರೆ ಇಲ್ಲಿ ಕಾಣಿ, ನಮ್ಮ ಹೋಟೆಲ್ಲಿನ ಕಡೆ ಇನ್ನ ಅಪ್ಪೀ ತಪ್ಪೀ ಬಂದೀರಿ. ಹುಷಾರ್... ಪೆಟ್ಟು ಪೆಟ್ಟು ಬೀಳುತ್ತೆ ಹುಷಾರ್! ಎಂದು  ದೋಸೆ ಚುಂಚಕವನ್ನೇ ಕತ್ತಿಯಂತೆ ತೋರಿಸಿ ಅಬ್ಬರಿಸಿ ಬಿಟ್ಟನು.ನಾನು ಗರ ಬಡಿದವನಂತೆ ನಿಂತಿದ್ದೆ. ತುಂಡು ಹೋಟೆಲಿನಲ್ಲಿ ಕೂತಿದ್ದ ಟೂರಿಸ್ಟ್‌ಗಳು ಭಟ್ಟನ ಬೈಗುಳಕ್ಕೆ ತುತ್ತಾಗಿದ್ದ ನನ್ನನ್ನು ಇವನು ಕಳ್ಳನೇ ಇರಬೇಕು ಎನ್ನುವಂತೆ ನೋಡುತ್ತಿದ್ದರು. ನನ್ನ ಸಹಾಯಕ್ಕೆ ಯಾರಾದರೂ ನನ್ನ ವಿದ್ಯಾರ್ಥಿಗಳು ಬಂದಿದ್ದಾರೆಯೇ ಎಂದು ಹಿಂತಿರುಗಿ ನೋಡಿದೆ. ಅವರಾಗಲೇ ರಸ್ತೆಯಲ್ಲಿ ನಿಂತು ಖುಷಿಯಿಂದ ಕ್ರಿಕೆಟ್ ಆಡುತ್ತಿದ್ದರು. ಉಳಿದವರು ಗಂಟು ಮೂಟೆ ಹೊತ್ತುಕೊಂಡು ಗುಳೆ ಹೊರಟವರಂತೆ ರಸ್ತೆ ಕಡೆಗೆ ನಡೆದು ಬರುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry