ನಿರಂತರ ಕಷ್ಟ ಪರಂಪರೆ ಮಧ್ಯೆ ಉಳಿದು ಬೆಳಗಿದ ಸಾಕವ್ವ

7

ನಿರಂತರ ಕಷ್ಟ ಪರಂಪರೆ ಮಧ್ಯೆ ಉಳಿದು ಬೆಳಗಿದ ಸಾಕವ್ವ

Published:
Updated:

ಉಮಾಶ್ರೀ ಅವರನ್ನು ನಾನು ಮೊದಲು ಕಂಡದ್ದು 1980ರ ದಶಕದ ಶುರುವಿನಲ್ಲಿ. ಅದೂ ಆ ಕಾಲದ ರಂಗಭೂಮಿಯ ಅವಿಸ್ಮರಣೀಯ ಪ್ರಸ್ತುತಿಯಾಗಿದ್ದ, ಸಿಜಿಕೆ `ರಂಗಸಂಪದ~ ತಂಡಕ್ಕಾಗಿ ನಿರ್ದೇಶಿಸಿದ `ಒಡಲಾಳ~ದಲ್ಲಿ, ಸಾಕವ್ವನ ಪಾತ್ರದಲ್ಲಿ.ದೇವನೂರರ ಕಥೆಯ ಸತುವು, ಸಿಜಿಕೆಯ ಶಕ್ತ ನಿರ್ದೇಶನ, ಉಮಾಶ್ರೀ ಅಸಾಧಾರಣ ಅಭಿನಯ- ಇವು ಮುಪ್ಪುರಿಗೊಂಡು ಆ ಪ್ರಯೋಗದ ನೆನಪು ಕೇವಲ ನನ್ನ ಮನಸ್ಸಿನಲ್ಲಿ ಮಾತ್ರವಲ್ಲ, ನನ್ನ ತಲೆಮಾರಿನ ಎಲ್ಲರ ಮನಸ್ಸಿನಲ್ಲೂ ಉಳಿದಿದೆ.`ಒಡಲಾಳ~ದ ಹಲವಾರು ಪ್ರದರ್ಶನಗಳು ಕರ್ನಾಟಕದಾದ್ಯಂತ ಜನಮನ್ನಣೆ ಪಡೆದವು. ಕೆಲವು ವರ್ಷಗಳ ನಂತರ ಸಿಜಿಕೆಯ ಇತರ ಕೆಲವು ನಾಟಕಗಳ ಜೊತೆಗೆ `ಒಡಲಾಳ~ದ ಒಂದು ಪ್ರದರ್ಶನ ದೆಹಲಿಯಲ್ಲೂ ನಡೆದು, ಅಲ್ಲಿನ ಪತ್ರಿಕಾ ವಿಮರ್ಶಕರು, ವಿಶೇಷವಾಗಿ ಉಮಾ ವಾಸುದೇವನ್ ಅವರು ಸಿಜಿಕೆ ಅವರ ನಿರ್ದೇಶನವನ್ನೂ ಉಮಾಶ್ರೀ ಅಭಿನಯವನ್ನೂ ಕೊಂಡಾಡಿದ್ದರು.

 

ಸಾಧನೆಯಿಂದ ಸಾಧನೆಯತ್ತ ನಡೆಯತೊಡಗಿದ, ಸಂಸ್ಥೆಗಳನ್ನು ಬಲಪಡಿಸಿ, ಅವನ್ನು ತೊರೆದು, ಕೊನೆಗೆ ತಾನೇ ಒಂದು ಸಂಸ್ಥೆಯಾಗಿ ನಿಂತ, ಮೆಚ್ಚುವವರನ್ನು ಮೆಚ್ಚಿಸಿದ, ಕರುಬುವವರ ಹೊಟ್ಟೆ ಉರಿಗೆ ಸೀಮೆಎಣ್ಣೆ ಸುರಿದ, ಇನ್ನೂ ಯಾವುದೋ ಹೊಸತರ ಹೊಸ್ತಿಲಿನಲ್ಲಿದ್ದಾನಾ ಎಂಬ ಕುತೂಹಲವನ್ನು ಕೆರಳಿಸುತ್ತಲೇ ನಮ್ಮನ್ನಗಲಿ ಹೋದ ಸಿಜಿಕೆ.ಆದರೆ ಈ ಬರಹದ ವಿಷಯ ಅವನಲ್ಲ. ಅವನ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ಸಾಮಗ್ರಿ ನನ್ನಲ್ಲಿದೆ. ಈಗ ನಾನು ಬರೆಯ ಹೊರಟಿರುವುದು ಸಿಜಿಕೆಯ ಚರಿತ್ರಾರ್ಹ ಪ್ರಯೋಗ `ಒಡಲಾಳ~ದ ಕಥಾನಾಯಕಿಯಾಗಿ ಅಭಿನಯಿಸಿ ಸಮಕಾಲೀನ ರಂಗಭೂಮಿಯ ದಂತಕಥೆಯಾಗಿ ಬೆಳೆದು, ಮುಂದೆ ಸಿನಿಮಾ ನಟಿಯಾಗಿ, ಆ ಬಳಿಕ ಸಾಮಾಜಿಕ ಕಾರ್ಯಕರ್ತೆಯಾಗಿ, ಶಾಸಕರಾಗಿ ಬೆಳೆದು ನಿಂತ ಉಮಾಶ್ರೀ ಅವರ ಬಗ್ಗೆ.

ಅವರ ಸಾಕವ್ವನ ಪಾತ್ರವನ್ನು ಮೆಚ್ಚಿಕೊಂಡ ನಾನು, ಅವರ (ಇನ್ನೂ ಪ್ರಕಟವಾಗದ) ಆತ್ಮಚರಿತ್ರೆಯನ್ನೋದಿ ಅದನ್ನು ಅಷ್ಟೇ ಅಪಾರವಾಗಿ ಮೆಚ್ಚಿಕೊಂಡು ಅವರ ಬಗ್ಗೆ ಬರೆಯತೊಡಗಿದ್ದೇನೆ.ಕನ್ನಡದ ಕೆಲವು ಆತ್ಮಚರಿತ್ರೆಗಳು ಬಹು ದೊಡ್ಡ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ದಾಖಲೆಗಳು. ಯಾಕೆಂದರೆ ಚರಿತ್ರೆಯ ಮತ್ತು ಸಂಸ್ಕೃತಿಯ ಲೆಕ್ಕವಿರದಷ್ಟು ವಿವರಗಳು ಯಜಮಾನ ಸಂಸ್ಕೃತಿ ಮತ್ತು ಚರಿತ್ರೆಗಳ ದಾಖಲೆಗಳಲ್ಲಿ ನಾಪತ್ತೆಯಾಗಿರುತ್ತವೆ.

 

ಉದಾಹರಣೆಗೆ ಮರಾಠಿಯಲ್ಲಿ ಯಥೇಚ್ಛವಾಗಿ ಬಂದಿರುವ ದಲಿತ ಆತ್ಮಚರಿತ್ರೆಗಳು ಮತ್ತು ಆತ್ಮ ಚರಿತ್ರಾತ್ಮಕ ಸೃಜನಶೀಲ ಬರಹಗಳು ನಮ್ಮ ಸಮಾಜದ, ನಾವರಿಯದ, ನಮಗೆ ಅಷ್ಟು ರುಚಿಸದ ಅನೇಕ ವಿವರಗಳನ್ನು ತೆರೆದಿಡುತ್ತವೆ.ಗುಜರಾತಿಯಲ್ಲಿ ತೊಂಬತ್ತರ ದಶಕದಲ್ಲಿ ಹೊರಬಂದ ಆದಿವಾಸಿ ಬರಹಗಾರರ ಆತ್ಮಚರಿತ್ರೆಗಳು, ಇತ್ತೀಚೆಗೆ ಹಿಂದಿ ಮತ್ತು ಮಲಯಾಳಿಯಲ್ಲಿ ಪ್ರಕಟವಾಗಿರುವ ಮನೆಗೆಲಸದವರ ಮತ್ತು ವೇಶ್ಯಾವೃತ್ತಿಯವರ ಆತ್ಮಚರಿತ್ರೆಗಳು ಅಷ್ಟೇ ಮೌಲಿಕವಾಗಿವೆ.

 

ತೊಂಬತ್ತರ ದಶಕದಲ್ಲಿ ತುಮಕೂರಿನ ಕುರುಬ ಜನಾಂಗದ ನಾಯಕರಾದ ಎನ್. ಮಲ್ಲಪ್ಪನವರ ಅದ್ಭುತವಾದ ಆತ್ಮಚರಿತ್ರೆಯನ್ನು ಓದಿದ್ದು ನನಗೆ ನೆನಪಿದೆ. ಮುಂದೆ ತುಮಕೂರಿನ ಕವಿ ವೀಚಿ ಅವರೂ ಹಲವು ಆತ್ಮಚರಿತ್ರಾತ್ಮಕ ಬರಹಗಳನ್ನು ಕೊಟ್ಟರು.ಗೆಳೆಯ ಸಿಜಿಕೆಯ ಆತ್ಮಚರಿತ್ರೆಯೂ ಅತ್ಯಂತ ಮಹತ್ವಪೂರ್ಣವಾಗಿದ್ದು 70, 80 ಮತು 90ರ ದಶಕಗಳ ಕರ್ನಾಟಕ ಸಂಸ್ಕೃತಿ ಮತ್ತು ರಂಗಭೂಮಿಗಳ ಅಮೂಲ್ಯ ವಿವರ ಮತ್ತು ಘಟನೆಗಳನ್ನು ದಾಖಲಿಸಿದೆ. ಯಾಕೆಂದರೆ ನಮ್ಮ ಜಾತ್ಯತೀತ ಭಾರತದಲ್ಲೂ ಪ್ರತಿ ಸಮುದಾಯದವರಿಗೆ ತಮ್ಮದೇ ಆದ ಅನುಭವ ಸತ್ಯಗಳಿವೆ.

 

ಹೀಗೆ ಸಾಮೂಹಿಕ ಅನುಭವಗಳ ಚರಿತ್ರೆಯನ್ನು ಸಮಗ್ರವಾಗಿ ಅರ್ಥಮಾಡಿಸುವುದರಲ್ಲಿ ಯಶಸ್ವಿಯಾಗಿರುವ ಆತ್ಮಚರಿತ್ರೆಗಳ ಪಟ್ಟಿಗೆ ಸೇರಬೇಕಾದ ಇನ್ನೊಂದು ಅಮೂಲ್ಯ ಕೃತಿ ಬಿ. ಗಣಪತಿ ಅವರು ನಿರೂಪಿಸಿರುವ, ಶಿವಮೊಗ್ಗೆಯ ಅಕ್ಷತಾ ಅವರು ಪ್ರಕಟಿಸಲಿರುವ ಉಮಾಶ್ರೀ ಅವರ ಆತ್ಮಚರಿತ್ರೆ.ಉಮಾಶ್ರೀ ಅವರ ಆತ್ಮಕಥನ ಹಿಂದುಳಿದ ಜನಾಂಗದ ಮಹಿಳೆಯೊಬ್ಬರ ಅಪ್ರತಿಹತ ಹೋರಾಟ ಮತ್ತು ಸಾಧನೆಗಳ ಕಥನ. ನಾವು  ಸ್ತ್ರೀ ಕಥನಗಳನ್ನು ಸ್ತ್ರೀವಾದಿ ಚೌಕಟ್ಟಿನಲ್ಲೂ, ಹಿಂದುಳಿದ ಜನಾಂಗದವರ ಕಥನಗಳನ್ನು ಶ್ರೇಣೀಕೃತ ಜಾತಿ ಶೋಷಣೆಯ ಸುತ್ತುನೆಲೆಯಲ್ಲಿ ಇಟ್ಟು ನೋಡುತ್ತೇವೆ.

 

ಈ ಕ್ರಮ ಸಮರ್ಥನೀಯವೂ ಆಗಿದೆ. ಆದರೆ ಸ್ತ್ರೀಯರ ಮತ್ತು ಹಿಂದುಳಿದ ಜನಾಂಗದವರನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಾಲದು ಎನ್ನುವ ಸತ್ಯವನ್ನು ಉಮಾಶ್ರೀ ಆತ್ಮಕಥೆ ನಮಗೆ ಮನದಟ್ಟು ಮಾಡಿಕೊಡುತ್ತದೆ.ಉಮಾಶ್ರೀ ತಮ್ಮ ಬಹುಮುಖಿ ಬದುಕಿನ ಕಥೆಯನ್ನು ಇಲ್ಲಿ ಬಿಡಿಸುವುದು ಬುದ್ಧಿವಂತರು ತೀರ್ಮಾನಿಸಿದ ನಿಲವುಗಳ ನೆಲೆಗಟ್ಟಿನ ಮೇಲಲ್ಲ. ತಮ್ಮ ಸ್ವಂತ ಅನುಭವಲೋಕದ ನೇರ ನಿರೂಪಣೆ ಅವರ ಗುರಿ.ಇದರಲ್ಲಿ ವ್ಯಾಖ್ಯಾನ, ವಿವರಣೆ, ವಿಶ್ಲೇಷಣೆಗಳ ಅಂಶ ಗೌಣ. ಆದ್ದರಿಂದಲೇ ಈ ಕೃತಿ ಹಿಂದುಳಿದ ಸಮುದಾಯಗಳ, ಬಡ ಕುಟುಂಬಗಳ ಮಹಿಳೆಯ ಅನುಭವಗಳನ್ನು ಅರಿಯುವಲ್ಲಿ ನಮಗೆ ಅಪರೂಪದ ಒಳನೋಟಗಳನ್ನು ನೀಡುತ್ತದೆ.ಉಮಾಶ್ರೀ ಹುಟ್ಟಿದ್ದು ನೊಣವಿನಕೆರೆಯ ಒಂದು ನೇಕಾರ ಕುಟುಂಬದಲ್ಲಿ. ಹುಟ್ಟಿನಿಂದಲೇ ಶುರುವಾದವು ಅವರ ಕಷ್ಟಗಳು. ತಂದೆ,ತಾಯಿ ಕಾಲವಾಗಿ ಸಂಬಂಧಿಕರ ಮನೆಯಲ್ಲಿ (ಬೆಂಗಳೂರಿನಲ್ಲಿ) ಬೆಳೆದು ಹರೆಯವನ್ನು ಪಡೆಯುವ ಮೊದಲೇ ಮದುವೆಗೆ ಗುರಿಯಾದರು.ಮದುವೆಯೆಂಬುದು ಅವರಿಗೊಂದು ನರಕವಾಗಿ ಮಾರ್ಪಟ್ಟಿತು. ಎರಡು ಮಕ್ಕಳನ್ನು ಹಡೆದರೂ ಕಾಟ ತಡೆಯಲಾರದೆ ಗಂಡನ ಮನೆ ತೊರೆಯಬೇಕಾಗಿ ಬಂತು.

 

ಸಾಕುತಾಯ ಮನೆಯಲ್ಲಿ ಆಶ್ರಯ ಪಡೆದರೂ ಸುಖ ಸಿಗಲಿಲ್ಲ. ಸಮಾಜನಿಂದನೆ, ದೂಷಣೆ, ಬಡತನ, ಹಸಿವುಗಳ ನಡುವೆ ತಮ್ಮ ಮಕ್ಕಳನ್ನು ಅವರು ಪೊರೆದು ಓದಿಸಿದ್ದು ಒಂದು ರೋಚಕ ಇತಿಹಾಸ.

 

ಅನಿರೀಕ್ಷಿತ ಘಟನೆಗಳು ಅವರನ್ನು ಅಭಿನಯ ವೃತ್ತಿಗೆ ತಳ್ಳಿದವು. ಅಲ್ಲಿಯೂ ಸುಖಕ್ಕಿಂತ ಸವಾಲುಗಳೇ ಹೆಚ್ಚಿಗೆ ಬಂದವು. ವೃತ್ತಿ ನಾಟಕಗಳಿಂದ ಶುರು ಮಾಡಿ, ಆಧುನಿಕ ನಾಟಕಗಳಲ್ಲಿ ಅಭಿನಯಿಸತೊಡಗಿ, ಕ್ರಮೇಣ ಸಿನಿಮಾಲೋಕವನ್ನು ಹೊಕ್ಕರು.ತಮಗೇ ಗೊತ್ತಿಲ್ಲದಂತೆ `ಗ್ಲಾಮರ್ ಗರ್ಲ್~ ಆಗಿ ಮಾರ್ಪಡಿಸಲ್ಪಟ್ಟು, ಕೊನೆಗೆ ಗಂಭೀರ ನಟಿಯಾಗಿಯೂ ಹೆಸರುವಾಸಿಯಾಗಿ, ಆ ನಂತರ ಸಾಮಾಜಿಕ ಮತ್ತು ರಾಜಕೀಯ ಪಕ್ಷಗಳಲ್ಲೂ ಪದಾರ್ಪಣ ಮಾಡಿದ ಅವರ ಸ್ವಾರಸ್ಯಕರವಾದ ಬದುಕು ಈ ಕೃತಿಯ ಹುರುಳು.ನಿರೂಪಕ ಗಣಪತಿ ಅವರು ಉಮಾಶ್ರೀ ಅವರ ಮಾತುಗಳಲ್ಲೇ ಹಿಡಿದಿಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ನಿರೂಪಣೆಯ ಸಹಜತೆ ನಮ್ಮನ್ನು ಸೆಳೆಯುತ್ತದೆ.

ಉಮಾಶ್ರೀ ಅವರ ಕಥೆಯನ್ನು ಓದಿ ಅದರ ಸರಳ ಸತ್ಯ ಸೌಂದರ್ಯವನ್ನು ನೇರವಾಗಿ ಸವಿಯುವುದು ಅಗತ್ಯವಾಗಿರುವುದರಿಂದ ಅವರ ಬದುಕಿನ ಕತೆಯ ತಾತ್ಪರ್ಯ ಕೊಡಲು ನಾನಿಲ್ಲಿ ಹೊರಡುತ್ತಿಲ್ಲ.ತನ್ನ ಕಥೆಯನ್ನು ಹೇಳಿಕೊಳ್ಳುವ ಅವರ ಪ್ರತಿಭಾವಂತ, ಧೀಮಂತ ಮನಸ್ಸಿನ ಕೆಲವು ಲಕ್ಷಣಗಳನ್ನು ಮಾತ್ರ ಗುರುತಿಸಲು ಪ್ರಯತ್ನಿಸುತ್ತೇನೆ.

ಅವರ ಕಥನದಲ್ಲಿ ಎರಡು ಗಾದೆಗಳು ಮತ್ತೆ ಮತ್ತೆ ಬಂದು ಹೋಗುತ್ತವೆ.ಮೊದಲನೆಯದು: `ಒಂದು ನಗುವಿನ ಹಿಂದೆ ನೂರು ನೋವುಗಳಿರುತ್ತವೆ~ ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು.

 

ಈ ಗಾದೆಗಳು ಲೋಕಾನುಭವದ ಹರಳುಗಟ್ಟಿದ ಉಕ್ತಿರೂಪಗಳೆಂಬುದು ದಿಟವಾದರೂ, ಅವು ಹೊಳೆಯಿಸುವ ತಥ್ಯಗಳು ಕಾಲ-ದೇಶ-ಲಿಂಗ-ಸಮುದಾಯಬದ್ಧವಾಗಿರುತ್ತವೆ. ಗಂಡು ಸಮಾಜದಲ್ಲಿ ಗಂಡು ನಿಯಮಗಳಿಗನುಸಾರ `ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗೆ~ ಉಸಿರು ಹಿಡಿದುಕೊಂಡು ಬದುಕಬೇಕಾಗಿದ್ದ ಕಾಲದಲ್ಲಿ, ಯಾವುದೇ ತೆರನ ಕ್ರಾಂತಿಗಳ ಸೂಚನೆಗಳೂ ಹುಟ್ಟದ ಕಾಲದಲ್ಲಿ ಈ ತೆರನ ವಾಕ್ಯಗಳು ಒಂದು ಮಟ್ಟಿಗೆ ನೆಮ್ಮದಿಯನ್ನು ಕೊಟ್ಟಿರಬಹುದು.

 

ಜನಪದ ಕಾವ್ಯದಲ್ಲಿ ಹೆಣ್ಣಿನ ಅಪರಿಹಾರ್ಯವಾದ ಗೋಳನ್ನು ಸೂಚಿಸುವ ಅನೇಕ ಗಾದೆಗಳನ್ನು, ಹೇಳಿಕೆಗಳನ್ನು ಕಾಣಬಹುದು. ಉಮಾಶ್ರೀ ಅವರ ಮನದಲ್ಲೂ ಇದೇ ಭಾವನೆ ಇರುವುದರಿಂದಲೇ ಈ ವಾಕ್ಯದ ಪುನರುಕ್ತಿಯಾಗುತ್ತದೆ.

 

ಅವರ ಪರಿಸ್ಥಿತಿ ಮತ್ತು ವಾತಾವರಣಗಳು ಹೆಣ್ಣಿಗೆ ಅಡ್ಡಬರುವ ಕಷ್ಟಕೋಟಲೆಗಳ ಭಯಾನಕ ರೂಪವಾಗಿವೆ. ಆದರೆ ಗಂಡಸರು ಎಷ್ಟು ನೀಚರು, ಹಳೆಕಾಲದ ಗೂಸಲು ಹೆಣ್ಣು ಮಕ್ಕಳು ಅದೆಷ್ಟು ಕಠಿಣರು ಎಂಬುದಕ್ಕೆಲ್ಲ ಯಥೇಚ್ಚ ಪುರಾವೆಗಳು ಉಮಾಶ್ರೀ ಬದುಕಿನಲ್ಲಿ ಕಾಣಸಿಕ್ಕರೂ, ಸಂಕಲ್ಪ ಮತ್ತು ಪ್ರಯತ್ನಬಲದಿಂದ ಆ ಕೋಟಲೆಗಳ ಕೋಟೆಯನ್ನು ಹೇಗೆ ದಾಟಿದರೆಂಬುದರ ಹೃದ್ಯ ಚಿತ್ರಣಗಳಿಂದ  ಈ ಕೃತಿ ಅನರ್ಘ್ಯವಾಗಿದೆ.ಈ ಪುಸ್ತಕದಲ್ಲಿ ಪುನರುಕ್ತಿಗೊಳ್ಳುವ ಇನ್ನೊಂದು ಗಾದೆ: `ಹೆಣ್ಣಿಗೆ ಹೆಣ್ಣೇ ಶತ್ರು~ ಹೆಣ್ಣಿನ ತುಳಿತದ ಕಠೋರ ಸತ್ಯ ಗಂಡಿನ ಆಳ್ವಿಕೆಯ ಸಮಾಜದ ತಳಾದಿಯೆಂಬುದು ನಿರ್ವಿವಾದ. ಆದರೆ ಆ ಸಮಾಜ ವ್ಯವಸ್ಥೆಯಲ್ಲಿ ಆ ಶೋಷಣಾ ಪ್ರಕಾರಗಳಲ್ಲಿ ಹೆಂಗಸರ ಪಾತ್ರ ಇಲ್ಲವೇ ಇಲ್ಲ ಅನ್ನಲು ಬರುವುದಿಲ್ಲ.

 

ನನ್ನ ಸ್ವಂತ ಅನುಭವದಿಂದಲೇ ಹೇಳಬೇಕೆಂದರೆ ನನ್ನ ಅಜ್ಜಿ ಮತ್ತು ಸೋದರತ್ತೆ ನನ್ನ ತಂದೆಯವರ ಜೊತೆ ಕೈಗೂಡಿಸಿ ಹೇಗೆ ನಮ್ಮಮ್ಮನನ್ನು ಗೋಳುಹೊಯ್ದುಕೊಂಡರೆಂಬುದು ಇನ್ನೂ ನನ್ನ  ಕಣ್ಣಿಗೆ ಕಟ್ಟಿದಂತಿದೆ.

 

ಇಚ್ಛಾಶಕ್ತಿಯ, ವಿವೇಕದ ಕೊರತೆಯಿರುವ ಹೆಂಗಸರು-ಅವರಲ್ಲಿ ಒಳ್ಳೆಯವರು ಅನಿಸಿಕೊಂಡವರೂ ಕೂಡ- ಹೇಗೆ ಪುರುಷಪ್ರಧಾನ ಮೌಲ್ಯಗಳ ಠೇಕೇದಾರರಾಗಿ ಬಿಡುತ್ತಾರೆ! ಈ ಅನುಭವ ಸತ್ಯವನ್ನು ಉಮಾಶ್ರೀ ತಮ್ಮ ಕಥೆಯಲ್ಲಿ ಬಹಳ ಚೆನ್ನಾಗಿ ತರುತ್ತಾರೆ.

 

ಹೆಂಗರುಳಿನವರಾದ ಅವರ ಸಾಕುತಾಯಿ ಮತ್ತು ಅತ್ತೆ ಈ ಇಬ್ಬರೂ ಗಂಡುಮೌಲ್ಯಗಳ ನೇರ ಅಥವಾ ಪರೋಕ್ಷ ಏಜೆಂಟುಗಳಾಗಿ ತಮಗೆ ಕಷ್ಟ ನೀಡಿದ ಬಗೆಯನ್ನು ಸಿಟ್ಟು ಸೆಡವುಗಳಿಲ್ಲದೆ ಉಮಾಶ್ರೀ ನಿರೂಪಿಸುವ ಬಗೆ ಅನನ್ಯವಾದುದು.ಉಮಾಶ್ರೀ ಅವರ ಬದುಕಿನ ಶೋಷಣಾ ವಿವರಗಳು ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಅದೆಷ್ಟೋ ಕೋಟಿ ಮಹಿಳೆಯರ ಬದುಕಿನಲ್ಲಿ ಘಟಿಸುತ್ತಿರಬಹುದು. ಆದರೆ, ಅವರೆಲ್ಲರ ಬದುಕಿನಲ್ಲಿ ಉಮಾಶ್ರೀ ಬದುಕಿನಲ್ಲಾದ ಪವಾಡ ನಡೆಯುತ್ತಿಲ್ಲ.

 

ಈ ಪವಾಡವನ್ನು ಸಂಭವ ಮಾಡುವಲ್ಲಿ ಹಲವು ಮಂದಿ ಸ್ತ್ರೀ-ಪುರುಷರು ಅವರಿಗೆ ನೆರವಾಗಿದ್ದಾರೆ, ನಿಜ. ಆದರೆ, ಎಲ್ಲಕ್ಕೂ ಮುಖ್ಯ ಕಾರಣ ಉಮಾಶ್ರೀ ಅವರ ಇತ್ಯಾತ್ಮಕ ಸಂಕಲ್ಪ ಮತ್ತು ಪ್ರಯತ್ನದ ಫಲ. `ಸಾವಿರ ಸಿಡಿಲುಗಳು ಸಿಡಿಯಲಿ, ಕೋಟಿ ಮಿಂಚುಗಳು ಮಿಂಚಲಿ, ಅರಳಲೇ ಬೇಕಾಗಿರುವ ಹೂವುಗಳು ಅರಳಿಯೇ ತೀರುವುವು~ ಎಂಬ ಉರ್ದು ಕವಿ ಸಾಹಿರ್ ಲೂಧಿಯಾನ್ವಿ ಅವರ ಆಶಾವಾದಿ ಸಾಲಿನ ಮೂರ್ತರೂಪದಂತಿದೆ ಉಮಾಶ್ರಿ ಕಥೆ.ತನ್ನನ್ನು ಕೆಟ್ಟದಾಗಿ ನಡೆಸಿಕೊಂಡ ಜನಗಳ ಬಗ್ಗೆ, ಜಗತ್ತಿನ ಬಗ್ಗೆ ತಿಲಮಾತ್ರವೂ ಕಹಿ ಭಾವನೆ ತಾಳದಿರುವುದು ಉಮಾಶ್ರೀ ಅವರ ಇನ್ನೊಂದು ಅನುಕರಣೀಯ ಗುಣ. ಅವರು ತನ್ನನ್ನು ಸಾಕಿದವರಿಗೆ, ಗಂಡನ ಮನೆಯವರಿಗೆ ಸಹಾಯಮಾಡುತ್ತಲೇ ಬಂದಿದ್ದಾರೆ.ತಮ್ಮಿಬ್ಬರು ಮಕ್ಕಳನ್ನು ಎಲ್ಲ ಉತ್ಪಾತಗಳಲ್ಲೂ ಉಡಿಗೆ ಕಟ್ಟಿಕೊಂಡು ತಟ ಹಾಯಿಸಿ ತಮಗೆ ಸಿಕ್ಕಿದ್ದಕ್ಕಿಂತಲೂ ಉತ್ತಮ ಬದುಕನ್ನು ಅವರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟಕಾಲದಲ್ಲಿ ತನ್ನ ನೆರವಿಗೆ ಬರದ ತಮ್ಮ ದೇವಾಂಗ ಸಮಾಜದ ಹಿತಕ್ಕಾಗಿ ಶಾಸಕಿಯಾದ ಮೇಲೆ ಬಹುವಾಗಿ ಪ್ರಯತ್ನಿಸಿದ್ದಾರೆ.ಪುರುಷ ಪ್ರಧಾನ ಯುಗದಲ್ಲಿ ಹೆಣ್ಣಿನ ಎರಡು ಪ್ರತಿಮೆಗಳು ಪ್ರಚುರವಾಗಿದ್ದವು. ಅಲ್ಲಿ ಹೆಣ್ಣೆಂದರೆ ಗಂಡಸಿಗೊಂದು ಪಾಪಕೂಪ ಅಥವಾ ಪುಣ್ಯದ ಯಜ್ಞಕುಂಡ. ಸಮಾಜ ಸ್ತ್ರೀಮೌಲ್ಯ ಪುರುಷ ಮೌಲ್ಯಗಳ ರಣರಂಗವಾಗಿರುವ ಇಂದು ಹೆಣ್ಣಿನ ಯಾವ ಮಾದರಿಗಳು ಚಾಲ್ತಿಯಲ್ಲಿವೆ? ಇದರಲ್ಲೂ ಎರಡು ಪ್ರಧಾನ ಬಗೆಗಳಿವೆ.

 

ಒಂದರ ಪ್ರಕಾರ ಹೆಣ್ಣು ಮುಗ್ಧ ಬಲಿಪಶು. ಇನ್ನೊಂದರ ಪ್ರಕಾರ ಹೆಣ್ಣು ಗಂಡಸರಿಗೆ ಚಳ್ಳೆಹಣ್ಣು ತಿನ್ನಿಸಿ ಯಶಸ್ಸು ಗಳಿಸಿಕೊಳ್ಳುವ ಸೃಜನಾತ್ಮಕ ಜೀವಿ. ಈಚೆಗೆ ಬಹಳ ಚರ್ಚೆಯಲ್ಲಿರುವ `ಡರ್ಟಿ ಪಿಕ್ಚರ್~ ಸಿನಿಮಾದಲ್ಲಿ ಈ ಎರಡು ಪ್ರತಿಮೆಗಳ ಮಿಶ್ರಣವಿದ್ದರೂ ಅಲ್ಲಿ ಕೊನೆಗೆ ನಿಲ್ಲುವುದು ಬಲಿಪಶುವಿನ ಚಿತ್ರಣವೇ.

 

ಈ ಸೂಕ್ಷಾಂಶದ ಉಲ್ಲೇಖ ಆ ಸಿನಿಮಾದ ಅವಿಮರ್ಶಾತ್ಮಕ ಕುರುಡು ಪ್ರಶಂಸಾಪ್ರಧಾನ ಚರ್ಚೆಯಲ್ಲಿ ನಾಪತ್ತೆ. ಬದುಕಿದ್ದಾಗ ಸಿಲ್ಕ್ ಸ್ಮಿತಾ ಅವರನ್ನು ತನ್ನ ಕರಾಳಕಾಮುಕತೆಯನ್ನು ತಣಿಸುವ ವಸ್ತುವನ್ನಾಗಿ ಬಳಸಿಕೊಂಡು ಆಕೆ ಸೋತು ಸುಣ್ಣವಾಗಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅಯ್ಯೋ ಪಾಪ ಅಂತ ಕೈತೊಳೆದುಕೊಂಡ ಆಷಾಢಭೂತಿ ಸಮಾಜ ನಮ್ಮದು.

 

ಅದರ ಹಿಡಿತದಲ್ಲಿ ಬದುಕುತ್ತಿರುವವರಿಗೆ  `ಡರ್ಟಿ ಪಿಕ್ಚರ್~ ಮೆಚ್ಚುಗೆಯಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಉಮಾಶ್ರಿ ದುರಂತಕ್ಕೊಳಗಾದ ನಟಿಯರ ಯಾದಿಗೆ ಸೇರಿ ಬಲಿಪಶುವಾಗಲಿಲ್ಲ. ಅಥವಾ ತನ್ನನ್ನು ಹಿಂಸಿಸಿದವರನ್ನು ಚಿತ್ರಹಿಂಸೆಗೆ ಗುರಿಪಡಿಸಿ ಸ್ಯಾಡಿಸ್ಟ್ ಖುಷಿಯನ್ನೂ ಪಡೆಯಲಿಲ್ಲ.

 

ಅಪಾರ ಕಷ್ಟಗಳ ನಡುವೆ ತಾವೂ ಉಳಿದರು, ಬೆಳೆದರು, ಇತರರನ್ನೂ ಉಳಿಸಿದರು, ಬೆಳೆಸಿದರು. ಅವರನ್ನು ಮೊದಲ ಬಾರಿ ಕೀರ್ತಿಶಿಖರಕ್ಕೇರಿಸಿದ ದೇವನೂರರ ಸಾಕವ್ವನ ಪಾತ್ರದ ಹಿರಿಮೆಯೂ ಇದೇ ತಾನೆ?ತನ್ನನ್ನು ತಾನೇ ಸಾಕಿಕೊಂಡು ಪ್ರತಿ ಫಲಾಪೇಕ್ಷೆಯಿಲ್ಲದೆ ಇತರರನ್ನೂ ಸಾಕುವ ಸಾಕವ್ವನಾಗಿಯೇ ಉಮಾಶ್ರೀ ತಮ್ಮ ಕಥೆಯ ಮೂಲಕ ನಮಗೆ ಸ್ಫೂರ್ತಿ ನೀಡುವುದು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.i)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry