ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!

ಸೋಮವಾರ, ಮೇ 20, 2019
32 °C

ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!

ನಾಗೇಶ ಹೆಗಡೆ
Published:
Updated:
ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!

‘ವಿಶ್ವ ಆವಾಸ ದಿನ’ ವನ್ನು ಈ ತಿಂಗಳಿಡೀ ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಬೇಕಾಗಿ ವಿಶ್ವಸಂಸ್ಥೆ ಕರೆ ನೀಡಿದೆ. ಏನು ಹಾಗಂದರೆ?

ಇರ್ಮಾ ಎಂಬ ಚಂಡಮಾರುತದ ಸಂಕ್ಷಿಪ್ತ ಇತಿಹಾಸ ಹೀಗಿದೆ: ಈಚೆ ಆಗಸ್ಟ್ 30ರಂದು ಆಫ್ರಿಕದ ಅಂಚಿನ ಸಣ್ಣ ದ್ವೀಪದ ಬಳಿ ಅದು ಚಿಕ್ಕದಾಗಿ ಅವತರಿಸಿತು. ಕ್ರಮೇಣ ಬೆಳೆಯುತ್ತ ಸುತ್ತುತ್ತ ಸಾಗುತ್ತ ಅಟ್ಲಾಂಟಿಕ್ ಸಾಗರದಲ್ಲಿ ಹಾವಿನಂತೆ ಚಲಿಸುತ್ತ, ವಾರದ ನಂತರ ಭೀಕರ ಸ್ವರೂಪ ತಾಳಿ ಹಿಂದಿನ ಎಲ್ಲ ದಾಖಲೆಗಳ ಚಿಂದಿ ಉಡಾಯಿಸುತ್ತ, ಕೆರಿಬಿಯನ್ ದ್ವೀಪಗಳನ್ನು ಚೆಂಡಾಡುತ್ತ, ಸೆಪ್ಟಂಬರ್ 11ರಂದು ಹೆಡೆಯೆತ್ತಿ ಅಮೆರಿಕದ ಫ್ಲಾರಿಡಾಕ್ಕೆ ಅಪ್ಪಳಿಸಿತು. ಅಷ್ಟು ದೂರದವರೆಗೆ (1700 ಕಿ.ಮೀ) ಚಲಿಸಿದ ಅಷ್ಟೊಂದು ಶಕ್ತಿಶಾಲಿ ಚಂಡಮಾರುತ ಇದುವರೆಗೆ ಬೇರೊಂದು ಇರಲಿಲ್ಲ. ಮನುಷ್ಯ ನಿರ್ಮಿಸಿಕೊಂಡಿದ್ದ ಸಕಲ ತಾಂತ್ರಿಕ ಸೌಕರ್ಯಗಳನ್ನೂ ಅದು ಕಿತ್ತು ಕಬಳಿಸಿ ಬಿಸಾಕುತ್ತ ಹೋದಂತೆಲ್ಲ, ಅದರಿಂದ ಬಚಾವಾಗಲು ಮನುಷ್ಯರು ತೋರಿದ ತಾಂತ್ರಿಕ ಸಾಹಸಗಳೂ ಅಷ್ಟೇ ಅಮೋಘವಾಗಿದ್ದವು (ಅದನ್ನು ಎದುರಿಸುವ ಅಥವಾ ಪಳಗಿಸುವ ಪ್ರಶ್ನೆಯೇ ಇರಲಿಲ್ಲ, ಓಡುವುದೊಂದೇ). ಅದು ಸಾಗಿ ಬರುವ ಮಾರ್ಗವನ್ನು ಮೊದಲೇ ನಿಖರವಾಗಿ ಲೆಕ್ಕ ಹಾಕಿ, ಏಳು ರಾಷ್ಟ್ರಗಳಲ್ಲಿ ತುರ್ತುಸ್ಥಿತಿ ಘೋಷಿಸಿ, ಜನರನ್ನು ಗುಳೆ ಹೊರಡಿಸಿದ ಪರಿ ಅನನ್ಯವಾಗಿತ್ತು. ಯುಎಸ್‌ಎಯಲ್ಲಂತೂ ಎರಡೇ ದಿನಗಳಲ್ಲಿ 20 ಲಕ್ಷ ಜನರನ್ನು, ಸಾಕುಪ್ರಾಣಿಗಳನ್ನು, ಜೈಲಿನ ಕೈದಿಗಳನ್ನೂ ಆಸ್ಪತ್ರೆಗಳ ತುರ್ತುನಿಗಾ ಕಕ್ಷೆಗಳಲ್ಲಿನ ರೋಗಿಗಳನ್ನೂ ಅವರ ಜೀವರಕ್ಷಕ ಕೊಳವೆಗಳ ಸಮೇತ ಖಾಲಿ ಮಾಡಿಸಿದ್ದು; ಹೆದ್ದಾರಿಗಳಲ್ಲಿ ಎಂಟು ಲೇನ್‌ಗಳ ಜಾಗ ಸಾಕಾಗದೆ ಪಕ್ಕದ ಶೋಲ್ಡರ್ (ಅಗಲದ ಫುಟ್‌ಪಾತ್)ಗಳಲ್ಲೂ ವಾಹನಗಳ ದೌಡಾಟಕ್ಕೆ ಅನುವು ಮಾಡಿಕೊಟ್ಟಿದ್ದು; ಸಂತ್ರಸ್ತರಿಗೆಲ್ಲ ಪರ್ಯಾಯ ಆಸರೆ, ಅನ್ನ, ಔಷಧ ಒದಗಿಸಿದ್ದು; ಈ ಅವಾಂತರದಲ್ಲೂ ಕ್ಯೂಬಾದ ಧೀರಧೀರೆಯರು ಸಮುದ್ರದಲ್ಲಿ ಮುಳುಗು ಹಾಕಿ ಅಲ್ಲಿನ ಡಾಲ್ಫಿನ್‌ಗಳನ್ನು ಹೆಲಿಕಾಪ್ಟರ್‌ಗಳಲ್ಲಿ ಸಾಗಿಸಿ ಈಜುಗೊಳಗಳಲ್ಲಿ ಬಚ್ಚಿಟ್ಟು ಬಚಾವು ಮಾಡಿದ್ದು ಎಲ್ಲವೂ ರೋಚಕ. ಶ್ವೇತರು, ಅಶ್ವೇತರು, ಯಹೂದ್ಯರು, ಮುಸ್ಲಿಮರು ಎಲ್ಲರೂ ಪರಸ್ಪರ ಕೈ ಕೂಡಿಸಿ ಉತ್ಪಾತದಿಂದ ಬಚಾವಾಗಿದ್ದು; ಬಡವರು, ಲಕ್ಷಾಧೀಶರು, ಕಮ್ಯೂನಿಸ್ಟರು, ನಾತ್ಸೀವಾದಿಗಳು, ನಿರೀಶ್ವರವಾದಿಗಳು ಎಲ್ಲರೂ ತಾತ್ಕಾಲಿಕ ಶೆಡ್‌ಗಳಲ್ಲಿ ಏಕತ್ರ ಮುದುರಿದ್ದು... ಶಿಕ್ಷಕರಿಲ್ಲದಾಗ ಕ್ಲಾಸಿನಲ್ಲಿ ಭಾರೀ ಗಲಾಟೆ ಮಾಡುವ ಮಕ್ಕಳು ಹೆಡ್‌ಮಾಸ್ಟರರ ಹೆಜ್ಜೆ ಸದ್ದು ಕೇಳಿ ಗಪ್‌ಚಿಪ್ ಆದಂತೆ.

ವಿಮಾನ ನಿಲ್ದಾಣಗಳು, ಬಂದರುಗಳು, ಕ್ರೀಡಾಂಗಣಗಳು, ಡಿಸ್ನಿ ಉದ್ಯಾನ, ಕೆನ್ನೆಡಿ ಬಾಹ್ಯಾಕಾಶ ನಿಲ್ದಾಣ- ಹೀಗೆ ಅಲ್ಲಿಇಲ್ಲಿ ಇರ್ಮಾ ನಡೆಸಿದ ನಂಗಾನಾಚ್ ಕುರಿತು ಆ ವಾರವಿಡೀ ಧಿಗ್ಗೆದ್ದು ಬರುತ್ತಿದ್ದ ಸಾವಿರ ಸುದ್ದಿಗಳ ಮಧ್ಯೆ ಶತಕೋಟ್ಯಧೀಶ ಸರ್ ರಿಚರ್ಡ್ ಬ್ರಾನ್ಸನ್ ಎದ್ದು ಕಾಣುವಂತಾದ. ಆತನ ಖಾಸಗಿ ದ್ವೀಪ ‘ನೆಕರ್ ಐಲ್ಯಾಂಡ್’ ಮೇಲೆಯೇ ಇರ್ಮಾ ಸಾಗಿ ದೂಳೀಪಟ ಮಾಡಿ ಹೋಯಿತು. ಆದರೆ ‘ನಾವೆಷ್ಟು ಬೆಚ್ಚಗಿದ್ದೇವೆ, ವೈನ್ ಇಡುವ ನೆಲಮಾಳಿಗೆಯಲ್ಲಿ ನಿಶ್ಚಿಂತರಾಗಿ’ ಎಂಬರ್ಥದಲ್ಲಿ ಆತ ತನ್ನ ಕುಟುಂಬದ ಚಿತ್ರ ಹಾಕಿ ಟ್ವೀಟ್ ಮಾಡಿದ. ಮಹಾ ಧೈರ್ಯವಂತ, ಪರಮ ಸಾಹಸಿ, 400ಕ್ಕೂ ಹೆಚ್ಚು ಕಂಪನಿಗಳ ಒಡೆಯ, ಅಪ್ರತಿಮ ಚಾಣಾಕ್ಷ, ಧಾರಾಳ ದಾನಿ ಎಂಬುದಾಗಿ ಹೊಗಳುಭಟ್ಟರ ಕಣ್ಮಣಿಯಾಗಿರುವ ಆತ ಈ ಟ್ವೀಟ್‌ನಿಂದಾಗಿ ಲೇವಡಿಗೆ ಗುರಿಯಾದ. ಈತನ ಕಾರ್ಪೊರೇಟ್ ದುಸ್ಸಾಹಸಗಳಿಂದಾಗಿಯೇ ಶ್ರಮಿಕರ ಹಣವೆಲ್ಲ ಶ್ರೀಮಂತರತ್ತ ಹರಿದಿದ್ದು, ಸಾರ್ವಜನಿಕ ಸೊತ್ತುಗಳು ಈತನ ಖಾಸಗಿ ಕಂಪನಿಗಳ ಪಾಲಾಗಿದ್ದು, ಈತನ ‘ವರ್ಜಿನ್ ಗೆಲಾಕ್ಟಿಕ್’ ವಿಮಾನ ಕಂಪನಿಗಳ ಏರು ಭರಾಟೆಯಿಂದಾಗಿಯೇ (ತನ್ನ ಐದನೆಯ ವಿಮಾನ ಕಂಪನಿಯ ಉದ್ಘಾಟನೆಯ ಸಂದರ್ಭದಲ್ಲಿ ಈತ ತನ್ನ ಅಂಡರ್‌ವೇರ್ ಮೇಲೆ ‘ಖಡಕ್ ಸ್ಪರ್ಧೆ’ ಎಂದು ಬರೆದು ಮಾಧ್ಯಮಗಳೆದುರು ಪ್ರದರ್ಶಿಸಿದ್ದ) ವಾಯುಮಂಡಲದ ಮಾಲಿನ್ಯ ಅತಿಯಾಗಿ, ಈಗಿನ ಈ ಚಂಡಮಾರುತಗಳ ಹಾವಳಿಗೆ ಈತನ ಕೊಡುಗೆ ಗಣನೀಯವಾಗಿದ್ದು ಮತ್ತೆ ಮುನ್ನೆಲೆಗೆ ಬಂತು. ಈ ಎಲ್ಲ ಭಾನಗಡಿಗಳನ್ನು ವರ್ಣಿಸಲು ‘ವರ್ಜಿನ್ ಗೆಲಾಕ್ಟಿಕ್’ ಎಂಬ ಎರಡೇ ಪದ ಸಾಕು ಎಂದು ಸಮಾಜ ವಿಜ್ಞಾನಿ ಸಾಲ್ವಟೋರ್ ಬಾಬೊನಿಸ್ ಹಿಂದೆಯೇ ಹೇಳಿದ್ದಾನೆ. ಇನ್ನು, ಖ್ಯಾತ ಕೆನಾಡಿಯನ್ ಲೇಖಕಿ ನವೊಮಿ ಕ್ಲೇನ್ ತನ್ನ ‘ದಿಸ್ ಚೇಂಜಿಸ್ ಎವ್ರಿಥಿಂಗ್’ ಸಂಶೋಧನಾ ಗ್ರಂಥದಲ್ಲಿ ಈತನ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ: ಜಾಗತಿಕ ತಾಪಮಾನ ತಗ್ಗಿಸಲು ತಾನು ಮುನ್ನೂರು ಕೋಟಿ ಡಾಲರ್ ವಂತಿಗೆ ನೀಡುತ್ತೇನೆಂದು ಘಂಟಾಘೋಷ ಮಾಡಿ ಈತ ಹಿಂದೆ ಸರಿದ. ತನ್ನ ಕಂಪನಿಗಳಿಂದ ನಿರೀಕ್ಷಿತ ಲಾಭ ಬಂದಿಲ್ಲವೆಂದು ಹೇಳಿ ನುಣುಚಿಕೊಂಡ. (ಲಾಭದ ಹಣವನ್ನು ಬೇರಡೆ ತಿರುಗಿಸಿಕೊಂಡಿದ್ದಕ್ಕೂ ಕ್ಲೇನ್ ವಿವರಣೆ ಕೊಡುತ್ತಾಳೆ.) ವಾತಾವರಣದ ಇಂಗಾಲದ ಡೈಆಕ್ಸೈಡನ್ನು ಹೀರಿ ತೆಗೆಯಬಲ್ಲ ತಂತ್ರಜ್ಞಾನವನ್ನು ರೂಪಿಸಬಲ್ಲವರಿಗೆಂದು ಎರಡೂವರೆ ಕೋಟಿ ಡಾಲರ್ ಬಹುಮಾನ ಘೋಷಿಸಿ, ಸ್ಪರ್ಧೆಗೆ ಬಂದ ಉತ್ತಮ ಸಲಹೆಗಳನ್ನೆಲ್ಲ ಹೇಗೆ, ಯಾವ ಸ್ವಾರ್ಥಕ್ಕಾಗಿ ಅದುಮಿಟ್ಟ ಎಂಬುದಕ್ಕೂ ವಿವರಣೆಗಳಿವೆ. ಅಂತೂ ಬಹುಮಾನ ಯಾರಿಗೂ ವಿತರಣೆಯಾಗಿಲ್ಲ.

ಎರಡು ಅಮೆರಿಕಗಳ ನಡುವಣ ಕೋಟ್ಯಂತರ ಜನರು ನಿರ್ವಸಿತರಾಗಿ ಒದ್ದಾಡುತ್ತಿರುವಾಗ ಈತ ಹಾಯಾಗಿ ನೆಲಮಾಳಿಗೆಯಲ್ಲಿ ಕೂತು ವೈನ್ ಹೀರುತ್ತ ‘ಇರ್ಮಾಳಿಂದ ಪಾರಾಗಿಬಿಟ್ಟೆ’ ಎಂಬುದಾಗಿ ಸಾಹಸ ಮೆರೆದಿದ್ದು ಟೀಕಾಕಾರರಿಗೆ ಒಂದು ಬಗೆಯ ರೂಪಕವಾಗಿ ಲಭಿಸಿದೆ. ಈಚೀಚಿನ ಪ್ರಾಕೃತಿಕ ದುರಂತಗಳು ‘ಪ್ರಾಕೃತಿಕ ಅಲ್ಲವೇ ಅಲ್ಲ’ ಎಂದು ವಾದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ತೀವ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರಲು ದೊಡ್ಡವರ ದೊಡ್ಡ ದೊಡ್ಡ ಕೃತ್ಯಗಳೇ ಕಾರಣವಾಗಿದ್ದರೂ ಅದಕ್ಕೆ ಬೆಲೆ ತೆರುವವರು ಮಾತ್ರ ಕೆಳಸ್ತರದ ಶ್ರಮಜೀವಿಗಳು ಎಂಬುದು ಎಲ್ಲ ದೊಡ್ಡ ದುರಂತಗಳಲ್ಲೂ ಎದ್ದು ಕಾಣುವಂತಾಗಿದೆ. ಅಂದಹಾಗೆ, ಆರಂಭದಲ್ಲಿ ವಿವರಿಸಿದ ಎತ್ತಂಗಡಿ ವಿವರಗಳೆಲ್ಲ ಯುಎಸ್‌ಎಯ ಫ್ಲಾರಿಡಾ ರಾಜ್ಯದ್ದು; ಆ ಸಂತ್ರಸ್ತರ ಸಾಲಿನಲ್ಲಿ ಕೋಟ್ಯಧೀಶರು ಇರಲುಂಟೆ? ಅವರೆಲ್ಲ ಮುನ್ಸೂಚನೆ ಸಿಕ್ಕ ತಕ್ಷಣ ವಿಮಾನ ಏರಿಯಾಗಿತ್ತು. ಇತ್ತ ಕೆರಿಬಿಯನ್ ದ್ವೀಪಮಾಲೆಯ ಸ್ಥಿತಿ ಬೇರೆಯದೇ ಇತ್ತು. ಅಲ್ಲಿ ಅದೆಷ್ಟೊ ಬಡ ಸಮುದಾಯಗಳ ನಡುವಣ ಚಂದದ ನಡುಗಡ್ಡೆಗಳು ಕೋಟ್ಯಧೀಶರ ತೆಕ್ಕೆಗೆ ಸೇರಿವೆ. ಉದಾ: ಬ್ರಾನ್ಸನ್‌ನ ನೆಕರ್ ಐಲ್ಯಾಂಡ್. ಇನ್ನು ಕೆಲವಂತೂ ತೆರಿಗೆ ವಂಚಕರ ಖಜಾನೆಗಳಾಗಿವೆ. ಸುಂಟರಗಾಳಿ ಬಂದು ಶ್ರೀಮಂತರ ಇಂದ್ರಪ್ರಸ್ಥವನ್ನೂ ಬಡ ಮೀನುಗಾರರ ಗುಡಿಸಲನ್ನೂ ಕೆಡವಿದಾಗ ಇಬ್ಬರಿಗೂ ಅಷ್ಟಷ್ಟೇ ನೋವುಂಟಾಗುವುದು ಸಹಜ. ಆದರೆ ಬೊಕ್ಕಸದಿಂದ ಸಿಗುವ ನಷ್ಟ ಪರಿಹಾರ, ವಿಮೆ ಇತ್ಯಾದಿ ತೆರಿಗೆದಾರರ ನಿಧಿಯಲ್ಲಿ ದೊಡ್ಡವರ ಪಾಲಿಗೆ ದೊಡ್ಡ ಪಾಲು ಸೇರುತ್ತದೆ.

’ಚಂಡಮಾರುತಗಳು ಪಕ್ಷಪಾತ ತೋರುವುದಿಲ್ಲ. ಆದರೆ ಪಕ್ಷಪಾತ ತೋರುವ ಸಮುದಾಯದ ನೆಲಕ್ಕೇ ಅವು ಅಪ್ಪಳಿಸುತ್ತವೆ’ ಎಂದು ಮೊನ್ನೆ ನ್ಯೂ ಇಂಟರ್‌ನ್ಯಾಶನಲಿಸ್ಟ್ ಪತ್ರಿಕೆಯಲ್ಲಿ ಡೇನಿಯಲ್ ವೊಸ್ಕೊಬೊಯ್ನಿಕ್ ವಿಶ್ಲೇಷಿಸಿದ್ದಾರೆ. ಚಂಡಮಾರುತ ಅಷ್ಟೇ ಅಲ್ಲ, ಮೇಘಸ್ಫೋಟ, ಮಹಾಪೂರ, ಬರಗಾಲದಂಥ ಇತರ ನೈಸರ್ಗಿಕ ಪ್ರಕೋಪಗಳೂ ಹಾಗೇ ಮಾಡುತ್ತವೇನೊ. ಬೆಂಗಳೂರಿನಲ್ಲಿ ಪ್ರವಾಹದ ರಗಳೆಗಳು ಅಪಾರ್ಟ್‌ಮೆಂಟ್ ಮತ್ತು ಕೊಳೆಗೇರಿ ನಿವಾಸಿಗಳಿಗೆ ಏಕರೂಪವಾಗಿ ಅಡಚಣೆ ಉಂಟುಮಾಡಿದರೂ ದೃಶ್ಯಮಾಧ್ಯಮಗಳಲ್ಲಿ ಯಾರ ಸಂಕಷ್ಟಗಳು ಮುಂಬೆಳಕಿಗೆ ಬಂದುವೆಂದು ನಮಗೆ ಗೊತ್ತೇ ಇದೆ. ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ನೀರಿನ ಸಹಜ ಹರಿವಿಗೆ ಅಡೆತಡೆ ಮಾಡಿ ಎತ್ತರದ ಕಟ್ಟಡ ನಿರ್ಮಿಸಿ, ಪ್ರವಾಹ ಸಮಸ್ಯೆಗೆ ಕಾರಣರಾದವರು ಯಾರೆಂಬುದೂ ನಮಗೆ ಗೊತ್ತಿದೆ. ಅವರ ಆ ತಪ್ಪಿಗಾಗಿ ಯಾರು ಶಿಕ್ಷೆಗೊಳಗಾದರು ಎಂಬುದೂ ಗೊತ್ತಿದೆ.

ಇವನ್ನೆಲ್ಲ ಈಗ ಇಲ್ಲಿ ಚರ್ಚಿಸಲು ಎರಡು ಕಾರಣಗಳಿವೆ: ವಿಶ್ವಸಂಸ್ಥೆ ಪ್ರತಿವರ್ಷ ಅಕ್ಟೊಬರ್ ಮೊದಲ ಸೋಮವಾರವನ್ನು ‘ವಿಶ್ವ ಆವಾಸ ದಿನ’ ಎಂತಲೂ ಅಕ್ಟೊಬರ್ 13ನ್ನು ‘ನೈಸರ್ಗಿಕ ಪ್ರಕೋಪ ತಗ್ಗಿಸುವ ದಿನ’ ಎಂತಲೂ ಆಚರಿಸಬೇಕೆಂದು ಮೂರು ದಶಕಗಳ ಹಿಂದೆಯೇ ಕರೆ ಕೊಟ್ಟಿದೆ. ಏಕೆಂದರೆ ಇವೆರಡೂ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿರುವ ಸಮಸ್ಯೆಗಳಾಗಿವೆ. ಭಾರತವೂ ಅದನ್ನು ಆಚರಿಸುವುದಾಗಿ ಆಣೆ ಮಾಡಿದೆ. ನಮ್ಮ ದೇಶದಲ್ಲಂತೂ ಗ್ರಾಮೀಣ ಭಾಗದಿಂದ ವಲಸೆ ಬಂದು ಪಟ್ಟಣಗಳಲ್ಲಿ ಕೊಳೆಗೇರಿಗಳಲ್ಲಿ ಹೇಗೋ ಮುದುರಿ ನೆಲೆಸುವವರ ಸಂಖ್ಯೆ ಮೇರೆ ಮೀರಿ ಬೆಳೆಯುತ್ತಿದೆ. ಹಾಗೆ ಬರುವವರಲ್ಲಿ ಬಹುಪಾಲು ಜನರು ನೈಸರ್ಗಿಕ ಪ್ರಕೋಪ ತಾಳಲಾರದೆ ಬರುತ್ತಿದ್ದಾರೆ. ಇಲ್ಲಿ ಆವಾಸ ಸಿಗದೆ ಪರದಾಡುತ್ತಾರೆ. ವ್ಯಂಗ್ಯ ಏನೆಂದರೆ, ನಗರಗಳ ಚರಂಡಿ ಚೊಕ್ಕಟ ಮಾಡುವ, ಕಸ ಬಾಚುವ, ಮುಸುರೆ ತೊಳೆಯುವಂಥ ಎಲ್ಲ ಅಗತ್ಯ ಸೇವೆಗಳನ್ನೂ ನೀಡುವ ಅವರ ಆವಾಸ ಮಾತ್ರ ನರಕ ಸದೃಶ ಇರುತ್ತದೆ. ಅಲ್ಲಿ ಬೆಳಕಿಗೆ, ರಸ್ತೆಗೆ, ಶುದ್ಧ ನೀರಿಗೆ, ಶೌಚಕ್ಕೆ, ಶಿಕ್ಷಣಕ್ಕೆ ಎಲ್ಲಕ್ಕೂ ಅಭಾವ. ‘ಅದು ಕ್ರಿಮಿಗಳೂ ಕ್ರಿಮಿನಲ್‌ಗಳೂ ಹುಟ್ಟಿ ಬೆಳೆಯುವ ತಾಣ’ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್ ಹೇಳುತ್ತದೆ. ನಮ್ಮ ತಾಲ್ಲೂಕು ಮಟ್ಟದ ಪಟ್ಟಣಗಳಲ್ಲಿ ಕೆಳವರ್ಗದವರ ‘ಆವಾಸ’ ಎಂಬುದು ಈಗಲೂ ಕೊಳೆಗೇರಿಗಳಂತೇ ಇವೆ. ಅಲ್ಲಿ ಕ್ರಿಮಿನಲ್‌ಗಳು ಸೃಷ್ಟಿಯಾಗಲಿಕ್ಕಿಲ್ಲ, ಆದರೆ ಅಲ್ಲಿನವರ ವಾಸದ ಪರಿಸರವಂತೂ ಈಗಿನ ಮಾರುಕಟ್ಟೆ ಎಕಾನಮಿಯಲ್ಲಿ ಸುಧಾರಿಸಲು ಸಾಧ್ಯವೇ ಇಲ್ಲ. ಸರ್ಕಾರಿ ನೆರವಿನಿಂದ ಅಲ್ಲಿ ಪೌರ ಸೌಲಭ್ಯಗಳನ್ನು ಸುಧಾರಿಸುವ ಮಾತು ಹೇಗೂ ಇರಲಿ, ನಮ್ಮ ನಗರ ಯೋಜನಾ ತಜ್ಞರು ಈಗಲೂ ಹೊಸ ಬಡಾವಣೆಗಳಲ್ಲಿ ಈ ಕೆಳಹಂತದ ಸೇವಾವೃತ್ತಿಯವರ ವಸತಿಗಾಗಿ ಒಂದು ಚೂರು ಜಾಗ ಇಡುತ್ತಿಲ್ಲ. ಅಥವಾ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಸೇವಕರ ವಾಸ್ತವ್ಯಕ್ಕೆ ಜಾಗ ಮೀಸಲಿಡಬೇಕೆಂಬ ನಿಯಮವೂ ಇದ್ದಂತಿಲ್ಲ. ತಳವರ್ಗಕ್ಕೆ ವಾಸಯೋಗ್ಯ ಆಸರೆ ನೀಡುವಲ್ಲಿ ಕೇವಲ ಸರ್ಕಾರದ್ದಷ್ಟೇ ಅಲ್ಲ, ಸಮುದಾಯದ್ದೂ ಪಾಲಿರಬೇಕು ಎಂಬುದನ್ನು ಮನದಟ್ಟು ಮಾಡಲೆಂದೇ ‘ವಿಶ್ವ ಆವಾಸ ದಿನ’ ಆಚರಿಸಬೇಕಿತ್ತು. ಈ ವರ್ಷವಂತೂ ಅಕ್ಟೊಬರ್ 2ರಂದೇ ‘ವಿಶ್ವ ಆವಾಸ ದಿನ’ ಬಂದಿತ್ತು. ಗಾಂಧೀಜಿಯವರು ದರಿದ್ರ ನಾರಾಯಣರ ಏಳ್ಗೆಗಾಗಿ, ಅವರ ವಾಸ್ತವ್ಯದ ಶುಚಿತ್ವಕ್ಕಾಗಿ ಏನೆಲ್ಲ ಮುಂದಾಳತ್ವದ ಮಾದರಿ ತೋರಿಸಿದ್ದರು. ಸಚಿವರಿಗೆ ‘ಆವಾಸ ದಿನ’ ನೆನಪಿರಲಿಕ್ಕಿಲ್ಲ. ಆದರೆ ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಲಿ’ ಎಂಬ ಒಂದು ದೊಡ್ಡ ವ್ಯವಸ್ಥೆ ಇಡೀ ರಾಜ್ಯದಲ್ಲೆಲ್ಲ ಬೇರು ಬಿಳಲು ಬೆಳೆಸಿ ನಿಂತಿದೆ. ಅದರ ಕ್ಯಾಲೆಂಡರಿನಲ್ಲೂ ‘ಆವಾಸ ದಿನ’ಕ್ಕೆ ಜಾಗ ಇರಲಿಲ್ಲವೆ? ಇಲ್ಲದಿದ್ದರೆ ಈಗಲಾದರೂ ಸೇರಿಸಬಹುದು: ಇಡೀ ತಿಂಗಳನ್ನು ‘ಅರ್ಬನ್ ಅಕ್ಟೊಬರ್’ ಎಂದು ಆಚರಿಸಲು ಮೊನ್ನೆ ವಿಶ್ವಸಂಸ್ಥೆ ಕರೆ ಕೊಟ್ಟಿದೆ. ನಮ್ಮ ರಾಜ್ಯೋತ್ಸವದ ಹಾಗೆ ಎಲ್ಲ ನಗರಗಳಲ್ಲಿ ‘ಆವಾಸ ದಿನ’ ಆಚರಿಸಿ ನಿಮ್ಮ ಸಾಧನೆಯ ಡಂಗುರ ಹೊಡೆಯಲು ಯಾಕೆ, ಹಿಂಜರಿಕೆಯೆ ಅಧಿಕಾರಿಗಳೆ, ಅಧ್ಯಕ್ಷರೆ?

ಅರೆ, ಅಕ್ಟೊಬರ್ 13ರ ‘ನೈಸರ್ಗಿಕ ವಿಕೋಪ ತಗ್ಗಿಸುವ ದಿನ’ದ ಆಚರಣೆಯ ಬಗ್ಗೆ ಚರ್ಚಿಸೋಣವೆಂದರೆ ಜಾಗವೇ ಉಳಿದಿಲ್ಲವಲ್ಲ. ಅದನ್ನೂ ರಾಜ್ಯಾದ್ಯಂತ ಆಚರಿಸಲು ಸಿದ್ಧತೆ ನಡೆಸೋಣವೆ? ಈ ನಡುವೆ ಹೈದರಾಬಾದ್ ನಗರ ಮೇಘಸ್ಫೋಟದಿಂದ ತತ್ತರಿಸಿದೆ; ನಮ್ಮದೇ ರಿಚರ್ಡ್ ಬ್ರಾನ್ಸನ್ ಎನಿಸಿದ ವಿಜಯ್ ಮಲ್ಯರ ಬಂಧನ- ಬಿಡುಗಡೆಯ ಕೋಲ್ಮಿಂಚು ಹೊಡೆದು ಭಾರತ ಸರ್ಕಾರ ಮತ್ತೊಂದು ಬಲೆ ಬೀಸಲು ಹೊರಟಿದೆ. ಮೊದಲು ಆ ಸುದ್ದಿ ಸುಂಟರಗಾಳಿಗಳೆಲ್ಲ ತಣ್ಣಗಾಗಲಿ ನೋಡೋಣ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry