ಭಾನುವಾರ, ಡಿಸೆಂಬರ್ 15, 2019
26 °C

ನೀವೆಷ್ಟು ಪರ್ಸೆಂಟ್ ಪರಿಶುದ್ಧರು ಸಾರ್?

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ನೀವೆಷ್ಟು ಪರ್ಸೆಂಟ್ ಪರಿಶುದ್ಧರು ಸಾರ್?

`ಜೀವನದಲ್ಲಿ ಜಿಗುಪ್ಸೆ ಬಂದಿದೆ, ನಾನು ಎಲ್ಲಾದ್ರೂ ಕಾಶೀ, ರಾಮೇಶ್ವರ ಅಂತಾ ಒಂದಷ್ಟು ದಿನ ಟೂರ್ ಹೋಗಿ ಮನಶ್ಶಾಂತಿ ಪಡೆದು ಬರ್ತೀನಿ. ರಜೆ ಕೊಡಿ ಸಾರ್', ಎಂದು ಪೆಕರ ಲೀವ್‌ಲೆಟರ್ ಬರೆದ.ಎಂದೂ ರಜೆ ಕೇಳದ, ಭೂಕಂಪವಾದರೂ ಸ್ವಲ್ಪವೂ ಮಿಸುಕದ ಪೆಕರ, ರಜೆ ಕೇಳುತ್ತಾನೆ ಎಂದರೆ ಅವನಿಗೆ ಏನೋ ಸಮ್‌ಥಿಂಗ್ ಆಗಿದೆ ಎಂದೇ ಅರ್ಥ. ಸಂಪಾದಕರು `ಅಂಥದೇನಾಯ್ತು? ಕಾಶೀ ರಾಮೇಶ್ವರ ಏಕೆ ಹೋಗ್ತೀರಿ? ಅಲ್ಲಿ ಹೋದ್ರೆ ತಲೆ ಕೆಡುತ್ತೆ, ತೆಪ್ಪಗಿರಿ' ಎಂದು ದಬಾಯಿಸಿದರು.`ಈ ಜೀವನವೇ ಬೇಸರವಾಗಿದೆ ಸಾರ್, ಭ್ರಮನಿರಸನವಾಗಿದೆ ಸಾರ್' ಎಂದು ಪೆಕರ ವಿಷಾದದ ದನಿಯಲ್ಲಿ ಹೇಳಿದ.

`ಎಲ್ಲಾದ್ರೂ ಲವ್ ಫೇಲ್ಯೂರ್ ಆಯ್ತಾ?, ರೂಪಾಯಿ ಬೆಲೆ ಕುಸಿಯಿತು ಅಂತ ಬೇಸರವಾಯ್ತಾ? ಈರುಳ್ಳಿ ಬೆಲೆ ಜಾಸ್ತಿ ಆಯ್ತು ಅಂತ ಗಾಬರಿಯಾಯ್ತಾ? ನಿಮ್ಮ ಬೇಸರಕ್ಕೆ ಕಾರಣವೇನು ಮಿಸ್ಟರ್ ಪೆಕರ?' ಎಂದು ಸಂಪಾದಕರು ಸ್ವಲ್ಪ ಜಬರ್ದಸ್ತಿನಿಂದಲೇ ಪ್ರಶ್ನಿಸಿದರು.`ನಿಜಾ ಹೇಳ್ಲಾ ಸಾರ್, ಅಯ್ಯ ಅವರು ಶೇ 100 ರಷ್ಟು ಪರಿಶುದ್ಧ ಅಲ್ಲವಂತೆ. ಸಂಪೂರ್ಣ ಪ್ರಾಮಾಣಿಕ ಅಲ್ಲವಂತೆ, ಹಂಡ್ರೆಡ್ ಡೇಸ್‌ಗೇ ಈಥರ ಆಗೋದ್ರೆ ಬೇಸರವಾಗಲ್ವೆ ಸಾರ್' ಎಂದು ಪೆಕರ ಪ್ರಶ್ನೆ ಮುಂದಿಟ್ಟ.`ಛೇ! ಛೆ! ಏನ್ರಿ ಹೀಗೇಳ್ತಾ ಇದ್ದೀರಾ? ರಾಮಕೃಷ್ಣ ಹೆಗಡೆ ಅವರ ಹುಟ್ಟುಹಬ್ಬದಲ್ಲಿ ನಮ್ಮ ಅಯ್ಯ ಅವರು ಸ್ವಲ್ಪ ಭಾವಾತಿರೇಕದಿಂದ ಮಾತಾಡಿರಬಹುದು. ನಾನು ಚುನಾವಣೆಯಲ್ಲಿ ಖರ್ಚು ಮಾಡಿದ ಹಣದ ಮೂಲ ಯಾವುದು ಎಂದು ಗೊತ್ತಿಲ್ಲ. ರಾಜಕಾರಣ ಮಲಿನವಾಗಿದೆ, ನಾನೂ ಸ್ವಲ್ಪ ರಾಜಿ ಮಾಡಿಕೊಂಡು ಗೆದ್ದಿದ್ದೇನೆ. ಸಂಪೂರ್ಣ ಪ್ರಾಮಾಣಿಕ ಎಂದು ಹೇಳಿದರೆ ನನಗೆ ನಾನೇ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ ಎಂದು ಅಯ್ಯ ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಬೇರೆಯವರು ಮಾತಾಡಲ್ಲ, ಇವರು ಮಾತಾಡಿದ್ದಾರೆ. ಈ ಸಲದ ಚುನಾವಣೇಲಿ ಗೆದ್ದವರೆಲ್ಲಾ ಐದು ಕೋಟಿಯಿಂದ ಹತ್ತು ಕೋಟಿಯವರೆಗೆ ಚೆಲ್ಲಾಡಿರುವುದು ನಿಮಗೆ ಗೊತ್ತಿಲ್ವೆ? ಸುಮ್ನೆ ಕೆಲಸ ಮುಂದುವರೆಸಿ, ರಾಜಕಾರಣದಲ್ಲಿ ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಬೇರೆ ಲೀಡರ್‌ಗಳನ್ನೂ ಮಾತನಾಡಿಸಿ ವರದಿ ರೆಡಿ ಮಾಡಿ ನಡೀರಿ' ಎಂದು ಸಂಪಾದಕರು ಪೆಕರನಿಗೆ ಹೊಸ ಹೊಣೆಗಾರಿಕೆ ನೀಡಿದರು.ಪೆಕರ ಕಾರ್ಯೋನ್ಮುಖನಾಗುತ್ತಿದ್ದಂತೆಯೇ, ಎದುರುಗಡೆಯೇ ಡಾ. ಜಿ.ಪ. ಸಿಕ್ಕರು. `ಸಾರ್, ಅಯ್ಯ ಅವರು, ನಾನು ನೂರು ಪರ್ಸೆಂಟ್ ಪರಿಶುದ್ಧನಲ್ಲ, ಪ್ರಾಮಾಣಿಕನಲ್ಲ ಅಂತ ಹೇಳಿದ್ದಾರೆ ನಿಮ್ಮ ಅಭಿಪ್ರಾಯವೇನು?' ಪೆಕರ ಪ್ರಶ್ನಿಸಿದ.

`ಅದು ನನಗೆ ಮೊದಲೇ ಗೊತ್ತಿತ್ತು'- ಡಾಜಿಪ ತಣ್ಣಗೆ ಉತ್ತರಿಸಿದರು.ಪೆಕರ ಹೌಹಾರಿದ. `ಹೇಗೆ ಸಾರ್?!' ಎಂದ ಹುಬ್ಬೇರಿಸಿ.

`ಈ ವಿಷಯ ನಮಗೆ ಮೊದಲೇ ಗೊತ್ತಿತ್ತು. ದೆಹಲಿ ಮೇಡಂಗೂ ಗೊತ್ತಿತ್ತು, ಅದಕ್ಕೋಸ್ಕರವೇ ಅಲ್ಲವೇ ಸಮನ್ವಯ ಸಮಿತಿ ರಚಿಸಿದ್ದು?' ಎಂದು ಡಾಜಿಪ ವಿವರಿಸಿದರು.

`ಅರಸು ಅವರ ಹಾದಿಯಲ್ಲಿ ನಮ್ಮ ಅಯ್ಯ ನಡೆದು ಬರ್ತಾ ಇದ್ದಾರೆ ಸಾರ್, ಈ ಸರ್ಕಾರ ಹಂಡ್ರೆಂಡ್ ಪರ್ಸೆಂಟ್ ಪರಿಶುದ್ಧ ಆಡಳಿತ ನೀಡೋದಿಕ್ಕೆ ಸಾಧ್ಯವಿಲ್ಲವೇ?' ಎಂದು ಪೆಕರ ಪ್ರಶ್ನಿಸಿದ.

`ಸಾಧ್ಯವಿದೆ'

`ಹೇಗೆ?'

`ನನ್ನನ್ನು ಡಿಸಿಎಂ ಮಾಡಿದರೆ ಆಗುತ್ತೆ'ಪೆಕರ ಮೂರ್ಛೆ ಹೋಗುವುದೊಂದು ಬಾಕಿ, `ನೀವು ಡಿಸಿಎಂ ಆದ್ರೆ, ಅಯ್ಯ ಅವರು ಹಂಡ್ರೆಡ್ ಪರ್ಸೆಂಟ್ ಪರಿಶುದ್ಧ ಹೇಗೆ ಆಗ್ತಾರೆ?' ಪೆಕರ ಸ್ವಲ್ಪ ವಿವರಣೆ ಕೇಳಿದ.`ನೋಡಿ ಪೆಕರ ಅವರೇ, ಈ ರಾಜಕೀಯ ಕ್ಷೇತ್ರದಲ್ಲಿ ಯಾರೂ ಪರಿಶುದ್ಧರಾಗಿರಲು ಸಾಧ್ಯವಿಲ್ಲ. ಪ್ರಾಮಾಣಿಕರಾಗಿರಲೂ ಸಾಧ್ಯವಿಲ್ಲ. ಕಳಂಕಿತರನ್ನೂ ಕಳಂಕಿತರು ಎಂದು ಹೇಳುವಂತಿಲ್ಲ. ಕಾರ್ಯವಾಸಿ ಕತ್ತೆಕಾಲು ಹಿಡಿಯಲೇಬೇಕು. ಅಂತಹವರಿಗೂ ಬೈ ಎಲೆಕ್ಷನ್‌ನಲ್ಲಿ ಟಿಕೇಟು ಕೊಟ್ಟು ಗೆಲ್ಲಿಸಲೇಬೇಕು. ಹಾಗೆ ನೋಡಿದರೆ ನಾನೂ ಹಂಡ್ರೆಡ್ ಪರ್ಸೆಂಟ್ ಪರಿಶುದ್ಧನಲ್ಲ. ನಾನು ಶೇಕಡ 50 ಪರ್ಸೆಂಟ್ ಪರಿಶುದ್ಧ. ಅಯ್ಯ ಅವರು ಶೇ 50 ಪರ್ಸೆಂಟ್ ಪರಿಶುದ್ಧ ಅಂತ ಇಟ್ಕೊಳ್ಳಿ. ಅವರು ಸಿಎಂ, ನಾನು ಡಿಸಿಎಂ, 50+50, ನೂರುಪರ್ಸೆಂಟ್ ಪರಿಶುದ್ಧ ಆಗಲಿಲ್ಲವೇ? ಏನು ಹೇಳ್ತೀರಿ?' ಎಂದು ಡಾಜಿಪ ಪ್ರಶ್ನಿಸಿದರು.`ಈ ಅಂಕಗಣಿತವನ್ನು ನಿಮಗೆ ಮಠಾಧಿಪತಿಗಳು ಹೇಳಿಕೊಟ್ಟರೇ?' ಎಂದು ಪೆಕರ ಪ್ರಶ್ನಿಸಿದ.

`ಇಲ್ಲಾಪ, ಇದು ಸಿಂಪಲ್ ಗಣಿತ, ಕಾಮನ್‌ಮ್ಯಾನ್‌ಗೂ ಗೊತ್ತು' ಎಂದು ಡಾಜಿಪ ಹೇಳಿದರು.`ಇದೇ, ಲಾಜಿಕ್ ಕೊರಟಗೆರೆಯಲ್ಲಿ ಪ್ರಯೋಗಿಸಬೇಕಿತ್ತು ಬಿಡಿ ಸಾರ್', ಎಂದು ಗೊಣಗುತ್ತಾ ಪೆಕರ ಮುಂದೆ ಹೊರಟ.

ರಾಜಭವನ ಕಾಂಪೌಂಡ್ ಕಡೆಯಿಂದ ಭಾರೀ ಗೊಣಗಾಟ ಕೇಳಿಬರುತ್ತಿತ್ತು. ಯುಪಿಎ-2 ಈಸ್ ವೆರಿ ಬ್ಯಾಡ್ ಎಂದು ರಾಜ್ಯಪಾಲರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಟೂಜೀ, ತ್ರೀಜಿ, ಹೇ ಕ್ಯಾಜಿ ಎಂದು ಪ್ರಶ್ನಿಸುತ್ತಿದ್ದರು. `ಅಯ್ಯ ಅವರು, ಹಂಡ್ರೆಡ್ ಪರ್ಸೆಂಟ್ ಪರಿಶುದ್ಧ ಅಲ್ಲ ಅಂತಿದ್ದಾರೆ, ರಾಜ್ಯಪಾಲರು ತಮ್ಮ ಪಾರ್ಟಿಯನ್ನೇ ಉಡಾಯಿಸುತ್ತಿದ್ದಾರೆ. ರೂಪಾಯಿ ಪಾತಾಳ ಕಾಣಲು ಚಿದಂಬರಂ ಕಾರಣ ಅಂತ ಉತ್ತರದ ಅರ್ಥಶಾಸ್ತ್ರ ಪಂಡಿತರು ಗೊಣಗಾಡುತ್ತಿದ್ದಾರೆ. ರಾಜ್ಯಪಾಲರು ಯಾವುದೂ `ಮನಮೋಹಕ'ವಾಗಿಲ್ಲ ಅಂತ ಹೇಳ್ತಾ ಇದ್ದಾರೆ ಏನಾಗೋಯ್ತು ಕೈಪಾರ್ಟಿಗೆ ಎಂದು ಪೆಕರ ಪೇಚಾಡಿಕೊಂಡ.`ಆಹಾರ ಭದ್ರತೆಯಾದ್ರೂ ಹಂಡ್ರೆಡ್ ಪರ್ಸೆಂಟ್ ಪರಿಶುದ್ಧ ಕಾರ್ಯ ಕ್ರಮಾನಾ' ಎಂದು ದೊಡ್ಡಗೌಡ ಅಂಡ್ ಸನ್ಸ್ ಲೇವಡಿ ಮಾಡುತ್ತಿದ್ದುದನ್ನು ಕಂಡು ಪೆಕರ ಅವರತ್ತ ತೆರಳಿದ.

`ಸಾರ್ ನೀವು ಎಷ್ಟು ಪರ್ಸೆಂಟ್ ಪ್ರಾಮಾಣಿಕರು?'- ಪೆಕರ ಮಾರಸ್ವಾಮಿಗಳನ್ನು ಪ್ರಶ್ನಿಸಿದ.

`ಇಷ್ಟು ವರ್ಷದ ರಾಜಕೀಯದಲ್ಲಿ ನನ್ನಷ್ಟು ಹಂಡ್ರೆಡ್ ಪರ್ಸೆಂಟ್ ಪರಿಶುದ್ಧ ರಾಜಕಾರಣಿಯನ್ನ ನೀವು ನೋಡಿರಲು ಸಾಧ್ಯವಿಲ್ಲ. ಅಪ್ಪ-ಮಕ್ಕಳ ಪಕ್ಷ ಎಂದು ಬೇರೆ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಬೇರೆ ಸಮುದಾಯದವರಿಗೂ ಪಕ್ಷದಲ್ಲಿ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ನಾನು ಎಷ್ಟು ಪರಿಶುದ್ಧ ಅಂತ ನೀವೇ ಲೆಕ್ಕ ಹಾಕ್ಕಳ್ಳಿ'- ಮಾರಸ್ವಾಮಿಗಳು ಎದೆಉಬ್ಬಿಸಿ ಕೊಚ್ಚಿಕೊಂಡರು.`ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಬೇಕಾಗಿದೆ ಸಾರ್, ನೀವು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ವಾಪಸ್ ಪಡೆಯಬಾರದಲ್ಲವೇ? ಇದೆಂಥಾ ರಾಜಕೀಯ ಸಾರ್? ' ಪೆಕರ ಪ್ರಾಮಾಣಿಕವಾಗಿ ಕೇಳಿದ.

ಅಷ್ಟರಲ್ಲಿ ಮೊಬೈಲ್ ತೆಗೆದು ಕೈಯಲ್ಲಿ ಹಿಡಿದುಕೊಂಡ ಮಾರಸ್ವಾಮಿಗಳು, `ಮಂಗಳೂರು ಕಡೆಯಿಂದ ಕಾಲ್ ಬರ‌್ತಾ ಇದೆ, ಸ್ವಲ್ಪ ತಡೀರಿ ಬರ್ತೀನಿ' ಎಂದು ಹೇಳುತ್ತಾ ಜಾಗ ಖಾಲಿ ಮಾಡಿದರು. ಆ ವೇಳೆಗೆ ಬೆಂಗಳೂರಿನಲ್ಲಿ ಶೌಚಾಲಯಗಳೇ ಇಲ್ಲ ಎಂದು ಎಮ್ಮೆ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಿದ್ದ ವಾಟಾಳು ಎದುರಾದರು.`ನೀವೆಷ್ಟು ಪರ್ಸೆಂಟ್ ಪರಿಶುದ್ಧರು ಸಾರ್?' ಪೆಕರ ಪ್ರಶ್ನಿಸಿದ.

`ಇದೇನ್ ಹೀಗ್ ಕೇಳ್ತೀರಾ? ನಾನು ಬೂಟಿನೇಟು ತಿಂದು ಬೆಳೆದವನು. ಗೌಡರ ರಕ್ಷಣಾ ವೇದಿಕೆಗೆ ಹೋಲಿಸಿ ವಾಟಾಳ್‌ನ ಅಳೀರಿ. ನಾನು ಅವರಿಗೆ ಹೋಲಿಸಿದರೆ ಅರವತ್ ಪರ್ಸೆಂಟ್ ಪರಿಶುದ್ಧ' ಎಂದು ಹೇಳುತ್ತಾ ನಗೆ ಬೀರಿ ಮುಂದೆ ಹೋದರು.

ಪ್ರತಿಕ್ರಿಯಿಸಿ (+)