ನುಗ್ಗಿ ಬಂದ ಸಿರಿಯಾ ನೆನಪುಗಳು....

7

ನುಗ್ಗಿ ಬಂದ ಸಿರಿಯಾ ನೆನಪುಗಳು....

Published:
Updated:

ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ 2008ರ ಜನವರಿ 30ರಂದು ಗಾಂಧಿ ಅಧ್ಯಯನದಲ್ಲಿ ತೊಡಗಿಕೊಂಡ ವಿದ್ವಾಂಸರು ಸಮಾವೇಶಗೊಂಡಿದ್ದರು.

ಗಾಂಧಿ ಪರಂಪರೆಯ ಯಾವ ಆಯಾಮಗಳು ಈಗಲೂ ಪ್ರಸ್ತುತವಾಗುತ್ತವೆ ಎಂಬುದರ ಕುರಿತಂತೆ ಒಂದು ಇಡೀ ದಿನ ಅನೌಪಚಾರಿಕ ನೆಲೆಯಲ್ಲಿ ಮುಕ್ತ ಸಂವಾದ ನಡೆಸುವ ಉದ್ದೇಶ ಸಂಘಟಕರದಾಗಿತ್ತು. ನನಗೂ ಆಹ್ವಾನವಿತ್ತು.

ನಾನೂ ಹೋಗಿರುತ್ತಿದ್ದೆನೇನೊ. ಆದರೆ ಜನವರಿ ಅಂತ್ಯಕ್ಕೆ ಸಿರಿಯಾಗೆ ಭೇಟಿ ನೀಡುವ ಆಹ್ವಾನವೊಂದನ್ನು ನಾನು ಅಷ್ಟರಲ್ಲಾಗಲೇ ಒಪ್ಪಿಕೊಂಡಾಗಿತ್ತು. ಅಹಮದಾಬಾದ್ ನನಗೆ ಚೆನ್ನಾಗಿ ಗೊತ್ತಿರುವ ನಗರ. ಮತ್ತೊಮ್ಮೆ ಅಲ್ಲಿಗೆ ಹೋಗಬಹುದಾದಂತಹ ಊರು.

ಆದರೆ ಡಮಾಸ್ಕಸ್‌ಅನ್ನು ನೋಡಲು ನನಗೆ ಸಿಕ್ಕಿದ್ದ ಮೊದಲ ಅವಕಾಶವಾಗಿತ್ತು ಅದು. ಬಹುಶಃ ಅದೇ ಕಡೆಯ ಅವಕಾಶವೂ ಆಗಿರಬಹುದಾದ ಸಾಧ್ಯತೆ ಇತ್ತು.

ಹೀಗಾಗಿ, ಅರವತ್ತನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಅಹಮದಾಬಾದ್‌ನ ಸಬರಮತಿ ದಂಡೆಯಲ್ಲಿ ನನ್ನ ಸ್ನೇಹಿತರು ಸಮಾವೇಶಗೊಂಡಿದ್ದರೆ, ನಾನು ಡಮಾಸ್ಕಸ್ ವಿಶ್ವವಿದ್ಯಾಲಯದ ಉಪನ್ಯಾಸ ಕೊಠಡಿಯಲ್ಲಿ ಗಾಂಧಿ ಬಗ್ಗೆ ಉಪನ್ಯಾಸ ನೀಡುತ್ತಿದ್ದೆ.

ಗಾಂಧಿ ಚಿಂತನೆಗಳ ಮೂರು ಆಯಾಮಗಳಿಗೆ ನಾನು ವಿಶೇಷ ಒತ್ತು ನೀಡಿದ್ದೆ. ಮೊದಲನೆಯದಾಗಿ, ಪರಿಸರ ಕುರಿತಂತೆ ಗಾಂಧಿಗಿದ್ದಂತಹ ಮುನ್ನೋಟ. ಕೈಗಾರಿಕೀಕರಣದ ಪಾಶ್ಚಿಮಾತ್ಯ ಮಾದರಿಗಳನ್ನು ಭಾರತ (ಹಾಗೂ ಚೀನಾ) ಪೈಪೋಟಿಯಲ್ಲಿ ಅನುಸರಿಸುತ್ತಾ ಹೋದಲ್ಲಿ, ಪೈರುಪಚ್ಚೆಗಳನ್ನೆಲ್ಲಾ ನಾಶ ಮಾಡುವ ಕೀಟ (ಲೋಕಸ್ಟ್)ದಂತೆ ಅದು ವಿಶ್ವವನ್ನೇ ಬರಿದು ಮಾಡುತ್ತದೆ ಎಂಬುದು ಗಾಂಧಿಯವರ ಭೀತಿಯಾಗಿತ್ತು.

ನಂತರ, ನಾನು ಗಾಂಧೀಜಿಯವರ ಬಹು ಧರ್ಮೀಯತೆ ಕುರಿತು ಮಾತನಾಡಿದ್ದೆ. ವಿಭಿನ್ನ ಕೋಮುಗಳ ನಡುವೆ ವಿಶ್ವಾಸ, ಗೌರವ ಬೆಳೆಸಲು ಜೀವಮಾನಪೂರ್ತಿ ಗಾಂಧಿ ನಡೆಸಿದ ಪ್ರಯತ್ನಗಳನ್ನು ವಿವರಿಸಿದ್ದೆ. ಬಂಗಾಳ-ದೆಹಲಿಯಲ್ಲಿ ಕೋಮು ಸೌಹಾರ್ದಕ್ಕಾಗಿ ಅವರು ನಡೆಸಿದ ಭವ್ಯ ಪಾದಯಾತ್ರೆಗಳು, ಉಪವಾಸಗಳಲ್ಲಿ ಕಡೆಗದು ಅಂತ್ಯ ಕಂಡಿದ್ದನ್ನೂ ವಿವರಿಸಿದ್ದೆ.

ಅನ್ಯಾಯದ ಪ್ರಭುತ್ವದ ವಿರುದ್ಧ ಅಹಿಂಸೆಯ ಪ್ರತಿರೋಧವನ್ನೇ ಅಸ್ತ್ರವಾಗಿಸಿಕೊಂಡಿದ್ದರ ಕುರಿತೂ ಕಡೆಯದಾಗಿ ಮಾತನಾಡಿದ್ದೆ. ಮಧ್ಯಪ್ರಾಚ್ಯದಲ್ಲಿ ಸರ್ವೇಸಾಮಾನ್ಯವಾಗಿರುವ ಸಶಸ್ತ್ರ ಹೋರಾಟದ ವಿಧಾನಗಳಿಗಿಂತ ಈ ಕಾರ್ಯತಂತ್ರ ಕಡಿಮೆ ಹಾನಿಕರ ಹಾಗೂ ಸುಸ್ಥಿರವಾದದ್ದು ಎಂದು ವಾದಿಸಿದ್ದೆ.ಸಭಾಸದರಲ್ಲಿ ಹೆಚ್ಚಿನವರು ವಿಶ್ವವಿದ್ಯಾಲಯ ಅಧ್ಯಾಪಕರಾಗಿದ್ದರು. ಹೀಗಾಗಿ ಪರಿಸರ ವಾದ ಅವರಿಗೆ ಅಷ್ಟಾಗಿ ತಿಳಿಯಲಿಲ್ಲ.ಆದರೆ ಬಹುತ್ವದ ವಾದವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡರು ಮತ್ತು ಅನುಮೋದಿಸಿದರು ಕೂಡ. ಈ ವಲಯದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡದ ಅಥವಾ ಅವರ ವಿರುದ್ಧ ದೌರ್ಜನ್ಯ ಎಸಗದ ಕೆಲವೇ ರಾಷ್ಟ್ರಗಳಲ್ಲಿ ಸಿರಿಯಾ ಕೂಡ ಒಂದು.

ಆದರೆ ಅಹಿಂಸೆಯ ವಾದವನ್ನು ಅವರು ಬಲವಾಗಿ ತಿರಸ್ಕರಿಸಿದರು. ಸಶಸ್ತ್ರ ಹೋರಾಟವಿಲ್ಲದಿದ್ದಲ್ಲಿ, ಇಸ್ರೇಲಿ ಯಹೂದಿಗಳಿಂದ ತಮ್ಮ ಸೋದರರಾದ ಪ್ಯಾಲೆಸ್ಟೀನೀಯರು ಸ್ವಾತಂತ್ರ್ಯ ಗಳಿಸುವುದಾದರೂ ಹೇಗೆ? ಎಂಬುದು ಅವರ ಪ್ರಶ್ನೆಯಾಗಿತ್ತು. `ಕ್ಷಿಪಣಿಗಳು ಹಾಗೂ ಆತ್ಮಹತ್ಯಾ ಬಾಂಬ್‌ಗಳನ್ನು ಹೋರಾಟಗಳಲ್ಲಿ ಬಳಸಲು ಪ್ಯಾಲೆಸ್ಟೀನೀಯರು ಪ್ರಯತ್ನಿಸಿದ್ದಾರೆ~ ಎಂಬುದನ್ನು ನಾನು ಎತ್ತಿ ಹೇಳಿದೆ.`ಆದರೆ ಇದರಿಂದಾದದ್ದು ಮತ್ತಷ್ಟು ವಸಾಹತುಗಳು ಹಾಗೂ ಇನ್ನೊಂದಿಷ್ಟು ಸೇನಾ ಶಿಬಿರಗಳು ಅಷ್ಟೆ. ಇದರ ಬದಲಿಗೆ ಅಹಿಂಸಾ ಸತ್ಯಾಗ್ರಹಗಳನ್ನು ಪ್ರಯತ್ನಿಸಿದ್ದಿದ್ದಲ್ಲಿ ಇಸ್ರೇಲಿಗಳನ್ನು ಅವರು ಹೆಚ್ಚು ಮುಜುಗರಕ್ಕೆ ಈಡು ಮಾಡಿರಬಹುದಿತ್ತು.

ಹಾಗೂ ವಿಶ್ವದ ಅಭಿಪ್ರಾಯವನ್ನು ತಮ್ಮ ಕಡೆಗೇ ತಿರುಗಿಸಿಕೊಂಡಿರಬಹುದಿತ್ತು.~ ಎಂದು ನಾನು ವಾದಿಸಿದ್ದೆ. ನನ್ನ ಆತಿಥೇಯರಿಗೆ ಇದು ಮನವರಿಕೆಯಾಗಲಿಲ್ಲ. ದ್ವೇಷ ಸಾಧಿಸುವ ಯಹೂದಿಗಳ ವಿರುದ್ಧ ಗಾಂಧಿ ವಿಧಾನ ಕೆಲಸ ಮಾಡುವುದಿಲ್ಲ ಎಂಬುದು ಅವರ ಬಲವಾದ ಅಭಿಪ್ರಾಯವಾಗಿತ್ತು.ಮರು ದಿನ ನಾನು ಉಮಯ್ಯದ್ ಮಸೀದಿಗೆ ಭೇಟಿ ನೀಡಿದೆ. ಇದು ವಿಶ್ವದಲ್ಲೇ ಅತಿ ಪುರಾತನವಾದುದು ಮತ್ತು ವೈಭವಯುತವಾದುದು. ಆ ಸ್ತಂಭಗಳು, ಒಳಾಂಗಣ, ರತ್ನಗಂಬಳಿಗಳು, ಗೋಪುರಗಳೆಲ್ಲವನ್ನೂ ನಾನು ಮೆಚ್ಚಿದೆ. ನಂತರ ಮಸೀದಿ ಹಿಂಭಾಗದ ಓರೆಕೋರೆಯ ಬೀದಿಗಳಲ್ಲಿ ಕಾಲ್ನಡಿಗೆಯ ಸಂಚಾರಕ್ಕೆ ತೆರಳಿದೆ.

ತಾಜಾ ಹಣ್ಣು, ತರಕಾರಿ, ಮೀನು, ಮಾಂಸ ಮಾರಾಟ ಮಾಡುವ ಅಂಗಡಿಗಳ ಸಾಲುಗಳೇ ಅಲ್ಲಿದ್ದವು. ಪೊಟ್ಟಣಗಳಲ್ಲಿ ಅಥವಾ ಟಿನ್‌ಗಳಲ್ಲಿ ಪ್ಯಾಕ್ ಮಾಡಿರಿಸಿದ್ದ ಅಕ್ಕಿ, ಎಣ್ಣೆ, ಸೋಪು, ಹಾಲು, ಕಾಫಿ ಯಂತಹ ವಸ್ತುಗಳನ್ನು ಅಲ್ಲಿ ಕಂಡೆ. ಸ್ಥಳೀಯ ಕಂಪೆನಿಗಳಿಂದಲೇ ಬಹುಶಃ ಅವು ತಯಾರಾಗುತ್ತವೆ ಎಂದೆನಿಸಿತ್ತು.

ಒಂದೂ ಲೇಬಲ್ ಅನ್ನೂ ನನಗೆ ಗುರುತು ಹಚ್ಚುವುದು ಸಾಧ್ಯವಾಗಲಿಲ್ಲ. ಯಾವುದೇ ಜಾಗತಿಕ ಬ್ರಾಂಡುಗಳೂ ಇಲ್ಲದಿದ್ದಂತಹ 1970ರ ದಶಕದ ಭಾರತದಲ್ಲಿ ಇದ್ದಂತೆ ಅನಿಸಿತ್ತು ನನಗಾಗ. ಹೀಗಿದ್ದೂ ಉಮಯ್ಯದ್ ಮಸೀದಿಯ ಹಿಂದಿದ್ದ ಆ ಪುರಾತನ ಮಾರುಕಟ್ಟೆಯಲ್ಲಿ ಸಿರಿಯಾದವರಲ್ಲದವರ ಹಾಜರಿ ಕಂಡಿದ್ದು ಸೋಜಿಗವೆನಿಸಿತ್ತು.

ಅದು ಲೆಬನಾನ್‌ನ ನಾಯಕ ಷೇಕ್ ಹಸನ್ ನಸ್ರುಲ್ಲ. ಅವರ ಭಾವಚಿತ್ರಗಳು ಎಲ್ಲೆಡೆ ಅಲ್ಲಿ ರಾರಾಜಿಸುತ್ತಿತ್ತು. ಅವರ `ಹಿಜ್‌ಬೊಲ್ಲಾ~ ಸಂಘಟನೆ ಆಗಷ್ಟೇ ಇಸ್ರೇಲಿ ಸೇನೆಯ ವಿರುದ್ಧ ಕ್ಷಿಪ್ರದಾಳಿ ನಡೆಸಿದ ವಿಚಾರ ಪ್ರಚಾರದಲ್ಲಿತ್ತು. 2008ರ ಸಿರಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾದ ಒಂದು ವಿದೇಶಿ `ಬ್ರಾಂಡ್~ ಎಂದರೆ ಈ ಷಿಯಾ ಮುಸ್ಲಿಂ ತೀವ್ರವಾದಿ ನಾಯಕ.ಮಾರುಕಟ್ಟೆಯಲ್ಲಿ ನನ್ನ ತಿರುಗಾಟದ ನಂತರ ಮಸೀದಿಯತ್ತ ಹಿಂದಿರುಗಿ ಹೆಜ್ಜೆ ಹಾಕಿದೆ. ಪಶ್ಚಿಮ ಭಾಗದತ್ತ ನಡೆಯತೊಡಗಿದೆ. ಬಳಿ ಸಾಗುತ್ತಿದ್ದಂತೆ, ಎದೆ ಭಾಗದಲ್ಲಿ ಬೆಳ್ಳಿಯ ಕ್ರಾಸ್‌ಗಳನ್ನು ಧರಿಸಿ ಕಪ್ಪು ವಸ್ತ್ರಗಳನ್ನು ತೊಟ್ಟ ಇಬ್ಬರು ಗಡ್ಡಧಾರಿ ಕ್ರೈಸ್ತ ಪಾದ್ರಿಗಳನ್ನು ಕಂಡೆ.

ತನ್ನ ಜೊತೆ ಇದ್ದವರಿಗೆ ಪಾದ್ರಿಯೊಬ್ಬರು ಎತ್ತರದ ಗೋಪುರಗಳತ್ತ ಕೈ ಮಾಡಿ ತೋರಿಸುತ್ತಿದ್ದರು. ತಮ್ಮದಲ್ಲದ ಧರ್ಮದವರು ನಿರ್ಮಿಸಿದ ರಚನೆಯ ಪುರಾತನತೆ ಹಾಗೂ ದೃಢತೆಯನ್ನು ಮೆಚ್ಚುತ್ತಾ ಬೆರಗಿನ ಭಾವವನ್ನು ಹೊಂದಿದ್ದರು ಅವರು. ಅದು ಏನೆಲ್ಲವನ್ನು ಹೇಳುವ ಮಾಂತ್ರಿಕ ಕ್ಷಣವಾಗಿತ್ತು. ವಿಷಾದದ ಸಂಗತಿ ಎಂದರೆ ಆ ಗಳಿಗೆಗಳನ್ನು ಸೆರೆ ಹಿಡಿಯಲು ನನ್ನ ಬಳಿ ಕ್ಯಾಮೆರಾ ಇರಲಿಲ್ಲ.ಡಮಾಸ್ಕಸ್ ನಂತರ ನಾನು ಅಲೆಪ್ಪೊನತ್ತ ಹೊರಟೆ. ಅಲ್ಲಿ ಊರಿನ ಪೇಟೆ (ಸೂಕ್) ಬೀದಿಗಳಲ್ಲಿ ಸಂಚರಿಸಿದೆ. ಡಮಾಸ್ಕಸ್‌ನ ಉಮಯ್ಯದ್ ಮಸೀದಿಯಂತೆಯೇ ಇಲ್ಲೂ ಇತಿಹಾಸ ಹಾಗೂ ಪುರಾಣಗಳು ಭವ್ಯವಾಗಿ ಬಿಂಬಿತವಾಗಿದ್ದವು. ಇಲ್ಲೂ ಕೂಡ ನನ್ನ ಉಪನ್ಯಾಸವೊಂದು ಏರ್ಪಾಡಾಗಿತ್ತು.

ಈ ಬಾರಿ, ಇಲ್ಲಿನ ಆಡಳಿತ `ಬಾತ್~ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಪಡೆಗಳನ್ನೊಳಗೊಂಡಿದ್ದ ಸಭಾಸದರು ಕೊರೆಯುವ ನಿಶ್ಶಬ್ದದಲ್ಲಿ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಆ ನಂತರ ನಾನು ಹಳೆಯ ಟರ್ಕಿಷ್ ರೈಲಿನಲ್ಲಿ ರಾಜಧಾನಿಗೆ ಹಿಂದಿರುಗಿ ಬಂದಿದ್ದೆ.ಆ ಸಂದರ್ಭದಲ್ಲಿ, ಸಿರಿಯಾಗೆ ಆ ನನ್ನ ಭೇಟಿ ಕುರಿತು ನಾನು ಬರೆಯಲಿಲ್ಲ. ಈ ವರ್ಷದ ಆರಂಭದಲ್ಲಿ ಅಲ್ಲಿ ಅಂತರ್ಯುದ್ಧ ಆರಂಭವಾದಾಗ ಕೆಲವೊಂದು ನೆನಪುಗಳು ನುಗ್ಗಿ ಬಂದವು. ಪ್ರತಿ ಗೋಡೆ, ಪ್ರತಿ ತಿರುವಿನಲ್ಲಿ ರಾಷ್ಟ್ರದ ಆಡಳಿತಗಾರ ಬಷರ್ ಅಸ್ಸಾದ್ ಅವರ ಹಿಮ್ಮೆಟ್ಟದ ನೋಟವನ್ನು ಸಿರಿಯಾದ ನನ್ನ ಭೇಟಿ ಸಂದರ್ಭದಲ್ಲಿ ಕಂಡಿದ್ದೆ ಎಂಬುದು ನೆನಪಾಯಿತು.

ಮುಕ್ತ ಮಾತುಕತೆ, ಬೌದ್ಧಿಕ ಚರ್ಚೆಗಳಿಗೆ ಅಲ್ಲಿದ್ದ ನಿಷೇಧವನ್ನು ನಾನು ಗುರುತಿಸಿದ್ದೆ. ಕುತೂಹಲದ ಸಂಗತಿ ಎಂದರೆ ರಸ್ತೆಗಳಲ್ಲಿ ಮೋಟಾರ್ ಸೈಕಲ್ಲುಗಳು ಹಾಗೂ ಬೈಸಿಕಲ್‌ಗಳ ಮೇಲೂ ನಿಷೇಧವಿತ್ತು. ಈ ಬಗ್ಗೆ ಕೇಳಿದ್ದಾಗ, ಅಧಿಕಾರಿಗಳು ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಆಕ್ರಮಣ ಮಾಡಲು, ಈ ಹಿಂದೆ ದ್ವಿಚಕ್ರ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬಂಥ ಉತ್ತರ ದೊರಕಿತ್ತು.

ಒಟ್ಟಾರೆ, ನಾನು ಭೇಟಿ ನೀಡಿರುವ ರಾಷ್ಟ್ರಗಳಿಗೆಲ್ಲಾ ಹೋಲಿಸಿದಲ್ಲಿ, ಈ ರಾಷ್ಟ್ರ ಹೆಚ್ಚು ಬಿಗಿನೀತಿಗಳ, ನಿರಂಕುಶಾಧಿಕಾರದ, ಸಂಶಯಪ್ರವೃತ್ತಿಯ ಆಳ್ವಿಕೆಯನ್ನು ಹೊಂದಿತ್ತು.

ಅಸ್ಸಾದ್ ತಂದೆ - ಮಗ ಜೋಡಿಯಿಂದ ಸಿರಿಯಾಗೆ, ಮಧ್ಯ ಪ್ರಾಚ್ಯ ಹಾಗೂ ವಿಶ್ವಕ್ಕೆ ಕೆಟ್ಟದೇ ಆಯಿತು. ಆದರೆ ಇವರಿಗೆ ಪ್ರತಿಯಾಗಿ ಬರುವವರು ಹೆಚ್ಚು ಉತ್ತಮರಾಗಿರುತ್ತಾರೆಂದೇನೂ ಹೇಳಲಾಗುವುದಿಲ್ಲ.

ಈ ವಲಯವನ್ನು ಚೆನ್ನಾಗಿ ಬಲ್ಲ ಭಾರತೀಯ ಲೇಖಕ ಕಪಿಲ್ ಕೋಮಿರೆಡ್ಡಿ ಅವರು `ನ್ಯೂಯಾರ್ಕ್ ಟೈಮ್ಸ~ನಲ್ಲಿ ಇತ್ತೀಚೆಗೆ ಈ ಬಗ್ಗೆ ಬರೆದಿದ್ದಾರೆ. `ಫ್ರೀ ಸಿರಿಯನ್ ಆರ್ಮಿ~ ಎಂದು ತಮ್ಮನ್ನು ತಾವು ಕರೆದುಕೊಳ್ಳುವ `ಅಸ್ಸಾದ್ ಪ್ರಭುತ್ವ~ದ ವಿರೋಧಿಗಳಲ್ಲಿ ಪ್ರಬಲರಾಗಿರುವವರು ಸುನ್ನಿಗಳು ಹಾಗೂ ಹೆಚ್ಚಾಗಿ ವಾಹಬಿಗಳು.

ಶಿಯಾಗಳ ಕುರಿತಾಗಿ ಅವರಿಗೆ ಹೆಚ್ಚು ಸಮಯವಿಲ್ಲ. ಕ್ರೈಸ್ತರ ಕುರಿತಂತೂ ಇನ್ನೂ ಸಮಯವೇ ಇಲ್ಲ. ಒಂದು ಕಾಲದಲ್ಲಿ ಅಸ್ಸಾದ್ ಆಳ್ವಿಕೆಯಲ್ಲಿ ಸುರಕ್ಷಿತರಾಗಿದ್ದ ಸಿರಿಯಾದ 23 ಲಕ್ಷ ಕ್ರೈಸ್ತರನ್ನು ಈಗ ಅವರ ಮನೆಗಳಿಂದ ಅಟ್ಟಾಡಿಸಿ ಹತ್ಯೆಗೈಯುತ್ತಿರುವುದನ್ನು ಕೋಮಿರೆಡ್ಡಿ ವಿವರಿಸುತ್ತಾರೆ.

ಪ್ರಾರ್ಥನೆಗೆ ಕರೆ ನೀಡುವುದರೊಂದಿಗೆ ಇಲ್ಲಿ ದಿನ ಆರಂಭವಾಗುತ್ತದೆ. ಬಂದೂಕಿನ ಸದ್ದುಗಳೊಂದಿಗೆ ದಿನ ಅಂತ್ಯವಾಗುತ್ತದೆ ಎಂದು ಬರೆಯುತ್ತಾರೆ ಕೋಮಿರೆಡ್ಡಿ. ಧಾರ್ಮಿಕ ನಂಬಿಕೆಗಳ ತೀವ್ರತರ ಪ್ರತಿಪಾದನೆಗಳಿರುವ ವಲಯವಾಗಿದ್ದೂ, ಧಾರ್ಮಿಕ ಪಂಗಡಗಳ ಅಸ್ಮಿತೆಯಿಂದಾಚೆಗೆ ತನ್ನನ್ನು ಗುರುತಿಸಿಕೊಂಡಿದ್ದ ಸಿರಿಯಾದ `ಬಹುಸಂಸ್ಕೃತಿ~ಯ ಸಮಾಜ ಈಗ ನಾಗರಿಕ ವಿಘಟನೆ ಹಾಗೂ ಜನಾಂಗೀಯ ಹತ್ಯಾಕಾಂಡದ ಸವಾಲು ಎದುರಿಸುತ್ತಿದೆ.ನಾನು 2008ರಲ್ಲಿ ಡಮಾಸ್ಕಸ್ ಹಾಗೂ ಅಲೆಪ್ಪೊಗಳಿಗೆ ಭೇಟಿ ನೀಡಿದಾಗ ಜಾರ್ಜ್ ಡಬ್ಲ್ಯು ಬುಷ್ ಅವರು ಇನ್ನೂ ಅಮೆರಿಕದ ಅಧ್ಯಕ್ಷರಾಗಿದ್ದರು. `ದುಷ್ಟ ಕೂಟ~ಗಳ ಭಾಗವಾಗಿಯೇ ಸಿರಿಯಾವನ್ನು ಬುಷ್ ಆಡಳಿತ ಗುರುತಿಸುತ್ತಿತ್ತು. ಸಿರಿಯಾಗೆ ಅಮೆರಿಕನ್ನರ ಪ್ರಯಾಣ ನಿಷೇಧಿಸಲಾಗಿತ್ತು.

ಕಾಕತಾಳೀಯವೋ ಎಂಬಂತೆ ನಾನು ಸಿರಿಯಾದಿಂದ ವಾಪಸಾದ ನಂತರ ನನ್ನ ಮುಂದಿನ ವಿದೇಶ ಪ್ರವಾಸ ಇದ್ದದ್ದು ಅಮೆರಿಕಕ್ಕೇ. ನಾನು ವಿಸ್ಕಾನ್‌ಸಿನ್ ಮಡಿಸನ್‌ನಲ್ಲಿ ಉಪನ್ಯಾಸ ನೀಡಬೇಕಿತ್ತು.

ಷಿಕಾಗೊ ಮೂಲಕ ಅಲ್ಲಿಗೆ ಹೋಗುವುದು ಸರಿ ಎನಿಸಿತ್ತು. ಒ~ಹ್ಯಾರ್ ವಿಮಾನ ನಿಲ್ದಾಣದ ವಲಸೆ ಅಧಿಕಾರಿ ನನ್ನ ಪಾಸ್‌ಪೋರ್ಟ್ ನೋಡಿ ಕಠಿಣ ನಿಲುವು ತಳೆದು ಸಾಲಿನಲ್ಲಿ ನಿಂತಿದ್ದ ನನ್ನನ್ನು ಕೂಗಿ ಕರೆದು ಮೇಲಧಿಕಾರಿಯ ಕೈಗೊಪ್ಪಿಸಿದರು.

ಆತ ಬೇರೇನೂ ವಿವರಣೆಗೆ ಅವಕಾಶ ನೀಡದೆ ವಿಮಾನ ನಿಲ್ದಾಣದ ನೆಲಮಾಳಿಗೆಯ ಕೊಠಡಿಯೊಂದಕ್ಕೆ ಕರೆದೊಯ್ದರು. ಬೆಂಚ್ ಮೇಲೆ ಕೂರಲು ಹೇಳಿ ಆತ ಮಾಯವಾಗಿಬಿಟ್ಟ. ಒಮ್ಮೆಲೇ ನನಗೆ ಅರಿವಾಯಿತು ಸಮಸ್ಯೆ ಏನೆಂದು. ನನ್ನ ಪಾಸ್‌ಪೋರ್ಟ್‌ನಲ್ಲಿ ಮೊದಲಿಗೇ ಕಾಣುವಂತಿದ್ದ ಸಿರಿಯಾ ದೇಶದ ಮುದ್ರೆ. ಏಕೆಂದರೆ ನಾನು ಆಗಷ್ಟೇ ಸಿರಿಯಾ ದೇಶದ ವೀಸಾ ಪಡೆದು ಆ ದೇಶಕ್ಕೆ ಭೇಟಿ ನೀಡಿ ಬಂದಿದ್ದೆನಲ್ಲಾ!ಒಂದು ಗಂಟೆಯ ನಂತರ, ಆ ಅಧಿಕಾರಿ ಹಿಂದಿರುಗಿದರು. ಅಮೆರಿಕದಲ್ಲಿ ನನಗಿರುವ ಕಾರ್ಯಭಾರವಾದರೂ ಏನು ಎಂದು ಪ್ರಶ್ನಿಸಿದರು. ನಾನು ಉಪನ್ಯಾಸ ನೀಡಬೇಕಿದ್ದ ಸಮ್ಮೇಳನದ ವಿವರಗಳನ್ನು ನೀಡಿದೆ. ಜೊತೆಗೆ ನನ್ನ ಪುಸ್ತಕಗಳ ಶೀರ್ಷಿಕೆಗಳನ್ನೂ ಹೇಳಿದೆ. ಅವರು ಮತ್ತೆ ಮಾಯವಾದರು.

ಬಹುಶಃ ಈ ವಿವರಗಳನ್ನು ದೃಢ ಪಡಿಸಿಕೊಳ್ಳಲು ಗೂಗಲ್ ನೋಡಲಿರಬೇಕು ಎಂದು ನಾನು ಭಾವಿಸಿದೆ. ಕಡೆಗೂ ಕತ್ತಲಲ್ಲಿ ಮೂರು ಗಂಟೆಗಳು ಕಳೆದ ನಂತರ ನನ್ನ ಬಿಡುಗಡೆಯಾಯಿತು. ಹಿನ್ನೋಟ ಹರಿಸಿದಲ್ಲಿ, ಡಮಾಸ್ಕಸ್‌ನ ಉಮಯ್ಯದ್ ಮಸೀದಿಯ ಹೊರಭಾಗದಲ್ಲಿ ಮೆಚ್ಚಿಕೆಭಾವದಿಂದ ನಿಂತಿದ್ದ ಆ ಸಂಪ್ರದಾಯನಿಷ್ಠ ಪಾದ್ರಿಗಳ ಮರೆಯಲಾಗದಂಥ ದೃಶ್ಯವನ್ನು ನಾನು ಕಣ್ತುಂಬಿಕೊಂಡಿದ್ದಕ್ಕೆ ತೆತ್ತಂತಹ ಚಿಕ್ಕ ಬೆಲೆಯಾಗಿತ್ತು ಅದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry