ನುಡಿ ಮನಸಿನ ರೂಪು ರೇಖೆ

7

ನುಡಿ ಮನಸಿನ ರೂಪು ರೇಖೆ

ಓ.ಎಲ್. ನಾಗಭೂಷಣಸ್ವಾಮಿ
Published:
Updated:
ನುಡಿ ಮನಸಿನ ರೂಪು ರೇಖೆ

ಅಕ್ಷರಸ್ಥ ಮನಸ್ಸು ಬರಹದಲ್ಲಿ ರೂಪಿಸುವ ವಾಕ್ಯ, ನುಡಿ ಮನಸ್ಸು ರೂಪಿಸುವ ಮಾತನಾಡುವಾಗ ರೂಪಿಸುವ ವಾಕ್ಯ ಎರಡೂ ತೀರ ಬೇರೆ ಥರದವು. ಮತ್ತು, ಆದರೆ, ಆದ್ದರಿಂದ, ಉದಾಹರಣೆಗೆ, ಬಹುಶಃ, ಇಂಥ ಪದಗಳನ್ನು ನಾವು ಮಾತಾಡುವಾಗ ಬಳಸುತ್ತೇವೆಯೇ?

ಈ ಪದಗಳ ಬಳಕೆ ಬರವಣಿಗೆಗೆ ಸಹಜ, ನುಡಿಗೆ ಅಸಹಜ. ಹಲವು ವಿಚಾರಗಳ ನಡುವೆ ಇರುವ ಸಂಬಂಧ, ವಿಚಾರಗಳ ವಿಶ್ಲೇಷಣೆ ಇವನ್ನೆಲ್ಲ ಬರವಣಿಗೆಯಲ್ಲಿ ಸ್ಪಷ್ಟವಾಗಿ ತೋರಿಸುವುದಕ್ಕೆಂದೇ ವಾಕ್ಯ ರಚನೆಯೂ ಜಟಿಲವಾಗುತ್ತದೆ.

ನುಡಿ ಮನಸ್ಸು ಬಳಸುವ ಭಾಷೆಯ ವಾಕ್ಯಗಳು ಸರಳ. ಒಂದು ವಾಕ್ಯದಲ್ಲಿ ಒಂದು ವಿಚಾರ ಅನ್ನುವ ಹಾಗಿರುತ್ತದೆ. ವಿಚಾರಗಳ ಹೆಣಿಗೆಯು ಸರಳ ವಾಕ್ಯಗಳ ಒಟ್ಟಾರೆ ಪರಿಣಾಮ ಅನ್ನುವಂತಿರುತ್ತದೆ: ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಜನ ಮಕ್ಕಳು. ಒಬ್ಬ ಜಾಣ. ಇನ್ನೊಬ್ಬ ವೀರ. ಮೂರನೆಯವನು ಪೆದ್ದ...

ನುಡಿ ಮನಸು ಹೀಗೆ ಹೇಳಿದರೆ ಶಿಕ್ಷಣ, ಸಾಹಸಗಳಲ್ಲಿ ಆಸಕ್ತರಾದ ಮತ್ತು ಅವರಿಗಿಂತ ಭಿನ್ನ ಸ್ವಭಾವದ ಮಗನೊಬ್ಬನಿದ್ದ ರಾಜನ ಕಥೆ ಇಲ್ಲಿದೆ  ಎಂದು ಅಕ್ಷರಸ್ಥ ಮನಸ್ಸು ಹೇಳೀತು.ನುಡಿ ಸಂಸ್ಕೃತಿಯ ಕಾವ್ಯಗಳಲ್ಲಿ ಮಾತ್ರವಲ್ಲ ದಿನ ನಿತ್ಯದ ಮಾತುಕಥೆಯಲ್ಲೂ ಚಿತ್ರವತ್ತಾದ ವರ್ಣನೆಯ ಸೂತ್ರರೂಪದ ಮಾತುಗಳಿರುತ್ತವೆ. ಹುಡುಗಿ ಅಪರಂಜಿಯಂಥವಳು, ಮಾರುದ್ದ ಜಡೆಯವಳು; ನಾಯಕ ಬರಿಯ ಶಕ್ತಿವಂತನಲ್ಲ, ಬಲ ಭೀಮ, ಆರೋಗ್ಯವಂತನಾದವನು ಗುಂಡು ಕಲ್ಲು ಇದ್ದ ಹಾಗೆ ಇರುತ್ತಾನೆ; ಕೋಪ ಬಂದರೆ ಕಣ್ಣಲ್ಲಿ ಕೆಂಡ ಸುರಿಯುತ್ತದೆ. ಇಂಥ ಮಾತು ಕೇಳಿರುತ್ತೇವೆ, ಆಡಿರುತ್ತೇವೆ.

ದಿನ ಬಳಕೆಯಲ್ಲಿ ಸುಲಭವಾಗಿ ಒದಗಿ ಬರುವ ಇಂಥ ನುಡಿಕಟ್ಟುಗಳು ಹಲವು ತಲೆಮಾರುಗಳನ್ನು ದಾಟಿ ಬಂದಿರುತ್ತವೆ. ಅಭ್ಯಾಸಬಲ ಅನ್ನುವ ಹಾಗೆ ಒದಗಿ ಬರುತ್ತ ಸಂವಹನೆಯನ್ನು ಸುಲಭವಾಗಿಸುತ್ತವೆ. ಪರಂಪರೆಯ ಭಾರ ಹೊತ್ತಿರುವ ಇಂಥ ಸೂತ್ರರೂಪೀ ನುಡಿಯ ಕಟ್ಟುಗಳನ್ನು ಅಕ್ಷರಸ್ಥ ಸಾಹಿತ್ಯಕ ಮನಸ್ಸು ಕ್ಲೀಶೆಗಳು ಎಂದು ಉದಾಸೀನ ಮಾಡುತ್ತದೆ.

ಭವ್ಯಭಾರತದ ಮಹಾನ್ ಸಂಸ್ಕೃತಿ ಮೊದಲಾದ ಆಧುನಿಕ ನುಡಿ ಕಟ್ಟುಗಳು ಕೂಡ ಇಂಥವೇ. ಬರವಣಿಗೆಯ ನೆರವಿಲ್ಲದ, ಆಲೋಚನೆಗೂ ಮನಸ್ಸೇ ಉಗ್ರಾಣವಾಗಿರುವ ನುಡಿ ಸಂಸ್ಕೃತಿಯಲ್ಲಿ ಇಂಥ ಕಟ್ಟುಗಳನ್ನು ಪ್ರಶ್ನಿಸುವುದಾಗಲೀ, ವಿಶ್ಲೇಷಿಸುವುದಾಗಲೀ ನಡೆಯುವುದಿಲ್ಲ. ಯಾಕೆಂದರೆ ಕಾವ್ಯದ ಸಿದ್ಧ ಸೂತ್ರಗಳನ್ನು, ಮಾತಿನಲ್ಲಿ ಬಳಕೆಯಾಗುವ ಇಂಥ ಕಟ್ಟುಗಳನ್ನು ಬಿಡಿಸಿ ನೋಡಿ ಪ್ರಶ್ನಿಸುವುದೆಂದರೆ ಸ್ಥಿರಗೊಂಡ ಆಲೋಚನೆಯ ಕ್ರಮವನ್ನು ಪ್ರಶ್ನಿಸುವ ಕೆಲಸವಾಗುತ್ತದೆ.ಮನಸ್ಸು ಚದುರಿದ್ದಾಗ ಆಲೋಚನೆ ಅಸಾಧ್ಯ. ಆಲೋಚನೆ ಸಾಧ್ಯವಾಗಲು ನಿರಂತರತೆ ಇರಬೇಕು. ನುಡಿ ಸಂಸ್ಕೃತಿಯಲ್ಲಿ ಆಡುವ ಮತ್ತು ಕೇಳುವ ಮನಸ್ಸುಗಳಲ್ಲಿ ಈ ನಿರಂತರತೆ ಇರುತ್ತದೆ.

ಅಕ್ಷರಸ್ಥ ಮನಸ್ಸು ನೆಚ್ಚುವ ಬರವಣಿಗೆಯಲ್ಲಿ ಈ ನಿರಂತರತೆ ಮನಸ್ಸಿನ ಆಚೆ, ಸಾಲು ಸಾಲಾಗಿ ಅಳವಟ್ಟ ಅಕ್ಷರಗಳಲ್ಲಿ, ವಾಕ್ಯಗಳಲ್ಲಿ, ಪ್ಯಾರಾಗಳಲ್ಲಿ ಕಣ್ಣಿಗೆ ಕಾಣುವಂತೆ ಇರುತ್ತದೆ. ಓದುತ್ತಿರುವ ಸಂಗತಿ ಅರ್ಥವಾಗದಿದ್ದರೆ ತಟ್ಟನೆ ಓದು ನಿಲ್ಲಿಸಿ ಕೆಲವು ಸಾಲು ಅಥವ ಪುಟ ಹಿಂದಿನಿಂದ ಮತ್ತೆ ಆರಂಭಿಸಿ ಸಂದರ್ಭವನ್ನು ಸ್ಪಷ್ಟಮಾಡಿಕೊಳ್ಳಬಹುದು.ನುಡಿ ಮನಸಿಗೆ ಇಂಥ ಅವಕಾಶವಿಲ್ಲ. ಆಲೋಚನೆ ಸಾವಕಾಶವಾಗಿ ಮುಂದುವರೆಯಬೇಕು. ಹಾಗೆ ಮುಂದುವರೆಯುತ್ತ ಸ್ವಲ್ಪ ಹೊತ್ತಿಗೆ ಮುನ್ನ ಹೇಳಿದ ವಿಚಾರವನ್ನು ಅದೇ ರೀತಿಯಲ್ಲೋ, ಸ್ವಲ್ಪ ಬೇರೆ ರೀತಿಯಲ್ಲೋ ರಿಪೀಟು ಮಾಡಬೇಕು. ಹಾಗಲ್ಲದೆ ಚಿಂತನೆಯ ನಿರಂತರತೆ ಸಾಧ್ಯವಾಗದು.

ವಿಶ್ಲೇಷಣಾತ್ಮಕವಾದ ಅನುಕ್ರಮ ಚಿಂತನೆ ಬರವಣಿಗೆಯ ತಾಂತ್ರಿಕತೆಯ ಕಾರಣದಿಂದ ಹುಟ್ಟಿದ್ದು. ಬರವಣಿಗೆ ಇಲ್ಲದಿರುವಾಗ ಸಾವಕಾಶವಾದ ಚಿಂತನೆ, ಚಿಂತನೆಯ ಪುನರುಕ್ತಿ ಅನಿವಾರ್ಯ.ಕುಮಾರವ್ಯಾಸ, ಹರಿಹರ ಇಂಥ ಕವಿಗಳಲ್ಲಿ ಮಾತಿನ ದುಂದುಗಾರಿಕೆ ಇದೆ, ಹೇಳಿದ್ದನ್ನೇ ಹೇಳುತ್ತಾರೆ ಅನ್ನುವ ಆಪಾದನೆ ಇದೆಯಲ್ಲ ಅದು ತಪ್ಪು ತಿಳಿವಳಿಕೆಯಿಂದ ಮೂಡಿದ್ದು. ಅವು ನುಡಿ ಮುಖ್ಯ ಕಾವ್ಯಗಳು, ಕೇಳಿಸಿಕೊಳ್ಳಬೇಕಾದವು.

ಪುನರುಕ್ತಿ ಇಲ್ಲದೆ ಸುಮ್ಮನೆ ಒಂದು ಸಾರಿ ಕೇಳಿಸಿಕೊಂಡ ತಕ್ಷಣ ಮನಸ್ಸಿಗೆ ನಾಟುತ್ತದೆಯೇ? ಇದೇ ಕಾರಣಕ್ಕೆ ಮೇಷ್ಟರುಗಳು ತರಗತಿಯಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು. ಮತ್ತೆ ಮತ್ತೆ ಹೇಳಿದ್ದನ್ನು ಕೇಳಿ ಕೇಳಿಯೇ ಮನಸ್ಸಿನಲ್ಲಿ ವಿಚಾರಗಳು ಊರಿಕೊಳ್ಳಬೇಕಾದದ್ದು ನುಡಿ ಸಂಸ್ಕೃತಿಯ ಮುಖ್ಯ ಲಕ್ಷಣ.

ಕಾಲವನ್ನು ಗೆಲ್ಲುವ ಬರವಣಿಗೆಯ ಉಪಯೋಗ ಹೆಚ್ಚಿದ ಮೇಲಷ್ಟೆ ಪುನರುಕ್ತಿ ಒಂದು ದೋಷ ಅನ್ನುವ ನಿಲುವು ಬೆಳೆದದ್ದು. ಪುನರುಕ್ತಿ ಇಲ್ಲದ ಬರವಣಿಗೆ ಓದುಗರಿಗೆ ಅರ್ಥವಾಗುವುದು ಕಷ್ಟ. ಯಾಕೆಂದರೆ ಅವರು ಮತ್ತೆ ಮತ್ತೆ ಹಿಂದಡಿ ಇಟ್ಟು ಅರ್ಥವನ್ನು ಕಟ್ಟಿಕೊಂಡು ಮತ್ತೆ ಮುಂದುವರೆಯಬೇಕಾಗುತ್ತದೆ.

ಬರವಣಿಗೆ ಮತ್ತು ಓದುವಿಕೆ ಮನಸಿನ ಚಲನೆಯನ್ನು ನಿಧಾನಗೊಳಿಸುತ್ತದೆ. ನುಡಿಗೆ ಸಹಜವಾದ ಪುನರುಕ್ತಿಯು ವಿಚಾರಗಳನ್ನು ಜೋಡಿಸಿಕೊಂಡು ಮನಸ್ಸು ಮುಂದೆ ಮುಂದೆ ಸಾಗುವಂತೆ ಮಾಡುತ್ತದೆ.

ಇನ್ನೊಂದು ಕಾರಣವೆಂದರೆ ಎದುರಿಗೆ ನೂರು ಜನರನ್ನು ಕೂಡಿಸಿಕೊಂಡು ಮಾತಾಡುತ್ತಿರುವಾತ ಎಲ್ಲರಿಗೂ ತನ್ನ ಮಾತು ಅರ್ಥವಾಗಲೆಂದು ರಿಪೀಟು ಮಾಡಬೇಕು; ಮಾತ್ರವಲ್ಲ, ಮುಂದೇನು ಹೇಳಬೇಕು ಎಂದು ಆಲೋಚನೆಯನ್ನೂ ಮಾಡುತ್ತಿರಬೇಕು. ಪುನರುಕ್ತಿ ಅಂಥ ಆಲೋಚನೆಗೆ ಅನುವು ಮಾಡಿಕೊಡುತ್ತದೆ.ನುಡಿ ಮುಖ್ಯವಾದ ಸಂಸ್ಕೃತಿ ಬಹುಮಟ್ಟಿಗೆ ಸಂಪ್ರದಾಯಸ್ಥವಾಗಿರುತ್ತದೆ. ಯಾಕೆಂದರೆ ಪುನರುಕ್ತವಾಗದ ಜ್ಞಾನ ಬಲು ಬೇಗ ಮಾಯವಾಗಿಬಿಡುತ್ತದೆ. ತಲೆಮಾರುಗಳಿಂದ ಸಾಗಿ ಬಂದ ತಿಳಿವಳಿಕೆಯನ್ನು ಉಳಿಸಿಕೊಳ್ಳುವುದಕ್ಕೆ, ಮುಂದಿನ ತಲೆಮಾರಿಗೆ ಸಾಗಿಸುವುದಕ್ಕೆ ನುಡಿ ಸಂಸ್ಕೃತಿಯ ಮನಸ್ಸು ಬಹಳವೇ ಶ್ರಮಪಡಬೇಕು. ಹಾಗಾಗಿ ಆಲೋಚನೆಯ ಪ್ರಯೋಗಶೀಲತೆಗೆ ಹಿಂಜರಿಯುವ ಮನೋಭಾವ ಕೂಡ ಹುಟ್ಟಬಹುದು.

ಹಳೆಯ ಜ್ಞಾನವನ್ನು ನೆನಪಿಟ್ಟುಕೊಂಡು ಬೇಕಾದಾಗ ಅದನ್ನು ಹೇಳಬಲ್ಲ ಹಳಬರ ಬಗ್ಗೆ ನುಡಿ ಸಂಸ್ಕೃತಿಯಲ್ಲಿ ಹೆಚ್ಚಿನ ಗೌರವವಿರುತ್ತದೆ. ಅವರು ಶಾಸ್ತ್ರಗಳನ್ನು ಮನನ ಮಾಡಿಕೊಂಡವರಿರಬಹುದು, ಹಳೆಯ ಕಥೆಗಳನ್ನು ಬಲ್ಲವರೂ ಇರಬಹುದು. ಈ ವಿವೇಕಿಗಳು ಪ್ರಾಚೀನವನ್ನು ತಮ್ಮ ಮನಸಿನಲ್ಲಿ ಉಳಿಸಿಕೊಂಡು ಹೊಸ ತಲೆಮಾರು ಹೊಸ ಕಾಣ್ಕೆಗಳನ್ನು ಪಡೆಯಲು ಅನುವು ಮಾಡಿಕೊಡುವವರಾಗಿರುತ್ತಾರೆ.ಬರವಣಿಗೆಯೂ ಒಂದು ಥರ ಸಂಪ್ರದಾಯಸ್ಥವೇ. ಸುಮೇರಿಯದಲ್ಲಿ ಸಿಕ್ಕಿರುವ ಕಾನೂನುಗಳ ಬರವಣಿಗೆಯನ್ನೇ ನೋಡಿ. ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು ಬರಹಗೊಂಡಾಗ ಮನಸಿಗೆ ಹೊಸ ಆಲೋಚನೆಗಳಲ್ಲಿ ತೊಡಗುವ ಅವಕಾಶ ದೊರೆಯುತ್ತದೆ.

ಶಿಕ್ಷಣ ಕ್ರಮದಲ್ಲಿ ಎಷ್ಟೆಲ್ಲ, ಯಾವೆಲ್ಲ ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಾಗುತ್ತದೆ ಎಂಬ ಸಂಗತಿ ಆ ಸಮುದಾಯವು ನುಡಿ ಮುಖ್ಯವಾದದ್ದೋ, ಬರಹ ಮುಖ್ಯವಾದದ್ದೋ ಅನ್ನುವುದನ್ನು ತಿಳಿಸುತ್ತದೆ.ಬರಹ, ಅದರಲ್ಲೂ ಮುದ್ರಣ ವ್ಯಾಪಕವಾಗಿ ಬಳಕೆಗೆ ಒದಗಿದಾಗ ಯಾವುದೇ ತಿಳಿವಳಿಕೆಯನ್ನು ವಿವರವಾಗಿ, ವಿಶ್ಲೇಷಣಾತ್ಮಕವಾಗಿ, ಜೀವಂತ ಅನುಭವದಿಂದ ದೂರವಾಗಿ ವ್ಯವಸ್ಥೆಗೊಳಿಸುವುದು ಸುಲಭವಾಗುತ್ತದೆ, ಸಾಮಾನ್ಯ ಅಭ್ಯಾಸವಾಗುತ್ತದೆ. ನುಡಿ ಮುಖ್ಯವಾದ ಸಂಸ್ಕೃತಿ ವಸ್ತು ಜಗತ್ತಿನ ತಿಳಿವಳಿಕೆಯನ್ನು ವ್ಯಕ್ತಿಗಳ ಚಟುವಟಿಕೆಗಳ ಭಾಗವಾಗಿಯೇ ಕಲ್ಪಿಸಿಕೊಳ್ಳುತ್ತದೆ.

ಮನುಷ್ಯ ಅಥವ ದೇವ ದಾನವರ ಕ್ರಿಯೆಗಳಿಂದ ಬೇರ್ಪಟ್ಟಿರುವ ಅಂಕಿಅಂಶಗಳು, ವಾಸ್ತವಸತ್ಯಗಳು ನುಡಿ ಸಂಸ್ಕೃತಿಯಲ್ಲಿರಲು ಸಾಧ್ಯವೇ ಇಲ್ಲ. ಇವತ್ತು ಬೇಕಾದರೆ ನಾವು ಸ್ವತಂತ್ರ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪಟ್ಟಿಯನ್ನು ಹಲವು ಕ್ರಮಗಳಲ್ಲಿ ತಯಾರು ಮಾಡಿಕೊಳ್ಳಬಹುದು.

ಆದರೆ ಮಹಾಭಾರತದಂಥ ಕೃತಿಯನ್ನು ನೋಡಿ. ಅಲ್ಲಿ ಬರುವ ನೂರಾರು ರಾಜರು, ಅವರ ರಾಜ್ಯ, ಅವರ ವಂಶಾವಳಿ ಇವನ್ನೆಲ್ಲ ಅವರವರು ಮಾಡಿದ ಕಾರ್ಯಗಳೊಂದಿಗೇ ನಿರೂಪಿತವಾಗುತ್ತವೆ. ನುಡಿ ಮನಸ್ಸು `ಚರಿತ್ರೆ~ಯ ದಾಖಲೆಯನ್ನು ನೆನಪಿನಲ್ಲಿ ಉಳಿಸಿಕೊಂಡದ್ದೇ ಹೀಗೆ.

ಇವತ್ತು ನಾವು ಮೋಟರ್ ಸೈಕಲ್ ರಿಪೇರಿ, ಟಿವಿ ರಿಪೇರಿ ಬಗ್ಗೆ, ಎಕ್ಸೆಲ್ ಅಥವ ವರ್ಡ್ ಅನ್ನು ಕಂಪ್ಯೂಟರಿನಲ್ಲಿ ಬಳಸುವ ಬಗ್ಗೆ ಕೈಪಿಡಿಗಳನ್ನು ಓದಿ ಅಷ್ಟೋ ಇಷ್ಟೋ ಕಲಿಯಬಹುದು. ಆದರೆ ನುಡಿಯೇ ಪ್ರಮುಖವಾಗಿರುವ ಸಂಸ್ಕೃತಿಯಲ್ಲಿ ಕಸುಬನ್ನು ಮಾಡಿ ಕಲಿಯಬೇಕು, ನೋಡಿ ಕಲಿಯಬೇಕು. ಜೀವಂತ ಅನುಭವಕ್ಕೆ ದೂರವಾದ ಜ್ಞಾನವನ್ನು ಜ್ಞಾನದ ಸಲುವಾಗಿಯೇ ಅಮೂರ್ತವಾದ ರಾಶಿಯಾಗಿ ಕೂಡಿಡುವುದು ನುಡಿ ಸಂಸ್ಕೃತಿಯ ಜಾಯಮಾನವಲ್ಲ.ಖಾಸಗಿ ದಾಖಲೆಗಳ ಮಟ್ಟಿಗೂ ಈ ಮಾತು ನಿಜ. ನಿಮ್ಮ ಮಗುವಿನ ಜನ್ಮ ದಿನ ಯಾವುದು? ನಿಮ್ಮ ಮದುವೆ ಆದದ್ದು ಯಾವಾಗ?  ಅನ್ನುವ ಪ್ರಶ್ನೆ ಕೇಳಿದರೆ ನಾವು ನೀವು ಸಾಮಾನ್ಯವಾಗಿ ಕೊಡುವ ಉತ್ತರ ಇಂಥ ತಾರೀಕು, ಇಂಥ ತಿಂಗಳು, ಇಂಥ ವರ್ಷ ಅನ್ನುವ ಅಂಕಿಗಳ ಸರಣಿಯಾಗಿರುತ್ತದೆ.

ಆದರೆ ನುಡಿ ಮುಖ್ಯವಾದ ಸಂಸ್ಕೃತಿಯ ಮನಸ್ಸು `ದೇವಸ್ಥಾನದ ಗೋಪುರ ನಿಲ್ಲಿಸಿದರಲ್ಲ, ಆಗ ನಾನು ಈ ಮಗುವಿನ ಬಸುರಿಯಾಗಿದ್ದೆ~; `ಇಂದಿರಾಗಾಂಧಿ ಸತ್ತು ಹೋದರಲ್ಲ ಅದರ ಮಾರನೆ ವರ್ಷ ನನ್ನ ಮದುವೆಯಾಯಿತು~ ಅನ್ನಬಹುದು.

ನುಡಿ ಮನಸಿಗೆ ದಾಖಲೆಗಳು ಅಂಕಿಗಳಲ್ಲ, ಜೀವಂತ ಘಟನೆಗೆ ಸಂಬಂಧಿಸಿದವಾಗಿರುತ್ತವೆ.

ಅಕ್ಷರಸ್ಥ ಮನಸ್ಸು ದಿನಾಂಕಗಳನ್ನು ಬಳಸಿದರೆ ನುಡಿ ಮನಸು ವಾರದ ಹೆಸರುಗಳನ್ನು, ಅಮಾವಾಸ್ಯೆ, ಹುಣ್ಣಿಮೆಗಳನ್ನು ಬಳಸುತ್ತದೆ. ತೀರ ಇತ್ತೀಚಿನವರೆಗೂ ಚಾಲ್ತಿಯಲ್ಲಿದ್ದ ನಮ್ಮ ಹಳ್ಳಿಯ ಪಂಚಾಯತಿಗಳನ್ನು ನೆನಪುಮಾಡಿಕೊಳ್ಳಿ. ಅಲ್ಲಿ ಕಾನೂನು ಪುಸ್ತಕಗಳು, ವಕೀಲರು ಇರುತ್ತಿರಲಿಲ್ಲ.

ಗ್ರಾಮ ಸಮುದಾಯದ ನೇತೃತ್ವದಲ್ಲಿ ಸಾಮೂಹಿಕ ಚರ್ಚೆಯ ಮೂಲಕ ಸತ್ಯವನ್ನು ಕಾಣಲು ಸಾಧ್ಯ ಅನ್ನುವ ನಂಬಿಕೆ ಈ ವ್ಯವಸ್ಥೆಯ ಹಿಂದೆ ಕೆಲಸ ಮಾಡಿದೆ. ಜಗತ್ತಿನಾದ್ಯಂತ ಸಾಮೂಹಿಕ ಸತ್ಯಾನ್ವೇಷಣೆ ನಡೆಯುತಿದ್ದ ಕಾಲ ಇತ್ತು.ಪಂಚಾಯತಿಯಂಥ ವ್ಯವಸ್ಥೆಯ ದುರ್ಬಳಕೆಯ ಮಾತು ಬೇರೆ, ಅದರ ಹಿಂದಿನ ತತ್ವ ಮಾತ್ರ ನುಡಿ ವಿನಿಮಯದ ಮೂಲಕ ಸತ್ಯವನ್ನು ಅರಿಯಬಹುದು ಅನ್ನುವ ನಂಬಿಕೆ.

1931ರಲ್ಲಿ ಉಝ್‌ಬೆಕಿಸ್ತಾನದಲ್ಲಿ ಅನಕ್ಷರಸ್ಥ ಸಮುದಾಯದ, ನುಡಿ ಮನಸ್ಸೇ ಪ್ರಮುಖವಾಗಿರುವಲ್ಲಿ ನಡೆದ ಕ್ಷೇತ್ರಕಾರ್ಯ ಕೆಲವು ಕುತೂಹಲ ಸಂಗತಿಗಳನ್ನು ಬಯಲುಮಾಡಿದೆ.

ನುಡಿ ಸಂಸ್ಕೃತಿಗಳಲ್ಲಿ ಪರಿಕಲ್ಪನೆಗಳು ಅಮೂರ್ತವಾಗಿರುವುದು ತೀರ ಅಪರೂಪ. ವ್ಯಕ್ತಿಗೆ ಗೊತ್ತಿರುವ ವಸ್ತು, ಸನ್ನಿವೇಶಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳಷ್ಟೆ ಇರುತ್ತವೆ. ಆಲೋಚನೆಯು ಸಂದರ್ಭ ಸಂವೇದಿಯಾಗಿರುತ್ತದೆ. `ಸುತ್ತಿಗೆ, ಗರಗಸ, ಕೊಡಲಿ, ಮರದ ದಿಮ್ಮಿ- ಈ ಪಟ್ಟಿಯಲ್ಲಿ ಗುಂಪಿಗೆ ಸೇರದ ಪದ ಹೇಳಿ~ ಎಂದರೆ ನಾವೆಲ್ಲ `ಮೊದಲ ಮೂರು ಉಪಕರಣಗಳು, ನಾಲ್ಕನೆಯದು ಅಲ್ಲ.

ಆದ್ದರಿಂದ ದಿಮ್ಮಿ ಗುಂಪಿಗೆ ಸೇರದ್ದು~ ಅಂದೇವು. ಅಲ್ಲಿನ ಜನರು ಹೇಳಿದ ಉತ್ತರವೇ ಬೇರೆ. `ಎಲ್ಲವೂ ಒಂದೇ ಗುಂಪು. ದಿಮ್ಮಿ ಇರದಿದ್ದರೆ ಉಳಿದ ಮೂರು ಯಾಕೆ ಬೇಕು~ ಅಂದರು. `ಉತ್ತರದ ದಿಕ್ಕಿನಲ್ಲಿ ಮುಂದೆ ಸಾಗಿದರೆ ಯಾವಾಗಲೂ ಹಿಮ ಬೀಳುವ ಜಾಗದಲ್ಲಿ ಕರಡಿಗಳು ಬೆಳ್ಳಗಿರುತ್ತವೆ.

ನೊವಯ ಝೆಮ್ಲಯ ತೀರ ಉತ್ತರ ದಿಕ್ಕಿಗಿದೆ. ಅಲ್ಲಿನ ಕರಡಿಗಳು ಯಾವ ಬಣ್ಣ?~ ಈ ಪ್ರಶ್ನೆಗೆ ನಾವು ತೀರ ಸಹಜವೆಂಬಂತೆ ಬಿಳಿಯವು ಅನ್ನುತ್ತೇವೆ. ಅಲ್ಲಿನ ಜನ ಕೊಟ್ಟ ಉತ್ತರ `ಗೊತ್ತಿಲ್ಲ. ಕಪ್ಪು ಕರಡಿ ನೋಡಿದ್ದೇನೆ. ಒಂದೊಂದು ಕಡೆ ಒಂದೊಂದು ಥರ ಇರಬಹುದು~. `ನೀನು ಎಂಥಾವನು?~ ಎಂದು ಕೇಳಿದರೆ `ಗೊತ್ತಿಲ್ಲ, ಬೇರೆಯವರನ್ನು ಕೇಳಿದರೆ ನಿಮಗೆ ತಿಳಿಯುತ್ತದೆ~  ಅನ್ನುವ ಉತ್ತರ ಸಿಕ್ಕಿತು.ನುಡಿರೂಪದ ಭಾಷೆ ಮತ್ತು ಬರಹ/ ಮುದ್ರಣ ರೂಪದ ಭಾಷೆಗಳಿಗೂ ಮನಸ್ಸಿನ ಸ್ವರೂಪ ಮತ್ತು ಗ್ರಹಿಕೆಗೂ ಇರುವ ಸಂಬಂಧದ ಬಗ್ಗೆ ಆಸಕ್ತಿಯುಳ್ಳವರು ವಾಲ್ಟರ್ ಜಿ. ಓಂಗ್ 1982ರಲ್ಲಿ ಬರೆದ `ಒರಾಲಿಟಿ ಮತ್ತು ಲಿಟರೆಸಿ~ ಪುಸ್ತಕವನ್ನು ನೋಡಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry