ನುಡಿ ವೈವಿಧ್ಯ ಯಾಕೆ ಬೇಕು?

7

ನುಡಿ ವೈವಿಧ್ಯ ಯಾಕೆ ಬೇಕು?

ಓ.ಎಲ್. ನಾಗಭೂಷಣಸ್ವಾಮಿ
Published:
Updated:
ನುಡಿ ವೈವಿಧ್ಯ ಯಾಕೆ ಬೇಕು?

ಇಲಿಗಳು ಇರದಿದ್ದರೆ ಹಾವುಗಳು ಸಾಯುತ್ತವೆ; ಹುಲಿ, ಚಿರತೆಗಳು ಇರದಿದ್ದರೆ ಜಿಂಕೆಗಳು ಹೆಚ್ಚುತ್ತವೆ; ಹಲ್ಲಿಗಳಿರದಿದ್ದರೆ ಕೀಟಗಳ ಸಂಖ್ಯೆ ಅಪಾರವಾಗಿ ಹೆಚ್ಚುತಿತ್ತು. ಯಾವುದೇ ಒಂದು ಪ್ರಾಣಿವರ್ಗ ತನ್ನಷ್ಟಕ್ಕೇ ಕುತೂಹಲದ್ದೂ ಅಲ್ಲ, ಮಹತ್ವದ್ದೂ ಅಲ್ಲ. ಎಲ್ಲ ಜೀವಿಗಳ ಒಳಸಂಬಂಧ ಜಾಲ ಮುಖ್ಯ. ಅದನ್ನು ಪರಿಸರ ವ್ಯವಸ್ಥೆ ಅನ್ನುತ್ತಾರೆ.

 

ಎಲ್ಲ ಜೀವಿಗಳು ತಾವಿರುವ ಪರಿಸರದೊಡನೆ ಕರುಳು ಬಳ್ಳಿಯ ಸಂಬಂಧ ಇಟ್ಟುಕೊಂಡಿರುತ್ತವೆ.ಸಂಸ್ಕೃತಿಯನ್ನು ಸಾಧ್ಯವಾಗಿಸುವ ಭಾಷೆಗೂ ಮತ್ತು ಜೀವವೈವಿಧ್ಯಕ್ಕೂ ಒಳನಂಟು ಇದೆ. ಮನುಷ್ಯರು ಬದುಕುವ ಪರಿಸರಕ್ಕೆ ತಕ್ಕ ಹಾಗೆ ಬೇರೆ ಬೇರೆ ಸಂಸ್ಕೃತಿಗಳು ರೂಪುಗೊಳ್ಳುತ್ತವೆ.ರಾಯಚೂರಿನ ಪರಿಸರಕ್ಕೆ ತಕ್ಕ ಹಾಗೆ ಅಲ್ಲಿನ ಆಚಾರ, ವಿಚಾರ, ಊಟ, ಭಾಷೆ, ಒಟ್ಟು ಸಂಸ್ಕೃತಿ; ಮಲೆನಾಡಿನ ಸಮುದಾಯಗಳ ಬದುಕಿನ ರೀತಿ ಅದಕ್ಕಿಂತ ಭಿನ್ನ; ಬಯಲು ಸೀಮೆಯ ಸಂಸ್ಕೃತಿ ಇನ್ನೊಂದು ಥರ. ಮನುಷ್ಯ ಸಮುದಾಯದ ರಚನೆ ಮತ್ತು ವ್ಯವಸ್ಥೆಗೂ ಸ್ಥಳೀಯ ಪರಿಸರಕ್ಕೂ ನಿಕಟ ಸಂಬಂಧ ಇರುತ್ತದೆ. ಕರ್ನಾಟಕದ ಸೀಮೆಯ ಯಾವುದೇ ಒಂದು ಪ್ರದೇಶದ ಪರಿಸರಕ್ಕೆ ಆಗುವ ಹಾನಿ ಇಡೀ ಕರ್ನಾಟಕವನ್ನೇ ಬಾಧಿಸುತ್ತದೆ ಅಲ್ಲವೇ?ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುವ ಮುಖ್ಯ ದಾರಿಯೆಂದರೆ ಭಾಷೆಯದ್ದು. ಆದ್ದರಿಂದಲೇ ಭಾಷೆಯ ಹಿಗ್ಗು, ಕುಗ್ಗು, ಸಾವು ಎಲ್ಲವನ್ನೂ ಪರಿಸರದ ಉಳಿಕೆ, ಸಲಹುವಿಕೆ, ನಾಶಗಳ ಜೊತೆಜೊತೆಗೇ ನೋಡುವ ರೀತಿ ಬೆಳೆದಿದೆ. ಪರಿಸರವು ಭಾಷೆಯ ಬಗ್ಗೆ ತಿಳಿಯುವುದಕ್ಕೆ ಒದಗಿ ಬರುವ ರೂಪಕ ಮಾತ್ರವಲ್ಲ, ಪರಿಸರ ಮತ್ತು ಭಾಷೆಗಳ ನಡುವೆ ಸಂಬಂಧ ಎಷ್ಟು ನಿಕಟ ಅನ್ನುವ ಅರಿವು ಈಗ ಮೂಡುತ್ತಿದೆ.ಆದರೂ ಎಲ್ಲೋ ಶಾಂತಸಾಗರದಲ್ಲಿ ಮೂಡುವ ಎಲ್ ನೀನೋ ಕರ್ನಾಟಕದ ಮಳೆಯನ್ನು ಪ್ರಭಾವಿಸುತ್ತದೆ ಅನ್ನುವುದು ಅಸ್ಪಷ್ಟವಾಗಿಯಾದರೂ ಗೊತ್ತಾಗಿರುವ ಹಾಗೆ ಜಗತ್ತಿನ ಯಾವುದೋ ಮೂಲೆಯಲ್ಲಿ ನಾವು ಹೆಸರೇ ಕೇಳದ ಭಾಷೆಯೊಂದು ಇಲ್ಲವಾದರೆ ನಮ್ಮ ಮೇಲೂ ಅದು ಪರಿಣಾಮ ಬೀರೀತು ಅನ್ನುವುದು ನಮ್ಮ ಮನಸ್ಸಿಗೆ ಇಳಿದಿಲ್ಲ.ಪರಿಸರ ಉಳಿಯುವುದಕ್ಕೆ ಜೀವ ವೈವಿಧ್ಯ ಅಗತ್ಯ; ಮನುಷ್ಯ ಸಂಸ್ಕೃತಿಯ ಸ್ವಾಸ್ಥ್ಯಕ್ಕೆ ಭಾಷಾ ವೈವಿಧ್ಯ ಅಗತ್ಯ. ಪರಿಸರ ವ್ಯವಸ್ಥೆಯ ಒಂದು ಅಂಶಕ್ಕೆ ಧಕ್ಕೆಯಾದರೆ ಇಡೀ ಪರಿಸರಕ್ಕೆ ಧಕ್ಕೆಯಾಗುವ ಹಾಗೆಯೇ ಭಾಷೆಯೊಂದಕ್ಕೆ ಧಕ್ಕೆಯಾದರೆ ಅದರಿಂದ ಇಡೀ ಮನುಷ್ಯ ಸಂಸ್ಕೃತಿಗೆ ಧಕ್ಕೆಯಾಗುತ್ತದೆ.ವೈವಿಧ್ಯವಿರದಿದ್ದರೆ ವಿಕಾಸವೂ ಇರುತ್ತಿರಲಿಲ್ಲ. ಭಿನ್ನ ಪರಿಸರಗಳಲ್ಲಿ ಬದುಕುವುದಕ್ಕೆ ಬೇಕಾದ ಹೊಂದಾಣಿಕೆ ಮಾಡಿಕೊಂಡ ಜೀವಿವರ್ಗಗಳು ವಿಕಾಸ ಹೊಂದಿದವು- ಗೊತ್ತಿರುವ ಈ ಸಂಗತಿಗೆ ಭಾಷೆಯನ್ನು ಹೋಲಿಸುತ್ತಾ ಯಾವ ಭಾಷಾ ವರ್ಗದಲ್ಲಿ ಅತಿ ಹೆಚ್ಚು ವೈವಿಧ್ಯವಿದೆಯೋ ಅದು ಅತ್ಯಂತ ಸದೃಢವಾಗಿರುತ್ತದೆ ಅನ್ನುತ್ತಾರೆ ಭಾಷಾಶಾಸ್ತ್ರಜ್ಞರು.ಏಕರೂಪದ ಪರಿಸರ ಜೀವಿ ವೈವಿಧ್ಯಕ್ಕೆ ಮಾರಕ. ನೀಲಗಿರಿ ನೆಡು ತೋಪುಗಳಲ್ಲಿ ಜೀವ ವೈವಿಧ್ಯ ಕಾಣುವುದಿಲ್ಲ. ಆಹಾರ, ಉಡುಪು, ಆಲೋಚನೆ, ಮಾತಿನ ರೀತಿ ಎಲ್ಲದರಲ್ಲೂ ಏಕರೂಪತೆಯನ್ನು ಒತ್ತಾಯಿಸುವ ಅಭಿವೃದ್ಧಿಯ ಕಲ್ಪನೆ, ಜಾಗತೀಕರಣ ಇವು ಭಾಷೆಯ ವೈವಿಧ್ಯಕ್ಕೆ ಮಾರಕ.ಮನುಷ್ಯ ಮನುಷ್ಯನಾಗಿರುವುದರ ಮುಖ್ಯ ಲಕ್ಷಣವೇ ಭಾಷೆ. ಸಂಸ್ಕೃತಿ ಪ್ರಸರಣವಾಗುವುದೇ ಭಾಷೆಯ ಮೂಲಕ. ಭಾಷಿಕ ಸಂವಹನವು ಭಾಷೆಯ ಸಾವಿನ ಕಾರಣದಿಂದ ಮುರಿದುಬಿದ್ದರೆ ಪರಂಪರೆಯಿಂದ ಹರಿದು ಬಂದ ಜ್ಞಾನ ಊನವಾಗುತ್ತದೆ. ಭಾಷಾ ವೈವಿಧ್ಯ ನಷ್ಟವಾದರೆ ಅಳವಡಿಕೆಗೆ ಅಗತ್ಯವಾದ ಜ್ಞಾನದ ಕೊಳ ಬತ್ತಿಹೋಗಿರುವುದರಿಂದ ಮನುಷ್ಯನ ಅಳವಡಿಕೆಯ ಸಾಮರ್ಥ್ಯವೂ ಕುಂದುತ್ತದೆ. ಸ್ಥಳೀಯ ಭಾಷೆ ನಿಸರ್ಗದ ಸಂಪನ್ಮೂಲದ ಹಾಗೆ.ಒಮ್ಮೆ ಅದು ಭೂಮಿಯಿಂದ ಕಣ್ಮರೆಯಾಯಿತೆಂದರೆ ಮರು ಸೃಷ್ಟಿ ಸಾಧ್ಯವಿಲ್ಲ ಎಂಬ ಅರಿವು ಮೂಡುತ್ತಿದೆ. ಆಲೋಚನೆಗಳನ್ನು ಕಸಿ ಮಾಡುವುದು ಬಹುಭಾಷಿಕತೆ ಇದ್ದಾಗ ಮಾತ್ರ ಸಾಧ್ಯ; ಮನುಷ್ಯ ಆಡುವ ಒಂದೊಂದು ಭಾಷೆಯೂ ಬೌದ್ಧಿಕ ಸಾಧನೆಯ ಸಾಕ್ಷಿ; ಭಾಷಿಕ ಲೋಕದ ವೈವಿಧ್ಯ ಬಹುಶಃ ಜೀವಲೋಕದ ವೈವಿಧ್ಯಕ್ಕಿಂತ ಮಿಗಿಲೇ ಇದ್ದೀತು ಅನ್ನುವುದು ಬಲ್ಲವರ ಊಹೆ.ಬೇರೆ ಬೇರೆ ಭಾಷೆಗಳ ಒಡನಾಟದ ಕುರುಹು ಅನ್ನುವ ಹಾಗೆ ಇರುವ ಎರವಲು ಪದಗಳ ಉದಾಹರಣೆಯನ್ನು ನೋಡೋಣ. ಗೆಳೆಯ, ಮಿತ್ರ, ಫ್ರೆಂಡು, ದೋಸ್ತಿ; ಲವ್, ಇಷ್ಕ್, ಪ್ರೀತಿ, ಪ್ಯಾರ್, ಮೊಹಬ್ಬತ್, ಒಲುಮೆ- ಒಂದೇ ಅರ್ಥದವು ಅನ್ನುವ ಹಾಗೆ ಕಾಣುವ ಎರವಲು ಪದಗಳು ಶಬ್ದಕೋಶಕ್ಕೆ ವೈವಿಧ್ಯತಂದಿವೆ, ಮಾತಿನ ಸ್ವಾರಸ್ಯ ಹೆಚ್ಚಿಸಿವೆ, ಶೈಲಿಯ ಸೂಕ್ಷ್ಮತೆಗಳನ್ನು ಸಾಧ್ಯವಾಗಿಸಿವೆ. ನಾವಿರುವ ಪರಿಸರದಲ್ಲಿ ಭಾಷಾ ವೈವಿಧ್ಯವಿರದಿದ್ದರೆ ಇದು ಸಾಧ್ಯವಾಗುತಿತ್ತೇ!`ಮನುಷ್ಯರು ಮರೆಯಬಹುದು, ಭಾಷೆ ಮರೆಯುವುದಿಲ್ಲ~, ಇದು ಜಾರ್ಜ್ ಸ್ಟೀನರ್‌ನ ಮಾತು. ರಾಜಕೀಯ ಮತ್ತು ಆರ್ಥಿಕ ಕಾರಣಕ್ಕೆ ಜಗತ್ತನ್ನು ಆವರಿಸಿಕೊಂಡ ಇಂಗ್ಲಿಷ್ ಸುಮಾರು 350 ಜೀವಂತ ಭಾಷೆಗಳ ಸಂಪರ್ಕಕ್ಕೆ ಬಂದು ಆಯಾ ಭಾಷಾಮೂಲಗಳಿಂದ ರೂಪುಗೊಂಡ, ಎರವಲು ಪಡೆದ ಪದಗಳನ್ನೆಲ್ಲ ಇಂಗ್ಲಿಷ್ ನಿಘಂಟು ಪಟ್ಟಿಮಾಡುತ್ತದೆ.ಪದ, ನುಡಿಗಟ್ಟುಗಳು ಸಮಾಜದ ಚರಿತ್ರೆ, ಗತಕಾಲದ ಭಾಷಿಕರ ಮನಸ್ಥಿತಿಯ ಸೂಚನೆ, ಸಾಂಸ್ಕೃತಿಕ ನಂಟುಗಳ ದಾಖಲೆಯಾಗಿರುತ್ತವೆ. ಕನ್ನಡದ ಸುತ್ತಮುತ್ತ ಇರುವ ಭಾಷೆಗಳು ಅಕಸ್ಮಾತ್ ಇರದಿದ್ದರೆ ಕನ್ನಡದ ಸಮೃದ್ಧಿಯೂ ಕಡಮೆಯಾಗುತ್ತಿತ್ತು. ಕನ್ನಡಕ್ಕೆ ಅಕಸ್ಮಾತ್ತಾಗಿ ಸಾವಿರ ಭಾಷೆಗಳ ಸಂಪರ್ಕ ಸಾಧ್ಯವಿದ್ದಿದ್ದರೆ ಆಗ ಕನ್ನಡದ ಅಭಿವ್ಯಕ್ತಿ ಸಾಧ್ಯತೆ ಅನೂಹ್ಯ ಪ್ರಮಾಣದಲ್ಲಿ ಹೆಚ್ಚುತ್ತಿತ್ತು.ಯಾವುದೇ ಭಾಷೆ ಪುಷ್ಟವಾಗುವುದಕ್ಕೆ ಸುತ್ತ ಮುತ್ತ ಅನೇಕ ಜೀವಂತ ಭಾಷೆಗಳು ಇರಲೇಬೇಕು, ಅವುಗಳ ಸಂಪರ್ಕವೂ ಇರಲೇಬೇಕು. ಒಂದೊಂದು ಭಾಷೆಯೂ ವಿಶ್ವದ ಒಂದೊಂದು ಮಾದರಿಯನ್ನು, ಜಗತ್ತನ್ನು ಅರ್ಥಮಾಡಿಕೊಳ್ಳುವ ಅರ್ಥವಂತಿಕೆಯ ಭಿನ್ನ ವ್ಯವಸ್ಥೆಗಳನ್ನು ಒಳಗೊಂಡಿದೆ. ಜಗತ್ತನ್ನು ವಿವರಿಸುವ ನಾಲ್ಕು ಸಾವಿರ ಬಗೆಗಳು ನಮಗೆ ಲಭ್ಯವಾದರೆ ನಾವು ನಿಜವಾಗಲೂ ಶ್ರಿಮಂತರು ಅನ್ನುತ್ತಾನೆ ವ್ಯಾಸೆಸ್ಲಾವ್ ಇವಾನೋವ್. ಇನ್ನೊಂದು ಶತಮಾನದ ಅವಧಿಯಲ್ಲಿ ತಜ್ಞರು ನಿರೀಕ್ಷಿಸುವಂತೆ ಬಹಳಷ್ಟು ಭಾಷೆಗಳು ಇಲ್ಲವಾಗುವುದೇ ನಿಜವಾದರೆ ಮನುಷ್ಯನ ಸಾಂಸ್ಕೃತಿಕ ಸಂಪತ್ತು ನಷ್ಟವಾಗುತ್ತದೆ, ಮನುಷ್ಯಾಭಿವ್ಯಕ್ತಿಯ ಶಕ್ತಿ ಕುಂದುತ್ತದೆ.ವೈವಿಧ್ಯದ ಪರಿಕಲ್ಪನೆಯ ಇನ್ನೊಂದು ಮಗ್ಗುಲು ಅಸ್ಮಿತೆ. `ಇವರು ಇವರೇ, ಅವರಲ್ಲ; ನಾನು ನಾನೇ, ಬೇರೆ ಯಾರೋ ಅಲ್ಲ~ ಎಂದು ಸೂಚಿಸುವುದೇ ಅಸ್ಮಿತೆ. ದೇಹಾಕಾರ, ಉಡುಪು, ನಂಬಿಕೆ, ವರ್ತನೆ, ಆಚರಣೆ, ಸಂಗೀತ, ಕಲೆ, ಕರಕುಶಲ ವಸ್ತು ಇತ್ಯಾದಿಗಳೆಲ್ಲ ಅಸ್ಮಿತೆಯ ಅಂಶಗಳೇ ಆದರೂ ಅಸ್ಮಿತೆಯ ಲಕ್ಷಣಗಳನ್ನೆಲ್ಲ ಸರ್ವಾಂತರ್ಯಾಮಿಯಾಗಿ ಆವರಿಸಿಕೊಂಡಿರುವುದು ಸಮುದಾಯದ ಭಾಷೆಯೇ. ಭಾಷೆ ನಷ್ಟವಾದರೆ ಸಮುದಾಯದ ಅಸ್ಮಿತೆಯೂ ಇಲ್ಲವಾಗುತ್ತದೆ.ಭಾಷೆಗಳು ಚರಿತ್ರೆಗಳ ಉಗ್ರಾಣ. ಭಾಷೆಯೊಂದು ನಷ್ಟವಾದರೆ ಗತಕಾಲದೊಡನೆ ಸಂಬಂಧ ಸ್ಥಾಪಿಸುವುದೇ ಅಸಾಧ್ಯ. ಹಳಗನ್ನಡ ಗೊತ್ತಿರದಿದ್ದರೆ ನಮ್ಮ ಬುದ್ಧಿ ಮಾತ್ರ ಅಯ್ಯೋ ಗತಕಾಲದ ಒಡನಾಟ ಸಾಧ್ಯವಿಲ್ಲ ಎಂದೀತು. ಆದರೆ ಅಜ್ಜ ಅಜ್ಜಿ ಬಳಸುತಿದ್ದ ಭಾಷೆ ನಮಗೆ ಗೊತ್ತಿಲ್ಲವಾದರೆ ಆಗ ಆಗುವ ಸಂಕಟ, ನಷ್ಟ ಹೆಚ್ಚು ತೀವ್ರ. ಬರವಣಿಗೆ ಭಾಷೆ ಮಾತ್ರ ಅಲ್ಲ, ಆಡು ಮಾತಿನ ಕಥೆ, ಗೀತೆ, ಲಾವಣಿ, ಪ್ರದರ್ಶನ ಕಲೆ ಇವು ಕೂಡ ಸಾವಿರಾರು ವರ್ಷಗಳಷ್ಟು ಹಳೆಯ ಸಾಮಗ್ರಿಗಳನ್ನು ಕಾಪಾಡಿಕೊಂಡಿವೆ.ಭಾಷೆ ಇಲ್ಲವಾಗುವುದೆಂದರೆ ಬರವಣಿಗೆಯೂ ಆಡುಮಾತೂ ಇಲ್ಲವಾಗುವುದು. ಭಾಷಿಕರ ಅಸ್ಮಿತೆ ಇಲ್ಲವಾಗುವುದು. ಅಸ್ಮಿತೆ ಚರಿತ್ರೆ ಎರಡೂ ಸೇರಿ ಪ್ರತಿಯೊಂದು ಭಾಷೆಯೂ ಮನುಷ್ಯ ಅಸ್ತಿತ್ವದ ವಿಶಿಷ್ಟ ಕೋಶವೂ ವ್ಯಾಖ್ಯಾನವೂ ಆಗುತ್ತದೆ. ಅದಕ್ಕೇ ಭಾಷೆಗಳು ಸಾಯಬಾರದು.ಜಗತ್ತಿನ ಅರ್ಧದಷ್ಟು ಮನುಷ್ಯರು ದ್ವಿಭಾಷಿಕರು. ಆದರೆ ಏಕಭಾಷಿಕರಿಗೆ ಜಗತ್ತು ಹೀಗೆ ಕಾಣದು. ಅವರ ಮನಸ್ಸು ಅನೇಕ ಶತಮಾನಗಳಿಂದ ಪ್ರಧಾನ ಸಂಸ್ಕೃತಿಯ ಭಾಗವಾಗಿ ಬೆಳೆದಿರುತ್ತದೆ. `ಅನ್ಯರು~ ನಮ್ಮ ಭಾಷೆ ಕಲಿಯಲಿ, `ನಾವು~ ಅವರ ಭಾಷೆ ಕಲಿಯುವುದಿಲ್ಲ ಅನ್ನುವುದು ಅವರ ಧೋರಣೆ. ಪ್ರಮುಖ ವಸಾಹತುಶಾಹಿ ದೇಶಗಳು, ಅಥವ ಧರ್ಮಪ್ರಸಾರದಲ್ಲಿ ತೊಡಗಿದ ಏಕಭಾಷಿಕ ದೇಶಗಳು ಹೀಗೆ ಭಾವಿಸುತ್ತವೆ- ಅರಾಬಿಕ್, ಡಚ್, ಇಂಗ್ಲಿಷ್, ಫ್ರೆಂಚ್, ಜರ್ಮನ್, ಇತಾಲಿಯನ್, ಪೋರ್ಚುಗೀಸ್, ಸ್ಪಾನಿಶ್ ಇಂಥ ಧೋರಣೆಯವು.ಏನಾದರೂ ಕಾಲ್ಪನಿಕ ಅವಘಡದಿಂದ ಸುಪ್ರಸಿದ್ಧ ಭಾಷೆಯೊಂದು ಕಣ್ಮರೆಯಾಗಿದ್ದರೆ ಅನ್ನುವ ಊಹೆ ಮಾಡಿ ನೋಡಿ. ಫ್ರೆಂಚರು 1066ರಲ್ಲಿ ಇಂಗ್ಲೆಂಡನ್ನು ಗೆದ್ದಾಗ ಅವರ ಭಾಷೆಯನ್ನೂ ನಾಶಮಾಡಿದ್ದಿದ್ದರೆ ಚಾಸರ್, ಶೇಕ್ಸ್‌ಪಿಯರ್, ಯಾರೂ ಇರುತ್ತಿರಲಿಲ್ಲ ಅಲ್ಲವೇ! ಇದೇ ಎಚ್ಚರ ಎಲ್ಲ `ಚಿಕ್ಕ~ ಭಾಷೆಗಳ ಬಗ್ಗೆ ಬೆಳೆಯಬೇಕು. ಪ್ರತಿ ಭಾಷೆಯಲ್ಲೂ ಒಬ್ಬ ಪಂಪ, ಶೇಕ್ಸ್‌ಪಿಯರ್ ಬಂದಾನು.ನುಡಿಮಾತ್ರವಾಗಿರುವ ಭಾಷೆಗಳ ಸಾಮಗ್ರಿ ಸಂಗ್ರಹವಾಗದಿದ್ದರೆ ದೊಡ್ಡ ನಷ್ಟ. ಅಂಥ ಭಾಷೆಗಳನ್ನಾಡುವ ಜನರ ಸಂಪರ್ಕದಿಂದಲೇ ಸಸ್ಯ, ಪ್ರಾಣಿಗಳ ಬಗೆಗಿನ ನಮ್ಮ ತಿಳಿವಳಿಕೆ ಹೆಚ್ಚಿರುವುದು. ಯಾವುದೇ ಭೂಭಾಗದ ಮೂಲವಾಸಿಗಳು ತಮ್ಮ ಪರಿಸರದ ಬಗ್ಗೆ, ಜೀವರಾಶಿಗಳ ಬಗ್ಗೆ ಶತಮಾನಗಳಿಂದ ಪಡೆದಿಟ್ಟುಕೊಂಡಿರುವ ತಿಳಿವಳಿಕೆ, ಅವರ ಆಚರಣೆ, ನಂಬಿಕೆ, ಕಲೆ, ಕನಸುಗಳ ಜ್ಞಾನ ಇವೆಲ್ಲ ಇಲ್ಲವಾಗುತ್ತದೆ ಅವರ ಭಾಷೆ ನಾಶವಾದರೆ. ಸ್ಥಳೀಕರು ಏನೇ ಎಷ್ಟೇ ಕಷ್ಟ ಎದುರಿಸುತಿದ್ದರೂ ಜಗತ್ತಿನ ಐದರಲ್ಲೊಂದು ಭಾಗದಲ್ಲಿ ಇರುವ `ನಿಜ ಅಧಿಕಾರಿ~ಗಳು. ಅವರ ಒಂದೊಂದು ಭಾಷೆಯೂ ಅವರ ಬೌದ್ಧಿಕ ಸಂಪತ್ತಿನ ಸಾಕಾರ ರೂಪ. ಮನುಷ್ಯ ಭಾಷೆಯ ಸಾಮರ್ಥ್ಯದ ದೃಷ್ಟಿಯಿಂದ ಜ್ಞಾನ, ಒಳನೋಟ, ವಿವೇಕಗಳ ದೃಷ್ಟಿಯಿಂದ ಉಪಭಾಷೆ ಕಿರುಭಾಷೆ ಸ್ಥಳೀಯಭಾಷೆ ಇತ್ಯಾದಿ ವ್ಯತ್ಯಾಸಗಳು ನಗಣ್ಯ.ಮನುಷ್ಯ ವಿವೇಕದ ಒಟ್ಟು ಮೊತ್ತ ಯಾವುದೇ ಒಂದು ಭಾಷೆಯ ಸ್ವತ್ತಲ್ಲ, ಮನುಷ್ಯ ಗ್ರಹಿಕೆಯ ಎಲ್ಲ ರೂಪಗಳನ್ನು ವೈವಿಧ್ಯಗಳನ್ನೂ ಯಾವುದೇ ಒಂದು ಭಾಷೆ ಮಾತ್ರ ಪೂರ್ಣವಾಗಿ ವ್ಯಕ್ತಪಡಿಸಲಾರದು. ಮನುಷ್ಯ ವಿವೇಕವನ್ನು ಹೆಚ್ಚಿಸಿಕೊಳ್ಳುವ ಒಂದು ದಾರಿ ಹೆಚ್ಚು ಭಾಷೆಗಳನ್ನು ಕಲಿಯುವುದು, ಭಾಷೆಗಳ ಬಗ್ಗೆ ಹೆಚ್ಚು ತಿಳಿಯುವುದು. ಹಾಗೆ ತಿಳಿದದ್ದನ್ನು ಮುಂದಿನ ಪೀಳಿಗೆಗೆ ಉಳಿಸುವುದು.ಮನುಷ್ಯ ಭಾಷೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ, ಸ್ಪಷ್ಟವಾಗಿ ವಿವರಿಸುವುದಕ್ಕೆ, ಭಾಷೆಯನ್ನು ರೂಪಿಸುವಲ್ಲಿ ಮನುಷ್ಯ ಮಿದುಳು ಯಾವ ಅಂಶಗಳನ್ನೆಲ್ಲ ಬಳಸಿಕೊಳ್ಳುತ್ತದೆ ಅನ್ನುವುದನ್ನು ತಿಳಿಯುವುದಕ್ಕೆ ಸಾಧ್ಯವಾದಷ್ಟೂ ಹೆಚ್ಚು ಸಂಖ್ಯೆಯ ಭಾಷೆಗಳ ಸಾಕ್ಷಿ ದೊರೆಯಬೇಕು.ಪ್ರಮುಖ ಭಾಷೆಗಳ ಹೆದ್ದಾರಿಯಿಂದ ಬಲುದೂರದಲ್ಲಿ ಇದ್ದುಕೊಂಡು ಮಿಕ್ಕ ಭಾಷೆಗಳಲ್ಲಿ ಇರದ ಲಕ್ಷಣಗಳನ್ನು ಹೊಂದಿರುವ ಭಾಷೆಗಳಂತೂ ಅಪೂರ್ವ ಸಾಮಗ್ರಿಗಳಿರುವ ಅಮೂಲ್ಯ ಸಂಪತ್ತು. ಐವತ್ತೋ ಅರುವತ್ತೋ ಜನ ಆಡುವ ಭಾಷೆ ಇಲ್ಲವಾದರೂ ಮನುಷ್ಯ ಸಾಮರ್ಥ್ಯದ ಬಗ್ಗೆ ತಿಳಿಯುವ ಅಪೂರ್ವ ಆಕರವೊಂದು ಕಣ್ಮರೆಯಾಗುತ್ತದೆ.ಆದರೆ, ಬಹಳಷ್ಟು ಜನ ವ್ಯತ್ಯಾಸ ವೈವಿಧ್ಯಗಳನ್ನು, ಭಿನ್ನ ಅಸ್ಮಿತೆಯವರನ್ನು ಸಹಿಸಲಾರರು. ಅವರನ್ನು ತಿರಸ್ಕರಿಸಿ, ದಾಳಿಮಾಡಿ ದಮನಿಸುವ ಅವಕಾಶಕ್ಕೆ ಕಾಯುತ್ತಿರುತ್ತಾರೆ. ರಾಷ್ಟ್ರೀಯ ಭಾವನೆಯಿಂದ, ಜನಾಂಗೀಯ ಭಾವನೆಯಿಂದ ಹುಟ್ಟಿದ ದ್ವೇಷದ ಪರಿಣಾಮ ಭಾಷೆಯ ಮೇಲೂ ಆಗುತ್ತದೆ. ಮನುಷ್ಯ ಸಮಾನತೆಯಲ್ಲಿ ನಂಬಿಕೆ ಇರುವ ಪರಿಸರ ವೈವಿಧ್ಯದಲ್ಲಿ ಸಂತೋಷ ಕಾಣುವ, ಜೀವವೈವಿಧ್ಯದಂತೆಯೇ ನುಡಿ ವೈವಿಧ್ಯವನ್ನು ಉಳಿಸಿ ಬೆಳಸುವ ಆಸಕ್ತರಿದ್ದಾರೆ. ಅದೇ ಭರವಸೆ.ಓ.ಎಲ್. ನಾಗಭೂಷಣಸ್ವಾಮಿ

olnswamy@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry