ನೆನೆ ನೆನೆ ‘ನಿತ್ಯೋತ್ಸವ’ವ...

7

ನೆನೆ ನೆನೆ ‘ನಿತ್ಯೋತ್ಸವ’ವ...

ಐ.ಎಂ.ವಿಠಲಮೂರ್ತಿ
Published:
Updated:
ನೆನೆ ನೆನೆ ‘ನಿತ್ಯೋತ್ಸವ’ವ...

ನನ್ನ ಶಾಲಾ ದಿನಗಳಲ್ಲಿ ಬೆಳಿಗ್ಗೆ ಮುಖ ತೊಳೆದು ನನ್ನ ತಂದೆಯ ಮುಂದೆ ನಿಲ್ಲ­ಬೇಕಿತ್ತು. ಅವರು ಆ ವೇಳೆಗಾಗಲೇ ತಯಾರಾಗಿ ಹಣೆಗೆ ಉದ್ದನಾಮ ಹಚ್ಚಿ ಕುಳಿತಿರುತ್ತಿದ್ದರು. ಅವರ ಮುಂದೆ ನಿಂತಾಗ, ಒಂದು ಕಡ್ಡಿಗೆ (ತೆಂಗಿನ ಗರಿಯ ಕಡ್ಡಿ) ಕೆಂಪು ನಾಮ ಬಳಿದು ನನಗೂ ಹಣೆಗೆ ಉದ್ದಕ್ಕೆ ಬರೆಯುತ್ತಿದ್ದರು. ಆ ರೀತಿ ಬರೆಯುವಾಗ ನಾನು ಬಹಳ ಶಿಸ್ತಾಗಿ, ನೆಟ್ಟಗೆ ನಿಲ್ಲಬೇಕಿತ್ತು. ಇಲ್ಲವಾದಲ್ಲಿ ಇಡೀ ದಿನ ಸೊಟ್ಟ ನಾಮ ಹೊತ್ತು ತಿರುಗಬೇಕಿತ್ತು.ಇಡೀ ಶಾಲೆಯಲ್ಲಿ ನನ್ನೊಬ್ಬನ ಹಣೆಯ ಮೇಲೆ ಮಾತ್ರ ಈ ರೀತಿ ‘ಅಯ್ಯಂಗಾರ್‌ ಲಾಂಛನ’. ಶಾಲೆಯಿಂದ ಸಂಜೆ ಮನೆಗೆ ಬಂದ­ಮೇಲೆ ಮುಖ ತೊಳೆದ ನಂತರ ‘ಅಡ್ಡ ವಿಭೂತಿ’ ಹಚ್ಚಿ, ಭಕ್ತಿ ಭಂಡಾರಿ ಬಸವಣ್ಣನ ಶಿಷ್ಯನಂತೆ ಬೇರೊಂದು ಅವತಾರಕ್ಕೆ ನನ್ನನ್ನು ಒಡ್ಡುತ್ತಿದ್ದರು. ಈ ದಿನದ ತನಕ ನನ್ನ ಈ ಎರಡು ಅವತಾರಗಳಿಗೆ ಕಾರಣ ನಿಗೂಢವಾಗಿದೆ. ಯಾವ ಸಿದ್ಧಾಂತಗಳ ಸಮನ್ವಯದ ಸಂಕೇತವೋ ತಿಳಿಯದಾಗಿದೆ. ನಮ್ಮ ತಂದೆ ನಾಸ್ತಿಕರೋ ಆಥವಾ ಆಸ್ತಿಕರೋ ಗೊತ್ತಾ­ಗುತ್ತಿರಲಿಲ್ಲ. ಕುವೆಂಪು ಅವರ ಚಿಂತನೆ­ಗಳಿಂದ ಪ್ರಭಾವಿತರಾಗಿದ್ದ ಅವರು, ವೈಚಾರಿಕ ನೆಲೆ­ಗಟ್ಟಿನಲ್ಲಿ ನಮ್ಮನ್ನು ಬೆಳೆಸಿದರು. ಅವರಿಗೆ ಸತ್ಯನಾರಾಯಣ ವ್ರತ, ಶನಿಮಹಾದೇವರ ಪೂಜೆ ಇವೆಲ್ಲದರಲ್ಲಿ ನಂಬಿಕೆ ಇರಲಿಲ್ಲ. ಮೂಢ­ನಂಬಿಕೆ ಮತ್ತು ಅಂಧಶ್ರದ್ಧೆಯ ಕಡು ವಿರೋಧಿ­ಯಾಗಿದ್ದರು. ರಾಹುಕಾಲ, ಗುಳಿಕಾಲಗಳಲ್ಲಿ ನಂಬಿಕೆ ಇಟ್ಟವರಲ್ಲ. ಎಲ್ಲ ಕಾಲಗಳೂ ಒಳ್ಳೆಯ ಕಾಲವೆಂದು ನಂಬಿಕೆ ಇದ್ದವರು.ನಾನು ಕನ್ನಡ ಓದಲು ಕಲಿತ ಕೂಡಲೇ ನಮ್ಮ ತಂದೆ ‘ಕುಮಾರವ್ಯಾಸ ಭಾರತ’ ವಾಚನ ಮಾಡಲು ಕಲಿಸಿದರು. ಅಂದಿನ ಮೈಸೂರು ಸರ್ಕಾರ, ಸಂಸ್ಕೃತಿ ಇಲಾಖೆಯಿಂದ ರೂ 2 ರಿಯಾಯ್ತಿ ದರದಲ್ಲಿ ‘ಕುಮಾರ­ವ್ಯಾಸ ಭಾರತ’­ವನ್ನು ಪ್ರಕಟಿಸಿ ಮಾರಾಟ ಮಾಡುತ್ತಿತ್ತು.ಕುವೆಂಪು ಮತ್ತು ಮಾಸ್ತಿ ವೆಂಕ­ಟೇಶ ಅಯ್ಯಂಗಾರ್‌ ಸಂಪಾದಕತ್ವದಲ್ಲಿ ಅದು ಪ್ರಕಟ­ವಾಗಿತ್ತು. ಆ ಕಾಲದಲ್ಲಿ ನನಗೆ ಬಹು ಭಾರ­ವೆನಿ­ಸಿದ ಕೃತಿಯನ್ನು ನಮ್ಮ ತಂದೆ ಮನೆಗೆ ತಂದಿದ್ದರು. ಪ್ರತಿದಿನ ಸಂಜೆ ಒಂದು ಗಂಟೆ ವಾಚ­ನ ಮಾಡಬೇಕಿತ್ತು. ಸಂಜೆ ಹಣೆಗೆ ವಿಭೂತಿ ಬಳಿದು­ಕೊಂಡು ‘ಕುಮಾರವ್ಯಾಸ ಭಾರತ’ ವಾಚಿಸುವು­ದೊಂದು ದಿನಚರಿಯೇ ಆಗಿ­ಹೋಯ್ತು. ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ ಜಗಕತಿ ಪಾವನನೆ ...’ ಹೀಗೆ ಮುಂದುವರಿ­ಯುತ್ತಿತ್ತು. ಈ ಪದ್ಯಗಳಿಗೆ ನಮ್ಮ ತಂದೆಯವರು ಸರಳವಾದ ರೀತಿಯಲ್ಲಿ ಅರ್ಥವಾಗುವಂತೆ ವಿವರಣೆ ನೀಡುತ್ತಿದ್ದರು. ಶಾಲೆಗೆ ನಡೆದು­ಕೊಂಡು ಹೋಗಿ ಆಟವಾಡಿ, ತಿರು­ಗಾಡಿ ಸುಸ್ತಾ­ಗಿ­ರುತ್ತಿದ್ದ ನನಗೆ ನಿದ್ರೆ ಒತ್ತರಿಸಿ­ಕೊಂಡು ಬರು­ತ್ತಿತ್ತು. ಎಲ್ಲಾದರೂ ಅಪ್ಪಿ–ತಪ್ಪಿ ತೂಕಡಿಸಿದರೆ ನನಗೆ ಸೋಮಾರಿತನದ ಪಟ್ಟ ಸಿಗಬಹುದೆಂಬ ಭಯವಿತ್ತು. ಹೀಗಾಗಿ ಬಹಳ ಎಚ್ಚರ­ದಿಂದ, ಕಷ್ಟದಿಂದ ವಾಚನ ಮುಂದುವರಿಸುತ್ತಿದ್ದೆ.ನನ್ನ ಕೋಪ ಈ ಕುಮಾರವ್ಯಾಸ ಭಾರತವನ್ನು ಅಗ್ಗದ ದರದಲ್ಲಿ ಒದಗಿಸಿದವರ ಮೇಲೆ ತಿರು­ಗು­ತ್ತಿತ್ತು. ಊರಲ್ಲಿ ಯಾರ ಮನೆಯಲ್ಲೂ ಇಲ್ಲದ ಪುಸ್ತಕ ನಮ್ಮ ಮನೆಗೆ ಬಂದು ನನ್ನನ್ನು ದೊಡ್ಡ ಸಂಕಟಕ್ಕೆ ಸಿಲುಕಿಸಿತ್ತು. ನನ್ನ ಸವಿ ಸಂಜೆ­ಗಳನ್ನು ಹಾಳು ಮಾಡಿತ್ತು. ಆ ಭಾರದ ‘ಭಾರತ’­ವನ್ನು ಶಪಿ­ಸುತ್ತಿದ್ದೆ. ‘ಕ್ರೂರ ಕರ್ಮಿಗಳೆತ್ತಬಲ್ಲರು ಭಾರತದ ಕಥನ ಪ್ರಸಂಗವ’ ಎಂಬ ಅದರದ್ದೇ ಪದ್ಯದ ಅರ್ಥವನ್ನು ವಿವರಿಸಿದಾಗ ಅದನ್ನು ಶಪಿ­ಸು­­ವುದು ಮಹಾಪಾಪವೆಂದೂ ಮತ್ತು ಅದ­ರಿಂದ ಭಯಂಕರ ಕೆಡಕು ಉಂಟಾಗಬಹುದೆಂದು ಹೆದರಿ ನಿಂದಿಸದೆ ತೆಪ್ಪಗೆ ಓದುವುದನ್ನು ಮುಂದು­ವರಿಸುತ್ತಿದ್ದೆ. ಆ ಒತ್ತಾಯದ ಓದಿನ ಫಲದಿಂದ ‘ಕುಮಾರವ್ಯಾಸ ಭಾರತ’ದ ಹಲವಾರು ಪದ್ಯಗಳು ಕಂಠಪಾಠವಾಗಿವೆ.ಮುಂದೆ ನನ್ನನ್ನು ಕನ್ನಡ ಸಾಹಿತ್ಯದ ಓದಿಗೆ ಹಚ್ಚಲು ಇದು ನಾಂದಿಯಾಯಿತು. ಹೀಗೆ ಚಿಕ್ಕಂದಿ­­ನಿಂದಲೇ ಶುರುವಾದ ಸಂಸ್ಕೃತಿ

ಇಲಾಖೆ­ಯ ಸಂಬಂಧ ಮುಂದೊಂದು ದಿನ ಆ ಇಲಾಖೆ­ಯ ಜವಾಬ್ದಾರಿ ನಿರ್ವಹಿಸುವ ಹಂತ ತಲುಪ­ಬಹು­ದೆಂದು ಕನಸು ಮನಸಿನಲ್ಲೂ ಯೋಚಿ­ಸಿ­ರಲಿಲ್ಲ. ಅದೇ ಕುಮಾರವ್ಯಾಸ ಭಾರತ ಕೃತಿ­­ಯನ್ನು ಹಾಗೂ ಇನ್ನಿತರ ನೂರಾರು ಸಾಹಿತ್ಯಿಕ ಕೃತಿಗಳನ್ನು ಮರು ಮುದ್ರಣಗೊಳಿಸಿ ರಿಯಾಯ್ತಿ ದರದಲ್ಲಿ ಮಾರಾಟ ಮಾಡಿ ನನ್ನ ಮುಂದಿನ ಪೀಳಿಗೆಯವರಿಗೆ ನಾನು ಅನುಭವಿಸಿದ ಸಂಕಷ್ಟ­ಗಳು ಮರುಕಳಿಸುವಂತೆ ಮಾಡಿ ಸೇಡು ತೀರಿಸಿಕೊಂಡೆ!70ರ ದಶಕದಲ್ಲಿ ಆಕಾಶವಾಣಿ ವಿವಿಧ ಭಾರತಿ ತರಂಗಾಂತರದಲ್ಲಿ ಮೂಡಿ ಬರುತ್ತಿದ್ದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿ­ಟೆಡ್‌(ಎಂಎಸ್‌ಐಎಲ್‌) ಗೀತೆಗಳು ನನ್ನನ್ನು ಬಹು­­ವಾಗಿ ಆಕರ್ಷಿಸಿದ್ದವು. ಎಂಎಸ್‌ಐಎಲ್‌ ಸಂಸ್ಥೆ ನನಗೆ ಮೊಟ್ಟ ಮೊದಲು ಪರಿಚಯ­ವಾ­ದದ್ದು ಆಕಾಶವಾಣಿಯ ವಿವಿಧ ಭಾರತಿ ತರಂಗಾ­ಂತರ­ದಲ್ಲಿ ಮೂಡಿ ಬರುತ್ತಿದ್ದ ಎಂಎಸ್‌­ಐಎಲ್‌ ಗೀತೆಗಳು ಎಂಬ ಕಾರ್ಯಕ್ರಮದ ಮುಖಾಂತರ. ಪ್ರಖ್ಯಾತ ಕವಿಗಳ ರಚನೆಗಳನ್ನು ನಾಡಿನ ಪ್ರತಿಭಾ­ನ್ವಿತ ಗಾಯಕರು ಪ್ರಸ್ತುತಪಡಿಸು­ತ್ತಿದ್ದ ಕಾರ್ಯ­ಕ್ರಮ­ವದು.ವಾರಕ್ಕೊಮ್ಮೆ ರಾತ್ರಿ 9 ಗಂಟೆಗೆ ಪ್ರಸಾರ­ವಾಗುತ್ತಿದ್ದ ಆ ಮಧುರ ಗಾಯ­ನದ ಪ್ರಸಾರ ನನ್ನನ್ನು ಅಯಸ್ಕಾಂತದಂತೆ ಸೆಳೆದಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಕಾರ್ಯ­ಕ್ರಮ ಸವಿ­ಯಲು ಹಲವಾರು ಸ್ನೇಹಿತರೊಂದಿಗೆ ರೇಡಿಯೊ ಮುಂದೆ ಬಹಳ ಕಾತರದಿಂದ ಕೇಳು­ತ್ತಿದ್ದ ಕಾರ್ಯ­ಕ್ರಮ ಅದು.ಬಹುಪಾಲು ಕವಿತೆ­ಗಳಿಗೆ ಮೈಸೂರು ಅನಂತಸ್ವಾಮಿಯವರ ಸ್ವರ ಸಂಯೋ­ಜನೆ, ಗಾಯನ ಇರುತ್ತಿತ್ತು. ಅದೇ ಸಮಯ­ದಲ್ಲಿ ಪ್ರಸಿದ್ಧಿಗೆ ಬಂದ ಸಿ.ಅಶ್ವತ್ಥ, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ, ಮಾಲತಿ... ಆಗಲೇ ಹೆಸರುವಾಸಿಯಾಗಿದ್ದ ಪಿ.ಕಾಳಿಂಗ­ರಾವ್‌, ಬಿ.ಕೆ. ಸುಮಿತ್ರಾ, ಶ್ಯಾಮಲಾ ಭಾವೆ, ಕಸ್ತೂರಿ ಶಂಕರ್‌ ಮುಂತಾದವರು ರಸಿಕರಿಗೆ ತಮ್ಮ ಗಾಯನದ ವಿಶೇಷ ಸವಿಯನ್ನು ನೀಡು­ತ್ತಿದ್ದರು. ಎಂಎಸ್‌ಐಎಲ್‌ ಸಂಸ್ಥೆ ತಾನು ತಯಾ­ರಿಸಿ ಮಾರಾಟ ಮಾಡುತ್ತಿದ್ದ ಲೇಖಕ್‌ ನೋಟ್‌ ಬುಕ್‌ ಮತ್ತು ಇನ್ನಿತರ ಸಾಮಗ್ರಿಗಳ ಜಾಹೀರಾತಿ­ಗಾಗಿ ಈ ಕಾರ್ಯಕ್ರಮವನ್ನು ಸಂಯೋಜಿಸಿ ಪ್ರಸಾರ ಮಾಡುತ್ತಿತ್ತು. ನಾಟಕಕಾರ ಪರ್ವತ­ವಾಣಿ ಅವರು ಈ ಕಾರ್ಯಕ್ರಮವನ್ನು ತುಂಬಾ ಸ್ವಾರಸ್ಯಕರವಾಗಿ, ನಾಟಕೀಯವಾಗಿ, ರಂಜನೀ­ಯ­ವಾಗಿ ಪ್ರಸ್ತುತಪಡಿಸುತ್ತಿದ್ದರು.ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಕೆ.ಎಸ್‌. ನರಸಿಂಹ­ಸ್ವಾಮಿ, ನಿಸಾರ್‌ ಅಹಮದ್‌, ಜಿ.ಎಸ್‌. ಶಿವ­ರುದ್ರಪ್ಪ, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ  ಹೀಗೆ ಹಲವಾರು ಪ್ರಸಿದ್ಧ ಕವಿಗಳ ಕವನಗಳನ್ನು ಮೊದಲ ಬಾರಿಗೆ ಕೇಳಿದ, ಆಸ್ವಾದಿಸಿದ, ಆನಂದಿಸಿ ಸಂಭ್ರಮಿಸಿದ ಕ್ಷಣಗಳು ನನ್ನ ಮನಸ್ಸಿ­ನಲ್ಲಿ ಸದಾ ಹಸಿರಾಗಿವೆ. ನನ್ನ ವಯೋಮಾನದ ಲಕ್ಷಾಂತರ ಕನ್ನಡಿಗರು ಈ ಕಾರ್ಯಕ್ರಮದಿಂದ ತನ್ಮಯಗೊಂಡು ಸುಖಿಸಿದ ಸಮಯವದು. ಕೆಲ­ಕಾಲ ನಡೆದ ಕಾರ್ಯಕ್ರಮ ನಂತರ ನಿಂತು ಹೋಯಿತು. ಆದರೆ, ಅದರ ಗುಂಗು ನನ್ನನ್ನು ಬಿಡಲಿಲ್ಲ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇ­ಶಕ­ನಾಗಿ ಬಂದಾಗ ಎಂಎಸ್‌ಐಎಲ್‌ ಗೀತೆ­ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲ­ವಾರು ಗಾಯಕರ ನೇರ ಸಂಪರ್ಕ ಒದಗಿತು. ಮತ್ತೊಮ್ಮೆ ಅವರಿಂದ ಅದೇ ಗೀತೆಗಳನ್ನು ಕೇಳುವ ಭಾಗ್ಯ ನನ್ನದಾಯಿತು. ಸಂಸ್ಕೃತಿ ಇಲಾಖೆ­ಯಲ್ಲಿ ಕಾರ್ಯನಿರ್ವಹಿಸಿದ ಸುಮಾರು 12 ವರ್ಷ­­ಗಳ ನಂತರ ಎಂಎಸ್‌ಐಎಲ್‌ ಸಂಸ್ಥೆಗೆ ಎಂ.ಡಿ. ಆಗಿ ನೇಮಕಗೊಂಡೆ. ರಾಜ್ಯದೆಲ್ಲೆಡೆ ವಿವಿಧ ಜಿಲ್ಲೆಗಳಲ್ಲಿ ಮತ್ತು ಇಲಾಖೆಗಳಲ್ಲಿ ಕೆಲಸ ಮಾಡಿದರೂ ಸಂಸ್ಕೃತಿ ಇಲಾಖೆಯ ಹಳೆಯ ಸಂಬಂಧ ಒಂದಲ್ಲ ಒಂದು ರೀತಿಯಲ್ಲಿ ಬೆಳೆ­ಯುತ್ತಲೇ ಹೋಯ್ತು. ಕರ್ನಾಟಕ ಗಾನಕಲಾ ಪರಿಷತ್‌, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆ­ಗಳಲ್ಲಿ ಆಯೋಜಿಸಿದ ಸಮ್ಮೇಳನಗಳು, ವಿಜಾ­ಪುರ­­ದಲ್ಲಿ ನಡೆದ ಪಟ್ಟದಕಲ್ಲು, ನವರಸಪುರ ಉತ್ಸವ­ಗಳು, ವಿವಿಧ ಅಕಾಡೆಮಿಗಳು, ನಾನು ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಕ್ರಮಗಳು... ಹೀಗೆ ನನ್ನ, ಸಾಹಿತಿಗಳ, ಕಲಾವಿದರ ನಂಟು ಗಟ್ಟಿಯಾಗಿ ಬೆಳೆಯಿತು. ಆಡಳಿತಾನುಭವಕ್ಕೆ ಹೊಸ ಆಯಾಮ ನೀಡಿತು.ಇದೇ ಜಾಡಿನಲ್ಲಿ ಎಂಎಸ್‌ಐಎಲ್‌ ಸಂಸ್ಥೆಗೆ ಬಂದಾ­ಗ ಕನ್ನಡ ಕವನಗಳ ಗಾಯನದ ಬಗ್ಗೆ ಒಂದು ಹೊಸ ಪ್ರಯತ್ನ ಮಾಡುವ ಅವಕಾಶ ಒದಗಿತು. ಕಾಲೇಜಿನಲ್ಲಿ ಕಲಿಯುವಾಗ ಎಂಎಸ್‌­ಐಎಲ್‌ ಸಂಸ್ಥೆ, ಆಕಾಶವಾಣಿ ವಿವಿಧ ಭಾರತಿ ತರಂ­ಗಾ­ಂತರದಲ್ಲಿ ತನ್ನ ಸಂಸ್ಥೆಯ ಕೆಲವು ಸಾಮಗ್ರಿ­ಗಳ ಜಾಹೀರಾತಿಗಾಗಿ ಆಯೋಜಿಸಿದ್ದ ಎಂಎಸ್‌ಐಎಲ್‌ ಗೀತೆಗಳ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು. ಮೈಸೂರು ಅನಂತಸ್ವಾಮಿ ಕರ್ನಾಟಕ ಕಂಡ ಅದ್ಭುತ ಗಾಯ­ಕರು. ರಾಗ ಸಂಯೋಜಕರು. ಕವಿಕಾವ್ಯದ ವಿಶೇಷ ಒಳನೋಟವಿದ್ದ ಅಚ್ಚಕನ್ನಡದ ಅದ್ಭುತ ಪ್ರತಿಭೆ. ಮಿತಭಾಷಿ, ಸ್ನೇಹಮಯಿ, ಅತ್ಯಂತ ಸೃಜನ­ಶೀಲ ಗಾಯಕ. ಕವಿಯ ಪರಕಾಯ ಪ್ರವೇಶ ಮಾಡಿ ಕಾವ್ಯದ ಒಳತೋಟಿಯನ್ನು, ತಿರುಳನ್ನು ಶ್ರೋತೃಗಳಿಗೆ ಅತಿ ಮಧುರವಾಗಿ ಉಣ­­ಬಡಿಸುತ್ತಿದ್ದರು.ಕವಿಗಳನ್ನು, ಕವಿತೆಗಳನ್ನು ಪ್ರಸಿದ್ಧಿಗೊಳಿಸಿದರು. ಹೊಸ ಕೇಳುಗರನ್ನು ಸೃಷ್ಟಿಸಿ­ದರು. ಅವರು ರಾಗ ಸಂಯೋಜಿಸಿರುವ ಕುವೆಂಪು ಅವರ ‘ತನುವು ನಿನ್ನದು ಮನವು ನಿನ್ನದು’, ಬೇಂದ್ರೆ ಅವರ ‘ಆವು ಈವಿನ ನಾವು ನೀವಿಗೆ’, ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’, ಕೆ.ಎಸ್‌.ನ ಅವರ ಗೀತೆಗಳು, ನಿಸಾರ್‌ ಅಹ­ಮದ್‌ ಅವರ ‘ನಿತ್ಯೋತ್ಸವ ತಾಯಿ ನಿತ್ಯೋ­ತ್ಸವ’, ‘ಕುರಿಗಳು ಸಾರ್‌ ಕುರಿಗಳು’, ಜಿ.ಎಸ್‌.­ಎಸ್‌­ ಅವರ ‘ಎದೆ ತುಂಬಿ ಹಾಡಿದೆನು’ ಜನಪ್ರಿಯವಾಗಿದ್ದವು. ಸಿ.ಅಶ್ವತ್ಥ ರಾಗ ಸ­ಂಯೋ­ಜಕರಾಗಿ, ಗಾಯಕ ರಾಗಿ ಶಿಶುನಾಳ ಷರೀಫರ ಪದಗಳನ್ನು ಪ್ರಸಿದ್ಧಿಗೊಳಿಸಿದರು. ಶಿವಮೊಗ್ಗ ಸುಬ್ಬಣ್ಣ ಅವರ ಕಂಠಸಿರಿ ನಾಡಿನ ಮನೆಮಾತಾಯ್ತು. ಸುಗಮ ಸಂಗೀತದ ಸುವರ್ಣ ಸಮಯ ಅದು.ಮೂರು ದಶಕಗಳ ನಂತರ ಸಂಸ್ಥೆಯ ಮುಖ್ಯಸ್ಥ­­ನಾಗಿ ಈ ಹಳೆಯ ಹಾಡುಗಳಿಗಾಗಿ ಹುಡು­­ಕಾಡಿದೆ. ಎಲ್ಲ ಸರ್ಕಾರಿ ಸಂಸ್ಥೆಗಳಂತೆ ಇಲ್ಲಿ ಸಹ ಏನೂ ದಾಖಲೆಗಳಿರಲಿಲ್ಲ, ಹಾಡಿನ ಧ್ವನಿ­ಸುರುಳಿ ಸಿಗಲಿಲ್ಲ. ಸತತ ಪ್ರಯತ್ನದ ನಂತರ ಅವು ಪ್ರಭಾತ್‌ ಸಂಸ್ಥೆಯಲ್ಲಿ ಸಿಕ್ಕವು.ಪ್ರಭಾತ್‌

ಕಲಾ­ವಿದ ವೆಂಕಟೇಶ್‌ ಅವರ ನೆರವಿನಿಂದ ಹಳೆಯ ‘ಸ್‍ಪೂಲ್‌’ಗಳನ್ನೆಲ್ಲ ಹೊರತೆಗೆದು ಲಹರಿ ಸಂಸ್ಥೆ­ಯ ವೇಲು ಅವರಿಂದ ಅವುಗಳನ್ನೆಲ್ಲ ಪುನಃ ಸಂಸ್ಕ­ರಿಸಿ ಮೂಲಸ್ಥಿತಿ ತರಲು ಸಾಧ್ಯವಾಯ್ತು. ಕಲಾ­ವಿದ ಎಸ್‌.ಜಿ.ವಾಸುದೇವ ಅವರಿಂದ ಕವರ್‌ ಡಿಸೈನ್‌ ಮಾಡಿಸಿ, ಲಹರಿ ಸಂಸ್ಥೆ ಮುಖಾಂತರ ಬಿಡುಗಡೆ ಮಾಡಲಾಯಿತು.ಹಳೆಯ ಎಂಎಸ್‌ಐಎಲ್‌ ಗೀತೆಗಳಿಗೆ ಮರು­ಜೀವ ಕೊಟ್ಟ ನಂತರ ದೂರದರ್ಶನ ಚಂದನದ ಮುಖಾಂತರ ‘ನಿತ್ಯೋತ್ಸವ’ ಎಂಬ ಹೊಸ ಕಾರ್ಯ­ಕ್ರಮವನ್ನು ಆಯೋಜಿಸಲಾಯಿತು.ನಿತ್ಯೋತ್ಸವ ಕನ್ನಡದ ಮೊದಲ ರಿಯಾಲಿಟಿ ಷೋ. ಇಡೀ ರಾಜ್ಯದ ಹೈಸ್ಕೂಲ್‌ ಮತ್ತು ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಜಿಲ್ಲಾ­­ಮಟ್ಟ ಮತ್ತು ವಿಭಾಗ ಮಟ್ಟದ ಸ್ಪರ್ಧೆ­ಗಳಲ್ಲಿ ಭಾಗವಹಿಸಿದ್ದನ್ನು ದೂರದರ್ಶನ ನೇರ­ಪ್ರಸಾರ ಮಾಡಿತು. ಗ್ರಾಮೀಣ ಪ್ರತಿಭೆಗಳಿಗೆ ದೊರೆತ ಅದ್ಭುತ ಅವಕಾಶ. ಅದರ ಸದ್ಬಳಕೆ ಪರಿ­ಣಾಮ ಹೊಸ ಗಾಯಕ–ಗಾಯಕಿಯರ ಉದಯ. ಅವರ ಮೊದಲ ಕ್ಯಾಸೆಟ್‌ಗಳು ಹಳೆಯ ಎಂಎಸ್‌ಐಎಲ್‌ ಗೀತೆಗಳೊಂದಿಗೆ ಬಿಡು­ಗಡೆ­ಯಾದವು. ’ನಿತ್ಯೋತ್ಸವ’ದ ಕವಿ ನಿಸಾರ್‌  ಅಹಮದ್‌ ಅವರು ಕ್ಯಾಸೆಟ್‌ ಬಿಡುಗಡೆ ಮಾಡುವಾಗ ಪ್ರೋತ್ಸಾ­ಹದ ಮಾತುಗಳನ್ನು ಆಡಿದರು.ಈ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನ ಕಾರ್ಯ­ಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದು ಅದು ಚಂದನದಲ್ಲಿ ನೇರ ಪ್ರಸಾರವಾಯ್ತು. ಅಂದಿನ ಸಭೆ ಇಂದ್ರನ ಆಸ್ಥಾನದಂತಿತ್ತು ಎಂದು ನಿಸಾರ್‌ ಬಣ್ಣಿಸಿದರು. ನನ್ನ ಪೀಳಿಗೆಯವರು ಕೇಳಿಬೆಳೆದ ಎಂಎಸ್‌­ಐಎಲ್‌ ಗೀತೆಗಳ ಸಂಭ್ರಮವನ್ನು ಹೊಸ ಪೀಳಿಗೆ­ಯ ಕನ್ನಡಿಗರು ನಿತ್ಯೋತ್ಸವವನ್ನು ನೋಡಿ ಕೇಳಿ ಆನಂದಿಸುವ ಅವಕಾಶ ದೊರಕಿತ್ತು. ಎಲ್ಲ­ಕ್ಕಿಂತ ಮುಖ್ಯವಾಗಿ ನಾಡಿನ ಗ್ರಾಮೀಣ ಪ್ರತಿಭೆ­ಗಳಿಗೆ ಸಿಕ್ಕ ಮೊಟ್ಟ ಮೊದಲ ಅವಕಾಶ.ನಿತ್ಯೋತ್ಸವ ಕಾರ್ಯಕ್ರಮ ಸಂಘಟನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸ ಜಿ. ಕಪ್ಪಣ್ಣ ಅವರ ತಂಡ ರಾಜ್ಯದ ಮೂಲೆ–ಮೂಲೆಗಳಿಂದ ಬಂದ ಮಕ್ಕಳನ್ನು ತಿದ್ದಿ­ತೀಡಿ ದೂರದರ್ಶನದ ನೇರ ಪ್ರಸಾರಕ್ಕೆ ಅಣಿ­ಗೊಳಿಸಿತು. ನಿತ್ಯೋತ್ಸವದಿಂದ ಹೊರ­ಹೊಮ್ಮಿದ ಹಲವಾರು ಪ್ರತಿಭಾನ್ವಿತರು ಇಂದು ಗಾಯನ­ವನ್ನೇ ವೃತ್ತಿಯಾಗಿಸಿಕೊಂಡು ಸಾಧನೆ­ಯ ಹಾದಿ­ಯಲ್ಲಿದ್ದಾರೆ. ‘ಹಾಟ್‌ಲೈನ್‌ ಫಾರ್‌ ಹಾಟ್‌ ವಾಟರ್‌’ ಎಂಬ ಜಾಹೀರಾತನ್ನು ನಿತ್ಯೋ­ತ್ಸವ ಕಾರ್ಯಕ್ರಮದಲ್ಲಿ ಬಳಸಿಕೊಂಡ ಎಂಎಸ್‌­ಐಎಲ್‌ ಸಂಸ್ಥೆ ಸೋಲಾರ್‌ ವಾಟರ್‌ ಹೀಟರ್‌­ಗಳ ಮಾರಾಟ ಗರಿಷ್ಠ ಮಟ್ಟಕ್ಕೆ ಏರಿಸಿ­ಕೊಂಡು ನಿತ್ಯೋತ್ಸವ ಕಾಯ್ರಕ್ರಮದ ಲಾಭ ಪಡೆಯಿತು. ಒಂದು ಸಾರ್ವಜನಿಕ ಸಂಸ್ಥೆ ಹೇಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿ­ಕೊಳ್ಳ­ಬಹುದು ಎಂಬುದಕ್ಕೆ ಮಾದರಿಯಾಯಿತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry