ಶುಕ್ರವಾರ, ಜೂನ್ 18, 2021
28 °C

ನೆಲದ ದನಿಗೆ ಕಿವಿ ಕೊಡುವವರು ಯಾರು?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಪಾಠಗಳು ಎಲ್ಲೆಲ್ಲಿಯೋ ಇರುತ್ತವೆ. ಅವು ನಮಗೂ ಅನ್ವಯಿಸುತ್ತವೆ ಎಂದು ತಿಳಿದುಕೊಂಡರೆ ತಪ್ಪು ತಿದ್ದಿಕೊಳ್ಳಬಹುದು. ಮುಂದಿನ ಹಾದಿಯನ್ನು ಸರಿ ಮಾಡಿಕೊಳ್ಳಬಹುದು. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳಿಗೂ ಒಂದೊಂದು ಪಾಠ ಹೇಳುತ್ತಿರಬಹುದು ಅನಿಸುತ್ತದೆ.ಮುಖ್ಯವಾಗಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಕಾಂಗ್ರೆಸ್ಸಿಗೆ ತುಂಬ ಪಾಠಗಳು ಇವೆ. ಬಿಜೆಪಿಗೂ ಬೇಕಾದಷ್ಟು ಪಾಠಗಳು ಇವೆ. ಆದರೆ, ಅವರಿಗೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಅವರಿಗೆ ಸಿಕ್ಕ ಅಧಿಕಾರವನ್ನು ಹೇಗೆ ಚಲಾಯಿಸಬೇಕು ಎಂದೂ ಗೊತ್ತಿದ್ದಂತೆ ಕಾಣುವುದಿಲ್ಲ. ಇರುವ ಅಧಿಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದೂ ತಿಳಿದಂತೆ ಕಾಣುವುದಿಲ್ಲ.ಮಾಯಾವತಿಯವರಿಗೂ ಇದೇ ಸಮಸ್ಯೆ ಇತ್ತು ಅನಿಸುತ್ತದೆ. ಜನಪರ ಯೋಜನೆಗಳಿಗಿಂತ ಸ್ಥಾವರ ಸ್ಮಾರಕಗಳಲ್ಲಿ ಹೆಚ್ಚು ಸಮಯ ಮತ್ತು ಹಣ ವ್ಯಯ ಮಾಡಿದ ಅವರು ಅದಕ್ಕೆ ತಕ್ಕ ಬೆಲೆ ಕೊಟ್ಟಿದ್ದಾರೆ. ಒಬ್ಬ ದಲಿತ ಮಹಿಳೆ ಅಂಥ ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣ ಅಧಿಕಾರ ಮಾಡಿದ್ದಳು. ಆಕೆ ಆ ಅಧಿಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಯೋಚಿಸಲಿಲ್ಲ. ಸಿಕ್ಕ ಅಧಿಕಾರವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದಕ್ಕೆ ಮಾಯಾವತಿ ಸರ್ಕಾರ ಒಂದು ಒಳ್ಳೆಯ ಉದಾಹರಣೆಯಾಗಿ ನಿಲ್ಲಬಹುದು.ಜನರು ಸುಮ್ಮನೆ ನೋಡುತ್ತ ಇರುತ್ತಾರೆ ಅನಿಸುತ್ತದೆ. ಕಾಲ ಬಂದಾಗ ಏಟು ಕೊಟ್ಟುಬಿಡುತ್ತಾರೆ. ಐದು ರಾಜ್ಯಗಳಲ್ಲಿ ಅವರು ಮತ ಚಲಾಯಿಸಿದ್ದಕ್ಕೂ ಒಂದೊಂದು ಸಕಾರಣಗಳು ಇದ್ದಂತೆ ಇವೆ. ಈ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶದ ಕಡೆಯೇ ಎಲ್ಲರ ಕಣ್ಣು ನೆಟ್ಟಿತ್ತು. ಅದು ದೊಡ್ಡ ರಾಜ್ಯವೆಂದು ಮಾತ್ರವಲ್ಲ, ದೇಶದ ರಾಜಕಾರಣಕ್ಕೆ ಒಂದು ದಿಕ್ಕನ್ನು ತೋರಿಸಿದ ರಾಜ್ಯವೂ ಅದೇ ಆಗಿರುವುದು ಇದಕ್ಕೆ ಕಾರಣ. ಸೋನಿಯಾ ಗಾಂಧಿಯವರು ಆ ರಾಜ್ಯದ ಚುನಾವಣೆಯ ಫಲಿತಾಂಶದ ಮೇಲೆ ಪ್ರತಿಕ್ರಿಯೆ ಕೊಡುತ್ತ ತಮ್ಮ ಪಕ್ಷದ ಸೋಲಿನ ಕಾರಣಗಳನ್ನೂ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲಿ ನಾಯಕತ್ವದ ಕೊರತೆಗಿಂತ ನಾಯಕತ್ವದ ಭಾರದ ಕಡೆಗೆ ಅವರು ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅವರ ಪಕ್ಷಕ್ಕೆ ಕಳೆದ ಐದಾರು ವರ್ಷಗಳಲ್ಲಿ ಆಗಿರುವ ಗತಿಯನ್ನು ನೋಡಿದರೆ ಅವರು ಈ ರಾಜ್ಯವನ್ನು ಮರೆತೇ ಬಿಟ್ಟಿದ್ದಾರೆ ಎನಿಸಿತ್ತು. ಆದರೆ, ಅವರಿಗೆ ಕರ್ನಾಟಕ ನೆನಪಿನಲ್ಲಿ ಇದೆ. `ಮುಂದಿನ ವರ್ಷ ಹಿಮಾಚಲ ಪ್ರದೇಶದ ಜತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಲಿದೆ. ಅತ್ತ ನಮ್ಮ ಗಮನ ಹರಿಸುತ್ತೇವೆ~ ಎಂದೂ ಸೋನಿಯಾ ಹೇಳಿದ್ದಾರೆ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದ್ದ ಎಲ್ಲ ಸಮಸ್ಯೆಗಳು ಕರ್ನಾಟಕದಲ್ಲಿಯೂ ಇವೆ. ಅಲ್ಲಿ ನಾಯಕರ ದಂಡಿನ ಸಮಸ್ಯೆ ಇದ್ದರೆ ಇಲ್ಲಿ ಅದಕ್ಕಿಂತ ಹೆಚ್ಚಿನ ನಾಯಕರ ಸಮಸ್ಯೆ ಇದೆ. ಅವರಿಗೆಲ್ಲ ವಯಸ್ಸಾಗಿದೆ. ವಯಸ್ಸಿನ ಇತರ ಸಮಸ್ಯೆಗಳೂ ಅವರಿಗೆ ಇವೆ. ಉತ್ತರ ಪ್ರದೇಶದಲ್ಲಿ 38ರ ಹರಯದ ಒಬ್ಬ ಯುವಕ ಏನೆಲ್ಲ ಕಸರತ್ತು ಮಾಡಿ ತನ್ನ ಪಕ್ಷವನ್ನು ಅಧಿಕಾರಕ್ಕೆ ತಂದ ಎಂಬುದು ಈಗ ಎಲ್ಲರ ಕಣ್ಣ ಮುಂದೆ ಇದೆ. ಅಂಥ ಯುವ ನಾಯಕತ್ವ ಕರ್ನಾಟಕದಲ್ಲಿ ಇಲ್ಲ. ಇಲ್ಲಿ ಯುವನಾಯಕರು ಇಲ್ಲ ಎಂದು ಅಲ್ಲ. ಆದರೆ, ವೇದಿಕೆಯ ಮೇಲೆ ಅವರಿಗೆ ಅವಕಾಶವೇ ಇಲ್ಲ. ವಯೋವೃದ್ಧ ನಾಯಕರು ಯುವಕರಿಗೆ ಜಾಗ ಬಿಟ್ಟುಕೊಡುವಂತೆಯೂ ಕಾಣುವುದಿಲ್ಲ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತುಕೊಳ್ಳಲು ಕನಿಷ್ಠ ಎಂಟು ಹತ್ತು ಜನ ಹಿರಿಯರೇ ಸಿದ್ಧರಿದ್ದಾರೆ! ಅವರ ನಡುವಿನ ಆ ಪೈಪೋಟಿಯೇ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯಲೂ ಹಚ್ಚುತ್ತದೆ.ಕಾಂಗ್ರೆಸ್ಸಿನ ಇನ್ನೊಂದು ಸಮಸ್ಯೆ ಎಂದರೆ ಚುನಾವಣೆ ನಡೆದಾಗಲೆಲ್ಲ ಆಯಾ ರಾಜ್ಯದಲ್ಲಿ ತನ್ನ ನಾಯಕ ಯಾರು ಎಂದು ಅದು ಹೇಳುವುದಿಲ್ಲ. ಸ್ಥಳೀಯ ನಾಯಕರು ಎಲ್ಲವನ್ನೂ ಹೈಕಮಾಂಡ್ ತಲೆಗೆ ಕಟ್ಟಿ ಚುನಾವಣೆ ಎದುರಿಸುತ್ತಾರೆ. ಈಗಲೇ ನಾಯಕನನ್ನು ಹೆಸರಿಸಿದರೆ ಸಮಸ್ಯೆ ಆಗಬಹುದು ಎಂಬ ಭಯವೂ ಇದಕ್ಕೆ ಕಾರಣವಾಗಿರಬಹುದು.ಆದರೆ, ಮತದಾರನಿಗೆ ಕನಿಷ್ಠ ಪಕ್ಷ ತನ್ನ ರಾಜ್ಯವನ್ನು ಯಾರು ಮುನ್ನಡೆಸುತ್ತಾರೆ ಎಂಬ ಒಂದು ಚಿಕ್ಕ ಇಂಗಿತವೂ ಇರದಿದ್ದರೆ ಆತ ಆ ಪಕ್ಷನ್ನು ಒಪ್ಪಿಕೊಳ್ಳುವಂತೆ ಕಾಣುವುದಿಲ್ಲ. ಉತ್ತರ ಪ್ರದೇಶದಲ್ಲಿ ಕೂಡ ಸಮಾಜವಾದಿ ಪಕ್ಷದ ಅಖಿಲೇಶ್‌ಸಿಂಗ್ ಯಾದವ್ ತಮ್ಮ ತಂದೆಯೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹೇಳಿದ್ದರೂ ಜನರು ಅಖಿಲೇಶ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಮತದಾನ ಮಾಡಿದಂತೆ ಕಾಣುತ್ತದೆ.ಕರ್ನಾಟಕದಲ್ಲಿ ಕೂಡ ಈಚಿನ ಎರಡು ದಶಕಗಳ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಈ ರಾಜ್ಯವನ್ನು ಯಾರು ಮುನ್ನಡೆಸುತ್ತಾರೆ ಎಂದು ತಿಳಿದ ಮೇಲೆಯೇ ಜನರು ಆ ಪಕ್ಷವನ್ನು ಬೆಂಬಲಿಸಿದ್ದರು. 1989ರಲ್ಲಿ ವೀರೇಂದ್ರ ಪಾಟೀಲರಿಗೆ ಭರ್ಜರಿ ಜಯ ಸಿಕ್ಕುದು ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಜನರಿಗೆ ಅನಿಸಿದಾಗಲೇ. 1999ರಲ್ಲಿ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ `ಪಾಂಚಜನ್ಯ~ ಯಾತ್ರೆ ಹೊರಟ ಕೂಡಲೇ ಒಬ್ಬ ಒಕ್ಕಲಿಗ ಮುಖ್ಯಮಂತ್ರಿ ಆಗುತ್ತಾನೆ ಎಂದು ಆ ಸಮುದಾಯಕ್ಕೆ ಭಾಸವಾಯಿತು. ಅದು ಅವರನ್ನು ವಿಜಯದ ಪಾದಗಟ್ಟೆಗೆ ತಂದು ನಿಲ್ಲಿಸಿತು. 1994ರಲ್ಲಿ ಜನತಾದಳಕ್ಕೆ ವಿಜಯ ಲಭಿಸಿದ್ದು ದೇವೇಗೌಡರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಇಂಗಿತದ ಮೇಲೆಯೇ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವಕ್ಕೇ ಜಯ ಸಿಕ್ಕಿತು. ಅದಕ್ಕೆ ಸಹಾನುಭೂತಿ ಕಾರಣ ಇರಬಹುದು; ಜಾತಿಯೂ ಮುಖ್ಯ ಪಾತ್ರವಹಿಸಿರಬಹುದು. ಇಂಥ ಇಂಗಿತ ಕೊಡದೇ ಇದ್ದಾಗಲೆಲ್ಲ ಕಾಂಗ್ರೆಸ್ಸಿಗೆ ಸೋಲಾಗಿದೆ.ಕಾಂಗ್ರೆಸ್ ಪಕ್ಷದ ಸಮಸ್ಯೆ ಏನು ಎಂದರೆ ಎಲ್ಲರೂ ಗಾಂಧಿ (ಇಂದಿರಾ) ಹೆಸರಿನ ಮೇಲೆ ಚುನಾವಣೆ ಎದುರಿಸಬೇಕು ಎಂದು ಅಂದುಕೊಳ್ಳುವುದು ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಶರಣಾಗಿ ಬಿಡುವುದು. ಅದು ಆ ಪಕ್ಷದ ಸಮಸ್ಯೆ ಇರಬಹುದು ಅಥವಾ ಅದಕ್ಕೆ ಅಂಟಿದ ದಾಸ್ಯ ಮನೋಭಾವ ಇರಬಹುದು. ಆದರೆ, ಜನರಿಗೆ ಅದು ಇನ್ನೊಂದು ಸಮಸ್ಯೆಯನ್ನು ತಂದು ಒಡ್ಡುತ್ತದೆ. ತನಗೆ ಸಿಗುವಂಥ, ಉತ್ತರದಾಯಿಯಾದ ನಾಯಕನನ್ನು ಆಯ್ಕೆ ಮಾಡಲು ಜನಸಮುದಾಯ ಇಚ್ಛಿಸುತ್ತದೆ ಎಂಬುದಕ್ಕೆ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಒಂದು ಸ್ಪಷ್ಟ ನಿದರ್ಶನ. ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಿಗೆ ಸೇರಿದ ಒಟ್ಟು ಹತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಅದು ಕೂಡ ದೊಡ್ಡ ಅಂತರದಿಂದ ಅಲ್ಲ. ಅಂದರೆ, ವಿಧಾನಸಭೆ ಮಟ್ಟದಲ್ಲಿ ತನ್ನ ಕೈಗೆ  ಸಿಗುವ ಪಕ್ಷದ ಅಭ್ಯರ್ಥಿಯೇ ಇರಲಿ ಎಂದು ಮತದಾರ ಬಯಸುತ್ತ ಇರಬಹುದು. ನಾಳೆ ಲೋಕಸಭೆ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳ ಮತದಾರರು ಮತ್ತೆ ಸೋನಿಯಾ ಹಾಗೂ ರಾಹುಲ್ ಅವರನ್ನೇ ಆಯ್ಕೆ ಮಾಡಬಹುದು.ಉತ್ತರ ಪ್ರದೇಶದಲ್ಲಿ ರಾಹುಲ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಘೋಷಿಸಿದ್ದರೆ ಏನೂ ಅನಾಹುತ ಆಗುತ್ತಿರಲಿಲ್ಲ. ರಾಹುಲ್ ಅಂಥ ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಅನುಭವ ಗಳಿಸಬಹುದಿತ್ತಲ್ಲ? ದುರಂತ ಎಂದರೆ, ಗಾಂಧಿ ಮನೆತನದಲ್ಲಿ ಹುಟ್ಟಿದವರೆಲ್ಲ ಪ್ರಧಾನಿಯಾಗುವುದಕ್ಕೇ ಎಂದು ಆ ಪಕ್ಷ ತಿಳಿದುಕೊಂಡಂತಿದೆ.ಕಾಂಗ್ರೆಸ್ ಪಕ್ಷ ಒಂದು ಕಡೆ ಹೀಗೆ ನಾಯಕತ್ವದ ಸಮಸ್ಯೆಯಿಂದ ನರಳಿದರೆ ಇನ್ನೊಂದು ಕಡೆ ಹೊಸ ಆಲೋಚನೆಗಳಿಲ್ಲದೆ ಕಷ್ಟಪಡುತ್ತದೆ. ಹೊಸ ಆಲೋಚನೆಗಳಿಗೂ ಹೊಸ ರಕ್ತಕ್ಕೂ ನಿಕಟ ಸಂಬಂಧವಿದೆ. ಸದ್ಯ ಕರ್ನಾಟಕದ ಕಾಂಗ್ರೆಸ್ಸಿನಲ್ಲಿ ಹೊಸ ರಕ್ತದ ಸಂಚಲನೆಗೆ ಅವಕಾಶವೇ ಇಲ್ಲದಂತೆ ಆಗಿದೆ. ಹೀಗಾಗಿ ಹೊಸ ಆಲೋಚನೆಗಳಿಗೂ ಕೊರತೆ. ಆರಾಮ ಕುರ್ಚಿಯ ರಾಜಕಾರಣದಿಂದ ಯಶಸ್ಸು ಗಳಿಸುವುದು ಸಾಧ್ಯವಿಲ್ಲ ಎಂದು ಈಗಾಗಲೇ ಅದು ಹಲವಾರು ಉಪ ಚುನಾವಣೆಗಳಲ್ಲಿ ಆಗಿರುವ ಸೋಲಿನಿಂದ ಪಾಠ ಕಲಿತಿರಬಹುದು. ಅಖಿಲೇಶ್ ಸಿಂಗ್ ಯಾದವ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಶ ಗಳಿಸಲು 8,500 ಕಿಲೋ ಮೀಟರ್ ಕ್ರಮಿಸಬೇಕಾಯಿತು. ಅಷ್ಟು ಶ್ರಮ ಪಡಲು ಇಲ್ಲಿ ಯಾರಾದರೂ ಸಿದ್ಧರಿದ್ದಾರೆಯೇ? ಅದೇ ರಾಜ್ಯದಲ್ಲಿ 5,500 ಕಿಲೋ ಮೀಟರ್ ಕ್ರಮಿಸಿದ ರಾಹುಲ್ ಕರ್ನಾಟಕದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅವರಿಗೆ ಇಲ್ಲಿ ಅಂಥ ಪ್ರತಿಷ್ಠೆ ಇಲ್ಲ. ಆ ಕೊರತೆಯನ್ನು ಇಲ್ಲಿ ಯಾರು ತುಂಬುತ್ತಾರೆ?ಕೊರತೆಯನ್ನು ತುಂಬುವುದು ಎಂದರೆ ತಾನು ಈಗಿನ ಆಡಳಿತ ಪಕ್ಷಕ್ಕೆ ಸಮರ್ಥ ಪರ್ಯಾಯವೆಂದು ಕಾಂಗ್ರೆಸ್ ಪಕ್ಷ ತನ್ನನ್ನು ತಾನು ಬಿಂಬಿಸಿಕೊಳ್ಳಬೇಕು. ಜನರ ಆಶೋತ್ತರಗಳಿಗೆ ತಾನು ಧ್ವನಿಯಾಗುತ್ತೇನೆ ಎಂದು ಅದು ಮನವರಿಕೆ ಮಾಡಿಕೊಡಬೇಕು. ಅದಕ್ಕೆ ನೆಲದ ದನಿಗಳಿಗೆ ಕಿವಿ ಕೊಡುವ ನಾಯಕತ್ವ ಬೇಕಾಗುತ್ತದೆ.ಅದರ ಜತೆಗೆ ಜಾತಿ ಸಮೀಕರಣವೂ ಸರಿ ಹೋಗಬೇಕು. ಈಗ ಕಾಂಗ್ರೆಸ್ ಪಕ್ಷದಲ್ಲಿ ಗೆಲ್ಲುವ ಸಮೀಕರಣವಿಲ್ಲ. ಗೋವಾದಲ್ಲಿ ಬಿಜೆಪಿಯು ಕ್ಯಾಥೊಲಿಕ್ ಸಮುದಾಯದವರಿಗೆ ಟಿಕೆಟ್ ಕೊಟ್ಟು ಇಂಥ ಸಮೀಕರಣವನ್ನು ಸಾಧಿಸಿ ತೋರಿಸಿದೆ. ಮತೀಯ ಅಲ್ಪಸಂಖ್ಯಾತರ ಜತೆಗೆ ಆ ಪಕ್ಷ ಇಂಥ ಸುಮಧುರ ಸಂಬಂಧ ಹೊಂದುವುದು ಒಂದು ಪವಾಡವೇ ಸರಿ. ಆದರೆ, ಅದು ಅಲ್ಲಿ ಫಲ ಕೊಟ್ಟಿದೆ. ಉತ್ತರ ಪ್ರದೇಶದಲ್ಲಿ ಐದು ವರ್ಷಗಳ ಹಿಂದೆ ಮಾಯಾವತಿಯಂಥ ಒಬ್ಬ ಕಟ್ಟಾ ದಲಿತ ನಾಯಕಿ ಬ್ರಾಹ್ಮಣರನ್ನು ಓಲೈಸಿದ್ದು ಕೂಡ ಇಂಥ ಒಂದು ಹೊಸ ಯೋಚನೆಯೇ ಆಗಿತ್ತು. ಬಿಜೆಪಿ ಜತೆಗಿರುವ ಲಿಂಗಾಯತರು ಮತ್ತು ಜೆ.ಡಿ (ಎಸ್) ಜತೆಗಿರುವ ಒಕ್ಕಲಿಗರ ಬಲಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅಥವಾ ಈ ಎರಡು ದೊಡ್ಡ ಸಮುದಾಯಗಳಲ್ಲಿ ಒಂದನ್ನು ತನ್ನ ಕಡೆಗೆ ಒಲಿಸಿಕೊಳ್ಳಬೇಕಾಗುತ್ತದೆ.ಈ ತಿಂಗಳು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷದ ಭವಿಷ್ಯದ ನಡೆಗಳಿಗೆ ಒಂದು ದಿಕ್ಕನ್ನು ಸೂಚಿಸಬಹುದು. ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಲೋಕಸಭೆಗೆ ಅವಧಿಗಿಂತ ಮುಂಚೆ ಚುನಾವಣೆ ನಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಯಡಿಯೂರಪ್ಪ ಅವರು ಮಾಡುತ್ತಿರುವ ಆತುರ ನೋಡಿದರೆ ಕರ್ನಾಟಕದ ವಿಧಾನಸಭೆಗೆ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು. ಅದಕ್ಕಾಗಿಯೇ, ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೇಳಿದ ಪಾಠಗಳನ್ನು ಎಲ್ಲರೂ ಎಷ್ಟು ಬೇಗ ಅರ್ಥ ಮಾಡಿಕೊಂಡರೂ ಅಷ್ಟು ಒಳ್ಳೆಯದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.