ನೇಪಾಳಿ ಬೆಟ್ಟಕ್ಕೆ ಬಿದ್ದ ಬಂಗಾಳಿ ಬೆಂಕಿ

7

ನೇಪಾಳಿ ಬೆಟ್ಟಕ್ಕೆ ಬಿದ್ದ ಬಂಗಾಳಿ ಬೆಂಕಿ

ಡಿ. ಉಮಾಪತಿ
Published:
Updated:
ನೇಪಾಳಿ ಬೆಟ್ಟಕ್ಕೆ ಬಿದ್ದ ಬಂಗಾಳಿ ಬೆಂಕಿ

ದೇಶದ ಪ್ರಸಿದ್ಧ ಮತ್ತು ಅತ್ಯಂತ ಜನಪ್ರಿಯ ಗಿರಿಧಾಮ ಗರ ಬಡಿದಂತೆ ಒದ್ದಾಡಿದೆ. ಪ್ರತ್ಯೇಕ ಗೋರ್ಖಾಲ್ಯಾಂಡ್ ಬೇಡಿಕೆಯ ಬಿರುಗಾಳಿ ಡಾರ್ಜಿಲಿಂಗ್ ಬೆಟ್ಟಗಳನ್ನು ಬಡಿದು ಬಾರಿಸತೊಡಗಿದೆ. ಗೋರ್ಖಾಗಳು, ಸಂತಾಲರು ಮತ್ತಿತರರ ಬಹುಕಾಲದ ಬೇಡಿಕೆ ಇದು. ಗೋರ್ಖಾಗಳು, ಆದಿವಾಸಿಗಳು ಹಾಗೂ ರಾಜಬನ್ಶಿಗಳನ್ನು ಒಡೆದು ಆಳುವ ಮಮತಾ ಹುನ್ನಾರವೇ ಬೆಟ್ಟಗಳಿಗೆ ಕಿಚ್ಚು ಹಚ್ಚಿದೆ.

ಶಾಲೆಗಳಲ್ಲಿ ಬಂಗಾಳಿ ಕಲಿಕೆ ಕಡ್ಡಾಯ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ಹುಟ್ಟಿ ಹಾಕಿದ ಬಿಕ್ಕಟ್ಟಿದು. ನೇಪಾಳಿ ಮತ್ತು ಸಂತಾಲಿ ಭಾಷಿಕರು ಈ ಹೇರಿಕೆ ವಿರುದ್ಧ ಸಿಡಿದು ಎದ್ದಿದ್ದಾರೆ. ತಮ್ಮ ಮಾತೃಭಾಷೆ, ಇಂಗ್ಲಿಷ್ ಹಾಗೂ ಹಿಂದಿಯ ಪೈಕಿ ಯಾವುದಾದರೊಂದನ್ನು ಬಿಟ್ಟು ಬಂಗಾಳಿ ಕಲಿಯಬೇಕಾಗುತ್ತದೆ. 

2011ರಲ್ಲಿ ಅರೆಸ್ವಾಯತ್ತ ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭರವಸೆ ನೀಡಲಾಗಿದ್ದ ಅಧಿಕಾರಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಪ್ರಾದೇಶಿಕ ಆಡಳಿತಕ್ಕೆ ವರ್ಗಾಯಿಸಲಿಲ್ಲ. ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಚುನಾವಣಾ ಭರವಸೆ ನೀಡಿದ್ದ ಬಿಜೆಪಿಯ ಹಿಂದೆ ನಡೆಯಿತು ಗೋರ್ಖಾ ಜನಮುಕ್ತಿ ಮೋರ್ಚಾ.

ತನ್ನ ಎದುರಾಳಿಯ ಕೈ ಕುಲುಕಿದ ಜನಮುಕ್ತಿ ಮೋರ್ಚಾವನ್ನು ಕ್ಷಮಿಸಲು ಮಮತಾ ಸಿದ್ಧರಿಲ್ಲ. ನಾನಾ ಆದಿವಾಸಿ ಅಭಿವೃದ್ಧಿ ಮಂಡಳಿಗಳನ್ನು ರಚಿಸಿ ಗೋರ್ಖಾಲ್ಯಾಂಡ್ ಜನಮೋರ್ಚಾದ ನಡುವನ್ನು ಮುರಿಯುವ ತಂತ್ರವನ್ನು ಅನುಸರಿಸಿದೆ ಮಮತಾ ನೇತೃತ್ವದ ಸರ್ಕಾರ.

ತಮ್ಮ ಬೇಕು ಬೇಡಗಳ ಕುರಿತು ಮಮತಾ ಸೊಪ್ಪು ಹಾಕುತ್ತಿಲ್ಲ ಎಂದು ಭಾವಿಸಿರುವ ಗೋರ್ಖಾಗಳು ಪ್ರತ್ಯೇಕ ಗೋರ್ಖಾ ನಾಡಿನ ಬೇಡಿಕೆಗೆ ಮತ್ತೆ ಜೀವ ತುಂಬಿ ಎಬ್ಬಿಸಿ ನಿಲ್ಲಿಸಿದ್ದಾರೆ. ಮಮತಾ ಬಂಗಾಳದ ಮುತ್ಸದ್ದಿ ಮುಖ್ಯಮಂತ್ರಿಯಂತೆ ವರ್ತಿಸಬೇಕಿತ್ತು. ಆದರೆ ಕೇವಲ ತೃಣಮೂಲ ಕಾಂಗ್ರೆಸ್ಸಿನ ಅಧ್ಯಕ್ಷರಂತೆ ನಡೆದುಕೊಳ್ಳುತ್ತಿದ್ದಾರೆ.

ಗೋರ್ಖಾ ತಲೆಯಾಳುಗಳ ಮನೆಗಳ ಮೇಲೆ ದಾಳಿ ನಡೆದು ಅವರ ವಿರುದ್ಧ ಪೊಳ್ಳು ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ನಿರಾಯುಧ ಪ್ರತಿಭಟನಾಕಾರರನ್ನು ಕೊಲ್ಲಲಾಗುತ್ತಿದೆ. ದಶಕಗಳಿಂದ ರಾಜ್ಯ ಸರ್ಕಾರ ಸಮಾನ ಪ್ರಜೆಗಳೆಂದು ತಮ್ಮನ್ನು ನೋಡಿಲ್ಲವೆಂಬ ನೋವು ಅವರಿಗಿದೆ. ಜೇನುಗೂಡಿಗೆ ಕಲ್ಲೆಸೆದ ಉಡಾಳ ಹುಡುಗನ ಪರಿಸ್ಥಿತಿ ಮಮತಾ ಅವರಿಗೂ ಎದುರಾಗಿದೆ.

ಇದೀಗ ಆಂದೋಲನ ಭಾಷೆಯ ಪ್ರಶ್ನೆಯನ್ನು ದಾಟಿಕೊಂಡು ಮುಂದೆ ಹೋಗಿದೆ. ಮಮತಾ ಅವರದು  ಬಂಗಾಳಿ ಭಾಷಾ ದುರಭಿಮಾನ. ಉತ್ತರ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಾರ್ಟಿಯ ಬೇರುಗಳು ದುರ್ಬಲ. ಹೀಗಾಗಿ ಅಲ್ಲಿ ನೇಪಾಳೀ ವಿರೋಧಿ ಭಾವನೆಗಳನ್ನು ಬಡಿದೆಬ್ಬಿಸಲು ಟೊಂಕ ಕಟ್ಟಿದ್ದಾರೆ ಮಮತಾ ಬ್ಯಾನರ್ಜಿ. ನೇಪಾಳಿಗಳು ಮತ್ತು ಬಂಗಾಳಿಗಳ ನಡುವೆ ಜಗಳ ತಂದಿಟ್ಟು ಬಂಗಾಳಿಗಳನ್ನು ಇಡಿಯಾಗಿ ತಮ್ಮತ್ತ ಒಲಿಸಿಕೊಳ್ಳುವ ತಂತ್ರ.

ಗೋರ್ಖಾಗಳು ಸಾಹಸಿಗಳು ಮತ್ತು ಭಾರತ ನಿಷ್ಠರು. ದೇಶದ ಸರಹದ್ದುಗಳನ್ನು ಕಾಯುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದವರಲ್ಲ. ಆದರೆ ಮಮತಾ ನೇತೃತ್ವದ ಸರ್ಕಾರ ಸೇನೆಯನ್ನು ಕರೆಯಿಸಿ ಅವರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಮತ್ತು ಸಶಸ್ತ್ರ ಬಂಡುಕೋರರು ಎಂದು ಕಾಣಲಾಗುತ್ತಿರುವುದು ನಾಚಿಕೆಗೇಡು. ಅಸ್ಮಿತೆಯನ್ನು ಉಳಿಸಿಕೊಂಡು, ಪ್ರತ್ಯೇಕ ರಾಜ್ಯವಾಗಿ, ಭಾರತದ ಭಾಗವಾಗಿ ಬೆರೆಯಲು ಬಯಸುವ ಅವರನ್ನು ಬಂಗಾಳಿ ಸಂಸ್ಕೃತಿಗೆ ಬಲವಂತವಾಗಿ ಬಗ್ಗಿಸಲು ಹಟ ತೊಟ್ಟಿದ್ದಾರೆ ಮಮತಾ ಬ್ಯಾನರ್ಜಿ. ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯನ್ನು ಬೇಕೆಂದೇ ಪ್ರಜ್ಞಾಪೂರ್ವಕವಾಗಿ ಹೇರಲು ಹೊರಟಿದ್ದಾರೆ.

ಮೂರು ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿರುವ ಈ ಸೀಮೆಯನ್ನು ಅಶಾಂತಿಯ ಬೆಂಕಿ ಸುಡುವುದು ಒಳ್ಳೆಯದಲ್ಲ. ದೇಶದ್ರೋಹಿ ಶಕ್ತಿಗಳು ಈ ಪರಿಸ್ಥಿತಿಯ ದುರ್ಲಾಭ ಪಡೆಯುವ ವಾತಾವರಣ ಸೃಷ್ಟಿಸುವುದು ತರವಲ್ಲ.

ಪಶ್ಚಿಮ ಬಂಗಾಳ, ಲೋಕಸಭೆಗೆ 42 ಮಂದಿ ಸಂಸದರನ್ನು ಆರಿಸಿ ಕಳಿಸುತ್ತದೆ. ಗೋರ್ಖಾಲ್ಯಾಂಡ್ ರಚನೆಯಾದರೆ ಅಲ್ಲಿಂದ ಲೋಕಸಭೆಗೆ ಆಯ್ಕೆಯಾಗುವ ಸದಸ್ಯ ಒಬ್ಬನೇ ಒಬ್ಬ. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸಿದರೆ ಉಳಿದ ಬಂಗಾಳ ಬಿಜೆಪಿಗೆ ತಿರುಗಿ ಬೀಳಬಹುದು. ಆ ರಾಜ್ಯದಲ್ಲಿ ಇತ್ತೀಚಿನ ತನ್ನ ಸಾಧನೆ ಪುನಃ ಸೊನ್ನೆಯಾಗುವುದನ್ನು ಬಿಜೆಪಿ ಸ್ವಾಭಾವಿಕವಾಗಿಯೇ ಬಯಸುವುದಿಲ್ಲ. ಡಾರ್ಜಿಲಿಂಗ್‌ನ ಒಂದು ಸೀಟಿಗಾಗಿ ಉಳಿದ 41 ಸೀಟುಗಳ ದೊಡ್ಡ ಸಂಖ್ಯೆಯನ್ನು ಬಲಿಗೊಡುವುದು ಅವಿವೇಕ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತು.

ತನ್ನ ಭದ್ರಕೋಟೆ ಎನಿಸಿದ ಮಿರಿಕ್‌ನ ಪುರಸಭಾ ಚುನಾವಣೆಗಳಲ್ಲಿ ಗೋರ್ಖಾ ಜನಮುಕ್ತಿ ಮೋರ್ಚಾ ಸೋತಿದೆ. ತೃಣಮೂಲ ಕಾಂಗ್ರೆಸ್ ಪಕ್ಷ ಗೆದ್ದಿದೆ. ಕಾಲ ಕೆಳಗಿನ ನೆಲ ಕುಸಿಯತೊಡಗಿದ ಸೂಚನೆಗಳಿಂದ ಹೌಹಾರಿರುವ ಬಿಮಲ್ ಗುರುಂಗ್ ಭಾವೋದ್ವಿಗ್ನ ವಿಷಯವೊಂದರ ಹುಡುಕಾಟದಲ್ಲಿದ್ದರು. ಮಮತಾ ಅದನ್ನು ತಾವಾಗಿಯೇ ಗುರುಂಗ್ ಮಡಿಲಿಗೆ ಇಟ್ಟರು. ಭಾಷೆಗಿಂತ ಭಾವೋದ್ವಿಗ್ನ ವಿಷಯ ಮತ್ಯಾವುದಿದ್ದೀತು? ಈ ಹಿಂದೆ ಪಾಕಿಸ್ತಾನದ ಬುಡಕ್ಕೆ ಮದ್ದಿಟ್ಟು ಸಿಡಿಸಿ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ ವಿಷಯವಿದು.

ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವೆಂಬುದು ಬಂಗಾಳದೊಳಗಿನ ಅರೆಸ್ವಾಯತ್ತ ಅಧಿಕಾರಗಳನ್ನು ಉಳ್ಳ ಸೀಮೆ. ನೇಪಾಳಿಯೇ ಇಲ್ಲಿನ ಆಡಳಿತ ಭಾಷೆ. 1961ರಷ್ಟು ಹಿಂದೆಯೇ ಬಂಗಾಳದ ಆಡಳಿತ ಭಾಷೆಗಳ ಪೈಕಿ ನೇಪಾಳಿಯೂ ಒಂದು ಎನಿಸಿತ್ತು.

ಪ್ರತ್ಯೇಕ ಗೋರ್ಖಾಲ್ಯಾಂಡ್ ಭರವಸೆ ನೀಡಿಯೇ ಭಾರತೀಯ ಜನತಾ ಪಾರ್ಟಿ ಡಾರ್ಜಿಲಿಂಗ್ ಸೀಟನ್ನು 2009 ಮತ್ತು 2014ರಲ್ಲಿ ಸತತವಾಗಿ ಗೆದ್ದಿದೆ. ಭರವಸೆಯನ್ನು ಈಡೇರಿಸುವಂತೆ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾ ಬಿಜೆಪಿಯನ್ನು ಆಗ್ರಹಿಸತೊಡಗಿದೆ. ಇತ್ತೀಚೆಗೆ ಬಂಗಾಳದಲ್ಲಿ ದಾಪುಗಾಲು ಇಡತೊಡಗಿರುವ ಬಿಜೆಪಿಗೆ ಈ ಹಿಂದೆ ತಾನು ನೀಡಿದ್ದ ಭರವಸೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಣ್ಣ ರಾಜ್ಯಗಳ ಪರವಾಗಿದ್ದರೂ, ಬಂಗಾಳವನ್ನು ಒಡೆಯುವ ಪಕ್ಷವಾಗಿ ಬಂಗಾಳಿ ಮತದಾರರ ಮುಂದೆ ಹೋಗುವುದು ಬಿಜೆಪಿಗೆ ಇಷ್ಟವಿಲ್ಲ. ಪ್ರತ್ಯೇಕ ರಾಜ್ಯವಾದ ನಂತರ ತೆಲಂಗಾಣ, ಕಾಂಗ್ರೆಸ್ಸಿನ ಕೈ ತಪ್ಪಿ ಹೋದ ಉದಾಹರಣೆಯನ್ನು ಬಿಜೆಪಿ ಸುಲಭವಾಗಿ ಮರೆಯುವುದಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ 2014ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದೂಳೀಪಟ ಆಯಿತು. ಪ್ರತ್ಯೇಕ ತೆಲಂಗಾಣ ರಚನೆಯನ್ನು ಆಂಧ್ರದ ಜನ ತೀವ್ರವಾಗಿ ವಿರೋಧಿಸಿದ್ದರು.

ಇಂತಹ ಸೂಕ್ಷ್ಮ ಹೇಳಿಕೆಯನ್ನು ನೀಡುವ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾದ ಅರೆಸ್ವಾಯತ್ತ ಪ್ರಾಧಿಕಾರದೊಡನೆ ಸಮಾಲೋಚನೆ ನಡೆಸಬೇಕಿತ್ತು. ಅದರ ಬದಲಿಗೆ ಅವರು ಸೇನೆಯನ್ನು ಕರೆದಿದ್ದಾರೆ. ದಮನತಂತ್ರಗಳನ್ನು ಅನುಸರಿಸತೊಡಗಿದ್ದಾರೆ. ದ್ವೇಷ ಪ್ರಚೋದಿಸುವ ಭಾಷಣಗಳನ್ನು ಮಾಡಿದರೆಂದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿಗಳೂ ಸೇರಿದಂತೆ ಹಲವು ನಾಗರಿಕರ ಮೇಲೆ ಕೇಸುಗಳನ್ನು ನೋಂದಾಯಿಸಿಕೊಳ್ಳಲಾಗಿದೆ.

ಬಂಗಾಳಿಯ ಕಲಿಕೆ ಕಡ್ಡಾಯ ಅಲ್ಲ ಎಂದು ಮಮತಾ ಎರಡು ಬಾರಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಆಂದೋಲನನಿರತರು ಅದನ್ನು ಕಿವಿ ಮೇಲೆ ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಈಗ ಈ ಬೆಂಕಿ ಕೇವಲ ಇಂತಹ ಸ್ಪಷ್ಟೀಕರಣದಿಂದ ತಣಿಯುವುದಿಲ್ಲ. ಅಧಿಕಾರ ಹಂಚಿಕೆಯ ಮುಲಾಮು ಮಾತ್ರವೇ ಕೆಲಸ ಮಾಡೀತು.

ಪ್ರತ್ಯೇಕ ಗೋರ್ಖಾಲ್ಯಾಂಡ್ ಬೇಡಿಕೆ 60 ವರ್ಷಗಳಷ್ಟು ಹಳೆಯದು. ಬಂಗಾಳದ ಸರ್ಕಾರಗಳು ದಶಕಗಳಿಂದ ತಮ್ಮನ್ನು ವ್ಯವಸ್ಥಿತವಾಗಿ ದಮನ ಮಾಡುತ್ತ ಬಂದಿದ್ದು, ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳಲಾಗುತ್ತಿದೆ ಎಂಬುದು ಗೋರ್ಖಾಗಳ ದೂರು. ಫ್ರೆಂಚ್, ಪಾಳಿ ಹಾಗೂ ಅರಬ್ಬಿ ಭಾಷೆಗಳಲ್ಲಿ ಬಂಗಾಳದ ಸಿವಿಲ್ ಸರ್ವೀಸಸ್ ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆ. ಆದರೆ ನೇಪಾಳಿಗೆ ಯಾಕೆ ಇಲ್ಲ ಎಂಬುದು ಗೋರ್ಖಾಗಳು ಎತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಒಂದು. ಈ ಸೀಮೆಯಲ್ಲಿ ಗೋರ್ಖಾಗಳು, ಆದಿವಾಸಿಗಳು ಹಾಗೂ ರಾಜಬನ್ಶಿಗಳು ನೆಲೆಸಿದ್ದಾರೆ. ಈ ಯಾವುದೇ ಜನಾಂಗದ ಮಾತೃಭಾಷೆ ಬಂಗಾಳಿ ಇಲ್ಲ.

ಇಪ್ಪತ್ತು ವರ್ಷಗಳ ಕಾಲ ಇಂಗ್ಲಿಷ್ ಪತ್ರಿಕೆಗಳಿಗೆ ದಿಲ್ಲಿಯ ರಾಜಕಾರಣವನ್ನು ವರದಿ ಮಾಡಿದ ಮಿತ್ರ ಸ್ವರಾಜ್ ಥಾಪಾ ನೇಪಾಳಿ ಮೂಲದ ಗೋರ್ಖಾ. ಪತ್ರಿಕೋದ್ಯಮ ತೊರೆದಿದ್ದಾನೆ. ಪ್ರತ್ಯೇಕ ಗೋರ್ಖಾಲ್ಯಾಂಡ್ ರಾಜ್ಯದ ಹೋರಾಟ ಸೇರಿದ್ದಾನೆ.

ಅವನ ಪ್ರಕಾರ ಪ್ರತ್ಯೇಕ ರಾಜ್ಯದ ಬೇಡಿಕೆ ಕೇವಲ ಒಂದು ಲೋಕಸಭಾ ಕ್ಷೇತ್ರ ಅಥವಾ ಕೆಲವು ವಿಧಾನಸಭಾ ಕ್ಷೇತ್ರಗಳ ಪ್ರಶ್ನೆಯಲ್ಲ. ಅದು ಜನರಿಗೆ ಸಂಬಂಧಿಸಿದ್ದು. ಗೋರ್ಖಾಗಳಿಗೆ ಸಂಬಂಧಿಸಿದ್ದು. ಪ್ರತಿಯೊಂದು ರೀತಿಯಲ್ಲೂ ಅವರು ಭಿನ್ನ ಜನಾಂಗ. ಬಂಗಾಳಿ ಅಸ್ಮಿತೆಗಿಂತ ಪೂರ್ಣ ಭಿನ್ನವಾದ ಜನಾಂಗ. ಕೆಲವೇ ವಿಧಾನಸಭಾ ಕ್ಷೇತ್ರಗಳು ಮತ್ತು ಒಂದೇ ಲೋಕಸಭಾ ಕ್ಷೇತ್ರವಿರುವ ಪುಟ್ಟ ಭೌಗೋಳಿಕ ಪ್ರದೇಶ ಸ್ವತಂತ್ರ ರಾಜ್ಯವಾಗುವುದು ಕಾರ್ಯಸಾಧ್ಯ ಅಲ್ಲ ಎಂಬ ಟೀಕೆಯಲ್ಲಿ ಹುರುಳಿಲ್ಲ.

ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ ಒಂದೇ ಲೋಕಸಭಾ ಕ್ಷೇತ್ರ ಉಳ್ಳ ರಾಜ್ಯಗಳು. ಗೋವಾ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಹಾಗೂ ತ್ರಿಪುರ ತಲಾ ಎರಡು ಲೋಕಸಭಾ ಕ್ಷೇತ್ರ ಹೊಂದಿವೆ. ಇವುಗಳ ಪೈಕಿ ಬಹುತೇಕ ರಾಜ್ಯಗಳ ಸಾಧನೆ ಕಳಪೆಯಲ್ಲ. ಉತ್ತರಾಖಂಡ, ಜಾರ್ಖಂಡ್‌, ಛತ್ತೀಸಗಡ ಹಾಗೂ ತೆಲಂಗಾಣದ ನಂತರ ಉಳಿದಿರುವ ಜನಾಂದೋಲನ ಬೆಂಬಲಿತ ಪ್ರತ್ಯೇಕ ರಾಜ್ಯದ ಬೇಡಿಕೆಗಳು ಎರಡೇ- ಗೋರ್ಖಾಲ್ಯಾಂಡ್ ಮತ್ತು ಬೋಡೋಲ್ಯಾಂಡ್.

ಡಾರ್ಜಿಲಿಂಗ್ ಬೆಟ್ಟಗಳಲ್ಲಿ ತೃಣಮೂಲ ಜನಪ್ರಿಯತೆ ಗಳಿಸಿದೆ ಎಂಬುದೊಂದು ಮಿಥ್ಯೆ. ಪೊಲೀಸ್ ಗೋಲಿಬಾರ್‌ಗೆ ಜೀವ ತೆತ್ತ ಮೂವರ ಮಸಣ ಯಾತ್ರೆಯಲ್ಲಿ ಭಾಗವಹಿಸಿದ್ದ ಭಾರೀ ಜನಸಮೂಹವೇ ಈ ಮಾತಿಗೆ ಸಾಕ್ಷಿ. ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್ ಈಗಾಗಲೇ ತೃಣಮೂಲದ ಗೆಳೆತನ ಕಡಿದುಕೊಂಡಿದೆ.

ಜನ ಆಂದೋಲನ ಪಾರ್ಟಿ ಕೂಡ ಮಮತಾ ಅವರನ್ನು ತ್ಯಜಿಸಿ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿದೆ. ಸಿಕ್ಕಿಂ ತೃಣಮೂಲ ಅಧ್ಯಕ್ಷ ಕೂಡ ಗೋರ್ಖಾಗಳಿಗೆ ಪ್ರತ್ಯೇಕ ರಾಜ್ಯ ಬೇಡಿಕೆ ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ ಪಕ್ಷ ಎಸ್.ಡಿ.ಎಫ್ ಕೂಡ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದೆ.

ಒಂಬತ್ತು ಸ್ಥಾನಗಳ ಪುಟ್ಟ ಪುರಸಭೆ ಮಿರಿಕ್‌ನ ಚುನಾವಣಾ ಫಲಿತಾಂಶಗಳು ನಿಜವನ್ನು ಪ್ರತಿಫಲಿಸುವುದಿಲ್ಲ. ಉಳಿದ 75 ಸೀಟುಗಳಲ್ಲಿ ತೃಣಮೂಲ ತಿಣುಕಿ ತಿಣುಕಿ ಗೆದ್ದದ್ದು ಕೇವಲ ಐದು ಸೀಟುಗಳು. ಡಾರ್ಜಿಲಿಂಗ್, ಕುರೇಸಾಂಗ್ ಹಾಗೂ ಕ್ಯಾಲಿಂಪಾಂಗ್ ಪುರಸಭೆಗಳಲ್ಲಿ ಗೋರ್ಖಾ ಜನಮುಕ್ತಿ ಮೋರ್ಚಾ ದೊಡ್ಡ ಗೆಲುವು ಪಡೆದಿದೆ.

ಡಾರ್ಜಿಲಿಂಗ್ ಬೆಟ್ಟಗಳಿಗೆ ಮಮತಾ ಮತ್ತೆ ಮತ್ತೆ ಬಂದದ್ದು ತೃಣಮೂಲವನ್ನು ಬೆಳೆಸಲೆಂದೇ ವಿನಾ ಅಭಿವೃದ್ಧಿ ಕಾರ್ಯಗಳಿಗಾಗಿ ಅಲ್ಲ. ಸೊಸೈಟಿ ನೋಂದಣಿ ಕಾಯ್ದೆಯಡಿ ಲೋಕಲ್ ಕ್ಲಬ್ಬುಗಳ ಮಾದರಿ ನಾನಾ ಅಭಿವೃದ್ಧಿ ಮಂಡಳಿಗಳ ರಚನೆ ಗೋರ್ಖಾ ಸಮಾಜವನ್ನು ಒಡೆದು ಅದರ ಮೇಲೆ ಗಾಯದ ಗುರುತುಗಳು ಕಾಯಮ್ಮಾಗಿ ಕೊರೆದು ಉಳಿಸುವ ಕ್ರೌರ್ಯದ ಕೆಲಸ. ತೃಣಮೂಲದ ತಾಳಕ್ಕೆ ಕುಣಿಯದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನನ್ನು ಬೇಕೆಂದಾಗ ಕಿತ್ತೆಸೆಯಬಹುದು.

2011ರಲ್ಲಿ ಸಹಿ ಮಾಡಿದ ಒಪ್ಪಂದ ಜ್ಞಾಪನ ಪತ್ರದಲ್ಲಿ ಉಲ್ಲೇಖಿಸಲಾದ ಗೋರ್ಖಾಲ್ಯಾಂಡ್ ಬೇಡಿಕೆಗೆ ಮರುಜೀವ ನೀಡಲಾಗಿದೆ. ಈ ಬೇಡಿಕೆಯನ್ನು ಕೈ ಬಿಡುವುದಿಲ್ಲ ಎಂಬ ಉಲ್ಲೇಖವನ್ನು ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರ ಒಪ್ಪಿ ಸಹಿ ಹಾಕಿದ್ದವು.

ಗೋರ್ಖಾಲ್ಯಾಂಡ್ ಬೇಡಿಕೆ ಬಹಳ ಹಳೆಯದು. ಇದನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೆಂದು ತಿಪ್ಪೆ ಸಾರಿಸುವುದನ್ನು ಆಳುವವರು ಇನ್ನಾದರೂ ಕೈಬಿಡಬೇಕು. ಬಂಗಾಳದ ಭಾವುಕ ವಿರೋಧ ತರ್ಕಶೂನ್ಯ. ಹೌದು, ಆಂದೋಲನದ ಕಾರಣ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ.

80ರ ದಶಕದಲ್ಲಿ ಈ ಸೀಮೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಹೊತ್ತಿ ಉರಿದಿತ್ತು. ಸಾವಿನ ಸಂಖ್ಯೆ ಸಾವಿರದಿನ್ನೂರು ದಾಟಿತ್ತು. ಅನಿರ್ದಿಷ್ಟ ಬಂದ್‌ಗಳು ನಲವತ್ತು ದಿನಗಳ ಮೀರಿ ಮುನ್ನಡೆದಿದ್ದವು. ಪ್ರವಾಸೋದ್ಯಮ ಪೆಟ್ಟು ತಿಂದಿತ್ತು. ಅಷ್ಟೇ ಬೇಗ ಬದುಕು ಪುನಃ ಹಳಿ ಹತ್ತಿತ್ತು. ಇನ್ನಷ್ಟು ಜೀವಗಳು ಆರುವ ಮುನ್ನ ಮಾತುಕತೆಗಳು ಆರಂಭ ಆಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry