5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ನೋಕಿಯಾ ಎಕ್ಸ್: ವಿಂಡೋಸ್, ಆಶಾ, ಆಂಡ್ರಾಯಿಡ್‌ಗಳ ಚೌಚೌ

Published:
Updated:

ನೋಕಿಯಾ ಕಂಪೆನಿಯ ಮೊಬೈಲ್ ಫೋನ್ ವಿಭಾಗವನ್ನು ಮೈಕ್ರೋಸಾಫ್ಟ್ ಇತ್ತೀಚೆಗೆ ಕೊಂಡುಕೊಂಡಿದೆ. ಅದರ ವರ್ಗಾವಣೆಯ ಪ್ರಕ್ರಿಯೆ ಇನ್ನೂ ಸಂಪೂರ್ಣವಾಗಿಲ್ಲ. ಅಂತಹ ಸಂದರ್ಭದಲ್ಲಿ ನೋಕಿಯಾದವರು ಗೂಗ್ಲ್ ಆಂಡ್ರಾಯಿಡ್‌ ಆಧಾರಿತ ಫೋನ್ ತಯಾರಿಸುತ್ತಾರೆ ಎಂಬ ವದಂತಿ ಹಬ್ಬಿದಾಗ ಯಾರೂ ನಂಬಿರಲಿಲ್ಲ. ಕೊನೆಗೂ ಅದು ನಿಜವಾಗಿ ನೋಕಿಯಾ ಎಕ್ಸ್ ಎಂಬ ಫೋನ್ ಹೊರಬಂದಿದೆ. ಇದು ನೋಕಿಯಾ ಕಂಪೆನಿಯ ವರು ತಯಾರಿಸಿದ, ಆಂಡ್ರಾಯಿಡ್‌ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಮೊಬೈಲ್ ಫೋನ್. ಇದು ನಮ್ಮ ಈ ವಾರದ ಅತಿಥಿ. 

ಗುಣವೈಶಿಷ್ಟ್ಯಗಳು

1 ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ ಪ್ರೊಸೆಸರ್, 512 ಮೆಗಾಬೈಟ್ + 4 ಗಿಗಾಬೈಟ್ ಮೆಮೊರಿ, ಮೆಮೊರಿ ಹೆಚ್ಚಿಸಲು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಎರಡು ಮೈಕ್ರೊಸಿಮ್, 2ಜಿ ಮತ್ತು 3ಜಿ, 10.16 ಸೆ.ಮೀ. (4 ಇಂಚು) ಗಾತ್ರದ 480 x 800 ಪಿಕ್ಸೆಲ್ ರೆಸೊಲೂಶನ್‌ನ ಸ್ಪರ್ಶಸಂವೇದಿ ಪರದೆ, 3.15 ಮೆಗಾಪಿಕ್ಸೆಲ್ ಕ್ಯಾಮೆರಾ, ಎರಡನೇ ಕ್ಯಾಮೆರಾ ಇಲ್ಲ, ವಿಡಿಯೊ ಚಿತ್ರೀಕರಿಸುವ ಸೌಲಭ್ಯ, ಎಕ್ಸೆಲರೋಮೀಟರ್, ಬ್ಲೂಟೂತ್, ವೈಫೈ, 1500 mAh ಶಕ್ತಿಯ ಬದಲಿಸಬಹುದಾದ ಬ್ಯಾಟರಿ, 3.5 ಮಿ.ಮೀ. ಆಡಿಯೊ (ಹೆಡ್‌ಫೋನ್‌ಗೆ) ಕಿಂಡಿ, ಮೈಕ್ರೋ ಯುಎಸ್‌ಬಿ ಕಿಂಡಿ, 115.5 x 63 x 10.4 ಮಿ.ಮೀ. ಗಾತ್ರ, ಇತ್ಯಾದಿ. ನಿಗದಿತ ಬೆಲೆ ₹9,500. ಕೆಲವು ಜಾಲತಾಣಗಳಲ್ಲಿ ಸುಮಾರು ₹7,250 ಕ್ಕೆ ದೊರೆಯುತ್ತಿದೆ.  ರಚನೆ ಮತ್ತು ವಿನ್ಯಾಸದಲ್ಲಿ ಈ ಫೋನ್ ಬಹುಮಟ್ಟಿಗೆ ನೋಕಿಯಾ ಆಶಾ ಫೋನನ್ನು ಹೋಲುತ್ತದೆ. ಸುಮಾರಾಗಿ ಪೆಟ್ಟಿಗೆಯಾಕಾರದಲ್ಲಿದೆ. ಹಿಂದುಗಡೆಯ ಮುಚ್ಚಳ ತೆಗೆದು ಬದಲಿಸಬಹುದು. ಇದರ ಯೂಸರ್ ಇಂಟರ್‌ಫೇಸ್ ಒಂದು ರೀತಿಯಲ್ಲಿ ನೋಕಿಯಾ ಆಶಾ, ವಿಂಡೋಸ್ ಫೋನ್ ಮತ್ತು ಆಂಡ್ರಾಯಿಡ್‌‌ಗಳ ಚೌಚೌ ಇದ್ದಂತಿದೆ. ಮೊದಲ ನೋಟಕ್ಕೆ ಇದು ಆಂಡ್ರಾಯಿಡ್‌ ಫೋನ್ ಅನ್ನಿಸುವುದಿಲ್ಲ. ಇದರ ಐಕಾನ್‌ಗಳು, ಅವುಗಳ ಆಕಾರ, ಅವುಗಳನ್ನು ಸರಿಸುವ ಅನುಭವ ಎಲ್ಲ ಬಹುಮಟ್ಟಿಗೆ ವಿಂಡೋಸ್ ಫೋನನ್ನು ಹೋಲುತ್ತದೆ. ಇನ್ನು ಕೆಲವು ವಿಷಯಗಳಲ್ಲಿ ಇದು ನೋಕಿಯಾ ಆಶಾ ಫೋನನ್ನು ಹೋಲುತ್ತದೆ.ಬಹುತೇಕ ಆಂಡ್ರಾಯಿಡ್‌ ಫೋನ್‌ಗಳಲ್ಲಿರುವಂತೆ ಇದರಲ್ಲಿ ‘ಹೋಮ್’ ಬಟನ್ ಅಥವಾ ಐಕಾನ್ ಇಲ್ಲ. ಆಯ್ಕೆಗಳಿಗೆ (ಸೆಟ್ಟಿಂಗ್ಸ್) ಹೋಗಿ ಅಲ್ಲಿ ಹೋಮ್ ಪರದೆಗೆ ಹೋಗಲು ಎಡದಿಂದ ಬಲಕ್ಕೆ ಪೂರ್ತಿಯಾಗಿ ಬೆರಳನ್ನು ಸರಿಸುವಂತೆ ಆಯ್ಕೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಇದರ ಯೂಸರ್ ಇಂಟರ್‌ಫೇಸ್ ಸ್ವಲ್ಪ ಭಿನ್ನವಾಗಿದ್ದು, ಬಳಕೆಯ ಅಭ್ಯಾಸವಾದರೆ ಪರವಾಗಿಲ್ಲ ಎನ್ನಬಹುದು. ಪ್ರಾರಂಭದಲ್ಲಿ ಮಾತ್ರ ಸ್ವಲ್ಪ ತೊಡಕೆನಿಸಬಹುದು.  ನಿಮಗೆ ಒಂದು ದೊಡ್ಡ ಆಘಾತ ಆಗುವುದು ಇದರಲ್ಲಿ ಗೂಗ್ಲ್ (ಆಂಡ್ರಾಯಿಡ್‌) ಪ್ಲೇ ಸ್ಟೋರ್ ಇಲ್ಲ ಎನ್ನುವುದು. ನೋಕಿಯಾದವರು ತಮ್ಮದೇ ಪ್ರತ್ಯೇಕ ಸ್ಟೋರ್ ಇಟ್ಟಿದ್ದಾರೆ. ಇದರಲ್ಲಿ ಹಲವು ಆಂಡ್ರಾಯಿಡ್‌ ಆಪ್‌ಗಳನ್ನು ಕೂಡ ಇಟ್ಟಿದ್ದಾರೆ. ಸಾಮಾನ್ಯವಾಗಿ ದಿನನಿತ್ಯ ಬಳಸುವ ಆಪ್‌ಗಳು ಇಲ್ಲಿವೆ. ಆದರೂ ನೀವು ವಾಟ್ಸ್‌ಆಪ್, ಟೆಂಪಲ್ ರನ್, ಆಂಗ್ರಿ ಬರ್ಡ್ಸ್, ಗೂಗ್ಲ್ ಮ್ಯಾಪ್ ಇತ್ಯಾದಿಗಳನ್ನು ಹುಡುಕಿದರೆ ಅವು ಇಲ್ಲಿ ಇಲ್ಲ.  ನೋಕಿಯಾ ಎಕ್ಸ್ ಬಳಕೆಯ ಅನುಭವ ಪರವಾಗಿಲ್ಲ. ಇದರ ಪರದೆ ಪೂರ್ತಿಯಾಗಿ ಬಹುಸ್ಪರ್ಶಸಂವೇದಿ ಪರದೆ ಅಲ್ಲ. ಏಕಕಾಲದಲ್ಲಿ ಎರಡು ಬೆರಳುಗಳನ್ನು ಮಾತ್ರ ಬಳಸಬಹುದು. ಚಿತ್ರಗಳನ್ನು ಎರಡು ಬೆರಳು ಬಳಸಿ ಒತ್ತಿ ದೊಡ್ಡದು ಮಾಡುವ ಅನುಭವ ಅಷ್ಟೇನೂ ಅದ್ಭುತವಾಗಿಲ್ಲ. ಜಾಲತಾಣಗಳನ್ನು ವೀಕ್ಷಿಸುವಾಗ ಪರದೆಯನ್ನು ಎರಡು ಬೆರಳು ಬಳಸಿ ದೊಡ್ಡದು ಮಾಡುವಾಗ ಅದರ ಸಂವೇದನೆ ತೃಪ್ತಿದಾಯಕವಾಗಿಲ್ಲ.ಕೆಲವು ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಹಾಗೆಂದು ಸಂಪೂರ್ಣ ಕಳಪೆಯಾಗಿಯೂ ಇಲ್ಲ. ವಿಡಿಯೊ ವೀಕ್ಷಣೆಯ ಬಗ್ಗೆ ಇದೇ ಮಾತನ್ನು ಹೇಳಬಹುದು. ಆಡಿಯೊ ಗುಣಮಟ್ಟ ಅತ್ಯದ್ಭುತ ಎನ್ನುವಂತೇನೂ ಇಲ್ಲ. ನೀಡುವ ಹಣಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಕ್ಯಾಮೆರಾ ಮಾತ್ರ ನೋಕಿಯಾಗೆ ಸಂಪೂರ್ಣ ಅಪವಾದವಾಗಿದೆ. ಸಾಮಾನ್ಯವಾಗಿ ನೋಕಿಯಾ ಫೋನ್‌ಗಳಲ್ಲಿನ ಕ್ಯಾಮೆರಾ ಚೆನ್ನಾಗಿಯೇ ಇರುತ್ತದೆ. ಫೋನಿನ ಬೆಲೆಗೆ ಅನುಗುಣವಾಗಿ ಕ್ಯಾಮೆರಾ ಚೆನ್ನಾಗಿಯೇ ಇರುತ್ತದೆ. ಆದರೆ ಇದರ ಕ್ಯಾಮೆರಾ ಚೆನ್ನಾಗಿಲ್ಲ. ಇದಕ್ಕಿಂತ ಕಡಿಮೆ ಬೆಲೆಯ ಆಶಾ ಫೋನಿನ ಕ್ಯಾಮೆರಾ ಇದಕ್ಕಿಂತ ಚೆನ್ನಾಗಿದೆ.  ಇದರಲ್ಲಿ ಭಾರತೀಯ ಭಾಷೆಗಳಲ್ಲಿ ಹಿಂದಿ ಮಾತ್ರ ಇದೆ. ಅಂದರೆ, ಹಿಂದಿ ಭಾಷೆಯಲ್ಲಿಯೇ ಯೂಸರ್ ಇಂಟರ್‌ಫೇಸ್, ಕೀಲಿಮಣೆ ಎಲ್ಲ ಇವೆ. ಕನ್ನಡ ಭಾಷೆ ಬಗ್ಗೆ ನೋಡಿದರೆ ಪಠ್ಯದ ತೋರುವಿಕೆ (ರೆಂಡರಿಂಗ್) ಜಾಲತಾಣ ವೀಕ್ಷಣೆ, ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಸರಿಯಾಗಿದೆ. ಆದರೆ ಕನ್ನಡದ ಕೀಲಿಮಣೆ ಇಲ್ಲ. ಇವರದೇ ಸ್ಟೋರ್‌ನಲ್ಲಿ ನಾವೆಲ್ಲ ಬಳಸುವ Anysoftkeyboard (ಮತ್ತು ಅದಕ್ಕೆ ಕನ್ನಡದ ವಿನ್ಯಾಸ), JustKannada ಇತ್ಯಾದಿ ಕೀಲಿಮಣೆ ಆಪ್‌ಗಳು ಇಲ್ಲ. ಗೂಗ್ಲ್ ಪ್ಲೇ ಸ್ಟೋರ್ ಸೌಲಭ್ಯ ಇಲ್ಲದಿರುವುದಿರಿಂದ ನೀವು ನಿಮಗಿಷ್ಟವಾದ ಕನ್ನಡದ ಕೀಲಿಮಣೆ ಹಾಕಿಕೊಳ್ಳಲು ಆಗುವುದಿಲ್ಲ. ನೋಕಿಯಾ ಎಕ್ಸ್ ಸ್ಟೋರ್‌ನಲ್ಲಿ ಪಾಣಿನಿ ಹೆಸರಿನ ಕನ್ನಡ ಕೀಲಿಮಣೆ ಮಾತ್ರ ಇದೆ. ಆದರೆ ಅದು ಉಚಿತವಲ್ಲ.  ಒಟ್ಟಿನಲ್ಲಿ ಹೇಳುವುದಾದರೆ ನೋಕಿಯಾದವರು ಆಂಡ್ರಾಯಿಡ್‌ ಫೋನ್ ಎಂದು ಹೇಳಿಕೊಂಡರೂ ಇದು ಅತ್ತ ಆಂಡ್ರಾಯಿಡ್‌ ಅಲ್ಲದ, ಸ್ವಲ್ಪ ಆಶಾ, ಇನ್ನು ಸ್ವಲ್ಪ ವಿಂಡೋಸ್ ಫೋನ್ ಇವುಗಳ ಒಂದು ವಿಚಿತ್ರ ಚೌಚೌ ಫೋನ್ ಆಗಿದೆ.   

ವಾರದ ಆಪ್

ಮಾತ್ ಎಕ್ಸ್‌ಪರ್ಟ್ (Math Expert) 


ಇದು ಆಂಡ್ರಾಯಿಡ್‌‌ನಲ್ಲಿ ಕೆಲಸ ಮಾಡುವ ಒಂದು ಉಪಯುಕ್ತ ಕಿರುತಂತ್ರಾಂಶ (ಆಪ್). ವಿಜ್ಞಾನ ಮತ್ತು ಗಣಿತದ ವಿದ್ಯಾರ್ಥಿಗಳಿಗೂ ಅಧ್ಯಾಪಕರುಗಳಿಗೂ ತುಂಬ ಪ್ರಯೋಜನಕಾರಿ. ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಹಲವು ಸಮೀಕರಣಗಳು ಇದರಲ್ಲಿವೆ. ಸಮೀಕರಣದಲ್ಲಿ ಬರುವ, ಗೊತ್ತಿರುವ ಚರಗಳ (variable) ಮೌಲ್ಯ ನೀಡಿದರೆ ಗೊತ್ತಿಲ್ಲದಿರುವ ಚರದ ಮೌಲ್ಯವನ್ನು ಇದು ಲೆಕ್ಕ ಮಾಡಿ ನೀಡುತ್ತದೆ. ಸಮೀಕರಣದ ಗ್ರಾಫ್ ಕೂಡ ತೋರಿಸುತ್ತದೆ. ಉದ್ದ, ತೂಕ, ವಿಸ್ತೀರ್ಣ, ಉಷ್ಣ ಇತ್ಯಾದಿಗಳನ್ನು ಒಂದು ಅಳತೆಯಿಂದ ಇನ್ನೊಂದು ಅಳತೆಗೆ ಪರಿವರ್ತಿಸುವ ಕೋಷ್ಟಕ ಇದರಲ್ಲಿದೆ ಮಾತ್ರವಲ್ಲ ಪರಿವರ್ತಿಸಿಯೂ ನೀಡುತ್ತದೆ.

 

 

ಗ್ಯಾಜೆಟ್ ಸುದ್ದಿ

ಸೆಲ್ಫೀಗೊಂದು ಕನ್ನಡಿ


ಮೊಬೈಲ್ ಕ್ಯಾಮೆರಾ, ಟ್ಯಾಬ್ಲೆಟ್ ಅಥವಾ ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡು ಕ್ಲಿಕ್ಕಿಸಿಕೊಂಡ ತನ್ನದೇ ಫೋಟೊವನ್ನು ತಾಂತ್ರಿಕ ಪರಿಭಾಷೆಯಲ್ಲಿ ಸೆಲ್ಫೀ (selfie) ಎನ್ನುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಹಾವಳಿ ತುಂಬ ಇದೆ. ಕೆಲವು ಫೋನ್‌ಗಳಲ್ಲಂತೂ ಸೆಲ್ಫೀ ತೆಗೆಯಲೆಂದೇ ಪ್ರತ್ಯೇಕ ಸೌಲಭ್ಯಗಳನ್ನು ನೀಡಿರುತ್ತಾರೆ. ಆದರೂ ಫೋಟೊದಲ್ಲಿ ತಮ್ಮ ಕೈ ಅಡ್ಡ ಬರುವುದು, ಮುಖದ ಗಾತ್ರ ಅನುಪಾತಕ್ಕೆ ಸರಿಯಾಗಿರದೆ ವಿಚಿತ್ರವಾಗಿ ಮೂಡಿಬರುವುದು ಎಲ್ಲ ಸಾಮಾನ್ಯ. ಈ ಸಮಸ್ಯೆಗಳಿಗೆ ಪರಿಹಾರವಾಗಿ ಈಗ ನಿಮ್ಮ ಸೆಲ್ಫೀ ತೆಗೆಯುವ ಕನ್ನಡಿ ತಯಾರಾಗಿದೆ. ಈ ಕನ್ನಡಿ ಸಾಮಾನ್ಯ ಕನ್ನಡಿಯಂತೆ ಕಂಡುಬಂದರೂ ಅದರಲ್ಲಿ ಕ್ಯಾಮೆರಾ ಅಡಕವಾಗಿದ್ದು, ನಿಮ್ಮ ಫೋಟೊ ನೀವೇ ಕ್ಲಿಕ್ಕಿಸಿಕೊಳ್ಳುವ ಸೌಲಭ್ಯ ಇದೆ.

ಗ್ಯಾಜೆಟ್ ಸಲಹೆ

ಕಳೆದ ವಾರದ ಗ್ಯಾಜೆಟ್ ಸಲಹೆಯಲ್ಲಿ ವಾಟ್ಸ್‌ಆಪ್ ಗಣಕಕ್ಕೆ ಲಭ್ಯವಿಲ್ಲ ಎಂದು ಉತ್ತರಿಸಿದ್ದಕ್ಕೆ ಕೆಲವು ದೂರುಗಳು ಬಂದಿವೆ. ಬ್ಲೂಸ್ಟಾಕ್ ಬಳಸಿ ವಾಟ್ಸ್‌ಆಪ್ ಅನ್ನು ಗಣಕದಲ್ಲಿ ಬಳಸಬಹುದು, ಅದನ್ನು ಯಾಕೆ ಸೂಚಿಸಿಲ್ಲ ಎಂದು ಅವರ ಆರೋಪ. ಬ್ಲೂಸ್ಟಾಕ್ ಬಗ್ಗೆ ನನಗೆ ಗೊತ್ತಿದೆ. ನಾನು ಅದನ್ನು ಇನ್‌ಸ್ಟಾಲ್ ಮಾಡಿ ನಂತರ ತೆಗೆದು ಹಾಕಿದ್ದೇನೆ. ಅದು ಗಣಕವನ್ನು ಸಿಕ್ಕಾಪಟ್ಟೆ ನಿಧಾನ ಮಾಡುತ್ತದೆ.ಕೆಲವೊಮ್ಮೆ ಗಣಕವನ್ನು ತಟಸ್ಥವಾಗಿಸುತ್ತದೆ. ಬ್ಲೂಸ್ಟಾಕ್ ಒಂದು ಎಮುಲೇಟರ್ (emulator). ಆಂಡ್ರಾಯಿಡ್‌ ಆಪ್‌ಗಳನ್ನು ಗಣಕದಲ್ಲಿ ಪರೀಕ್ಷಿಸಲು ಇದನ್ನು ಬಳಸುತ್ತಾರೆ. ವಾಟ್ಸ್‌ಆಪ್ ಅನ್ನು ಮೊದಲು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಅದನ್ನು ಸಕ್ರಿಯಗೊಳಿಸಿಕೊಂಡು ನಂತರ ಮಾತ್ರ ಗಣಕದಲ್ಲಿ ಬ್ಲೂಸ್ಟಾಕ್ ಮೂಲಕ ಬಳಸಬಹುದು. ಅಷ್ಟು ಮಾತ್ರವಲ್ಲ, ಮೊಬೈಲ್‌ನಲ್ಲೂ ಗಣಕದ ಬ್ಲೂಸ್ಟಾಕ್ ಮೂಲಕವೂ ಏಕಕಾಲದಲ್ಲಿ ಬಳಸಲು ಅಸಾಧ್ಯ. ಒಂದು ಸಮಯದಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ ಬಳಸಬಹುದು. ಟೆಲಿಗ್ರಾಂನಲ್ಲಿ ಈ ಸಮಸ್ಯೆಗಳು ಯಾವುವೂ ಇಲ್ಲ. ಆದುದರಿಂದಲೇ ನಾನು ಅದನ್ನು ಬಳಸಲು ಸೂಚಿಸಿದ್ದು.ಗ್ಯಾಜೆಟ್ ತರ್ಲೆ

ಸ್ಮಾರ್ಟ್‌ಫೋನ್‌ಗಳಿಗೆ ದೊರೆಯುವ ಕಿರುತಂತ್ರಾಂಶಗಳಲ್ಲಿ ಒಂದು ಮಿರರ್ ಅಥವಾ ಅದೇ ಮಾದರಿಯದು. ಇದು (ನಮ್ಮ ಕಡೆ ನೋಡುವ) ಎರಡನೆ ಕ್ಯಾಮೆರಾ ಇರುವ ಫೋನಿನ ಕ್ಯಾಮೆರಾವನ್ನು ಬಳಸಿ ಫೋನಿನ ಪರದೆಯನ್ನು ಕನ್ನಡಿಯಂತೆ ಪರಿವರ್ತಿಸುತ್ತದೆ. ನೀವು ಚಾರಣಕ್ಕೆ ಹೋದಾಗ ಕನ್ನಡಿ ತೆಗೆದುಕೊಂಡು ಹೋಗಲು ಮರೆತಿದ್ದಲ್ಲಿ, ಬೆಳಿಗ್ಗೆ ಗಡ್ಡ ತೆಗೆಯಬೇಕಾಗಿದ್ದಲ್ಲಿ ಈ ಆಪ್ ಬಳಸಬಹುದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry