ನೋಶನ್ ಇಂಕ್ ಕೈನ್: ಕೈಗೆಟುಕುವ ಬೆಲೆಗೆ 2-ಇನ್-1

7

ನೋಶನ್ ಇಂಕ್ ಕೈನ್: ಕೈಗೆಟುಕುವ ಬೆಲೆಗೆ 2-ಇನ್-1

Published:
Updated:

ಸ್ಮಾ ರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಗಣಕಗಳನ್ನು ಮೊದಲು  ಮಾರುಕಟ್ಟೆಗೆ ತಂದಿದ್ದು ಆಪಲ್ ಕಂಪೆನಿ ಎಂದು ಹಲವು ಮಂದಿ ತಪ್ಪು ತಿಳಿದಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿ ಅದಕ್ಕಿಂತ ತುಂಬ ಮೊದಲೇ ತಂದಿತ್ತು. ಮೈಕ್ರೋಸಾಫ್ಟ್ 1999ರಲ್ಲಿ ಮಾರುಕಟ್ಟೆಗೆ ತಂದಿದ್ದ ಟ್ಯಾಬ್ಲೆಟ್ ನಿಜಕ್ಕೂ ಅತ್ಯುತ್ತಮವಾಗಿತ್ತು. ಆದರೆ ಅದು ತುಂಬ ತೂಕದ್ದಾಗಿದ್ದು, ಒಂದು ಕೈಯಲ್ಲಿ ಹಿಡಿದು ಕೆಲಸ ಮಾಡಲು ಕಷ್ಟಪಡಬೇಕಾದಂಥದ್ದಾಗಿತ್ತು.ಆಪಲ್ ಐಪ್ಯಾಡ್ ನಂತರ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳು ಈಗ ಮಾರುಕಟ್ಟೆಯಲ್ಲಿ ಮುಂದಿವೆ. ಇಂತಹ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಬಳಸುವ ಕೆಲವು ಪರಿವರ್ತಿಸಬಲ್ಲ (convertible, 2-in-1) ಅಂದರೆ ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಲ್ಲ ಗಣಕಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಅಂತಹ ಒಂದು ಲೆನೋವೋ ಟ್ವಿಸ್ಟ್ ಮಾದರಿಯನ್ನು ಒಂದು ವರ್ಷದ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಅದೇನೋ ದುಬಾರಿಯಾಗಿದ್ದು ಪೂರ್ತಿ ಪ್ರಮಾಣದ ಶಕ್ತಿಶಾಲಿಯಾದ ಲ್ಯಾಪ್‌ಟಾಪೇ ಆಗಿತ್ತು. ಈ ಸಲ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿಯೂ ಟ್ಯಾಬ್ಲೆಟ್ ಆಗಿಯೂ ಬಳಸಬಲ್ಲ ಒಂದು ವಿಂಡೋಸ್ ಸಾಧನದ ಕಡೆಗೆ ಗಮನ ಹರಿಸೋಣ. ಅದುವೇ ನೋಶನ್ ಇಂಕ್ ಅವರ ಕೈನ್ 2-ಇನ್-1 (Notion Ink Cain 2 in 1).ಗುಣವೈಶಿಷ್ಟ್ಯಗಳು

1.83 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel® Z3735 Bay Trail), 2 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 10 ಇಂಚು ಗಾತ್ರದ 1280x800 ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, 2 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಎರಡು ಕ್ಯಾಮೆರಾಗಳು, ಅಕ್ಸೆಲೆರೋಮೀಟರ್, 3ಜಿ ಸಿಮ್ ಹಾಕಲು ಹೆಚ್ಚಿಗೆ ಸೌಲಭ್ಯ (ಇದನ್ನು ಪ್ರತ್ಯೇಕವಾಗಿ ಕೊಂಡುಕೊಳ್ಳಬೇಕು), ಮೈಕ್ರೋ ಯುಎಸ್‌ಬಿ, ಯುಎಸ್‌ಬಿ 3, 3.5 ಮಿ.ಮೀ. ಇಯರ್‌ಫೋನ್, ಎಚ್‌ಡಿಎಂಐ ಕಿಂಡಿಗಳು, ವೈಫೈ, 7900 mAh ಶಕ್ತಿಯ ಬ್ಯಾಟರಿ, ಚಾರ್ಜ್ ಮಾಡಲು ಪ್ರತ್ಯೇಕ ಕಿಂಡಿ, 258x172x9.7 ಮಿ.ಮೀ. ಗಾತ್ರ, 630 ಗ್ರಾಂ ತೂಕ, ಜೋಡಿಸಬಲ್ಲ ಪ್ರತ್ಯೇಕಿಸಬಲ್ಲ ಕೀಬೋರ್ಡ್, ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆ, ಇತ್ಯಾದಿ. ಇದನ್ನು ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಹುದು. Snapdeal.com ಜಾಲತಾಣ ಮೂಲಕ ₹19,490 ಗೆ ಲಭ್ಯ.ಇದನ್ನು ವಿನ್ಯಾಸ ಮಾಡಿದ್ದು ನಮ್ಮ ಬೆಂಗಳೂರಿನ ನೋಶನ್ ಇಂಕ್ ಲ್ಯಾಬೊರೇಟರಿಯವರು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದ್ದು ಮೊದಲ ನೋಟದಲ್ಲೇ ಮನಸೆಳೆಯುವಂತಿದೆ. ಕೀಲಿಮಣೆಗೆ ಟ್ಯಾಬ್ಲೆಟ್ ಗಣಕವನ್ನು ಜೋಡಿಸಿ ಅದನ್ನು ಲ್ಯಾಪ್‌ಟಾಪ್ ಮಾದರಿಯಲ್ಲಿ ಬಳಸಬಹುದು. ಕೀಲಿಮಣೆಯಲ್ಲಿ ಸ್ಪರ್ಶಸಂವೇದಿ ಪ್ಯಾಡ್ ಕೂಡ ಇದೆ. ಮೌಸ್ ಬಳಸುವವರಿಗಾಗಿ ಓಟಿಜಿ ಕೇಬಲ್ ಮತ್ತು ಒಂದು ನಿಸ್ತಂತು (ವಯರ್‌ಲೆಸ್) ಮೌಸ್ ಜೊತೆಗೆ ನೀಡಿದ್ದಾರೆ. ಕೀಲಿಮಣೆಯ ಹಿಂಭಾಗವನ್ನು ತ್ರಿಕೋನಾಕಾರದಲ್ಲಿ ಮಡಚಿ ಅದನ್ನು ಟ್ಯಾಬ್ಲೆಟ್‌ಗೆ ಆಧಾರವಾಗಿ ನಿಲ್ಲಿಸಲು ಬಳಸಬಹುದು. ಕೆಲಸ ಮುಗಿದಾಗ ಲ್ಯಾಪ್‌ಟಾಪ್ ಮಾದರಿಯಲ್ಲಿ ಮಡಚಬಹುದು. ಹೀಗೆ ಮಡಚಿದಾಗ ಒಂದು ದೊಡ್ಡ ಡೈರಿಯ ಮಾದರಿಯಲ್ಲಿ ಕಂಡುಬರುತ್ತದೆ. ಎಲ್ಲ ಜೋಡಣೆಗಳು ಮತ್ತು ಮಡಚುವಾಗ ಅಂಟಿಕೊಳ್ಳುವ ಜಾಗಗಳಲ್ಲಿ ಅಯಸ್ಕಾಂತಗಳಿವೆ. ಟ್ಯಾಬ್ಲೆಟ್ ಇರಲಿ, ಡೈರಿ ಮಾದರಿಯಲ್ಲಿ ಮಡಚಿದಾಗ ಇರಲಿ, ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ತುಂಬ ಚೆನ್ನಾಗಿದೆ.ಇದು ಬಳಸುವುದು ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆಯನ್ನು (operating system). ಅದೂ ಟ್ಯಾಬ್ಲೆಟ್‌ಗಳಿಗೆಂದೇ ಪ್ರತ್ಯೇಕ ಬರುವ ಆವೃತ್ತಿಯಲ್ಲ. ಅಂದರೆ ನೀವು ವಿಂಡೋಸ್‌ನಲ್ಲಿ ಬಳಸುವ ಮಾಮೂಲಿ ತಂತ್ರಾಂಶಗಳನ್ನು (ಉದಾ- ಬರಹ) ಇದರಲ್ಲಿ ಬಳಸಬಹುದು. ಆದರೂ ಇದು ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗೆ ಬದಲಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ. 32 ಗಿಗಾಬೈಟ್ ಸಂಗ್ರಹ ಶಕ್ತಿ ಇದೆ. ಒಂದು ಮಟ್ಟಿನ ಕೆಲಸಗಳಿಗೆ ಇದು ಸಾಕು. ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು, ಗ್ರಾಫಿಕ್ಸ್ ಕೆಲಸ ಮಾಡಲು ಅಥವಾ ವಿಡಿಯೊ ಎಡಿಟಿಂಗ್ ಮಾಡಲು ಇದನ್ನು ಬಳಸಲು ಸಾಧ್ಯವಿಲ್ಲ.ಲೇಖನ ತಯಾರಿ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಕೆ, ಇಮೈಲ್, ಜಾಲತಾಣ ವೀಕ್ಷಣೆ, ವಿಡಿಯೊ ವೀಕ್ಷಣೆ –ಇಂತಹ ಕೆಲಸಗಳಿಗೆ ಇದು ಸಾಕು. ಇದಕ್ಕೆ ಹೊರಗಡೆಯಿಂದ ಹಾರ್ಡ್‌ಡಿಸ್ಕ್, ಸಿ.ಡಿ./ಡಿ.ವಿ.ಡಿ. ಡ್ರೈವ್ ಎಲ್ಲ ಜೋಡಿಸಬಹುದು. ನಾನು ಹಾರ್ಡ್‌ಡಿಸ್ಕ್ ಜೋಡಿಸಿ ಅದರಲ್ಲಿದ್ದ ಫೈಲ್‌ಗಳನ್ನು ಬಳಸಿ ಆರಾಮವಾಗಿ ಕಲಸ ಮಾಡಿದ್ದೇನೆ. ಯಾವುದೇ ತೊಂದರೆ ಕಂಡುಬರಲಿಲ್ಲ. ಇದರಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಲೂ ಜಾಗವಿದೆ. ಯುಎಸ್‌ಬಿ ಮೂಲಕವೂ ಅಧಿಕ ಮೆಮೊರಿ ಜೋಡಿಸಿಕೊಳ್ಳಬಹುದು. ಆದುದರಿಂದ ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ ಎಂಬುದು ಅಷ್ಟು ದೊಡ್ಡ ಕೊರತೆಯಾಗಬೇಕಾಗಿಲ್ಲ. ವಿಡಿಯೊ ವೀಕ್ಷಣೆ ಅನುಭವ ಚೆನ್ನಾಗಿದೆ.ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಇದರ ಆಡಿಯೊ ಎಂಜಿನ್ ಚೆನ್ನಾಗಿದೆ. ಇದರ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ಹಾಗೆ ನೀಡಲು ಇದು ಫೋನಂತೂ ಅಲ್ಲ ತಾನೆ? ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಉತ್ತಮವಾಗಿಯೇ ಇತ್ತು. ಅಂದರೆ ಉತ್ತಮ ಸಂಗೀತ ಆಲಿಸುವುದು ಅಥವಾ ಸಿನಿಮಾ ವೀಕ್ಷಣೆ ನಿಮ್ಮ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದ್ದಲ್ಲಿ ಇದನ್ನು ಖಂಡಿತ ಕೊಳ್ಳಬಹುದು. ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಸುಮಾರು 7ರಿಂದ 9 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಚಾರ್ಜರ್ ನೀಡಿದ್ದಾರೆ. ಅದನ್ನು ಜೋಡಿಸಲು ಪ್ರತ್ಯೇಕ ಕಿಂಡಿ ಇದೆ. ಇದರಲ್ಲಿರುವ ಮೈಕ್ರೋಯುಎಸ್‌ಬಿ ಕಿಂಡಿಗೆ ನಿಮ್ಮ ಮನೆಯಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಜೋಡಿಸಿಯೂ ಇದನ್ನು ಚಾರ್ಜ್ ಮಾಡಬಹುದು. ದುಬಾರಿ ಬೆಲೆಯ ಸಾಧನಗಳಿಗಿಂತ ಇದು ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಖ್ಯಾತ ಕಂಪೆನಿಗಳ, ಇಷ್ಟೇ ದೊಡ್ಡ ಟ್ಯಾಬ್ಲೆಟ್‌ಗಳಿಗೆ ₹40,000ದ ಆಸುಪಾಸಿನಲ್ಲಿ ಬೆಲೆಯಿದೆ. ಕೀಲಿಮಣೆ ಪ್ರತ್ಯೇಕ ಕೊಳ್ಳಬೇಕು. ಇದರಲ್ಲಿ ಟ್ಯಾಬ್ಲೆಟ್, ಕೀಲಿಮಣೆ, ಮೌಸ್ ಎಲ್ಲ ಸೇರಿ ಕೇವಲ ₹19,490 ಅಂದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಉತ್ಪನ್ನ ಎಂದು ಖಡಾಖಂಡಿತವಾಗಿ ಹೇಳಬಹುದು. ಅದರಲ್ಲೂ ನೀವು ವಿಂಡೋಸ್ ಆಧಾರಿತ ತಂತ್ರಾಂಶಗಳನ್ನು, ಫಾಂಟ್‌ಗಳನ್ನು ಬಳಸುವವರಾದರೆ ನಿಮಗೆ ಇದು ಖಂಡಿತ ವಾಗಿಯೂ ಉತ್ತಮ ಕೊಳ್ಳುವಿಕೆ ಎನ್ನಬಹುದು. ಕನ್ನಡ ಲೇಖಕರುಗಳೇ ಗಮನಿಸುತ್ತಿದ್ದೀರಾ?ವಾರದ ಆಪ್ (app)

ಇನ್‌ಬ್ರೌಸರ್


ಇದು ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೆಲಸ ಮಾಡುವ ಕಿರುತಂತ್ರಾಂಶ InBrowser Incognito Browsing (ಆಪ್). ಇದು ಕೂಡ ಒಂದು ಬ್ರೌಸರ್, ಅಂದರೆ ಜಾಲತಾಣ ವೀಕ್ಷಣೆ ಮಾಡಲು ಸಹಾಯ ಮಾಡುವ ಆಪ್. ಬ್ರೌಸರ್ ಆಪ್‌ಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಬೇಕಾದಷ್ಟಿವೆ. ಹಾಗಿರುವಾಗ ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇದರ ವಿಶೇಷವೇನೆಂದರೆ, ಇದು ನೀವು ಭೇಟಿ ನೀಡುವ ಜಾಲತಾಣಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ನೀವು ಏನನ್ನು ಹುಡುಕಾಡುತ್ತೀರೋ ಅದಕ್ಕೆ ಸಂಬಂಧಪಟ್ಟ ಜಾಹೀರಾತುಗಳು ನಿಮಗೆ ಇತರೆ ಆಪ್‌ಗಳಲ್ಲಿ ಬರುವುದನ್ನು ಇದರಿಂದ ತಪ್ಪಿಸಬಹುದು.ಗ್ಯಾಜೆಟ್ ಸುದ್ದಿ

ಡ್ರೋನ್‌ಗಳಿಗೆ ಭಾರತದಲ್ಲಿ ನಿಷೇಧ


ಚಾಲಕನಿಲ್ಲದ ಚಿಕ್ಕ ಆಕಾಶನೌಕೆ ಅಥವಾ ಚಿಕ್ಕ ಹೆಲಿಕಾಪ್ಟರ್ ಅನ್ನು ಡ್ರೋನ್ ಎನ್ನಬಹುದು. ಇದನ್ನು ದೂರನಿಯಂತ್ರಣ ತಂತ್ರಜ್ಞಾನದ ಮೂಲಕ ಹಾರಾಡಿಸಲಾಗುತ್ತದೆ. ಅಮೆಜಾನ್ ಕಂಪೆನಿ ಇದನ್ನು ಬಳಸಿ ಗ್ರಾಹಕರ ಮನೆ ಬಾಗಿಲಿಗೆ ಅವರು ಕೊಂಡ ವಸ್ತುಗಳನ್ನು ತಲುಪಿಸುವುದಾಗಿ ಹೇಳಿಕೊಂಡಿದೆ. ಅದರ ಬಗ್ಗೆ ಒಂದು ಕಿರುವಿಡಿಯೊ ಕೂಡ ತಯಾರಿಸಿದ್ದಾರೆ. ನೀವು ಒಂದು ಉತ್ಪನ್ನವನ್ನು ಆಜ್ಞೆ ಮಾಡಿದರೆ 30 ನಿಮಿಷಗಳಲ್ಲಿ ಅದು ನಿಮ್ಮನ್ನು ತಲುಪುತ್ತದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಭಾರತದಲ್ಲಿ ಅದನ್ನು ಪ್ರಯೋಗಾತ್ಮಕವಾಗಿ ಪ್ರಾರಂಭಿಸಲಾಗುವುದು ಎಂದೂ ತಿಳಿಸಿದೆ. ಈಗ ಭಾರತದ ನಾಗರಿಕ ವಾಯುಯಾನ ಪ್ರಾಧಿಕಾರವು ಸಾರ್ವಜನಿಕ ಡ್ರೋನ್ ಬಳಕೆಗೆ ನಿರ್ಬಂಧ ವಿಧಿಸಿದೆ. ಅದರ ಬಗ್ಗೆ ಎಲ್ಲ ನಿಯಮಗಳನ್ನು ಮಾಡಿದ ನಂತರ ಮಾತ್ರ ಡ್ರೋನ್‌ಗಳನ್ನು ಭಾರತದಲ್ಲಿ ಬಳಸಬಹುದು ಎಂದು ಅದು ಸೂಚಿಸಿದೆ.ಗ್ಯಾಜೆಟ್ ತರ್ಲೆ

ನೀವು ಅಮೆಜಾನ್ ಜಾಲತಾಣದಿಂದ ಒಂದು ಡ್ರೋನ್ ಅನ್ನು ಕೊಂಡುಕೊಂಡರೆ ಅದನ್ನು ಅವರು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರಾ ಅಥವಾ ಡ್ರೋನ್ ತಾನಾಗಿಯೇ ಹಾರಿಕೊಂಡು ನಿಮ್ಮ ಮನೆಗೆ ಬರುತ್ತದೋ?ಗ್ಯಾಜೆಟ್ ಸಲಹೆ

ಶರತ್ ಅವರ ಪ್ರಶ್ನೆ: ನನಗೆ ಒಂದು ಉತ್ತಮ ಆಂಡ್ರಾಯಿಡ್ ಮೊಬೈಲ್ ಟ್ರ್ಯಾಕರ್ ಆಪ್ ಬೇಕು. ಯಾವುದು ಬಳಸಬಹುದು?

ಉ: ಇದೇ ಅಂಕಣದಲ್ಲಿ ತುಂಬ ಹಿಂದೆಯೇ ಸೂಚಿಸಿದ Prey ಬಳಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry