ಶನಿವಾರ, ಡಿಸೆಂಬರ್ 7, 2019
21 °C

ಪಟ್ಟದಕಲ್ಲು ಉತ್ಸವ, ಪಟೇಲರ ಬೆಳ್ಳಿಲೋಟ!

ಐ.ಎಂ.ವಿಠಲಮೂರ್ತಿ
Published:
Updated:
ಪಟ್ಟದಕಲ್ಲು ಉತ್ಸವ, ಪಟೇಲರ ಬೆಳ್ಳಿಲೋಟ!

ಮೊನ್ನೆ ಹಾಗೇ ಲೋಕಾಭಿರಾಮವಾಗಿ ಮಾತಿಗೆ ಸಿಕ್ಕ ಅಧಿಕಾರಿ ಮಿತ್ರ­ರೊಬ್ಬರು ಹೇಳಿದ್ದನ್ನು ನನಗೆ ನಂಬಲೇ ಆಗಲಿಲ್ಲ. ‘ಸರ್, ನಿಮ್ಮಿಂದ ಆರಂಭವಾದ ಪಟ್ಟದಕಲ್ಲು ಉತ್ಸವಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ’ ಎಂಬ ಅವರ ಮಾತು ಕಿವಿಮೇಲೆ ಬಿದ್ದಾಗ ಏನೋ ಪುಳಕ. ‘ಚಾಲುಕ್ಯರ ಬೀಡಿನಲ್ಲಿ ನಾವು ಶುರು ಮಾಡಿದ ಸಾಂಸ್ಕೃತಿಕ ಹಬ್ಬಕ್ಕೆ ಆಗಲೇ ೨೫ ವರ್ಷವೇ’ ಎಂಬ ಉದ್ಗಾರ. ಮನದಂಗಳದಲ್ಲಿ ಆಗಿನ ನೆನಪುಗಳದೇ ಮೆರವಣಿಗೆ.೧೯೮೮ರಲ್ಲಿ ನಾನು, ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕ. ಮಾಯಾರಾವ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು. ಅಕಾಡೆಮಿಯಿಂದ ಪಟ್ಟದಕಲ್ಲು ಉತ್ಸವದ ಪ್ರಸ್ತಾವ ಮುಂದಿಟ್ಟರು. ಬೆಂಗಳೂರಿನಿಂದ ದೂರದ ವಿಜಾಪುರ ಜಿಲ್ಲೆಯ ಒಂದು ಉತ್ತಮ ಪ್ರವಾಸಿ ತಾಣದಲ್ಲಿ ಉತ್ಸವ ಮಾಡುವ ಪ್ರಸ್ತಾವ ನನಗೆ ತುಂಬಾ ಒಪ್ಪಿಗೆಯಾಯಿತು. ವಿಶ್ವ ಪಾರಂಪರಿಕ ತಾಣವಾದ ಪಟ್ಟದಕಲ್ಲಿನಲ್ಲಿ ಉತ್ಸವ ನಡೆಸಲು ಹಲವಾರು ಅಡೆತಡೆಗಳು. ಭಾರತೀಯ ಸರ್ವೇಕ್ಷಣ ಇಲಾಖೆ ಮತ್ತು ಜಿಲ್ಲಾ ಆಡಳಿತದ ಸಹಯೋಗದಲ್ಲಿ ಅವುಗಳನ್ನೆಲ್ಲ ನಿವಾರಿಸಿ ಉತ್ಸವಕ್ಕೆ ನಾಂದಿ ಹಾಡಿದೆವು. ಆಮೇಲೆ ಪಟ್ಟದಕಲ್ಲಿನಲ್ಲಿ ಧರೆಗಿಳಿದಿದ್ದು ಗಂಧರ್ವ ಲೋಕ. ಒಂದೆಡೆ  ಮಾಯಾರಾವ್ ಅವರ ಸೃಜನಶೀಲ ನೃತ್ಯ ಸಂಯೋಜನೆ. ಇನ್ನೊಂದೆಡೆ ಹೊನಲು ಬೆಳಕಿನಲ್ಲಿ ಜಗಮಗಿಸಿದ ದೇವಾಲಯ ಸಮೂಹ. ಅಬ್ಬಬ್ಬಾ, ಹೊಸ­ದೊಂದು ವಾಸ್ತುಶಿಲ್ಪ ವೈಭವದ ದೃಶ್ಯಕಾವ್ಯ ದರ್ಶನ! ಈ ಉತ್ಸವದಲ್ಲಿ ಮಹಾನ್‌ ಕಲಾವಿದರು ಭಾಗವಹಿಸಿ ರಾಷ್ಟ್ರೀಯ ಉತ್ಸವದ ಮಾನ್ಯತೆ ತಂದುಕೊಟ್ಟರು.ಉತ್ಸವ ಉದ್ಘಾಟಿಸಲು ಇಂಧನ ಮತ್ತು ಅಬಕಾರಿ ಸಚಿವ ಜೆ.ಎಚ್. ಪಟೇಲರು ಬಂದಿದ್ದರು. ಕರ್ನಾಟಕ ಕಂಡ ಬಹುಮುಖ್ಯ ರಾಜಕೀಯ ಚಿಂತಕರಾಗಿದ್ದ ಅವರಲ್ಲಿ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ವರ್ತಮಾನ ಬದುಕಿನ ಅದ್ಭುತವಾದ ಒಳನೋಟವಿತ್ತು. ಯಾರಿಗೂ ಅಂಜದ, ಅಳುಕದ ನೇರನುಡಿಯ ನಾಯಕ. ಅವರಿಗೆ ಇದ್ದಷ್ಟು ಸಮಯಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆ ಇಂದಿನ ರಾಜಕೀಯ ನಾಯಕರಲ್ಲಿ ಕಾಣುವುದು ವಿರಳ. ಎಲ್ಲರೂ ಜಮಖಾನದ ಮೇಲೆ ಕುಳಿತು ಸಂಗೀತ- ನೃತ್ಯಗಳನ್ನು ಸವಿಯುತ್ತಿದ್ದೆವು. ಪಟೇಲರು, ‘ಏನು ವಿಠ್ಠಲ್, ಆ ದೇವಸ್ಥಾನದ structure, architecture, ಅದರ ಸೊಬಗು. ಇದನ್ನೆಲ್ಲ ನೋಡಿ ನಮ್ಮ ಎಂಜಿನಿಯರ್‌ಗಳಿಗೆ ಏನೂ ಅನ್ನಿ­ಸುವುದಿಲ್ಲವೆ?’ ಎಂದರು. ‘ಯಾಕೆ ಸರ್’ ಎಂದೆ. ‘ನಮ್ಮ ಸರ್ಕಾರಿ ಕಟ್ಟಡಗಳೆಲ್ಲ ಎಷ್ಟೊಂದು ಕುರೂಪ­ವಾಗಿರುತ್ತವೆ. ಒಂದೂ ಬಾಳಿಕೆ ಬರು­ವುದಿಲ್ಲ. ಇವತ್ತು ಕಟ್ಟಿದ ಸೇತುವೆಗಳು ೨–-೩ ವರ್ಷಗಳಲ್ಲಿ ಬಿದ್ದುಹೋಗ್ತವೆ’ ಎಂದರು.ಸ್ವಲ್ಪ ಹೊತ್ತಾದ ಮೇಲೆ ಮಾನ್ಯ ಮಂತ್ರಿಗಳಿಗೆ ಗನ್‌ಮ್ಯಾನ್ ತಿಮ್ಮೇಗೌಡರು, ಒಂದು ಉದ್ದ­ನೆಯ ಬೆಳ್ಳಿಲೋಟದಲ್ಲಿ ನೀರು ತಂದುಕೊಟ್ಟರು. ನಾನು ಅವರ ಪಕ್ಕದಲ್ಲೇ ಕುಳಿತಿದ್ದೆ. ಹಿನ್ನೆಲೆಯಲ್ಲಿ ಹೊನಲು ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ದೇವಾ­ಲಯಗಳು. ಮುಂದೆ ಕಣ್ಮನ ತಣಿಸುವ ಸುಂದರ ನೃತ್ಯರೂಪಕಗಳು. ಅರ್ಧ ಮುಕ್ಕಾಲು ಗಂಟೆಯ ನಂತರ ತಿಮ್ಮೇಗೌಡರು ಮತ್ತೊಂದು ಉದ್ದದ ಲೋಟದೊಂದಿಗೆ ಹಾಜರಾದರು. ಆರು ಅಡಿಗಿಂತ ಎತ್ತರದ ಈ ಗನ್‌ಮ್ಯಾನ್‌ ಬಲು ಕಟ್ಟುಮಸ್ತಾದ ಆಸಾಮಿ. ಪಟೇಲರ ಬಹು­ನಂಬಿಕೆಯ ಬಂಟ. ಸದಾ ಅವರ ನೆರಳಿ­ನಂತೆ ಇರುತ್ತಿದ್ದರು. ಅವರು ಆಗಾಗ ನೀರು ತಂದು ಕೊಡುವ ಕಾಯಕವನ್ನು ಚಾಚೂ ತಪ್ಪದೆ ಪಾಲಿಸು­ತ್ತಿದ್ದರು. ಬಳಿಕ ಅಂದಿನ ವೈಭವದ ಕಾರ್ಯಕ್ರಮಕ್ಕೆ ತೆರೆಬಿತ್ತು.ಪಟೇಲರು ನನ್ನ ಕೈಹಿಡಿದು ಎದ್ದು ನಿಂತರು. ಅಲ್ಲಿಯತನಕ ಅವರ ಬಂಟ ತಂದುಕೊಟ್ಟದ್ದು ಬರೀ ನೀರಲ್ಲವೆಂದು ತಕ್ಷಣ ಹೊಳೆಯಿತು. ಅವರು, ನಾನು ಮತ್ತು ಗನ್‌ಮ್ಯಾನ್ ಮೂವರೂ ಕಾರಿನಲ್ಲಿ ಕುಳಿತೆವು. ಎಂತಹ ಜನಸಮೂಹ! ಸುಮಾರು ೩೦-–೪೦ ಸಾವಿರ ಜನ. ಆ ಭಾಗದ ಜನರಿಗೆ ನೈಸರ್ಗಿಕ ಬರವಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮಗಳ ಬರವೂ ಇತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಬಂದು ಕಾರ್ಯಕ್ರಮ ನೀಡಿದ್ದು, ಅವರೆಲ್ಲ ಪಟ್ಟದಕಲ್ಲಿಗೆ ಮುತ್ತಿಗೆ ಹಾಕುವಂತೆ ಮಾಡಿತು. ಮಾಯಾರಾವ್ ಮತ್ತು ಅವರ ತಂಡದವರ ಶ್ರಮ ಸಾರ್ಥಕವಾಯಿತು. ಹೊರ­ಹೋಗಲು ದಾರಿಯೇ ಇರಲಿಲ್ಲ. ಊರಿನ ಜನವೇ ಪೊಲೀಸರ ಕೆಲಸ ಮಾಡಿ, ಎಲ್ಲಾ ‘ಹೋಳಾಗ್ರಿ, ಹೋಳಾಗ್ರಿ’ ಎಂದು ದಾರಿ ಬಿಡಿಸಿ­ದರು. ನನಗೆ ಹೊಸದೊಂದು ಕನ್ನಡ ಪದದ ಪರಿಚಯವಾಯಿತು.ಮುಂದೆ ಅದೇ ವಿಜಾಪುರ ಜಿಲ್ಲೆಗೆ ೧೯೯೧ರಲ್ಲಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡೆ. ಆಗಲೇ ಖ್ಯಾತಿಯಾಗಿದ್ದ ಪಟ್ಟದಕಲ್ಲು ಉತ್ಸವದ ಜೊತೆ-ಜೊತೆಗೆ ನವರಸಪುರ ಉತ್ಸವ, ಗೋಲ್ ಗುಂಬಜ್ ಉತ್ಸವಗಳನ್ನೂ ಪ್ರಾರಂಭ ಮಾಡಿ­ದೆವು. ಜಿಲ್ಲೆಯ ವಿವಿಧ ತಾಣಗಳಲ್ಲಿ ಪ್ರಖ್ಯಾತ ಸಾಹಿತಿ, ಕಲಾವಿದರನ್ನು ಆಹ್ವಾನಿಸಿ ಕವಿಗೋಷ್ಠಿ, ವಚನ ಸಂಗೀತ, ನೃತ್ಯೋತ್ಸವ... ಹೀಗೆ ಹತ್ತು ಹಲವು ಕಾರ್ಯಕ್ರಮ ನಡೆಸುತ್ತಿದ್ದೆವು.ನವರಸಪುರದ ಸಂಗೀತ– ನಾರಿ ಮಹಲ್‌ನ ವೈಭವ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡವರವಷ್ಟೇ ಬಲ್ಲರು. ಅಲ್ಲಿ ನಡೆಯುವ ಹಬ್ಬವೇ ನವರಸಪುರ ಉತ್ಸವ. ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಉದ್ಘಾಟಕರ ಹೆಸರು ಇರಲಿಲ್ಲ. ಬಹಳಷ್ಟು ಗಣ್ಯರು ಸೇರಿದ್ದರು. ಎಲ್ಲರಲ್ಲೂ ಉತ್ಸವವನ್ನು ಯಾರು ಉದ್ಘಾಟಿಸ­ಲಿದ್ದಾರೆ ಎಂಬ ಕುತೂಹಲ. ಅಲ್ಲಿ ಆಸೀನರಾಗಿದ್ದ ಗಣ್ಯರಿಗೆ ತಮ್ಮನ್ನು ಕರೆಯಬಹುದು ಎಂಬ ನಿರೀಕ್ಷೆ. ಕಾರ್ಯಕ್ರಮಕ್ಕೆ ಚಾಲನೆ ಕೊಡಲು ನಾವು ಆಹ್ವಾನಿಸಿದ್ದು ಮಾತ್ರ ಗೌರಮ್ಮ ಮಾದರ ಎಂಬ ಚೌಡಕಿ ಪದ ಹಾಡುವ ಕಲಾವಿದೆಯನ್ನು. ಉಳಿದ ಗಣ್ಯರು ಅವರಿಗೆ ಸಹಕರಿಸಲು ವೇದಿಕೆ ಏರಿದರು.ವಿಜಾಪುರ ಜಿಲ್ಲೆಯಲ್ಲಿ ಇರುವಷ್ಟು ವೈವಿಧ್ಯ ಪ್ರಾಯಶಃ ರಾಜ್ಯದ ಬೇರೆಲ್ಲಿಯೂ ಇಲ್ಲವೇನೋ. ಅಮೋಘವಾದ ಇತಿಹಾಸ, ಸಿರಿವಂತ ಸಂಸ್ಕೃತಿ, ಹೆಜ್ಜೆಗೊಂದು ಸ್ಮಾರಕ, ಹಸಿವು ಹೆಚ್ಚಿಸುವ ರೊಟ್ಟಿ ಊಟ. ವಿಜಾಪುರದ ಜವಾರಿ ಬಿಳಿಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಮಡಕಿಕಾಳು-–ಎಣಗಾಯಿ ಪಲ್ಯ, ಹಿಟ್ಟಿನ ಪಲ್ಯ, ತರಾವರಿ ಚಟ್ನಿ,  ಕೊಲ್ಹಾರದ ಮೊಸರು, ತಾಜಾ ಹಕ್ಕರಕಿ... ಎಲ್ಲವನ್ನೂ ನೆನಪಿಸಿಕೊಂಡರೆ ಬಾಯಲ್ಲಿ ನೀರೂ­ರುತ್ತದೆ. ದವಸ-ಧಾನ್ಯಗಳನ್ನೇ ಹೆಚ್ಚಾಗಿ ಬಳಸುವ ಈ ಭಾಗದ ಊಟದಷ್ಟು ಪೌಷ್ಟಿಕ ಮತ್ತು ರುಚಿಕರ ಆಹಾರವನ್ನು ನಾನು ಬೇರೆ ಕಡೆ ಕಂಡಿಲ್ಲ.ಅಲ್ಲಿನ ಇಂಚಿಂಚು ಜಾಗವೂ ಇತಿಹಾಸವನ್ನೇ ಹಾಸಿಹೊದ್ದಿದೆ. ಚಾಲುಕ್ಯರ ಬಾದಾಮಿಯಿಂದ ಹಿಡಿದು ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದವರೆಗೆ ರೋಚಕ ಚರಿತ್ರೆಯನ್ನು ಅಡಗಿಸಿಟ್ಟುಕೊಂಡ ನೆಲ ಅದಾಗಿದೆ. ಬಾದಾಮಿಯ ಗುಹಾಂತರ ದೇವಾ­ಲಯ­ಗಳೆಂದರೆ ನನಗೆ ಈಗಲೂ ಬೆರಗು. ೧೮ ಕೈಗಳ ನಟರಾಜನ ವಿಗ್ರಹ, ಮನೋಹರವಾದ ಅಗಸ್ತ್ಯ ಸರೋವರ, ಅದರ ದಡದ ಮೇಲಿರುವ ಭೂತನಾಥ ದೇವಾಲಯ, ಇವೆಲ್ಲವುಗಳಿಗೆ ನೆಲೆಯಾಗಿರುವ ಕೆಂಪುಬಣ್ಣದ ನುಣುಪು ಕಲ್ಲಿನ ಬೆಟ್ಟ... ಇವುಗಳೆಲ್ಲ ಅದ್ಭುತಗಳಲ್ಲದೆ ಮತ್ತೇನು?ಚಾಲುಕ್ಯರ ಈ ರಾಜಧಾನಿಯ ತುಸು ದೂರದಲ್ಲಿ ಮಲಪ್ರಭಾ ನದಿ ದಂಡೆ ಮೇಲಿದೆ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು. ಅಲ್ಲಿನ ದೇವಾಲಯ ಸಂಕೀರ್ಣ, ಕಪ್ಪುಶಿಲೆಯ ಬೃಹತ್ ನಂದಿ, ಇಂದಿನ ವಾಸ್ತು ಶಾಸ್ತ್ರಜ್ಞರಿಗೆ ಸವಾಲೆ­ಸೆಯುವ ವಿರೂಪಾಕ್ಷ ದೇವಾಲಯ, ಐಹೊಳೆಯ ವಾಸ್ತುಶಿಲ್ಪ ಪ್ರಯೋಗಾಲಯ, ಬಸವಣ್ಣನ ಬಾಗೇವಾಡಿ ಮತ್ತು ಕೂಡಲ­ಸಂಗಮದ ವಿಶೇಷ ಜಾತ್ರೆಗಳು ನೋಡುಗರ ಕಣ್ಣಿಗೆ ಹಬ್ಬವೇ ಹಬ್ಬ.ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ರಕ್ಕಸತಂಗಡಿಯ ತಾಳಿಕೋಟೆ ಯುದ್ಧದ ಚಾರಿತ್ರಿಕ ತಾಣ. ವಿಜಾಪುರದಲ್ಲಿ ತುಂಬಿ ತುಳುಕಿವೆ ಸ್ಮಾರಕಗಳು. ನವರಸಪುರದ ಮಹಲ್‌ನಿಂದ ಹಿಡಿದು ಗೋಲ್ ಗುಂಬಜ್‌ವರೆಗೆ ವ್ಯಾಪಿಸಿವೆ ಹಲವಾರು ಬಾವಡಿ­ಗಳು, ಬೃಹತ್ ಮಹಲ್‌ಗಳು, ಮಸೀದಿಗಳು, ತಿಪ್ಪೆಯಲ್ಲಿ ಮುಚ್ಚಿಹೋದ ಪಾರಂಪರಿಕ ತಾಣಗಳು ಮತ್ತು ಬಾರಾ ಕಮಾನು. ಈ ಬೃಹತ್ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಯಾರು ಏನೂ ಮಾಡಿದರೂ ಅದು ತೃಣ ಮಾತ್ರವೆನಿಸುತ್ತದೆ. ಕುಳಿತು ಯೋಚಿಸಿದರೆ ನಾನು ಆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ಈಗ ಕನಸಿನಂತೆ ಭಾಸವಾಗುತ್ತಿದೆ!ವಿಜಾಪುರದಲ್ಲಿ ಕರ್ನಾಟಕ-–ಕೇರಳ ತಂಡಗಳ ನಡುವೆ ನಡೆದ ರಣಜಿ ಕ್ರಿಕೆಟ್ ಪಂದ್ಯದ ನೆನಪು ಕೂಡ ಹಸಿರಾಗಿದೆ. ರಾಜ್ಯದ ಹೆಸರಾಂತ ಕ್ರಿಕೆಟ್ ಆಟಗಾರರೆಲ್ಲ ಈ ನಗರದಲ್ಲಿ ನೆರೆದಿದ್ದರು. ಜಿ.ಆರ್. ವಿಶ್ವನಾಥ್, ಸಯ್ಯದ್ ಕೀರ್ಮಾನಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್... ಕ್ರಿಕೆಟ್ ಲೋಕದ ಹಲವು ತಾರೆಗಳು ಅಲ್ಲಿಗೆ ಬಂದಿದ್ದರು. ಜಿಲ್ಲಾ ಆಡಳಿತದ ವತಿಯಿಂದ ಗೋಲ್ ಗುಂಬಜ್ ಉದ್ಯಾನದಲ್ಲಿ ಏರ್ಪಡಿಸಿದ್ದ ಔತಣಕೂಟ ಆಟಗಾರ­ರಲ್ಲಿ ರೋಮಾಂಚನ ಉಂಟು ಮಾಡಿತ್ತು. ರಣಜಿ ಪಂದ್ಯದ ನೆಪದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆಯೂ ಸಂಗ್ರಹವಾಯಿತು.ರಾಜ್ಯ ಸರ್ಕಾರ ಆರಂಭಿಸಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನ ‘ಅಕ್ಷರ ವಿಜಯ’ ವಿಜಾಪುರದಲ್ಲಿ ಬಹುಮಟ್ಟಿನ ಯಶಸ್ಸು ಕಂಡಿತು. ನನ್ನ ಹಿಂದಿದ್ದ ಜಿಲ್ಲಾಧಿಕಾರಿ ಎಂ.ಟಿ. ವಿಜಯಭಾಸ್ಕರ್‌ ಅದಕ್ಕೆ ಒಳ್ಳೆಯ ತಳಪಾಯ ಹಾಕಿದ್ದರು. ನನ್ನ ಅವಧಿಯಲ್ಲಿ ಅದನ್ನು ಯಶಸ್ವಿ­ಯಾಗಿ ಮುಂದುವರಿಸಿದೆವು. ಈ ಉದ್ದೇಶ­ಕ್ಕಾಗಿಯೇ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿಕೊಂಡಿದ್ದೆವು. ಅವರೊಡನೆ ಸುತ್ತಿದ ಹಳ್ಳಿಗಳಿಗೆ ಲೆಕ್ಕವಿಲ್ಲ. ನನ್ನ ಜೊತೆಯಲ್ಲಿ ದುಡಿದಿದ್ದ ಆ ಅಧಿಕಾರಿ ಮುಂದೆ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ವಾಮೀಜಿಯಾದರು. ಅವರೇ ಸ್ವಾಮಿ ನಿರ್ಭಯಾನಂದ! ಅಟ್ಲಾಂಟಾ­ದಲ್ಲಿ ಕಳೆದ ವರ್ಷ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಆ ಸ್ವಾಮೀಜಿ ಮತ್ತೆ ಸಿಕ್ಕಿದ್ದರು. ವಿಜಾಪುರದ ನೆನಪುಗಳು ಹಾಯ್ದು ಹೋದವು.ವಿಭಜನಾಪೂರ್ವದ ವಿಜಾಪುರ ಜಿಲ್ಲೆಯಲ್ಲಿ ಬಾಗಲಕೋಟೆ ಯಾವಾಗಲೂ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಿದ್ದ ನಗರ. ಹೋಳಿ ಬಂತೆಂದರೆ ಸಮಸ್ಯೆ. ಆರ್‌ಎಸ್‌ಎಸ್ ಪಥ ಸಂಚಲನದ ಕಾಲಕ್ಕೆ ಗಲಾಟೆ ಸಾಮಾನ್ಯ­ವಾಗಿ­ರುತ್ತಿತ್ತು. ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ರಾಮಕೃಷ್ಣ ಹಾಗೂ ನಾನು ಪೊಲೀಸರೊಂದಿಗೆ ಸಾಗುತ್ತಿದ್ದಾಗ ಒಂದು ಗಲ್ಲಿಯೊಳಗೆ ಯಾರೋ ಒಬ್ಬ ಕಿಡಿಗೇಡಿ ಪ್ರಾರ್ಥನಾ ಮಂದಿರದತ್ತ ಚಪ್ಪಲಿ ಎಸೆದ. ಭಯಂಕರ ಗದ್ದಲ ಎದ್ದಿತು. ಕಲ್ಲು ತೂರಾಟ, ಲಾಠಿ ಚಾರ್ಜ್, ಅಶ್ರುವಾಯು...ಹೀಗೆ ಪರಿಸ್ಥಿತಿ ಉದ್ರಿಕ್ತವಾಯಿತು. ನನಗೂ ಕಲ್ಲೇಟುಗಳು ಬಿದ್ದವು. ಪೊಲೀಸ್‌ ವರಿಷ್ಠ ಸ್ವತಃ ಲಾಠಿ ಬೀಸಿದಾಗ ಏಟು ತಪ್ಪಿಸಿಕೊಳ್ಳಲು ಒಬ್ಬ ಲಾಠಿಯನ್ನು ಗಟ್ಟಿಯಾಗಿ ಹಿಡಿದ. ಇದರಿಂದ ಅವರ ಬೆರಳಿನ ಮೂಳೆ ಮುರಿಯಿತು.  ನಾವಿಬ್ಬರೂ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆವು. ಈ ಮಧ್ಯೆ ರಾತ್ರಿ ಬಟ್ಟೆ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಸಣ್ಣ ಸಣ್ಣ ಗಲೀಜು ಗಲ್ಲಿಗಳಲ್ಲಿ ಓಡಾಡುವಾಗ ಈ ಹಳೇ ಬಾಗಲಕೋಟೆ ಯಾಕಿನ್ನೂ ಮುಳುಗಿಲ್ಲವೋ ಎಂದುಕೊಂಡೆವು. ಪರಿಸ್ಥಿತಿ ಹತೋಟಿ ಬರುವ ವೇಳೆಗೆ ಬೆಳಗಿನ ಜಾವ ೩ ಗಂಟೆಯಾಗಿತ್ತು.ನೀಲಗುಂದ ಸ್ವಾಮೀಜಿ ಮುಳಗುಂದ ಏತ ನೀರಾವರಿ ಯೋಜನೆಗಾಗಿ ಹೋರಾಟ ಪ್ರಾರಂಭಿಸಿದರು. ಒಂದುದಿನ ಸುತ್ತಮುತ್ತಲಿನ ಹತ್ತಾರು ಮಠದ ವಿವಿಧ ಸ್ವಾಮೀಜಿಗಳನ್ನು ಸೇರಿಸಿ ಆಮರಣ ಉಪವಾಸ ಸತ್ಯಾಗ್ರಹ ಕುಳಿತರು. ಒಬ್ಬರೇ ಮಾಡಬೇಕಿದ್ದ ಉಪವಾಸ ಸತ್ಯಾಗ್ರಹಕ್ಕೆ ಎಲ್ಲ ಸ್ವಾಮೀಜಿಗಳನ್ನು ಸಿಲುಕಿಸಿ­ದರು. ಪ್ರತಿದಿನ ಉದ್ರೇಕಕಾರಿ ಭಾಷಣ ಮಾಡು­ತ್ತಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ನಾನು ಒಂದುದಿನ ಸಂಧಾನಕ್ಕೆ ಹೋದರೆ ನಮ್ಮಿಬ್ಬರಿಗೂ ದಿಗ್ಭಂದನ ಹಾಕಿ ಬಹಳ ಸಮಸ್ಯೆ ಮಾಡಿದರು. ಉಪವಾಸ ಕುಳಿತಿದ್ದವರೆಲ್ಲ ಉಪವಾಸ­ದಿಂದ ಕಳೆಗುಂದದೆ ದಿನ ದಿನಕ್ಕೆ ಹೊಳೆಯತೊಡಗಿದರು. ಅಂತಹ ಭಾರೀ ಉಪವಾಸ.ಸ್ವಾಮೀಜಿಗಳನ್ನು ನಿಭಾಯಿಸುವುದು ಬಹಳ ಸೂಕ್ಷ್ಮ ವಿಷಯವೆಂದು ತಿಳಿದು ಒಂದು ರಾತ್ರಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೆ ಮಾತನಾಡಿ ವಿಷಯ ತಿಳಿಸಿದೆ. ‘ಅವರನ್ನು ಬೆಂಗಳೂರಿಗೆ ಕಳುಹಿಸಿ. ನಾನು ಸಮಸ್ಯೆ ಬಗೆಹರಿಸುತ್ತೇನೆ’ ಎಂದು ತಿಳಿಸಿದರು. ನೀಲಗುಂದ ಸ್ವಾಮೀಜಿಗೆ ಈ ವಿಷಯ ತಿಳಿಸಿದರೆ ಅಷ್ಟು ಸುಲಭವಾಗಿ ಒಪ್ಪಲಿಲ್ಲ. ಗಲಭೆಗೆ ಪ್ರಚೋದನೆ ನೀಡುವ ಕೆಲವು ಮಾತು­ಗಳನ್ನಾಡಿ­ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ವಾಮೀಜಿ­ಯನ್ನು ಮುಟ್ಟುವ ಸ್ಥಿತಿಯಲ್ಲಿ ಇರ­ಲಿಲ್ಲ. ಸ್ವತಃ  ರಾಮಕೃಷ್ಣ  ಅವರೇ ಸ್ವಾಮೀಜಿ­ಯನ್ನು ಕರೆತಂದು ಪೊಲೀಸ್ ಜೀಪು ಹತ್ತಿಸಿದರು. ಆಗ ಸ್ವಾಮೀಜಿ ಭೂಮಿಗೆ ಬಂದರು. ಮುಖ್ಯಮಂತ್ರಿಯವರ ಭೇಟಿಗೆ ಬೆಂಗಳೂರಿಗೆ ಹೋಗಲು ಒಪ್ಪಿದರು. ಬೆಂಗಳೂರಿಗೆ ಬಂದ ನೀಲಗುಂದ ಸ್ವಾಮೀಜಿ, ಮುಖ್ಯಮಂತ್ರಿ ಭೇಟಿಗಾಗಿ ಏಳು ದಿನ ವಿಧಾನಸೌಧಕ್ಕೆ ಅಲೆದಾಡಬೇಕಾಯಿತು.‘ರಾಜಕೀಯ ಮಾಡುವುದಾದರೆ ಕಾವಿ ಬಿಚ್ಚಿಟ್ಟು ಖಾದಿ ಧರಿಸಿ ಬನ್ನಿ. ಇಲ್ಲವಾದರೆ ಸುಮ್ಮನೆ ಅಧ್ಯಾತ್ಮದ ಕಡೆಗೆ ಗಮನಹರಿಸಿ’ ಎಂದು ಬಂಗಾರಪ್ಪ, ಸ್ವಾಮೀಜಿ ಉತ್ಸಾಹಕ್ಕೆ ತಣ್ಣೀರೆರಚಿದರು. ಒಂದು ವಾರ ವಿಧಾನಸೌಧದ ಮೊಗಸಾಲೆ­ಯಲ್ಲಿ ಅಡ್ಡಾಡಿ ಸುಸ್ತಾಗಿದ್ದರು ಸ್ವಾಮೀಜಿ. ವರ್ಷಗಳ ಬಳಿಕ ನಾನು ತುಮಕೂರು ಜಿಲ್ಲಾಧಿಕಾರಿಯಾಗಿದ್ದಾಗ ಒಮ್ಮೆ ಮಾತನಾಡಿಸಿಕೊಂಡು ಹೋದರು.ಬಾದಾಮಿ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿ ಬಂಗಾರಪ್ಪ ಬಂದಿಳಿದರು. ಆ ಭಾಗದ ಸಚಿವ­ರೊಬ್ಬರು ಆಗತಾನೆ ನೇಮಕಗೊಂಡಿದ್ದ ಅವರ ಮತದ ಸ್ವಾಮೀಜಿಯನ್ನು ಭೇಟಿ ಮಾಡುವ ಕುರಿತು ಪ್ರಸ್ತಾಪಿಸಿದರು. ಅದಕ್ಕೆ ಒಪ್ಪದ ಬಂಗಾರಪ್ಪ, ‘ಸ್ವಾಮೀಜಿ–ಗೀಮೀಜಿ ಯಾರೂ ಬೇಡ. ಸಮಾರಂಭದ ಸ್ಥಳಕ್ಕೆ ಹೋಗೋಣ’ ಎಂದರು. ಪೆಚ್ಚಾದ ಸಚಿವರು ಸ್ವಾಮೀಜಿ­ಯನ್ನು ಸಮಾರಂಭದ ಸ್ಥಳಕ್ಕೆ ಕರೆತಂದರು. ಧರ್ಮದ ಅತಿ­ರೇಕ­ಗಳಿಗೆ ಬಂಗಾರಪ್ಪ ಸೊಪ್ಪು ಹಾಕುತ್ತಿರಲಿಲ್ಲ.ಬಂಗಾರಪ್ಪ ಇನ್ನೊಮ್ಮೆ ಜಿಲ್ಲೆಗೆ ಬಂದಿದ್ದರು. ಅವರ ವಾಹನಗಳ ಸಾಲು ಭರದಿಂದ ಸಾಗು­ತ್ತಿತ್ತು. ಮುಂದಿನ ಕಾರು ತುಸು ಬ್ರೇಕ್ ಹಾಕಿ­­ದ್ದರಿಂದ ಶರವೇಗದಲ್ಲಿ ಓಡಿಸುತ್ತಿದ್ದ ಬೆಂಗಳೂರಿನ ಚಾಲಕ ಏಕ್‌ದಂ ಬ್ರೇಕ್ ಹಾಕಿದ. ಇದರಿಂದ ನಮ್ಮ ಕಾರು ಎರಡು ರೌಂಡ್ ಹೊಡೆದು ನಿಂತಿತು. ನಮ್ಮ ಜೀವದ ಮೇಲಿನ ಆಸೆಯೇ ಹೊರಟುಹೋಗಿತ್ತು. ಆಮೇಲೆ ಆ ಚಾಲಕನನ್ನು ಕರೆಸಿದ ಬಂಗಾರಪ್ಪ, ‘ಬೆಂಗಳೂರಿ­ನಿಂದ ಡಿ.ಸಿ-–ಎಸ್‌.ಪಿ ಅವರನ್ನು ಸಾಯಿಸೋಕೆ ಬಂದಿ­ದ್ದೀಯಾ’ ಎಂದು ತರಾಟೆಗೆ ತೆಗೆದುಕೊಂಡರು.ವಿಜಾಪುರದ ಎಲ್ಲ ಹಿರಿಯ ಅಧಿಕಾರಿಗಳು ಚೆಂದಾಗಿ ಕಾಣಲು ಜಿಲ್ಲಾಧಿಕಾರಿ ನಿವಾಸದಲ್ಲಿರುವ ನಾಗಪ್ಪನ ಸೇವೆಯೇ ಕಾರಣ. ದೂಳು ತುಂಬಿದ ಊರಿನಲ್ಲೂ ನಮ್ಮ ಬಟ್ಟೆಗಳು ಯಾವಾಗಲೂ ಶುಭ್ರವಾಗಿ ಜಗಮಗಿಸುತ್ತಿದ್ದವು. ನನಗೆ ಕಿಚನ್‌ ಕ್ಯಾಬಿನೆಟ್‌ನ ರಾಜಕೀಯ ಗೊತ್ತಾಗುತ್ತಿದ್ದುದೇ ಆತನಿಂದ. ನನ್ನ ಕಾರು ಚಾಲಕ ಜಬ್ಬಾರ್‌ ನಾನು ವಿಜಾಪುರದಲ್ಲಿ ಇದ್ದಷ್ಟು ದಿನ ಬಹಳ ಶಿಸ್ತಿನ ಮತ್ತು ಅಪಘಾತರಹಿತ ಕಾರು ಚಾಲನೆ ಮಾಡಿದ. ಆತನ ಸೇವೆಯನ್ನು ಮರೆಯುವಂತಿಲ್ಲ. ಆಪ್ತ ಸಹಾಯಕ­ರಾಗಿದ್ದ ಸಿ.ಬಿ. ದೇಶಪಾಂಡೆ ನನ್ನ ಸೇವಾವಧಿಯಲ್ಲಿ ಕಂಡ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಈ ಮೂವರು ಈಗಲೂ ಅದೇ ವಿಜಾಪುರದಲ್ಲಿ ಸೇವೆ­ಯಲ್ಲಿದ್ದಾರೆ.ಜಿಲ್ಲೆಯಲ್ಲಿ ನಡೆದ ಎಲ್ಲ ಕಾರ್ಯಗಳಿಗೆ ನಾನೇ ಕಾರಣ ಎಂದರೆ ಸ್ವಪ್ರತಿಷ್ಠೆ–ಅಹಂಕಾರದ ಮಾತಾಗುತ್ತದೆ. ಜಿಲ್ಲಾ ಆಡಳಿತ ಎಂದರೆ ಅದೊಂದು ತಂಡ ವ್ಯವಸ್ಥೆ. ಜಿಲ್ಲಾಧಿಕಾರಿಗಳು ಅದಕ್ಕೆ ನಾಯಕನಂತೆ ಕೆಲಸ ಮಾಡುತ್ತಾರೆ. ಅವರಿಗೆ ನೇರ ಇಲ್ಲವೆ ಪರೋಕ್ಷವಾಗಿ ನೆರವು ನೀಡಲು ಅಧಿಕಾರಿಗಳು, ಜನಪ್ರತಿನಿಧಿಗಳು, ಜನಗಳು ಅನೇಕರಿರುತ್ತಾರೆ. ನನ್ನ ಯಶಸ್ಸಿನ ಸೇವೆಯಲ್ಲಿ ಅವರ ಪಾತ್ರ ದೊಡ್ಡದಾಗಿದೆ.ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ಪ್ರತಿಕ್ರಿಯಿಸಿ (+)