ಶನಿವಾರ, ಫೆಬ್ರವರಿ 27, 2021
28 °C

ಪತ್ರಿಕಾ ಸ್ವಾತಂತ್ರ್ಯಕ್ಕೆ ಬೇಲಿ ಹಾಕುವ ಪ್ರಯತ್ನಗಳಾಚೆ...

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಪತ್ರಿಕಾ ಸ್ವಾತಂತ್ರ್ಯಕ್ಕೆ ಬೇಲಿ ಹಾಕುವ ಪ್ರಯತ್ನಗಳಾಚೆ...

ನಿನ್ನೆಯಷ್ಟೇ ಕನ್ನಡ ಪತ್ರಿಕಾ ದಿನ (ಜುಲೈ 1) ಆಚರಿಸಿದ್ದೇವೆ. 170 ವರ್ಷಗಳ ಹಿಂದೆ, 1843ರ ಜುಲೈ 1ರಂದು ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ' ಜನ್ಮ ತಾಳಿದ ಸಂಸ್ಮರಣೆಯ ದಿನ ಇದು. ಈ ಪತ್ರಿಕೆಯನ್ನು `ವಿಶ್ವದ ಕಿಟಕಿ' ಎಂದು ಇದನ್ನು ಆರಂಭಿಸಿದ ಜರ್ಮನಿಯ ಬಾಸೆಲ್ ಮಿಷನ್‌ನ  ಹರ್ಮನ್ ಫ್ರೆಡೆರಿಕ್ ಮೊಗ್ಲಿಂಗ್ ಕರೆದಿದ್ದರು. ಸ್ಥಳೀಯ ಸುದ್ದಿಗಳಿಂದ ಹಿಡಿದು ದೇಶ ವಿದೇಶ ಸುದ್ದಿಗಳು ಇದರಲ್ಲಿ ಪ್ರಕಟವಾಗುತ್ತಿದ್ದವು.1844ರಲ್ಲಿ ಈ ಪತ್ರಿಕೆಯನ್ನು `ಕನ್ನಡ ಸಮಾಚಾರ' ಎಂದು ಮರು ನಾಮಕರಣ ಮಾಡಿ ಬಳ್ಳಾರಿಗೆ ಸ್ಥಳಾಂತರಿಸಲಾಯಿತು. ಸ್ವಲ್ಪ ಕಾಲದ ನಂತರ ಇದರ ಪ್ರಕಟಣೆ ನಿಂತುಹೋಯಿತು. ಆದರೆ ಕನ್ನಡದ ಪತ್ರಿಕಾಲೋಕದ ಬಾಗಿಲನ್ನು ತೆರೆದ `ಮಂಗಳೂರು ಸಮಾಚಾರ' ಒಂದು ರೀತಿಯ ಶಿಷ್ಟತೆಯನ್ನು ರೂಪಿಸಿಕೊಟ್ಟಿತು ಎಂಬುದು ಮುಖ್ಯ.ಅಂದಿನಿಂದಲೂ ಕನ್ನಡ ಪತ್ರಿಕಾ ಪ್ರಪಂಚ ಹಲವು ಬಗೆಯ ಸ್ಥಿತ್ಯಂತರಗಳನ್ನು ಕಂಡಿದೆ. ಕಾಲದ ಬದಲಾವಣೆಗಳಿಗೆ ಸ್ಪಂದಿಸುತ್ತಾ ಸಾಗಿದೆ. ಆರು ಕೋಟಿ ಜನಸಂಖ್ಯೆ ಹೊಂದಿದ ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರದ ಅಂದಾಜು ಸದ್ಯಕ್ಕೆ ಸುಮಾರು 40 ಲಕ್ಷ ಇದೆ. ಅನ್ಯರ ಆಕ್ರಮಣಗಳ ವಿರುದ್ಧ ಅಸ್ತ್ರಗಳಾಗಿದ್ದ ವೃತ್ತಪತ್ರಿಕೆಗಳು ಉದ್ಯಮವಾಗಿ ಬೆಳೆಯುತ್ತಾ ಸಾಗಿದ ಕಥೆ ಈ ಇತಿಹಾಸದಲ್ಲಿದೆ.ಜನರ ವಾಣಿಯಾಗಿ ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಪತ್ರಿಕೆಗಳು ವ್ಯಾಖ್ಯಾನ ಹಾಗೂ ವಿಶ್ಲೇಷಣೆಗಳನ್ನೂ ನೀಡಿಕೊಂಡು ಬಂದಿವೆ. ಪತ್ರಿಕೋದ್ಯಮ ಎಂಬುದು ಆಳದಲ್ಲಿ ಗಂಭೀರವಾದ ವ್ಯವಹಾರ. ಅನುಕೂಲಕರವಲ್ಲದ ಪ್ರಶ್ನೆಗಳೇ ಪತ್ರಿಕೋದ್ಯಮದ ಬುನಾದಿ. ಅಧಿಕಾರಸ್ಥರ ಜೊತೆ ಅನುಕೂಲಕರ ಸಾಂಗತ್ಯ, ಜಾಣತನದ ವಾಕ್ಯಗಳು ಅಥವಾ ಆಕರ್ಷಕ ಬರವಣಿಗೆ ಮಾತ್ರವೇ ಪತ್ರಿಕೋದ್ಯಮವಲ್ಲ. ವಿಶ್ವಾಸಾರ್ಹತೆ, ನೈತಿಕತೆಗಳು ಅದರ ಜೀವಾಳ. ಇದಕ್ಕೆ ಅಗತ್ಯವಾದದ್ದು ಪತ್ರಿಕಾ ಸ್ವಾತಂತ್ರ್ಯ.ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಡಿವಿಜಿ ಅವರು ತಮ್ಮ `ವೃತ್ತಪತ್ರಿಕೆ' ಪುಸ್ತಕದಲ್ಲಿ ಹೇಳುವ ಮಾತುಗಳು ಈಗಲೂ ಪ್ರಸ್ತುತ. “ಪತ್ರಿಕಾಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಜಾಜನರೆಲ್ಲರಿಗೂ ಸೇರಿದ ಒಂದು ಅಧಿಕಾರವೇ ಹೊರತು ಅದು ಅವನೊಬ್ಬನಿಗೆ ಮಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರೆಯಲಾಗದು. ಅವನು ಪರಾಧೀನನಾಗದೆ ಇದ್ದರೆ ಅದರ ಪ್ರಯೋಜನವು ಎಲ್ಲ ಪ್ರಜೆಗಳಿಗೂ ಇರುವುದು. ಅವನಿಗೆ ಹಿಂಗಟ್ಟುಮುರಿ ಕಟ್ಟಿಸಿದರೆ ಅದರ ಬಾಧೆಯು ಎಲ್ಲರ ಪಾಲಿಗೂ ತಗುಲುವುದು. ಪತ್ರಕರ್ತನು ನಡೆಯಿಸುವ ಎಲ್ಲ ಕಾರ್ಯಗಳೂ ಪ್ರಜೆಯ ಪರವಾದುದಾಗಿರುತ್ತವೆ. ಅವನು ಅವರ `ಏಜೆಂಟ್' ಅಥವಾ ಪ್ರತಿನಿಧಿ ಮಾತ್ರವಾಗಿರುತ್ತಾನೆ. ಅವನಿಗೆ ರಾಜ್ಯವು ವಹಿಸಿಕೊಡುವ ಅಧಿಕಾರ ಮರ್ಯಾದೆಗಳೆಲ್ಲವೂ ವಸ್ತುಶಃ ಪ್ರಜಾವರ್ಗಕ್ಕೆ ಸಲ್ಲತಕ್ಕವು. ಅವುಗಳಲ್ಲಿ ಯಾವುದನ್ನಾದರೂ ಅವನಿಗೆ ತಪ್ಪಿಸಿದರೆ ಆ ನಷ್ಟಕ್ಕೆ ಪ್ರಜೆಗಳೆಲ್ಲರೂ ಗುರಿಯಾಗುವರು. ಈ ತತ್ವವನ್ನು ನಮ್ಮ ಜನರು ಜ್ಞಾಪಕದಲ್ಲಿರಿಸಿಕೊಳ್ಳಬೇಕು”.ಸರ್ಕಾರದ ಆಡಳಿತ ಹಾಗೂ ಸಾರ್ವಜನಿಕ ನಡಾವಳಿಗಳ ತಪ್ಪು - ಒಪ್ಪುಗಳ ಕ್ರಿಯೆಗಳಿಗೆ, ಅರಿವು ಹಾಗೂ ಪಾರದರ್ಶಕತೆಯಿಂದ ಉತ್ತರದಾಯಿತ್ವ ಒದಗುತ್ತದೆ. ಈ ಅರಿವು ಮೂಡಿಸುವ ಪ್ರಕ್ರಿಯೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಶ್ರೇಷ್ಠ ಲೇಖಕನನ್ನು `ಎರಡನೇ ಸರ್ಕಾರ' ಎಂದು ಸೋವಿಯತ್ ರಷ್ಯಾದ ಲೇಖಕ ಸೋಲ್ಜೆನಿಟ್ಸನ್ ಕರೆಯುತ್ತಾನೆ. ಇಂತಹದೇ ಮಹತ್ತರ ಪಾತ್ರ ಪತ್ರಿಕೆಗಳಿಗೂ ಇದೆ. ಇದಕ್ಕೆ ಅಗತ್ಯವಾದ ಅಭಿವ್ಯಕ್ತಿಯ ಸ್ವಾತಂತ್ರ್ಯ ಮಾನವ ಹಕ್ಕುಗಳಲ್ಲಿಯೇ ಅಂತರ್ಗತವಾಗಿದೆ. ಇದನ್ನು ಅರಿತೇ ಅಮೆರಿಕ ಸಂವಿಧಾನಕ್ಕೆ 1791ರಲ್ಲಿ ಮಾಡಿದ ತಿದ್ದುಪಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದ ಬುನಾದಿಯಾಗಿಸಲಾಯಿತು. ಆಗ ಸೇರಿಸಿದ ಮಾತುಗಳಿವು: `ಮಾತಿನ ಅಥವಾ ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸುವ ಯಾವುದೇ ಕಾನೂನನ್ನು ಕಾಂಗ್ರೆಸ್ ಮಾಡುವುದಿಲ್ಲ'. ಭಾರತದಲ್ಲೂ ಇಂತಹದೇ ಆದರ್ಶ ಕಂಡುಬರುತ್ತದೆ. 1950ರಲ್ಲಿ ಭಾರತ ಸಂವಿಧಾನಕ್ಕೆ ತಂದ ಮೊಟ್ಟ ಮೊದಲ ತಿದ್ದುಪಡಿಯಲ್ಲಿ 19 (2) ವಿಧಿಯ ವ್ಯಾಪ್ತಿಯನ್ನು ಹೆಚ್ಚು ಮಾಡಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಮತಿ ಕೊಡಬಹುದಾದ ನಿರ್ಬಂಧಗಳು `ತರ್ಕಬದ್ಧವಾಗಿರಬೇಕು', ಸ್ವೇಚ್ಛಾನುಸಾರವಾಗಿರಬಾರದು ಎಂದು ಹೇಳಲಾಯಿತು. ಕಳೆದ ಅನೇಕ ವರ್ಷಗಳಲ್ಲಿ ತನ್ನ ಹಲವು ತೀರ್ಪುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಹನ್ನು ನಿರಂತರವಾಗಿ ಸುಪ್ರೀಂಕೋರ್ಟ್ ವಿಸ್ತರಿಸುತ್ತಾ ಬಂದಿದೆ.1996ರಲ್ಲಿ, ಕ್ರಿಕೆಟ್ ಪಂದ್ಯದ ಟಿವಿ ಪ್ರಸಾರದ ಹಕ್ಕನ್ನು ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ಗೆ ನಿರಾಕರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಎಂದು ಕೋರ್ಟ್ ತೀರ್ಪು ಹೇಳಿತ್ತು. ವಿದ್ಯುತ್ಕಾಂತೀಯ ತರಂಗ ನೈಸರ್ಗಿಕ ಸಂಪನ್ಮೂಲ. ಹೀಗಾಗಿ ಅದು ಸಾರ್ವಜನಿಕ ಆಸ್ತಿ. ಅದನ್ನು ನಿರ್ವಹಿಸಬಹುದೇ ಹೊರತು ಪ್ರಭುತ್ವದ ಏಕಸ್ವಾಮ್ಯಕ್ಕೆ ಒಳಪಡಿಸುವುದು ಸಾಧ್ಯವಿಲ್ಲ ಎಂದು ತೀರ್ಪು ಹೇಳಿತ್ತು.ಆದರೆ, ಮಾಹಿತಿಯ ಮುಕ್ತ ಹರಿವಿನಿಂದ ನಿರಂಕುಶ ಆಡಳಿತಗಾರರು ಅಭದ್ರತೆ ಅನುಭವಿಸುವಂತಹ ಅನುಭವಗಳು ಇತಿಹಾಸದಲ್ಲಿ ದಾಖಲಾಗಿವೆ. ಇದರ ನಿಯಂತ್ರಣಕ್ಕಾಗಿ ನಿರಂಕುಶಪ್ರಭುಗಳು ಪ್ರಚಾರ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಭಾರತದಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಸೆನ್ಸಾರ್‌ಷಿಪ್ ಪ್ರಮುಖ ಸಾಧನವಾಗಿತ್ತು. ವಂದಿಮಾಗಧರು, ಆಸ್ಥಾನಿಕರನ್ನು ತನ್ನ ಸುತ್ತಲೂ ಸೃಷ್ಟಿಸಿಕೊಳ್ಳುವ ಸರ್ವಾಧಿಕಾರ, ಸುತ್ತಲ ಜಗತ್ತಿನ ಬದಲಾಗುತ್ತಿರುವ ವಿದ್ಯಮಾನಗಳಿಗೆ ಕಣ್ಣುಮುಚ್ಚಿಕೊಳ್ಳುತ್ತಾ ಕಡೆಗೆ ಅದರೊಳಗೇ ಧ್ವಂಸಗೊಳ್ಳುತ್ತದೆ. ಹೀಗಾಗಿಯೇ ಮುಕ್ತ ಪತ್ರಿಕಾ ಸ್ವಾತಂತ್ರ್ಯವೇ ನಿಜಕ್ಕೂ ಸುರಕ್ಷತೆಯ ಕವಾಟ. ಪ್ರಶ್ನೆಗಳು ಪ್ರಗತಿಗೆ ಕಾರಣವಾಗುತ್ತವೆ. ಪತ್ರಿಕೋದ್ಯಮದ ಮೂಲ ಸಾರವಾದ ಏಕೆ, ಏನು, ಯಾವಾಗ, ಹೇಗೆ, ಯಾರು, ಎಲ್ಲಿ ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಮಾಹಿತಿ, ವಿಚಾರಗಳ ಪ್ರಸರಣದಲ್ಲಿ ಪ್ರಜಾತಂತ್ರದ ಆಶಯಗಳನ್ನು ಜೀವಂತವಾಗಿರಿಸುತ್ತದೆ.ಸಮಾಜದ ವಿವಿಧ ವಲಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುವುದು ನಿಜಕ್ಕೂ ಪ್ರಜೆಗಳ ಹಕ್ಕು. ವಿಭಿನ್ನ, ಪರ್ಯಾಯ ಟೀಕೆ ಟಿಪ್ಪಣಿಗಳನ್ನು ಕೇಳಿಸಿಕೊಳ್ಳುವುದು ಹಾಗೂ ಆ ಮೂಲಕ ಸ್ವಯಂ ಆಡಳಿತದಲ್ಲಿ ದಕ್ಷವಾಗಿ ಪಾಲ್ಗೊಳ್ಳುವುದು ಸಾಧ್ಯವಾಗಬೇಕು. ವಾಸ್ತವ ಸಂಗತಿಗಳನ್ನು ಮುಕ್ತವಾಗಿ ತಿಳಿಸದಿದ್ದಲ್ಲಿ ಹಾಗೂ ಟೀಕೆ ಟಿಪ್ಪಣಿ ವಿಮರ್ಶೆಗಳು ಮುಕ್ತವಾಗಿ ವಿನಿಮಯವಾಗದಿದ್ದಲ್ಲಿ ಆಡಳಿತಗಾರರನ್ನು ಹೊಣೆಯಾಗಿಸುವ ಪ್ರಯತ್ನವೇ ಸಾಧ್ಯವಾಗುವುದಿಲ್ಲ. ಮುಕ್ತ ಅಭಿವ್ಯಕ್ತಿ ಸಾಧ್ಯವಾಗುವುದಾದರೂ ಹೇಗೆ? ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿದೆಯೆ? ಹಾಗಿದ್ದರೆ ಯಾರಿಂದ?ಬ್ರಿಟನ್‌ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪತ್ರಿಕಾ ಸ್ವಾತಂತ್ರ್ಯದ ತೊಟ್ಟಿಲು ಎಂದು ಬ್ರಿಟನ್ ಪರಿಗಣಿತವಾಗಿತ್ತು. ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ಹೆಚ್ಚಿನ ಕಾಳಜಿ ಇಲ್ಲದ ಸರ್ಕಾರಗಳನ್ನು ಹೊಂದಿದ ರಾಷ್ಟ್ರಗಳ ಪತ್ರಕರ್ತರು ಬ್ರಿಟನ್‌ನತ್ತ ನೋಡುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಆ ರೀತಿ ಇಲ್ಲ. ಇದಕ್ಕೆ ಕಾರಣವಾದದ್ದು ನ್ಯೂಸ್ ಇಂಟರ್‌ನ್ಯಾಷನಲ್‌ನ ( ಕಳೆದ ವಾರವಷ್ಟೇ ಇದು ನ್ಯೂಸ್ ಯುಕೆ ಎಂದು ಹೆಸರು ಬದಲಿಸಿಕೊಂಡಿದೆ) ಫೋನ್ ಕದ್ದಾಲಿಕೆಯ ಹಗರಣ. ಈ ಹಗರಣ ನಿಜಕ್ಕೂ ಆಘಾತಕಾರಿ. ಈ ವಿಷಯದಲ್ಲಿ ಕೆಲವು ಪತ್ರಿಕೆಗಳ ವರ್ತನೆಯನ್ನು ಯಾರೂ ಕ್ಷಮಿಸುವುದು ಸಾಧ್ಯವಿಲ್ಲ. ಆದರೆ ಅದರ ವಿರುದ್ಧ ಬ್ರಿಟನ್ ಕೈಗೊಂಡ ರಾಜಕೀಯ ಕ್ರಮ ಮಾತ್ರ ಮತ್ತೂ ಆಘಾತಕಾರಿ. ಹಗರಣದ ಹಿನ್ನೆಲೆಯಲ್ಲಿ ಬ್ರಿಟಿಷ್ ಪತ್ರಿಕೆಗಳ ಸಂಸ್ಕೃತಿ, ವಿಧಿವಿಧಾನ ಹಾಗೂ ನೈತಿಕತೆ ಕುರಿತಂತೆ ನ್ಯಾಯಾಂಗ ಸಾರ್ವಜನಿಕ ತನಿಖೆಗಾಗಿ ಲಾರ್ಡ್ ಜಸ್ಟೀಸ್ ಲೆವೆಸನ್ ಅಧ್ಯಕ್ಷತೆಯ ವಿಚಾರಣಾ ತಂಡವನ್ನು ರಚಿಸಲಾಯಿತು. ಇದು ನೀಡಿದ 2000 ಪುಟಗಳ ವರದಿ, ಮಾಧ್ಯಮಗಳ ದುಡುಕಿನ, ಘಾತಕತನದ ವರ್ತನೆಗಳು ಹಲವು ದಶಕಗಳ ಕಾಲ ಮುಗ್ಧ ಜನರ ಬದುಕಲ್ಲಿ ಅಲ್ಲೋಲಕಲ್ಲೋಲಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿತು. 1215ರಷ್ಟು ಹಿಂದೆಯೇ, ಇಂಗ್ಲೆಂಡ್‌ನ ಸ್ವಾತಂತ್ರ್ಯದ ಸನ್ನದು ಎನಿಸಿದ `ಮ್ಯಾಗ್ನಾ ಕಾರ್ಟಾ' ಬಿಡುಗಡೆ ಮಾಡಿದ ದೇಶ ಬ್ರಿಟನ್. ದೊರೆಯ ಇಚ್ಛೆಯ ಸ್ವೇಚ್ಛೆಗೆ ಅವಕಾಶ ಇಲ್ಲ ಎಂಬುದನ್ನು ಅದು ಎತ್ತಿ ಹಿಡಿದಿತ್ತು.  ಇಂತಹ ರಾಷ್ಟ್ರದಲ್ಲಿ ಈಗ `ರಾಯಲ್ ಚಾರ್ಟರ್' ಮೂಲಕ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. `ರಾಯಲ್ ಚಾರ್ಟರ್' ತಾಂತ್ರಿಕವಾಗಿ ಕಾನೂನಲ್ಲ. ಏಕೆಂದರೆ ಈ  ಸನ್ನದನ್ನು ಅಧಿಕೃತವಾಗಿ ಹೊರಡಿಸಿರುವುದು ಬ್ರಿಟನ್ ರಾಣಿ. ಪಾರ್ಲಿಮೆಂಟ್ ಅಲ್ಲ ಎಂಬಂತಹ ಸಮಜಾಯಿಷಿಗಳನ್ನು ಬ್ರಿಟನ್ ಸರ್ಕಾರ ನೀಡಿದೆ. ಆದರೆ ಈ ವ್ಯತ್ಯಾಸದಲ್ಲಿ ಹೆಚ್ಚೇನೂ ಹುರುಳಿಲ್ಲ. ಏಕೆಂದರೆ ಈ ಪ್ರಸ್ತಾವ, ಬ್ರಿಟನ್‌ನಲ್ಲಿ ಜೀವಂತಿಕೆಯಿಂದ ಸಕ್ರಿಯವಾಗಿರುವ ಮುಕ್ತ ಅಭಿವ್ಯಕ್ತಿಯ ಪತ್ರಿಕೆಗಳಿಗೆ ಸರ್ಕಾರಿ ನಿರ್ಬಂಧಗಳ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸೃಷ್ಟಿಸುತ್ತದೆ. ಈ ತರಹದ ನಿರ್ಬಂಧದ ವ್ಯವಸ್ಥೆ ಸೃಷ್ಟಿಯಾಗುತ್ತಿರುವುದು 1695ರ ನಂತರ ಇದೇ ಮೊದಲು. 1695ರಲ್ಲಿ ವೃತ್ತಪತ್ರಿಕೆ ಲೈಸೆನ್ಸಿಂಗ್ ಕಾನೂನುಗಳು ರದ್ದಾದ ನಂತರ ಮುಕ್ತ ವಾತಾವರಣದಲ್ಲಿ ಅರಳಿದ್ದ ಬ್ರಿಟಿಷ್ ಪತ್ರಿಕೆಗಳೀಗ ಹೊಸ ಶಾಸನಬದ್ಧ ನಿಯಮಾವಳಿಗಳ ಸರಪಳಿಗೆ ಸಿಲುಕಲಿವೆ.ಸಾರ್ವಜನಿಕ ಹಿತಕ್ಕೆ ಅನುಗುಣವಾಗೇನೂ ಇಲ್ಲದೆ ಪತ್ರಿಕೆಗಳ ಜೊತೆ ತೀರಾ ಹತ್ತಿರದ ಸಂಬಂಧಗಳನ್ನು ಬೆಳೆಸಿಕೊಂಡಿದ್ದಕ್ಕಾಗಿ ರಾಜಕಾರಣಿಗಳಿಗೂ ಈ ವರದಿ ಪೆಟ್ಟು ನೀಡಿದೆ. ಪತ್ರಿಕಾ ಉದ್ಯಮದ ನಿಯಂತ್ರಣಕ್ಕೆಂದೇ ಈಗಾಗಲೇ ಇರುವ ಪತ್ರಿಕಾ ದೂರು ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಇಲ್ಲದಿರುವುದರಿಂದ ಸ್ವತಂತ್ರ ನಿಯಂತ್ರಣ ವ್ಯವಸ್ಥೆಯ ಅಗತ್ಯವನ್ನು ಲಾರ್ಡ್ ಲೆವೆಸನ್ ಪ್ರತಿಪಾದಿಸಿದ್ದರು. ಆದರೆ ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರು ತಮ್ಮನ್ನು ತಾವು ಜೂಲಿಯಸ್ ಸೀಸರ್ ಎಂದು ಪರಿಗಣಿಸಿಕೊಂಡು ಲೆವೆಸನ್ ತೀರ್ಪಿನ ವಿಚಾರದಲ್ಲಿ ತಾವು `ರೂಬಿಕಾನ್ ದಾಟುವುದಿಲ್ಲ' ಎಂದಿದ್ದರು. ಆ ರೂಬಿಕಾನ್ ನದಿಯನ್ನು ಸೀಸರ್ ದಾಟಿದ ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದದ್ದೆ. ಅಂತರ್ಯುದ್ಧ ಸೃಷ್ಟಿಯಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಏಟು ಬೀಳುವ ಅಪಾಯ ಆಗ ಪ್ರಧಾನಿಯ ಮನದಲ್ಲಿತ್ತು.ಆದರೆ ಕಳೆದ ಮಾರ್ಚ್ ತಿಂಗಳಿನಲ್ಲಿ ಕಡೆಗೂ ಬ್ರಿಟನ್‌ನಲ್ಲಿ ಮೂರು ಶತಮಾನಗಳ ಕಾಲದ ಅನಿಯಂತ್ರಿತ ಪತ್ರಿಕೋದ್ಯಮ ಅಂತ್ಯ ಕಂಡಿತು. ಗೊಂದಲದ ಪತ್ರಿಕಾ ಪ್ರಪಂಚವನ್ನು ಪಳಗಿಸುವ ಒಪ್ಪಂದವನ್ನು ಪ್ರಮುಖ ರಾಜಕೀಯ ಪಕ್ಷಗಳು ಅಂಗೀಕರಿಸಿದವು. ಬ್ರಿಟನ್ನಿನ ಮುಕ್ತ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೇಲಿ ಹಾಕುವ ಸರ್ಕಾರದ ನಿಯಮಾವಳಿಗಳ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಇದು ಸೃಷ್ಟಿಸಲಿದೆ.ಬ್ರಿಟನ್‌ನಲ್ಲಿ  ಇರುವ ಹಳೆಯ ಪಿಸಿಸಿ  (ಪ್ರೆಸ್ ಕಂಪ್ಲೇಂಟ್ಸ್ ಕಮಿಷನ್) ವ್ಯವಸ್ಥೆ ಸೇರಿದಂತೆ ಯೂರೋಪಿನಾದ್ಯಂತ ಇರುವ ಪತ್ರಿಕಾ ನಿಯಂತ್ರಣ ವ್ಯವಸ್ಥೆಗಳ ಅನ್ವಯ, ತಪ್ಪು ಮಾಹಿತಿಯಿಂದ ತೊಂದರೆಗೊಳಗಾದವರು ಮಾತ್ರ ದೂರು ನೀಡಬಹುದು. ಇದಕ್ಕೆ ಎಲ್ಲೋ ಕೆಲವು ಅಪವಾದಗಳಿರಬಹುದು. ಆದರೆ ಈಗ  `ರಾಯಲ್ ಚಾರ್ಟರ್' ಅಡಿ, ಲಾಬಿ ಗ್ರೂಪ್‌ಗಳ ಯಾರೋ ಮೂರನೇ ವ್ಯಕ್ತಿಗಳು ಅಥವಾ ಯಾರು ಬೇಕಾದರೂ ಯಾವ ವಿಚಾರಕ್ಕೆ ಬೇಕಾದರೂ ಯಾರಿಗೂ ಏನೂ ತೊಂದರೆಯೂ ಆಗಿರದಿದ್ದ ಸಂದರ್ಭದಲ್ಲೂ ಯಾರದ್ದೇ ದೂರನ್ನು ತೆಗೆದುಕೊಳ್ಳಲು ಹೊಸ ನಿಯಂತ್ರಕ ವ್ಯವಸ್ಥೆಗೆ ಅಧಿಕಾರವಿದೆ.ಸತ್ಯದ ಬಗೆಗೆ ತಮ್ಮದೇ ವ್ಯಾಖ್ಯಾನವನ್ನು ಅಥವಾ ತಮ್ಮದೇ ಅಭಿರುಚಿಯ ಮಟ್ಟವನ್ನು ಪತ್ರಿಕೆಗಳ ಮೇಲೆ ಹೇರಲು ಎಲ್ಲರಿಗೂ ಹಸಿರು ನಿಶಾನೆ ಇದರಿಂದ ಸಿಕ್ಕಿದಂತಾಗಿದೆ. ಜರ್ಮನಿಯಲ್ಲಿ ಇಂತಹದ್ದೇ ನಿಯಮಗಳು ಈಗಾಗಲೇ ಅನ್ವಯವಾಗುತ್ತವೆ. ಅಲ್ಲಿ ಸತ್ತ ಕರ್ನಲ್ ಗಡಾಫಿಯ ಚಿತ್ರವನ್ನು ಮುಖಪುಟದಲ್ಲಿ ಬಳಸಿದ್ದರಿಂದ ಎರಡು ಟ್ಯಾಬ್ಲಾಯ್ಡಗಳಿಗೆ ಕ್ಷಮೆ ಕೋರುವಂತೆ ಮಾಡಲಾಯಿತು. `ಯುವ ರಕ್ಷಣೆ ವಿಚಾರಗಳನ್ನು ಉಲ್ಲಂಘಿಸಿದ ಅತಿರಂಜಿತ ನಿರೂಪಣೆ' ಎಂದು ಪತ್ರಿಕಾ ನಿಯಂತ್ರಕ ವ್ಯವಸ್ಥೆ ಚಾಟಿ ಬೀಸಿತ್ತು. ಅದೇ ಚಿತ್ರ ಬಹುತೇಕ ಬ್ರಿಟಿಷ್ ಪತ್ರಿಕೆಗಳಲ್ಲಿ ಮುಖಪುಟದಲ್ಲೇ ಪ್ರಕಟವಾಗಿತ್ತು.ಪತ್ರಿಕೋದ್ಯಮ ಅಕಾಡೆಮಿಕ್ ಪ್ರಬಂಧವಲ್ಲ. ತೀವ್ರ ಒತ್ತಡದಲ್ಲಿ ಅಲ್ಪಾವಧಿಯಲ್ಲಿ ಬರೆಯುವಂತಹದ್ದು. ತನಿಖಾ ಪತ್ರಿಕೋದ್ಯಮವಂತೂ ಕತ್ತಲಲ್ಲಿ ಮಂಕಾದ ಬ್ಯಾಟರಿ ಬೆಳಕು ಚೆಲ್ಲುವಂತಹದ್ದು. ಜನರು ತಪ್ಪು ಮಾಹಿತಿ ನೀಡಬಹುದು, ಸತ್ಯದ ಒಂದಷ್ಟು ಭಾಗ ಮಾತ್ರ ಹೇಳಬಹುದು ಅಥವಾ ಅವರೇ ತಪ್ಪು ತಿಳಿದುಕೊಂಡಿರಬಹುದು. ಕೆಲವೊಮ್ಮೆ ಸತ್ಯ ಬದಲಾಗುತ್ತದೆ. ಇದೇ ಸತ್ಯಸ್ಯಸತ್ಯ ಎಂದಿರುವುದಿಲ್ಲ. ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಅಕಿರಾ ಕುರೋಸಾವರ `ರಾಷೋಮನ್' ಚಿತ್ರ, ವರದಿಗಾರಿಕೆಯಲ್ಲಿ ಅಂತರ್ಗತವಾಗಿರುವ ವ್ಯಕ್ತಿನಿಷ್ಠ ಆಯಾಮವನ್ನು ಪರಿಣಾಮಕಾರಿಯಾಗಿ ಬಿಡಿಸಿಟ್ಟಿದೆ. ಕೊಲೆಯೊಂದರ ವರದಿ, ಸತ್ತವನ ಆತ್ಮ, ಅವನ ಹೆಂಡತಿ ಮತ್ತು ದರೋಡೆಕೋರನ ನಿರೂಪಣೆಗಳಲ್ಲಿ ಬೇರೆ ಬೇರೆಯೇ ಆಗಿರುತ್ತದೆ. ಇವು ಮೂರೂ ಕತೆಗಳು ತಮ್ಮದೇ ದೃಷ್ಟಿ, ಮನಸ್ಸಿನ ಸ್ಥಿತಿಯನ್ನು ಪ್ರತಿನಿಧಿಸುತ್ತವೆ. ಎಲ್ಲವೂ ವ್ಯಕ್ತಿನಿಷ್ಠ ನೆಲೆಯಲ್ಲಿ ಸತ್ಯವಾದದ್ದೇ. ಆದರೆ ವಸ್ತುನಿಷ್ಠ ವಾಸ್ತವ ಭಿನ್ನವಾಗಿರುತ್ತದೆ. ಸತ್ಯಕ್ಕೆ ಹಲವು ಮುಖಗಳಿರುತ್ತವೆ. ಈ ಎಲ್ಲವನ್ನೂ ಗ್ರಹಿಸಲು ಯತ್ನಿಸುವಂತಹದ್ದು ಬಹುಶಃ ಉತ್ತಮ ವರದಿಯಾಗಿರುತ್ತದೆ.ಇತ್ತೀಚಿನ 2013ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ 179 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನ ಪಡೆದಿದೆ. ಇಷ್ಟು ಕೆಳಗಿನ ಸ್ಥಾನಕ್ಕೆ ಕುಸಿಯಲು ಮುಖ್ಯ ಕಾರಣ ಅಂತರ್ಜಾಲ ಸೆನ್ಸಾರ್‌ಷಿಪ್ ಹಾಗೂ ಪತ್ರಕರ್ತರ ವಿರುದ್ಧದ ಹಿಂಸಾಚಾರಗಳಿಗೆ ಶಿಕ್ಷೆ ಇಲ್ಲದ ಸ್ಥಿತಿ ಹೆಚ್ಚಾಗುತ್ತಿರುವುದೇ ಕಾರಣವಾಗಿದೆ. ಬ್ರಿಟನ್‌ನ ಲೆವೆಸನ್ ವರದಿ ಭಾರತದಲ್ಲೂ ಅನುರಣನಗೊಳ್ಳಬಹುದೆಂಬ ಅಪಾಯವೂ ಇದೆ. ರಾಹುಲ್ ಗಾಂಧಿಯವರ ನೆಚ್ಚಿನ ಎಂಪಿ ಮೀನಾಕ್ಷಿ ನಟರಾಜನ್ ಅವರಂತೂ `ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಶಿಷ್ಟತೆ ಮತ್ತು ನಿಯಂತ್ರಣ ಮಸೂದೆ, 2012'ನ್ನು ಮಂಡಿಸಲು ಯತ್ನಿಸಿದ್ದರು. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಯಾವುದಾದರೂ ಘಟನೆಯ ವರದಿಗಾರಿಕೆಯನ್ನು ಬಹಿಷ್ಕರಿಸುವ ಅಧಿಕಾರವನ್ನು ಈ ಮಸೂದೆ ಒಳಗೊಂಡಿತ್ತು. ಸರ್ಕಾರದಿಂದ ನೇಮಕಗೊಳ್ಳುವ ನಿಯಂತ್ರಣ ಸಂಸ್ಥೆಯನ್ನೂ ಈ ಮಸೂದೆ ಸೃಷ್ಟಿಸಬಹುದಿತ್ತು. ಆದರೆ ಮಾಧ್ಯಮಗಳ ತೀವ್ರ ಪ್ರತಿರೋಧದ ನಂತರ ಈ ಮಸೂದೆಯನ್ನು ಹಿಂತೆಗೆದುಕೊಳ್ಳಲಾಯಿತು.ಕುಸಿಯುತ್ತಿರುವ ವೃತ್ತಪತ್ರಿಕೆಗಳ ಆರ್ಥಿಕತೆ ಹಾಗೂ ಅತಿರಂಜಿತ ಸುದ್ದಿಗಳ ಏರಿಕೆಯ ಈ ಕಾಲದಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. `ತಂತ್ರಜ್ಞಾನದಿಂದಾಗಿ ಖಾಸಗಿತನ ಹಾಗೂ ಪತ್ರಿಕೋದ್ಯಮ ವ್ಯಾಖ್ಯಾನಗಳು ಬದಲಾಗಿವೆ. ಎಲ್ಲಾ ಕಾಲದಲ್ಲೂ ಪೂರ್ಣ ಪತ್ರಿಕಾ ಸ್ವಾತಂತ್ರ್ಯ ಎಂಬುದಿಲ್ಲ. ಎಲ್ಲಾ ಸಮಾಜಗಳೂ ಸ್ವಾತಂತ್ರ್ಯ ಹಾಗೂ ಸಂಯಮದ ಸಮತೋಲನ ಸಾಧಿಸಬೇಕು' ಎಂಬುದು ಲಂಡನ್ ಸಿಟಿ ಯೂನಿವರ್ಸಿಟಿಯ ಪ್ರೊಫೆಸರ್ ಜಾರ್ಜ್ ಬ್ರೊಕ್ ಅಭಿಪ್ರಾಯ. ಬ್ಯಾಂಕಾಕ್‌ನಲ್ಲಿ ಇತ್ತೀಚೆಗೆ ನಡೆದ ವ್ಯಾನ್-ಇಫ್ರಾದ ವಿಶ್ವ ಸಂಪಾದಕರ ವೇದಿಕೆಯ ಸಮ್ಮೇಳನದಲ್ಲಿ `ಲೆವೆಸನ್ ನಂತರದ ಪತ್ರಿಕೋದ್ಯಮ ಬದುಕು' ಕುರಿತಂತೆ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು. ಇದೇ ಗೋಷ್ಠಿಯಲ್ಲಿ  ಮಾತನಾಡಿದ ಬ್ರಿಟನ್‌ನ ಎಥಿಕಲ್ ಜರ್ನಲಿಸಂ ನೆಟ್‌ವರ್ಕ್‌ನ ನಿರ್ದೇಶಕ ಐಡಾನ್ ವೈಟ್ ಅವರ ಪ್ರಕಾರ, ಪ್ರಜಾಸತ್ತೆಯ ಉನ್ನತ ಆದರ್ಶಗಳಿಗೆ ತಕ್ಕುದಾದ ಪತ್ರಿಕೋದ್ಯಮವನ್ನು ಕಾಪಾಡಿಕೊಳ್ಳುವುದಕ್ಕಾಗಿ ನೈತಿಕತೆಯ ಗುಣಮಟ್ಟವನ್ನು ಪುನರ್‌ವ್ಯಾಖ್ಯಾನಿಸಬೇಕಿದೆ. ಆದರೆ ಇದು ಅತ್ಯಂತ ಕ್ಲಿಷ್ಟವಾದ ಕೆಲಸ.  ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.