ಪರಿಸರ ಸಂಬಂಧಿ ಟಿಪ್ಪಣಿಗಳು

7

ಪರಿಸರ ಸಂಬಂಧಿ ಟಿಪ್ಪಣಿಗಳು

ಪ್ರಸನ್ನ
Published:
Updated:
ಪರಿಸರ ಸಂಬಂಧಿ ಟಿಪ್ಪಣಿಗಳು

ಮಾನವರು ತಾವೇ ತಮ್ಮ ಮೇಲೆ ಎಳೆದುಕೊಂಡಿರುವ ಪ್ರಾಕೃತಿಕ ಅನಾಹುತಗಳ ನಿವಾರಣೆಯ ಪ್ರಯತ್ನವನ್ನು ತಡವಾಗಿಯಾದರೂ ಸರಿ, ಆರಂಭಿಸಿರುವಂತೆ ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಅಂತಹ ಕೆಲವು ಪ್ರಯತ್ನಗಳ ಪ್ರಸ್ತಾಪವನ್ನು ಈ ಬಾರಿ ಮಾಡಲು ಬಯಸುತ್ತೇನೆ.

ಜೂನ್ 5 ಪರಿಸರ ದಿನವಾಗಿತ್ತು. ಅಂದು ಕರ್ನಾಟಕದಲ್ಲಿ ಹಲವು ರೀತಿಯ ಪರಿಸರ ಸಂಬಂಧಿ ಕಾರ್ಯಕ್ರಮಗಳು ನಡೆದವು. ಅವುಗಳಲ್ಲೆಲ್ಲ ವಿಶೇಷವಾದದ್ದು ಮಕ್ಕಳಿಂದ ಬೀಜದುಂಡೆಗಳನ್ನು ಮಾಡಿಸುವ ಕಾರ್ಯಕ್ರಮ. ಮರುಭೂಮೀಕರಣಗೊಳ್ಳುತ್ತಿರುವ ಕರ್ನಾಟಕದ ಬಯಲುಸೀಮೆಯ ಕುರುಚಲು ಕಾಡುಗಳಲ್ಲಿ ಬೀಜದುಂಡೆಗಳನ್ನು ಹರಡಿ ಮತ್ತೊಮ್ಮೆ ಹಸಿರು ಚಿಗುರುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ತುಮಕೂರಿನ ಸಿಗ್ನಾ ಸಂಘಟನೆ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಗಿಕಣ ಸಂಸ್ಥೆಗಳಲ್ಲಿ, ನನಗೆ ತಿಳಿದ ಮಟ್ಟಿಗೆ, ಶಾಲಾಮಕ್ಕಳು ಬೀಜದುಂಡೆಗಳನ್ನು ಮಾಡಿದರು. ಇನ್ನೂ ಅನೇಕ ಕಡೆ ಮಾಡಿದರು.

ಹಸಿರಿನ ಮರುಹುಟ್ಟುಗಾಗಿ ಜಪಾನಿನ ಕೃಷಿಸಂತ ಫುಕುವೋಕಾ ಸೂಚಿಸಿದ್ದ ಸರಳ ಪರಹಾರವಿದು, ಬೀಜದುಂಡೆ ಮಾಡುವುದು. ನೇರವಾಗಿ ಚೆಲ್ಲಿದರೆ ಬೀಜಗಳು ಮೊಳೆಯಲಾರವು. ತಿನ್ನಬಲ್ಲ ಬೀಜಗಳಾದರಂತೂ ಹಕ್ಕಿಗಳು ತಿಂದು ಬಿಡುತ್ತವೆ ಬೇರೆ. ಬೀಜದುಂಡೆಯಾದರೆ ಅಪರೂಪಕ್ಕೊಮ್ಮೆ ಮಳೆ ಬಿದ್ದಾಗ ಉಂಡೆ ನೆನೆಯುತ್ತದೆ.

ನೆನೆದ ಉಂಡೆಯು ತನ್ನ ಹಸಿತನ ಹಾಗೂ ಹಸಿಮಣ್ಣಿನ ರಕ್ಷಾ ಕವಚವನ್ನು ಬೀಜಕ್ಕೆ ನೀಡುತ್ತದೆ. ಹೀಗೆ ಕೆಲವು ದಿನಗಳ ಕಾಲವಾದರೂ ಸರಿ, ಆ ಪುಟ್ಟ ಮಣ್ಣಿನುಂಡೆಯು ಗರ್ಭದೋಪಾದಿಯಲ್ಲಿ ಬೀಜಕ್ಕೆ ಪೋಷಣೆ ನೀಡುತ್ತದೆ ಹಾಗೂ ಬೀಜ ಮೊಳೆಯಲಿಕ್ಕೆ ಸಹಾಯ ಮಾಡುತ್ತದೆ.

ಬೀಜದುಂಡೆ ಮಾಡುವ ವಿಧಾನ ಹೀಗಿದೆ. ರವೆಉಂಡೆ ಕಟ್ಟುವ ಹದಕ್ಕೆ ಫಲವತ್ತಾದ ಮಣ್ಣನ್ನು ಸಿದ್ಧಪಡಿಸಿಟ್ಟುಕೊಳ್ಳುವುದು. ಕಡಿಮೆ ಮಳೆಯಲ್ಲಿ ಬೆಳೆಯಬಲ್ಲ ಬೇವು, ಹುಣಿಸೆ, ಹೊಂಗೆ, ಜಾಲಿ ಇತ್ಯಾದಿ ಮರಗಳ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು. ರವೆಉಂಡೆ ಗಾತ್ರದ ಮಣ್ಣಿನುಂಡೆಗಳನ್ನು ಮಕ್ಕಳಿಂದ ಮಾಡಿಸಿ, ಒಂದೊಂದು ಉಂಡೆಯೊಳಗೆ ಒಂದೊಂದು ಬೀಜವನ್ನು ಹುಗಿಸಿ, ಉಂಡೆ ಬಿಗಿಮಾಡಿ, ಬಿಸಿಲಿನಲ್ಲಿ ಒಣಗಿಸುವುದು. ಉಂಡೆಗಳನ್ನೊಯ್ದು ಕುರುಚಲು ಕಾಡುಗಳಲ್ಲಿ ಮುಳ್ಳು ಪೊದೆಗಳ ನಡುವೆ ಚೆಲ್ಲಿ ಬರುವುದು.

ಬೀಜದುಂಡೆ ಮಾಡಿಸಲಿಕ್ಕೆ ಮಕ್ಕಳೇ ಏಕೆ ಎಂಬ ಪ್ರಶ್ನೆ ಏಳಬಹುದು. ಮಕ್ಕಳು ಮಣ್ಣಿನಲ್ಲಾಡಲು ಬಯಸುತ್ತವೆ. ಬಯಸಬೇಕು. ಮಣ್ಣಾಡಲಿಕ್ಕೆ ಹಿರಿಯರು ಬಿಡಬೇಕು. ಅದು ಸಹಜ. ದುರಂತವೆಂದರೆ ಇಂದಿನ ನಗರಗಳು ಮಣ್ಣನ್ನೇ ಇಲ್ಲವಾಗಿಸಿವೆ. ಅಥವಾ ಇರುವ ಮಣ್ಣನ್ನೆಲ್ಲ ವಿಷಕಾರಿಯಾಗಿಸಿವೆ. ಅಥವಾ, ಪ್ರತಿಷ್ಠೆಯ ಸಂಕೇತವೆಂದು ತಿಳಿದು ಮಣ್ಣಾಡಬಾರದೆಂದು ಮಕ್ಕಳನ್ನು ನಾವು ಗದರುತ್ತೇವೆ.

ರಾಗಿಕಣ ಸಂಸ್ಥೆಯಲ್ಲಿ ಮಕ್ಕಳು ಮಣ್ಣಾಡುವುದನ್ನು ಕಂಡೆ. ಅಲ್ಲಿನ ಕಾರ್ಯಕರ್ತರು ಮಣ್ಣಾಡಲಿಕ್ಕೆ ಬಿಡುತ್ತಿದ್ದರು, ಮೊದಲು ಮಗುವನ್ನು ತೋಟದೊಳಗೆ ಸುತ್ತಾಡಿಸಿಕೊಂಡು ಬರುತ್ತಿದ್ದರು. ಕೊಟ್ಟಿಗೆ, ತಿಪ್ಪೆ, ದನ– ಕರು, ಗಿಡ–ಮರ, ಹೂವು– ಹಣ್ಣುಗಳ ಪರಿಚಯ ಮಾಡಿಸಿಕೊಡುತ್ತಿದ್ದರು. ಮರಗಳ ಕೆಳಗೆ ಉದುರಿಬಿದ್ದಿರುವ ಬೀಜಗಳನ್ನು ಸಂಗ್ರಹಿಸುವಂತೆ ಮಗುವಿಗೆ ಪ್ರೋತ್ಸಾಹ ನೀಡುತ್ತಿದ್ದರು.

ಬೀಜ ಸಂಗ್ರಹಿಸುತ್ತಿರುವಾಗ ಮಗುವು ‘ಇದಾವ ಬೀಜ, ಇದೇನು ಮರ’ ಎಂಬಿತ್ಯಾದಿ ಪ್ರಶ್ನೆ ಕೇಳಲು ಶುರುಮಾಡಿದವು. ಕಾರ್ಯಕರ್ತರು ಅವುಗಳ ಕುತೂಹಲ ತಣಿಸಿದರು. ತೋಟದ ಟೂರು ಮುಗಿಸಿಬಂದ ಮಕ್ಕಳಿಗೆ ಬೀಜದುಂಡೆಗಳನ್ನು ಮಾಡಲು ಕಲಿಸಿದರು. ತಮ್ಮ ಪುಟ್ಟ ಪುಟ್ಟ ಕೈಗಳಿಂದ ಮಕ್ಕಳು ಮಣ್ಣಿನುಂಡೆ ಕಟ್ಟಿಕೊಟ್ಟವು. ಕಾರ್ಯಕರ್ತರು ಉಂಡೆ ಗಟ್ಟಿಗೊಳಿಸಿ ಒಣಗಲಿಕ್ಕೆ ಇಟ್ಟರು.

ರಾಗಿಕಣದಲ್ಲಿ ಪರಿಸರ ವಿಭಾಗದ ಜವಾಬ್ದಾರಿ ಹೊತ್ತಿರುವ ಚೊಕ್ಕಲಿಂಗಂ ಎಂಬ ಹಿರಿಯರು ನಗುನಗುತ್ತ ಹೀಗೆ ಹೇಳಿದರು: ‘ಬೀಜದುಂಡೆಗಳನ್ನು ಮಾಡುವುದು ಮಗುವಿಗೆ, ಸ್ಪೈಡರ್‌ಮ್ಯಾನ್ ಸಿನಿಮಾ ನೋಡುವುದಕ್ಕಿಂತಲೂ ಅಥವಾ ವೀಡಿಯೊಗೇಮ್ ಆಡುವುದಕ್ಕಿಂತಲೂ ಮಿಗಿಲಾದ ಆಟ. ಮಕ್ಕಳು ಬೀಜದುಂಡೆ ಮಾಡುತ್ತ ಸಂಭ್ರಮಿಸಿದ್ದನ್ನು ಸ್ವತಃ ನಾನೇ ಕಣ್ಣಾರೆ ನೋಡಿದೆ’.

ಕಳೆದೆರಡು ವರ್ಷಗಳಿಂದ ನಾವು ಭೀಕರ ಬರಗಾಲ ಅನುಭವಿಸಿದ್ದೇವೆ. ಈ ಕಾರಣದಿಂದಾಗಿ ಕನ್ನಡಿಗರಿಗೆ ಪರಿಸರ ಸಂಬಂಧಿಯಾದ ಮತ್ತೊಂದು ಅರಿವು ಮೂಡಿ ಬಂದಿರುವಂತೆ ಕಾಣುತ್ತಿದೆ. ಅದು, ಕೆರೆಗಳ ಹೂಳೆತ್ತುವುದು ಹಾಗೂ ಕೆರೆಗಳ ದುರಸ್ತಿ ಮಾಡುವುದು. ಕರ್ನಾಟಕದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ನೂರಾರು ಕೆರೆಗಳ ಹೂಳೆತ್ತಲಾಗಿದೆ. ಹೂಳೆತ್ತಬೇಕಾಗಿರುವ ಸಾವಿರಾರು ಕೆರೆಗಳು ಇನ್ನೂ ಬಾಕಿ ಇವೆ.

ಇದೊಂದು ಅಸಾಧಾರಣ ಬೆಳವಣಿಗೆ. ಸಾರ್ವಜನಿಕ ಕೆಲಸ ನನ್ನದಲ್ಲ ಎಂದು ಮೂಗುಮುರಿಯುತ್ತಿದ್ದ ಜನರೂ ಕೂಡ ಈ ಬಾರಿ ಸ್ವತಃ ನಿಂತು ಕೆರೆಗಳ ಕೆಲಸ ಮಾಡಿಸಿದ್ದಾರೆ. ಬಡವರು ಹಾಗೂ ಕೃಷಿಕಾರ್ಮಿಕರು ಕೇವಲ ಕೂಲಿಯಾಸೆಗೆ ಮಾಡದೆ, ತನ್ನೂರಿನ ಕೆಲಸವೆಂದು ತಿಳಿದು ಹುಮ್ಮಸ್ಸಿನಿಂದ ಕೆಲಸ ಮಾಡಿದ್ದಾರೆ.

ಸುಲಭಜೀವಿಗಳೂ ಹಲವು ಕಡೆಗಳಲ್ಲಿ ಕೈಜೋಡಿಸಿದ್ದಾರೆ. ಧನಸಹಾಯ ಮಾಡಿದ್ದಾರೆ, ಶ್ರಮದಾನ ಮಾಡಿದ್ದಾರೆ. ಸರ್ಕಾರವೂ ಕೈ ಜೋಡಿಸಿದೆ. ಭ್ರಷ್ಟ ರಾಜಕಾರಣ, ಕೊಲೆಗಳು, ಸುಲಿಗೆಗಳು ಮಾತ್ರವೇ ಸುದ್ದಿಯಾಗುತ್ತಿದ್ದವು. ಆದರೆ ಪತ್ರಿಕೆಗಳು ಹಾಗೂ ಪ್ರಸಾರ ಮಾಧ್ಯಮಗಳು ಈ ಬಾರಿ ರಚನಾತ್ಮಕ ಕೆಲಸಗಳನ್ನು ಉತ್ಸಾಹದಿಂದ ಪ್ರಚುರಪಡಿಸಿವೆ.

ಇವೆರಡು ಒಳಿತಿನ ಕೆಲಸಗಳಾದವು. ಕೆಡುಕನ್ನು ನಿಗ್ರಹಿಸುವುದು ಕೂಡ ರಚನಾತ್ಮಕ ಕಾರ್ಯವೇ ಸರಿ. ಅದನ್ನು ಮಾಡುವಲ್ಲಿ ನಾವು ಎಡವುತ್ತಿದ್ದೇವೆ. ಕೆಡುಕನ್ನು ಕೆಡುಕೆಂದು ಗ್ರಹಿಸುತ್ತಿಲ್ಲ. ಉದಾಹರಣೆಗೆ ಕೊಳವೆಬಾವಿಗಳನ್ನೇ ತೆಗೆದುಕೊಳ್ಳಿ. ಅಂತರ್ಜಲವೆಂಬ ಸಾಮಾಜಿಕ ಆಸ್ತಿಯನ್ನು ಖಾಸಗಿ ಆಸ್ತಿಯನ್ನಾಗಿಸಿದೆ ಕೊಳವೆಬಾವಿ. ಹಾಗಾಗಿ ಕೇವಲ ಕೆರೆಗಳ ಹೂಳೆತ್ತಿದರೆ ಏನು ಪ್ರಯೋಜನ?

ಕೊಳವೆಬಾವಿಗಳನ್ನು ನಿಯಂತ್ರಿಸಬೇಕು. ಎರ್ರಾಬಿರ್ರಿ ಕೊಳವೆಬಾವಿ ಕೊರೆಸುತ್ತಿರುವ ನಿರ್ಲಜ್ಜ ಜಮೀನುದಾರರು ಹಾಗೂ ನಾಚಿಕೆಬಿಟ್ಟ ಕಾರ್ಖಾನೆ ಮಾಲೀಕರನ್ನು ನಿಯಂತ್ರಿಸಬೇಕು. ಪ್ರಕೃತಿಯ ಫಲವಾದ, ಎಲ್ಲ ಜೀವಿಗಳಿಗೆ ದಕ್ಕಬೇಕಿರುವ ಫಲವಾದ ಅಂತರ್ಜಲವನ್ನು ಲಾಭದಾಸೆಗೆ ಬಲಿಬಿದ್ದು ಹಾಳುಗೆಡುವುತ್ತಿದ್ದಾರೆ ಇವರು. ನಿಯಂತ್ರಿಸುವ ಯೋಚನೆ ಸಹ ಬಂದಂತಿಲ್ಲ ಸರ್ಕಾರಗಳಿಗೆ. ಸಾರ್ವಜನಿಕ ಕುಡಿಯುವ ನೀರಿನ ಬಳಕೆಯ ಹೊರತು ಮಿಕ್ಕಾವ ಕೆಲಸಗಳಿಗೂ ಕೊಳವೆಬಾವಿ ತೋಡಿಸಬಾರದೆಂದು ಸರ್ಕಾರ ನಿರ್ಬಂಧ ಹೇರಬೇಕು. ಹೇರಬೇಕು ಮಾತ್ರವಲ್ಲ ಜಾರಿಗೆ ತರಬೇಕು.

ವ್ಯವಸಾಯ ವ್ಯಾಪಾರವಾಗಿದೆ ಇಂದು, ಸೋಲುವ ವ್ಯಾಪಾರ. ವ್ಯವಸಾಯದ ವ್ಯಾಪಾರೀಕರಣಕ್ಕೆ ದೊರಕಿರುವ ಮಾರಕಾಸ್ತ್ರ ಕೊಳವೆಬಾವಿಗಳು. ಆಯಾ ಪ್ರದೇಶದ ಭೂಮಿ ಹಾಗೂ ಹವಾಮಾನಗಳಿಗೆ ಹೊಂದಿಕೆಯಾಗದ ‘ಕಮರ್ಷಿಯಲ್’ ಬೆಳೆಗಳನ್ನು ಬೆಳೆಯಲು ಹೊರಟಿರುವ ರೈತನು ಅಸಹಜವಾಗಿ ನೀರುಣಿಸಿ ಅಸಹಜ ಬೆಳೆಗಳನ್ನು ಬೆಳೆಯತೊಡಗಿದ್ದಾನೆ. ಹೀಗೆ ಬೆಳೆಸಿದ ತೆಂಗು, ಅಡಕೆ, ಕಬ್ಬು, ದಾಳಿಂಬೆ, ದ್ರಾಕ್ಷಿ ತೋಟಗಳು ಈ ಬಾರಿ ಸುಟ್ಟು ಹೋಗಿವೆ. ತೆಂಗು ಹೆಡೆಮುರಿದು ಬಿದ್ದಿದೆ. ಅಡಕೆ ಕಮರಿ ಹೋಗಿದೆ. ಕಬ್ಬು ಒಣಗಿದೆ. ದಾಳಿಂಬೆ, ದ್ರಾಕ್ಷಿ ನೆಲಕಚ್ಚಿವೆ.

ವಿಪರೀತ ಈ ಬೇಸಾಯ ವಿಧಾನವನ್ನು ‘ತೀವ್ರ ಬೇಸಾಯ’ ಪದ್ಧತಿ (ಇನ್‌ಟೆನ್‌ಸಿವ್ ಆಗ್ರಿಕಲ್ಚರ್) ಎಂದು ಕರೆಯಲಾಗುತ್ತದೆ. ತೀವ್ರ ಬೇಸಾಯ! ಲಾಭದ ಆಸೆಗೆ ಬಲಿಬಿದ್ದು ವಿಪರೀತ ನೀರು, ವಿಪರೀತ ರಾಸಾಯನಿಕ ಗೊಬ್ಬರ, ವಿಪರೀತ ಕ್ರಿಮಿನಾಶಕ, ವಿಪರೀತ ಯಂತ್ರಗಳನ್ನು ಬಳಸಿ ಮಾಡುವ ಕೃಷಿ ವಿಧಾನವಿದು, ಕಳೆದ ಕೆಲವು ದಶಕಗಳಿಂದ ನಾವು ತಲೆಯ ಮೇಲೆ ಹೊತ್ತು ತಿರುಗುತ್ತಿರುವ ವಿಧಾನ.

ತೀವ್ರ ಬೇಸಾಯ ಎಂಬ ಹೆಸರೇ ವಿಚಿತ್ರ! ತೀವ್ರ ನಿಗಾ ಘಟಕ ತಲುಪುವುದೆಂದರೆ ಸಾವಿನ ಬಾಗಿಲು ಬಡಿಯುವುದು ಎಂದೇ ಅರ್ಥ. ಕೃಷಿಯೂ ತೀವ್ರ ವಿಧಾನಗಳನ್ನು ಬಳಸಿ ಸಾವಿನ ಬಾಗಿಲು ಬಡಿಯುತ್ತಿದೆ. ಹಾಗಾಗಿ ತೀವ್ರ ಬೇಸಾಯದ ತೀವ್ರತರ ನಿಯಂತ್ರಣವಾಗಬೇಕಿದೆ. ಈ ಬಗ್ಗೆ ಜನಚಳವಳಿಯೊಂದರ ಅಗತ್ಯವಿದೆ.

ಇನ್ನು, ಜೆ.ಸಿ.ಬಿ.ಗಳು ಹಾಗೂ ಆಳದುಳಿಮೆ ಮಾಡುವ ಯಾಂತ್ರಿಕ ನೇಗಿಲುಗಳು. ಇವುಗಳನ್ನು ಮಣ್ಣಿನ ಫಲವತ್ತತೆಯ ಶತ್ರುಗಳು ಎಂದೇ ಕರೆಯಬೇಕಾಗುತ್ತದೆ. ಲೇಖನದ ಆರಂಭದಲ್ಲಿ ನಾನು ಫುಕುವೋಕಾನ ಹೆಸರು ಹೇಳಿದೆ. ಆ ಮುದುಕ, ಎಲ್ಲಿಗೇ ಹೋಗಲಿ, ವಿದೇಶಕ್ಕೇ ಹೋಗಲಿ, ಮೊದಲು ಗಮನಿಸುತ್ತಿದ್ದದ್ದು ಅಲ್ಲಿನ ಮಣ್ಣನ್ನು. ಮರಗಳನ್ನಲ್ಲ, ಬೆಳೆಗಳನ್ನಲ್ಲ, ಕಟ್ಟಡಗಳು, ಕಾರ್ಖಾನೆಗಳು, ತಾಜಮಹಲು, ಐಫೆಲ್ ಟವರು ಯಾವುದನ್ನೂ ಅಲ್ಲ. ಮಣ್ಣಿನ ಆರೋಗ್ಯ ಗಮನಿಸುತ್ತಿದ್ದ ಆತ.

ವೈದ್ಯರು ನಾಡಿ ನೋಡುವುದಿಲ್ಲವೇ ಹಾಗೆ. ತನ್ನ ಮೂಲ ಗುಣದಲ್ಲಿ ಮಣ್ಣು, ಮನುಷ್ಯರಿಗಿಂತ ತದ್ವಿರುದ್ಧವಾದದ್ದು. ಮನುಷ್ಯರ ಜೀವ ದೇಹದ ಒಳಗಿದ್ದರೆ, ಮಣ್ಣಿನ ಜೀವ ಭೂಮಿಯ ಹೊರಗಿರುತ್ತದೆ. ಮಣ್ಣಿನ ಜೀವ ಮಿಡಿಯುವುದು ಮೇಲ್ ಮಣ್ಣಿನಲ್ಲಿ. ಮಣ್ಣು ಕೆದರುವುದು, ಕೆತ್ತುವುದು, ಕಡಿಯುವುದು, ಕೊಚ್ಚಿಕೊಂಡು ಹೋಗಲು ಬಿಡುವುದು, ಪಾಪವೇ ಸರಿ ಎನ್ನುತ್ತಿದ್ದ ಫುಕುವೋಕಾ. ಭೂಮಿಗೆ ನೇಗಿಲನ್ನೇ ತಾಗಿಸದೆ ಕೃಷಿ ಮಾಡಿದವ ಆತ!

ಇತ್ತೀಚೆಗೆ ನನಗೊಂದು ಪತ್ರ ಬಂತು. ಜೋಗದ ಜಲಪಾತವನ್ನು ಜನಪ್ರಿಯಗೊಳಿಸುವ ಒಂದು ಯೋಜನೆಯ ಬಗ್ಗೆ ಲೇಖಕರು ಪತ್ರದಲ್ಲಿ ಪ್ರಸ್ತಾಪಿಸಿ, ‘ಇದನ್ನು ಖಂಡಿಸಿ ಬರೆಯಿರಿ’ ಎಂದು ಬಿನ್ನವಿಸಿದ್ದಾರೆ. ಜೋಗದ ಗುಂಡಿಯಲ್ಲಿ ಬೇಸಿಗೆಯಲ್ಲಿ ಒಂದಿಷ್ಟು ನೀರು ನಿಂತಿರುತ್ತದೆ. ಅದನ್ನು ಮೇಲಕ್ಕೆತ್ತಿ ಮತ್ತೆ ಮತ್ತೆ ಕೆಳಕ್ಕೆ ಧುಮ್ಮಿಕ್ಕಿಸುವ ಯೋಜನೆಯಿದು!

ವಿದ್ಯುತ್ ಉತ್ಪಾದಿಸಲೆಂದೇ ಬಂದ್‌ ಮಾಡಿರುವ ಜಲಪಾತದ ನೀರನ್ನು, ಉತ್ಪಾದಿಸಿದ ವಿದ್ಯುತ್ ಬಳಸಿ ಜಲಪಾತವಾಗಿಸುವುದು! ಸಾವಿರಾರು ಅಡಿಗಳಷ್ಟು ಮೇಲಕ್ಕೆ ನೀರನ್ನು ಮತ್ತೆ ಮತ್ತೆ ಎತ್ತಿ ಮತ್ತೆ ಮತ್ತೆ ಕೆಳಚೆಲ್ಲುವ ಈ ಯೋಜನೆಯ ಮೂರ್ಖತೆಯನ್ನು ಎಷ್ಟು ತೆಗಳಿದರೂ ಸಾಲದು. ಇಂತಹ ಹಲವು ‘ಲಾಭದಾಯಕ’ ಮೂರ್ಖತನಗಳು ಸರ್ಕಾರದಲ್ಲಿ ಜಾರಿಗಾಗಿ ಕಾಯುತ್ತಿವೆ. ಎತ್ತಿನಹೊಳೆ ನೀರೆತ್ತುವುದು, ಪಾತಾಳಗಂಗೆ ಇತ್ಯಾದಿ.

ಆದರೆ ನಿಯಂತ್ರಣವೆಂಬುದು ಕೇವಲ ಸರ್ಕಾರಗಳ ಕೆಲಸವಲ್ಲ, ನಾವು ಸಹ ನಿಯಂತ್ರಿಸಿಕೊಳ್ಳಬೇಕಿದೆ ನಮ್ಮನ್ನು. ಉದಾಹರಣೆಗೆ ಬೆಂಕಿಯ ಬಳಕೆ. ಕೈಗಾರಿಕೆ ನಡೆಯುವುದೇ ಬೆಂಕಿ ಉರಿಸುವುದರಿಂದ. ಕಾರು, ಬಸ್ಸು, ರೈಲು, ವಿಮಾನ, ರಾಕೆಟ್ಟು ಎಲ್ಲ ಹಾರಾಡುವುದೇ ಬೆಂಕಿ ಉರಿಸುವುದರಿಂದ. ಕಸ ಉರಿಸುತ್ತೇವೆ ನಾವು, ಪ್ಲಾಸ್ಟಿಕ್ ಉರಿಸುತ್ತೇವೆ, ಬೆಳೆ ತೆಗೆದು ಕೂಳೆ ಉರಿಸುತ್ತೇವೆ, ಕಳೆ ಉರಿಸುತ್ತೇವೆ, ಕಾಡು ಉರಿಸುತ್ತೇವೆ, ಅಡುಗೆ ಮಾಡಿ ಇಂಧನ ಉರಿಸುತ್ತೇವೆ.

ಮನೆ ಬೆಚ್ಚಗಿಡಲಿಕ್ಕೆ, ಆಫೀಸು ತಣಿಸಲಿಕ್ಕೆ, ಹಗಲು ಬೆಳಗಲಿಕ್ಕೆ, ಇರುಳು ಕವಿಸಲಿಕ್ಕೆ... ಎಲ್ಲದಕ್ಕೂ ಉರಿಸುತ್ತೇವೆ. ಹಾಗೂ ಉರಿಯುತ್ತಿರುತ್ತೇವೆ! ಬೆಂಕಿಯುರಿಸಿ ಇಂಗಾಲಾಮ್ಲ ಆಕಾಶಕ್ಕೆ ಕಳಿಸಿ,  ಸುತ್ತಲ ವಾತಾವರಣದಲ್ಲಿ ಅದು ಜಮೆಯಾಗುವಂತೆ ಮಾಡಿ, ಪೃಥ್ವಿಯೇ ಬಿಸಿಯಾಗುವಂತೆ ಮಾಡಿದ್ದೇವೆ ನಾವು. ಎಷ್ಟೆಂದು ಸಹಿಸೀತು ಈ ಬೆಂಕಿಯಾಟವನ್ನು ಭೂಮಿ. ರೋಸಿ ಹೋಗಿದೆ ಅದು.

ಬೆಂಕಿಯುರಿಸಬೇಡಿ. ನೀರು ಚೆಲ್ಲಬೇಡಿ. ಭೂಮಿ ಅಗೆಯಬೇಡಿ. ಮರ ಕಡಿಯಬೇಡಿ. ಪ್ರಾಣಿಗಳನ್ನು ಕೊಲ್ಲಬೇಡಿ. ಯುದ್ಧ ಹೂಡಬೇಡಿ... ಇತ್ಯಾದಿ ಫುಕುವೋಕಾನಿಗೆ, ಆತನಿನ್ನೂ ಯವಕನಾಗಿದ್ದಾಗ, ಆದ ಜ್ಞಾನೋದಯ ಏನು ಗೊತ್ತೇ? ಬದುಕಿಗೆ ಏನೂ ಅರ್ಥವಿಲ್ಲ, ಇಲ್ಲದ ವಿಶೇಷ ಅರ್ಥವನ್ನು ಹುಡುಕಿ ಹುಡುಕಿ, ಹಿಡಿದು, ಬಲವಂತ ಹೇರಿ, ನಮ್ಮನ್ನು ನಾವೇ ಹಿಂಸಿಸಿಕೊಳ್ಳುತ್ತಿದ್ದೇವೆ ಜೊತೆಗೆ ಇತರರನ್ನೂ ಸಹ. ಸರಳವಾಗಿ ಬದುಕಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry