ಪರಿಹಾರದ ಹೋರಾಟಕ್ಕೆ ಬಹಿಷ್ಕಾರ ಮದ್ದಲ್ಲ

7

ಪರಿಹಾರದ ಹೋರಾಟಕ್ಕೆ ಬಹಿಷ್ಕಾರ ಮದ್ದಲ್ಲ

ಗೋಪಾಲ ಹೆಗಡೆ
Published:
Updated:

ಒಲಿಂಪಿಕ್ ಕ್ರೀಡೆಗಳಲ್ಲಿ ರಾಜಕೀಯವೂ ಹೊಸತಲ್ಲ, ವಿವಾದ ಮತ್ತು ಪ್ರತಿಭಟನೆಯೂ ಹೊಸತಲ್ಲ. 1980 (ಮಾಸ್ಕೊ) ಮತ್ತು 1984 (ಲಾಸ್ ಏಂಜಲಿಸ್) ರ ಒಲಿಂಪಿಕ್ ಕ್ರೀಡೆಗಳ 1,500 ಮೀಟರ್ಸ್ ಓಟದಲ್ಲಿ ಚಿನ್ನ ಹಾಗೂ 800 ಮೀಟರ್ಸ್ ಓಟದಲ್ಲಿ ರಜತ ಪದಕ ಗೆದ್ದಿದ್ದ ಬ್ರಿಟನ್ನಿನ ಸೆಬಾಸ್ಟಿಯನ್ ಕೋ ಅವರಿಗೆ `ಲಾರ್ಡ್~ ಗೌರವ ಪದವಿ ದಯಪಾಲಿಸಿ ಬಹಳ ದಿನಗಳಾದವು.

 

ಈ ವರ್ಷ ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡೆಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರೂ ಅವರೇ. ಅವರಿಗೀಗ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. 1984 ರ ಡಿಸೆಂಬರ್ 3 ರ ಮಧ್ಯರಾತ್ರಿ ಸಂಭವಿಸಿದ ಭೋಪಾಲ್ ಅನಿಲ ದುರಂತದಲ್ಲಿ ಮಡಿದವರು ಸಾವಿರಾರು ಜನ. ಆದರೆ ಬದುಕಿದ್ದರೂ ಸತ್ತಂತೆಯೇ ಇರುವ ಇನ್ನೂ ಹೆಚ್ಚಿನ ಜನರ ನೋವಿನ ಕೂಗು ಈಗ ಲಂಡನ್‌ನಲ್ಲಿ ಪ್ರತಿಧ್ವನಿಸುತ್ತಿದೆ.

 

ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿರುವ `ಡೌ ಕೆಮಿಕಲ್ಸ್~ ಸಂಸ್ಥೆ ಲಂಡನ್ ಒಲಿಂಪಿಕ್ ಕ್ರೀಡೆಗಳ ಪ್ರಾಯೋಜಕ ಸಂಸ್ಥೆಗಳಲ್ಲಿ ಒಂದಾಗಿರುವುದೇ ಇದಕ್ಕೆ ಕಾರಣ.ಕಳೆದ ಅಂದರೆ 2011 ರ ಡಿಸೆಂಬರ್ 2 ರಂದು ಭೋಪಾಲ್‌ನಲ್ಲಿ ಅನಿಲ ದುರಂತದ 27 ನೇ ವರ್ಷದ ಕರಾಳ ನೆನಪಿನ ಕಾರ್ಯಕ್ರಮದಲ್ಲಿ ಸೆಬಾಸ್ಟಿಯನ್ ಕೋ ಹಾಗೂ ಭಾರತ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯಕುಮಾರ್ ಮಲ್ಹೋತ್ರ ಅವರ ಪ್ರತಿಕೃತಿಗಳನ್ನು ಸುಡಲಾಯಿತು.

 

ದುರಂತ ಸಂಭವಿಸಿ ಇಷ್ಟು ವರ್ಷಗಳಾದರೂ ಜನರ ಸಮಸ್ಯೆಗಳು ಬಗೆಹರಿದಿಲ್ಲ. 20 ಸಾವಿರಕ್ಕೂ ಹೆಚ್ಚು ಜನರು ಅದರಲ್ಲಿ ಸತ್ತಿದ್ದರು. ಅನಿಲ ಸೋರಿಕೆ ಆರು ಲಕ್ಷ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿತ್ತು. ಆಸ್ಪತ್ರೆಗಳಲ್ಲಿ ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂಕ್ತ ಪರಿಹಾರವಿಲ್ಲದೇ ಕಣ್ಣುಮುಚ್ಚಿದವರೂ ಇದ್ದಾರೆ. ನರಳುತ್ತ ಬದುಕಿರುವವರಿಗೆ ಯೂನಿಯನ್ ಕಾರ್ಬೈಡ್ ಕೊಟ್ಟ ಪರಿಹಾರ ಚಿಲ್ಲರೆ. ಇದರ ವಿರುದ್ಧ ಜನರ ಹೋರಾಟ ಮುಂದುವರಿದೇ ಇದೆ.ಯೂನಿಯನ್ ಕಾರ್ಬೈಡ್ 1989 ರಲ್ಲಿ ಕೇವಲ 470 ದಶಲಕ್ಷ ಡಾಲರ್ ಪರಿಹಾರ ಕೊಟ್ಟಿತ್ತು. ಅಂದರೆ ಪ್ರತಿಯೊಬ್ಬರಿಗೆ ಸುಮಾರು ಒಂದು ಲಕ್ಷ ರೂಪಾಯಿ ಮಾತ್ರ ಸಿಕ್ಕಿತ್ತು. ಇದರ ಎರಡುಪಟ್ಟು ಪರಿಹಾರ ಬೇಕೆಂಬುದು ಭಾರತ ಸರ್ಕಾರದ ಬೇಡಿಕೆಯಾಗಿತ್ತು.ಹಗ್ಗಜಗ್ಗಾಟ ನಡೆದೇ ಇದೆ.  1999ರಲ್ಲಿ ಡೌ ಕೆಮಿಕಲ್ಸ್ ಕಂಪೆನಿ 9.3 ಶತಕೋಟಿ ಡಾಲರ್‌ಗಳಿಗೆ ಯೂನಿಯನ್ ಕಾರ್ಬೈಡ್ ಸಂಸ್ಥೆಯನ್ನು ಖರೀದಿಸಿತು. `ಅನಿಲ ದುರಂತಕ್ಕೂ ತಮಗೂ ಸಂಬಂಧವಿಲ್ಲ. ಅಲ್ಲದೇ ಕಾರ್ಮಿಕರ ವಿಧ್ವಂಸಕ ಕೃತ್ಯದಿಂದ ದುರಂತ ಸಂಭವಿಸಿತು. ಆದ್ದರಿಂದ ಕೊಡಬೇಕಾದ ಪರಿಹಾರವನ್ನು ಯೂನಿಯನ್ ಕಾರ್ಬೈಡ್ ಕೊಟ್ಟಿದೆ~ ಎಂದು ಡೌ ಅಧಿಕಾರಿಗಳು ವಾದಿಸುತ್ತಿದ್ದಾರೆ. ಸಮಸ್ಯೆ ಸುಲಭವಾಗಿ ಬಗೆಹರಿಯುವಂತೆ ಕಾಣುತ್ತಿಲ್ಲ.ಒಲಿಂಪಿಕ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಪ್ರಾಯೋಜಕತ್ವದಲ್ಲಿ ಡೌ ಕೆಮಿಕಲ್ಸ್ ಭಾಗಿಯಾಗಿದ್ದು ಬಹಳ  ತಡವಾಗಿ. ಕಳೆದ ಆಗಸ್ಟ್‌ನಲ್ಲಿ ಅದರ ಪ್ರಾಯೋಜಕತ್ವಕ್ಕೆ ಅಧಿಕೃತ ಮುದ್ರೆ ಬಿತ್ತು. ಲಂಡನ್‌ನಲ್ಲಿ ನಿರ್ಮಿಸಲಾಗುತ್ತಿರುವ 496 ದಶಲಕ್ಷ ಪೌಂಡ್ ವೆಚ್ಚದ ಒಲಿಂಪಿಕ್ ಕ್ರೀಡಾಂಗಣಕ್ಕೆ ಅಂದದ ಹೊದಿಕೆ (ಫ್ಯಾಬ್ರಿಕ್ ರ‌್ಯಾಪ್) ಹಾಕಲು ಏಳು ದಶಲಕ್ಷ ಪೌಂಡ್ ಹಣವನ್ನು ಡೌ ಕಂಪೆನಿ ಕೊಡಲಿದೆ. ಆರ್ಥಿಕ ಸಮಸ್ಯೆಯಿಂದಾಗಿ 2010 ರಲ್ಲಿ ಈ ಹೊದಿಕೆ ಹಾಕುವ ಯೋಜನೆಯನ್ನು ಕೈಬಿಡಲಾಗಿತ್ತು. ಒಲಿಂಪಿಕ್ ಬಜೆಟ್‌ನಲ್ಲೂ ಕಡಿತ ಮಾಡಲಾಗಿತ್ತು.

 

ಆದರೆ ಪ್ರಾಯೋಜಕರು ಸಿಕ್ಕರೆ ಹೊದಿಕೆ ಹಾಕಬಹುದು ಎಂದೂ ಹೇಳಲಾಗಿತ್ತು. 2011 ರ ಆಗಸ್ಟ್ 4 ರಂದು ಈ ಬಗ್ಗೆ ಒಪ್ಪಂದ ಆಯಿತು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಜೊತೆ ವಿವಿಧ ಕಾರ್ಯಕ್ರಮಗಳಿಗಾಗಿ 2020 ರ ವರೆಗೆ ಡೌ ಕಂಪೆನಿ 2010 ರಲ್ಲೇ ಒಪ್ಪಂದ ಮಾಡಿಕೊಂಡಿತ್ತು.ಇದರ ವಿರುದ್ಧ ಸಣ್ಣಪುಟ್ಟ ತಕರಾರುಗಳು ಬಂದಾಗ ಲಾರ್ಡ್ ಸೆಬಾಸ್ಟಿಯನ್ ಕೋ ಪ್ರಾಯೋಜಕತ್ವವನ್ನು ಸಮರ್ಥಿಸಿಕೊಂಡರು. 2011 ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ಸರ್ಕಾರ ಡೌ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಡೌ ಕಂಪೆನಿ ಪ್ರಾಯೋಜಕತ್ವ ಮುಂದುವರಿದರೆ ಭಾರತದ ಕ್ರೀಡಾಪಟುಗಳು ಲಂಡನ್ ಒಲಿಂಪಿಕ್ ಕ್ರೀಡೆಗಳನ್ನು ಬಹಿಷ್ಕರಿಸಬೇಕು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕರೆ ಕೊಟ್ಟರು.ಆದರೆ ಇದನ್ನು ಒಪ್ಪದ ಭಾರತ ಒಲಿಂಪಿಕ್ ಸಂಸ್ಥೆ ಬಹಿಷ್ಕಾರದ ಪ್ರಶ್ನೆಯೇ ಇಲ್ಲ ಎಂದು ಹೇಳಿತು. ಅದು ಸರಿಯಾದ ನಿಲುವೇ ಆಗಿತ್ತು. ಆದರೆ ಅದರ ಪರಿಣಾಮವಾಗಿ ಡಿಸೆಂಬರ್‌ನಲ್ಲಿ ಸೆಬಾಸ್ಟಿಯನ್ ಕೋ ಮತ್ತು ವಿಜಯಕುಮಾರ್ ಮಲ್ಹೋತ್ರ ಅವರ ಪ್ರತಿಕೃತಿ ದಹನ ಮಾಡಲಾಯಿತು.ಈ ವಿವಾದಕ್ಕೆ ಇನ್ನಷ್ಟು ಕಾವು ಮೂಡಿದ್ದು, ಕೆಲವು ದಿನಗಳ ಹಿಂದೆ, ಒಲಿಂಪಿಕ್ ಕ್ರೀಡೆಗಳ ನೀತಿಸಂಹಿತೆ ಸಮಿತಿ ಅಧ್ಯಕ್ಷೆ ಮೆರೆಡಿತ್ ಅಲೆಕ್ಸಾಂಡರ್ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ. ಭೋಪಾಲ್ ದುರಂತದಲ್ಲಿ ನೊಂದವರ ದನಿಗೆ ತಮ್ಮ ಬೆಂಬಲ ಇದೆ ಹಾಗೂ ಪರಿಹಾರದ ವಿಷಯದಲ್ಲಿ ಡೌ ಕಂಪೆನಿ ವಿರುದ್ಧ ಹೋರಾಟದಲ್ಲಿ ಅವರ ಕೈಜೋಡಿಸುತ್ತೇನೆ ಎಂದೂ ಅವರು ಹೇಳಿದರು. ಇವರ ಈ ನಿಲುವಿಗೆ ಇನ್ನೂ ಕೆಲವರು ಬೆಂಬಲವಾಗಿ ನಿಂತಿದ್ದಾರೆ. ಭಾರತ ಒಲಿಂಪಿಕ್ ಸಮಿತಿಯೂ ಈಗ ಡೌ ಕಂಪೆನಿಯನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ವ್ಯವಸ್ಥಾಪಕ ಸಮಿತಿ ಡೌ ಕಂಪೆನಿಯ ಪ್ರಾಯೋಜಕತ್ವವನ್ನು ತಿರಸ್ಕರಿಸುವುದಿಲ್ಲ ಎಂದು ಹೇಳಿದೆ.ಭಾರತ ಒಲಿಂಪಿಕ್ ಸಮಿತಿ ಜನರ ಹೋರಾಟಕ್ಕೆ ಬೆಂಬಲ ಸೂಚಿಸಬಹುದೇ ಹೊರತು ಬಹಿಷ್ಕಾರ ಹಾಕುವುದರಲ್ಲಿ ಅರ್ಥವಿಲ್ಲ. ಕ್ರೀಡಾಪಟುಗಳಿಗೂ ಈ ವಿವಾದಕ್ಕೂ ಸಂಬಂಧವೇ ಇಲ್ಲ. ಒಂದು ವೇಳೆ ಭಾರತದ ಕ್ರೀಡಾಪಟುಗಳು ಕ್ರೀಡೆಗಳನ್ನು ಬಹಿಷ್ಕರಿಸಿದರೂ ಅದರಿಂದ ಡೌ ಕಂಪೆನಿ ಮಣಿದು ಹೆಚ್ಚಿನ ಪರಿಹಾರ ಕೊಡುವುದೆಂದು ಹೇಳಲು ಆಗುವುದಿಲ್ಲ. ನಷ್ಟ ಆಗುವುದು ಭಾರತದ ಕ್ರೀಡಾಪಟುಗಳಿಗೆ.

 

ಅವರು ಒಲಿಂಪಿಕ್ ಕ್ರೀಡೆಗಳಲ್ಲಿ ಮಾಡಿರುವ ಶ್ರಮ ವ್ಯರ್ಥವಾಗುತ್ತದೆ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಒಲಿಂಪಿಕ್ ಕ್ರೀಡೆಗಳಲ್ಲಿ ಹಲವು ಸಲ ರಾಜಕೀಯ ಬೆರೆತಿದೆ. 1968 ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಕಪ್ಪು ಅಥ್ಲೀಟುಗಳ `ಕಪ್ಪು ಶಕ್ತಿ~ಯ ಪ್ರದರ್ಶನವಾಗಿ ಕೈಗೆ ಗ್ಲೌಸ್ ಧರಿಸಿ, ಬಿಗಿಮುಷ್ಟಿಯ ಸೆಲ್ಯೂಟ್‌ನೊಂದಿಗೆ ಪ್ರತಿಭಟಿಸಿದ್ದರು. ಅವರನ್ನು ಕ್ರೀಡೆಗಳಿಂದ ಕೂಡಲೇ ಹೊರಹಾಕಲಾಗಿತ್ತು.

 

ಅಫಘಾನಿಸ್ತಾನ ಮೇಲೆ ರಷ್ಯದ ದಾಳಿಯನ್ನು ವಿರೋಧಿಸಿ ಅಮೆರಿಕ, 1980 ರ ಮಾಸ್ಕೊ ಒಲಿಂಪಿಕ್ಸ್ ಬಹಿಷ್ಕರಿಸಿತ್ತು. ಅದಕ್ಕೆ ತಿರುಗೇಟಾಗಿ ರಷ್ಯ 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಬಹಿಷ್ಕರಿಸಿತ್ತು. 1972 ಮ್ಯುನಿಕ್ ಒಲಿಂಪಿಕ್ಸ್‌ನಲ್ಲಿ ಪ್ಯಾಲೆಸ್ಟೀನ್ ಉಗ್ರವಾದಿಗಳು ಅಥ್ಲೀಟುಗಳ ಗ್ರಾಮದೊಳಗೆ ನುಗ್ಗಿ 11 ಮಂದಿ ಇಸ್ರೇಲಿ ಅಥ್ಲೀಟುಗಳನ್ನು ಕೊಂದಿದ್ದರು.ಆದರೂ ಒಲಿಂಪಿಕ್ ಕ್ರೀಡೆಗಳಿಗೆ ಸರಿಸಾಟಿಯಾಗುವುದು ಯಾವುದೂ ಇಲ್ಲ. ಇಡೀ ಜಗತ್ತಿನ ರಾಜಕೀಯಕ್ಕೆ ಒಲಿಂಪಿಕ್ ಕ್ರೀಡೆಗಳು ಕನ್ನಡಿ ಹಿಡಿದರೂ, ವಿಶ್ವ ಜನರೆಲ್ಲ ಜಾತಿ, ಮತ, ಭಾಷೆಯ ಅಂಧಭಾವಗಳನ್ನು ಮರೆತು ಒಂದೆಡೆ ಸೇರುವ ಸ್ಥಳ ಒಲಿಂಪಿಕ್ಸ್ ಒಂದೇ. ಕೆಟ್ಟ ರಾಜಕೀಯದಲ್ಲೂ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಒಲಿಂಪಿಕ್ ಕ್ರೀಡೆಗಳಿಗಿದೆ.

 

ಭೋಪಾಲ್ ಅನಿಲ ದುರಂತದಂಥ ಅನಾಹುತ ವಿಶ್ವದಲ್ಲಿ ಇನ್ನೊಂದಾಗಿಲ್ಲ. ಅದರಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗೆ ಅಮೆರಿಕ ಮುಕ್ತಮನಸ್ಸಿನಿಂದ ಬರಬೇಕಿತ್ತು. ಆದರೆ ಯೂನಿಯನ್ ಕಾರ್ಬೈಡ್ ಸಂಸ್ಥೆ ಜನರ ನೋವಿಗೆ ಸ್ಪಂದಿಸಲಿಲ್ಲ.

 

ಸಾವಿರಾರು ಜನರ ಬದುಕು, ಭವಿಷ್ಯ ಹಾಳಾಗಿ ಹೋಗಿದೆ. ಈಗ ಒಲಿಂಪಿಕ್ ಕ್ರೀಡೆಗಳ ಪ್ರಾಯೋಜಕತ್ವದಲ್ಲಿ ಭಾಗಿಯಾಗಿರುವ ಡೌ ಕೆಮಿ ಕಲ್ಸ್ ಕಂಪೆನಿಯನ್ನು ವಿರೋಧಿಸುವುದರಲ್ಲಿ ಯಾವ ತಪ್ಪೂ ಇಲ್ಲ.

 

ಮಾನವತಾವಾದದಲ್ಲಿ ನಂಬಿಕೆ ಇರುವವರೆಲ್ಲ ಈ ಸಂದರ್ಭದಲ್ಲಿ ಡೌ ಕಂಪೆನಿ ಮೇಲೆ ಒತ್ತಡ ಹೇರಬೇಕು. ಕ್ರೀಡೆಗಳನ್ನು ಎದುರಿಗಿಟ್ಟುಕೊಂಡು ನೊಂದ ಜನರಿಗೆ ಸೂಕ್ತ ಪರಿಹಾರ ದೊರೆಯುವಂತೆ ಪ್ರಯತ್ನಿಸಬೇಕು. ಆದರೆ ಒಲಿಂಪಿಕ್ ಕ್ರೀಡೆಗಳನ್ನು ಬಹಿಷ್ಕರಿಸುವ ಮಾತು ಬರಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry