ಪರೀಕ್ಷಾ ಜ್ವರ

7

ಪರೀಕ್ಷಾ ಜ್ವರ

Published:
Updated:
ಪರೀಕ್ಷಾ ಜ್ವರ

ಪರೀಕ್ಷೆ ಎಂದರೆ ಸಾಕು ಎಂಥವರಿಗೂ ಚಳಿಜ್ವರ ಶುರುವಾಗುತ್ತೆ. ಇದು ಪರೀಕ್ಷೆ ಎಂಬ ಮಹಾ ಮಾರಿಗಿರುವ ಗತ್ತೋ, ತಾಕತ್ತೋ, ದೌರ್ಬಲ್ಯವೋ ಗೊತ್ತಿಲ್ಲ. ಪರೀಕ್ಷೆಗೆ ಸಂಪೂರ್ಣವಾಗಿ ತಯಾರಾದ ವಿದ್ಯಾರ್ಥಿಗಳು ಪರೀಕ್ಷೆಗೆ ಹೆದರೋದು ಕಮ್ಮಿ. ನೆಟ್ಟಗೆ ಓದದ, ಸೋಂಬೇರಿಗಳಿಗೆ ಮಾತ್ರ ಪರೀಕ್ಷೆ ಎಂಬ ಭೂತ ಚಳಿಜ್ವರ ಬಿಡಿಸಬಲ್ಲದು.ಮಕ್ಕಳಿಗೆ ಇಷ್ಟವಾಗದ ವಿಷಯವೆಂದರೆ ಅದು ಪರೀಕ್ಷೆಗಳೇ ಇರಬೇಕು.ಯಾಕೋ ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಶ್ರಮಪಟ್ಟು ಓದಬೇಕು ಎಂಬ ಮನೋಭಾವವೇ ಕಡಿಮೆಯಾಗುತ್ತಿದೆ. ಸ್ಫರ್ಧಾ ಮನೋಭಾವವೇ ಹೊರಟು ಹೋಗಿದೆ. ಇದಕ್ಕೆ ಯಾರ್ಯಾರು ಕಾರಣ ಎಂದು ಪಟ್ಟಿ ಮಾಡುತ್ತಾ ಹೋದರೆ ಬಹಳ ಜನ ಅಪರಾಧಿಗಳಾಗಿ ನಿಲ್ಲಬೇಕಾಗುತ್ತದೆ. ಕೆಲ ಮಕ್ಕಳಂತೂ ಸುಲಭವಾಗಿ ಪಾಸಾಗುವ ವಾಮಮಾರ್ಗಗಳು ಯಾವುದಾದರೂ ಇದ್ದಾವಾ ಎಂದು ಆಲೋಚಿಸುತ್ತಲೇ ಇರುತ್ತಾರೆ. ಶ್ರಮವಿಲ್ಲದೆ, ಹೆಚ್ಚು ರಿಸ್ಕ್‌ಗಳಿಲ್ಲದೆ ವಿದ್ಯೆಯನ್ನು ಪಡೆಯಬೇಕೆಂಬ ಇರಾದೆ ಇಂದಿನ ವಿದ್ಯಾರ್ಥಿಗಳಲ್ಲಿ  ಜಾಸ್ತಿಯಾಗುತ್ತಿದೆ.ಫಾಸ್ಟ್ ಫುಡ್ ರೀತಿಯಲ್ಲೇ ಎಲ್ಲವೂ ಫಾಸ್ಟ್ ಆಗಿ ಸಿಗಬೇಕೆಂಬ ಹಂಬಲಗಳು ಅವರ ಕಣ್ಣಿನಲ್ಲಿ ಮೂಡುತ್ತಿವೆ. ಹೀಗಾಗಿಯೇ, ‘ಪರೀಕ್ಷೆ ಸುಲಭವಾಗಿ ಪಾಸಾಗಲು ಯಾವುದಾದರೂ ಶಾರ್ಟ್ ಕಟ್ ರೂಟ್ ಇದೆಯಾ ಸಾರ್’ ಎಂದು ನಾಚಿಕೆ ಬಿಟ್ಟು ಕೇಳಿದವರಿದ್ದಾರೆ. ನಾವು ಅವರಿಗೆ ಸಿನಿಮಾ ಮಂದಿರಗಳ ಎದುರು ಬ್ಲಾಕ್ ಟಿಕೇಟ್ ಮಾರುವವರ ಥರ ಕಾಣುತ್ತೇವೋ ಏನೋ ಗೊತ್ತಿಲ್ಲ. ತಿರುಗಿ ಸೀರಿಯಸ್ಸಾಗಿ ಬೈದರೆ ಸುಮ್ನೆ ತಮಾಷೆಗೆ ಕೇಳಿದ್ದು ಸಾರ್. ಅದಕ್ಯಾಕೆ ಇಷ್ಟು ಟೆನ್ಷನ್ ಎಂದು ತಿಪ್ಪೆ ಸಾರಿಸಿ ಬಿಡುತ್ತಾರೆ. ಮೇಷ್ಟ್ರಿಗೆ ಇಂಥ ಹಗುರಪ್ರಶ್ನೆ ಹುಡುಗರು ಕೇಳಿರಲು ಸಾಧ್ಯವೇ ಎಂಬ ಗುಮಾನಿ ನಿಮ್ಮಲ್ಲಿ ಮೂಡಬಹುದು. ಇದು ನಮ್ಮಪ್ಪರಾಣೆ ನಿಜ. ವರ್ಷವಿಡೀ ಹಲ್ಲಂಡೆ ಹೊಡೆದು ಕಾಲಕಳೆದು ಕೊನೆಗಾಲಕ್ಕೆ ಬರುವ ಕೆಲ ವೀರಾಧಿವೀರರು ಮಾತ್ರ ಇಂಥ ಕೆಲಸಕ್ಕೆ ಬಾರದ ಕುಚೇಷ್ಟೆಯ ಪ್ರಶ್ನೆಗಳ ಕೇಳಿದ್ದಿದೆ. ಆಗ ನಮ್ಮಗಳ ಬಿ.ಪಿ ಏರಿದ್ದೂ ಇದೆ.ಪರೀಕ್ಷೆಗಳು ಶುರುವಾದ ಮೇಲೆ ಮತ್ತಷ್ಟು ರೋಚಕ ಸಂಗತಿಗಳು ನಡೆಯುತ್ತವೆ. ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದು ಕೂರುವ ಹಾಲೇ ನಮ್ಮ ಪಾಲಿಗೆ ಪುಟಾಣಿ ರಂಗ ಮಂದಿರ ಇದ್ದಂತೆ. ಆ ಮೂರು ಗಂಟೆಗಳ ಕಾಲ ಅವರನ್ನು ಕಾಯುವ ಕೆಲಸವೂ ಅಷ್ಟೇ ಬಲು ಬೋರಾಗಿರುತ್ತೆ.ಅವರ ಚಲನ ವಲನಗಳನ್ನು ಗುಮಾನಿ ಕಣ್ಣುಗಳಿಂದ ನೋಡುತ್ತಾ, ಅವರ ಫಜೀತಿ, ಒದ್ದಾಟಗಳನ್ನು ಗಮನಿಸುತ್ತಾ ಇರಬೇಕಾದ ಈ ಕೆಲಸ ನಮ್ಮ ಪಾಲಿಗೆ ಒಂದು ಹಿಂಸೆಯೂ ಹೌದು. ಇಲ್ಲಿ ಚೆನ್ನಾಗಿ ಓದಿಕೊಂಡು ಫುಲ್ ತಯಾರಾಗಿ ಬಂದ ಮಕ್ಕಳ ಲೋಕವೇ ಬೇರೆ ಇರುತ್ತೆ. ಅವರನ್ನು ಕಂಡರೆ ಗೌರವ, ಮಮತೆಗಳು ಉಕ್ಕಿ ಬರುತ್ತವೆ. ಅವರು ಇಹಲೋಕದ ಪರಿವೆಗಳನ್ನೇ ಮರೆತು ತಮ್ಮ ಬರವಣಿಗೆಯಲ್ಲಿ ಮುಳುಗಿ ಬಿಡುತ್ತಾರೆ. ಇವರ ಪಕ್ಕ ಬಾಂಬ್ ಸಿಡಿಸಿದರೂ ಇವರು ತಿರುಗಿ ನೋಡುವುದಿಲ್ಲ.ಅಂಥ ಏಕಾಗ್ರತೆ ಅವರದು. ಅಂಥ ಮಕ್ಕಳ ಶ್ರಮ, ಶ್ರದ್ಧೆ, ವಿನಯಗಳನ್ನು ಕಂಡಾಗ ಹೃದಯ ತೇವಗೊಳ್ಳುತ್ತದೆ. ಇನ್ನು ಕೆಲವರನ್ನು ಕಂಡಾಗ ನಮ್ಮ ಬಿ.ಪಿ. ಶುಗರ್‌ಗಳು ಏರುಪೇರಾಗಿದ್ದೂ ಇದೆ. ಅವು ಅಸಡ್ಡೆಯಿಂದ ಪರೀಕ್ಷೆಗೆ ತಯಾರಾಗಿ ಬರುವ ಭೂಪರದು. ಅವರ ಸಂಕಟ, ಯಾತನೆಗಳು ನೋಡಲು ಒಂಥರ ಮಜವೆನಿಸಿದರೂ, ನಮ್ಮೊಳಗಿನ ಜೀವಕ್ಕೆ ಬೇಸರವಾಗುತ್ತಿರುತ್ತದೆ. ಪರೀಕ್ಷೆಯ ಮೂರು ಗಂಟೆಯ ಅವಧಿ ಇವರ ಪಾಲಿಗೆ ಮೂವತ್ತು ವರ್ಷಗಳ ನರಕಕ್ಕೆ ಸಮಾನ.ಇವರ ತಲೆ ಖಾಲಿ ಇದೆ ಎಂಬುದು ನಮ್ಮ ಅನುಭವದ ತಲೆಗೆ ಗೊತ್ತಾಗಿ ಬಿಡುತ್ತದೆ. ಪರೀಕ್ಷೆ ಶುರುವಾದ ಅರ್ಧ ಗಂಟೆಯಲ್ಲೇ ಇವರು ಕೂತಲ್ಲೇ ನುಲಿಯುತ್ತಾರೆ. ಆಗಾಗ ಆಕಳಿಸುತ್ತಾರೆ. ಗಡಿಯಾರ ನೋಡುತ್ತಾರೆ. ಇನ್ನೂ ಕೆಲ ಸುಖಜೀವಿಗಳು ಸಟ್ಟೆಂದು ನಿದ್ರೆಗೂ ಜಾರಿ ಬಿಡುತ್ತಾರೆ. ಇಂಥ ಒತ್ತಡದ ಸಮಯದಲ್ಲೂ ಆ ಸುಖ ನಿದ್ರೆ ಹೇಗೆ ಬರುವುದೋ ಆ ದೇವರಿಗೇ ಗೊತ್ತು. ಮತ್ತೆ ಕೆಲವರು ನಡುನಡುವೆ ಲಟಿಕೆ ಮುರಿಯುತ್ತಾರೆ. ಕಳ್ಳರಂತೆ ಬಗ್ಗಿ ಅಕ್ಕಪಕ್ಕ ನೋಡುವ ದುಸ್ಸಾಹಸ ಮಾಡಿ ನಮ್ಮ ಕೈಲಿ ಉಗಿಸಿಕೊಳ್ಳುತ್ತಾರೆ.ಸನ್ನೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಹಪಹಪಿಸಿ ಸೋತು ಸಣ್ಣವರಾಗುವ ಇವರ ಒದ್ದಾಟವಂತೂ ನೋಡಲಿಕ್ಕೇ ಆಗುವುದಿಲ್ಲ. ಪೈಲ್ಸ್ ಪ್ರಾಬ್ಲಂ ಆದವರ ರೀತಿ ಕುಂತಲ್ಲೇ ಸಂಕಟ ಪಡುತ್ತಿರುತ್ತಾರೆ. ಇನ್ನು ಕಾಪಿ ಹೊಡೆದೇ ಪಾಸಾಗಬೇಕೆಂದು ಧೃಡ ನಿರ್ಧಾರ ಮಾಡಿ ಬರುವ ಕೆಲ ಮಕ್ಕಳಿಗೆ ತಮ್ಮ ಮಾನ ಮರ್ಯಾದೆಗಳ ಮೇಲೆ ಗ್ಯಾನವೇ ಇರುವುದಿಲ್ಲ. ಇವರು ಜಗಕ್ಕೇ ಭಂಡರು. ನಾವೆಷ್ಟೇ ಹದವಾಗಿ ಎಚ್ಚರಿಸಿದರೂ ಗುರ್ ಎಂದು ಗದರಿಸಿದರೂ, ಹುಲಿಯಂತೆ ಆರ್ಭಟಿಸಿದರೂ ಕೊನೆಗೆ ಸಾಕಾಗಿ ಬೈದರೂ ಇವರು ಜಪ್ಪಯ್ಯ ಎನ್ನುವುದಿಲ್ಲ.‘ನಾ ಲಜ್ಜಾ, ನಾ ಭಯಂ’ ಎಂಬ ಊರಿನ ಗಿರಾಕಿಗಳಿವರು. ಇಂಥವರಿರುವ ಪರೀಕ್ಷಾ ಕೊಠಡಿಯನ್ನು ಕಾಯುವ ಕೆಲಸ ಅಷ್ಟು ಸುಲಭದಲ್ಲ. ನಮಗೇ ಆಟ ಆಡಿಸಿ ಕೈ ಬಿಡುವಷ್ಟು  ಇವರು ಚಾಣಾಕ್ಷರಿರುತ್ತಾರೆ. ಇವರಿಗೆ ಏನೇ ಸೂಚನೆ ಕೊಡುವುದಿದ್ದರೂ ಅದನ್ನು ಬಲು ಸಂಯಮದಿಂದ ಹೇಳಬೇಕಾಗುತ್ತದೆ. ಇವರ ದೆಸೆಯಿಂದ ಪರೀಕ್ಷೆ ಬರೆಯುವ ಬೇರೆ ಹುಡುಗರಿಗೆ ತೊಂದರೆಯಾಗಬಾರದಲ್ಲಾ? ಹೀಗಾಗಿ, ಬಹಳಷ್ಟು ಸಲ ಸಂಜ್ಞೆಯ ಮೂಲಕವೇ ಎಚ್ಚರಿಸುತ್ತೇವೆ. ಮೂಕ ಭಾಷೆಯಲ್ಲಿ ತಾಕೀತನ್ನೂ ಮಾಡುತ್ತೇವೆ. ಇದ್ಯಾವುದಕ್ಕೂ ಕಾಪಿ ಗಿರಾಕಿಗಳು ಸೊಪ್ಪೇ ಹಾಕದಿದ್ದಾಗ ಒಂದಿಷ್ಟಾದರೂ ನಾವುಎಗರಾಡಲೇಬೇಕಲ್ಲವೆ?  ವರ್ಷವಿಡೀ ಪಾಠ ಕೇಳಿದ ನಮ್ಮ ಮಕ್ಕಳಿಗೆ ಪರೀಕ್ಷೆಯ ದಿನ ನಾವೇ ಪೊಲೀಸರಂತೆ ನಿಂತು ಕಾವಲು ಕಾಯುವುದು ಒಂಥರ ವಿಚಿತ್ರವೆನಿಸುತ್ತದೆ. ಆ ದಿನ ಮಾತ್ರ ನಾವು ಅವರನ್ನು ಅನುಮಾನದ ಕಣ್ಣುಗಳಿಂದ ನೋಡುತ್ತೇವೆ. ಅವರು ಕಳ್ಳರೇನೋ ಎನ್ನುವಂತೆ ಕಾಯುತ್ತೇವೆ. ಒಂದು ಸಣ್ಣ ಭಯದಲ್ಲಿಟ್ಟು ಪರೀಕ್ಷೆ ಬರೆಯಿರಿ ಎನ್ನುತ್ತೇವೆ. ಮಕ್ಕಳ ಮನಸ್ಸು ಆ ಪರೀಕ್ಷೆಯ ದಿನ ತಲ್ಲಣದಿಂದ ಹೊಯ್ದಾಡುತ್ತಿರುತ್ತದೆ.ಅವುಗಳ ಮುಖದಲ್ಲಿ ಆ ದಿನ ಭಯ ಬಿಟ್ಟರೆ ಮತ್ತೇನೂ ಕಾಣುವುದಿಲ್ಲ. ಎಷ್ಟೋ ಮಕ್ಕಳು ಬರುವ ಅವಸರದಲ್ಲಿ ಪ್ರವೇಶಪತ್ರವನ್ನೇ ಮರೆತು ಬಂದಿರುತ್ತವೆ. ಪೆನ್ನು, ಸ್ಕೇಲು ಬಿಟ್ಟು ಬಂದಿರುತ್ತವೆ. ನೆಟ್ಟಗೆ ತಿಂಡಿಯೂ ತಿನ್ನದೆ, ಹಿಂದಿನ ದಿನ ರಾತ್ರಿ ನೆಟ್ಟಗೆ  ನಿದ್ದೆಯೂ ಮಾಡದೆ ಓದಿಕೊಂಡು ಓಡೋಡಿ ಬಂದಿರುತ್ತವೆ. ತಡವಾಗಿ ಬಂದರಂತೂ ಥರಥರ ನಡುಗುತ್ತಿರುತ್ತವೆ. ಆ ಸಮಯದಲ್ಲಿ ಅವರಲ್ಲಿ ಮೂಡುವ ಭಯ, ಗೊಂದಲ, ಆತಂಕಗಳನ್ನು ಕಂಡಾಗ ಅಯ್ಯೋ ಎನ್ನಿಸುತ್ತದೆ.ಎಷ್ಟೋ ಮಕ್ಕಳು ಪರೀಕ್ಷಾ ಹಾಲಿನಲ್ಲಿ ಹೆದರಿ ಮೂರ್ಛೆ ಹೋಗಿರುವುದನ್ನೂ, ಹೆದರಿ ಒಂದು, ಎರಡು, ಮಾಡಿಕೊಂಡಿರುವುದನ್ನೂ ನಾನು ನೋಡಿದ್ದೇನೆ. ಮಕ್ಕಳು ಹೆದರದಂಥ ಪರೀಕ್ಷೆಯನ್ನು ನಡೆಸುವುದು ನಮಗ್ಯಾಕೋ ಇಲ್ಲೀ ತನಕವೂ ಸಾಧ್ಯವಾಗಿಲ್ಲ. ವಿದ್ಯಾರ್ಥಿ ಬುದ್ಧಿವಂತನೋ, ದಡ್ಡನೋ ಎಂದು ತೀರ್ಮಾನಿಸುವ ನಮ್ಮ ಈಗಿರುವ ಪರೀಕ್ಷಾ ಪದ್ಧತಿಗಳೂ ಅಷ್ಟು ಸರಿಯಾಗಿಲ್ಲ. ಎಷ್ಟೋ ಸಲ ಎಲ್ಲಾ ಚೆನ್ನಾಗಿ ಬಲ್ಲ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ತನ್ನ ಜಾಣ್ಮೆಯನ್ನು ನಿರೂಪಿಸಲು ಸಾಧ್ಯವಾಗದೆ ವಿಫಲನೂ ಆಗಬಹುದು.ಅರ್ಧಂಬರ್ಧ ಸಿದ್ಧವಾಗಿ ಬಂದವನು ಬರೆಯುವ ಜಾಣ್ಮೆ ಅರಿತು ಧೈರ್ಯದಿಂದ ಸಫಲನೂ ಆಗಬಹುದು. ಮಕ್ಕಳಿಗೆ ಕಾಡಿಸುವ ಹೆದರಿಕೆಯನ್ನು ದೂರ ಮಾಡುವ ಪರೀಕ್ಷೆಗಳು ಯಾವಾಗ ಬರಬಹುದು!  ಕೆಲ ಮಕ್ಕಳೇ ಹಾಗೆ. ಅವುಗಳ ಓದು ಚೆನ್ನಾಗಿದ್ದರೂ, ಜ್ಞಾಪಕಶಕ್ತಿ ಚುರುಕಾಗಿರುವುದಿಲ್ಲ. ಉತ್ತರಗಳನ್ನು ನೀಟಾಗಿ ತಲೆಯಲ್ಲಿ ಜೋಡಿಸಿಟ್ಟುಕೊಳ್ಳುವ ವಿಧಾನಗಳು ಅವರಿಗೆ ಗೊತ್ತಿರುವುದಿಲ್ಲ. ಕೆಲ ಮಕ್ಕಳಿಗೆ ನೀವೇನೇ ಪ್ರಶ್ನೆ ಕೇಳಿ. ಪಟಪಟಾಂತ ಬಾಯಲ್ಲಿ ಉತ್ತರ ಹೇಳಬಲ್ಲವು.ಅದನ್ನೇ ನೀವು ಬರೆದು ತೋರಿಸಿ ಎಂದಾಗ ಠುಸ್ ಎಂದು ಬಿಡುತ್ತವೆ. ಬಾಯಿ ಪಾಠದಲ್ಲಿ ಪ್ರವೀಣರಾದ ಮಕ್ಕಳು ಈಗಿನ ಪರೀಕ್ಷಾ ಪದ್ಧತಿಗಳಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಇಂದಿನ ಪರೀಕ್ಷೆಗಳ ಮರ್ಮವನ್ನು ನೆಟ್ಟಗೆ ಅರಿಯದ ಎಷ್ಟೋ ಜ್ಞಾನವಂತ ಮಕ್ಕಳು ಸಫಲರಾಗಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಫೇಲ್ ಎಂಬ ಅವಮಾನದ ಮಡಿಲಲ್ಲಿ ಮಲಗಿ ಬಿಟ್ಟಿದ್ದಾವೆ.  ಪರೀಕ್ಷೆ ಹಾಲಿನಲ್ಲಿ ನಮಗೆ ಚೆನ್ನಾಗಿ ಓದಿಕೊಂಡು ಬಂದ ಹುಡುಗರ್ಯಾರು, ಓದದೆ ಹಾಗೆ ಕೈ ಬೀಸಿಕೊಂಡು ಬಂದ ಕಲಾವಿದರ್ಯಾರು ಅನ್ನೋದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ.  ಮೊದಲೇ ಹೇಳಿದ ಹಾಗೆ ಓದಿಕೊಂಡು ಬಂದ ಹುಡುಗರು ತನ್ಮಯತೆಯಿಂದ ಬರವಣಿಗೆಯಲ್ಲಿ ಮುಳುಗಿ ಹೋಗಿ ಬಿಡುತ್ತವೆ. ಅದರಲ್ಲಿ ಅರೆಬರೆ ಗಿರಾಕಿಗಳು ಮಾತ್ರ ಟೈಮ್ ಪಾಸ್ ಮಾಡುತ್ತಾ, ನಮಗೆ ಉಚಿತ ಮನರಂಜನೆ ನೀಡುತ್ತಿರುತ್ತವೆ. ಕತ್ತು ಮುರಿಯುವುದು, ಕಣ್ಣು ಉಜ್ಜುತ್ತಾ ಕೂರುವುದು, ಕೈಬೆರಳು ನೋಡುತ್ತಾ ಇರುವುದು, ಉಗುರುಗಳನ್ನು ಕಚ್ಚಿ ಜಗಿಯುತ್ತಾ ಉಗಿಯುವುದು, ಕಣ್ಣುಗಳನ್ನು ಅತ್ತಿತ್ತ ಹಾಯಿಸುತ್ತಾ ಒದ್ದಾಡುವುದು, ತಲೆ ಚಚ್ಚಿಕೊಳ್ಳುವುದು, ಆಕಳಿಸಿ, ತೂಕಡಿಸಿ, ಸಾಕಾದಾಗ ಉತ್ತರ ಬರೆಯುತ್ತಾ ಇರುವ ಹುಡುಗ ಹುಡುಗಿಯರನ್ನು ನೋಡುತ್ತಾ ಕೂರುವ ಬೇಕಾರ್ ಕೆಲಸಗಳನ್ನು ಮಾಡುತ್ತಾ ಕೂತು ಬಿಡುತ್ತಾರೆ. ಇನ್ನೂ ಕೆಲವರಿಗಂತೋ ಅಬ್ಬಬ್ಬಾ! ಸಿಕ್ಕಾಪಟ್ಟೆ ಟೈಮಿರುತ್ತದೆ.ಇಂಥ ಸಜ್ಜನರು ಗಣಿಗಾರಿಕೆ ಶುರುಮಾಡಿಕೊಳ್ಳುತ್ತಾರೆ. ತೆರೆದ ಮೂಗಿನೊಳಗೆ ಜೆ.ಸಿ.ಬಿ ಮಾದರಿಯ ತಮ್ಮ ತೋರು ಬೆರಳನ್ನು ತೂರಿಸಿ ಕಸ, ಮುಸುರೆ ತೆಗೆಯುವ ಕೆಲಸವೇ ಗಣಿಗಾರಿಕೆ. ಕಾಪಿ ಕೇಸಿನ ಮಕ್ಕಳಿಗೆ ನಾವು ಕಾವಲು ಕಾಯುವುದು ಇಷ್ಟವಾಗುವುದಿಲ್ಲ. ನಾವು ನಮ್ಮ ಪಾಲಿನ ಪರೀಕ್ಷಾ ರೂಮನ್ನು ತೊರೆದು ಒಂದು ಹತ್ತು ನಿಮಿಷ ಎಲ್ಲಿಗಾದರೂ ತೊಲಗಿ ಹೋಗಲಿ ಎಂದೇ ಅವು ಕಾಯುತ್ತಿರುತ್ತಾರೆ. ನಾವು ಸುಮ್ಮನೆ ರೂಮಿನಿಂದ ಹೊರಗೆ ಹೋಗುವಂತೆ ಮಾಡಿದರೂ ಸಾಕು ಅಷ್ಟರೊಳಗೇ ಛಕಾರಂಥ ತಿರುಗಿ ಉತ್ತರಕ್ಕಾಗಿ ಅಲ್ಲಲ್ಲಿ ಭಿಕ್ಷೆ ಬೇಡುತ್ತಿರುತ್ತವೆ.ಇಂಥ ಆಸಾಮಿಗಳು ಉತ್ತರ ಬರೆಯುವ ಜಾಗವನ್ನು ಖಾಲಿ ಬಿಟ್ಟುಕೊಂಡು ಚಾತಕಪಕ್ಷಿಗಳಂತೆ ಕಾಯುತ್ತಿರುತ್ತವೆ. ಶನಿಗಳಂತೆ ಕಾವಲಿಗೆ ನಿಂತ ನಾವು ಅವರಿಗೆ ಕಂಟಕವಾಗಿರುತ್ತೇವೆ. ಆ ಸಂದರ್ಭದಲ್ಲಿ ಇವರ ಮುಲುಕಾಟ, ಹೆರಿಗೆ ನೋವನ್ನೂ ಮೀರಿಸುವ ಸಂಕಟ, ಚಡ್ಡಿಯಲ್ಲಿ ಭೇದಿ ಮಾಡಿಕೊಂಡವರಂತೆ ನುಲಿಯುವ ಅವರ ಆ ಪರಿ ನೋಡಲು ನೂರು ಕಣ್ಣಿದ್ದರೂ ಸಾಲದು.  ಇನ್ನು ಕೆಲವರು ಪೆನ್ನಿನ ಕ್ಯಾಪುಗಳನ್ನು ನಾಯಿ ಮೂಳೆ ಚಪ್ಪರಿಸುವಂತೆ ಕಚಪಚ ಎಂದು ಜಗಿಯುತ್ತಿರುತ್ತಾರೆ. ಇಲ್ಲಾ ಕೈ ಮೇಲೆ ಚಿತ್ರ ಬಿಡಿಸುತ್ತಾ ಸಮಯ ದೂಡುತ್ತಾರೆ. ಕೆಲ ಕುರಿಗಳು ಆಕಾಶ ನೋಡುತ್ತಾ ಇರುತ್ತವೆ. ನಾವು ಅವರನ್ನು ದುರುದುರು ನೋಡಿದ ತಕ್ಷಣ ಓಹೋ ಈಗ ಹೊಳೀತು ಉತ್ತರ ಎನ್ನುವಂತೆ ನಾಟಕೀಯವಾಗಿ ಏನೇನೋ ಬರೆಯಲು ಹೋಗಿ ಸುಮ್ಮನಾಗುತ್ತವೆ. ಉತ್ತರ ಪತ್ರಿಕೆ ನೋಡಿದರೆ ಅಲ್ಲಿ ಎಂಥ ಮಣ್ಣಂಗಟ್ಟೆಯೂ ಮೂಡಿರುವುದಿಲ್ಲ. ಬರೆಯುವಂತೆ ಸುಮ್ಮನೆ ನಾಟಕ ಜಡಿಯುತ್ತಿರುತ್ತವೆ. ಕೆಲ ಸುಖಪುರುಷರು ನಮ್ಮಿಂದ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಪಡಕೊಂಡ ಮೇಲೆ ಆಕಳಿಸಿ, ಮೈ ಮುರಿದು ನೈಟ್‌ಶಿಫ್ಟ್ ಡ್ಯೂಟಿ ಮಾಡಿ ಬಂದವರಂತೆ ಸಖತ್ತಾಗಿ ನಿದ್ದೆ ಬಾರಿಸುತ್ತವೆ. ಕೊನೆಯ ಬೆಲ್ ಢಣ್ ಎಂದಾಗಲೇ ಅವರಿಗೆ ಎಚ್ಚರವಾಗುವುದು. ನಾವು ಯಾಕಪ್ಪ ನೀನು ಮಲಗಿದ್ದೀಯಾ ಎಂದೂ ಅವರನ್ನು ಕೇಳುವಂತಿಲ್ಲ. ಕೇಳಿದರೆ ರೆಸ್ಟ್ ಎನ್ನುತ್ತಾನೆ. ಪರೀಕ್ಷೆಯ ಫುಲ್ ಫೀಜು ಕಟ್ಟಿಲ್ಲವೇ ಎಂದೂ ಕೇಳಬಹುದು. ಆತ ಕಾಪಿ ಮಾಡದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಡ್ಯೂಟಿಯೇ ಹೊರತು ಅವನ ನಿದ್ದೆಗೆ ನಾವು ತೊಂದರೆ ಕೊಡುವಂತಿಲ್ಲ.ಅಕಸ್ಮಾತ್ ಈ ಮಧ್ಯದಲ್ಲಿ ಇವರ ನಿದ್ರೆ ಎಚ್ಚರವಾಗಿ ಬಿಟ್ಟರೆ ಆಗ ಕೇಳುವುದು ಒಂದೇ ಪ್ರಶ್ನೆ. ‘ಟೈಮ್ ಎಷ್ಟಾಯಿತು ಸಾರ್’ ಎಂದು. ಇನ್ನೂ ಟೈಮಿದೆ ಕಣಪ್ಪ ಎಂದಾಗ ‘ಅಯ್ಯೋ ಇನ್ನೆಷ್ಟು ಹೊತ್ತಿದೆ ಸಾರ್’ ಎಂದು ಆಕಳಿಸಿ, ಜಿಗುಪ್ಸೆ ಮುಖದಲ್ಲೇ ಮತ್ತೆ ನಿದ್ದೆಗೆ ಜಾರುತ್ತಾರೆ. ಪರೀಕ್ಷಾ ಹಾಲಿನಲ್ಲಿ ನಾವು ತಂಬಾ ಸ್ಟ್ರಿಕ್ಟ್ ಆಗಿದ್ದು, ಕಾಪಿ ಹೊಡೆಯಲು, ಅತ್ತಿತ್ತ ತಿರುಗಿ ಮಾತಾಡಿಕೊಳ್ಳಲು ಅವಕಾಶವೇ ಕೊಡದಂತೆ ಕರಾರುವಕ್ಕಾಗಿ ಕಾದರೆ ಪರೀಕ್ಷೆ ಮುಗಿದ ಮೇಲೆ, ಥೂ... ನಮಗೊಬ್ಬ ಬಲು ಸ್ಟ್ರಿಕ್ಟ್ ನನ್ಮಗ ರೂಮ್ ಸೂಪರ್‌ವೈಸಾಗಿ ಬಿದ್ದಿದ್ದ ಕಣೋ.ಒಂಚೂರು ಕಾಪಿ ಹೊಡೆಯೋಕೆ ಬಿಡಲಿಲ್ಲ ಎಂದು ವಾಚಾಮಗೋಚರ ನಮ್ಮನ್ನು ಸ್ಮರಿಸಿಕೊಂಡೇ ಹೋಗುತ್ತಾರೆ. ಕಳ್ಳ ನೋಟದಲ್ಲಿ ಪದೇಪದೇ ಸುತ್ತಮುತ್ತ ಕಣ್ಣಾಡಿಸುವ, ಕಳ್ಳಾಟದ ಹುಡುಗರಿಗೆ ಎಚ್ಚರಿಸಿದಾಗ ಮುಖ ಬಾಡಿಸಿಕೊಳ್ಳುತ್ತವೆ. ಕೆಲವರಿಗೆ ಎಷ್ಟೇ ಜೋರು ಮಾಡಿದರೂ ಉತ್ತರಕ್ಕಾಗಿ ಹುಡುಕಾಡುವ ತಮ್ಮ ಶಿಕಾರಿ ದಂಧೆಯನ್ನು ಅವು ನಿಲ್ಲಿಸುವುದೇ ಇಲ್ಲ. ಭಂಡತನಕ್ಕೆ ಬಿದ್ದಾದರೂ ತಮ್ಮ ಬೇಟೆ ಮುಂದುವರೆಸುತ್ತಾರೆ. ಒಟ್ಟಿನಲ್ಲಿ ಅವರಿಗೆ ಉತ್ತರ ಬೇಕು. ಹಂಗೇ ಬಿಟ್ಟರೆ ಕಾಪಿಗಾಗಿ ಮೂರು ಗಂಟೆಯೇನು ಮೂನ್ನೂರು ವರ್ಷದವರೆಗೂ ಅವು ಪ್ರಯತ್ನಿಸುತ್ತಲೇ ಇರುತ್ತವೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry