ಶುಕ್ರವಾರ, ಮೇ 7, 2021
20 °C

ಪರ್ವತಸದೃಶ ವ್ಯಕ್ತಿತ್ವದ ಚಂಡೀಪ್ರಸಾದ್ ಭಟ್

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನ (ಐಐಸಿ) ಪ್ರಾಮುಖ್ಯವನ್ನು ಅದರ ಪ್ರವೇಶದ್ವಾರದಲ್ಲಿ ಹಾದುಹೋಗುವ ಸಶಸ್ತ್ರ ಭದ್ರತಾ ಸಿಬ್ಬಂದಿ ಮೂಲಕವೂ ಸ್ವಲ್ಪ ಮಟ್ಟಿಗೆ ಅಳೆಯಲಾಗುತ್ತದೆ.ಎಲ್ಲ ಅರ್ಥದಲ್ಲೂ, ಶಕ್ತಿ ಹಾಗೂ ಪ್ರಭಾವಗಳ ಕೇಂದ್ರವೆನಿಸಿದ ಈ ಸ್ಥಳದಲ್ಲಿ ಕಾಣಿಸಿಕೊಳ್ಳಬಯಸುವ ಮಹಾನ್ ವ್ಯಕ್ತಿಗಳು ಎಂದರೆ ಶ್ರೀಮಂತರು, ಸಚಿವರು, ಎಂಪಿಗಳು, ರಾಯಭಾರಿಗಳು, ಜನರಲ್‌ಗಳ ಜೊತೆ ಬಹುಶಃ ಅವರ ರಕ್ಷಣೆಗೆಂದು ಈ ಭದ್ರತಾ ಸಿಬ್ಬಂದಿ ಆಗಮಿಸುತ್ತಾರೆ.ಇಡೀ ವರ್ಷ ಐಐಸಿ ಆಯೋಜಿಸುವ ಭಾಷಣ, ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೊಂದು ಘನತೆ ಕಟ್ಟಿಕೊಡಲು ಈ ಪ್ರತಿಷ್ಠಿತರು ಆಗಮಿಸುತ್ತಾರೆ.ವಾಸ್ತವಿಕವೋ ಅಥವಾ ಶಿಷ್ಟಾಚಾರವೋ, ಐಐಸಿ ಈ ಸಭೆಗಳೆಲ್ಲಾ ಯಾವಾಗಲೂ ಇಂಗ್ಲಿಷ್‌ನಲ್ಲೇ ನಡೆಯುತ್ತವೆ. ಎಲ್ಲೋ ಅಪರೂಪಕ್ಕೆ ಹಿಂದಿ ಮಾತುಗಳೂ ಕೇಳಿ ಬರುತ್ತವೆ.

 

ಲೇಖಕ ನಿರ್ಮಲ್ ವರ್ಮಾ ಹಾಗೂ ತತ್ವಜ್ಞಾನಿ ರಾಮಚಂದ್ರ ಗಾಂಧಿ ಈ ಇಬ್ಬರೂ ಇದ್ದಾಗಿನ ಮಾತು ಅದು. ಇಬ್ಬರೂ ಐಐಸಿ ಬಾರ್ ಹಾಗೂ ಐಐಸಿ ಉಪನ್ಯಾಸ ಸಭಾಂಗಣಕ್ಕೆ ಯಾವಾಗಲೂ ಬರುತ್ತಿದ್ದರು.ರಾಮು ಹಾಗೂ ನಿರ್ಮಲ್‌ರ ನೆನಪು, ಅವರುಗಳು ಮಾತನಾಡುತ್ತಿದ್ದ ಉತ್ಕೃಷ್ಟ ಹಿಂದಿ, ಆಡಂಬರವಿಲ್ಲದ ಅವರಿಬ್ಬರ ಸರಳ ನಡೆನುಡಿ ಇತ್ತೀಚೆಗೆ ಐಐಸಿ ಸಭಾಂಗಣವೊಂದರಲ್ಲಿ ನಡೆದ ಸಮಾರಂಭದಲ್ಲಿ  ಮರುಕಳಿಸಿತು.ಅದು `ಪರ್ವತ್ ಪರ್ವತ್ ಬಸ್ತಿ ಬಸ್ತಿ~  ಪುಸ್ತಕ ಬಿಡುಗಡೆಯ ಸಮಾರಂಭ. ಆದರೆ ಅದು ಪುಸ್ತಕದ ಕರ್ತೃ ಹಾಗೂ ಪರಿಸರ ಚಳವಳಿಯ ಮಹಾನ್ ಮುಂದಾಳು ಚಂಡೀಪ್ರಸಾದ್ ಭಟ್ ಅವರ ಸಾಧನೆಯನ್ನು ಶ್ಲಾಘಿಸುವ ಕಾರ್ಯಕ್ರಮವಾಗಿ ಪರಿವರ್ತಿತವಾಯಿತು.

 

ಚಿಪ್ಕೊ ಚಳವಳಿಮುಖ್ಯ ಸಂಘಟಕ ಅಥವಾ (ಗಢ್ವಾಲ್‌ನ ಅವರ ಗಾಂಧಿವಾದಿ ಸಹಚರ ಸುಂದರಲಾಲ್ ಬಹುಗುಣ ಅವರು ಕರೆಯುವಂತೆ) `ಮುಖ್ಯ ಸಂಚಾಲಕ~ರಾಗಿ ಅವರು ಪ್ರಸಿದ್ಧರು. ಬಡಜನರ ಮೊದಲ ಪ್ರಮುಖ ಪರಿಸರ ಆಂದೋಲನವಾಗಿ, `ಚಿಪ್ಕೊ~ದಶಕಗಳಿಂದ ಹಲವು ನೆಲೆಗಳಲ್ಲಿ ಪರಿಣಾಮ ಬೀರಿದೆ.ಹೀಗಿದ್ದೂ ಚಂಡೀಪ್ರಸಾದ್ ಭಟ್ ಅವರು `ಚಿಪ್ಕೊ~ ಸಂಸ್ಥಾಪಕರಷ್ಟೇ ಅಲ್ಲ; ಅದಕ್ಕೂ ಮೀರಿದವರು. ಅವರ ಕೊಡುಗೆಗಳು ಬಹುರೂಪಿ. ಅವರು ಅರಣ್ಯ ನಾಶವನ್ನು ವಿರೋಧಿಸುತ್ತಲೇ ಅರಣ್ಯ ಬೆಳೆಸುವುದನ್ನು ಪ್ರೋತ್ಸಾಹಿಸಿದರು.ಮಾನವನ ನಿರ್ಲಕ್ಷ್ಯದಿಂದ ಬರಡಾದ ಗಿರಿತಪ್ಪಲುಗಳಲ್ಲಿ ಹಸಿರು ಬೆಳೆಯಲು ಮಹಿಳೆಯರಿಗೆ ಪ್ರೇರಕಶಕ್ತಿಯಾದರು. ಕೃಷಿಕರ ಸಹಕಾರ ಸಂಘಗಳನ್ನು ಸ್ಥಾಪಿಸಿದರು.

 

ಮುಂಗಾರನ್ನೇ ಅವಲಂಬಿಸಿದ ರೈತರಿಗೆ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಿದರು. ಸೇವಾ ಬದುಕಿಗೆ ತಮ್ಮನ್ನೇ ಅರ್ಪಿಸಿಕೊಳ್ಳಲು ಉತ್ತರಾಖಂಡ ಹಾಗೂ ಅದರಾಚೆಗಿನ ಯುವಕರು ಹಾಗೂ ಯುವತಿಯರಿಗೆ ಸ್ಫೂರ್ತಿ ತುಂಬಿದರು.ಇಷ್ಟೆಲ್ಲದರ ನಡುವೆ, ಕೀರ್ತಿ ಅಥವಾ ಹಣಕಾಸಿನ ಪ್ರತಿಫಲಕ್ಕೆ ಅವರೆಂದೂ ಆಶಿಸಲಿಲ್ಲ. ಸಮಕಾಲೀನ ಭಾರತದಲ್ಲಿ, ಚಂಡೀಪ್ರಸಾದ್ ಭಟ್ ಅವರಷ್ಟು ಶ್ರೇಷ್ಠ ಮಟ್ಟದಲ್ಲಿ  ನಿರ್ಲಿಪ್ತ ಸೇವಾ ಭಾವದ ಗಾಂಧಿ ಆದರ್ಶವನ್ನು ತೋರ್ಪಡಿಸುವಂತಹವರು ಕಡಿಮೆ.ಹಲವು ವರ್ಷಗಳಿಂದ ಭಟ್ ಅವರನ್ನು ಬಲ್ಲ ವಿದ್ವಾಂಸರು ಹಾಗೂ ಪರಿಸರ ಕಾರ್ಯಕರ್ತರು ಭಟ್ ಅವರ ಆದರ್ಶಗಳನ್ನು ಕುರಿತು ಅಂದು ಐಐಸಿಯಲ್ಲಿ ಮಾತನಾಡಿದರು. ಮೊದಲ ಭಾಷಣಕಾರರು, ಗೌರವಾನ್ವಿತ ಪರಿಸರ ಲೇಖಕ ಅನುಪಮ್ ಮಿಶ್ರಾ.

 

`ಪರ್ವತ್ ಪರ್ವತ್ ಬಸ್ತಿ ಬಸ್ತಿ~ ಪ್ರಕಟಣೆಗೆ ದಶಕಗಳ ಮುಂಚೆಯೇ ಚಂಡೀಪ್ರಸಾದ್ ಭಟ್ ಅವರು ಬರೆದದ್ದು `ಚಿಪ್ಕೊ~ ಎಂಬಂತಹ ಬರೇ ಮೂರು ಅಕ್ಷರಗಳ ಒಂದು ಪದದ ಆಂದೋಲನ ಎಂದರು ಮಿಶ್ರಾ.1973ರಲ್ಲಿ ಚಿಪ್ಕೊ ಆರಂಭವಾದಾಗ, `24/7~ ಟಿವಿ ನ್ಯೂಸ್ ಚಾನೆಲ್‌ಗಳು ಇರಲಿಲ್ಲ. ಗಢ್ವಾಲ್‌ನ ಒಳ ಪ್ರದೇಶಗಳನ್ನು ತಲುಪಲು ವೃತ್ತ ಪತ್ರಿಕೆಗಳಿಗೂ ಮೂರು, ನಾಲ್ಕು ದಿನಗಳು ಬೇಕಾಗುತ್ತಿತ್ತು. ಹೀಗಿದ್ದೂ `ಚಿಪ್ಕೊ~ ಸಂದೇಶ ವ್ಯಾಪಕವಾಗಿ ಪಸರಿಸಿತು.

 

ಭಟ್ ಬರೆದ ಆ  ಮೂರು ಅಕ್ಷರಗಳ ಒಂದು ಪದದ ಆಂದೋಲನ ಹಿಮಾಲಯದ ಗಿರಿ ಕಂದರಗಳ್ಲ್ಲಲಷ್ಟೇ ಅಲ್ಲ, ಭಾರತದಾದ್ಯಂತ ಹಾಗೂ ವಿಶ್ವದಾದ್ಯಂತವೂ ಅನುರಣನಗೊಂಡಿತು.ಮಿಶ್ರಾ ನಂತರ ಮಾತನಾಡಿದವರು ಗಢ್ವಾಲ್ ಮೂಲದ ಹಿರಿಯ ಪತ್ರಕರ್ತ ರಮೇಶ್ ಪಹಾಡಿ. ಪರಿಸರ ಕ್ಷೇತ್ರದಲ್ಲಿ ಭಟ್ ಅವರನ್ನು ಸಾಮಾನ್ಯವಾಗಿ ಹೊಗಳಲಾಗುತ್ತದೆ. ಆದರೆ ಚಿಪ್ಕೊ ಚಳವಳಿ ಹುಟ್ಟು ಹಾಕುವ ಮೊದಲು, ಅವರೊಬ್ಬರು ತೀವ್ರವಾದಿ ಸಮಾಜ ಸುಧಾರಕರಾಗಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ ಎಂದು ರಮೇಶ್ ಹೇಳಿದರು.

 

ಮೇಲ್ಜಾತಿಯ ಮನೆಯಲ್ಲಿ, ದೇವಾಲಯದ ಅರ್ಚಕರ ಕುಟುಂಬದಲ್ಲಿ ಜನಿಸಿದವರು ಅವರು. ಅವರಿದ್ದಂತಹ ಪ್ರದೇಶದಲ್ಲಿ ದಲಿತರ ಜೊತೆ ಒಡನಾಡಿದ ಹಾಗೂ ಊಟ ಮಾಡಿದ ಮೊದಲ ಬ್ರಾಹ್ಮಣರಾಗಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದರು ಭಟ್.ನಂತರ ಮಾತನಾಡಿದ `ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್~ನ ಸುನೀತಾ ನಾರಾಯಣ್ ಅವರು, ತಮ್ಮ ಸಹೋದ್ಯೋಗಿ ಅನಿಲ್ ಅಗರ್‌ವಾಲ್ ಜೊತೆಗೆ, ಚಂಡೀಪ್ರಸಾದ್‌ರವರನ್ನು ತಾವು ಭೇಟಿಯಾದ ರೀತಿಯನ್ನು ನೆನಪಿಸಿಕೊಂಡರು.

 

`ಚಿಪ್ಕೊ~ ಎಂದರೆ ಅದು ಬರೀ ಅರಣ್ಯ ಹಾಗೂ ಪರಿಸರ ರಕ್ಷಿಸುವ ಹೋರಾಟ ಮಾತ್ರವಲ್ಲ; ಜೀವನೋಪಾಯದ ಬಗೆಗಳ ರಕ್ಷಣೆ ಹಾಗೂ ಪುನರುಜ್ಜೀವಕ್ಕಾಗಿ ನಡೆಸುವ ಹೋರಾಟವೂ ಹೌದು ಎಂಬುದನ್ನು ಚಂಡೀ ಪ್ರಸಾದ್ ಅವರು ಅಗರ್‌ವಾಲ್‌ಗೆ (ಹಾಗೂ ಇತರರಿಗೆ) ಕಲಿಸಿದ್ದರು. ಅದೊಂದು ಸಾಮಾಜಿಕ ಘನತೆ ಹಾಗೂ ರಾಜಕೀಯ ವಿಮೋಚನೆಗಾಗಿ ನಡೆಯುವಂತಹ ಹೋರಾಟ.`ಪೊಸ್ಕೊ~ ಹಾಗೂ `ವೇದಾಂತ~ದಂತಹ ವಿವಾದಾತ್ಮಕ ಯೋಜನೆಗಳಿಂದಾಗಿ ಉಂಟಾಗಿರುವ ಇಂದಿನ ದಿನಗಳ ಪರಿಸರ ಹಾಗೂ ಸಾಮಾಜಿಕ ಸಂಘರ್ಷಗಳಿಗೆ `ಚಿಪ್ಕೊ~ದ ಕರೆ ಅತ್ಯಂತ ಪ್ರಸ್ತುತವಾದ್ದ್ದದು ಎಂದು ಸುನೀತಾ ನಾರಾಯಣ್ ಹೇಳಿದರು.ಮಧ್ಯಯುಗದಲ್ಲಿ ಚಂಡೀಪ್ರಸಾದ್ ಭಟ್ ಅವರ ಸ್ವಂತ ರಾಜ್ಯ ಉತ್ತರಾಖಂಡವನ್ನು  ಗಢ್ವಾಲ್ ಹಾಗೂ ಕುಮಾವನ್ ಎಂಬಂತಹ ಪ್ರತಿಸ್ಪರ್ಧಿ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ಗಢ್ವಾಲ್‌ಗೆ ಸೇರಿದ ಭಟ್ ಅವರ ಪ್ರಭಾವ ಮತ್ತೊಂದು ಪ್ರಾಂತ್ಯದಲ್ಲೂ ದಟ್ಟವಾಗೇ ಇತ್ತು.ಇದನ್ನು ಪ್ರಸಿದ್ಧ ಕುಮಾವನ್ ಇತಿಹಾಸಕಾರ ಶೇಖರ್ ಪಾಠಕ್ ಅವರು ತಮ್ಮ ಮಾತುಗಳಲ್ಲಿ ನಿರೂಪಿಸಿದರು. 1977ರಲ್ಲಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಠಕ್ ಅವರನ್ನು ಜೈಲಿಗೆ ಹಾಕಲಾಗಿತ್ತು.

 

ಅವರ ಬಿಡುಗಡೆ ಆಗುತ್ತಿದ್ದಂತೆಯೇ ಅವರ ಮನೆ ಬಾಗಿಲಿಗೆ ಭಟ್ ಆಗಮಿಸಿದ್ದರು. ಆಗ ಆ ಯುವಕ ಪಾಠಕ್ ಉಗ್ರ ಮಾರ್ಕ್ಸ್‌ವಾದಿಯಾಗಿದ್ದರು. ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತರ ಬಗ್ಗೆ ತಮ್ಮದೇ ಅನುಮಾನಗಳನ್ನು ಇಟ್ಟುಕೊಂಡಿದ್ದರು.ಆದರೆ ಭಟ್ ಮಾತುಗಳಿಗೆ ಪಾಠಕ್ ಮನಸೋತರು. ಸಂಶೋಧನೆ ಹಾಗೂ ದಾಖಲೀಕರಣದ ಸಾಮುದಾಯಿಕ ಯೋಜನೆ ರೂಪಿಸಲು ಪಾಠಕ್‌ಗೆ ಪ್ರೇರಕರಾದರು ಭಟ್.ಈ ಯೋಜನೆ, ಆ ನಂತರದ ವರ್ಷಗಳಲ್ಲಿ ಹಿಮಾಲಯದ ಸಾಮಾಜಿಕ ಹಾಗೂ ನೈಸರ್ಗಿಕ ಸ್ಥಿತಿಗತಿಗಳನ್ನು ಕುರಿತಂತೆ ಮೌಲಿಕ ಹಾಗೂ ಅಧಿಕೃತ ಪುಸ್ತಕಗಳು ಹಾಗೂ ವರದಿಗಳ ರಾಶಿಗಳನ್ನೇ ಪ್ರಕಟಿಸಿತು.ಎವರೆಸ್ಟ್ ಶಿಖರ ಹಾಗೂ ನಂದಾದೇವಿಗಿಂತ ಹೆಚ್ಚಿನದಾಗಿ ಹಿಮಾಲಯವನ್ನು ಕುರಿತು ಚಿಂತಿಸಲು ಭಟ್ ಅವರು ಪಾಠಕ್‌ಗೆ ಕಲಿಸಿದರು. ಹಿಮಾಲಯವೆಂದರೆ ಅಲ್ಲಲ್ಲೇ ಅದು ಸಣ್ಣ ಸಣ್ಣ ಶಿಖರಗಳು, ಗಿರಿಗಳು, ಕಣಿವೆಗಳನ್ನೆಲ್ಲಾ ಒಳಗೊಂಡಿದೆ.

ಅದೇ ರೀತಿ ಸಾಮಾಜಿಕ ಚಳವಳಿಯಲ್ಲಿ ನಾಯಕರುಗಳಂತೆಯೇ  ಕಾರ್ಯಕರ್ತರು ಹಾಗೂ ಮೌನವಾಗಿ ಕೆಲಸ ಮಾಡುವ ಕೆಲಸಗಾರರೂ ಮುಖ್ಯವಾದವರು ಎಂದು ಭಟ್ ತಮ್ಮ ಯುವ ಸಹೋದ್ಯೋಗಿಗೆ ತಿಳಿಸಿದ್ದರು.ಭಟ್ ಅವರ ಇಡೀ ಭಾರತವನ್ನು ಒಳಗೊಳ್ಳುವಂತಹ ವ್ಯಾಪಕವಾದ ದೃಷ್ಟಿಕೋನದ ಬಗ್ಗೆಯೂ ಪಾಠಕ್ ಮಾತನಾಡಿದರು. 1987ರಲ್ಲಿ ಬಸ್ತಾರ್ ಆದ್ಯಂತ ಭಟ್ ಮಾಡಿದ ಪ್ರವಾಸ ತೀವ್ರವಾದಂತಹ ಎಚ್ಚರಿಕೆಯ ಮಾತುಗಳಿಗೆ ಕಾರಣವಾಯಿತು.ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ಬರೆದ ದೀರ್ಘ ಪತ್ರದಲ್ಲಿ ಅದನ್ನು ವಿವರಿಸಲಾಯಿತು. ಆದಿವಾಸಿಗಳ ಕಾಳಜಿಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ಮಾವೊವಾದಿಗಳು ಹೆಚ್ಚು ಪ್ರಭಾವಶಾಲಿಯಾಗುತ್ತಾರೆಂದು ಅವರು ಆ ಪತ್ರದಲ್ಲಿ ಭವಿಷ್ಯ ನುಡಿದಿದ್ದರು.ಅಭಿಮಾನಿಗಳ ಮಾತುಗಳು ಮುಗಿದ ನಂತರ, ಉತ್ತರಿಸುವ ಅವಕಾಶವನ್ನು ಭಟ್‌ಗೆ ನೀಡಲಾಯಿತು. ಕುಡಿತ, ಮಾದಕ ವಸ್ತುಗಳು ಸೇರಿದಂತೆ ಸ್ವಪ್ರಶಂಸೆ ಕೇಳಿಸಿಕೊಳ್ಳುವುದನ್ನೂ ಬಿಡಬೇಕೆಂಬ ಪಾಠವನ್ನು `ಸರ್ವೋದಯ ಚಳವಳಿ~ಯಲ್ಲಿ ತಾವು ಕಲಿತಿರುವುದಾಗಿ ಭಟ್ ಹೇಳಿದರು.

 

ಜಾಗತಿಕ ಖ್ಯಾತಿಯ ಸಾಮಾಜಿಕ ಚಳವಳಿಯ ಸಂಸ್ಥಾಪಕರೆಂದು ಈಗ ಖ್ಯಾತರಾಗಿರುವ ಭಟ್ ಅವರು 1950ರ ದಶಕದ ಅಂತ್ಯದಲ್ಲಿ ತಾವು ಆರಂಭಿಸಿದ ತಮ್ಮ ಮೊದಲ ಹೋರಾಟವನ್ನು ನೆನಪಿಸಿಕೊಂಡರು.

 

ಯಾತ್ರಿಗಳಿಂದ ಹೆಚ್ಚಿನ ಹಣವನ್ನು ಗಢ್ವಾಲ್ ಬಸ್ ಕಂಪೆನಿಗಳು  ವಸೂಲು ಮಾಡುವುದನ್ನು ನಿಲ್ಲಿಸುವುದು ಆ ಹೋರಾಟದ ಉದ್ದೇಶವಾಗಿತ್ತು.ಗಢ್ವಾಲ್‌ನ ಪ್ರಯಾಣಿಕರು ಯಾರು ಹಾಗೂ ಹೊರಗಿನವರು ಯಾರು ಎಂಬುದು ಬಸ್ ಕಂಡಕ್ಟರ್‌ಗಳು ಹಾಗೂ ಚಾಲಕರುಗಳಿಗೆ ಗೊತ್ತಿರುತ್ತಿತ್ತು. ಗಢ್ವಾಲ್‌ನವರಿಗೆ ಮಾಮೂಲಿ ದರ ವಿಧಿಸಲಾಗುತ್ತಿತ್ತು.

 

ಆದರೆ ಬೇರೆಯವರಿಗೆ ಎರಡರಷ್ಟು, ಮೂರರಷ್ಟು ಹಣ ವಿಧಿಸಲಾಗುತ್ತಿತ್ತು. ಭಟ್ ಮತ್ತು ಅವರ ಸಂಗಾತಿಗಳು ಈ ಕೆಟ್ಟ ಆಚರಣೆ ನಿಲ್ಲಿಸಲು ಯತ್ನಿಸಿದಾಗ ಬಸ್ ಮಾಲೀಕರು ಕೇಳಿದ್ದ ಪ್ರಶ್ನೆ ಇದು: `ನೀವ್ಯಾಕೆ ದೂರುತ್ತಿದ್ದೀರಿ? ಈ ಪ್ರಯಾಣಿಕರು ಇಲ್ಲಿನವರಲ್ಲ. ಕೇರಳ ಹಾಗೂ ರಾಜಸ್ತಾನದವರು~.ಆಗ ಇದು ಅವರ ಮೊದಲ ಹೋರಾಟವಾಗಿತ್ತು. ಸ್ಥಳೀಯವಾದ ಹಾಗೂ ಯಾವುದೇ ಆಕರ್ಷಣೆ ಇಲ್ಲದಂತಹ ಹೋರಾಟ. ಆದರೆ ಇದು ಭಾರತದಾದ್ಯಂತದ ವಿಸ್ತೃತವಾದಂತಹ ಅವರ ದೃಷ್ಟಿಕೋನವನ್ನು ಒತ್ತಿ ಹೇಳುವಂತಹ ಹೋರಾಟವಾಗಿತ್ತು.`ಪರ್ವತ್ ಪರ್ವತ್ ಬಸ್ತಿ ಬಸ್ತಿ~ ಕೃತಿಯಲ್ಲಿ, ನಾಲ್ಕು ದಶಕಗಳ ಕಾಲ ಭಟ್ ಬರೆದ ಪ್ರಬಂಧಗಳನ್ನು ಸಂಕಲಿಸಲಾಗಿದೆ. ಬಸ್ತಾರ್, ಅರುಣಾಚಲ, ಕಾಶ್ಮೀರ ಹಾಗೂ ಅಂಡಮಾನ್‌ಗಳ ಬಗ್ಗೆ ಇಲ್ಲಿ ಪ್ರಬಂಧಗಳಿವೆ. ಲಾತೂರ್ ಹಾಗೂ ಗುಜರಾತ್‌ಗಳಲ್ಲಿ ಭೂಕಂಪನವಾದ ನಂತರ ಆ ಪ್ರದೇಶಗಳಿಗೆ ಅವರು ನೀಡಿದ ಭೇಟಿಗಳ ವಿವರಗಳೂ ಇವೆ.ಈ ಪ್ರಬಂಧಗಳು ಸಮಾಜ ಹಾಗೂ ಪ್ರಕೃತಿಯ ಬಗೆಗಿನ ಅವರ ಆಳವಾದ ಜ್ಞಾನವನ್ನು ಪ್ರದರ್ಶಿಸುತ್ತವೆ. ಜೊತೆಗೆ ಗ್ರಾಮೀಣ ಸಮುದಾಯದ ಜೀವನಶೈಲಿ ಹಾಗೂ ಪರಿಸರಗಳ ಮೇಲೆ ಅತಿ ಪ್ರಬಲರ ಹಿತಾಸಕ್ತಿಗಳು ಒಡ್ಡುವ ಬೆದರಿಕೆಗಳನ್ನೂ ಎತ್ತಿ ಹಿಡಿಯುತ್ತದೆ.ಪ್ರತಿಯೊಂದು ನದಿಯೂ ಅದು ಕಲುಷಿತಗೊಂಡಿದ್ದರೂ ತಮ್ಮ ಪಾಲಿಗದು ಗಂಗಾ ನದಿಯೇ ಎಂದು ಭಟ್ ಅವರು ಐಐಸಿ ಯಲ್ಲಿ ಮಾತನಾಡುತ್ತಾ ತಿಳಿಸಿದರು.  ಭಾರತದಾದ್ಯಂತದ ಅವರ ಪ್ರವಾಸಗಳು ಅವರಿಗೆ ಪಾಠ ಕಲಿಸಿದವು. ಅವರ ಕೆಲಸವೂ ಇತರರಿಗೆ ಪಾಠವಾಗಿತ್ತು.ತಮ್ಮದೇ ರೀತಿಯಲ್ಲಿ ಸದ್ದಿಲ್ಲದೆ, ಹೆಚ್ಚು ತೋರ್ಪಡಿಸಿಕೊಳ್ಳದ ರೀತಿಯಲ್ಲಿಯೇ ಭಟ್ ಅವರ ಪ್ರಭಾವ ಅನೇಕ ವಿಜ್ಞಾನಿಗಳು, ವಿದ್ವಾಂಸರು, ಪತ್ರಕರ್ತರು, ಅರಣ್ಯ ಅಧಿಕಾರಿಗಳು ಹಾಗೂ ಎಂದೆಂದೂ ಕಟ್ಟ ಕಡೆಯವರಾಗದ ಯುವ ಸಾಮಾಜಿಕ ಕಾರ್ಯಕರ್ತರ ಮೇಲೆ ದಟ್ಟವಾಗಿದೆ.ನಾನೂ ಸಹ ಸ್ವತಃ ಚಂಡೀಪ್ರಸಾದ್ ಭಟ್ ಅವರನ್ನು ಸರಿಯಾಗಿ ಈಗ ಮೂವತ್ತು ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಅವರ ಜೊತೆಗಿನ ನನ್ನ ಸಂಪರ್ಕ, ಅವರ ಕೃತಿಗಳ ಅಧ್ಯಯನ ನನ್ನ ಬೌದ್ಧಿಕ ವಿಕಾಸದಲ್ಲಿ ಆಳವಾದ ಪರಿಣಾಮ ಬೀರಿದೆ.

ಭಟ್ ಅವರು ಮಾಡಿರುವ ಕೆಲಸಗಳಿಗಾಗಿ, ಭಟ್‌ರಂತಹ (ಅಹಮದಾಬಾದ್‌ನ ಇಳಾ ಭಟ್ ಸಹ ಸೇರಿದಂತೆ) ಅನೇಕರು ಮಾಡಬಹುದಾದ ಕೆಲಸಗಳಿಂದಾಗಿ ನನ್ನ ದೇಶದ ಬಗ್ಗೆ ಹತಾಶೆ ತಾಳುವುದೇ ಬೇಡ.ಅಂಥವರಿಂದಾಗಿ, ನಿಸ್ವಾರ್ಥ ಸುಧಾರಕರ ಸ್ಥಿರ, ತಾಳ್ಮೆಯ ಕೆಲಸದಿಂದಾಗಿ ಭಾರತವನ್ನಿನ್ನೂ ಹೆಚ್ಚು ಸೊಗಸಿನ ಅಥವಾ ಕಡಿಮೆ ಕ್ರೌರ್ಯಗಳ ನೆಲೆಯಾಗಿಸಬಹುದು. ಚಂಡೀಪ್ರಸಾದ್‌ಜಿ ಬಗ್ಗೆ ನನಗಿರುವ ಗೌರವವನ್ನು ಈ ಒಂದು ಸರಳ ಅಂಶದಲ್ಲಿ ವ್ಯಕ್ತಪಡಿಸಬಹುದು.ಅವರು ಕರೆ ಮಾಡಿದಾಗ, ನನ್ನ ಸೆಲ್‌ಫೋನ್‌ನಲ್ಲಿ ನಂಬರ್ ಗುರುತಿಸುತ್ತೇನೆ. ತಕ್ಷಣವೇ ಎದ್ದು ನಿಲ್ಲುತ್ತೇನೆ. ನಾನಿರುವುದು ಬೆಂಗಳೂರಿನಲ್ಲಿ. ಅವರು ಮಾತನಾಡುವುದು ಗಢ್ವಾಲ್‌ನಿಂದ.

 

ನನ್ನ ಆ ಒಂದು ಅನುದ್ದಿಷ್ಟವಾದ ವರ್ತನೆ ನಿಜಕ್ಕೂ ಅವರ ಬಗ್ಗೆ ನನಗಿರುವ ಗೌರವವನ್ನು ಸೂಚಿಸುತ್ತದೆ. ಅಷ್ಟೇ ಅಸಾಧಾರಣ ವ್ಯಕ್ತಿತ್ವದ ಶಿವರಾಮ ಕಾರಂತರನ್ನು ಬಿಟ್ಟರೆ ನನಗೆ ಗೊತ್ತಿರುವಂತಹ ಮಹೋನ್ನತ ಗುಣದ ಭಾರತೀಯ ಇವರು.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.