ಶನಿವಾರ, ಮೇ 8, 2021
26 °C

ಪವಾಡದ ಸಾಧ್ಯತೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನನಗೆ ಬೈಬಲ್ ಕಥೆಗಳಲ್ಲಿ ಬಹಳ ಇಷ್ಟವಾದದ್ದು ಸೈಲೋಮ್ ಕೊಳದ ಬಳಿ ಏಸು ಸ್ವಾಮಿ ಕುರುಡನಿಗೆ ಕಣ್ಣು ನೀಡಿದ ಪ್ರಸಂಗ.

ಈ ಸೈಲೊಮ್ ಕೊಳ ಬೃಹತ್ ಕಲ್ಲಿನಲ್ಲಿ ಕತ್ತರಿಸಲಾದ ಕೊಳ. ಡೇವಿಡ್ ನಗರದ ದಕ್ಷಿಣದ ಇಳಿಜಾರಿನಲ್ಲಿದೆ. ಇದೇ ಜೆರುಸಲೆಂನ ಮೂಲಸ್ಥಳ ಎಂದು ಹೇಳುತ್ತಾರೆ. ಬೈಬಲ್‌ನಲ್ಲಿ ಸೈಲೋಮ್ ಕೊಳದ ಬಗ್ಗೆ ಅನೇಕ ಬಾರಿ ಉಲ್ಲೇಖ ಬರುತ್ತದೆ. ಜಾನ್‌ನ ಸುವಾರ್ತೆಯಲ್ಲಿ ಈ ಪವಾಡದ ಘಟನೆಯ ವಿವರ ಬರುತ್ತದೆ.ಅಂದು ಸಬ್ಬತ್ ದಿನ. ಅಂದರೆ ಅದು ಉಪವಾಸದ ದಿನ. ಕೇವಲ ಭಗವಂತನ ಧ್ಯಾನ ಮಾಡುವ ದಿನ. ಬೇರೆ ಯಾವ ಕೆಲಸಕ್ಕೂ ಅವಕಾಶವಿಲ್ಲ, ಒಲೆ ಹೊತ್ತಿಸುವ ಹಾಗಿಲ್ಲ, ವ್ಯಾಪಾರ ಮಾಡುವಂತಿಲ್ಲ. ಅಂಥ ದಿನ ಏಸುಸ್ವಾಮಿ ತನ್ನ ಶಿಷ್ಯರೊಡನೆ ಅಲ್ಲಿಗೆ ಬಂದರು. ಅಲ್ಲಿ ಎಲ್ಲರನ್ನೂ ನೋಡುತ್ತ ನಡೆದರು. ಕೆಲ ದೃಶ್ಯಗಳು ಅಷ್ಟು ಸುಂದರವಾಗಿರಲಿಲ್ಲ. ಆಗ ಏಸು ಅಲ್ಲೊಬ್ಬ ಕುರುಡನನ್ನು ಕಂಡರು. ಆತ ಕೈ ಚಾಚಿ ದೈನ್ಯದಿಂದ ಯಾಚನೆ ಮಾಡುತ್ತಿದ್ದ. ಬಹುಶಃ ಅವನು ಅಲ್ಲಿಯವನೇ. ಆದ್ದರಿಂದ ಅಲ್ಲಿನ ಬಹುತೇಕ ಜನರಿಗೆ ಪರಿಚಿತನೇ ಆಗಿದ್ದ. ಅದಲ್ಲದೇ ಆತ ಹುಟ್ಟು ಕುರುಡ. ಆತ ತಿಳಿದುಕೊಂಡ ಹಾಗೆ ಆತ ಮಾಡಬಹುದಾದದ್ದು ಇದೊಂದೇ ಕೆಲಸ. ಏಸುವಿನ ಶಿಷ್ಯರು ಕೇಳಿದರು,  `ಪಾಪ! ಅವನ ಕಷ್ಟ ನೋಡಿ. ಇವನ ಈ ಅವಸ್ಥೆಗೆ ಯಾರು ಪಾಪ ಮಾಡಿದ್ದಿರಬೇಕು? ಈ ಮನುಷ್ಯನೋ ಅಥವಾ ಅವನ ತಂದೆ-ತಾಯಿಗಳೋ?'. ಆಗ ಏಸುಸ್ವಾಮಿ, `ಏನು ಮಾತನಾಡುತ್ತಿದ್ದೀರಿ? ಆತನ ಬಗ್ಗೆ ಸಹಾನುಭೂತಿ ಹೊಂದಿ ಸಹಾಯ ಮಾಡುವುದನ್ನು ಬಿಟ್ಟು ಯಾರು ತಪ್ಪಿತಸ್ಥರು, ಯಾರು ಪಾಪ ಮಾಡಿದರು ಎಂದು ಹುಡುಕುತ್ತೀದ್ದೀರಲ್ಲ? ಇದು ಧರ್ಮವೇ?' ಎಂದು ಆ ಕುರುಡನ ಕಡೆಗೆ ಹೊರಟರು.ಆ ಕುರುಡನಿಗೆ ಇದಾವುದೂ ತಿಳಿಯದು. ಅವನಿಗೆ ಗೊತ್ತಿದ್ದೆಂದರೆ ಇದು ಪವಿತ್ರವಾದ ದಿನ, ಜನ ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲ, ಸ್ವಲ್ಪ ದೈವಭಕ್ತಿ ಹೆಚ್ಚಾಗಿರುತ್ತದೆ, ಆದ್ದರಿಂದ ತನಗೆ ದಾನ ಹೆಚ್ಚಾಗಿ ಸಿಗಬಹುದು ಎಂದು. ಅವನ ದೈಹಿಕ ಅಶಕ್ತತೆ ಅವನನ್ನು ಮಾನಸಿಕವಾಗಿ ಬಲಿಷ್ಠನನ್ನಾಗಿ ಮಾಡಿತ್ತು. ಅವನು ದೈಹಿಕವಾಗಿ ಮಾತ್ರ ಕುರುಡನಾಗಿರಲಿಲ್ಲ. ಅಂಥ ಪವಿತ್ರ ಸ್ಥಳದಲ್ಲಿದ್ದ ಭಗವಂತನ ಇರುವನ್ನೇ ಮರೆಯುವಷ್ಟು ಪ್ರಚಂಡವಾಗಿತ್ತು ಅವನ ಆಂತರಿಕ ಕುರುಡುತನ. ಒಂದೆರಡು ಕ್ಷಣದಲ್ಲಿ ತನ್ನಲ್ಲಿ ಯಾವ ಪರಿವರ್ತನೆಯಾದೀತು ಎಂಬುದರ ಅರಿವಿರಲಿಲ್ಲ.ಆ ಮನುಷ್ಯನ ಹತ್ತಿರ ಹೋದ ಏಸುಸ್ವಾಮಿ ನೆಲದ ಮೇಲೆ ಉಗುಳಿದರು. ಅದೇ ಹಸಿಯನ್ನು ಬಳಸಿ ಸುತ್ತಲಿನ ಮಣ್ಣನ್ನು ಕಲಸಿ ಮುದ್ದೆ ಮಾಡಿದರು. ನಂತರ ಆ ಹದವಾದ ಮುದ್ದೆಯನ್ನು ಎರಡು ಭಾಗಮಾಡಿ ಕುರುಡನ ಕಣ್ಣಿನ ಮೇಲೆ ಲೇಪಿಸಿದರು. ವಿಚಿತ್ರವೆಂದರೆ ಕುರುಡ ಅದನ್ನು ಪ್ರತಿಭಟಿಸಲಿಲ್ಲ. `ಯಾರು, ಇದೇನು ಮಾಡುತ್ತಿದ್ದೀರಿ' ಎಂದು ಆತ ಕಿರಿಚಿಕೊಂಡು ಹಿಂದೆ ಸರಿಯಬಹುದಾಗಿತ್ತು. ಅಪರಿಚಿತ ಹತ್ತಿರ ಬಂದಾಗ ಕೈಯಿಂದ ಆತನನ್ನು ತಳ್ಳಬಹುದಿತ್ತು. ಆದರೆ ಆತ ಹಾಗೆ ಮಾಡದೆ ಏಸುಸ್ವಾಮಿ ಮಾಡಿದ್ದಕ್ಕೆಲ್ಲ ಸಹಯೋಗ ತೋರುತ್ತ ಸ್ವೀಕರಿಸಿದ. ಸಬ್ಬತ್‌ದ ದಿನ ಹೀಗೆ ಯಾರೂ ಮಾಡುವಂತಿಲ್ಲ. ಯಾರೂ ಯಾಕೆ ಹೀಗೆ ಮಾಡುತ್ತೀ ಎಂದು ಕೇಳಲಿಲ್ಲ. ಉದ್ಧಾರದ ಸಮಯ ಬಂದಾಗ ಎಲ್ಲವೂ ಸ್ವೀಕಾರಾರ್ಹವಾಗುತ್ತದೆ. ನಂತರ ಏಸುಸ್ವಾಮಿ ಕುರುಡನಿಗೆ ಹೇಳಿದರು, `ಹೋಗು ಸೈಲೋಮ್‌ದ ಕೊಳದಲ್ಲಿ ಕಣ್ಣು ತೊಳೆದುಕೊಂಡು ಬಾ'. ಕುರುಡ ತಡಬಡಿಸುತ್ತ ಕೊಳದ ಕಡೆಗೆ ನಡೆದ. ನಿಧಾನವಾಗಿ ನೀರಿನಿಂದ ಕಣ್ಣುಗಳನ್ನು ತೊಳೆದುಕೊಂಡ. ಮಣ್ಣಿನೊಂದಿಗೆ ಅಂಧತ್ವವೂ ಹೋಯಿತು. ಆ ಮನುಷ್ಯನ ಸಂತೋಷವನ್ನು ವಿವರಿಸುವುದು ಅಸಾಧ್ಯ. ಆತನಿಗೆ ಹೀಗಾಗುತ್ತದೆ ಎಂಬುದರ ಅರಿವಿರಲಿಲ್ಲ. ಆತ ಏಸುಸ್ವಾಮಿಯನ್ನು ಕೃಪೆಗಾಗಿ ಪ್ರಾರ್ಥಿಸಿರಲೂ ಇಲ್ಲ. ಇವರೊಬ್ಬ ಪವಾಡ ಪುರುಷ ಎಂಬುದೂ ಆತನಿಗೆ ತಿಳಿಯದು. ಏಸುಸ್ವಾಮಿ ಕೂಡ `ನಿನಗೆ ಕಣ್ಣುಗಳನ್ನು ನೀಡುತ್ತೇನೆ' ಎಂದು ಹೇಳಿರಲಿಲ್ಲ. ಯಾರ ಬಯಕೆಯೂ ಇಲ್ಲದೇ ಪವಾಡ ನಡೆದುಹೋಗಿತ್ತು.ಇದರಲ್ಲಿ ಮುಖ್ಯವೆಂದರೆ ಕುರುಡನಿಗೆ ಏಸುಸ್ವಾಮಿಯಿಂದ ಯಾವ ಅಪೇಕ್ಷೆಯೂ ಇಲ್ಲದಿದ್ದುದು. ಆದರೆ ಆತ ಏಸುವಿನ ಕ್ರಿಯೆಯನ್ನು ಪ್ರಶ್ನೆಯಿಲ್ಲದೇ ಒಪ್ಪಿಕೊಂಡು ಪಾಲಿಸಿದ. ಕುರುಡನಿಗೆ ಕಣ್ಣು ನೀಡಿದ ಪವಾಡವನ್ನು ನಂಬದಿದ್ದರೆ ಬೇಡ. ಆದರೆ ನಮ್ಮ ನಿಜಜೀವನದ ಪ್ರತಿಕ್ಷಣದಲ್ಲೂ ಪವಾಡ ನಡೆಯುವ ಸಾಧ್ಯತೆ ಇದೆ. ಅದು ಯಾವಾಗ ಸಾಧ್ಯವೆಂದರೆ ನಾವು ನಿರಪೇಕ್ಷರಾದಾಗ. ನಮ್ಮ ನಿರೀಕ್ಷೆಗಳು ಎತ್ತರಕ್ಕೆ ಏರಿದಷ್ಟು ಆಂತರ್ಯದ ಬದಲಾವಣೆಯ ಕ್ಷಣಗಳು ದೂರವಾಗುತ್ತ ಹೋಗುತ್ತವೆ. ನಮ್ಮ ಪ್ರಯತ್ನಗಳನ್ನು ಶ್ರದ್ಧಾಪೂರ್ವಕವಾಗಿ ಮಾಡುತ್ತ, ಅಪೇಕ್ಷೆಗಳನ್ನು ಕರಗಿಸುತ್ತ ಹೋದಾಗ ನಮ್ಮ ಜೀವನದಲ್ಲಿ ಭಗವಂತ ಇಳಿದು ಪವಾಡ ಮಾಡಿಯಾನು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.