ಪಾಕ್ ಸುಪ್ರೀಂಕೋರ್ಟ್‌ನ ಅನನ್ಯ ಮಾದರಿ

7

ಪಾಕ್ ಸುಪ್ರೀಂಕೋರ್ಟ್‌ನ ಅನನ್ಯ ಮಾದರಿ

ಕುಲದೀಪ ನಯ್ಯರ್
Published:
Updated:

ಪಾಕಿಸ್ತಾನದ ಮಟ್ಟಿಗೆ ಹೇಳುವುದಿದ್ದರೆ 2008ರಲ್ಲಿ ನಡೆದ ವಕೀಲರ ಚಳವಳಿ, ಆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದಂತೆನಿಸುತ್ತದೆ. ಬ್ರಿಟಿಷರ ಮೂಗಿನ ಅಡಿಯಲ್ಲಿಯೇ ಭಾರತದ ಜತೆಗಿನ ಶಾಂತಿಯುತ ಒಪ್ಪಂದದ ಮೂಲಕ ಪಾಕಿಸ್ತಾನ ಹುಟ್ಟು ಪಡೆದಿದ್ದರಿಂದ ಆ ದೇಶದ ಹುಟ್ಟಿಗಾಗಿ ಆ ದಿನಗಳಲ್ಲಿ ಯಾವ ಆಂದೋಲನವೂ ನಡೆದಿರಲಿಲ್ಲ.ವಕೀಲರ ಚಳವಳಿಯಿಂದಾಗಿ ಆ ದೇಶದ ಸುಪ್ರೀಂ ಕೋರ್ಟ್ ಪಾರಮ್ಯಕ್ಕೆ ಮಹತ್ವ ಸಿಕ್ಕಂತಾಯಿತು ಎಂದರೆ ಅತಿಶಯೋಕ್ತಿಯಲ್ಲ. ದಶಕಗಳ ಹಿಂದೆ ಸೇನಾ ದಂಗೆಗಳನ್ನೇ ಕಣ್ಮುಚ್ಚಿ ಒಪ್ಪಿಕೊಂಡಿದ್ದ ಪರಂಪರೆ ಪಾಕ್‌ನ ಸರ್ವೋಚ್ಚ ನ್ಯಾಯಾಲಯದ್ದಾಗಿದೆ.

 

ಜನರಲ್ ಅಯೂಬ್‌ಖಾನ್ ಮತ್ತು ಜನರಲ್ ಜಿಯಾ ಉಲ್‌ಹಖ್ ಅಧಿಕಾರದ ಗದ್ದುಗೆ ಏರಿದಾಗ ಸುಪ್ರೀಂ ಕೋರ್ಟ್ ಕಣ್ಣು, ಬಾಯಿ, ಕಿವಿಗಳನ್ನು ಮುಚ್ಚಿಕೊಂಡಂತಿತ್ತು. ಜತೆಗೆ ಅಂತಹ ದಂಗೆಗಳನ್ನು ಸಕ್ರಮಗೊಳಿಸುವುದಕ್ಕೆ ಸಂವಿಧಾನದೊಳಗೆ ಪದಗಳಿಗಾಗಿ ಹುಡುಕಾಟ ನಡೆಸಿತ್ತು.ಈಗ ಕಾಲ ಬದಲಾಗಿದೆ. ಸುಪ್ರೀಂ ಕೋರ್ಟ್ ಇವತ್ತು ದೇಶದ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿಯವರ ಮೇಲೆಯೇ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ ವಿಚಲಿತರನ್ನಾಗಿಸಿದೆ.

 

ಈ ಆಘಾತದಿಂದ ತಕ್ಷಣ ಚೇತರಿಸಿಕೊಂಡಿರುವ ಗಿಲಾನಿ ತಮ್ಮ ಮೇಲಿರುವ ಆರೋಪಗಳು ಸುಳ್ಳೆಂದು ಸಾಬೀತು ಪಡಿಸಲು ಕೆಲವು ದಿನಗಳ ಕಾಲಾವಕಾಶ ಕೋರಿದ್ದಾರೆ.ಹಿಂದೊಮ್ಮೆ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂಬ ಕಾರಣಕ್ಕಾಗಿಯೇ ಸಾಕಷ್ಟು ಪಡಿಪಾಟಲು ಪಟ್ಟಿದ್ದ ನ್ಯಾಯಮೂರ್ತಿ ಇಫ್ತಿಕಾರ್ ಮಹಮ್ಮದ್ ಚೌಧರಿ ಅವರೇ ನಂತರ ಮುಖ್ಯ ನ್ಯಾಯಮೂರ್ತಿಗಳಾದರು.

 

ಹೀಗಾಗಿ ಪ್ರಜಾಪ್ರಭುತ್ವ ಮೌಲ್ಯಗಳು ದಿಕ್ಕು ತಪ್ಪಿದರೆ ಪರಿಸ್ಥಿತಿ ಏನಾಗುತ್ತದೆ ಎಂಬ ಅರಿವು ಇಫ್ತಿಕಾರ್ ಅವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಸೇನಾ ಆಡಳಿತಗಾರರ ಕಾಲದಲ್ಲಿ ಇಫ್ತಿಕಾರ್ ಅವರು ತಮ್ಮ ಕುಟುಂಬ ವರ್ಗದವರೊಂದಿಗೆ ಕೇವಲ ಒಂದೇ ಕೊಠಡಿಯಲ್ಲಿ ಹಲವು ದಿನಗಳ ಕಾಲ ಬದುಕು ಕಳೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಅಂತಹ ದೇಶದಲ್ಲಿ ಉಳಿದೆಲ್ಲಾ ಸಂಸ್ಥೆಗಳು ತತ್ತರಿಸಿ ಮೂಲೆ ಹಿಡಿದಿರುವಾಗ ಸುಪ್ರೀಂ ಕೋರ್ಟ್ ದಿಟ್ಟವಾಗಿ ಎದ್ದು ನಿಂತಿರುವುದೇ ಪಾಕ್‌ನಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಉಳಿವಿನ ಬಗ್ಗೆ ಆಶಾಕಿರಣಗಳು ಹೊಳೆಯುವಂತಾಗಿದೆ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗವೇ ಭದ್ರ ಅಡಿಪಾಯ ತಾನೆ.ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದರಿಂದ ರಾಜಕೀಯ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂಬ ಕೆಲವರ ವಾದ ನನಗೆ ಅರ್ಥವೇ ಆಗುತ್ತಿಲ್ಲ. ಜನಪ್ರತಿನಿಧಿಗಳ ಕೆಲವು ಹಕ್ಕುಗಳಿಗೆ ಸಂಚಕಾರ ಬರುತ್ತದೆ ಎಂಬುದು ಕೆಲವರ ಅನಿಸಿಕೆ. ಆದರೆ ಹಾಗೇನೂ ಇಲ್ಲ.ಉದಾಹರಣೆಗೆ ಹೇಳುವುದಿದ್ದರೆ, ಈಚೆಗೆ ನಮ್ಮ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನೇ ಗಮನಿಸಬಹುದು. ಇಂತಹದ್ದೊಂದು ತೀರ್ಪನ್ನು ಈಚೆಗೆ ಪಾಕ್‌ನಲ್ಲಿ ಗಿಲಾನಿ ಪರ ವಾದಿಸುತ್ತಿರುವ ವಕೀಲ ಏಜಾಜ್ ಹಸನ್ ತಮ್ಮ ವಾದದ ಸಮರ್ಥನೆಗೆ ಬಳಸಿಕೊಂಡಿದ್ದನ್ನೂ ಗಮನಿಸಬಹುದು.

 

ವಿವಾದಿತ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಈಚೆಗೆ ನ್ಯಾಯಾಲಯ ಹಿಂದೆ ಮಂಜೂರಾಗಿದ್ದ 122 ಪರವಾನಗಿಗಳನ್ನು ರದ್ದುಗೊಳಿಸಿ ಆದೇಶ ನೀಡಿತ್ತು.

 

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿಯವರನ್ನು ಎಳೆದು ತರುವ ಅಗತ್ಯವಿಲ್ಲ ಎಂದಿತ್ತು. ಇದೀಗ ಸೆರೆಮನೆಯಲ್ಲಿರುವ ಮಾಜಿ ಟೆಲಿಕಾಮ್ ಸಚಿವ ಎ.ರಾಜಾ ಅವರು ತರಂಗಾಂತರ ಹಂಚಿಕೆ ಕುರಿತಂತೆ ಪ್ರಧಾನಿ ಕಚೇರಿಗೆ ಬರೆದಿದ್ದ ಪತ್ರಗಳು ಪ್ರಧಾನಿಯವರ ಗಮನಕ್ಕೇ ಬಂದಿರಲಿಲ್ಲ ಎಂದೂ ವಾದಿಸಲಾಗಿತ್ತು.ಕೊನೆಗೆ ಅಧಿಕಾರಿಗಳು ಮತ್ತು ಸಲಹೆಗಾರರ ಮೇಲೆಯೇ ತಪ್ಪು ಹೊರಿಸಲಾಯಿತು. ಈಚೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಏಜಾಜ್ ಹಸನ್ ಇದೇ ರೀತಿ ಗಿಲಾನಿ ಪರ ವಾದ ಮಂಡಿಸಿದ್ದಾರೆ.ಭಾರತದಲ್ಲಿ ನ್ಯಾಯಾಂಗದ ಪಾರಮ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಂವಿಧಾನದಲ್ಲಿರುವ ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ ಮತ್ತು ಸಂಸತ್ ವ್ಯವಸ್ಥೆಯ ಮೂಲ ಸ್ವರೂಪಗಳನ್ನು ಬದಲಿಸಲು ಪಾರ್ಲಿಮೆಂಟ್‌ಗೂ ಸಾಧ್ಯವಿಲ್ಲ.ಆದರೆ ಕೆಲವು ಸಂದರ್ಭಗಳಲ್ಲಿ ಜನಾಭಿಪ್ರಾಯಗಳ ಅಬ್ಬರದಲ್ಲಿ ಸಂಸತ್ತಿನ ನಿಲುವುಗಳೂ ತೂಗುಯ್ಯಾಲೆಯಾಗುವುದಿದೆ. ಅದೇನೇ ಇರಲಿ, ಪಾಕ್‌ನಲ್ಲಿ ಸಂವಿಧಾನದ ಮೂಲ ಆಶಯಗಳ ಉಲ್ಲಂಘನೆಯಾಗದಿರಲಿ.ಅದರಿಂದ ಪಾಕ್‌ಗೇ ಒಳಿತು. ಇವೆಲ್ಲದರ ನಡುವೆಯೇ ಸುಪ್ರೀಂಕೋರ್ಟ್ ತನ್ನಲ್ಲೇ ಸಹಮತವಿಲ್ಲದಿದ್ದರೂ ಸಂವಿಧಾನದ ಆಶಯಗಳ ಪರ ಅರ್ಥಪೂರ್ಣ ಧ್ವನಿ ಎತ್ತಿದೆ.ನ್ಯಾಯಾಂಗದ ಹಿರಿಮೆ, ಜನಪ್ರತಿನಿಧಿಗಳ ಹಕ್ಕು ಕರ್ತವ್ಯ ಇತ್ಯಾದಿ ಚರ್ಚೆಗಳ ಅಬ್ಬರದಲ್ಲಿ ಪ್ರಸಕ್ತ ಪೆಡಂಭೂತವಾಗಿ ಬೆಳೆದಿರುವ ಲಂಚಗುಳಿತನ, ಭ್ರಷ್ಟಾಚಾರಗಳ ಕುರಿತ ವಿಷಯ ಮಸುಕಾಗಲೇ ಬಾರದು.

 

ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಗಳಿಸಿದ್ದಾರೆ ಮತ್ತು ಭಾರಿ ಮೊತ್ತದ ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿನ ಅಧ್ಯಕ್ಷ ಜನರಲ್ ಮುಷರಫ್ ವಿಶೇಷ ಆದೇಶದ ಮೂಲಕ ಜರ್ದಾರಿಯವರ ಮೇಲಿರುವ ಆರೋಪಗಳನ್ನು ಕೈಬಿಟ್ಟಿರಬಹುದು, ಕ್ಷಮಿಸಿರಬಹುದು.

 

ಆದರೆ ಅದನ್ನೇ ನೆಪವಾಗಿರಿಸಿಕೊಂಡು ಜರ್ದಾರಿಯವರು ತಾವು ಅಕ್ರಮವಾಗಿ ಗಳಿಸಿರುವ ಭಾರಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುವಂತಿಲ್ಲ. ಅದು ಪಾಕ್ ಖಜಾನೆಗೆ ಸೇರಿದ ಹಣವಲ್ಲವೇ.ಇವತ್ತು ಗಿಲಾನಿ ಪ್ರಧಾನಿಯಾಗಿರಬಹುದು ನಿಜ, ಆದರೆ ಅವರು ಆ ಸ್ಥಾನಕ್ಕೆ ಏರಿದ್ದೇ ಜರ್ದಾರಿ ನೆರವಿನಿಂದ. ಇಂತಹ ಗಿಲಾನಿಯವರು ಜರ್ದಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆಂದು ನಂಬಲು ಸಾಧ್ಯವೇ ?ಸಂವಿಧಾನದ ಚೌಕಟ್ಟಿನೊಳಗೆ ಇದೀಗ ಜರ್ದಾರಿಯವರಿಗೆ ರಕ್ಷಣೆ ಇದೆ, ವಿನಾಯಿತಿ ಇದೆ ಎಂದು ಪ್ರಧಾನಿ ಗಿಲಾನಿಯವರು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಇಂತಹ ರಕ್ಷಣೆ ಅಥವಾ ವಿನಾಯಿತಿಯನ್ನೂ ಪ್ರಶ್ನಿಸುವ ಹಕ್ಕು ಸುಪ್ರೀಂ ಕೋರ್ಟ್‌ಗೆ ಇದ್ದೇ ಇದೆಯಲ್ಲ. ಸ್ವತಃ ಜರ್ದಾರಿಯವರ ಬ್ಯಾಂಕು ಖಾತೆಯಲ್ಲೇ ಆಗಿರಬಹುದು ಅಥವಾ ಇನ್ನಾವುದೇ ಸ್ವರೂಪದಲ್ಲಿ ವಿದೇಶದಲ್ಲಿರುವ ಪಾಕ್‌ನ ಹಣವನ್ನು ದೇಶಕ್ಕೆ ವಾಪಸು ತರಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಲು ಸಾಧ್ಯವಿದೆ.ಜರ್ದಾರಿಯವರು ದೇಶದ ಅಧ್ಯಕ್ಷರಾಗಿರುವುದರಿಂದ ಅವರ ಮೇಲೆ ಯಾವುದೇ ತೆರನಾದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಂತಹ ರಕ್ಷಣೆ ಸಂವಿಧಾನದಲ್ಲಿಯೇ ಅಡಕವಾಗಿದೆ, ನಿಜ.

 

ಆದರೆ ವಿದೇಶದ ಬ್ಯಾಂಕುಗಳಲ್ಲಿರುವ ಪಾಕ್‌ಗೆ ಸೇರಿದ ಭಾರಿ ಹಣವನ್ನು ವಾಪಸು ತರುವುದಕ್ಕೆ ಜರ್ದಾರಿಯವರಿಗೆ ಇರುವ ಸಂವಿಧಾನದ ರಕ್ಷಣೆ ಅಡ್ಡಿಯಾಗಲಿಕ್ಕಿಲ್ಲ.ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರು ಜರ್ದಾರಿ ಅವರ ಸ್ವಿಸ್ ಬ್ಯಾಂಕುಗಳ ಖಾತೆಗಳಲ್ಲಿರುವ ಹಣದ ವಿವರ ಪಡೆಯುವ ನಿಟ್ಟಿನಲ್ಲಿ ತನಿಖೆಯನ್ನು ಪುನರಾರಂಭಿಸಬೇಕೆಂದು ಪ್ರಧಾನಿ ಗಿಲಾನಿಯವರಿಗೆ ಆದೇಶ ನೀಡಿರುವುದು ಯಾವುದೇ ಕಾರಣಕ್ಕೂ ಆಡಳಿತಗಾರರ ಘನತೆಯನ್ನು ಕುಗ್ಗಿಸುವಂತಹದ್ದೆೀನಲ್ಲ.

 

ಆದರೆ ಅಂಥದೊಂದು ಆದೇಶವನ್ನು ಪಕ್ಕಕ್ಕೆ ಸರಿಸಿ ತಮಗೇನೂ ಗೊತ್ತಿಲ್ಲ ಎಂಬಂತೆ ಎರಡು ವರ್ಷಗಳನ್ನು ದೂಡಿರುವ ಗಿಲಾನಿಯವರ ವರ್ತನೆ ಅವರು ನ್ಯಾಯಾಂಗಕ್ಕೆ ಎಸಗಿದ ಅಪಚಾರದಂತಿದೆ.ಇದು ಕಾರ್ಯಾಂಗದ ಅಹಂಕಾರದ ನಡೆಗೆ ಸ್ಪಷ್ಟ ನಿದರ್ಶನವಾಗಿದೆ. ಅಧಿಕಾರದ ಗದ್ದುಗೆಯ ಮೇಲಿರುವವರ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಮಾತನಾಡುವುದು, ತನಿಖೆ ನಡೆಸುವುದು ಸರ್ಕಾರದ ಮೇಲೆ ಅಥವಾ ಸಂಸತ್ತಿನ ಮೇಲೆ ದಾಳಿ ನಡೆಸಿದಂತೆ ಎಂದುಕೊಳ್ಳಬೇಕಾಗಿಲ್ಲ.ಉನ್ನತ ಸ್ಥಾನದಲ್ಲಿರುವವರು ಭ್ರಷ್ಟಾಚಾರ ನಡೆಸಿದ್ದರೆ ಅಂತಹವರನ್ನು ಕಾನೂನಿನ ಚೌಕಟ್ಟಿನೊಳಗೆ ತರುವುದರಿಂದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಇನ್ನಷ್ಟೂ ವಿಶ್ವಾಸ ಹೆಚ್ಚುತ್ತದೆ.ಈಚೆಗಿನ ದಿನಗಳಲ್ಲಿ ದಕ್ಷಿಣ ಏಷ್ಯಾದ ಬಹುತೇಕ ದೇಶಗಳ ಉನ್ನತ ಸ್ಥಾನದಲ್ಲಿರುವ ಬಹಳಷ್ಟು ಮಂದಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದರೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವಂತಿದೆ.

 

ಹೀಗಾಗಿ ಈ ಮಟ್ಟಿಗಿನ ಭ್ರಷ್ಟಾಚಾರಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಶಾಸನವನ್ನು ರೂಪಿಸಬೇಕಾದ ಅಗತ್ಯವಂತೂ ಇದೆ.ಗಿಲಾನಿಯವರ ಮೇಲಿರುವ ನ್ಯಾಯಾಂಗ ಉಲ್ಲಂಘನೆ ಪ್ರಕರಣದ ವಿಚಾರಣೆ ಎಲ್ಲಿಗೆ ತಲುಪಬಹುದು ಎಂದು ಊಹಿಸುವುದು ಈಗ ಕಷ್ಟ. ಆದರೆ ಇದು ಪಾಕ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದು ಸತ್ಯ.ಈಗಾಗಲೇ ನ್ಯಾಯಾಲಯ ಅಟಾರ್ನಿ ಜನರಲ್ ಅನ್ವರ್ ಉಲ್ ಹಖ್ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯೋಜಕರನ್ನಾಗಿ ನೇಮಕ ಮಾಡಿದೆ. ಈ ಮೂಲಕ ಸರ್ಕಾರದ ಹಿರಿಯ ಕಾನೂನು ಸಲಹೆಗಾರರನ್ನೇ ಪ್ರಧಾನ ಮಂತ್ರಿಯವರ ವಿರುದ್ಧ ನಿಲ್ಲಿಸಲಾಗಿದೆ.

 

ಈ ಘಟನೆಯ ಬಗ್ಗೆ ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ತನ್ನ ವಿಷಾದ ವ್ಯಕ್ತಪಡಿಸಿದ್ದು ಪಾಕಿಸ್ತಾನದ ಚರಿತ್ರೆಯಲ್ಲೇ ಇದೊಂದು ದುಃಖದ ದಿನ ಎಂದು ಹೇಳಿಕೆ ನೀಡಿದೆ.ಆದರೆ ಈ ಪ್ರಕರಣವನ್ನು ಪ್ರಜಾಸತ್ತೆಯ ಹೆಗ್ಗಳಿಕೆಯಾಗಿ ನಾವೇಕೆ ನೋಡಬಾರದು. ಒಂದು ಕಾಲದಲ್ಲಿ ಸೇನಾಡಳಿತಗಾರರ ಬಾಲಬಡುಕನಂತಿದ್ದ ನ್ಯಾಯಾಂಗ ಇವತ್ತು ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವಂತಾಗಿರುವುದು ದಕ್ಷಿಣ ಏಷ್ಯಾ ದೇಶಗಳಲ್ಲೇ ಅಪರೂಪದ ಪ್ರಸಂಗ.ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಭಾರತದ ಸಿಬಿಐ ತನಿಖಾ ಸಂಸ್ಥೆಯ ನಿರ್ದೇಶಕರು ಸಾರ್ವಜನಿಕ ವೇದಿಕೆಯೊಂದರಲ್ಲಿ ಮಾತನಾಡುತ್ತಾ ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಸುಮಾರು 24.5 ಲಕ್ಷ ಕೋಟಿ ರೂ.ಅಕ್ರಮ ಹಣವನ್ನಿರಿಸಿದ್ದಾರೆ ಎಂದಿದ್ದರು. ಜತೆಗೆ `ಯಥಾ ರಾಜ, ತಥಾ ಪ್ರಜಾ~ ಎನ್ನುವ ಧೈರ್ಯವನ್ನೂ ಅವರು ತೋರಿದ್ದರು. ಈ ಸುದ್ದಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವನ್ನು ಇದೀಗ ಇನ್ನಿಲ್ಲದಂತೆ ಕಾಡತೊಡಗಿದೆ.ಇಂಥ ಸುದ್ದಿ ಸ್ಫೋಟಗೊಂಡಾಗ ಸಹಜವಾಗಿಯೇ ಎಲ್ಲಾ ವಲಯಗಳ ಮಂದಿ ಆ ಹಣವನ್ನು ಭಾರತಕ್ಕೆ ವಾಪಸು ತರಬೇಕು ಎಂದು ಧ್ವನಿ ಎತ್ತಿರುವುದು ಸಹಜ ಪ್ರತಿಕ್ರಿಯೆಯಾಗಿದೆ. ಆದರೆ ಹಣವನ್ನು ವಾಪಸು ತರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಬಲ ಪ್ರಯತ್ನಗಳು ನಡೆದಂತಿಲ್ಲ.

 

ಏಕೆಂದರೆ ಹೊರದೇಶದ ಬ್ಯಾಂಕುಗಳಲ್ಲಿ ಹಣ ಇಟ್ಟಿರುವವರಲ್ಲಿ ಹಲವರು ಕಾಂಗ್ರೆಸ್ ಸೇರಿದಂತೆ ದೇಶದ ವಿಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದವರೇ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಸಿಬಿಐ ನಿರ್ದೇಶಕರು ಹಣವನ್ನು ವಾಪಸು ತರುವುದು ಅಷ್ಟೇನೂ ಸುಲಭದ ಕೆಲಸವಲ್ಲ ಎಂದಿರುವುದು ಅರ್ಥಪೂರ್ಣವೇ ಆಗಿದೆ.`ಈ ನಿಟ್ಟಿನ ತನಿಖೆಯು ಬಹಳ ಕ್ಲೇಶದಿಂದ ಕೂಡಿರುವಂತಹದ್ದು, ಅಪಾರ ಹಣ ವೆಚ್ಚ ಮಾಡಬೇಕಾಗುತ್ತದೆ, ಅಲ್ಲದೆ ಅನಗತ್ಯವಾಗಿ ವಿಳಂಬವಾಗಲಿದೆ~ ಎಂದಿರುವ ಅವರು `ಇದಕ್ಕೊಂದು ರಾಜಕೀಯ ಇಚ್ಛಾಶಕ್ತಿಯೂ ಬೇಕಾಗುತ್ತದೆ~ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಇದೀಗ ನಮ್ಮ ಎದುರು ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಮಾದರಿ ಇದೆ. ಕೆಲವು ಆಸಕ್ತರು ನಮ್ಮ ಸುಪ್ರೀಂ ಕೋರ್ಟ್ ಮೆಟ್ಟಲೇರಿ ಹೊರದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತರುವಲ್ಲಿ ಪರಿಣಾಮಕಾರಿ ಪ್ರಯತ್ನ ನಡೆಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಬಹುದಾಗಿದೆ.ಇಲ್ಲಿ ಯಾವುದೇ ತೆರನಾದ ವಿನಾಯಿತಿಯ ಪ್ರಶ್ನೆ ಉದ್ಭವಿಸುವುದಿಲ್ಲ. ಇಂತಹದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೆ ನಮ್ಮ ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯೊಂದು ಆಮೆ ನಡಿಗೆಯಲ್ಲಿದೆ. ಹೀಗಾಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ `ಶಾಕ್ ಟ್ರೀಟ್‌ಮೆಂಟ್~ನ ಅಗತ್ಯವಿದೆ.(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry