ಭಾನುವಾರ, ಡಿಸೆಂಬರ್ 15, 2019
21 °C

ಪಾತಾಳಕ್ಕಿಳಿದ ಆಕಾಶ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಪಾತಾಳಕ್ಕಿಳಿದ ಆಕಾಶ

ಭಾರತ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಮತ್ತು ಬಡಜನರಿಗಾಗಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಗಣಕ ತಯಾರಿಯ ಘೋಷಣೆಯನ್ನು ಅಕ್ಟೋಬರ್ ೨೦೧೧ರಲ್ಲಿ ಮಾಡಿತ್ತು. ಯಾರೂ ಸರ್ಕಾರವನ್ನು ಆಗ ನಂಬಿರಲಿಲ್ಲ. ಯಾಕೆಂದರೆ ಹಿಂದೊಮ್ಮೆ ಕೇವಲ ೧೦ ಡಾಲರಿಗೆ (ಆಗ ಸುಮಾರು ೪೫೦ ರೂ.) ಗಣಕ ತಯಾರಿಸಿ ನೀಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡು ಮರ್ಯಾದೆ ಕಳೆದುಕೊಂಡಿತ್ತು.

ಈ ಸಲ ಸರ್ಕಾರ ಘೋಷಿಸಿದ ಮುಖಬೆಲೆ ಸುಮಾರು ೩೫ ಡಾಲರ್ (ಆಗ ಸುಮಾರು ೧೫೦೦ರೂ.). ಕೊನೆಗೂ ಆಕಾಶ್ ಹೆಸರಿನ ಟ್ಯಾಬ್ಲೆಟ್ ಗಣಕ ತಯಾರಾಗಿ ಕೆಲವು ವಿದ್ಯಾರ್ಥಿಗಳ ಕೈಸೇರಿತು. ಅದನ್ನು ಬಳಸಿದ ಎಲ್ಲರೂ ಅದನ್ನು ನೇರವಾಗಿ ಕಸದ ತೊಟ್ಟಿಗೆ ಎಸೆಯಲು ಅರ್ಹ ಎಂದು ತೀರ್ಪು ನೀಡಿದರು. ಆದರೆ ಇದರಿಂದ ಸರ್ಕಾರ ಹಿಂಜರಿಯಲಿಲ್ಲ.

ಮೊದಲು ರಾಜಸ್ತಾನ ಐಐಟಿಯ ಉಸ್ತುವಾರಿಯಲ್ಲಿದ್ದ ಆಕಾಶ್ ಮುಂಬಯಿ ಐಐಟಿಯ ಉಸ್ತುವಾರಿಗೆ ಬದಲಾಯಿತು. ಆಕಾಶ್ -೨ ಹೆಸರಿನ ಟ್ಯಾಬ್ಲೆಟ್ ತಯಾರಾಯಿತು. ಇದು ವಿದ್ಯಾರ್ಥಿಗಳಿಗೆ ಸರ್ಕಾರದ ಸಬ್ಸಿಡಿಯಿಂದಾಗಿ ೨೦೦೦ ರೂ.ಗಳಿಗೆ ದೊರೆಯುತ್ತದೆ. ಜನಸಾಮಾನ್ಯರಿಗೆ ಇದೇ ಟ್ಯಾಬ್ಲೆಟ್ ಉಬಿಸ್ಲೇಟ್ 7Ci (Ubislate 7Ci) ಎಂಬ ಹೆಸರಿನಲ್ಲಿ ಸುಮಾರು ೩೮೦೦ ರೂ.ಗಳಿಗೆ ದೊರೆಯುತ್ತದೆ. ಈ ಸಲ ಇದರ ವಿಮರ್ಶೆ.

ಗುಣವೈಶಿಷ್ಟ್ಯಗಳು

೧ ಗಿಗಾಹರ್ಟ್ಸ್ ವೇಗದ ಕೋರ್ಟೆಕ್ಸ್ ಎ೮ ಪ್ರೊಸೆಸರ್, ೫೧೨ ಮೆಗಾಬೈಟ್ ಪ್ರಾಥಮಿಕ ಮೆಮೊರಿ, ೪ ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 800x480 ಪಿಕ್ಸೆಲ್ ರೆಸೊಲೂಶನ್‌ನ ೭ ಇಂಚು ಗಾತ್ರದ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ, ನಮ್ಮ ಕಡೆ ಮುಖ ಮಾಡಿರುವ ವಿಜಿಎ ರೆಸೊಲೂಶನ್‌ನ ಕ್ಯಾಮೆರಾ, ಜಿ-ಸೆನ್ಸರ್, ವೈಫೈ ಸಂಪರ್ಕ, ೩.೫ ಮಿ.ಮೀ. ಇಯರ್‌ಫೋನ್ ಕಿಂಡಿ, ಯುಎಸ್‌ಬಿ ಕಿಂಡಿ, ವಾಲ್ಯೂಮ್ ಬಟನ್, ಸುಮಾರು ಮೂರು ಗಂಟೆಗಳ ಕಾಲ ಬಾಳಿಕೆ ಬರುವ ಬ್ಯಾಟರಿ, ಆಂಡ್ರೋಯಿಡ್ ೪.೦.೩, ಇತ್ಯಾದಿ. ಗಮನಾರ್ಹ ಕೊರತೆಗಳು (ಇಲ್ಲದಿರುವಿಕೆಗಳು)-೨ಜಿ ಅಥವಾ ೩ಜಿ ಸಿಮ್ ಕಾರ್ಡ್ ಸೌಲಭ್ಯ, ಮುಂದುಗಡೆಯ ಕ್ಯಾಮೆರಾ, ಬ್ಲೂಟೂತ್, ಜಿಪಿಎಸ್ ಇತ್ಯಾದಿ.



ಇದು ಅತಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಕೊರತೆಗಳ ಕಡೆ ಗಮನ ಹರಿಸುವ ಮೊದಲು ಇದರಲ್ಲಿರುವ ಕೆಲವು ಉತ್ತಮ ಗುಣಗಳನ್ನು ಗಮನಿಸೋಣ. ಇದರ ರಚನೆ, ವಿನ್ಯಾಸ ಚೆನ್ನಾಗಿದೆ. ಕೈಯಲ್ಲಿ ಹಿಡಿಯುವ ಅನುಭವ ಅದ್ಭುತ ಎನ್ನದಿದ್ದರೂ ಪರವಾಗಿಲ್ಲ ಎನ್ನಬಹುದು. ಪರದೆಯ ಸ್ಪರ್ಶಸಂವೇದನೆ ಉತ್ತಮವಾಗಿದೆ. ಪರದೆಯ ಗುಣಮಟ್ಟವೂ ಪರವಾಗಿಲ್ಲ. ಪರದೆಯಲ್ಲಿ ಐಕಾನ್‌ಗಳ ಸರಿಸುವಿಕೆ ಸಲೀಸಾಗಿದೆ.



ಇದರ ಕೆಲಸ ಮಾಡುವ ವೇಗ ಸಾಮಾನ್ಯ ಕೆಲಸಗಳಿಗೆ ಪರವಾಗಿಲ್ಲ. ಆದರೆ ಆಧುನಿಕ ಮತ್ತು ಅಧಿಕ ವೇಗದ ಪ್ರೊಸೆಸರ್ ಬೇಡುವ ಕೆಲಸಗಳಿಗೆ ಇದು ಹೇಳಿ ಮಾಡಿಸಿದ್ದಲ್ಲ. ಯಾಕೆಂದರೆ ಇದರ ಪ್ರೊಸೆಸರ್ ಅಧಿಕ ವೇಗದ್ದೂ ಅಲ್ಲ, ಎರಡು ಅಥವಾ ಹೆಚ್ಚಿಗೆ ಹೃದಯಗಳದ್ದೂ ಅಲ್ಲ. ಈಗೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅಧಿಕ ಬೆಲೆಯ ಆಂಡ್ರೋಯಿಡ್ ಟ್ಯಾಬ್ಲೆಟ್‌ಗಳ ಜೊತೆ ಇದನ್ನು ಖಂಡಿತ ಹೋಲಿಸುವಂತಿಲ್ಲ.



ಇದರಲ್ಲಿ ಒಂದು ವಿಶೇಷ ಬ್ರೌಸರ್ ತಂತ್ರಾಶ ಇದೆ. ಇದು ಕಡಿಮೆ ವೇಗದ ಅಂತರಜಾಲ ಸಂಪರ್ಕ ಸಹಜವಾಗಿರುವ ಭಾರತದ ಹಳ್ಳಿಗಳಿಗೆಂದೇ ವಿಶೇಷವಾಗಿ ತಯಾರಾದುದು. ಅಂದರೆ, ಇದನ್ನು ಬಳಸಿ ಅತಿ ಕಡಿಮೆ ವೇಗದ ಅಂತರಜಾಲ ಸಂಪರ್ಕವಿದ್ದರೂ ಜಾಲತಾಣ ವೀಕ್ಷಣೆ ಮಾಡಬಹುದು. ಪುಟಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ. ಈ ತಂತ್ರಾಂಶದ ಪ್ರಮುಖ ಕೊರತೆಯೆಂದರೆ ವೇಗದ ವೈಫೈ ಸಂಪರ್ಕವಿದ್ದರೂ ಅದು ಕಡಿಮೆ ವೇಗದ ಸಂಪರ್ಕದಲ್ಲಿದ್ದಂತೆಯೇ ನಿಧಾನವಾಗಿ ಕೆಲಸ ಮಾಡುತ್ತದೆ.



ಇದರ ವಿಡಿಯೊ ಗುಣಮಟ್ಟ, ನೀಡುವ ಹಣಕ್ಕೆ ಹೋಲಿಸಿ­ದರೆ ಪರವಾಗಿಲ್ಲ ಎನ್ನಬಹುದು. ಹೈಡೆಫಿನಿಶನ್ ವಿಡಿಯೊ ಕೂಡ ಪ್ಲೇ ಮಾಡುತ್ತದೆ. ಆದರೆ ಅಧಿಕ ಬೆಲೆಯ ಟ್ಯಾಬ್ಲೆಟ್ ಬಳಸಿ ಅನುಭವವಿರುವವರಿಗೆ ಇದು ಆಟದ ಸಾಮಾನು ಅನ್ನಿಸಬಹುದು. ಆಡಿಯೊ ಗುಣಮಟ್ಟ ಚೆನ್ನಾಗಿಲ್ಲ.



ಇದರಲ್ಲಿರುವ ಕ್ಯಾಮೆರಾ ನಮ್ಮ ಮುಖವನ್ನು ಮಾತ್ರ ತೋರಿಸುತ್ತದೆ. ಅಂದರೆ ಅದನ್ನು ಕ್ಯಾಮೆರಾವಾಗಿ ಬಳಸುವಂತಿಲ್ಲ. ಅದರ ಬಳಕೆ ಏನಿದ್ದರೂ ವಿಡಿಯೊ ಚಾಟ್ ಮಾಡಲು ಮಾತ್ರ. ಇದೂ ಸ್ವಲ್ಪ ವಿಚಿತ್ರವೇ. ವಿಡಿಯೊ ಚಾಟ್ ಮಾಡಬೇಕಿದ್ದರೆ ೩ಜಿ ಸಿಮ್ ಕಾರ್ಡ್ ಸೌಲಭ್ಯ ಬೇಕು. ಈ ಮಾದರಿಯಲ್ಲಿ ಅದಿಲ್ಲ. ವೈಫೈ ಸಂಪರ್ಕ ಮೂಲಕ ಸ್ಕೈಪ್ ಅಥವಾ ಇತರೆ ಅಂತಹುದೇ ತಂತ್ರಾಂಶ ಬಳಸಿ ವಿಡಿಯೊ ಚಾಟ್ ಮಾಡಬಹುದು.



ಆಕಾಶ್ ಟ್ಯಾಬ್ಲೆಟ್ ಬ್ಯಾಟರಿ ಬಳಕೆಯಲ್ಲಿ ಮಾತ್ರ ಪಾತಾಳಕ್ಕಿಳಿಯುತ್ತದೆ. ಪೂರ್ತಿ ಚಾರ್ಜ್ ಮಾಡಿದರೆ ಕೇವಲ ಮೂರು ಗಂಟೆ ಕೆಲಸ ಮಾಡುತ್ತದೆ. ಪೂರ್ತಿ ಚಾರ್ಜ್ ಮಾಡಲು ಸುಮಾರು ಆರೇಳು ಗಂಟೆ ಬೇಕು. ಇದು ನಿಜಕ್ಕೂ ಅತಿರೇಕ. ಪೂರ್ತಿ ಚಾರ್ಜ್ ಮಾಡಿ ಸುಮ್ಮನೆ ಇಟ್ಟರೂ ಸುಮಾರು ಆರೇಳು ಗಂಟೆಗಳಲ್ಲಿ ಬ್ಯಾಟರಿ ಶಕ್ತಿ ಸುಮಾರು ೨೦%ಕ್ಕೆ ಇಳಿದಿರುತ್ತದೆ.

ಭಾರತದ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ದಿನದಲ್ಲಿ ನಾಲ್ಕೈದು ಗಂಟೆ ಇದ್ದರೆ ಪುಣ್ಯ. ಅಂತಹ ಹಳ್ಳಿಗಳಿಗಾಗಿ ತಯಾರಾದ ಟ್ಯಾಬ್ಲೆಟ್ ಗಣಕದ ಬ್ಯಾಟರಿ ಶಕ್ತಿ ಅತಿ ಕಡಿಮೆ ಎಂದರೆ ಇದಕ್ಕಿಂತ ವಿಪರ್ಯಾಸ ಇನ್ನೊಂದಿಲ್ಲ. ಇದು ಬಳಸುವುದು ಆಂಡ್ರೋಯಿಡ್ ೪.೦.೩ (ಐಸ್‌ಕ್ರೀಂ). ಅಂದರೆ ಇದರಲ್ಲಿ ಭಾರತೀಯ ಭಾಷೆಗಳ ಸೌಲಭ್ಯವಿಲ್ಲ. ಪಠ್ಯದ ರೆಂಡರಿಂಗ್ ಕೂಡ ಇಲ್ಲ.

ಗ್ರಾಮೀಣ ಭಾರತಕ್ಕಾಗಿ ತಯಾರಾದ ಟ್ಯಾಬ್ಲೆಟ್ ಗಣಕದಲ್ಲಿ ಭಾರತೀಯ ಭಾಷೆಗಳ ಸೌಲಭ್ಯ ಇಲ್ಲದಿರುವುದು ಇನ್ನೊಂದು ಗಮನಾರ್ಹ ಕೊರತೆಯೇ. ಮುಂಬಯಿ ಐಐಟಿಯವರು ಆಕಾಶ್ ಟ್ಯಾಬ್ಲೆಟ್‌ಗೆಂದೇ ಫಯರ್‌ಫಾಕ್ಸ್ ಬ್ರೌಸರ್‌ಗೆ ವಿಶೇಷ ಭಾರತೀಯ ಭಾಷೆಗಳ ಪ್ಲಗ್‌ಇನ್ ತಯಾರಿಸಿದ್ದಾರೆ. ಅದನ್ನು ಹಾಕಿಕೊಂಡರೆ ಭಾರತೀಯ ಭಾಷೆಗಳ ಜಾಲತಾಣ ವೀಕ್ಷಣೆ ಮಾಡಬಹುದು.



ಉಬಿಸ್ಲೇಟ್‌ನವರು ಎರಡು ಪ್ರಮುಖ ಮಾದರಿ ತಯಾರಿಸಿದ್ದಾರೆ. ಇಷ್ಟು ಬರೆದುದು 7Ci ಬಗ್ಗೆ. ಇನ್ನೊಂದು ಪ್ರಮುಖ ಮಾದರಿ 7C+(EDGE). ಇದರಲ್ಲಿ ೨ಜಿ ಸಿಮ್‌ಕಾರ್ಡ್ ಹಾಕಬಹುದು. ೩ಜಿ ಸೌಲಭ್ಯವಿಲ್ಲ. ಅದು ಬಿಟ್ಟರೆ ಎರಡು ಮಾದರಿಗಳಿಗೆ ಇನ್ನೇನೂ ವ್ಯತ್ಯಾಸವಿಲ್ಲ. ಇದರ ಬೆಲೆ ರೂ.೪೮೦೦. ಎರಡು ಮಾ­ದರಿಗಳೂ ubislate.com ಜಾಲತಾಣದ ಮೂಲಕ ಕೊಂಡುಕೊಳ್ಳಲು ಲಭ್ಯ.



ಸೂಚನೆ: ನಾನು ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ ನೀಡುತ್ತೇನೆ ಮತ್ತು ವಿಮರ್ಶೆ ಬರೆಯುತ್ತೇನೆ. ಯಾವುದೇ ಗ್ಯಾಜೆಟ್‌ಗಳ ಮಾರಾಟ ಮಾಡುವುದಿಲ್ಲ. ಗ್ಯಾಜೆಟ್ ಕೊಳ್ಳಬೇಕೆಂದುಕೊಂಡಿರುವವರು ದಯವಿಟ್ಟು ಅಂಗಡಿಗಳಲ್ಲಿ ಅಥವಾ ಜಾಲತಾಣಗಳಲ್ಲಿ ಕೊಂಡುಕೊಳ್ಳಬೇಕು.

ಗ್ಯಾಜೆಟ್ ಸಲಹೆ

ಪ್ರ: ಎರಡು ವಾರಗಳ ಹಿಂದೆ ನೀವು ವಿಮರ್ಶಿಸಿದ ನೋಕಿಯಾ ಆಶಾ ೫೦೧ ಫೋನಿನಲ್ಲಿ ವಾಟ್ಸ್‌ಅಪ್ ಇದೆಯೇ?

ಉ: ಸದ್ಯಕ್ಕೆ ಇಲ್ಲ. ಅಕ್ಟೋಬರ್ನಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)