ಗುರುವಾರ , ಜನವರಿ 30, 2020
23 °C

ಪಾಪತೊಳೆದ ನಿಷ್ಕಾಮ ಕರ್ಮ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಝೆಂಕೈ ಒಬ್ಬ ವೀರಯೋಧ. ಅವನ ತಂದೆಯೂ ಸೇನೆಯಲ್ಲಿದ್ದವನೇ. ಶಾಂತಿಕಾಲದಲ್ಲಿ ಯೋಧರಿಗೇನು ಕೆಲಸ? ಆತ ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಹೋದ. ಅಲ್ಲೊಬ್ಬ ಹಿರಿಯ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಧಿಕಾರಿಗೆ ಸುಂದರಳಾದ ಹೆಂಡತಿ ಮತ್ತು ಒಬ್ಬ ಪುಟ್ಟ ಮಗ. ಅವಳಿಗೆ ಝೆಂಕೈನ ಮೇಲೆ ಪ್ರೀತಿ ಬೆಳೆಯಿತು. ಆ ವಿಷಯ ನಿಧಾನವಾಗಿ ಅಧಿಕಾರಿಗೆ ತಿಳಿಯಿತು. ಅವನು ಝೆಂಕೈನನ್ನು ಕೊಲ್ಲಲು ಹೋದ. ಆಗ ಆತ್ಮರಕ್ಷಣೆಗೆ ಹೋರಾಡಿದಾಗ ಅಧಿಕಾರಿಯೇ ಸತ್ತು ಹೋದ. ಝೆಂಕೈ ಆ ಹೆಂಗಸನ್ನು ಕಟ್ಟಿಕೊಂಡು ದೂರ ದೇಶಕ್ಕೆ ಓಡಿಹೋದ.

ಹೊಸ ಪ್ರದೇಶದಲ್ಲಿ ಝೆಂಕೈ ಮತ್ತು ಆ ಹೆಂಗಸು ಏನೇನೋ ಅಡ್ಡ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಆ ಹೆಂಗಸಿಗೆ ದುರಾಸೆ ಹೆಚ್ಚು. ಈತ ಗಳಿಸಿ ತಂದದ್ದನ್ನೆಲ್ಲ ಬಾಚಿ ಕಿತ್ತುಕೊಂಡು ಇವನಿಗೇನೂ ಕೊಡುತ್ತಿರಲಿಲ್ಲ. ಈತ ಭಿಕ್ಷುಕನಂತೆ ಒಂದು ತುತ್ತು ಕೂಳಿಗೆ ಕಾದುಕೊಂಡು ಕುಳಿತಿರಬೇಕಿತ್ತು. ಝೆಂಕೈಗೆ ಈ ಬದುಕು ಸಾಕಾಗಿ ಹೋಯಿತು. ಮನೆ ಬಿಟ್ಟು ಓಡಿ ಹೋದ.

ದೂರದ ಊರಿಗೆ ಬಂದು ಕುಳಿತ ಝೆಂಕೈ ತನ್ನ ಹಿಂದಿನ ಜೀವನವನ್ನು ನೆನೆಸಿಕೊಂಡ. ಯೋಧನಾಗಿ ಘನತೆಯ ಬಾಳು ಸಾಗಿಸಿದ ತಾನು ಹೇಗೆ ಅದನ್ನು ಹಾಳು ಮಾಡಿಕೊಂಡೆ, ತನಗೆ ಆಶ್ರಯಕೊಟ್ಟ ಅಧಿಕಾರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಚಿಂತಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ತೀರ್ಮಾನಿಸಿದ.

ತಾನು ಬದುಕಿದ್ದ ಪ್ರದೇಶಕ್ಕೆ ತಲುಪಲು ಒಂದು ಸರಿಯಾದ ದಾರಿ ಇರಲಿಲ್ಲ. ಸುತ್ತ ದೊಡ್ಡ ಬೆಟ್ಟಗಳು. ಅದರಾಚೆ ಬೇರೆ ಪಟ್ಟಣಗಳು. ಈ ಊರಿಗೆ ಬರಬೇಕಾದರೆ ಜನ ಕಡಿದಾದ ದಾರಿಯಲ್ಲಿ ನಡೆದುಕೊಂಡೋ, ಕುದುರೆ, ಕತ್ತೆಗಳ ಮೇಲೆ ಕುಳಿತುಕೊಂಡೋ ಬರಬೇಕಿತ್ತು. ಒಂದು ಬೆಟ್ಟದಲ್ಲಿ ಸುರಂಗಮಾರ್ಗ ಮಾಡಿದರೆ ಪಟ್ಟಣಕ್ಕೆ ಹೋಗಿ ಬರುವುದು ತುಂಬ ಸುಲಭವಾಗುತ್ತಿತ್ತು. ಈತ ಊರ ಹಿರಿಯರಿಗೆ ಈ ವಿಷಯ ತಿಳಿಸಿ ಸಹಕಾರ ಕೋರಿದ. ಅವರೆಲ್ಲ ನಕ್ಕು ಇದೊಂದು ಹುಚ್ಚು ಯೋಜನೆ, ಯಾರಾದರೂ ಬೆಟ್ಟ ಕೊರೆಯುವುದು ಸಾಧ್ಯವೇ ಎಂದು ತಮಾಷೆ ಮಾಡಿದರು.

ಝೆಂಕೈ ಮಾತ್ರ ಹೆದರದೇ ತಾನೊಬ್ಬನೇ ಕೆಲಸ ಪ್ರಾರಂಭಿಸಿದ. ಒಬ್ಬನೇ ಬೆಳಿಗ್ಗೆ ಅಗೆಯುವ ಉಪಕರಣಗಳನ್ನು ಹೊತ್ತು ಬೆಟ್ಟದೆಡೆಗೆ ನಡೆಯುತ್ತಿದ್ದ. ಸಾಯಂಕಾಲದವರೆಗೂ ಬಿಡದೇ ದುಡಿತ. ಅವನ ಗುರಿ ಇದ್ದದ್ದು ಸುಮಾರು ಮೂರು ಸಾವಿರ ಅಡಿಗಳಷ್ಟು ಉದ್ದಾದ ಸುರಂಗಮಾರ್ಗ. ಅವನ ಏಕಮನಸ್ಸಿನ ಪರಿಶ್ರಮವನ್ನು ನೋಡಿ ಕೆಲವು ತರುಣರು ಆಗಾಗ ಬಂದು ಅವನನ್ನು ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಇದೇ ರೀತಿ ಕೆಲಸ ಇಪ್ಪತ್ತೈದು ವರ್ಷ ನಡೆಯಿತು. ಇನ್ನು ಕೇವಲ ಐದು ನೂರು ಆಡಿಯ ಕೆಲಸ ಮಾತ್ರ ಉಳಿದಿತ್ತು. ಅದೂ ಒಂದು ಐದಾರು ವರ್ಷ ತೆಗೆದುಕೊಳ್ಳಬಹುದು ಎಂದು ಅಂದಾಜು ಮಾಡಿದ.

ಆ ಹೊತ್ತಿಗೆ ಯಾವ ಅಧಿಕಾರಿಯನ್ನು ಝೆಂಕೈ ಕೊಂದುಬಂದಿದ್ದನೋ ಅವನ ಮಗ ದೊಡ್ಡವನಾಗಿದ್ದ. ಅವನಿಗೆ ತನ್ನ ತಂದೆಯನ್ನು ಹತ್ಯೆ ಮಾಡಿದ ಝೆಂಕೈನನ್ನು ಹುಡುಕಿ ಅವನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕಿತ್ತು. ಕೊನೆಗೆ ಆತ ಅವನನ್ನು ಇಲ್ಲಿ ಕಂಡ. ಝೆಂಕೈನನ್ನು ಕೊಲ್ಲಲು ಧಾವಿಸಿ ಬಂದ. ಆಗ ಝೆಂಕೈ ಹೇಳಿದ, `ಮಗೂ, ನನಗೆ ಶಿಕ್ಷೆ ಆಗಬೇಕಾದದ್ದು ಸರಿಯೇ. ಆದರೆ ನಾನೀಗ ಸಮಾಜಕ್ಕೆ ಪ್ರಯೋಜನವಾಗುವ ಕೆಲಸ ಮಾಡುತ್ತಿದ್ದೇನೆ. ಇದು ಮುಗಿದ ಮರುದಿನವೇ ನಿನ್ನ ಮುಂದೆ ಬಂದು ನಿಲ್ಲುತ್ತೇನೆ. ಆಗ ನೀನು ನನ್ನನ್ನು ಅನಾಯಾಸವಾಗಿ ಕೊಲ್ಲಬಹುದು.~

ಹುಡುಗ ಒಪ್ಪಿದ. ಸುರಂಗದ ಕೆಲಸವನ್ನು ನೋಡುತ್ತ ನಿಂತ. ಸುಮ್ಮನೇ ಕೂಡ್ರುವದೇಕೆ ಎಂದು ತಾನೂ ಉಪಕರಣವನ್ನು ಹಿಡಿದುಕೊಂಡು ಕೆಲಸಕ್ಕೆ ಸೇರಿದ. ಸುರಂಗದ ಕೆಲಸ ಎಷ್ಟು ಬೇಗ ಮುಗಿದರೆ ಅಷ್ಟು ಒಳ್ಳೆಯದಲ್ಲವೇ? ಕೆಲಸ ಮಾಡುತ್ತಿರುವಾಗ ಝೆಂಕೈನ ದೃಢಮನಸ್ಸು, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಗಮನಿಸಿ ಮೆಚ್ಚಿದ. ವರ್ಷಗಳು ಕಳೆದಂತೆ ಅವನ ಆರಾಧಕನೇ ಆದ. ಸುರಂಗ ಮುಗಿದು ರಸ್ತೆ ಸಿದ್ಧವಾಯಿತು. ಜನರಿಗೆಲ್ಲ ಸಂತೋಷವಾಯಿತು. ಝೆಂಕೈ ಹೋಗಿ ತರುಣನ ಮುಂದೆ ನಿಂತು, `ನನ್ನ ಕೆಲಸ ಮುಗಿಯಿತು. ನೀನು ನನಗೆ ಶಿಕ್ಷೆ ಕೊಡು~ ಎಂದು ಕೈ ಚಾಚಿದ.

ತರುಣ ಹೇಳಿದ,  `ಕೊಲೆಗಾರನಿಗೆ ಶಿಕ್ಷೆ ಕೊಡುವುದು ನ್ಯಾಯವೇ. ಆದರೆ ಶಿಕ್ಷಣ ಕೊಟ್ಟು, ಮಾದರಿಯಾದ ಗುರುವಿಗೆ ಶಿಕ್ಷೆ ಕೊಡುವುದು ನ್ಯಾಯವೇ?~ ಹುಡುಗನ ಕಣ್ಣಲ್ಲಿ ನೀರು! ಇಬ್ಬರೂ ಸೇರಿ ಮತ್ತೊಂದು ಕೆಲಸ ಪ್ರಾರಂಭಿಸಿದರು.

ತಪ್ಪು ಮಾಡದ ಜನರಿಲ್ಲ. ನಿಜವಾದ ಪಶ್ಚಾತ್ತಾಪವೆಂದರೆ ಅದನ್ನು ತೊಳೆಯಲು ಮಾಡಿದ ನಿಷ್ಕಾಮ ಕರ್ಮ.

ಪ್ರತಿಕ್ರಿಯಿಸಿ (+)