ಪಾಪದ ಹಣ್ಣಿಗೆ ಚಾಚಿದ ಕೈ

7

ಪಾಪದ ಹಣ್ಣಿಗೆ ಚಾಚಿದ ಕೈ

ಗುರುರಾಜ ಕರ್ಜಗಿ
Published:
Updated:

ನನಗೆ ಗುಜರಾತಿನ ಸಂತರೊಬ್ಬರು ಹೇಳಿದ ಕಥೆ ಇದು. ಒಬ್ಬ ಮನುಷ್ಯ ಪ್ರವಾಸಕ್ಕೆ ಹೊರಟಿದ್ದ. ದೂರದ ಪ್ರಯಾಣ. ನಡೆದು ನಡೆದು ತುಂಬ ಆಯಾಸವಾಗಿತ್ತು. ಮುಂದಿನ ಊರು ದೂರವಿದ್ದುದರಿಂದ ಹಸಿವೆ, ನೀರಡಿಕೆಗಳೂ ಆಗಿದ್ದವು. ಬಿಸಿಲೂ ಹೆಚ್ಚಾಗಿದ್ದರಿಂದ ದೇಹ ಸ್ವಲ್ಪ ವಿಶ್ರಾಂತಿಯನ್ನು ಅಪೇಕ್ಷಿಸುತ್ತಿತ್ತು.ಹತ್ತಿರದಲ್ಲೊಂದು ಮಾವಿನ ತೋಪು ಕಾಣಿಸಿತು. ಆತ ಅದರೆಡೆಗೆ ನಡೆದು ಬಂದು ಮರದ ಕೆಳಗೆ ಕುಳಿತುಕೊಂಡು ಸ್ವಲ್ಪ ದಣಿವಾರಿಸಿಕೊಂಡ. ಇದು ಮಾವಿನ ಹಣ್ಣುಗಳು ಬರುವ ಕಾಲವಲ್ಲವಾದ್ದರಿಂದ ಹಣ್ಣುಗಳು ದೊರೆಯುವ ಸಂಭವವಿರಲಿಲ್ಲ. ಕೆಳಗೆ ಮಲಗಿದಂತೆಯೇ ಗಿಡವನ್ನೆಲ್ಲ ನೋಡುತ್ತಿದ್ದ ಅವನಿಗೆ ಆಶ್ಚರ್ಯವಾಯಿತು! ಮರದಲ್ಲಿ ಹೂವುಗಳಿಲ್ಲ, ಕಾಯಿಗಳಿಲ್ಲ, ಆದರೆ ಮರದ ಒಂದು ಕೊಂಬೆಯ ತುತ್ತ ತುದಿಯಲ್ಲಿ ಒಂದೆರಡು ರಸಭರಿತ ಮಾವಿನ ಹಣ್ಣುಗಳು! ಈ ಕಾಲದಲ್ಲಿ ಹಣ್ಣೇ? ದಿಟ್ಟಿಸಿ ನೋಡಿದ. ಹೌದು ಅಷ್ಟು ದೊಡ್ಡ ಗಾತ್ರದ, ಬಂಗಾರ ಬಣ್ಣದ, ಸುಂದರವಾದ ರಸತುಂಬಿದ ಹಣ್ಣುಗಳು  ಅವೂ ಎರಡೇ ಎರಡು!ಇವನಲ್ಲಿದ್ದ ಹಸಿವೆ, ನೀರಡಿಕೆಗಳು ಆ ಹಣ್ಣುಗಳನ್ನು ಪಡೆಯಲು ಪ್ರೇರೇಪಿಸಿದವು. ಆತ ತನ್ನ ಗಂಟುಗಳನ್ನು ಕೆಳಗೆ ಬಿಟ್ಟು ಮರ ಏರಿದ. ಆ ಹಣ್ಣುಗಳೋ ಕೊಂಬೆಯ ತುದಿಗೆ ಇವೆ. ಎಚ್ಚರದಿಂದ, ನಿಧಾನವಾಗಿ ಸರಿದು, ಸರಿದು ಕೊಂಬೆಯ ಮೇಲೆ ಹೋದ. ಆಗ ಆ ಹಣ್ಣುಗಳ ವಾಸನೆ ಕೂಡ ಬರತೊಡಗಿತು. ಅವನಿಗೀಗ ಪ್ರಪಂಚದ ಯಾವ ವಸ್ತುವಿನ ಮೇಲೂ ಗಮನವಿಲ್ಲ. ಮತ್ತಷ್ಟು ಮುಂದೆ ಸರಿದು ಹಣ್ಣುಗಳಿರುವ ಟೊಂಗೆಗೆ ಕೈ ಚಾಚಿದ. ಆಗ ಸರಕ್ಕನೇ ಅವನ ಕಾಲುಗಳು ಜಾರಿದವು. ಪುಣ್ಯಕ್ಕೆ ಅವನು ಟೊಂಗೆಯನ್ನು ಹಿಡಿದುಕೊಂಡಿದ್ದರಿಂದ ನೆಲಕ್ಕೆ ಬೀಳಲಿಲ್ಲ. ಟೊಂಗೆಗೆ ನೇತಾಡತೊಡಗಿದ. ಕೆಳಗೆ ಬಗ್ಗಿ ನೋಡಿದ! ಹೃದಯ ನಿಂತೇ ಹೋಯಿತು. ಬಿದ್ದರೆ ತಾನು ಬದುಕುವುದು ಸಾಧ್ಯವಿಲ್ಲವೆನ್ನಿಸಿತು. ಈ ಟೊಂಗೆಯನ್ನು ಹಿಡಿದು ನೇತಾಡುವುದೂ ಅಪಾಯವೇ. ಅದು ಯಾವಾಗ ಕತ್ತರಿಸಿ ಬೀಳುತ್ತದೆಂದು ಹೇಳುವುದು ಕಷ್ಟ. ಈತ ಭಯದಿಂದ ತತ್ತರಿಸಿ ಹೋದ.ಆಗ ಆ ಮಾರ್ಗದಲ್ಲಿ ಸನ್ಯಾಸಿಯೊಬ್ಬ ಬರುತ್ತಿರುವುದು ಕಾಣಿಸಿತು. ಅವನಿಗೆ ಜೀವ ಬಂದಂತಾಯಿತು. ಜೋರಾಗಿ ಕೂಗಿಕೊಂಡ,  `ಸ್ವಾಮೀ, ನಾನಿಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ದಯವಿಟ್ಟು ಪಾರುಮಾಡಿ . ಸನ್ಯಾಸಿ ಹತ್ತಿರ ಬಂದ. ಇವನನ್ನು ನೋಡಿ ನಗತೊಡಗಿದ.ಪ್ರವಾಸಿಗೆ ಸಂಕಟವಾಯಿತು, ನಗಬೇಡಿ ಸ್ವಾಮೀ, ತೊಂದರೆಯಲ್ಲಿದ್ದೇನೆ, ಸಹಾಯಮಾಡಿ ಪುಣ್ಯ ಕಟ್ಟಿಕೊಳ್ಳಿ~ ಎಂದ. ಆಗ ಸನ್ಯಾಸಿ, `ಸಹಾಯ ಬೇಕೆ? ತೆಗೆದುಕೋ ಸಹಾಯ~ ಎಂದು ನೆಲದ ಮೇಲೆ ಬಿದ್ದಿದ್ದ ಕಲ್ಲುಗಳನ್ನು ಎತ್ತಿ ಎತ್ತಿ ಇವನ ಕಡೆಗೆ ಬೀಸತೊಡಗಿದ. ಅವುಗಳಿಂದ ತಪ್ಪಿಸಿಕೊಳ್ಳುವುದೇ ಕಷ್ಟವಾಯಿತು ಪ್ರವಾಸಿಗೆ. ಸಿಟ್ಟು ಉಕ್ಕಿ ಬಂತು.

 

ಆಗ ಆ ಸನ್ಯಾಸಿ ಪ್ರವಾಸಿಯು ಮರದಕೆಳಗೆ ಇಟ್ಟಿದ್ದ ಗಂಟುಗಳನ್ನೆತ್ತಿಕೊಂಡು ಓಡತೊಡಗಿದ. ಇವನು ಗಾಬರಿಯಾಗಿ ಕಾಲು ಚಾಚಿ ಕೊಂಬೆಯನ್ನು ಹಿಡಿದುಕೊಂಡು, ಸರಿದು ಮುಖ್ಯ ಕಾಂಡಕ್ಕೆ ಬಂದು, ಕೆಳಗೆ ಹಾರಿ ಹೋಗಿ ಸನ್ಯಾಸಿಯನ್ನು ಹಿಡಿದುಕೊಂಡು, `ಏ ಸನ್ಯಾಸಿ ಏಕೆ ಹೀಗೆ ಮಾಡಿದೆ~ ಎಂದು ಹಿಡಿದು ಕೇಳಿದ.

 

ಸನ್ಯಾಸಿ ಹೇಳಿದ,  `ಮೂರ್ಖ, ಹಣ್ಣಿನ ಕಾಲವಲ್ಲದ ದಿನಗಳಲ್ಲಿ. ಅದೂ ಕೊಂಬೆಯ ತುದಿಗೆ ಕಂಡ ಹಣ್ಣಿಗೆ ಆಸೆಪಟ್ಟೆಯಲ್ಲ? ಅದು ಪಾಪದ ಹಣ್ಣು ಎನ್ನಿಸಲಿಲ್ಲವೇ? ನಿನ್ನ ಜೀವವನ್ನೇ ಅಪಾಯಕ್ಕೆ ತಳ್ಳಿದೆಯಲ್ಲ? ನಿನಗೆ ಕಲ್ಲೆಸೆದು, ನಿನ್ನ ಸಾಮಾನುಗಳನ್ನು ಏಕೆ ತೆಗೆದುಕೊಂಡು ಓಡಿದೆ ಗೊತ್ತೇ? ನಿನ್ನಂತಹ ಪಾಪಿ ಮನಸ್ಸನ್ನು ಆ ಕಡೆಯಿಂದ ತಿರುಗಿಸಬೇಕಾದರೆ ಅಭದ್ರತೆಯೊಂದೇ ಸರಿ. ನಿನ್ನ ವಸ್ತುಗಳೆಲ್ಲ ಕಳೆದುಹೋಗುತ್ತವೆಂಬ ಭಯ ಮಾತ್ರ ನಿನ್ನನ್ನು ಆ ವಿಷದ ಹಣ್ಣುಗಳಿಂದ ಪಾರು ಮಾಡಿತು, ನೆಲಕ್ಕೆ ಇಳಿಯುವಂತೆ ಮಾಡಿತು.~ ಪ್ರವಾಸಿಗೆ ತನ್ನ ಮೂರ್ಖತನದ ಅರಿವಾಯಿತು.ನಮ್ಮ ಸುತ್ತಮುತ್ತ ಹಾಗೆ ವಿಷದ ಹಣ್ಣಿಗೆ ಕೈ ಚಾಚಿದವರು ಕಾಣುವುದಿಲ್ಲವೇ? ಭಗವಂತನ ಕೃಪೆಯಿಂದ ಉತ್ತಮ ಸ್ಥಾನ, ಮರ್ಯಾದೆಗಳನ್ನು ಹೊಂದಿದವರು, ಕ್ಷಣಕಾಲದ ಪಾಪದ ಆಸೆಗೆ ಮನತೆತ್ತು ತಾವಿದ್ದ ಸ್ಥಾನವನ್ನು ಮರೆತು, ಒಂದು ಕ್ಷಣದಲ್ಲಿಯೇ ಜೀವನದುದ್ದಕ್ಕೂ ಸಂಪಾದಿಸಿದ ಮರ್ಯಾದೆ, ಗೌರವಗಳನ್ನು ಕಳೆದುಕೊಂಡ ಉದಾಹರಣೆಗಳು ಅನೇಕ. ಸ್ಥಾನ, ಮಾನಗಳನ್ನು ಕಳೆದುಕೊಂಡು ಅಭದ್ರತೆಗೆ ಬಂದಾಗಲೇ ತಾವು ಅಕಾಲದ ಹಣ್ಣಿಗೆ ಅಪೇಕ್ಷೆಪಟ್ಟು ದುರಂತನಾಯಕರಾದದ್ದು ಅರಿವಾಗುತ್ತದೆ. ಆದರೆ ಆಗಲೇ ಅದು ಬಹಳ ತಡವಾಗಿ ಹೋಗಿರುತ್ತದೆ. ಎತ್ತರದಲ್ಲಿರುವವರಿಗೆ ಸದಾ ಕಾಲದ ಎಚ್ಚರ ಬಹಳ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry