ಬುಧವಾರ, ಮೇ 18, 2022
25 °C

ಪೀಕಲಾಟದ ಪ್ರಸಂಗಗಳು

ಶಿವರಾಮ್ Updated:

ಅಕ್ಷರ ಗಾತ್ರ : | |

ಜನತಾದಳ ಸರ್ಕಾರ ರಚನೆಯಾದ ಸಂದರ್ಭ. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಆಗ ಇದ್ದ ಪ್ರಶ್ನೆ. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಹೆಸರು ಆ ಗಾದಿಗೆ ಕೇಳಿಬಂದಿತ್ತು. ಇಬ್ಬರ ಅಭಿಮಾನಿಗಳೂ ಮುಖ್ಯಮಂತ್ರಿ ತಮ್ಮ ನಾಯಕರೇ ಆಗಬೇಕು ಎಂದು ಪಟ್ಟುಹಿಡಿದಿದ್ದರು.ದೇವೇಗೌಡರ ಅಭಿಮಾನಿಗಳು ವಿಧಾನಸೌಧಕ್ಕೆ ನುಗ್ಗಿದರು. ಅಲ್ಲಿನ ಮೊಗಸಾಲೆ, ಸಭೆ ನಡೆಯುವ ಸ್ಥಳಗಳು ಎಲ್ಲೆಡೆ ಜನರೋ ಜನ. ಮಾತು ಪ್ರಕೋಪಕ್ಕೆ ಹೋಗಿ ಅವರೆಲ್ಲಾ ದಾಂಧಲೆ ಮಾಡಲು ಮುಂದಾದರು. ಪೊಲೀಸರನ್ನು ಲೆಕ್ಕಿಸಲೇ ಇಲ್ಲ. ವಿಧಾನಸೌಧದ ಅಶೋಕಸ್ತಂಭವನ್ನು ಅಲ್ಲಾಡಿಸಲು ಹೋಗಿ. ಅದರ ಸುತ್ತ ಇದ್ದ ಗಾಜನ್ನು ಒಡೆದುಹಾಕಿದರು.ಅಸೆಂಬ್ಲಿಯ ಮಹಾದ್ವಾರದಲ್ಲಿ ಕರ್ತವ್ಯಕ್ಕೆಂದು ನನ್ನನ್ನು ನಿಯೋಜಿಸಿದ್ದರು. ನುಗ್ಗಿಬಂದ ಜನರಲ್ಲಿ ಒಬ್ಬನು ನಾನು ನಿಂತಿದ್ದ ಸ್ಥಳದಲ್ಲೇ ಇದ್ದ, ಸುಂದರ ಕೆತ್ತನೆಯ ಶ್ರೀಗಂಧದ ಬಾಗಿಲನ್ನೇ ಕೀಳಲು ಮುಂದಾದ. ಕೆಂಗಲ್ ಹನುಮಂತಯ್ಯನವರು ಮುತುವರ್ಜಿ ಇಟ್ಟುಕೊಂಡು ಮಾಡಿರುವ ಕೆಲಸವನ್ನು ಯಾರೋ ನಿಮಿಷದಲ್ಲಿ ನಾಶಮಾಡುವುದನ್ನು ಸುಮ್ಮನೆ ನಿಂತು ನೋಡುವುದು ನನ್ನಿಂದ ಸಾಧ್ಯವಾಗಲಿಲ್ಲ.ಬಾಗಿಲನ್ನು ಅಲ್ಲಾಡಿಸುತ್ತಿದ್ದವನಿಗೆ ತಿಳಿಹೇಳಲು ಯತ್ನಿಸಿದೆ. ಅವನು ಕುಡಿದಿದ್ದ. ರಾಮನಗರ ಕಡೆಯಿಂದ ಬಂದಿದ್ದ ಅವನಿಗೆ ಈ ವಿಧಾನಸೌಧವನ್ನು ಕಟ್ಟಿಸಿದ ಹನುಮಂತಯ್ಯನವರ ಬಗ್ಗೆ ಹೇಳಿದೆ. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವನು ಬಾಯಿಗೆ ಬಂದಂತೆ ನನ್ನನ್ನು ಬಯ್ಯಲಾರಂಭಿಸಿದ. ಅಶ್ಲೀಲವಾದ ಪದ ಪ್ರಯೋಗಗಳನ್ನು ಮಾಡಿದಾಗ ನನಗೆ ತಡೆಯಲಾಗಲಿಲ್ಲ. ಕಪಾಳಕ್ಕೆ ಒಂದು ಬಿಗಿದೆ.ಜನ ನನ್ನ ಮೇಲೆ ಎರಗಲು ನುಗ್ಗಿಬಂದರು. ನಮ್ಮ ಸಹೋದ್ಯೋಗಿಗಳಿಗೂ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗಲೇ ಇಲ್ಲ. ನಾನು ಸುಮ್ಮನಿದ್ದಿದ್ದರೆ ಅವರೆಲ್ಲಾ ನನ್ನನ್ನು ಕೊಂದುಹಾಕುತ್ತಿದ್ದರೋ ಏನೋ? ಅದಕ್ಕೇ ನಾನು ಸಮಯಪ್ರಜ್ಞೆಯಿಂದ ಒಂದು ಸುಳ್ಳು ಹೇಳುವುದು ಅನಿವಾರ್ಯವಾಯಿತು. ‘ಯಾಕಯ್ಯಾ... ನಮ್ಮವನ ಮೇಲೆ ಕೈಮಾಡಿದ್ದು?’, ‘ನೀನು ಹೆಂಗೆ ಹೊಡೆದೆ?’, ‘ಯಾವೋನಯ್ಯಾ ನೀನು?’ ಎಂದು ಅವರೆಲ್ಲಾ ಒಟ್ಟೊಟ್ಟಿಗೆ ದಬಾಯಿಸಿದರು.

ಧ್ವಂಸ ಮಾಡುತ್ತಿದ್ದ ಕಾರಣಕ್ಕೆ ಹೊಡೆದೆ ಎಂದರೆ ಅವರು ನನ್ನನ್ನು ಸುಮ್ಮನೆ ಬಿಡುತ್ತಿರಲಿಲ್ಲ. ‘ನಾನು ಅವನಿಗೆ ಇನ್ನೇನು ಮಾಡಬೇಕಿತ್ತಪ್ಪ’ ಎಂದು ಮೊದಲು ಒಂದು ಪ್ರಶ್ನೆ ಹಾಕಿದೆ. ‘ಅವನು ಏನಂದ’ ಎಂದು ಅವರು ಮರುಪ್ರಶ್ನೆ ಹಾಕಿದರು.ಅವರೆಲ್ಲಾ ದೇವೇಗೌಡರ ಅಭಿಮಾನಿಗಳು ಎಂದು ನನಗೆ ಗೊತ್ತಿತ್ತು. ‘ಅವನು ದೇವೇಗೌಡರನ್ನು ಬಾಯಿಗೆ ಬಂದಂತೆ ಬೈಯುತ್ತಾ ರಾಮಕೃಷ್ಣ ಹೆಗಡೆಯವರೇ ಮುಖ್ಯಮಂತ್ರಿಯಾಗಬೇಕು ಎಂದು ಮಾತಾಡುತ್ತಿದ್ದ. ಅದಕ್ಕೇ ಒಂದು ಕೊಟ್ಟೆ’ ಎಂದೆ.ತಮ್ಮ ಜೊತೆ ಬಂದು, ದೇವೇಗೌಡರನ್ನೇ ಬಯ್ಯಲು ಅವನಿಗೆಷ್ಟು ಧೈರ್ಯ ಅಂದುಕೊಂಡವರೇ ಅವರೆಲ್ಲಾ ಅವನನ್ನು ಮುತ್ತಿಕೊಂಡರು. ಅವನಿಗೆ ಸಾಕಷ್ಟು ಧರ್ಮದೇಟುಗಳು ಬಿದ್ದವು. ಎತ್ತುಕೊಂಡು ಹೋದವರೇ ವಿಧಾನಸೌಧದ ಮೆಟ್ಟಿಲಿನ ಕೆಳಕ್ಕೆ ಅವನನ್ನು ಹಾಕಿ ಬಂದರು. ನನ್ನ ಮೇಲೆ ಎರಗಲು ಬಂದವರೇ ನನಗೆ ಜೈಕಾರ ಹಾಕಿದರು. ನಮ್ಮ ಸಹೋದ್ಯೋಗಿಗಳಿಗೆಲ್ಲಾ ಅಚ್ಚರಿ. ನನ್ನ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದವನಿಗೆ ಬುದ್ಧಿಹೇಳಲೆಂದು ಹೊರಗೆ ಹೋದೆ. ಅವನು ನಿಮ್ಮ ಸಹವಾಸವೇ ಬೇಡ ಎನ್ನುತ್ತಾ ಓಡಿಹೋದ.

*

ಸಮಯಪ್ರಜ್ಞೆ ಇಲ್ಲದೇ ಇದ್ದರೆ ಏನಾಗುತ್ತದೆ ಎಂಬುದಕ್ಕೂ ನನ್ನಲ್ಲಿ ಕೆಲವು ಉದಾಹರಣೆಗಳಿವೆ. ಎಂಬತ್ತರ ದಶಕದಲ್ಲಿ ಬೆಂಗಳೂರು ಸುತ್ತಮುತ್ತ ವ್ಯಾಪಕವಾಗಿ ಡಕಾಯಿತಿ ಪ್ರಕರಣಗಳು ನಡೆಯುತ್ತಿದ್ದವು. ಕೆಲವು ಡಕಾಯಿತಿ ಪ್ರಕರಣಗಳಲ್ಲಿ ಹತ್ಯೆಗಳೂ ನಡೆದಿದ್ದವು. ಆಗ ಕಮಿಷನರ್ ಆಗಿದ್ದ ಹರ್ಲಂಕರ್ ಎಲ್ಲಾ ಪೊಲೀಸರಿಗೂ ಜಾಗ್ರತೆಯಿಂದ ಇರುವಂತೆ ಆದೇಶಿಸಿದ್ದರು.ಯಾರು ಯಾರಿಗೆ ಇಲಾಖೆ ರಿವಾಲ್ವರ್‌ಗಳನ್ನು ಕೊಟ್ಟಿತ್ತೋ ಅವರೆಲ್ಲ ಸದಾ ಅದನ್ನು ಇಟ್ಟುಕೊಂಡಿರಬೇಕು ಎಂದು ಎಚ್ಚರಿಸಿದ್ದರು. ಕೆಲವು ಅಧಿಕಾರಿಗಳಿಗೆ ಬೇಜವಾಬ್ದಾರಿತನವಿತ್ತು. ರಿವಾಲ್ವರ್‌ನ ಭಾರ ಹೊತ್ತುಕೊಂಡು ಓಡಾಡುವವರಾರು ಎಂಬುದು ಅಂಥವರ ವಾದ. ಅದಕ್ಕೇ ಖಾಲಿ ‘ಪೌಚ್’ಗಳನ್ನಷ್ಟೇ ಬೆಲ್ಟಿಗೆ ಸಿಕ್ಕಿಸಿಕೊಂಡಿರುತ್ತಿದ್ದರು.ಆಗ ಮಹಾದೇವಪುರ ಸರಹದ್ದಿನಲ್ಲಿ ಒಂದು ಡಕಾಯಿತಿ ಆಯಿತು. ಅದಾದ ನಂತರ ವಿವಿಧ ಠಾಣೆಗಳ ಪೊಲೀಸರೆಲ್ಲಾ ಒಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿತ್ತು. ಕಂಟೋನ್ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಲ್ಲದ ಮನಸ್ಸಿನಿಂದಲೇ ಈ ಕೆಲಸವನ್ನು ಮಾಡಬೇಕಾಯಿತು. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಪ್ರಿಯವಾಗಿದ್ದ ಅವರು ರಾತ್ರಿಪಾಳಿಯಲ್ಲಿದ್ದ ಒಂದು ದಿನ ಫಾರ್ಮ್‌ಹೌಸ್ ಒಂದರಲ್ಲಿ ಡಕಾಯಿತಿ ನಡೆಯಿತು.ವೈರ್‌ಲೆಸ್‌ನಲ್ಲಿ ಮಾಹಿತಿ ಹರಿದಾಡಿದ್ದೇ ಡಕಾಯಿತರು ಎಲ್ಲಿದ್ದಾರೆಂಬುದು ಸ್ಪಷ್ಟವಾಯಿತು. ಅಲ್ಲಿಗೆ ಆ ಇನ್ಸ್‌ಪೆಕ್ಟರ್ ಹಾಗೂ ಅವರ ತಂಡ ಹೋಯಿತು. ಡಕಾಯಿತರು ಎದುರಾದರೆ, ರಿಲಾಲ್ವರ್‌ನಿಂದ ಗುಂಡು ಹಾರಿಸುವಂತೆ ಮೇಲಧಿಕಾರಿಗಳು ಆದೇಶವನ್ನೂ ಕೊಟ್ಟರು.ಆ ಆದೇಶ ಬಂದ ಕೆಲವೇ ನಿಮಿಷಗಳಲ್ಲಿ ಡಕಾಯಿತರು ಆ ಇನ್ಸ್‌ಪೆಕ್ಟರ್‌ಗೆ ಎದುರಾದರು. ಅವರ ಜೊತೆಗಿದ್ದ ಕಾನ್‌ಸ್ಟೇಬಲ್‌ಗಳು ಗುಂಡು ಹಾರಿಸಿ ಎಂದು ಎಷ್ಟು ಹೇಳಿದರೂ ಆ ಇನ್ಸ್‌ಪೆಕ್ಟರ್ ಸುಮ್ಮನೆ ತಲೆಯಾಡಿಸಿದರೇ ಹೊರತು ಗುಂಡನ್ನು ಹಾರಿಸಲೇ ಇಲ್ಲ. ಎಲ್ಲರಿಗೂ ಆಶ್ಚರ್ಯ. ಡಕಾಯಿತರು ಸುಲಭವಾಗಿ ತಪ್ಪಿಸಿಕೊಂಡು ಹೋದರು. ನಿಜಸಂಗತಿ ಏನೆಂದರೆ, ಅವರ ಪೌಚ್‌ನಲ್ಲಿ ಆಗ ರಿವಾಲ್ವರ್ ಇರಲಿಲ್ಲ!

*

ದೊಡ್ಡ ನದಿಗಳು ಹರಿಯುವ ಕಡೆ ಹೆಣಗಳು ಸಿಗುವುದು ಮಾಮೂಲು. ಕೊಲೆಗಡುಕರು ಹೆಣಗಳನ್ನು ತಂದು ನದಿಯಲ್ಲಿ ಬಿಸಾಡಿ ಹೋಗುತ್ತಾರೆ. ಆ ಹೆಣಗಳು ನದಿಪಾತ್ರದಲ್ಲಿ ಸಾಗುವಾಗ ಅಕಸ್ಮಾತ್ ಪೊದೆ ಅಡ್ಡಬಂದರೆ ಅಲ್ಲಿ ಸಿಕ್ಕಿಕೊಳ್ಳುತ್ತವೆ. ಎಲ್ಲಿ ಹೆಣ ಸಿಗುತ್ತದೋ, ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕು. ಪಂಚನಾಮ ಮಾಡುವ ಉಸಾಬರಿ ಆ ಠಾಣೆಯವರಿಗೇ ಸಂಬಂಧಿಸಿದ್ದು. ಅದರಿಂದ ತಪ್ಪಿಸಿಕೊಳ್ಳಲು ಕೆಲವು ಪೊಲೀಸರು ದಾರಿ ಹುಡುಕಿಕೊಂಡಿದ್ದರು.ಸಿಕ್ಕಿಕೊಂಡ ಹೆಣ ಇನ್ನೂ ಮುಂದಕ್ಕೆ ಹೋಗುವಂತೆ ಮಾಡಿದರೆ, ತಮ್ಮ ಠಾಣೆ ವ್ಯಾಪ್ತಿಯ ಕೇಸು ಅದಾಗುವುದಿಲ್ಲ ಎಂಬ ‘ಜಾಣತನ’ ಕೆಲವರದ್ದು. ಅವರು ಹೆಣವನ್ನು ನದಿ ನೀರಿನ ಹರಿವು ಹೆಚ್ಚಾಗಿರುವ ಕಡೆಗೆ ಹಾಕಿ, ಕೈತೊಳೆದುಕೊಳ್ಳುತ್ತಾರೆ.ಕಾವೇರಿ, ತುಂಗಾಭದ್ರಾ ನದಿಗಳಲ್ಲಿ ಹೀಗೆ ಮಾಡಿದರೆ ಕರ್ನಾಟಕದ ಕೊಲೆ ಕೇಸುಗಳೆಲ್ಲಾ ತಮಿಳುನಾಡಿಗೋ, ಆಂಧ್ರಕ್ಕೋ ಹೋಗಿಬಿಡುತ್ತವೆ. ತನಿಖೆಯ ಮೂಲಕ ನ್ಯಾಯ ಕೊಡಬೇಕಾದ ಪೊಲೀಸರೇ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಇಂಥ ಹಲವಾರು ಪ್ರಸಂಗಗಳಿವೆ.ಮುರ್ಗಿ ಫಯಾಜ್ ಪ್ರಬಲವಾಗಿದ್ದ ದಿನಗಳವು. ಲಿಡೋ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿದ್ದ ತನ್ನ ವೈರಿ ಅಬು ಶೇರ್‌ನನ್ನು ಅವನ ಮಗನ ಸಮೇತ ಫಯಾಜ್ ಕಿಡ್ನ್ಯಾಪ್ ಮಾಡಿಸಿದ. ಅವನನ್ನು ಮುಚ್ಚಿಟ್ಟು, ಕೈಕಾಲು ಕಟ್ಟಿ ನರಗಳನ್ನು ಕತ್ತರಿಸಿ, ಬೆಳಗಿನ ಜಾವ ರಸೆಲ್ ಮಾರ್ಕೆಟ್ ಬಳಿ ತಂದು ಬಿಸಾಕಿದ. ಅದನ್ನು ಕರ್ತವ್ಯನಿರತರಾಗಿದ್ದ ಪೊಲೀಸ್ ಅಧಿಕಾರಿಯೇ ಕಂಡರು.ಅಬು ಶೇರ್‌ನ ಶವದ ಮುಂದೆ ಫಯಾಜ್‌ನ ಅಟ್ಟಹಾಸ ನಡೆದಿದ್ದರೂ ಅವರು ಗುಂಡುಹಾರಿಸುವ ಧೈರ್ಯ ಮಾಡಲಿಲ್ಲ.ಮುಂದಿನ ಪರಿಣಾಮಗಳನ್ನು ಯೋಚಿಸಿ, ಬೆದರಿದ ಅವರು ಅವನನ್ನು ಶರಣಾಗುವಂತೆ ಅಂಗಲಾಚಿಕೊಂಡರು. ಅವರ ಅಳುಬುರುಕುತನ ನೋಡಿ ಫಯಾಜ್ ಗತ್ತಿನಿಂದಲೇ ಪರಾರಿಯಾಗಿದ್ದ. ಅಪರಾಧಿಯ ಅಟ್ಟಹಾಸ ನೋಡಿಕೊಂಡು ಹಾಗೆ ಸುಮ್ಮನೆ ಕೂರುವುದು ಕೂಡ ನನ್ನ ಪ್ರಕಾರ ಬೇಜವಾಬ್ದಾರಿತನವೇ.

*

ಈಗ ದಿನಕ್ಕೊಂದು ಪ್ರತಿಭಟನೆ, ಮುಷ್ಕರದ ಭರಾಟೆ. ಬೆಂಗಳೂರಿನಲ್ಲಿ ಕಬ್ಬನ್‌ಪಾರ್ಕ್ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೇ ಧರಣಿ ನಡೆಯುವುದು ಜಾಸ್ತಿ. ಯಾಕೆಂದರೆ, ಎಂ.ಜಿ.ರಸ್ತೆ ಹಾಗೂ ಆನಂದರಾವ್ ವೃತ್ತದಲ್ಲಿ ಪ್ರತ್ಯೇಕ ಗಾಂಧಿ ಪ್ರತಿಮೆಗಳಿವೆ.ಒಮ್ಮೆ ಕಬ್ಬನ್ ಪಾರ್ಕ್ ಎಸಿಪಿ ಬಳಿಗೆ ಒಂದು ಸಂಘಟನೆಯವರು 24 ಗಂಟೆ ನಿರಂತರ ಧರಣಿ ನಡೆಸಲು ಅನುಮತಿ ಕೇಳಿದರು. ಪತ್ರ ಹಿಡಿದು ಬಂದಿದ್ದ ಅವರನ್ನು ಕಂಡ ಎಸಿಪಿ ಮೊದಲು ಪ್ರತಿಭಟನೆ ನಡೆಸುತ್ತಿರುವ ಉದ್ದೇಶ ಸ್ಪಷ್ಟಪಡಿಸಿಕೊಂಡರು. ‘ಎಂ.ಜಿ.ರೋಡಿನಲ್ಲಿರುವುದು ನಿಂತಿರುವ ಗಾಂಧೀ ಪ್ರತಿಮೆ. ಕೂತುಕೊಂಡು ಪ್ರತಿಭಟನೆ ಮಾಡಬೇಕಾದರೆ ಆನಂದರಾವ್ ಸರ್ಕಲ್‌ಗೆ ಹೋಗಿ. ಅಲ್ಲಿ ಕೂತಿರುವ ಗಾಂಧೀ ಪ್ರತಿಮೆ ಇದೆ’ ಎಂದರು.ಆ ಪ್ರತಿಭಟನಾಕಾರರು ಮುಗ್ಧರೋ, ಹುಂಬರೋ ಗೊತ್ತಿಲ್ಲ. ಅವರ ಮಾತನ್ನು ನಂಬಿದರು. ‘ಹಾಗಾದರೆ ಅಲ್ಲಿಗೇ ಅನುಮತಿ ಕೊಡಿ’ ಅಂದರು.  ‘ಅಲ್ಲಿಗೆ ಅನುಮತಿಯನ್ನು ನಾನು ಕೊಡಲು ಸಾಧ್ಯವಿಲ್ಲ. ಹೈಗ್ರೌಂಡ್ಸ್ ಎಸಿಪಿ ಕೊಡಬೇಕು.ನೀವು ಅಲ್ಲಿಗೆ ಹೋಗಿ’ ಎಂದು ಅವರೆಲ್ಲರನ್ನೂ ಸಾಗಹಾಕಿದರು. ಒಂದು ಪ್ರತಿಭಟನೆಯ ಕಾಟ ತಪ್ಪಿತೆಂದು ಅವರು ನೆಮ್ಮದಿಯ ನಿಟ್ಟುಸಿರಿಟ್ಟರು. ಇದು ಸಮಯಪ್ರಜ್ಞೆಯ ಇನ್ನೊಂದು ನಮೂನೆ.

*

ಹಿಂದೊಮ್ಮೆ ಸತತವಾಗಿ ಒಂದು ವಾರ ಕಮ್ಯುನಿಸ್ಟರ ರೈತ ಚಳವಳಿಯ ಪ್ರತಿಭಟನೆ, ಮೆರವಣಿಗೆ ನಡೆಯಿತು. ಮೊದಲ ದಿನ ಮೆರವಣಿಗೆ ಬಂತು. ಕೆ.ಆರ್.ಸರ್ಕಲ್‌ನಲ್ಲಿ 500 ಜನರನ್ನು ದಸ್ತಗಿರಿ ಮಾಡಿ, ಆಡುಗೋಡಿಯ ಸಿ.ಆರ್.ಹೆಡ್‌ಕ್ವಾರ್ಟರ್ಸ್‌ನಲ್ಲಿ ಇರಿಸಿದೆವು. ಅವರೆಲ್ಲಾ ಊಟ, ಕಾಫಿ ಬೇಕು ಎಂದರು. ಡಿಸಿಪಿ ಆಗಿದ್ದ ಕೆಂಪಯ್ಯನವರು ಮೊದಲ ದಿನ ಸರ್ಕಾರಿ ಖರ್ಷಿನಲ್ಲೇ ಅವರಿಗೆಲ್ಲಾ ಊಟೋಪಚಾರ ಮಾಡಿದರು. ಪ್ರತಿಭಟನಾಕಾರರಿಗೆ ಅದೇ ಅಭ್ಯಾಸವಾಯಿತು.ಎರಡನೇ ದಿನ, ಮೂರನೇ ದಿನವೂ ಅದೇ ಆತಿಥ್ಯ ಬಯಸಿದರು. ಮೂರನೇ ದಿನದ ನಂತರ ಸರ್ಕಾರದಿಂದ ಊಟೋಪಚಾರಕ್ಕೆ ಹಣ ಬಿಡುಗಡೆಯಾಗಲಿಲ್ಲ. ಅದನ್ನು ಪ್ರತಿಭಟನಾಕಾರರಿಗೆ ಅರ್ಥ ಮಾಡಿಸುವ ಸ್ಥಿತಿಯೇ ಇರಲಿಲ್ಲ. ಅಲ್ಲಿ, ಇಲ್ಲಿ ಬೇಡಿ ಅಧಿಕಾರಿಗಳು ಊಟ ತರಬೇಕಾಯಿತು. ಕೊನೆಯ ದಿನವಂತೂ ಹೋಟೆಲ್‌ಗಳು ತೆರೆದಿರಲಿಲ್ಲ.ತರಕಾರಿ, ದಿನಸಿ, ಸೌದೆ, ಪಾತ್ರೆ ಎಲ್ಲವನ್ನೂ ಎಲ್ಲೆಲ್ಲೋ ಕಾಡಿಬೇಡಿ ತಂದು, ಕೊನೆಗೆ ಅಡುಗೆಯವರನ್ನು ಕರೆತಂದು ಕಿಚಡಿ ಮಾಡಿಸಿದ್ದೂ ಆಯಿತು. ಊಟಕ್ಕೆ ಕೂತ ಪ್ರತಿಭಟನಾಕಾರರು, ‘ಸುಮ್ಮನೆ ತಂದಿಟ್ಟರೆ ಆಗದು. ಎಲ್ಲರಿಗೂ ಬಡಿಸಿ’ ಎಂದು ದಬಾಯಿಸಿದರು. ‘ಪಾಯಸ ಯಾಕೆ ಮಾಡಿಸಲಿಲ್ಲ’ ಎಂದು ಒಬ್ಬ ಮಾತಿನ ಕೊಸರನ್ನು ಹಾಕಿದಾಗ ಮೊದಲೇ ಸುಸ್ತಾಗಿದ್ದ ಪೊಲೀಸರು ಬೇಸ್ತುಬಿದ್ದರು. ಸಮಯಪ್ರಜ್ಞೆ ಇದ್ದರೆ, ಇಲ್ಲದಿದ್ದರೆ ಏನೆಲ್ಲಾ ಆಗುತ್ತವೆ ಎಂಬುದಕ್ಕೆ ಇಂಥ ಅಸಂಖ್ಯ ಉದಾಹರಣೆಗಳು ಸಿಗುತ್ತವೆ.ಮುಂದಿನ ವಾರ: ಮೈನವಿರೇಳಿಸುವ ಎರಡು ಅಪಹರಣ ಪ್ರಕರಣಗಳು

ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.