ಪೂರ್ತಿಯಾಗದ ಮೌನದ ಪ್ರತಿಜ್ಞೆ

7

ಪೂರ್ತಿಯಾಗದ ಮೌನದ ಪ್ರತಿಜ್ಞೆ

ಗುರುರಾಜ ಕರ್ಜಗಿ
Published:
Updated:

ಇದು ನನಗೆ ಅತ್ಯಂತ ಪ್ರಿಯವಾದ ಮತ್ತು  ಬೋಧಕವಾದ ಕಥೆ. ಒಂದಾ­ನೊಂದು ಕಾಲದಲ್ಲಿ, ಚೀನಾ ದೇಶ­ದಲ್ಲಿ ಝೆನ್ ಮಾರ್ಗ ಹೆಚ್ಚು ಪ್ರಚಲಿತ­ವಾ­ಗು­ತ್ತಿತ್ತು. ಆಗ ಒಂದು ಆಶ್ರಮದಲ್ಲಿ ನಾಲ್ಕು ತರುಣರು ಧ್ಯಾನ ಕೇಂದ್ರಕ್ಕೆ ಸೇರ್ಪಡೆ­ಯಾದರು. ಗುರು­ಗಳು ನಾಲ್ವರನ್ನೂ ಒಂದೆಡೆಗೇ ಸೇರಿಸಿ ಒಬ್ಬರು ಮತ್ತೊಬ್ಬರಿಗೆ ಅಧ್ಯಾತ್ಮದ ಬೆಳವಣಿಗೆಗೆ ಪೂರಕವಾಗಲೆಂದು ಆಶಿಸಿದರು. ಒಂದು ದಿನ ಅವರನ್ನು ಒಂದೇ ಕೋಣೆಯಲ್ಲಿ ಕರೆತಂದು ಕೂಡ್ರಿಸಿದರು.  ನಾಲ್ವರೂ ಸತತವಾಗಿ ಮೌನದಲ್ಲಿದ್ದು ಧ್ಯಾನಮಾಡಬೇಕಿತ್ತು.  ಈ ಸಾಧನೆ­ಯಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಕಾರಿಯಾಗಿರಬೇಕೆಂದು ಸೂಚನೆ ನೀಡಿದ್ದರು ಗುರುಗಳು.  ಈ ಮೌನ ಏಳು ದಿನಗಳ ಕಾಲ ನಡೆಯತಕ್ಕದ್ದು ಮತ್ತು ಎಲ್ಲ  ತರು­ಣ­ರೂ ಪ್ರತಿಜ್ಞೆ ಮಾಡಿ ಧ್ಯಾನಕ್ಕೆ ಕುಳಿತರು.  ವೃತ್ತಾಕಾರದಲ್ಲಿ ಕುಳಿತು ಧ್ಯಾನ ಪ್ರಾರಂಭಿಸಿದರು.  ಸ್ವಲ್ಪಹೊತ್ತಿಗೇ ತಾವು ಧ್ಯಾನದ ಆಳಕ್ಕಿಳಿಯು­ವುದರ ಅನು­ಭವ ಅವರಿಗೆ ಆಗತೊ­ಡಗಿತು, ಮನದಲ್ಲಿ ಶಾಂತಿ ಮೂಡ­ತೊಡಗಿತು.  ಗುರುಗಳು ತಮಗೆ ನೀಡಿದ ಮಾರ್ಗದರ್ಶನ ಫಲಕೊಡುತ್ತಿದ್ದಂತೆ ತೋರಿತು. ಹಗಲು ಸರಿದು ಸಂಜೆ­ಯಾಯಿತು. ಇವರ ಮಧ್ಯದಲ್ಲಿದ್ದ ದೀಪದಲ್ಲಿ ಎಣ್ಣೆ ಮುಗಿಯುತ್ತ ಬಂದಿತು.  ದೀಪದ ಕುಡಿ ಹೊಯ್ದಾಡತೊಡಗಿತು.  ಇನ್ನು ಕೆಲವೇ ಕ್ಷಣಗಳಲ್ಲಿ ದೀಪ ಆರಿ ಹೋಗುವ ಸ್ಥಿತಿ ಬಂದಿತು. ಮೊದಲನೆಯ ವಿದ್ಯಾರ್ಥಿ ಅದನ್ನು ಗಮ­ನಿಸಿ ಧ್ವನಿ ಏರಿಸಿ ಆಶ್ರಮದ ಸೇವಕನನ್ನು ಕೂಗಿದ, ‘ದೀಪದಲ್ಲಿ ಎಣ್ಣೆ ತೀರುತ್ತ ಬಂದಿದೆ.  ದಯವಿಟ್ಟು ಬೇಗನೇ ಎಣ್ಣೆ ತಂದು ಹಾಕು’. ಹೀಗೆ ಹೇಳಿ ತನ್ನ ಗುಂಪಿನ ಕಡೆಗೆ ತಿರುಗಿ ನೋಡಿದ. ಅವನ ಸ್ನೇಹಿತ ಅವನನ್ನೇ ದುರುಗುಟ್ಟಿಕೊಂಡು ನೋಡು­ತ್ತಿದ್ದ. ಮೊದಲನೆಯವ ಏನು ಎಂಬಂತೆ ಹುಬ್ಬೇರಿಸಿದ.ಛೇಡಿಸುವ ಧ್ವನಿ­ಯಲ್ಲಿ ಎರಡನೆಯ ವಿದ್ಯಾರ್ಥಿ ಹೇಳಿದ,  ‘ನಾವೆಲ್ಲ ಸಂಪೂರ್ಣ ಮೌನದ ಪ್ರತಿಜ್ಞೆ ತೆಗೆದುಕೊಂಡಿದ್ದೆವಲ್ಲವೇ? ನೀನೀಗ ಪ್ರತಿಜ್ಞೆಯನ್ನು ಮುರಿದೆ. ನಿನ್ನ ಸ್ನೇಹಿತನಾಗಿ ನಿನ್ನ ತಪ್ಪನ್ನು ನಿನಗೆ ತಿಳಿಹೇಳುವುದು ನನ್ನ ಕರ್ತವ್ಯ’. ಆಗ ಮೂರನೆಯ ವಿದ್ಯಾರ್ಥಿ ಇವರಿಬ್ಬರನ್ನೂ ನೋಡಿದ, ನಂತರ ತಲೆ ಅಲ್ಲಾಡಿಸಿ  ತನ್ನ ಅಸಮ್ಮತಿ ತೋರಿ­ಸಿದ. ಎರಡನೆಯ ವಿದ್ಯಾರ್ಥಿಗೆ ಗಡುಸಾಗಿ ಹೇಳಿದ, ‘ನಿನಗೆ ಅರ್ಥ­ವಾ­ಗು­ವು­ದಿಲ್ಲವೇ? ಅವನ ತಪ್ಪನ್ನು ಎತ್ತಿತೋರಿಸುವ ಆತುರದಲ್ಲಿ ನೀನೂ ಅದೇ ತಪ್ಪು ಮಾಡ­ಲಿಲ್ಲವೇ? ನೀನೂ ಮೌನದ ಪ್ರತಿಜ್ಞೆ ಮುರಿದೆ. ಆಗ ಮೊದಲಿನ ಮೂವರೂ ಕೊನೆಯ­ವನನ್ನು ದಿಟ್ಟಿಸಿ  ನೋಡಿದರು.  ಆತ  ತುಟಿ ಕೊಂಕಿಸಿ ನಕ್ಕು, ‘ನೀವೆಲ್ಲ ಸೋತು ಹೋದಿರಿ. ನಾನೊಬ್ಬನೇ ಮೌನ ವ್ರತವನ್ನು ಪಾಲಿಸಿದವನು’ ಎಂದು ಕೂಗಿದವನೇ ತಾನೂ ತಪ್ಪ್ಪಿದೆನಲ್ಲ ಎಂದು ನಾಲಿಗೆ ಕಚ್ಚಿಕೊಂಡ. ನಂತರ ನಾಲ್ವರೂ ವ್ರತ ಮುರಿದದ್ದನ್ನು ಅರಿತು ತಲೆ ತಗ್ಗಿಸಿಕೊಂಡರು.ಈ ಕಥೆ ತುಂಬ ವಿಶೇಷವಲ್ಲದ್ದು ಎನ್ನಿಸಿದರೂ ಅದು ನಮ್ಮ ಸಮಾಜದ­ಲ್ಲಿ­ರುವ ಜನರ ಮನೋಭಾವವನ್ನು ತಿಳಿಸುವ ಕಥೆ.  ಮೊದಲನೆಯ ಶಿಷ್ಯ ಉಳಿದ­ವರ ಜೊತೆಗೆ ಮೌನದ ವ್ರತ  ಮುರಿದ.  ಆದರೆ, ಆತನೇ ಮೊದಲು ವ್ರತ ಮುರಿ­ದ­ವನು.  ಈತ ಸಮಾಜದಲ್ಲಿ ತಾವು ನಿರ್ಧರಿಸಿದ ಬದ್ಧತೆ ನಡೆಸ­ಲಾಗದ, ಪ್ರತಿಜ್ಞೆ­ಯನ್ನು ಸುಲಭದಲ್ಲೇ ಮರೆತುಬಿಡುವ ಜನರ ಪ್ರತಿನಿಧಿ. ಅಂತಹ ಬಹಳಷ್ಟು ಜನರನ್ನು ನಾವು ಕಂಡಿದ್ದೇವೆ. ಎರಡನೆಯವನು ಮೊದಲಿ­ನವನನ್ನು ಬೈದ.ಆದರೆ, ತಾನೂ ವ್ರತವನ್ನು ಮುರಿದ.  ಅವನು ಸಮಾಜದಲ್ಲಿರುವ, ತಾವು ತಪ್ಪು ಮಾಡಿದ್ದನ್ನು ಮರೆತು ಮತ್ತೊಬ್ಬರ ತಪ್ಪುಗಳನ್ನು ಸರಿಪಡಿಸುವ ಮನೋ­ಭಾವದ ಜನರ ಪ್ರತಿನಿಧಿ. ಮತ್ತೊಬ್ಬರ ತಪ್ಪುಗಳನ್ನು ತಿದ್ದುವುದರಿಂದ ತಾವು ಬಹು­ಮುಖ್ಯ­ರಾದವರು ಮತ್ತು ಬುದ್ಧಿವಂತರು ಎಂಬ ಭ್ರಮೆ ಇವರಿಗಿರುತ್ತದೆ. ಮೂರನೆ­ಯ­ವನು, ಎರಡನೆ­ಯವನಿಗೆ ಭಾಷಣ ಬಿಗಿದ.  ಇವನು ಸದಾ ಮತ್ತೊಬ್ಬರಿಗೆ ಬುದ್ಧಿ ಹೇಳಿ ಶಿಕ್ಷಣ ನೀಡುವ ತವಕ ತೋರುವ ಜನರ ಪ್ರತಿನಿಧಿ.  ಉಳಿದವರಿಗೆ ಕಲಿ­ಯುವ ಮನಸ್ಸು ಇದೆಯೋ ಇಲ್ಲವೋ, ಇವರಿಗೆ ಮಾತ್ರ ತಾವು ಸ್ವಯಂ­ನಿಯುಕ್ತಿ­ಯಾದ ಗುರು­ಗಳಾಗುವ ಆಸೆ.  ತಮ್ಮಲ್ಲಿದೆ ಎಂದು ಭಾವಿಸಿರುವ ಜ್ಞಾನವನ್ನು ಎಲ್ಲರಿಗೂ ಹಂಚುವ ಜವಾಬ್ದಾರಿ ತಮ್ಮದೆಂದು ತಿಳಿಯುವ ಜನ ಇವರು. ಎಲ್ಲರಿಗಿಂತ ತಾನು ವಿಶಿಷ್ಟ ಹಾಗೂ ಶ್ರೇಷ್ಠನಾದವನು ಎಂದು ಯಾವಾಗಲೂ ಭಾವಿ­ಸುವವರ ಪ್ರತಿನಿಧಿ ನಾಲ್ಕನೆಯವನು.  ತಾನೂ ಪ್ರತಿಜ್ಞೆಯನ್ನು ಪಾಲಿಸು­ವು­ದ­ರಲ್ಲಿ ಸೋತುಹೋದರೂ ಉಳಿದವರಿಗಿಂತ ಹೆಚ್ಚು ಹೊತ್ತು ತಡೆದು­ಕೊಂಡೆ­ನಲ್ಲ ಎಂದು ಸಂತೋಷಪಡುವ ಸ್ವಭಾವದ ಜನ ಇವರು. ಈ ನಾಲ್ವರೂ ತರು­ಣರು ತಪ್ಪು ಮಾಡಿದರಲ್ಲ ಎಂದು ಹೇಳಬೇಕೆನ್ನಿಸುತ್ತದೆಯೇ?ಒಂದು ಕ್ಷಣ ತಾಳಿ. ಬಹುಶಃ ನಾವೂ ನಮ್ಮ ಬದುಕಿನಲ್ಲಿ ಇಂಥದೇ ತಪ್ಪುಗಳನ್ನು ಮಾಡಿದ್ದೇವೆ. ಆದ್ದ­ರಿಂದ ಮುಂದೆ ಯಾವಾಗಲಾದರೂ ಮತ್ತೊಬ್ಬರ ಬಗ್ಗೆ ಅನಪೇಕ್ಷಿತ ಟೀಕೆ, ತಿದ್ದು­ಪಡಿ ಅಥವಾ ಬೋಧನೆಯನ್ನು ಮಾಡುವ ಅವಕಾಶ ಬಂದರೆ ಮನಸ್ಸನ್ನು ಹಿಂದಕ್ಕೆ ತಿರುಗಿಸಿ ನೋಡಿಕೊಂಡು ನಾವು ಅಂಥದೇ ತಪ್ಪುಗಳನ್ನು ಮಾಡಿಲ್ಲ­ವೆಂಬು­ದನ್ನು ಖಾತ್ರಿಪಡಿಸಿಕೊಳ್ಳುವುದು ವಾಸಿ. ಇದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಹೆಚ್ಚು ಸಹಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry