ಗುರುವಾರ , ಡಿಸೆಂಬರ್ 12, 2019
24 °C

ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಸುಧೀಂದ್ರ ಬುಧ್ಯ
Published:
Updated:
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ಯೋಗಿ ಯು.ಜಿ. ಕೃಷ್ಣಮೂರ್ತಿ ಅವರಲ್ಲಿ ಒಮ್ಮೆ ಪ್ರಶ್ನಿಸಿದ್ದರು ‘ಮನುಷ್ಯನ ಬಾಳಿನ ಮುಖ್ಯ ಸಮಸ್ಯೆ ಏನು?’ ಅದಕ್ಕೆ ಯು.ಜಿ. ಕೊಟ್ಟ ಉತ್ತರ ‘ಮನುಷ್ಯನ ಒಂಟಿತನ’. ಬಹುಶಃ ಅಂದು ಯು.ಜಿ. ಉತ್ತರವನ್ನು ಕೇಳಿದ್ದ ಯಾರಾದರೂ ಅನಾರೋಗ್ಯ, ಬಡತನ, ನಿರುದ್ಯೋಗ, ಸಾಂಸಾರಿಕ ತಾಪತ್ರಯಗಳೆಂಬ ಬದುಕಿನ ನಾನಾ ಬವಣೆಗಳ ಮಧ್ಯೆ ಒಂಟಿತನ ಹೇಗೆ ಮುಖ್ಯವಾಗಿ ನಿಲ್ಲುತ್ತದೆ ಎಂದುಕೊಂಡಿರಲಿಕ್ಕೆ ಸಾಕು. ಆದರೆ ಇದೀಗ ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಏಕಾಂಗಿತನ ಎಂಬ ಸಮಸ್ಯೆ ಏಕಾಏಕಿ ಹೀಗೇಕೆ ಸಮಾಜವನ್ನು ಹಿಂಸಿಸುತ್ತಿದೆ ಎಂಬ ಬಗ್ಗೆ ತಲೆಕೆಡಿಸಿಕೊಂಡು ಪರಿಹಾರ ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ನೀವು ಗಮನಿಸಿರಬಹುದು, ಇತ್ತೀಚೆಗೆ ಈ ವಿಷಯಕ್ಕೆ ಸಂಬಂಧಿಸಿದ ಸುದ್ದಿಯೊಂದು ಆಂಗ್ಲರ ನಾಡಿನಿಂದ ಬಂತು. ಬ್ರಿಟನ್ ಸರ್ಕಾರ ತನ್ನ ಪ್ರಜೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಯೊಂದನ್ನು ನಿರ್ವಹಿಸಲು ಪ್ರತ್ಯೇಕ ಸಚಿವರೊಬ್ಬರನ್ನು ನೇಮಿಸಿತು. ‘ಮಿನಿಸ್ಟರ್ ಫಾರ್ ಲೋನ್ಲಿನೆಸ್’ ಎಂಬ ನೂತನ ಸಚಿವ ಪದವಿಯನ್ನು ತೆರೆಸಾ ಮೇ ತನ್ನ ಸಂಪುಟದಲ್ಲಿ ಸೃಷ್ಟಿಸಿದರು. ಜಾಗತಿಕವಾಗಿ ಈ ಸುದ್ದಿ ಮೊದಲಿಗೆ ಅಚ್ಚರಿಯನ್ನು ಉಂಟುಮಾಡಿತು. ನಂತರ ಚರ್ಚೆಗೆ ಹೂರಣವಾಯಿತು.

ಹಾಗಾದರೆ, ಬ್ರಿಟನ್ ಎದುರಿಸುತ್ತಿರುವ ಬಿಕ್ಕಟ್ಟು ಯಾವ ಸ್ವರೂಪದ್ದು? ಪ್ರತ್ಯೇಕವಾಗಿ ಒಬ್ಬ ಸಚಿವರನ್ನು ನೇಮಿಸುವಷ್ಟು ಒಂಟಿತನದ ಸಮಸ್ಯೆ ಅಲ್ಲಿ ಬಿಗಡಾಯಿಸಿದೆಯೇ? ಹೌದೆನ್ನುತ್ತವೆ ಬ್ರಿಟನ್ ಸರ್ಕಾರ ಮುಂದಿಟ್ಟಿರುವ ಅಂಕಿ ಅಂಶಗಳು. ಸಾಮಾನ್ಯವಾಗಿ ಬ್ರಿಟಿಷರ ಸ್ವಭಾವವನ್ನು ವರ್ಣಿಸುವಾಗ ‘Stiff upper lip’ ಎಂಬ ನುಡಿಗಟ್ಟನ್ನು ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ಬ್ರಿಟನ್ ಜನ ಗಾಂಭೀರ್ಯ ಸ್ವಭಾವದವರು, ಊಟ– ಉಡುಗೆ– ಮಾತಿನಲ್ಲಿ ಶಿಷ್ಟಾಚಾರ ಮೈಗೂಡಿಸಿಕೊಂಡವರು. ಪ್ರತಿಕೂಲ ಪರಿಸ್ಥಿತಿಯಲ್ಲೂ ನಿರ್ಭಾವುಕರಾಗಿ ವರ್ತಿಸುವವರು. ಹಾಗಾಗಿ ‘ಪೆಡಸು ಮೇಲ್ದುಟಿ’ ಬ್ರಿಟನ್ನಿನ ಮುಖ್ಯ ಚಹರೆ. ಈಗ ಅದರ ಜೊತೆಗೆ ಒಂಟಿತನವು ಸಾಮಾಜಿಕ ವ್ಯವಸ್ಥೆಯ ಹೆಗ್ಗುರುತಾಗಿ ಸೇರಿಕೊಂಡಿದೆ. ಹಾಗಾಗಿ ತೆರೆಸಾ ಮೇ ಒಂಟಿತನದ ಸಮಸ್ಯೆಯನ್ನು ‘ಆಧುನಿಕ ಜೀವನದ ವಿಷಾದ ವಾಸ್ತವ’ ಎಂದು ಕರೆದಿದ್ದಾರೆ. ಆ ಮಾತು ಸಮಸ್ಯೆಯ ಮೂಲ ಏನು ಎನ್ನುವುದನ್ನೂ ಚುಟುಕಾಗಿ ಹೇಳುತ್ತಿದೆ.

ಬಿಡಿ, ಈ ಹಿಂದೆಯೂ ‘ಒಂಟಿತನ’ ಕುರಿತಾದ ಚರ್ಚೆ ಇಂಗ್ಲೆಂಡಿನಲ್ಲಿ ಸಾಕಷ್ಟು ಆಗಿತ್ತು. ಆದರೆ ಸರ್ಕಾರದ ಮೇಲೆ ಒತ್ತಡ ಹೇರುವ ಹಂತಕ್ಕೆ ಬೆಳೆದದ್ದು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ. ಜೋ ಕಾಕ್ಸ್ ಎಂಬಾಕೆ 2015ರಲ್ಲಿ ಸಂಸದರಾಗಿ ಆಯ್ಕೆಯಾದ ಬಳಿಕ ಒಂಟಿತನದ ಸಮಸ್ಯೆ ಕುರಿತು ಹೆಚ್ಚು ಮಾತನಾಡಿದರು. ತನ್ನದೇ ಅನುಭವದ ಮೂಲಕ ಸಮಸ್ಯೆಯ ಆಳ ಅಗಲವನ್ನು ಸಂಸತ್ತಿಗೆ ಮನವರಿಕೆ ಮಾಡಿಕೊಟ್ಟರು. ‘ಅಂಚೆಪೇದೆ ಆಗಿದ್ದ ನನ್ನ ಅಜ್ಜನ ಜೊತೆ ಮನೆಮನೆಗೆ ಅಂಚೆ ತಲುಪಿಸಲು ಹೋಗುವಾಗ ನೋಡುತ್ತಿದ್ದೆ, ಹಲವರ ಪಾಲಿಗೆ ಅವರು ಒಡನಾಡುವ ಏಕೈಕ ವ್ಯಕ್ತಿ ನನ್ನ ಅಜ್ಜ ಮಾತ್ರ ಆಗಿರುತ್ತಿದ್ದರು. ಈಗ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ’ ಎಂದು ಕಾಕ್ಸ್ ಸಮಸ್ಯೆಯ ತೀವ್ರತೆಯನ್ನು ವಿವರಿಸಿದ್ದರು.

ನಂತರ 2016ರಲ್ಲಿ ಜೋ ಕಾಕ್ಸ್, ಒಂದು ಆಯೋಗ ರಚಿಸಿ, ಹೆಚ್ಚುತ್ತಿರುವ ಒಂಟಿತನದ ಸಮಸ್ಯೆ ಮತ್ತು ಅದರಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮವನ್ನು ಅಭ್ಯಸಿಸಲು ಮುಂದಾದರು. ಆ ತಂಡದ ಜೊತೆಗೆ ಬ್ರಿಟನ್ ರೆಡ್ ಕ್ರಾಸ್ ಸೇರಿದಂತೆ 12 ಸರ್ಕಾರೇತರ ಸಂಸ್ಥೆಗಳೂ ಭಾಗಿಯಾದವು. ಆದರೆ ವಿಪರ್ಯಾಸ, 2016ರ ಜೂನ್‌ನಲ್ಲಿ ‘ಬ್ರೆಕ್ಸಿಟ್’ ನಿರ್ಣಯ ಕುರಿತ ಚುನಾವಣೆಗೆ ಮೊದಲು ಆಕೆಯನ್ನು ಹತ್ಯೆ ಮಾಡಲಾಯಿತು.

ಜೋ ಕಾಕ್ಸ್ ಹತ್ಯೆ ಬಳಿಕ, ಒಂಟಿತನದ ಸಮಸ್ಯೆಯನ್ನು ಹತೋಟಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂಬ ಒತ್ತಡ ಹೆಚ್ಚಾಯಿತು. ಜೊತೆಗೆ ಆಯೋಗ ಮಂಡಿಸಿದ ವರದಿಯಲ್ಲಿ ಸಮಸ್ಯೆಯ ಗಂಭೀರತೆಯನ್ನು ದಾಖಲಿಸಲಾಗಿತ್ತು. ‘ಇಂಗ್ಲೆಂಡಿನ ಹತ್ತು ಜನರ ಪೈಕಿ ಒಬ್ಬರು, ಏಕಾಂಗಿತನದ ಜೊತೆಗೆ ವಿವಿಧ ಮನೋದೈಹಿಕ ಕಾಯಿಲೆಗಳನ್ನು ಆವಾಹಿಸಿಕೊಂಡು ನರಳುತ್ತಿದ್ದಾರೆ. ಈಗಾಗಲೇ ಅಂದಾಜು 90 ಲಕ್ಷ ಜನ ಒಂಟಿತನದ ಸಮಸ್ಯೆಗೆ ಒಳಗಾಗಿದ್ದಾರೆ. ಅಂಗವಿಕಲರು, ವೃದ್ಧರಷ್ಟೇ ಅಲ್ಲದೇ ಯುವಕ ಯುವತಿಯರಲ್ಲೂ ಈ ಸಮಸ್ಯೆ ತೀವ್ರಗತಿಯಲ್ಲಿ ಏರುತ್ತಿದೆ’ ಎಂಬ ಅಂಶಗಳನ್ನು ಆಯೋಗದ ವರದಿ ಪ್ರಸ್ತಾಪಿಸಿತು. ಸಾರಾಂಶವೆಂಬಂತೆ, ‘ಸಾಮಾಜಿಕವಾಗಿ ಬೆರೆಯದೇ ಇರುವುದು, ದಿನಕ್ಕೆ 15 ಸಿಗರೇಟು ಸೇದುವುದಕ್ಕಿಂತ ಮಾರಕ’ ಎಂಬುದನ್ನು ಒತ್ತಿ ಹೇಳಿತು. ಇದನ್ನು ಇಂಗ್ಲೆಂಡಿನ ತಜ್ಞ ವೈದ್ಯರು ಅನುಮೋದಿಸಿದರು. ‘ಒಂಟಿತನ ಗುರುತಿಸಬಹುದಾದ ಒಂದು ಉಪದ್ರವ. ಜನ್ಮಜಾತ ಮನೋಭಾವ ಮತ್ತು ದೀರ್ಘಕಾಲದ ಭಾವನಾತ್ಮಕ ಕೊರತೆಗಳು ಈ ಸಮಸ್ಯೆಗೆ ಮೂಲ ಇರಬಹುದು. ಆದರೆ ಸಮಸ್ಯೆಯನ್ನು ಉಪೇಕ್ಷಿಸುವಂತಿಲ್ಲ. ಒಂಟಿತನವೇ ಮೂಲವಾಗಿ ಹೃದ್ರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮುಂತಾದ ವ್ಯಾಧಿಗಳು ಹೆಚ್ಚುತ್ತಿವೆ’ ಎಂಬ ಅಭಿಪ್ರಾಯ ವೈದ್ಯ ಸಮೂಹದಿಂದ ಬಂತು.

ಒಂಟಿತನದ ಅಂಕಿ ಅಂಶ ಕೊಡುವುದರ ಜೊತೆಗೆ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಕ್ರಮಗಳನ್ನೂ ಆಯೋಗ ತನ್ನ ವರದಿಯಲ್ಲಿ ಸೂಚಿಸಿತು. ಸಾಮಾನ್ಯವಾಗಿ ವಿಚ್ಛೇದನ, ನಿರುದ್ಯೋಗ, ಪ್ರೇಮ ವೈಫಲ್ಯ, ಸಂಗಾತಿಯ ಅಕಾಲಿಕ ಮರಣ, ಮಾರಣಾಂತಿಕ ಕಾಯಿಲೆ, ಕೀಳರಿಮೆಯಂತಹ ಭಾವನಾತ್ಮಕ ಸಂಗತಿಗಳ ಜೊತೆಗೆ, ಆಧುನಿಕ ಬದುಕು ಮುಂದೊಡ್ಡಿರುವ ವೃತ್ತಿ ಮತ್ತು ಗಳಿಕೆಯ ಒತ್ತಡ, ಪೈಪೋಟಿ, ಮಾತ್ಸರ್ಯ, ಕುಟುಂಬ ವಿಘಟನೆ, ದ್ವೀಪದ ಮನಸ್ಥಿತಿ... ವ್ಯಕ್ತಿಗಳನ್ನು ಒಂಟಿತನದತ್ತ ದೂಡುತ್ತಿವೆ. ಒಂಟಿತನದ ಸೂಚನೆಗಳಾಗಿ ಖಿನ್ನತೆ, ಕೋಪ, ಭಯ, ಪರನಿಂದೆ, ಸ್ವಯಂನಿಂದೆ, ನಿರಾಶೆ ಪ್ರಕಟವಾಗುತ್ತವೆ. ಇದರಿಂದ ಹೊರಬರುವ ಸುಲಭ ಮಾರ್ಗವೆಂದರೆ, ಕನಿಷ್ಠ ಮಟ್ಟಿಗಿನ ಕುಶಲೋಪರಿಯ ಸಂಭಾಷಣೆಯನ್ನಾದರೂ ನೆರೆಹೊರೆ ಮತ್ತು ಇತರರೊಂದಿಗೆ ಇಟ್ಟುಕೊಳ್ಳುವುದು. ಸ್ನೇಹ ವಲಯ ವಿಸ್ತರಿಸಿಕೊಳ್ಳುವುದು, ಪರರ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳುವುದು, ಸಾಮುದಾಯಿಕವಾಗಿ ಒಂದು ಕಡೆ ಸೇರಿ ಹರಟುವುದು, ಬೆರೆಯುವುದು ಅತ್ಯವಶ್ಯ. ಆಹ್ವಾನ ನಿರೀಕ್ಷಿಸದೆಯೇ ಆಪ್ತರ ಮನೆಯಬಾಗಿಲು ಬಡಿದು (Knock on door initiative) ಅವರೊಂದಿಗೆ ಮಾತನಾಡುವುದಕ್ಕೂ ಹಿಂಜರಿಯಬಾರದು ಎಂಬುದನ್ನು ತಜ್ಞರು ವರದಿಯಲ್ಲಿ ಸೂಚಿಸಿದರು.

ಇದೆಲ್ಲವನ್ನೂ ಯೋಜನಾಬದ್ಧವಾಗಿ ಕಾರ್ಯರೂಪಕ್ಕೆ ತರಲು ಸರ್ಕಾರ ಮಂತ್ರಿಯನ್ನು ನೇಮಿಸಿ ಇದೀಗ ಮೊದಲ ಹೆಜ್ಜೆ ಇಟ್ಟಿದೆ. ಒಂಟಿತನದಿಂದ ಬಳಲುತ್ತಿರುವ ಸಮಾನ ದುಃಖಿಗಳನ್ನು ಒಂದೆಡೆ ಕಲೆಹಾಕಿ ಅವರೊಳಗೆ ಸ್ನೇಹ, ಬಾಂಧವ್ಯ ಬೆಳೆಯುವಂತೆ ಮಾಡುವ ಉದ್ದೇಶವನ್ನು ಸರ್ಕಾರ ಇಟ್ಟುಕೊಂಡಿದೆ. ಈ ಹಿಂದೆ ಇಂತಹದೊಂದು ಯೋಜನೆಯನ್ನು ನೆದರ್‌ಲ್ಯಾಂಡ್ಸ್‌ ರೂಪಿಸಿತ್ತು. ನೆದರ್‌ಲ್ಯಾಂಡ್ಸ್‌ ಆಸ್ಪತ್ರೆಗಳು ಅಲ್ಲಿನ ವಿಶ್ವವಿದ್ಯಾಲಯಗಳೊಂದಿಗೆ ಜಂಟಿಯಾಗಿ ಯೋಜನೆ ರೂಪಿಸಿದವು. ವಿದ್ಯಾರ್ಥಿಗಳು ವಾರಕ್ಕೆ 30 ತಾಸು ಆಸ್ಪತ್ರೆಗೆ ಬಂದು ಅಲ್ಲಿನ ವೃದ್ಧರೊಂದಿಗೆ, ಒಂಟಿ ಜೀವಗಳೊಂದಿಗೆ ಬೆರೆತು ಹರಟುವ ಕಾರ್ಯಕ್ರಮ ಅದು. ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಆರ್ಥಿಕ ಸಹಾಯವನ್ನು ಆಸ್ಪತ್ರೆ ಮಾಡುತ್ತಿತ್ತು. ಇಂತಹ ಯೋಜನೆಯನ್ನು ಇಂಗ್ಲೆಂಡಿನಲ್ಲಿ ಕೂಡ ತರುತ್ತೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಜೊತೆಗೆ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಒಂಟಿತನದ ಸಮಸ್ಯೆಯು ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ ಖಾಸಗಿ ಕಂಪನಿಗಳಿಗೆ 250 ಕೋಟಿ ಯುರೊ ಮೊತ್ತದ ವಾರ್ಷಿಕ ಹೊರೆ ಆರೋಗ್ಯ ವಿಮೆಯ ರೂಪದಲ್ಲಿ ಬೀಳುತ್ತಿದೆ. ಹಾಗಾಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಒಂದಿಷ್ಟು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉಮೇದು ಬ್ರಿಟನ್ ಸರ್ಕಾರಕ್ಕಿದೆ.

ಹೀಗೆ ಬ್ರಿಟನ್ ತನ್ನಲ್ಲಿನ ಸಮಸ್ಯೆ ಒಪ್ಪಿಕೊಂಡು ನಿವಾರಣೆಗೆ ಹೆಜ್ಜೆ ಇಟ್ಟ ಬಳಿಕ, ಹಲವು ದೇಶಗಳು ತಮ್ಮಲ್ಲೂ ಇರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿವೆ.

‘ಜೀರೊ ಗ್ರೋಥ್’ ರಾಷ್ಟ್ರಗಳು ಎನಿಸಿಕೊಳ್ಳುವ ಜರ್ಮನಿ, ಪೋರ್ಚುಗಲ್, ಪೋಲೆಂಡ್‌ಗಳಲ್ಲಿ ಇಂದಿಗೂ ಜನನ ಮತ್ತು ಮರಣದ ಸಂಖ್ಯೆ ಸರಿದೂಗುತ್ತಿದೆ. ಆದರೆ ಒಂಟಿತನದ ಸಮಸ್ಯೆ ಜರ್ಮನಿಯಲ್ಲಿ ಮೂರ್ನಾಲ್ಕು ದಶಕಗಳಿಂದಲೂ ಇದೆ. ಈ ಬಗ್ಗೆ ಬಹಳ ಹಿಂದೆಯೇ ಪತ್ರಕರ್ತ ವೈಎನ್ಕೆ ‘ಏಕಾಂತ್‌ಜೀ’ ಎಂಬ ಲೇಖನ ಬರೆದಿದ್ದರು. ಆ ಲೇಖನದಲ್ಲಿ ‘ಈಚೆಗೆ ಜರ್ಮನಿಯಲ್ಲಿ ಸ್ತ್ರೀ, ಪುರುಷರು ಪ್ರಕೃತಿಯ ನಿಯಮದಂತೆ ಒಂದಾಗಿ ವಂಶವೃದ್ಧಿ ಮಾಡುವ ಬದಲು ಒಂಟಿಯಾಗಿ ಜೀವನ ನಡೆಸುವುದು ಹೆಚ್ಚಾಗಿದೆಯಂತೆ. ಜರ್ಮನಿಯ ಏಕಾಂಗಿಗಳು ಅರ್ಧಾಂಗಿಗಳನ್ನು ಕಟ್ಟಿಕೊಂಡು ಒಂದೂವರೆ ಅಂಗಿ ಆಗುವ ಬದಲು ತಮ್ಮ ಉದ್ಯಮಗಳಲ್ಲೇ ನಿರತರಾಗಿ ಬಾಳು ಸಾಗಿಸುತ್ತಿದ್ದಾರೆ. ಇಂತಹವರು ಶ್ರೀಮಂತಿಕೆ ಸಂಕೇತವಾದ ಪೆಂಟ್ ಹೌಸಿನಲ್ಲಿ ವಾಸಿಸುತ್ತಾರೆ. ಕಾರುಗಳಲ್ಲಿ ಸಂಚರಿಸುತ್ತಾರೆ. ಇವರೆಲ್ಲ ವೃತ್ತಿಯನ್ನೇ ಜೀವನದ ಗುರಿಯಾಗಿಸಿಕೊಂಡಿರುವ ಜರ್ಮನ್ ಪ್ರಜೆಗಳು’ ಎಂದು ತಮ್ಮದೇ ಶೈಲಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು. ಇನ್ನು, ಇಟಲಿ ಮತ್ತು ಜಪಾನ್‌ನಂತಹ ಜನಸಂಖ್ಯೆ ಕ್ಷೀಣಿಸುತ್ತಿರುವ ದೇಶಗಳಲ್ಲಿ ಒಂಟಿತನದ ಸಮಸ್ಯೆ ಈಗಾಗಲೇ ಅಪಾಯದ ತುದಿ ಮುಟ್ಟಿದೆ. ಜಪಾನ್ ವೃದ್ಧರ ದೇಶವಾಗಿ ಮಾರ್ಪಾಡಾಗಿದೆ. ಅದನ್ನು ‘ಸೂಪರ್ ಏಜಿಂಗ್ ಸೊಸೈಟಿ’ ಎಂದು ಕರೆಯಲಾಗುತ್ತಿದೆ. ಒಂಟಿತನದ ಸಮಸ್ಯೆ ಮರಣ ಪ್ರಮಾಣದ (Mortality) ಅಪಾಯವನ್ನು ಶೇಕಡ 26ರಷ್ಟು ಹೆಚ್ಚಿಸಿದೆ.

ಸದ್ಯದ ಮಟ್ಟಿಗೆ, ಐರೋಪ್ಯ ರಾಷ್ಟ್ರಗಳಲ್ಲಿ ಒಂಟಿತನದ ಸಮಸ್ಯೆ ತೀವ್ರ ಸ್ವರೂಪದಲ್ಲಿದೆಯಾದರೂ, ವಲಸಿಗರ ರಾಷ್ಟ್ರ ಅಮೆರಿಕ ಕೂಡ ಈ ಸಮಸ್ಯೆಯಿಂದಾಗಿ ಹೈರಾಣಾಗಿದೆ. ಈ ಹಿಂದೆ ಅಮೆರಿಕದ ಸರ್ಜನ್ ಜನರಲ್ ಆಗಿದ್ದ ವಿವೇಕ್ ಮೂರ್ತಿ ಇಂಗ್ಲೆಂಡಿನ ಕ್ರಮವನ್ನು ಸ್ವಾಗತಿಸಿ ‘ಅಮೆರಿಕದಲ್ಲೂ ಈ ಸಮಸ್ಯೆ ಹೆಚ್ಚಿದೆ. ಶೇಕಡ 25ರಷ್ಟು ಜನ ಬದುಕಿನ ವಿವಿಧ ಘಟ್ಟಗಳಲ್ಲಿ ಒಂಟಿತನದ ಸಮಸ್ಯೆಗೆ ಸಿಲುಕುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ‘ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ’ಗೆ ಬರೆದ ‘Work and the loneliness epidemic’ ಲೇಖನದಲ್ಲಿ ‘ತಾಂತ್ರಿಕವಾಗಿ ಮುಂದುವರೆದಿರುವ, ಬೆರಳಿನ ತುದಿಯಲ್ಲಿ ಜಗತ್ತಿನ ಪರ್ಯಟನೆ ಸಾಧ್ಯವಾಗಿಸಿಕೊಂಡಿರುವ ನಾವು, ನಮಗೆ ಗೊತ್ತಿಲ್ಲದೆಯೇ ನಮ್ಮ ಸುತ್ತ ಕೋಟೆ ನಿರ್ಮಿಸಿಕೊಳ್ಳುತ್ತಿದ್ದೇವೆ. ಪ್ರಕೃತಿ ಅವಘಡಗಳು ಮಾತ್ರ ನಮ್ಮನ್ನು ಒಟ್ಟಾಗಿ ಸೇರುವಂತೆ ಮಾಡುತ್ತಿವೆ. ಅಮೆರಿಕದ ಶೇಕಡ 40ರಷ್ಟು ಯುವಕರು ಒಂಟಿತನದಿಂದ ಬಳಲುತ್ತಿದ್ದಾರೆ. ಕಂಪನಿ ಸಿಇಒ ನಂತಹ ಅತಿ ಎತ್ತರದ ಹುದ್ದೆಯಲ್ಲಿರುವ ವ್ಯಕ್ತಿಗಳೂ ತಮ್ಮನ್ನು ಒಂಟಿತನ ಬಾಧಿಸುತ್ತಿದೆ ಎಂದು ಖಾಸಗಿಯಾಗಿ ಹೇಳಿಕೊಳ್ಳುತ್ತಾರೆ. ಹಿಂಸೆ, ಮಾದಕ ವ್ಯಸನ, ದುಷ್ಟಕೂಟಗಳಲ್ಲಿ ತೊಡಗಿಕೊಂಡ ಹಲವು ವಿದ್ಯಾರ್ಥಿಗಳನ್ನು ಭೇಟಿಮಾಡಿ ಮಾತನಾಡಿದಾಗ, ಅವರು ಒಂಟಿತನದ ಸಮಸ್ಯೆಯಿಂದ ಹೊರಬರುವ ಉಪಾಯವಾಗಿ ಈ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬುದು ತಿಳಿಯುತ್ತಿದೆ. ಇಂದು ಒಂಟಿತನ ಎಂಬುದು ಜಾಗತಿಕ ಜಾಡ್ಯವಾಗಿ ರೂಪಾಂತರಗೊಳ್ಳುತ್ತಿದೆ. ಇದು ಬೊಜ್ಜು ಮತ್ತು ಧೂಮಪಾನಕ್ಕಿಂತ ಮಾರಕ’ ಎಂದು ವಿವೇಕ್ ಮೂರ್ತಿ ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ನಾವು ‘ಮನುಷ್ಯ ಓರ್ವ ಸಮಾಜ ಜೀವಿ’ ಎಂದು ಮಾತುಮಾತಿಗೆ ಹೇಳುತ್ತೇವೆ. ಆದರೆ ಮನುಷ್ಯ ಸಮಾಜ ಜೀವಿಯಾದದ್ದು ಪ್ಲೇಗ್, ಹಸಿವು, ಯುದ್ಧಗಳ ಬೆದರಿಕೆಗಳಿಂದ ಎಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. ಬಹುಶಃ ಈಗ ಆ ಎಲ್ಲ ಅಪಾಯಗಳಿಂದ ಪಾರಾದ ಮೇಲೆ ಒಂಟಿಯಾಗಿಯೇ ಬದುಕುವ ಬಯಕೆ ಮನುಷ್ಯರಲ್ಲಿ ಹೆಚ್ಚುತ್ತಿರಬಹುದು. ಶತಮಾನಗಳ ಅವಧಿಯಲ್ಲಿ ಬದುಕಿಗೆ ಅನಿವಾರ್ಯವೆನಿಸಿ ಕಟ್ಟಿಕೊಂಡ ಕೂಡಿ ಬಾಳುವ ವ್ಯವಸ್ಥೆಯನ್ನು ಇತ್ತೀಚಿನ ವರ್ಷಗಳಲ್ಲಿ ಒಮ್ಮೆಲೇ ದೂರ ಸರಿಸುತ್ತಾ ಬಂದದ್ದು, ಬಹುಶಃ ಮಾನಸಿಕ ಒತ್ತಡಕ್ಕೆ ಕಾರಣವಾಗಿರಬಹುದು, ನಮ್ಮನ್ನು ಇನ್ನೊಂದು ಅಪಾಯದತ್ತ ಒಯ್ಯುತ್ತಿರಬಹುದು.

ಅದೇನೇ ಇರಲಿ, ಒಂಟಿತನ ಕುರಿತ ಈ ಎಲ್ಲ ಸುದ್ದಿ ಸ್ವಾರಸ್ಯವನ್ನು ಅವಲೋಕಿಸುವಾಗ ಕಂಡದ್ದು ಬ್ರಿಟಿಷ್ ಕವಿ ಜಾನ್ ಡನ್ ಸಾಲು. ಆತ ಶತಮಾನಗಳ ಹಿಂದೆಯೇ ಹೇಳಿದ್ದ ‘No man is an island, entire of itself; every man is a piece of the continent, a part of the main’. ಈ ಮಾತು ಮನನವಾದರೆ, ಮುಂದೊಂದು ದಿನ ಹವಾಮಾನ ಬದಲಾವಣೆ, ಕ್ಯಾನ್ಸರ್, ಸ್ಥೂಲಕಾಯ, ಧೂಮಪಾನದ ಕೆಡುಕು ಎಂಬೆಲ್ಲಾ ಜಾಗತಿಕ ಸಮಸ್ಯೆಗಳ ಜೊತೆ ಒಂಟಿತನವನ್ನೂ ಸೇರಿಸಬೇಕಾದ ಅವಶ್ಯಕತೆ ಬರುವುದಿಲ್ಲ. ಮುಖ್ಯವಾಗಿ ನಾವು ಭಾರತೀಯರು ಆಧುನಿಕರಾಗುವ ಭರದಲ್ಲಿ ಒಂಟಿತನದ ರುಜಿನು ಅಂಟಿಸಿಕೊಳ್ಳುವುದು ಸಲ್ಲ. ಸಭ್ಯರಾಗಲು ಬ್ರಿಟಿಷರ ‘ಪೆಡಸು ಮೇಲ್ದುಟಿ’ಯನ್ನು ಅನುಕರಿಸಬೇಕೆಂದಿಲ್ಲ.

ಪ್ರತಿಕ್ರಿಯಿಸಿ (+)