ಬುಧವಾರ, ಡಿಸೆಂಬರ್ 11, 2019
26 °C

ಪೇಟೆಯಲ್ಲಿ ಚೇತರಿಕೆ... ಸಂಕಷ್ಟ ಕೊನೆಗೊಂಡಿತೇ?

ಡಿ. ಮರಳೀಧರ
Published:
Updated:
ಪೇಟೆಯಲ್ಲಿ ಚೇತರಿಕೆ... ಸಂಕಷ್ಟ ಕೊನೆಗೊಂಡಿತೇ?

ಹದಿನೈದು ದಿನಗಳ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ  ಹಲ­ವಾರು ಆಸಕ್ತಿದಾಯಕ ಚಟುವಟಿಕೆ­ಗಳು ನಡೆದು ಗಮನ ಸೆಳೆದವು.  ಜನಪ್ರಿಯ ­ಮತ್ತು ಮಹತ್ವದ ನಿರ್ಧಾರಗಳಾದ ರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಭೂ ಸ್ವಾಧೀನ ಮಸೂದೆ, ದೀರ್ಘ­ಕಾಲದಿಂದ ನನೆ­ಗುದಿಗೆ ಬಿದ್ದಿದ್ದ ಕಂಪೆನಿ ಕಾಯ್ದೆ ತಿದು್ದಪಡಿ ಮಸೂದೆಗಳು ಸಂಸತ್‌ನಲ್ಲಿ ಸುಸೂತ್ರವಾಗಿ ಅಂಗೀಕಾರ­ವಾಗಿವೆ. ರಷ್ಯಾದ ಸೇಂಟ್‌ ­ಪೀಟರ್ಸ್‌­ಬರ್ಗ್‌ನಲ್ಲಿ ನಡೆದ ‘ಜಿ-–20’ ಶೃಂಗಸಭೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ಗವರ್ನರ್ ನೇಮಕವೂ ಇತರ ಪ್ರಮುಖ ವಿದ್ಯಮಾನಗಳಾಗಿವೆ.ಈ ಎಲ್ಲ ಬೆಳವಣಿಗೆಗಳು ದೇಶದ ಅರ್ಥ ವ್ಯವಸ್ಥೆ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಪ್ರಭಾವ ಬೀರುತ್ತವೆ. ಆರ್ಥಿಕ ವಿಶ್ಲೇಷಕರು, ವಿಷಯ ಪರಿಣತರು, ಟಿ.ವಿ. ಕಾರ್ಯಕ್ರಮ ನಿರೂಪಕರು ಈ ಎಲ್ಲ ವಿದ್ಯಮಾನಗಳ ಸಾಧಕ – -ಬಾಧಕ ಮತ್ತು ಪರಿಣಾಮಗಳ ಬಗ್ಗೆ ವಾದ–ವಿವಾದ ಮಂಡಿಸಿದ್ದಾರೆ. ಕೂಲಂಕಷವಾಗಿ ವಿಶ್ಲೇಷಣೆ ಮಾಡಿ­ದ್ದಾರೆ. ನನ್ನ ಈ ಅಂಕಣದಲ್ಲಿ ಇವುಗಳ ಪೈಕಿ ಒಂದೇ ವಿಷಯದ ಮೇಲೆಯೇ ಲೇಖನ ಬರೆಯಬಹುದಾಗಿದ್ದರೂ, ನಾನು ಇಲ್ಲಿ ಈ ಎಲ್ಲ  ಬೆಳವಣಿಗೆಗಳು ಮತ್ತು ಅವುಗಳ ಪ್ರಸ್ತುತತೆ ಬಗ್ಗೆ ಸಂಕ್ಷಿಪ್ತವಾಗಿ ಟಿಪ್ಪಣಿ ಮಾಡಲು ಬಯಸಿರುವೆ.ರಾಷ್ಟ್ರೀಯ ಭದ್ರತಾ ಮಸೂದೆಯು ಅಂದಾಜು 80 ಕೋಟಿ ಜನರಿಗೆ ಗರಿಷ್ಠ ಮಟ್ಟದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಭರವಸೆ ನೀಡುವುದರ ಜತೆಗೆ, ದೇಶದಲ್ಲಿನ ಹಸಿವಿನ ಸಮಸ್ಯೆಯನ್ನೂ ಪರಿಹರಿಸ ಲಿದೆ. ಈ ಯೋಜನೆ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ರೂ1,20,000 ಕೋಟಿಗಳಷ್ಟು ಹೆಚ್ಚಿನ ಹೊರೆ ಬೀಳಲಿದೆ.ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯ ಒದಗಿಸುವ  ಸೂಕ್ಷ್ಮವಾದ ಈ  ವಿಚಾರಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುವ ಧೈರ್ಯ ಪ್ರದರ್ಶಿಸಲಿಲ್ಲ. ಆದರೆ, ಈ ಮಸೂದೆಯು ಸರ್ಕಾರಕ್ಕೆ ಎರಡು ಹೊಸ ಸವಾಲುಗಳನ್ನು ಒಡ್ಡಲಿದೆ. ಬಜೆಟ್ ಕೊರತೆ ಮೇಲೆ ಹೆಚ್ಚುವರಿ ಹೊರೆ ಹೇರದೇ ಅಗಾಧ ಪ್ರಮಾಣದ ಸಬ್ಸಿಡಿ ವೆಚ್ಚವನ್ನು ದೇಶವು ಭರಿಸಲು ಸಾಧ್ಯವೇ ಮತ್ತು ದೋಷಪೂರಿತ ಸಾರ್ವಜನಿಕ ಪಡಿತರ

ವಿತರಣಾ ವ್ಯವಸ್ಥೆ ಮತ್ತು ಸೋರಿಕೆಯ ಕಾರಣಕ್ಕೆ ಈ ಮಹತ್ವಾಕಾಂಕ್ಷೆ ಯೋಜನೆಯನ್ನು    ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವೇ ಎನ್ನುವ ಅನುಮಾನ ಮೂಡಿಸುತ್ತದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ  ಬಜೆಟ್ ಕೊರತೆಯ ಶೇ 48ರಷ್ಟು ಖರ್ಚಾಗಿದೆ. ವರಮಾನ ಸಂಗ್ರಹ ಅದರಲ್ಲೂ ವಿಶೇಷವಾಗಿ ಪರೋಕ್ಷ ತೆರಿಗೆ ಸಂಗ್ರಹವು ಬಜೆಟ್ ಅಂದಾಜಿಗಿಂತ ಕಡಿಮೆ­ಯಾಗಿದ್ದು, ಕೇವಲ ಶೇ 2ರಷ್ಟು ಹೆಚ್ಚಳ ದಾಖಲಿಸಿದೆ. ಇದರಿಂದ ನಾವು ಯೂರೋಪ್ ದೇಶಗಳು ಎದುರಿ­ಸುತ್ತಿರುವ ರೀತಿಯ ಬಿಕ್ಕಟ್ಟಿಗೆ ಒಳಗಾಗುವ ಸಾಧ್ಯತೆಗಳೇನೂ ಇಲ್ಲ ಎಂದು ಸಮಾ­ಧಾ­ನ­­ಪಟ್ಟುಕೊಳ್ಳಬಹುದಾಗಿದೆ. ಐರೋಪ್ಯ ದೇಶಗಳು ತಮ್ಮ ವರಮಾನಕ್ಕಿಂತ  ಸಾಮಾಜಿಕ ವೆಚ್ಚವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿದ್ದರಿಂದಲೇ ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸಿ­ಕೊಂಡಿದ್ದವು.ಕೊನೆಗೂ ಭೂ ಸ್ವಾಧೀನ ಮಸೂ­ದೆಯು ರಾಜ್ಯಸಭೆಯಲ್ಲಿ ಅಂಗೀಕಾರ­ವಾಗಿದೆ. ನ್ಯಾಯ ಯುತ ಪರಿಹಾರ ಹಕ್ಕು ಮತ್ತು ಭೂ ಸ್ವಾಧೀನದಲ್ಲಿ ಪಾರ­ದರ್ಶಕತೆ, ಪುನರ್ವಸತಿ ಮಸೂದೆಯು, ಶತಮಾನಗಳಷ್ಟು ಹಳೆಯ ದಾದ 1894ರ ಕಾಯ್ದೆ ಬದಲಿಗೆ ಜಾರಿಗೆ ಬರಲಿದೆ. ಭೂ ಸ್ವಾಧೀನವು ಸಾಕಷ್ಟು ವಿವಾ­ದಾತ್ಮಕ ವಿಷಯವಾಗಿದೆ. ವ್ಯಾಪಕ ಪ್ರಮಾಣದ ಆರ್ಥಿಕ ವೃದ್ಧಿ ಮತ್ತು ಭೂಮಿಗೆ ಹೆಚ್ಚಿದ ಸ್ಫೋಟಕ ಸ್ವರೂಪದ ಬೇಡಿಕೆಯ ಹಿನ್ನೆಲೆಯಲ್ಲಿ, ಈ ಮೊದಲಿನ ಕಾಯ್ದೆಯು ತನ್ನ ಪ್ರಸ್ತುತತೆ ಕಳೆದು­ಕೊಂಡಿತ್ತು.ಭೂಮಿಯ ಪೂರೈಕೆ ಸ್ಥಿರವಾಗಿರುವು­ದರಿಂದ, ಭೂಮಿ ಸ್ವಾಧೀನಪಡಿಸಿ­ಕೊಳ್ಳುವುದು ಮತ್ತು ಇತರ ಉದ್ದೇಶ­ಗಳಿಗೆ ಅದನ್ನು ಹಂಚಿಕೆ ಮಾಡುವುದು ಸರ್ಕಾರದ ಪಾಲಿಗೆ ದೊಡ್ಡ ತಲೆ­ನೋವಿನ ಮತ್ತು ಜಟಿಲ ವಿಷಯ­ವಾಗಿದೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡು ವುದು ಅತ್ಯಂತ ವಿವಾದಾಸ್ಪದ ಸಂಗತಿಯೂ ಆಗಿದೆ. ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗಳಲ್ಲಿ ಹೂಡುವ ದಾವೆಗಳ ಕಾರಣಕ್ಕೆ ಕೈಗಾರಿಕೆಗಳ ಸ್ಥಾಪನೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳು ತುಂಬ ವಿಳಂಬವಾಗುತ್ತಿವೆ. ಭೂಮಿ ಮಾರಾಟ ಮಾಡುವ ರೈತರು ಮತ್ತು ಖರೀದಿಸುವ ಉದ್ದಿಮೆದಾರರು ಅವರವರದ್ದೇ ಕಾರಣಕ್ಕೆ ಆಶಾಭಂಗಕ್ಕೆ ಒಳಗಾಗಿದ್ದಾರೆ. ಭೂಮಿ ಕಳೆದುಕೊಂಡ ರೈತಾಪಿ ವರ್ಗಕ್ಕೆ ತನ್ನ ಕುಟುಂಬದ ಭವಿಷ್ಯ ಮತ್ತು ಜೀವನಾಧಾರದ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.ಸರ್ಕಾರವು ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಭೂ ಸ್ವಾಧೀನಕ್ಕೆ ಸಂಬಂಧಿಸಿದ ಹೊಸ ಮಸೂದೆಯಲ್ಲಿ ಪ್ರಾಮಾ­ಣಿಕ ಪ್ರಯತ್ನ ಮಾಡಿದೆ. ರೈತರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರ ನೂರಾರು ಅಭಿಪ್ರಾಯ ಮತ್ತು -ಸಲಹೆಗಳನ್ನು ಪರಿಗಣಿಸಿ ಮಸೂದೆಗೆ ಹೊಸ ರೂಪ ನೀಡಿದೆ. ಆದಾಗ್ಯೂ, ಉದ್ಯಮ ವಲಯದ ಹಲವಾರು ಸಂಘ ಸಂಸ್ಥೆಗಳು ಮಸೂದೆ ಬಗ್ಗೆ ಅಪಸ್ವರ ಎತ್ತಿವೆ. ಹೊಸ ಮಸೂದೆ ಜಾರಿಗೆ ಬಂದ ನಂತರವೂ ಭೂಸ್ವಾಧೀನ ಪ್ರಕ್ರಿಯೆಯು ಸಾಕಷ್ಟು ವಿಳಂಬವಾಗಲಿದೆ ಮತ್ತು ಹೆಚ್ಚಿದ ಭೂಮಿ ಬೆಲೆಯು ದೇಶಿ ಸರಕು ತಯಾರಿಕಾ ರಂಗದ ಸ್ಪರ್ಧಾತ್ಮಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.ಆದರೆ, ಭೂ ಮಾಲೀಕರ ದೃಷ್ಟಿ­ಯಿಂದ ನೋಡಿದರೆ, ಭೂಮಿ ಕಳೆದುಕೊಂಡಿದ್ದಕ್ಕೆ ಸಿಗುವ ಪರಿಹಾರ ಮೊತ್ತ, ಪುನರ್ವಸತಿ ಯೋಜನೆಯು ಉತ್ತಮ ಅಂಶಗಳಿಂದ ಕೂಡಿರುವುದು ವೇದ್ಯವಾಗುತ್ತದೆ ಎಂದರೂ ಕಾಲಗರ್ಭ­ದಲ್ಲಿ ಎಲ್ಲವೂ ಪರೀಕ್ಷೆಗೆ ಒಳಪಡಲಿವೆ.ಮಸೂದೆಯ ಮೂಲ ಆಶಯಕ್ಕೆ ಯಾವುದೇ ಧಕ್ಕೆ ಒದಗದ ರೀತಿಯಲ್ಲಿ ಕೆಲವು ಬದಲಾವಣೆ ಗಳನ್ನು ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಮಸೂದೆಯಲ್ಲಿ ಅಗತ್ಯವಾದ ಬದಲಾವ­ಣೆಗಳನ್ನು ಮಾಡಿ ಕೊಳ್ಳಲು ರಾಜ್ಯಗಳು ಸ್ವತಂತ್ರವಾಗಿವೆ.ಭೂ ಸ್ವಾಧೀನ ವಿಷಯಕ್ಕೆ ಸಂಬಂಧಿ­ಸಿದಂತೆ ಹೊಸ ಯುಗಾರಂಭಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರವು ಅಭಿನಂದ­ನೆಗೆ ಅರ್ಹವಾಗಿದೆ. ಭೂ ಸ್ವಾಧೀನ   ಪ್ರಕ್ರಿಯೆ  ತುಂಬ ಸಂಕೀರ್ಣ ವಿಷಯ­ವಾಗಿದ್ದು, ಯಾವುದೇ ಧನಾತ್ಮಕ ಬದಲಾವಣೆ ಯನ್ನು ನಂತರವೂ ಅಳವ­ಡಿಸಿ­ಕೊಳ್ಳಬಹು ದಾಗಿದೆ. ಈ ಬದಲಾ­ವಣೆಯು ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳ ಸಂಖ್ಯೆಯು ಗಮನಾರ್ಹ­ವಾಗಿ ಕಡಿಮೆಯಾಗಲು ಕಾರಣ ವಾಗಲಿ ಎಂದು ಆಶಿಸೋಣ.ರಷ್ಯಾದಲ್ಲಿ ನಡೆದ ‘ಜಿ–-20’ ಶೃಂಗಸಭೆಯೂ ಅನೇಕ ಆಸಕ್ತಿದಾಯಕ ಘಟನೆಗಳಿಗೆ ವೇದಿಕೆ ಯಾಗಿರುವುದು ಆಶಾದಾಯಕ ಬೆಳವಣಿಗೆ ಯಾಗಿದೆ. ಜಪಾನ್‌ನಿಂದ 35 ಶತಕೋಟಿ ಡಾಲರ್‌ಗಳ (ಅಂದಾಜು ರೂ 2,275 ಕೋಟಿ) ಹೆಚ್ಚುವರಿ ಕರೆನ್ಸಿ ವಿನಿಮಯ ಒಪ್ಪಂದ ಮಾಡಿಕೊಳ್ಳುವಲ್ಲಿ ಭಾರತ ಸಫಲವಾಗಿದೆ. ‘ಬ್ರಿಕ್’ ದೇಶಗಳಾದ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ರೂ 6,60,000 ಕೋಟಿ ತುರ್ತು ನಿಧಿ ಸ್ಥಾಪಿಸಲು ಮುಂದಾಗಿವೆ. ಈ ನಿರ್ಧಾರಗಳಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಉದ್ಭವಿಸಿರುವ ತಲ್ಲಣ ತಹಬಂದಿಗೆ ಬರಲಿದ್ದು, ಸ್ಥಿರತೆ ಒದಗಿಸಲಿದೆ.ದೇಶದ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಲು ಕೇಂದ್ರೀಯ ಬ್ಯಾಂಕ್‌ಗಳು ಜಾರಿಗೆ ತಂದಿರುವ ಅಸಾಂಪ್ರದಾಯಿಕ ಹಣಕಾಸು ನೀತಿಯನ್ನು ನಿಧಾನವಾಗಿ ವಾಪಸ್ ತೆಗೆದುಕೊಳ್ಳುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ಇನ್ನೊಂದು ಮಹತ್ವದ ನಿರ್ಧಾರ ವಾಗಿದೆ. ಅಮೆರಿಕ, ಇಂಗ್ಲೆಂಡ್, ಜಪಾನ್ ಮತ್ತು ಐರೋಪ್ಯ ಒಕ್ಕೂಟವು  ಇಂತಹ ಬದಲಾವಣೆ ಬಗ್ಗೆ ಎಲ್ಲ ದೇಶಗಳಿಗೆ ಮುಂಚಿತ ವಾಗಿಯೇ ಮಾಹಿತಿ ನೀಡುವುದಾಗಿ ಭರವಸೆ ನೀಡಿವೆ. ಭಾರತವು ತನ್ನ ಮನೆ ಸಮಸ್ಯೆಯನ್ನು ಸ್ವಂತ ಪ್ರಯತ್ನದಿಂದ ಬಗೆಹರಿಸಿಕೊಳ್ಳಲು ಹೊರಟಿದ್ದು, ಇತರ ದೇಶಗಳ ನೆರವು ಯಾಚಿಸಿ ಕುಳಿತಿಲ್ಲ.ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಗವರ್ನರ್ ರಘುರಾಂ ರಾಜನ್  ಅವರ ಆರಂಭದ ದಿನಗಳು ಭರವಸೆ­ದಾಯಕವಾಗಿವೆ.  ಮೊಟ್ಟ ಮೊದಲ ಸುದ್ದಿಗೋಷ್ಠಿಯಲ್ಲಿ ರಾಜನ್ ಆಡಿದ ಮಾತು  ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಸದ್ಯಕ್ಕೆ ಇನ್ನಷ್ಟು ಸುಧಾರಣೆ ತರುವ ಅಗತ್ಯವನ್ನೂ ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.ಬ್ಯಾಂಕ್ ಶಾಖೆಗಳ ವಿಸ್ತರಣೆಗೆ ಅವರಿಗೆ ಇರುವ ಒಲವು, ಕಾಲಮಿತಿ­ಯೊಳಗೆ ಹಣಕಾಸು ನೀತಿ ಜಾರಿಗೊಳಿ­ಸುವ ಧೋರಣೆಯನ್ನು ಆರ್ಥಿಕ ತಜ್ಞರು ಸ್ವಾಗತಿಸಿದ್ದಾರೆ. ದೇಶದ ಹಣಕಾಸು ಮಾರುಕಟ್ಟೆಯ ಆಳ – ಹರವು ತೃಪ್ತಿ­ದಾಯಕ ವಾಗಿಲ್ಲ ಮತ್ತು ಮಾರುಕಟ್ಟೆ­ಯನ್ನು ಇನ್ನಷ್ಟು ಸದೃಢಗೊಳಿಸುವ  ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತ­ರಾಗಬೇಕಾದ ಅಗತ್ಯದ ಬಗ್ಗೆ ರಾಜನ್ ತಳೆದಿರುವ ನಿಲುವು ಆರ್ಥಿಕ ಸುಧಾ­ರಣಾ­ವಾದಿಗಳ ಕಿವಿಗೆ ಕರ್ಣಾನಂದ­ಕರವಾಗಿದೆ.ಅಲ್ಪಾವಧಿ ಬಡ್ಡಿ ದರ, ಶಾಸನಬದ್ಧ ನಗದು ಅನುಪಾತ (ಎಸ್‌ಎಲ್‌ಆರ್) ಮತ್ತು  ನಗದು ಮೀಸಲು ಅನುಪಾತ­ಗಳನ್ನು  (ಸಿಆರ್‌ಆರ್) ಹಂತ ಹಂತ­ವಾಗಿ ತಗ್ಗಿಸುವ ಅಗತ್ಯವನ್ನು ರಾಜನ್ ಪುನರುಚ್ಚರಿಸಿದ್ದಾರೆ. ಆರ್‌ಬಿಐನ ಹೊಸ ಗವರ್ನರ್‌ ಸೂಚಿಸಿ­ರುವ ಬದಲಾವಣೆ ಸ್ವಾಗತಾರ್ಹವಾಗಿದೆ. ದೇಶಿ ಅರ್ಥವ್ಯವಸ್ಥೆಯ ಪಾಲಿಗೆ ಇದು ಮೊದಲ ಸಂತಸದ ಸುದ್ದಿ­ಯಾಗಿದೆ.  ಷೇರುಪೇಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ರಾಜನ್ ಅವರ ಹೇಳಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿ­ಯಿಸಿವೆ.ಸದ್ಯದ ಮಟ್ಟಿಗೆ ಹಣಕಾಸು ಪೇಟೆಯಲ್ಲಿನ ಚೇತರಿಕೆಯು ಸ್ಥಿರ­ವಾಗಿದೆ.  ಮಾರುಕಟ್ಟೆಯಲ್ಲಿನ ಏರಿಳಿತ­ಗಳ ಹೊರತಾಗಿಯೂ ಮಾರುಕಟ್ಟೆಯ ಸಂಕಷ್ಟದ ದಿನಗಳು ಕೊನೆಗೊಂಡಿವೆ ಎಂದೂ ನಾವೆಲ್ಲ ಆಶಾವಾದ ತಳೆಯಬಹುದಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಪ್ರತಿಕ್ರಿಯಿಸಿ (+)