ಶನಿವಾರ, ಮೇ 21, 2022
22 °C

ಪೇಟೆ: ಸಣ್ಣ ಹೂಡಿಕೆದಾರರ ನಿರಾಸಕ್ತಿ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯ ಹೆಗ್ಗುರುತಾದ `ಎಸ್ ಅಂಡ್ ಪಿ' ಸಂವೇದಿ ಸೂಚ್ಯಂಕವು ಕಳೆದ  ವಾರದ ಅಂತ್ಯದಲ್ಲಿ 20 ಸಾವಿರದ ಗಡಿ ಸಮೀಪಕ್ಕೆ ತಲುಪಿದೆ.  ಆದರೆ, ವಹಿವಾಟಿನ ಗಾತ್ರ ಮಾತ್ರ ಚೇತರಿಸಿಕೊಳ್ಳುತ್ತಿಲ್ಲ. ಇದಕ್ಕೆ ಮುಖ್ಯ  ಕಾರಣ ಸಣ್ಣ ಹೂಡಿಕೆದಾರರ ನಿರಾಸಕ್ತಿ.ಷೇರುಪೇಟೆ ನೀರಸಮಯವಾಗಿರುವಾಗ, ಹೂಡಿಕೆದಾರರು ಅದರಲ್ಲೂ ವಿಶೇಷವಾಗಿ ಸಣ್ಣ ಹೂಡಿಕೆದಾರರು ಹೂಡಿಕೆದಾರರ ಸ್ನೇಹಿ,ಆಕರ್ಷಕ ಲಾಭ ಗಳಿಸಿಕೊಡುವ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಾಗಿರುತ್ತದೆ. ವಿವಿಧ ಮಾಧ್ಯಮಗಳಲ್ಲಿ ಬರುವ ವೈವಿಧ್ಯಮಯ ವಿಶ್ಲೇಷಣೆಗಳನ್ನು ಆಧರಿಸಿ, ಸೂಕ್ತವಾದ ನಿರ್ಧಾರಗಳನ್ನು ಸಮಯೋಚಿತವಾಗಿ ತೆಗೆದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಸ್ವಲ್ಪ ಆಯ ತಪ್ಪಿದರೆ ಆಪತ್ತು ಕಟ್ಟಿಟ್ಟ ಬುತ್ತಿ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಗೀತಾಂಜಲಿ ಜೆಮ್ಸ ಮತ್ತು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಕಂಪೆನಿಗಳಾಗಿವೆ.ಎಂತಹ ಉತ್ತಮ ಸಂಸ್ಥೆಗಳಾದರೂ ಕೆಲವೊಮ್ಮೆ ಮಾರಾಟ ಮಾಡಿ ಹೂಡಿಕೆಯಿಂದ ಹೊರಬರಲು ಸಾಧ್ಯವಾಗದಂತೆ ಮಾಡುವ ಸಾಮರ್ಥ್ಯ ಪೇಟೆಗಿದೆ. ಹಾಗಾಗಿ ಅವಕಾಶವಾದಿ ಹೂಡಿಕೆದಾರರಾಗಿ ಸದಾ ಲಾಭ ಗಳಿಕೆಯತ್ತ ಇದ್ದಲ್ಲಿ ನಿಮ್ಮ ಚಿತ್ತ, ಹೂಡಿಕೆ ಯಶಸ್ವಿಯಾಗುವುದು. ಇತ್ತೀಚೆಗೆ ರೂ.54ರ ಸುಮಾರಿಗೆ ಕುಸಿದ್ದಿದ್ದ ಅಪೊಲೋ ಟೈರ್ಸ್‌ ಕಂಪೆನಿ ಈ ವಾರ ರೂ. 65ನ್ನು ದಾಟಿರುವುದು, ರೂ. 194 ರವರೆಗೂ ಕುಸಿದಿದ್ದ ಜಿಂದಾಲ್ ಸ್ಟೀಲ್ ಅಂಡ್ ಪವರ್ ರೂ. 222ಕ್ಕೆ ಜಿಗಿದಿರುವುದು. ಲಾಭಾಂಶದ ನಂತರ ರೂ.107 ರವರೆಗೂ ಕುಸಿದಿದ್ದ ಕರ್ನಾಟಕ ಬ್ಯಾಂಕ್ ರೂ.114 ರವರೆಗೂ ಚೇತರಿಸಿಕೊಂಡಿದ್ದು, ಬುಧವಾರದಂದು ರೂ.280ರ ಸಮೀಪವಿದ್ದ ಟಾಟಾ ಮೋಟಾರ್ಸ್‌ ಶುಕ್ರವಾರ ರೂ.293  ಚೇತರಿಸಿಕೊಂಡಿದ್ದೂ, ಇನ್ಫೊಸಿಸ್ ಫಲಿತಾಂಶ ಪ್ರೇರಿತವಾಗಿ ತಾಂತ್ರಿಕ ವಲಯದ ಎಚ್‌ಸಿಎಲ್ ಟೆಕ್ನಾಲಜೀಸ್ ವಿಪ್ರೊ, ಟಿಸಿಎಸ್‌ಗಳ ಏರಿಕೆ, ಪೇಟೆಯ ರಭಸಕ್ಕೆ ಸಾಕ್ಷಿಯಾಗುವ ಚಿನ್ನದ ಬೆಲೆ ಕುಸಿತ ಹಾಗೂ ವಿವಿಧ ನಿಯಂತ್ರಣಗಳ ಕಾರಣ ಟೈಟಾನ್ ಇಂಡಸ್ಟ್ರೀಸ್ ಕಳೆದ ಒಂದು ತಿಂಗಳಲ್ಲಿ ರೂ.200ಕ್ಕೆ ಕುಸಿದು ರೂ.252 ರವರೆಗೂ ಚೇತರಿಸಿಕೊಂಡಿದೆ.ಈ ಷೇರು ಮೇ ಅಂತ್ಯದಲ್ಲಿ ರೂ.300 ರಲ್ಲಿದ್ದು 13ನೇ ಜೂನ್ 200 ರೂಪಾಯಿಗೆ ಕುಸಿದು 12ನೇ ಜುಲೈ ರೂ.252ರವರೆಗೂ ಏರಿಕೆ ಕಂಡು ರೂ.249ರ ಸಮೀಪ ಅಂತ್ಯಗೊಂಡಿರುವುದು ಪೇಟೆಯಲ್ಲಿನ ಏರಿಳಿತಗಳ ಒತ್ತಡವನ್ನು ಪ್ರದರ್ಶಿಸುತ್ತದೆ. ದೀರ್ಘಕಾಲೀನ ಎಂಬುದು ಗತ ಕಾಲದ್ದಾಗಿದ್ದು ಲಾಭ ಕಾಲೀನವೆಂಬುದು ಈಗಿನ ವಾಸ್ತವಾಂಶವಾಗಿದೆ. ಏಶಿಯನ್ ಪೇಂಟ್ಸ್ ಮುಖಬೆಲೆ ಸೀಳಿಕೆ ಸಮೀಪಿಸುತ್ತಿರುವ ಕಾರಣ ರೂ.4900ನ್ನು ಶುಕ್ರವಾರ ತಲುಪಿತ್ತು. ಈ ಷೇರು 25ನೇ ಜೂನ್ ರೂ.4363 ರವರೆಗೂ ಕುಸಿದಿತ್ತು.ಫಾರ್ಮ ಕಂಪೆನಿಗಳಲ್ಲಿ ವೊಕಾರ್ಡ್ ಲಿ. ಬ್ರಿಟನ್ನಿನ ನಿಯಂತ್ರಕರ ಕ್ರಮದಿಂದ ಷೇರಿನ ಬೆಲೆಯು ಮಾರಾಟದ ಒತ್ತಡದಿಂದ ಕುಸಿಯಿತು. ಜೆಟ್ ಏರ್‌ವೇಸ್ ಇತಿಹಾದ್ ಗೊಂದಲದಿಂದ ರೂ.450 ರಿಂದ ರೂ.415 ರವರೆಗೂ ಕುಸಿದಿದೆ. ಒಟ್ಟಿನಲ್ಲಿ ಅವಕಾಶಗಳು ತ್ವರಿತವಾಗಿ ಪ್ರತ್ಯಕ್ಷವಾಗಿ ಕ್ಷಿಪ್ರವಾಗಿ ಮಾಯವಾಗುತ್ತಿವೆ. ಸೂಕ್ತ ಮಾರ್ಗದರ್ಶನದೊಂದಿಗೆ ಸಮಯೋಚಿತ ಕ್ರಮ ಉತ್ತಮ ಫಲಿತಾಂಶಕ್ಕೆ ದಾರಿ.ಒಟ್ಟಿನಲ್ಲಿ 462 ಅಂಶಗಳಷ್ಟು ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು ಮಧ್ಯಮ ಶ್ರೇಣಿ ಸೂಚ್ಯಂಕವನ್ನು ಕೇವಲ 56 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು ಕೇವಲ 45 ಅಂಶಗಳಷ್ಟು ಏರಿಕೆ ಕಾಣುವಷ್ಟು ಪ್ರಭಾವಿಯಾಗಿತ್ತು. ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಿಶ್ರಿತ ಚಟುವಟಿಕೆಯ ಕಾರಣ ಒಟ್ಟು ರೂ.1,319 ಕೋಟಿ ಹೂಡಿಕೆ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ.372 ಕೋಟಿಯಷ್ಟು ಷೇರು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳ ಮೌಲ್ಯ ರೂ.64.31 ಲಕ್ಷ ಕೋಟಿಯಿಂದ ರೂ.65.36 ಲಕ್ಷ ಕೋಟಿಗೆ ಏರಿಕೆ ಕಂಡಿದೆ.ಹೊಸ ಷೇರಿನ ವಿಚಾರ

ಓರಿಯಂಟ್ ಪೇಪರ್ ಅಂಡ್ ಇಂಡಸ್ಟ್ರೀಸ್ ಲಿ. ಕಂಪೆನಿಯ ಸೀಮೆಂಟ್ ವಿಭಾಗವನ್ನು ಬೇರ್ಪಡಿಸಿ, ವಿಲೀನಗೊಂಡ ಓರಿಯಂಟ್ ಸೀಮೆಂಟ್ ಕಂಪೆನಿಯು 12 ರಂದು ಮುಂಬೈ ಷೇರು ವಿನಿಮಯ ಕೇಂದ್ರದ `ಟಿ' ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ರೂ. 1ರ ಮುಖಬೆಲೆಯ ಈ ಷೇರು ಆರಂಭದ ದಿನ ರೂ. 60 ರಿಂದ ರೂ.57.05 ರವರೆಗೂ ವಹಿವಾಟಾಗಿದೆ.ಸಾರ್ವಜನಿಕ ಭಾಗಿತ್ವ

4ಬಿ.ಜಿ.ಆರ್ ಎನರ್ಜಿ ಸಿಸ್ಟಮ್ಸ ಕಂಪೆನಿಯು ಶೇ 3.02ರ ಭಾಗಿತ್ವವನ್ನು ರೂ.120 ರಂತೆ ಆಫರ್ ಫಾರ್ ಸೇಲ್‌ನಲ್ಲಿ ಮಾರಾಟ ಮಾಡುವ ಮೂಲಕ ಲೀಸ್ಟಿಂಗ್ ನಿಯಮದ ಶೇ 25 ರಷ್ಟರ ಸಾರ್ವಜನಿಕ ಭಾಗಿತ್ವದ ನಿಯಮ ಪಾಲನೆಯಲ್ಲಿ ಯಶಸ್ವಿಯಾಗಿದೆ.

4ಹಿಂದೂಸ್ಥಾನ್ ಮೀಡಿಯಾ ವೆಂಚರ್ಸ್ 19,39,027 ಷೇರುಗಳನ್ನು ಪ್ರತಿ ಷೇರಿಗೆ ರೂ.120 ರಂತೆ ಆಫರ್ ಫಾರ್ ಸೇಲ್ ಗವಾಕ್ಷಿ ಮೂಲಕ 11 ರಂದು ವಿತರಿಸಲು ಯಶಸ್ವಿಯಾಗಿದೆ.

4ಸುಂದರಂ ಕ್ಲೇಟನ್ ಕಂಪೆನಿಯು ಕೇವಲ 4 ಷೇರು ವಿತರಿಸಲು ಈ ಗವಾಕ್ಷಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿದೆ.ಕಾರ್ಪೊರೇಟ್ ಫಲಗಳ ವಿಚಾರ

* ಸೆಂಚುರಿ ಪ್ಲೈವುಡ್ ಕಂಪೆನಿಯ ರೂ. 1ರ ಮುಖಬೆಲೆ ಷೇರಿಗೆ ಶೇ 25ರ ಲಾಭಾಂಶ ಪ್ರಕಟಿಸಿದೆ.

* ಫಾರ್ಮಾವಲಯದ ಸಿಂಕಾಂ ಫಾರ್ಮುಲೇಷನ್ಸ್ ಕಂಪೆನಿಯು 5:2ರ ಅನುಪಾತದ ಬೋನಸ್ ಷೇರನ್ನು ಪ್ರಕಟಿಸಿದ್ದು ಇದು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳಿದ ಸೊಲೂಷನ್ಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳಲಿದೆ.ತೆರೆದ ಕರೆ

ಯುನೈಟೆಡ್ ಸ್ಪಿರಿಟ್ ಮತ್ತು ಡಿಯಾಜಿಯೋ ಕಂಪೆನಿಗಳು ಜಂಟಿಯಾಗಿ, ಜೆಎಂ ಫೈನಾನ್ಶಿಯಲ್ಸ್ ಇನ್ಸಿಟಿಟ್ಯೂಷನಲ್ ಸೆಕ್ಯುರಿಟೀಸ್ ಪ್ರೈ. ಲಿ. ಮೂಲಕ ಪಯೋನಿಯರ್ ಡಿಸ್ಟಿಲ್ಲರೀಸ್ ಲಿ. ಕಂಪೆನಿಯ 24,66,168 ಷೇರುಗಳನ್ನು ಸಾರ್ವಜನಿಕರಿಂದ ರೂ.64.02 ರಂತೆ ಕೊಳ್ಳಲು 28ನೇ ಆಗಸ್ಟ್‌ನಿಂದ ತೆರೆದ ಕರೆ ನೀಡಲಿದೆ ಈ ಕರೆಯು ಸೆಪ್ಟೆಂಬರ್ 11 ರವರೆಗೂ ತೆರೆದಿರುತ್ತದೆ. ರೂ. 10ರ ಮುಖಬೆಲೆಯ ಈ ಷೇರು ರೂ. 62.90 ರಲ್ಲಿ ವಹಿವಾಟಾಗಿದೆ.ಉತ್ಪಾದನಾ ರಹಿತ ದಿನಗಳು

ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿ ಮತ್ತು ಅದರ ಅಗಸಂಸ್ಥೆ ಮಹೀಂದ್ರ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್‌ ಲಿ. ಕಂಪೆನಿ, ಜುಲೈ ತಿಂಗಳಲ್ಲಿ ಒಂದರಿಂದ 8 ದಿನದವರೆಗೆ ಉತ್ಪಾದನಾ ರಹಿತ ದಿನಗಳನ್ನಾಗಿಸಿ ಮಾರಾಟ ವಿಭಾಗ ಮತ್ತು ಉತ್ಪಾದನಾ ವಿಭಾಗಗಳಲ್ಲಿ ಸಮತೋಲನೆ ಮಾಡಿಸಲಿದೆ. ಈ ಅವಧಿಯಲ್ಲಿ ಪೇಟೆಯಲ್ಲಿ ಬರಬಹುದಾದ ಬೇಡಿಕೆ ಪೂರೈಸಲು ಅವಶ್ಯವಾದಷ್ಟೂ ವಾಹನಗಳ ದಾಸ್ತಾನು ಕಂಪೆನಿ ಹೊಂದಿದೆ.  ಫಾರ್ಮ್ ಉತ್ಪನ್ನಗಳ ಹಿಂಪಡೆಯುವ ನಿರ್ಧಾರ

ವೊಕಾರ್ಡ್ ಲಿ. ಕಂಪೆನಿಯ ಸುಮಾರು 16 ವಿವಿಧ ಔಷಧಿಗಳು ಉತ್ಪಾದನಾ ವಿಧದಲ್ಲಿ ಲೋಪವಿದೆ ಎಂದು ಬ್ರಿಟನ್ನಿನ ಔಷಧ ನಿಯಂತ್ರಕ ಎಂ.ಎಚ್.ಆರ್.ಎ.ಯು. ಪೇಟೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದೆ. ಈ ಔಷಧಗಳಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಖಿನ್ನತೆ, ಪಾರ್ಕಿನ್‌ಸನ್ ಕಾಯಿಲೆ, ಥೈರಾಯ್ಡ ಮುಂತಾದವುಗಳ ಶುಶ್ರೂಷೆಯಲ್ಲಿ ಉಪಯೋಗಿಸುವಂತಹವಾಗಿವೆ.ವಾರದ ವಿಶೇಷ

ಷೇರು ಪೇಟೆಯಲ್ಲಿ 2000ದಲ್ಲಿ ಕಂಡಂತಹ ಮೌಲ್ಯ ನಶಿಸುವಿಕೆಯನ್ನು ಈ ವರ್ಷ ಕೆಲವು ಕಂಪೆನಿಗಳಲ್ಲಿ ಕಾಣುವಂತಾಗಿದೆ. 2000ದಲ್ಲಿ ತಾಂತ್ರಿಕ ಕಂಪೆನಿ ಷೇರುಗಳು ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಅಪಮೌಲ್ಯಕ್ಕೊಳಗಾಗಿ, ಹೂಡಿಕೆದಾರರಿಗೆ ಷೇರಿನಿಂದ ಹೊರಬರುವ ಅವಕಾಶ ವಂಚಿತರನ್ನಾಗಿಸಿದವು. ಅದೇ ರೀತಿ ಈಗ ಗೀತಾಂಜಲಿ ಜೆಮ್ಸ ಕಳೆದ ಒಂದು ತಿಂಗಳಲ್ಲಿ ರೂ.580ರ ಸುಮಾರಿನಿಂದ ರೂ.141ರ ವರೆಗೆ ನಿರರ್ಗಳವಾಗಿ, ಮಾರಾಟಕ್ಕೆ ಅವಕಾಶ ನೀಡಿದೆ. ಕುಸಿತ ಕಂಡುದಲ್ಲದೆ ಮತ್ತಷ್ಟು ಕುಸಿತದ ಸಾಧ್ಯತೆಯೂ ಇದೆ. ಈ ಕಂಪೆನಿಗೆ ರೇಟಿಂಗ್ ಕಂಪೆನಿ `ಕ್ರಿಸಿಲ್' ಕಳೆದ ಮಾರ್ಚ್‌ನಲ್ಲಿ ರೂ.540 ಈ ಷೇರಿಗೆ ಸರಿಯಾದ ಬೆಲೆ ಎಂದಿತ್ತು. ಆದರೆ ಈಗ ರೂ.140ಕ್ಕೆ ಇಳಿದಿದೆ. ಅಂದರೆ ಯಾವ ವಿಶ್ಲೇಷಣೆಯಾದರೂ ಷೇರುಪೇಟೆ ಜೀರ್ಣಿಸಿಕೊಳ್ಳದೆ ತನ್ನದೇ ಆದ ದಾರಿಯಲ್ಲಿ ಸಾಗುತ್ತದೆ.ಷೇರುಪೇಟೆಯ ಚಲನೆಯ ವೇಗ ಹೇಗಿದೆ ಎಂದರೆ ಜೂನ್ 24 ರಂದು ಸಂವೇದಿ ಸೂಚ್ಯಂಕವು 18,540 ರಲ್ಲಿದ್ದು ಜುಲೈ 12 ರಂದು 19958 ರಲ್ಲಿದೆ. ಆಂದರೆ 15 ದಿನಗಳಲ್ಲಿ ಸುಮಾರು 1400 ಅಂಶಗಳಷ್ಟು ಏರಿಕೆ ಕಂಡಿದೆ. ಇದರಲ್ಲಿ ಇನ್ಫೊಸಿಸ್ ಕೊಡುಗೆ ಅಪಾರವಿದೆ. ಶುಕ್ರವಾರದಂದು ಈ ಕಂಪೆನಿಯು 157 ಅಂಶಗಳಷ್ಟು ಏರಿಕೆಗೆ ಕಾರಣವಾಗಿದೆ. ಕಳೆದ ವರ್ಷ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ 250 ದಿನಗಳಲ್ಲಿ ರೂ.5.48 ಲಕ್ಷ ಕೋಟಿ ವಹಿವಾಟಾಗಿದ್ದು ಇದರಲ್ಲಿ ರೂ.3.62 ಲಕ್ಷ ಕೋಟಿ ವಹಿವಾಟು ಎ ಗುಂಪಿನ ಷೇರಿನಲ್ಲಿ ನಡೆದ ವಹಿವಾಟಾಗಿದೆ ಅಂದರೆ ಶೇ 65ಕ್ಕೂ ಹೆಚ್ಚಿನ ಕೊಡುಗೆ ಎ ಗುಂಪಿನ ಷೇರುಗಳದಾಗಿವೆ. ಈ ವರ್ಷದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಇದುವರೆಗೆ 73 ದಿನಗಳಲ್ಲಿ ಒಟ್ಟು ರೂ. 1.44 ಲಕ್ಷ ಕೋಟಿ ವಹಿವಾಟಾಗಿದ್ದು ಇದಕ್ಕೆ ಶೇ 75ರಷ್ಟು ಕೊಡುಗೆ ಎ ಗುಂಪಿನದಾಗಿದೆ. ಅಂದರೆ ಪೇಟೆಯ ಚಟುವಟಿಕೆಯು ಸೀಮಿತವಾಗುತ್ತಿದ್ದು, ಅಗ್ರಮಾನ್ಯ ಷೇರುಗಳತ್ತ ಕೇಂದ್ರೀಕೃತವಾಗುತ್ತಿದೆ.ಶುಕ್ರವಾರದ ಪರಿಸ್ಥಿತಿ ಎಂದರೆ ಪೇಟೆಯ ಬಂಡವಾಳ ಮೌಲ್ಯವು ರೂ.65.36 ಲಕ್ಷ ಕೋಟಿಯಾಗಿದ್ದು ಇದರಲ್ಲಿ ಸಂವೇದಿ ಸೂಚ್ಯಂಕದಲ್ಲಿನ ಷೇರಿನ ಭಾಗವು ರೂ. 32.47 ಲಕ್ಷ ಕೋಟಿಯಾಗಿದೆ. ಈ ರೂ. 32.47 ಲಕ್ಷ ಮೌಲ್ಯದಲ್ಲಿ ಪೇಟೆಯಲ್ಲಿ ಸರಾಗವಾಗಿ ಹರಿದಾಡುವ ಷೇರುಗಳ ಮೌಲ್ಯವು ರೂ.17.07 ಲಕ್ಷ ಕೋಟಿಯಾಗಿದೆ. ಅಂದರೆ ಸಂವೇದಿ ಸೂಚ್ಯಂಕದಲ್ಲಿನ ಷೇರುಗಳಲ್ಲಿ ಸುಮಾರು ಅರ್ಧದಷ್ಟು ಮಾತ್ರ ಹರಿದಾಡುತ್ತಿರುವುದರಿಂದ ಷೇರುಗಳ ಏರಿಳಿತ ಹೆಚ್ಚಾಗಿ ಕಾಣಬಹುದಾಗಿದೆ. ಮೂಲಾಂಶಗಳ ಹೊರತು ಬಾಹ್ಯ ಕಾರಣಗಳು ಹೆಚ್ಚು ಪ್ರಭಾವ ಬೀರಿ ಅಧಿಕ ಏರಿಳಿತ ಪ್ರದರ್ಶಿಸುತ್ತಿರುವ ಈಗಿನ ದಿನಗಳಲ್ಲಿ ಷೇರುಗಳ ಚಲಾವಣೆ, ಲಾಭದಾಯಕವಾಗಿ, ನಡೆಸುವುದೊಂದೇ ದಾರಿ. ಮೂಲಕಾರಣದ ಅನ್ವೇಷಣೆ ಅನಗತ್ಯ.ಮೊ.  98863-13380

(ಮಧ್ಯಾಹ್ನ 4.30ರ ನಂತರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.