'ಪ್ಯೂ' ಸಮೀಕ್ಷೆ ಮತ್ತು ಮೋದಿ ಜನಪ್ರಿಯತೆ

7

'ಪ್ಯೂ' ಸಮೀಕ್ಷೆ ಮತ್ತು ಮೋದಿ ಜನಪ್ರಿಯತೆ

ಡಿ. ಉಮಾಪತಿ
Published:
Updated:
'ಪ್ಯೂ' ಸಮೀಕ್ಷೆ ಮತ್ತು ಮೋದಿ ಜನಪ್ರಿಯತೆ

ಕಳವಳಕಾರಿ ಹಂತವನ್ನು ತಲುಪುತ್ತಿರುವ ನಿರುದ್ಯೋಗ ಮತ್ತು ಕುಸಿದ ಅಭಿವೃದ್ಧಿ ದರ, ಹೆಚ್ಚುತ್ತಿರುವ ಅಪೌಷ್ಟಿಕತೆ, ಗ್ರಾಮೀಣ ಅತೃಪ್ತಿ, ಲಿಂಗ ಭೇದಭಾವ, ಆವರಿಸತೊಡಗಿರುವ ಕೃಷಿ ಬಿಕ್ಕಟ್ಟು, ಹಸಿವಿನ ಸಾವುಗಳ ಪ್ರಕರಣಗಳ ನಡುವೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯ ಹೊಳಪು ಮಾಸಿಲ್ಲ ಎಂದು ಸಾರುವ ಸಮೀಕ್ಷೆಯೊಂದು ಹೊರಬಿದ್ದಿದೆ. ಭಾರೀ ಪ್ರಚಾರ ಪಡೆದಿರುವ ಈ ಸಮೀಕ್ಷೆಯನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಹೆಮ್ಮೆಯ ಪಾರಿತೋಷಕದಂತೆ ಹಿಡಿದು ಹಿಗ್ಗುತ್ತಿರುವ ನೋಟಗಳು ಸಮೂಹ ಮಾಧ್ಯಮಗಳಲ್ಲಿ ಕಿಕ್ಕಿರಿದಿವೆ.

ನೋಟು ರದ್ದು ಕ್ರಮ ಭಾರತದ ನಗದು ಆಧಾರಿತ ವ್ಯಾಪಾರೋದ್ಯಮಕ್ಕೆ ಭಾರೀ ಹೊಡೆತ ನೀಡಿತ್ತು. ಈ ಗಾಯದ ಮೇಲೆ ಅರೆಬೆಂದ ಜಿ.ಎಸ್.ಟಿ. ಬರೆ. ಬಂಡವಾಳ ಹೂಡಿಕೆ ಸ್ಥಗಿತಗೊಂಡಿದೆ. ಕೈಗಾರಿಕೆ ಉತ್ಪಾದನೆಯ ಉಸಿರು ಅಡಗಿದೆ. ರಫ್ತುಗಳು ಕುಸಿದಿವೆ. ಈ ಕಾರ್ಮೋಡದಲ್ಲಿ ಮೂಡೀಸ್ ‘ಬೆಳ್ಳಿ ರೇಖೆ’ ಮೂಡಿಸಿದ್ದೇಕೆ? ಅಥವಾ ನಿಜ ಅರ್ಥದಲ್ಲಿ ಈ ರೇಟಿಂಗ್ ಅನ್ನು ಬೆಳ್ಳಿ ರೇಖೆಯೆಂದು ಕರೆಯಬಹುದೇ?

ಇಂತಹ ‘ರೇಟಿಂಗ್’ ಅರ್ಥವ್ಯವಸ್ಥೆಯ ಯಾವುದೇ ಆಯಾಮದ ಕುರಿತು ಕೂಡ ಕಟ್ಟ ಕಡೆಯ ನುಡಿಯೇನೂ ಅಲ್ಲ. ರೇಟಿಂಗ್ ನೀಡಿಕೆಯಲ್ಲಿ ಹಲವು ಸಲ ಅನ್ಯಾಯ ಜರುಗಿದೆ. ಕೆಲವು ಸಲ ಮೋಸ ಮಾಡಲೆಂದೇ ಹೊಗಳಲಾಗುತ್ತದೆ. ಇದು ಹೊಗಳಿಕೆಯ ಮೋಸ ಅಥವಾ ಮೋಸದ ಹೊಗಳಿಕೆ ಎಂದು ವಿತ್ತೀಯ ವ್ಯವಹಾರಗಳ ಹಿರಿಯ ಪತ್ರಕರ್ತ ಟಿ.ಎನ್. ನೈನನ್ ಬಣ್ಣಿಸುತ್ತಾರೆ.

ಹದಿಮೂರು ವರ್ಷಗಳ ಅಂತರದ ನಂತರ ಭಾರತದ ವಿತ್ತೀಯ ಶಕ್ತಿ ಸಾಮರ್ಥ್ಯವನ್ನು ತಳಾತಳದ ಶ್ರೇಣಿಯಿಂದ ಒಂದು ಹಂತ ಮೇಲಕ್ಕೆ ಎತ್ತಿ ಹಿಡಿದಿರುವ ವರದಿ ದೊಡ್ಡ ಪ್ರಚಾರ ಪಡೆಯತೊಡಗಿದೆ. ಈ ಬಗೆಯ ಪ್ರಚಾರ ಮತ್ತು ರೇಟಿಂಗ್‌ ನಿಂದ ಉಂಟಾಗುವ ಲಾಭಕ್ಕೂ ಪ್ರಮಾಣಾತ್ಮಕ ಇಲ್ಲವೇ ಗುಣಾತ್ಮಕ ಸಂಬಂಧ ಇಲ್ಲ. ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ ತಗ್ಗಿಸುವಲ್ಲಿ ಈ ರೇಟಿಂಗ್ ಮತ್ತು ಜನಪ್ರಿಯತೆಯ ಸಮೀಕ್ಷೆಗಳು ಯಾವ ಪಾತ್ರವನ್ನೂ ವಹಿಸಲಾರವು.

ಶ್ರೇಣಿಯನ್ನು ಒಂದು ಹಂತ ಮೇಲೆ ಎತ್ತಿ ಹಿಡಿದಿರುವ ಕ್ರಿಯೆಯಿಂದ ದೇಶದ ಕಾರ್ಪೊರೇಟ್‌ ಸಂಸ್ಥೆಗಳು ವಿದೇಶೀ ಬಂಡವಾಳ ಮಾರುಕಟ್ಟೆಯಿಂದ ಕಡಿಮೆ ದರದ ಬಡ್ಡಿಗೆ ಸಾಲ ಎತ್ತಬಹುದು ಅಷ್ಟೇ. ಹೀಗೆ ಎತ್ತುವ ಸಾಲ ನಮ್ಮ ಉದ್ಯಮವಲಯವನ್ನು ಗಟ್ಟಿ ಮಾಡಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆಯೇ ಎಂಬ ಪ್ರಶ್ನೆಗೆ ಹೌದು ಎಂಬ ಧಾಡಸಿಯ ಉತ್ತರ ನೀಡುವ ಧೈರ್ಯವನ್ನು ಯಾವ ಆರ್ಥಿಕ ವಿಶ್ಲೇಷಣಕಾರನೂ ಈವರೆಗೆ ಮಾಡಿಲ್ಲ.

ಅಮೆರಿಕದ ಪ್ಯೂ ರಿಸರ್ಚ್ ಏಜೆನ್ಸಿಯ ಸಮೀಕ್ಷೆಯ ಪ್ರಕಾರ, ಹತ್ತರಲ್ಲಿ ಒಂಬತ್ತು ಮಂದಿ ಭಾರತೀಯರ ಪ್ರಕಾರ ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನಿ. ಇದೇ ಹತ್ತು ಮಂದಿಯಲ್ಲಿ ಐವರು ದೇಶಕ್ಕೆ ಮಿಲಿಟರಿ ಆಡಳಿತವೇ ಸೂಕ್ತ ಎಂದಿರುವುದು ವಿಚಿತ್ರ ವಿರೋಧಾಭಾಸದ ಸಂಗತಿ.

ದೇಶದಲ್ಲಿ ಹಲವು ದಶಕಗಳಿಂದ ತೀವ್ರಗತಿಯಿಂದ ಬೆಳೆಯತೊಡಗಿರುವ ಆರ್ಥಿಕ ಅಸಮಾನತೆ ಕಳೆದ ಮೂರು ವರ್ಷಗಳಲ್ಲಿ ಇನ್ನಷ್ಟು ವೇಗವನ್ನು ಪಡೆದಿರುವುದು ವಾಸ್ತವ ಸಂಗತಿ. ದೇಶದ ಶೇ 58ರಷ್ಟು ಸಂಪತ್ತು ಕೇವಲ ಶೇಕಡ ಒಂದರಷ್ಟು ಮಂದಿಯ ತಿಜೋರಿಗಳಿಗೆ ಹರಿದು ಹೋಗಿದೆ.

ಹಸಿವಿನ ಜಾಗತಿಕ ಸೂಚ್ಯಂಕದ ಪ್ರಕಾರ ನೂರನೆಯ ಜಾಗ. ಉತ್ತರ ಕೊರಿಯಾ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗೆ.

ಅಡೆತಡೆಗಳಿಲ್ಲದೆ ಸಲೀಸಾಗಿ ವ್ಯಾಪಾರ ಮಾಡಬಹುದಾದ ದೇಶಗಳ ವಿಶ್ವಬ್ಯಾಂಕ್ ಪಟ್ಟಿಯಲ್ಲಿ ಭಾರತ ಮೂವತ್ತು ಶ್ರೇಯಾಂಕಗಳಷ್ಟು ಮುಂದೆ ಸರಿದಿದೆ. 190 ದೇಶಗಳ ಪೈಕಿ ನೂರನೆಯ ಸ್ಥಾನದಲ್ಲಿದೆ. ಮುಂದಿನ ಗುರಿ ಐವತ್ತನೆಯ ಸ್ಥಾನ ತಲುಪುವುದು.

ಈ ಶ್ರೇಯಾಂಕಗಳು ದೊರೆತ ಮಾತ್ರಕ್ಕೇ ಹೆಚ್ಚು ಬಂಡವಾಳ ಹರಿದುಬರುವುದಿಲ್ಲ. ಬಂಡವಾಳ ಸೋವಿಯಾಗಿ ಸಿಗುವ ಮೂಲಗಳು, ನೈಪುಣ್ಯ ಮಾನವಸಂಪನ್ಮೂಲ, ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಭಾರತ ಸರ್ಕಾರ ಕಾಯ್ದುಕೊಳ್ಳಬೇಕಾಗುವ ನಿರಂತರ ಒತ್ತಡಕ್ಕೆ ಸಿಲುಕಲಿದೆ. ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳು ಸತತವಾಗಿ ಮುಂದುವರೆದು ಭಾರತದ ಆರ್ಥಿಕ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸಲಿವೆ ಎಂಬುದು ಮೂಡೀಸ್‌ನ ನಿರೀಕ್ಷೆ.

ಸಲೀಸಾಗಿ ವ್ಯಾಪಾರ ಮಾಡುವ ದೇಶಗಳ ಪಟ್ಟಿ ತಯಾರಿಕೆಗೆ ಅನುಸರಿಸಲಾಗುವ ಮಾನದಂಡಗಳೆಂದರೆ, ತೆರಿಗೆ ಪಾವತಿ, ದಿವಾಳಿಯ ಇತ್ಯರ್ಥ, ಸಾಲ ಪಡೆಯುವಿಕೆ, ಅಲ್ಪಸಂಖ್ಯಾತ ಬಂಡವಾಳ ಹೂಡಿಕೆದಾರರ ಹಿತ ಕಾಯುವುದು ಹಾಗೂ ಗಡಿಯಾಚೆ ನಡೆಸುವ ವ್ಯಾಪಾರೋದ್ಯಮ.

ಈ ಪೈಕಿ ಕಡೆಯದರ ವಿನಾ ಉಳಿದೆಲ್ಲ ಮಾನದಂಡಗಳಲ್ಲಿ ಭಾರತದ ಶ್ರೇಯಾಂಕ ಗಣನೀಯವಾಗಿ ಸುಧಾರಿಸಿದೆ. ಆದರೆ ಉದ್ಯೋಗಗಳ ಕುಸಿತ, ಅನೌಪಚಾರಿಕ ಆರ್ಥಿಕ ವಲಯಗಳಲ್ಲಿ ಜರುಗಿದ ಗಂಭೀರ ಅಡೆತಡೆಗಳು, ನಿತ್ಯೋಪಯೋಗಿ ವಸ್ತುಗಳು, ತರಕಾರಿಗಳು ಹಾಗೂ ಧಾನ್ಯಗಳ ಮೇಲೆ ಹೆಚ್ಚಿದ ಹಣದುಬ್ಬರದ ಒತ್ತಡಗಳ ನಿವಾರಣೆ ಮೋದಿಯವರಿಂದಲೂ ಕಷ್ಟ. ನಿತ್ಯ ಅನ್ನ ಸಂಪಾದಿಸುವ ಜನಸಾಮಾನ್ಯನ ಸಮಸ್ಯೆಗಳನ್ನು ನಿವಾರಿಸದೆ ಹೋದರೆ ಈ ಶ್ರೇಯಾಂಕಗಳಿಗೆ ಯಾವ ಅರ್ಥವೂ ಇಲ್ಲ.

ನಾಲ್ಕು ಗ್ರೇಡ್‌ಗಳ ಪೈಕಿ ಮೊದಲ ಮೂರರಲ್ಲಿ ಭಾರತ ಇಲ್ಲ. ನಾಲ್ಕನೆಯದು ಕೆಳಮಧ್ಯಮ ಶ್ರೇಯಾಂಕ. ಈ ಶ್ರೇಯಾಂಕದಲ್ಲಿ ಭಾರತವನ್ನು ಅತಿ ಕೆಳಗಿನ Baa-3 ಎಂಬ ಕಸದ ಬುಟ್ಟಿಯಿಂದ ಹೊರ ತೆಗೆದು ಮುಂದಿನ Baa-2 ಹಂತದಲ್ಲಿ ಇರಿಸಲಾಗಿದೆ. ಭಾರತ ಏರಬೇಕಿರುವ ಮುಂದಿನ ಹಂತ Baa-1. ಈ ಹಂತಕ್ಕಿಂತ ಮೇಲಿನದು ಮೇಲ್ಮಧ್ಯಮ ವರ್ಗದ (A1, A2, A3). ಮೇಲ್ಮಧ್ಯಮ ವರ್ಗಕ್ಕಿಂತ ಮೇಲಿನದು ಹೈ ಗ್ರೇಡ್ (Aa1, Aa2, Aa3). ಅತಿ ಎತ್ತರದ ರೇಟಿಂಗ್ Aaa.

ಭಾರತಕ್ಕೆ ಬಡ್ತಿ ನೀಡಲು ಜಿ.ಎಸ್.ಟಿ. ಮತ್ತು ನೋಟು ರದ್ದು ಕ್ರಮಗಳನ್ನು ಮೂಡೀಸ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ದೇಶವೊಂದು ಅಥವಾ ಉದ್ಯಮ ಸಂಸ್ಥೆಯೊಂದು ತಾನು ಮಾಡಿದ ಸಾಲಗಳನ್ನು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ತೀರಿಸುವ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೊಂದಿದೆ ಎಂಬುದನ್ನು ಮೂಡೀಸ್ ಅಳೆಯುತ್ತದೆ. ಈ ದಿಸೆಯಲ್ಲಿ ಭಾರತದ ರೇಟಿಂಗ್ ಅನ್ನು ಸಕಾರಾತ್ಮಕದಿಂದ ಹೊರತಂದು ಸ್ಥಿರ ಎಂಬ ಎತ್ತರಕ್ಕೆ ಇರಿಸಿದೆ.

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಗಳು ತಗ್ಗಿವೆ, ಭಾರತೀಯ ರಿಸರ್ವ್ ಬ್ಯಾಂಕ್ ಶಿಸ್ತಿನ ಸ್ವಾಯತ್ತ ಸಂಸ್ಥೆಯಾಗಿ ಹೊರಹೊಮ್ಮತೊಡಗಿದೆ. ವಿದೇಶೀ ವಿನಿಮಯ ಮೀಸಲು ನಿಧಿಯ ಮೊತ್ತ ಭವಿಷ್ಯದ ಸಂಭವನೀಯ ಆಘಾತಗಳನ್ನು ತಡೆದುಕೊಳ್ಳುವಷ್ಟು ಘನ ಸ್ಥಿತಿ ಮುಟ್ಟಿದೆ.

ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿಸುವ ವ್ಯವಸ್ಥೆ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂಡವಾಳ ಪುನರ್ಧನ ನೀಡಿಕೆ, ಸಾರ್ವಜನಿಕರ ತೆರಿಗೆ ಹಣವನ್ನು ಬ್ಯಾಂಕುಗಳಿಂದ ಲಪಟಾಯಿಸುವ ವಂಚಕ ಉದ್ಯಮಿಗಳಿಗೆ ಕಡಿವಾಣ ತೊಡಿಸಲು ದಿವಾಳಿ ಕಾಯಿದೆ ಕಾನೂನು ಜಾರಿಯಂತಹ ಕ್ರಮಗಳನ್ನು ಮೂಡೀಸ್ ಗಮನಿಸಿದೆ.

ಬಲ್ಗೇರಿಯಾ, ಕೊಲಂಬಿಯಾ, ಇಟಲಿ, ಒಮಾನ್, ಪನಾಮಾ, ಫಿಲಿಪ್ಪೀನ್ಸ್, ಸ್ಪೇನ್, ಉರುಗ್ವೆ ಸಾಲಿನಲ್ಲಿ ಇದೀಗ ಭಾರತ ಸೇರ್ಪಡೆಯಾಗಿದೆ. ಅತಿ ಎತ್ತರದ Aaa ಶ್ರೇಣಿಯಲ್ಲಿರುವ ದೇಶಗಳೆಂದರೆ ಅಮೆರಿಕ, ಸ್ವಿಟ್ಜರ್ಲೆಂಡ್, ಸ್ವೀಡನ್, ಸಿಂಗಪುರ, ನಾರ್ವೆ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಜರ್ಮನಿ, ಡೆನ್ಮಾರ್ಕ್, ಕೆನಡಾ ಹಾಗೂ ಆಸ್ಟ್ರೇಲಿಯಾ.

ಭಾರೀ ಉದ್ಯಮಿಗಳಿಗೆ ನೀಡಿದ ವಾಪಸು ಬಾರದ ಸಾಲಗಳೆಂಬ ಅನುತ್ಪಾದಕ ಆಸ್ತಿಗಳ ಬೆಟ್ಟದಡಿ ಕುಸಿದಿರುವ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ₹ 2.11 ಲಕ್ಷ ಕೋಟಿ ಪುನರ್ಧನ ನೀಡಿದೆ. ಬ್ಯಾಂಕುಗಳ ಆರೋಗ್ಯ ಪುನಃ ಹದಗೆಡದಂತೆ ನೋಡಿಕೊಳ್ಳುವುದು ಸರ್ಕಾರದ ಗುರುತರ ಹೊಣೆಗಾರಿಕೆ. ಇಲ್ಲವಾದರೆ ಮೂಡೀಸ್ ತಾನು ನೀಡಿರುವ ಶ್ರೇಣಿ ಕೆಳಮುಖವಾಗಿ ಚಲಿಸುವ ಅಪಾಯವಿದೆ ಎಂದು ಎಚ್ಚರಿಸಿದೆ. ಜಿಡಿಪಿಯ ಶೇ 68ರಷ್ಟಕ್ಕೆ ಜಿಗಿದಿರುವ ಸರ್ಕಾರಿ ಸಾಲಕ್ಕೆ ಕಡಿವಾಣ ಹಾಕದೆ ಹೋದರೂ ಈಗ ದೊರೆತಿರುವ ಶ್ರೇಣಿ ಕೈ ತಪ್ಪಲಿದೆ.

ಮೂಡಿಯಂತಹುದೇ ಇನ್ನೊಂದು ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿ ‘ಸ್ಟ್ಯಾಂಡರ್ಡ್ ಅಂಡ್ ಪೂರ್‍ಸ್’ 2007ರಿಂದ ಈವರೆಗೆ ಭಾರತದ ಶ್ರೇಯಾಂಕವನ್ನು ‘BBB’ (ಬಂಡವಾಳ ಹೂಡಿಕೆಗೆ ಅತಿ ಕೆಳ ದರ್ಜೆಯ ದೇಶ) ಈವರೆಗೆ ಬದಲಾಯಿಸಿಲ್ಲ.

ಶ್ರೇಯಾಂಕಗಳೇನಾದರೂ ಆಗಲಿ, ಮೋದಿಯವರು ಜನಪ್ರಿಯತೆಯ ಉತ್ತುಂಗದಲ್ಲಿ ವಿರಮಿಸಲಿ. ಆದರೆ ದೈನಂದಿನ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರಕ್ಕೆ ಭಯವೇ ಇಲ್ಲ. ಕೋಟಿಗಟ್ಟಲೆ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ನೀಡಿದ್ದ ಭರವಸೆ ಎಲ್ಲಿ ತಲೆಮರೆಸಿಕೊಂಡಿದೆಯೋ ಯಾರೂ ಅರಿಯರು. ಹೊಸ ಉದ್ಯೋಗಗಳಿರಲಿ, ಇರುವ ಉದ್ಯೋಗಾವಕಾಶಗಳೇ ನೋಟು ರದ್ದು- ಜಿ.ಎಸ್.ಟಿ.ಯ ಬಿರುಗಾಳಿಯಲ್ಲಿ ಲಕ್ಷಾಂತರ ಸಂಖ್ಯೆಗಳಲ್ಲಿ ಕೊಚ್ಚಿಕೊಂಡು ಹೋಗತೊಡಗಿರುವುದು ಹೌಹಾರಬೇಕಾದ ಆತಂಕಕಾರಿ ಬೆಳವಣಿಗೆ.

ಐದು ವರ್ಷಗಳಲ್ಲಿ ಮೂರೂವರೆ ವರ್ಷಗಳ ಆಡಳಿತ ಪೂರ್ಣಗೊಳಿಸಿರುವ ಮೋದಿಯವರ ಮಧುಚಂದ್ರ ತಮ್ಮ ಮತದಾರರೊಂದಿಗೆ ಮುಗಿದಿದ್ದರೂ, ಪ್ರೇಮ ವ್ಯವಹಾರ ಇನ್ನಷ್ಟು ದಟ್ಟವಾಗಿ ಮುಂದುವರೆದಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ ಸಮೀಕ್ಷೆ ಬಣ್ಣಿಸಿದೆ. ಆದರೆ 130 ಕೋಟಿ ಜನಸಂಖ್ಯೆಯ ಪೈಕಿ ಕೇವಲ 2,464 ಮಂದಿ ಭಾರತೀಯರ ಅಭಿಪ್ರಾಯಗಳನ್ನು ಆಧರಿಸಿ ನಡೆದಿರುವ ಸಮೀಕ್ಷೆ ಎಷ್ಟು ಪ್ರಾತಿನಿಧಿಕ ಎಂಬ ಅಂಶದ ಕುರಿತು ಚರ್ಚೆ ನಡೆಯಬೇಕಿದೆ.

ಸಮೀಕ್ಷೆ ನಡೆದಿರುವ ಕಾಲಾವಧಿ ಕೂಡ 2017ರ ಫೆಬ್ರುವರಿ 21 ರಿಂದ ಮಾರ್ಚ್ 10ರ ನಡುವಿನದು. ಏಳು ತಿಂಗಳ ಹಿಂದೆ 2,464 ಮಂದಿಯಿಂದ ಸಂಗ್ರಹಿಸಿದ ಅಭಿಪ್ರಾಯಗಳ ಸಮೀಕ್ಷೆಯನ್ನು ಈಗ ಹೊರಹಾಕಲಾಗಿದೆ. ಚಲಾವಣೆಯಲ್ಲಿದ್ದ ಶೇ 86ರಷ್ಟು ಮೊತ್ತದ ನೋಟುಗಳನ್ನು ರದ್ದು ಮಾಡಿ ದೇಶವನ್ನು ಚಕಿತಗೊಳಿಸಿದ ನರೇಂದ್ರ ಮೋದಿಯವರು ತಮ್ಮ ನಡೆಯನ್ನು ಬಡವರು ಮತ್ತು ಬಲ್ಲಿದರ ನಡುವಣ ಸಮರವೆಂದು ಬಡಜನರನ್ನು ನಂಬಿಸಿದ್ದ ಕಾಲ ಅದು. ನೋಟು ರದ್ದು ಮಾಡಿ ಕೇವಲ ಮೂರು ತಿಂಗಳಷ್ಟೇ ಆಗಿತ್ತು. ಇದೇ ಸಮೀಕ್ಷೆ ಈಗ ನಡೆದರೆ ಫಲಿತಾಂಶಗಳು ಇಷ್ಟು ಏಕಪಕ್ಷೀಯ ಆಗಿರುವುದಿಲ್ಲ.

ಮೋದಿ ನೇತೃತ್ವದ ಸರ್ಕಾರ ಒಳಗಿನಿಂದ ಮತ್ತು ಹೊರಗಿನಿಂದ ಟೀಕೆಯ ದಾಳಿಯನ್ನು ಎದುರಿಸುತ್ತಿರುವ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿಯಂತೆ ಒದಗಿ ಬಂದಿರುವ ಸಮೀಕ್ಷೆಯಿದು. ಆದರೆ ಇಂತಹ ಸಮೀಕ್ಷೆಗಳು ಮತದಾರನನ್ನು ದೊಡ್ಡ ರೀತಿಯಲ್ಲಿ ಪ್ರಭಾವಿಸಿದ ಉದಾಹರಣೆಗಳಿಲ್ಲ. ಚತುರ ರಾಜಕಾರಣಿಗಳ್ಯಾರೂ ಇಂತಹ ಸಮೀಕ್ಷೆಗಳಿಗೆ ಹೆಚ್ಚಿನ ಕಿಮ್ಮತ್ತು ನೀಡುವುದಿಲ್ಲ.

ಮೋದಿಯವರ ಜನಪ್ರಿಯತೆಯ ನಿಜವಾದ ಪರೀಕ್ಷೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ನಡೆಯಲಿದೆ. ಕೋಮು ಧ್ರುವೀಕರಣದ ರಾಜಕಾರಣವನ್ನು ಗುಜರಾತಿನ ನೆಲದಾಳಕ್ಕೆ ಬಿತ್ತಿ, ಅಭಿವೃದ್ಧಿಯ ಹೆಸರಿನ ಗೊಬ್ಬರ ಚೆಲ್ಲಿ ಸಮೃದ್ಧ ಫಸಲನ್ನು ಕಟಾವು ಮಾಡಿದ ಯಶಸ್ವೀ ‘ರಾಜಕೀಯ ಒಕ್ಕಲಿಗ’ ನರೇಂದ್ರ ಮೋದಿ. ಅವರು ಕಟ್ಟಿರುವ ಕಟ್ಟರ್ ಹಿಂದುತ್ವ ಮತ್ತು ವಿಕಾಸದ ಶಿಲ್ಪಕ್ಕೆ ಈಗಲೂ ಚ್ಯುತಿ ಇಲ್ಲ ಎನ್ನುವವರೇ ಹೆಚ್ಚು. ಬದಲಾಗಿರುವ ಗುಜರಾತಿನಲ್ಲಿ ಹುಟ್ಟಿರುವ ದಲಿತ ಕಥನ ಮತ್ತು ಹಿಂದುಳಿದ ವರ್ಗಗಳ ಅತೃಪ್ತಿ ಕಥನಗಳು ಕೂಡ ಮೋದಿಯವರನ್ನು ಕೆಡವಲಾರವು ಎನ್ನಲಾಗಿದೆ.

ಡಿಸೆಂಬರ್ 18ರ ಮತ ಎಣಿಕೆಯಲ್ಲಿ ಹೊರಬೀಳುವ ಫಲಿತಾಂಶಗಳಲ್ಲಿ ಮೋದಿಯವರ ಪಕ್ಷದ ಜಯದ ಅಂತರವನ್ನು ರಾಜಕೀಯ ವಿಶ್ಲೇಷಣಕಾರರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಬಿಜೆಪಿ ಗೆಲುವಿನ ಅಂತರ ದೊಡ್ಡ ಪ್ರಮಾಣದಲ್ಲಿ ಕುಸಿದ ಪಕ್ಷದಲ್ಲಿ ಮೋದಿ ಅವರದು ಕೇವಲ ತಾಂತ್ರಿಕ ಗೆಲುವು ಎನಿಸಿಕೊಳ್ಳಲಿದೆ. ಅವರ ಪ್ರಭಾವಳಿ ಅಷ್ಟರಮಟ್ಟಿಗೆ ಮಂಕಾದಂತೆಯೇ ಸರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry