ಪ್ರಖರ ಚಿತ್ರಕ್ಕಾಗಿ ಎಲ್‌ಇಡಿ

7

ಪ್ರಖರ ಚಿತ್ರಕ್ಕಾಗಿ ಎಲ್‌ಇಡಿ

ಯು.ಬಿ. ಪವನಜ
Published:
Updated:
ಪ್ರಖರ ಚಿತ್ರಕ್ಕಾಗಿ ಎಲ್‌ಇಡಿ

ಆಧುನಿಕ ಟಿವಿಗಳಲ್ಲಿ ಪ್ರಮುಖವಾದವು ಪ್ಲಾಸ್ಮ, ಎಲ್‌ಸಿಡಿ (Liquid Crystal Display)  ಮತ್ತು ಎಲ್‌ಇಡಿ(Liquid Crystal Display)  ಟಿ.ವಿ.ಗಳು. ಅವುಗಳಲ್ಲಿ ಪ್ಲಾಸ್ಮ ಮತ್ತು ಎಲ್‌ಸಿಡಿ ಟಿ.ವಿ.ಗಳ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ವಿವರಿಸಲಾಗಿತ್ತು. ಈಗ ಎಲ್‌ಇಡಿ ಟಿ.ವಿ.ಗಳ ಬಗ್ಗೆ ತಿಳಿದುಕೊಳ್ಳೋಣ.ಮಾರುಕಟ್ಟೆಯಲ್ಲಿ ದೊರೆಯುವ ಹಲವು ವಸ್ತುಗಳ ಹೆಸರುಗಳು ಕೆಲವೊಮ್ಮೆ ದಾರಿತಪ್ಪಿಸುವಂತಿವೆ. ಉದಾಹರಣೆಗೆ ಚಿನ್ನದ ಬಗ್ಗೆ ಹೇಳುವಾಗ ಕೆಡಿಎಂ ಚಿನ್ನ ಎನ್ನುತ್ತಾರೆ. ಇಲ್ಲಿ ಕೆಡಿಎಂ ಎನ್ನುವುದು ಕ್ಯಾಡ್ಮಿಯಂ ಬದಲಿಗೆ ಬಳಕೆಯಾಗುತ್ತಿದೆ. ಅಂದರೆ ಚಿನ್ನದ ಒಡವೆಯ ಜೋಡಣೆಗಳಲ್ಲಿ ಕ್ಯಾಡ್ಮಿಯಂ ಬಳಸಲಾಗಿದೆ (100% ಚಿನ್ನದಲ್ಲಿ ಒಡವೆ ಮಾಡಲಾಗುವುದಿಲ್ಲ) ಎಂಬ ಅರ್ಥ.

ನಿಜ ಸಂಗತಿಯೇನೆಂದರೆ ಈಗ ಚಿನ್ನದ ಒಡವೆಯಲ್ಲಿ ಕ್ಯಾಡ್ಮಿಯಂ ಬಳಸಲಾಗುತ್ತಿಲ್ಲ. ಅದರ ಬದಲಿಗೆ ಸತುವನ್ನು ಬಳಸಲಾಗುತ್ತಿದೆ. ಆದರೆ 916 ಓಈ (91.6% ಚಿನ್ನ, ಅಂದರೆ 22 ಕಾರಟ್) ಎಂಬ ಬಳಕೆ ಉಳಿದುಕೊಂಡುಬಿಟ್ಟಿದೆ.ಈ ಉದಾಹರಣೆ ಇಲ್ಲಿ ಯಾಕೆಂದರೆ ಎಲ್‌ಇಡಿ ಟಿ.ವಿ. ನಿಜವಾಗಿ ನೋಡಿದರೆ ಕೇವಲ ಎಲ್‌ಇಡಿ ಟಿ.ವಿ.ಯಲ್ಲ. ಅದು ಎಲ್‌ಸಿಡಿ ಟಿ.ವಿ.ಯೇ. ಎಲ್‌ಸಿಡಿಗಳಿಗೆ ಸ್ವಂತ ಬೆಳಕಿಲ್ಲ. ಎಲ್‌ಸಿಡಿ ಟಿ.ವಿ.ಯಲ್ಲಿ ಈ ಬೆಳಕು ಫ್ಲೋರೆಸೆಂಟ್ ದೀಪಗಳಿಂದ ಬರುತ್ತದೆ. ಫ್ಲೋರೆಸೆಂಟ್ ದೀಪದ ಬದಲಿಗೆ ಎಲ್‌ಇಡಿ ಬಳಸಿದರೆ ಅದು ಎಲ್‌ಇಡಿ ಟಿ.ವಿ. ಎಂದೆನಿಸಿಕೊಳ್ಳುತ್ತದೆ.ನಿಖರವಾಗಿ ಹೇಳಬೇಕಾದರೆ ಎಲ್‌ಸಿಡಿ/ಎಲ್‌ಇಡಿ ಟಿ.ವಿ. ಎನ್ನಬೇಕು. ಆದುದರಿಂದ ಈ ಲೇಖನ ಓದುವ ಮೊದಲು ಕಳೆದವಾರ ಎಲ್‌ಸಿಡಿ ಟಿ.ವಿ. ಬಗ್ಗೆ ಬರೆದುದನ್ನು ಮತ್ತೊಮ್ಮೆ ಓದಿಕೊಳ್ಳಬೇಕಾಗಿ ವಿನಂತಿ. ಈ ನಮೂನೆಯ ಟಿ.ವಿ.ಗಳ ಗುಣವೈಶಿಷ್ಟ್ಯಗಳು ಬಹುಮಟ್ಟಿಗೆ ಎಲ್‌ಸಿಡಿ ಟಿ.ವಿ.ಗಳ ಗುಣವೈಶಿಷ್ಟ್ಯಗಳನ್ನೇ ಒಳಗೊಂಡಿರುತ್ತವೆ. ಆದರೆ ಎಲ್‌ಸಿಡಿ ಟಿವಿ..ಗಳ ಪ್ರಮುಖ ಕೊರತೆಗಳನ್ನು ನಿವಾರಿಸಿಕೊಂಡಿರುತ್ತವೆ.ಎಲ್‌ಸಿಡಿ/ಎಲ್‌ಇಡಿ ಟಿ.ವಿ.ಗಳಲ್ಲಿ ಪ್ರಮುಖವಾಗಿ ಎರಡು ವಿಧ. ಎಲ್‌ಸಿಡಿ ಟಿ.ವಿ.ಗಳಲ್ಲಿ ಪ್ರತಿ ದ್ರವಸ್ಫಟಿಕದಿಂದಾದ ಚಿತ್ರಘಟಕವೂ ವಿದ್ಯುತ್ತಿನ ಒತ್ತಡದ ಬದಲಾವಣೆಯಿಂದ ತನ್ನ ಮೂಲಕ ಹಾದು ಹೋಗುವ ಬೆಳಕನ್ನು ಸೂಕ್ತ ಬದಲಾವಣೆ ಮಾಡಿ ಚಿತ್ರ ಮೂಡಿಸುತ್ತದೆ. ಎಲ್‌ಸಿಡಿ/ಎಲ್‌ಇಡಿ ಟಿ.ವಿ.ಗಳಲ್ಲಿ ಈ ಬೆಳಕಿನ ಆಕರ ಎರಡು ವಿಧ. ಮೊದಲನೆಯ ವಿಧಾನದಲ್ಲಿ ಎಲ್‌ಸಿಡಿ ಚಿತ್ರಘಟಕದ ಹಿಂದೆ ಎಲ್‌ಇಡಿ ಇದ್ದು ಅದು ಬೆಳಕನ್ನು ನೀಡುತ್ತದೆ. ಇದನ್ನು (Liquid Crystal Display)  ಎಂದು ಕರೆಯುತ್ತಾರೆ.

ಇನ್ನೊಂದು ವಿಧಾನದಲ್ಲಿ ಎಲ್‌ಇಡಿಗಳು ಪರದೆಯ ನಾಲ್ಕು ಬದಿಗಳಲ್ಲಿರುತ್ತವೆ. ಅದನ್ನು (Liquid Crystal Display)ಎನ್ನುತ್ತಾರೆ. ಬದಿಗಳಲ್ಲಿ ಎಲ್‌ಇಡಿ ಇದ್ದಲ್ಲಿ ಅವುಗಳಿಂದ ಹೊರಹೊಮ್ಮುವ ಬೆಳಕನ್ನು ಸಮಾನವಾಗಿ ಪಸರಿಸಲು ಸೂಕ್ತ ವ್ಯವಸ್ಥೆ ಇರುತ್ತದೆ. ಇಂತಹುದೇ ವ್ಯವಸ್ಥೆ ಎಲ್‌ಸಿಡಿ ಟಿ.ವಿ.ಗಳಲ್ಲಿ ಫ್ಲೋರೆಸೆಂಟ್ ದೀಪಗಳು ನೀಡುವ ಬೆಳಕನ್ನು ಪಸರಿಸಲು ಇರುತ್ತದೆ. ಬದಿಯಲ್ಲಿ ಎಲ್‌ಇಡಿ ಇರುವ ಟಿ.ವಿ.ಗಳು ಹಿಂದೆ ಎಲ್‌ಇಡಿ ಇರುವ ಟಿ.ವಿ.ಗಳಿಗಿಂತ ತೆಳುವಾಗಿರುತ್ತವೆ.ಎಲ್‌ಇಡಿಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಾ. ಯಾವುದೇ ವಿದ್ಯುತ್ ಅಥವಾ ವಿದ್ಯುನ್ಮಾನ ಉಪಕರಣ ತೆಗೆದುಕೊಂಡರೂ ಕನಿಷ್ಠ ಒಂದು ಎಲ್‌ಇಡಿ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇವು ಕೆಂಪು, ನೀಲಿ, ಹಸಿರು ಇತ್ಯಾದಿ ಬಣ್ಣಗಳಲ್ಲಿರುತ್ತವೆ. ಇತ್ತೀಚೆಗೆ ಈ ತಂತ್ರಜ್ಞಾನದಲ್ಲಿ ತುಂಬ ಸುಧಾರಣೆಯಾಗಿದೆ. ಶುದ್ಧ ಬಿಳಿ ಬಣ್ಣದ ಎಲ್‌ಇಡಿಗಳು ಈಗ ದೊರೆಯುತ್ತವೆ.

ಅಷ್ಟು ಮಾತ್ರವಲ್ಲ, ಅವು ತುಂಬ ಪ್ರಕಾಶಮಾನವಾಗಿಯೂ ಇರುತ್ತವೆ. ಮನೆಗಳಲ್ಲಿ ದೀಪಗಳಾಗಿ ಎಲ್‌ಇಡಿಗಳ ಬಳಕೆ ಪ್ರಾರಂಭವಾಗಿದೆ. ಎಲ್‌ಸಿಡಿ/ಎಲ್‌ಇಡಿ ಟಿ.ವಿ.ಗಳಲ್ಲಿ ಬಳಸುವ ಎಲ್‌ಇಡಿಗಳು ತುಂಬ ಚಿಕ್ಕದಾಗಿದ್ದು ಅತಿ ಪ್ರಕಾಶಮಾನವಾಗಿರುತ್ತವೆ. ಆದುದರಿಂದಲೇ ಈ ಟಿ.ವಿ.ಗಳು ಎಲ್‌ಸಿಡಿ ಟಿ.ವಿ.ಗಳಿಗಿಂತ ಹೆಚ್ಚು ಪ್ರಖರವಾಗಿ ಚಿತ್ರವನ್ನು ತೋರಿಸುತ್ತವೆ.ಎಲ್‌ಸಿಡಿ ಟಿ.ವಿ.ಗಳ ಬಹುತೇಕ ಕೊರತೆಗಳನ್ನು ಎಲ್‌ಸಿಡಿ/ಎಲ್‌ಇಡಿ ಟಿ.ವಿ.ಗಳು ಪರಿಹರಿಸುತ್ತವೆ. ತುಂಬ ಬೆಳಕಿದ್ದ ಸ್ಥಳಗಳಲ್ಲೂ ಟಿ.ವಿ. ನೋಡಬಹುದು. ವ್ಯೆವಿಂಗ್ ಆ್ಯಂಗಲ್ ಚೆನ್ನಾಗಿರುತ್ತದೆ. ಅಂದರೆ ಎಲ್ಲ ಕೋನಗಳಿಂದಲೂ ವೀಕ್ಷಿಸಬಹುದು. ಇವು ಪ್ಲಾಸ್ಮ ಟಿ.ವಿ.ಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ.

ಉಳಿದಂತೆ ಘೋಸ್ಟ್ ಎಫೆಕ್ಟ್, ಫ್ಲಿಕರ್ ಇತ್ಯಾದಿಗಳು ಎಲ್‌ಸಿಡಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ವ್ಯೆವಿಂಗ್ ಆ್ಯಂಗಲ್ ಹೆಚ್ಚಿಸಲು ಸಾಧ್ಯವಿದೆ. ಅದಕ್ಕಾಗಿ ಸ್ವಲ್ಪ ದಪ್ಪದ ಗಾಜಿನ ಪರದೆ ಬಳಸಬೇಕು. ಆಗ ಗಾಜಿನಿಂದ ಉಂಟಾಗುವ ಪ್ರತಿಫಲನ ಜಾಸ್ತಿ ಆಗುತ್ತದೆ. ಅಂದರೆ ಇವೆರಡನ್ನು ಎಚ್ಚರಿಕೆಯಿಂದ ಸರಿತೂಗಿಸಬೇಕಾಗುತ್ತದೆ.ಓಎಲ್‌ಇಡಿ (OLED - Orgalic Light Emitting Diode) ಟಿ.ವಿ.ಗಳ ಘೋಷಣೆ ಈಗಷ್ಟೆ ಆಗಿದೆ. ಈ ರೀತಿಯ ಪರದೆಗಳನ್ನು ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಈಗಾಗಲೇ ಬಳಸುತ್ತಿದ್ದೀರಾ. ಇವು ಇನ್ನೂ ನಮ್ಮ ಮಾರುಕಟ್ಟೆಗೆ ಬಂದಿಲ್ಲವಾದುದರಿಂದ ಇವುಗಳನ್ನು ಸದ್ಯಕ್ಕೆ ಗಣನೆಗೆ ತೆಗದುಕೊಳ್ಳಬೇಕಾಗಿಲ್ಲ.ಎಲ್‌ಸಿಡಿ/ಎಲ್‌ಇಡಿ ಟಿ.ವಿ. ಕೊಳ್ಳುವುದು ಹೇಗೆ?

ಪ್ಲಾಸ್ಮ ಮತ್ತು ಎಲ್‌ಸಿಡಿ ಟಿ.ವಿ.ಗಳನ್ನು ಕೊಳ್ಳಲು ನೀಡಿದ ಸಲಹೆಗಳು ಇಲ್ಲೂ ಅನ್ವಯವಾಗುತ್ತವೆ. ಶುದ್ಧ ಕಪ್ಪು ಬಣ್ಣ ಇದೆಯೇ, ವ್ಯೆವಿಂಗ್ ಆ್ಯಂಗಲ್ ಚೆನ್ನಾಗಿದೆಯೇ, ಎಷ್ಟು ಪ್ರಖರವಾಗಿದೆ, ಎಷ್ಟು ವಿದ್ಯುತ್ ಬಳಸುತ್ತದೆ, ಹೈಡೆಫಿನಿಶನ್ ಇದೆಯೇ, ಎಲ್ಲ ನಮೂನೆಯೆ ವಿಡಿಯೋ ಫೈಲ್‌ಗಳನ್ನು ಪ್ಲೇ ಮಾಡುತ್ತದೆಯೇ, ಯುಎಸ್‌ಬಿ ಕಿಂಡಿ ಇದೆಯೇ, ಇತ್ಯಾದಿ ಮಾನದಂಡಗಳನ್ನು ಪರಿಶೀಲಿಸಬೇಕು.ಗ್ಯಾಜೆಟ್ ಸಲಹೆ

ನವೀನ್‌ಕುಮಾರ್ ಅವರ ಪ್ರಶ್ನೆ:
ಯಾವ ಜಾಲತಾಣದಲ್ಲಿ ಗಣಕದಲ್ಲಿ ಆಡಬಹುದಾದ ಆ್ಯಂಗ್ರಿ ಬರ್ಡ್ಸ್ ಆಟ ಉಚಿತವಾಗಿ ಸಿಗುತ್ತದೆ?

ಉ: ನೀವು chrome.angrybirds.com ಜಾಲತಾಣಕ್ಕೆ ಭೇಟಿ ನೀಡಿ ಬ್ರೌಸರ್ ಮೂಲಕ ಆಡಬಹುದು. ಇದು ಗೂಗ್ಲ್ ಕ್ರೋಮ್ ಬ್ರೌಸರ್‌ನಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry