ಪ್ರತಿಬಿಂಬ

7

ಪ್ರತಿಬಿಂಬ

ಗುರುರಾಜ ಕರ್ಜಗಿ
Published:
Updated:

ನಾಲ್ವರು ತರುಣರಿಗೆ ಮಿಲಿಟರಿ ತರಬೇತಿ ಮುಗಿದಿತ್ತು. ಅವರನ್ನು ಕಾಶ್ಮೀರದ ಒಂದು ಪ್ರದೇಶಕ್ಕೆ ನಿಯಮಿಸಿ ಆದೇಶ ನೀಡಲಾಗಿತ್ತು. ಅವರಿಗೆಲ್ಲ ಸಂಭ್ರಮ. ಹೊಸದಾಗಿ ಅಧಿಕಾರಿಯಾದ ಬಗ್ಗೆ, ತರಬೇತಿಯನ್ನೂ ಮುಗಿಸಿ ಹೊಸ ಯುನಿಫಾರಂ ಧರಿಸಿದ ಸಾಧನೆಯ ಬಗ್ಗೆ ಅವರಿಗೆ ಅಭಿಮಾನ, ಸಂತೋಷ ಮತ್ತು ಸಣ್ಣ ಗರ್ವ.ತಮಗೆ ನಿಗದಿಯಾದ ವಸತಿ ನಿಲಯಕ್ಕೆ ನಾಲ್ವರೂ ಹೋದರು. ತುಂಬ ಚೆನ್ನಾಗಿದ್ದ ಪುಟ್ಟ ವಸತಿಗೃಹ. ಕೇವಲ ಇವರಿಗೆಂದೇ ಇದ್ದದ್ದು. ಇವರನ್ನು ನೋಡಿಕೊಳ್ಳಲು, ಊಟದ ವ್ಯವಸ್ಥೆ ಮಾಡಲು ಅಲ್ಲೊಬ್ಬ ಹುಡುಗನಿದ್ದ. ಅವನಿಗೆ ಇಪ್ಪತ್ತು ವರ್ಷ ವಯಸ್ಸಾಗಿದ್ದರೂ ಮುಖದ ಮೇಲಿನ ಮಗುತನ ಮಾಸಿರಲಿಲ್ಲ. ಪುಟ್ಟ ಹುಡುಗನಂತೆಯೇ ಮುಗ್ಧನಾಗಿ ಕಾಣುತ್ತಿದ್ದ. ಈ ನಾಲ್ವರು ಅಧಿಕಾರಿಗಳಿಗೆ ಅವನ ಮುಗ್ಧತೆಯನ್ನು ನೋಡಿ ಸ್ವಲ್ಪ ಕೀಟಲೆ ಮಾಡಬೇಕು ಎನ್ನಿಸಿತು. ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಯೋಜನೆ ಹಾಕಿದರು.ಕಾಶ್ಮೀರದಲ್ಲಿ ಚಳಿ ಕೊರೆಯುತ್ತಿತ್ತು. ಬೆಳಿಗ್ಗೆ ಎದ್ದು ಹೊರಗೆ ಬರುವುದೇ ಕಷ್ಟ. ಬರಿಗಾಲಿನಲ್ಲಿ ನೆಲಕ್ಕೆ ಕಾಲಿಟ್ಟರೆ ಕಾಲು ಮರಗಟ್ಟಿಬಿಡುತ್ತಿದ್ದವು. ರಾತ್ರಿ ಆ ಹುಡುಗ ಮಲಗಿಕೊಂಡ ಮೇಲೆ ತರುಣ ಅಧಿಕಾರಿಗಳಲ್ಲಿ ಒಬ್ಬ ನಿಧಾನವಾಗಿ ಹೋಗಿ ಆ ಹುಡುಗ ಕೆಳಗೆ ಬಿಚ್ಚಿದ್ದ ಅವನ ಚಪ್ಪಲಿಗಳನ್ನು ಸೇರಿಸಿ ನೆಲಕ್ಕೆ ಎರಡೆರಡು ಮೊಳೆ ಹೊಡೆದುಬಿಟ್ಟು ಬಂದು ಮಲಗಿಕೊಂಡ. ಬೆಳಿಗ್ಗೆ ಸುಮಾರು ಆರು ಗಂಟೆಗೆ ಹುಡುಗನ ಕೋಣೆಯಿಂದ ಧಡ್ ಎಂದು ಸದ್ದಾಯಿತು.ನಾಲ್ವರೂ ಮುಸುಕಿನಲ್ಲೇ ನಕ್ಕರು. ಆ ಹುಡುಗ ಬೆಳಿಗ್ಗೆ ಎದ್ದು ಚಪ್ಪಲಿ ಹಾಕಿಕೊಂಡು ಹೊರಡುವ ಅವಸರದಲ್ಲಿ ನೆಲಕ್ಕೆ ಸಿಕ್ಕಿಹಾಕಿಕೊಂಡ ಚಪ್ಪಲಿಗಳಿಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಸಂತೋಷಪಟ್ಟರು.ಆದರೆ ಮುಂದೆ ಹತ್ತು ನಿಮಿಷಕ್ಕೆ ಇವರ ಕೋಣೆ ಬಾಗಿಲು ತಟ್ಟಿದಂತಾಯಿತು. ಬಾಗಿಲು ತೆರೆದರೆ ಆ ಹುಡುಗ ನಗುನಗುತ್ತಾ  `ಸಾರ್ ನಿಮ್ಮ ಬಿಸಿ ಕಾಫಿ ಸಿದ್ಧವಾಗಿದೆ~ ಎಂದ. ಇವರು ಅವನ ಮುಖ ನೋಡಿದರೆ ಬೇಜಾರಿನ ಯಾವ ಲಕ್ಷಣವೂ ಇರಲಿಲ್ಲ  ಮಧ್ಯಾಹ್ನದ ಊಟದ ಹೊತ್ತಿಗೆ ಈ ಅಧಿಕಾರಿಗಳಿಗೆ ಸಣ್ಣದಾಗಿ ಹೊಟ್ಟೆನೋವು ಪ್ರಾರಂಭವಾಗಿತ್ತು. ಭೇದಿಯೂ ಶುರುವಾಯಿತು. ಅವರಿಗೆ ಬಹುಶಃ ಈ ಆಹಾರ ಹೊಂದಿಕೊಳ್ಳಲಿಲ್ಲ ಎಂದುಕೊಂಡರು.ಅದಲ್ಲದೇ ಆ ವಿಪರೀತ ಚಳಿಯಲ್ಲಿ ಊಟ ಪಚನವಾಗಿರಲಿಕ್ಕಿಲ್ಲ ಎನ್ನಿಸಿತು.

ಮತ್ತೆ ಅಂದು ರಾತ್ರಿ ಹುಡುಗ ಮಲಗಿದ ಮೇಲೆ ಅವನ ಕೋಣೆಗೆ ಹೋದರು. ಆತ ಬೆಚ್ಚಗೆ ಹೊದ್ದುಕೊಂಡು ಮಗ್ಗುಲಾಗಿ ಮಲಗಿದ್ದ. ಇವರು ಅವನ ಹಾಸಿಗೆಯ ಮೇಲೆ ಮಂಜುಗಡ್ಡೆಗಳನ್ನಿಟ್ಟು ಉಳಿದ ಜಾಗದ ಮೇಲೆ ಮರಳನ್ನು ಹರಡಿಬಿಟ್ಟರು. ಮತ್ತೆ ಮರುದಿನ ಬೆಳಿಗ್ಗೆ ಸರಿಯಾದ ಸಮಯಕ್ಕೆ ಹುಡುಗ ಇವರ ಕೋಣೆಯ ಬಾಗಿಲು ತಟ್ಟಿ,  `ಸರ್ ನಿಮ್ಮ ಬಿಸಿ ಬಿಸಿ ಕಾಫಿ ಸಿದ್ಧವಾಗಿದೆ~ ಎಂದ. ಅವನ ಮುಖದಲ್ಲಿ ಯಾವ ಆತಂಕವಾಗಲಿ, ನಿದ್ರೆಗೆಟ್ಟ ಲಕ್ಷಣವಾಗಲೀ, ಕೋಪವಾಗಲೀ ಕಾಣಲಿಲ್ಲ. ಈ ತರುಣರಿಗೆ ಬೇಜಾರಾಯಿತು. `ಪಾಪ!ಒಳ್ಳೆಯ ಹುಡುಗ. ಅವನಿಗೆ ಸುಮ್ಮನೇ ತೊಂದರೆ ಕೊಟ್ಟಂತಾಯಿತು. ಇನ್ನು ಅವನಿಗೆ ಯಾವ ತೊಂದರೆಯನ್ನು ಕೊಡುವುದು ಬೇಡ~ ಎಂದು ತೀರ್ಮಾನಿಸಿದರು.ಆದರೆ ತರುಣರ ಆರೋಗ್ಯ ಮಾತ್ರ ಹದಗೆಟ್ಟಿತು. ಭೇದಿ ವಿಪರೀತವಾಯಿತು. ನಿಂತುಕೊಳ್ಳಲೂ ಆಗದಷ್ಟು ನಿಶ್ಯಕ್ತಿ ಉಂಟಾಯಿತು. ವೈದ್ಯರು ಬಂದು ನೋಡಿ ಔಷಧಿ ಕೊಟ್ಟು ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದರು.ರಾತ್ರಿ ಈ ತರುಣ ಅಧಿಕಾರಿಗಳು ಆ ಹುಡುಗನನ್ನು ತಮ್ಮ ಕೋಣೆಗೆ ಕರೆದು, ತಾವು ಮಾಡಿದ ತುಂಟಾಟಕ್ಕೆ ಕ್ಷಮೆ ಕೇಳಿ. `ಇನ್ನೊಮ್ಮೆ ಹೀಗೆ ಆಗುವುದಿಲ್ಲ~ ಎಂದು ಭರವಸೆ ನೀಡಿದರು. ಆಗ ಹುಡುಗ ಹೇಳಿದ, `ಸರಿ ಸರ್, ಹಾಗೆಯೇ ಅಗಲಿ. ನೀವು ನನಗೆ ಯಾವ ತೊಂದರೆಯನ್ನೂ ಕೊಡದಿದ್ದರೆ ನಾನೂ ನಿಮ್ಮ ಕಾಫಿಯಲ್ಲಿ ಭೇದಿಯ ಮಾತ್ರೆಗಳನ್ನು ಹಾಕುವುದಿಲ್ಲ~ ಎಂದ. ತರುಣ ಅಧಿಕಾರಿಗಳ ಕಣ್ಣುಗಳು ಗರ‌್ರನೇ ಮೇಲಕ್ಕೇರಿದವು.ಪ್ರಪಂಚದಲ್ಲಿ ನಮ್ಮ ಕ್ರಿಯೆಗಳಂತೆ ಪ್ರತಿಕ್ರಿಯೆ ದೊರೆಯುತ್ತವೆ. ನಾವು ವಿಶ್ವಾಸ ತೋರಿದರೆ ಪ್ರತಿಯಾಗಿ ವಿಶ್ವಾಸ ದೊರೆಯುತ್ತದೆ. ನಾವು ಕುಟಿಲತನ ತೋರಿದರೆ ಅದೆಂದೋ ನಮಗೆ ಬಲವಾದ ಏಟು ಕೊಡುತ್ತದೆ. ಜಗತ್ತು ಒಂದು ಕನ್ನಡಿ. ನಮ್ಮ ಮುಖದಂತೆ ಪ್ರತಿಬಿಂಬ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry