ಪ್ರತ್ಯೇಕತೆಯ ಕತ್ತಿ ಬೀಸುವ ಮುನ್ನ ಯೋಚಿಸಿ

7

ಪ್ರತ್ಯೇಕತೆಯ ಕತ್ತಿ ಬೀಸುವ ಮುನ್ನ ಯೋಚಿಸಿ

ದಿನೇಶ್ ಅಮೀನ್ ಮಟ್ಟು
Published:
Updated:

ಕೃಷಿ ಸಚಿವ ಉಮೇಶ್ ಕತ್ತಿಯವರ ಪ್ರತ್ಯೇಕ ರಾಜ್ಯದ ಕೂಗು ಸಮಗ್ರ ಉತ್ತರಕರ್ನಾಟಕದ ಜನರ ಅಭಿಪ್ರಾಯ ಖಂಡಿತ ಅಲ್ಲವಾದ ಕಾರಣ ಅದನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ. ಇಂತಹ ಬೇಜವಾಬ್ದಾರಿ ಬುಡಬುಡಿಕೆಗಳಿಗೆ ಸಮೀಪದಲ್ಲಿರುವ ಕಸದ ಬುಟ್ಟಿಯೇ ಸರಿಯಾದ ಜಾಗ.ವೃತ್ತಿಯಲ್ಲಿ ಉದ್ಯಮಿ-ವ್ಯಾಪಾರಿಯಾಗಿದ್ದುಕೊಂಡು  ತಾವು ಕಟ್ಟಿಕೊಂಡಿರುವ ಸಾಮ್ರಾಜ್ಯದ ರಕ್ಷಣೆಗಾಗಿ ರಾಜಕೀಯವನ್ನು ಹವ್ಯಾಸವಾಗಿ ಸ್ವೀಕರಿಸಿರುವವರ ಸಂಖ್ಯೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಹೆಚ್ಚಾಗುತ್ತಿದೆ. (ಕನ್ನಡಿಗರಾದ ವಿಜಯ ಮಲ್ಯ ಇನ್ನೊಂದು ಉದಾಹರಣೆ).

 

ಇಂತಹ ಹವ್ಯಾಸಿ ರಾಜಕಾರಣಿಗಳಲ್ಲಿ ರಾಜ್ಯಹಿತದ ದೂರದೃಷ್ಟಿ, ಸಾಮಾಜಿಕ ಜವಾಬ್ದಾರಿ ಇಲ್ಲವೇ ನಾಡು-ನುಡಿಯ ಬಗ್ಗೆ ಕಾಳಜಿಯನ್ನು ಕಾಣುವುದು ಸಾಧ್ಯ ಇಲ್ಲ. ಕತ್ತಿಯವರ ಹಿನ್ನೆಲೆ ಮತ್ತು  ನಡವಳಿಕೆಯನ್ನು ನೋಡಿದರೆ ಅವರೂ ಇಂತಹವರ ಸಾಲಿಗೆ ಸೇರಿರುವಂತೆ ಕಾಣುತ್ತಿದೆ. ನಾಲಿಗೆ ಸಡಿಲಬಿಟ್ಟು ಅವರು ಆಡಿರುವ ಮಾತುಗಳಲ್ಲಿ ಬೇಜವಾಬ್ದಾರಿತನ ಮತ್ತು ಅಜ್ಞಾನ ಮಾತ್ರ ಅಲ್ಲ ದುಷ್ಟ ಯೋಜನೆಯೂ ಇದ್ದಂತಿದೆ.ಪ್ರತ್ಯೇಕ ರಾಜ್ಯದ ಕೂಗು ಹಾಕಿದವರಲ್ಲಿ ಕತ್ತಿಯವರು ರಾಜ್ಯದಲ್ಲಿಯಾಗಲಿ, ದೇಶದಲ್ಲಿಯಾಗಲಿ  ಮೊದಲಿಗರಲ್ಲ. ಕೊನೆಯವರು ಆಗುವುದೂ ಇಲ್ಲ.  ದೇಶದ ಮೊದಲ ರಾಜ್ಯ ಪುನರ್‌ವಿಂಗಡಣಾ ಸಮಿತಿ ಭಾಷಾವಾರು ರಾಜ್ಯಗಳ ರಚನೆ ಮಾಡಿದೆ ಎಂದು ಸಾಮಾನ್ಯವಾಗಿ ಹೇಳುವುದಿದ್ದರೂ ಅದಕ್ಕೆ ಭಾಷೆಯೊಂದೇ ಆಧಾರವಾಗಿರಲಿಲ್ಲ ಎನ್ನುವುದು ವಾಸ್ತವ.ಹಾಗಾಗಿದ್ದರೆ ಅಲ್ಪಸ್ವಲ್ಪ ಬದಲಾವಣೆಯೊಡನೆ ಹಿಂದಿ ಭಾಷೆಯನ್ನು ಆಡುವ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳು ಒಂದೇ ರಾಜ್ಯವಾಗಬೇಕಿತ್ತು. ಮೊದಲು ಸ್ಥಾಪನೆಗೊಂಡ ಹದಿನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ, ಆಂಧ್ರಪ್ರದೇಶ,ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಮಾತ್ರ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳು. ಉಳಿದ ರಾಜ್ಯಗಳ ರಚನೆಗೆ ಭಾಷೆಯ ಜತೆಗೆ ಬೇರೆ ಕಾರಣಗಳೂ ಇದ್ದವು.

 

ಇದರಿಂದಾಗಿಯೇ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳಲ್ಲಿಯೂ ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವುದು. ಭಾಷಾಭಿಮಾನದ ಭಾವುಕತೆ ಇಳಿಯುತ್ತಿದ್ದಂತೆಯೇ ಎದುರಾದ ಹಿಂದುಳಿಯುವಿಕೆ ಮತ್ತು ಪ್ರಾದೇಶಿಕ ಅಸಮಾನತೆಯ ವಾಸ್ತವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಮುಖ್ಯ ಪ್ರೇರಣೆ.ಈ ಹಿನ್ನೆಲೆಯಿಂದಲೇ ಕತ್ತಿಯವರ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. ರಾಜ್ಯದಲ್ಲಿ ಈವರೆಗೆ ಸರ್ಕಾರದಿಂದ ಮತ್ತು ಸ್ವತಂತ್ರವಾಗಿ ನಡೆದಿರುವ ಬಹುತೇಕ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳು ಹಿಂದುಳಿದಿದೆ ಎಂದು ಗುರುತಿಸಿರುವುದು ಉತ್ತರ ಕರ್ನಾಟಕದ ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ,ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು.ಮಾನವ ಅಭಿವೃದ್ಧಿಯ ಸೂಚಿಗಳಾದ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಲಿಂಗಸಮಾನತೆ ಮತ್ತು ಪರಿಶಿಷ್ಟಜಾತಿ-ಪಂಗಡಗಳ ಸ್ಥಿತಿಗತಿಗಳ ನೆಲೆಯಿಂದ ನೋಡಿದರೂ ಈ ಏಳು ಜಿಲ್ಲೆಗಳು ಹಿಂದುಳಿದಿರುವುದು ಸ್ಪಷ್ಟ. ರಾಜ್ಯದ ಜನಸಂಖ್ಯೆಯಲ್ಲಿ ಈ ಏಳು ಜಿಲ್ಲೆಗಳ ಪಾಲು ಶೇಕಡಾ ಇಪ್ಪತ್ತೈದು, ಆದರೆ ರಾಜ್ಯದ ವರಮಾನದಲ್ಲಿ ಪಡೆದಿರುವ ಪಾಲು ಶೇಕಡಾ ಹದಿನೇಳು.ಹಿಂದುಳಿದಿರುವ ಈ ಜಿಲ್ಲೆಗಳ ಜತೆ ಅವಿಭಜಿತ ಧಾರವಾಡವನ್ನಾಗಲಿ ಇಲ್ಲವೇ ಬೆಳಗಾವಿ ಜಿಲ್ಲೆಯನ್ನಾಗಲಿ ಹೋಲಿಸುವುದು ಸಾಧ್ಯ ಇಲ್ಲ. ಘಟಪ್ರಭಾ ಮತ್ತು ಮಲಪ್ರಭಾ ಮಾತ್ರವಲ್ಲ ಕೃಷ್ಣಾ ನದಿ ನೀರನ್ನು ಪಡೆದಿರುವ ಬೆಳಗಾವಿ ಜಿಲ್ಲೆಯ ರೈತರು ಉತ್ತರಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾಕಷ್ಟು ಸ್ಥಿತಿವಂತರೇ ಆಗಿದ್ದಾರೆ. ಈ ಜಿಲ್ಲೆಯ ಬೆಳಗಾವಿ, ರಾಯಭಾಗ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ಮತ್ತು ಅಥಣಿ ತಾಲ್ಲೂಕಿನ ಕೆಲವು ಭಾಗಗಳು ಸಮೃದ್ಧವಾಗಿವೆ.ಹಿಂದುಳಿದಿರುವುದು ಬೈಲಹೊಂಗಲ, ರಾಮದುರ್ಗ ಹಾಗೂ ಗೋಕಾಕ ಮತ್ತು ಅಥಣಿಯ ಕೆಲವು ಭಾಗಗಳು ಮಾತ್ರ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜತೆ ಇರುವ ಸಂಪರ್ಕ ಕೂಡಾ ಇಲ್ಲಿನ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ನೆರವಾಗಿದೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ಜತೆಗಿನ ಹೋಲಿಕೆಯಲ್ಲಿ ಬೆಳಗಾವಿ ಹಿಂದುಳಿದಿದೆ ಇಲ್ಲವೇ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಿದೆ ಎಂದು ಆರೋಪಿಸುವಂತಿಲ್ಲ. ಮಹಾರಾಷ್ಟ್ರ ಕಣ್ಣಿಟ್ಟಿರುವ ಕಾರಣಕ್ಕಾಗಿ ಇದು ಕರ್ನಾಟಕ ರಾಜ್ಯದ ಮುದ್ದಿನ ಕೂಸು. ಮತ್ತೆಮತ್ತೆ ಬೆಳಗಾವಿ ನಮ್ಮದು ಎನ್ನುವುದನ್ನು ಸಾಬೀತುಪಡಿಸುವುದಕ್ಕಾಗಿ ರಾಜ್ಯ ಸರ್ಕಾರ ಬೊಕ್ಕಸದಿಂದ ಧಾರಾಳವಾಗಿ ಇಲ್ಲಿಗೆ ಹಣ ಹರಿಸುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಲ್ಲಿ ನಿರ್ಮಿಸಲಾದ ಸುವರ್ಣ ಸೌಧ.ಪ್ರಾದೇಶಿಕ ಅಸಮಾನತೆ ಮತ್ತು ಹಿಂದುಳಿಯುವಿಕೆಯನ್ನು ತೊಡೆದುಹಾಕುವ ಉದ್ದೇಶದಿಂದ ನೋಡಿದರೆ ಈ ಸುವರ್ಣಸೌಧ ಗುಲ್ಬರ್ಗ ಇಲ್ಲವೇ ಬೀದರ್ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಬೇಕಿತ್ತು. ಬೆಳಗಾವಿ ನಮ್ಮದಾಗಿಯೇ ಉಳಿಸಬೇಕೆಂಬ ಬದ್ಧತೆ ಸಮಸ್ತ ಕನ್ನಡಿಗರಿಗೆ ಇರುವ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಸಾರ್ವಜನಿಕ ತೆರಿಗೆ ಹಣವನ್ನು ಉದಾರವಾಗಿ ಬೆಳಗಾವಿ ಜಿಲ್ಲೆಗೆ ನೀಡಿದಾಗಲೂ ಯಾರೂ ಅದರ ವಿರುದ್ಧ ಚಕಾರ ಎತ್ತಿಲ್ಲ.ಇದರ ಹೊರತಾಗಿಯೂ ಅಲ್ಲಿನ ಚುನಾಯಿತ ಪ್ರತಿನಿಧಿಯೊಬ್ಬರು ಪ್ರತ್ಯೇಕತೆಯ ಕತ್ತಿಯನ್ನು ಅನಗತ್ಯವಾಗಿ ಝಳಪಿಸಿ ಅಮಾಯಕ ಜನರ ದಾರಿ ತಪ್ಪಿಸುವ ಕೆಲಸ ಮಾಡಲು ಹೊರಟಿರುವುದನ್ನು ನೋಡಿದರೆ ಅವರಿಗೆ ಬೇರೆ ಉದ್ದೇಶಗಳಿರಬಹುದೆಂಬ ಅನುಮಾನ ಮೂಡುತ್ತದೆ.ಮುಂದೊಂದು ದಿನ ಉತ್ತರಕರ್ನಾಟಕ ಎಂಬ ರಾಜ್ಯ ರಚನೆಯಾದರೆ ಅದರ ರಾಜಧಾನಿ ಬೆಳಗಾವಿಯಾಗಲಿ, ಅದರ ಮುಖ್ಯಮಂತ್ರಿ ಬೆಳಗಾವಿಯವರಾಗಲಿ ಎಂಬ ದೂರಾಲೋಚನೆಯೂ ಅವರಲ್ಲಿದ್ದಿರಬಹುದೇನೋ?ಬಹುಭಾಷೆ,ಧರ್ಮ ಮತ್ತು ಸಂಸ್ಕೃತಿ ಮಾತ್ರವಲ್ಲ ಬಹು ಬಗೆಯ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಒಂದು ದೇಶದಲ್ಲಿ ಪ್ರತ್ಯೇಕ ರಾಜ್ಯದ ಎಲ್ಲ ಬೇಡಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕಲಾಗುವುದಿಲ್ಲ ಎನ್ನುವುದು ನಿಜ. ಪ್ರತಿಯೊಂದನ್ನೂ ಪ್ರತ್ಯೇಕ ಮಾನದಂಡಗಳ ಮೂಲಕ ಪರಿಶೀಲನೆಗೊಳಪಡಿಸಬೇಕಾಗುತ್ತದೆ. ಉದಾಹರಣೆಗೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳು ಹಿಂದುಳಿಯಲು ಅದರ ವಿಸ್ತೀರ್ಣವೂ ಪ್ರಮುಖ ಕಾರಣವಾಗಿತ್ತು. ಸರ್ಕಾರ ಮತ್ತು ಪ್ರಜೆಗಳ ನಡುವಿನ ಮಾನಸಿಕ ದೂರ ಮಾತ್ರವಲ್ಲ ಭೌಗೋಳಿಕ ದೂರ ಕೂಡಾ ಪ್ರಗತಿಗೆ ಮಾರಕವಾಗಬಲ್ಲದು.ಜಯಪ್ರಕಾಶ್ ನಾರಾಯಣ್ ಅವರೇ ಉತ್ತರಪ್ರದೇಶವನ್ನು ಐದುರಾಜ್ಯಗಳಾಗಿ ವಿಂಗಡಿಸಬೇಕೆಂಬ ಸಲಹೆ ನೀಡಿದ್ದರು. ಹನ್ನೆರೆಡು ವರ್ಷಗಳ ಹಿಂದೆ ಜಾರ್ಖಂಡ್, ಉತ್ತರಖಂಡ ಮತ್ತು ಛತ್ತೀಸ್‌ಗಡ ರಾಜ್ಯಗಳ ರಚನೆಯಾಗಿದ್ದು ಭಾಷೆ, ಜಾತಿ,ಧರ್ಮದ ಆಧಾರಗಳಲ್ಲಿ ಅಲ್ಲ.ಆಡಳಿತದ ಅನುಕೂಲತೆಯ ದೃಷ್ಟಿಯಿಂದ ರಚನೆಗೊಂಡ ಆ ರಾಜ್ಯಗಳ ಪ್ರಗತಿ ಅವುಗಳ ಮೂಲ ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶಗಳಿಗಿಂತ ಉತ್ತಮವಾಗಿವೆ. ಈ ಅನುಭವದ ಹಿನ್ನೆಲೆಯಲ್ಲಿಯೇ  ಹರಿತ್‌ಪ್ರದೇಶ ಮತ್ತು ಪೂರ್ವಾಂಚಲಗಳೆಂಬ ಎರಡು ಪ್ರತ್ಯೇಕ ರಾಜ್ಯರಚನೆಯ ಬೇಡಿಕೆ ಉತ್ತರಪ್ರದೇಶದಲ್ಲಿ ಹುಟ್ಟಿಕೊಂಡಿರುವುದು.ಆದರೆ ಜಾತಿ-ಧರ್ಮ, ಭಾಷಾ ವೈವಿಧ್ಯ, ಸಂಸ್ಕೃತಿ-ಉಪಸಂಸ್ಕೃತಿ, ಜನಾಂಗೀಯ ಅನನ್ಯತೆಯ ಅಂಶಗಳ ಆಧಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಮಾಡುವುದು ಕೊನೆಯಿಲ್ಲದ ಕಸರತ್ತು ಎನ್ನುವುದನ್ನು ದೇಶದ ಈಶಾನ್ಯಭಾಗದ ಅನುಭವ ಹೇಳುತ್ತಿದೆ.ಸ್ವಾತಂತ್ರ್ಯಪೂರ್ವದ ಅಸ್ಸಾಂ ಈಗ ಏಳು ರಾಜ್ಯಗಳಾಗಿ ಒಡೆದುಹೋಗಿರುವುದು ಹಿಂದುಳಿಯುವಿಕೆ ಇಲ್ಲವೇ ಪ್ರಾದೇಶಿಕ ಅಸಮಾನತೆಯಿಂದಾಗಿ ಅಲ್ಲ, ಅದಕ್ಕೆ ಜಾತಿ,ಧರ್ಮ ಮತ್ತು ಜನಾಂಗೀಯ ಪ್ರತ್ಯೇಕತೆ ಕಾರಣ.

 

ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ,ನಾಗಾಲ್ಯಾಂಡ್, ಅರುಣಾಚಲ ಮತ್ತು ತ್ರಿಪುರ ಸೇರಿದಂತೆ ಈಶಾನ್ಯದ `ಸಪ್ತಸುಂದರಿಯರ~  ಒಟ್ಟು ಜನಸಂಖ್ಯೆ ಸುಮಾರು ಮೂರು ಮುಕ್ಕಾಲು ಕೋಟಿ, ಒಟ್ಟು ವಿಸ್ತೀರ್ಣ ಎರಡೂವರೆ ಲಕ್ಷ ಚದರ ಕಿ.ಮೀ. ಏಳು ಭಾಗಗಳಾದ ನಂತರವೂ ಅಲ್ಲಿ ಪ್ರತ್ಯೇಕತೆಯ ಬೇಡಿಕೆ ನಿಂತಿಲ್ಲ  ಮಾತ್ರವಲ್ಲ ಪ್ರತ್ಯೇಕಗೊಂಡ ರಾಜ್ಯಗಳಲ್ಲಿ ಆರ್ಥಿಕ,ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಏಳೂ ರಾಜ್ಯಗಳ ಒಳಗೆ  ಪ್ರತ್ಯೇಕ  ರಾಜ್ಯ ಮತ್ತು ಸ್ವಾಯತ್ತ ಪ್ರದೇಶ ಬೇಕೆಂದು  ಮಾತ್ರವಲ್ಲ ಪ್ರತ್ಯೇಕ ದೇಶ ಬೇಕೆಂಬ ಕೂಗೂ ಕೇಳುತ್ತಿದೆ.ಈ ಹಿನ್ನೆಲೆಯಲ್ಲಿ ಒಂದು ಪ್ರದೇಶದ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಅನನ್ಯತೆಯನ್ನುಉಳಿಸಲು ಇಲ್ಲವೇ ಆ ಪ್ರದೇಶದ   ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕಲು ಪ್ರತ್ಯೇಕ ರಾಜ್ಯ ರಚನೆ ಮಾತ್ರ ದಾರಿಯೇ ಎಂಬ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯ ಇದೆ.ಉತ್ತರಕರ್ನಾಟಕದಲ್ಲಿ ಆಗಾಗ ಕೇಳಿಬರುತ್ತಿರುವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಖಂಡಿತ ಜಾತಿ-ಧರ್ಮ ಇಲ್ಲವೇ ಭಾಷೆ ಕಾರಣ ಅಲ್ಲ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಜಿಲ್ಲೆಗಳು ಹಿಂದುಳಿದಿರುವುದು ನಿಜವಾದರೂ ಇದಕ್ಕೆ ರಾಜ್ಯದ ವಿಸ್ತೀರ್ಣ ಇಲ್ಲವೇ ಭೌಗೋಳಿಕ ದೂರ ಕಾರಣ ಎಂದು ಹೇಳಲಾಗದು.  ಕರ್ನಾಟಕ ರಾಜ್ಯದ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ದೇಶದ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ.ಉತ್ತರಕರ್ನಾಟಕದ ಹಿಂದುಳಿಯುವಿಕೆ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಸಾಮಾನ್ಯವಾಗಿ ಅಲ್ಲಿನ ಭೂಮಿಯ ಅಸಮಾನ ಹಂಚಿಕೆಯ ಪ್ರಸ್ತಾಪವಾಗುವುದಿಲ್ಲ. ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭೂ ಹಿಡುವಳಿಗಳ ಒಟ್ಟು ವಿಸ್ತೀರ್ಣ 51.31 ಲಕ್ಷ ಹೆಕ್ಟೇರ್‌ಗಳು. ಇದರಲ್ಲಿ  ಅತಿಸಣ್ಣ, ಸಣ್ಣ ಮತ್ತು ಅರೆಮಧ್ಯಮ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 76.35,ಜಮೀನ್ದಾರರೆನಿಸಿಕೊಂಡ ಮಧ್ಯಮ ಮತ್ತು ದೊಡ್ಡ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 23.65. ಈ ಏಳು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ರೈತರ ಹಿಡುವಳಿಯ ಪ್ರಮಾಣ ಶೇಕಡಾ 90.78 ಮತ್ತು ಜಮೀನ್ದಾರಿ ಹಿಡುವಳಿಗಳ ಪ್ರಮಾಣ ಶೇಕಡಾ 9.22. ಈ ಅಸಮಾನತೆಯ ವಿರುದ್ಧ ಉಮೇಶ್ ಕತ್ತಿಯವರಂತಹ ನಾಯಕರು ಎಂದಾದರೂ ದನಿ ಎತ್ತಿದ್ದಾರೆಯೇ? ಉತ್ತರ ಕರ್ನಾಟಕ ಹಿಂದುಳಿಯಲು ಇಲ್ಲವೆ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಲು ಮುಖ್ಯವಾಗಿ ಈ ರಾಜ್ಯವನ್ನು ಆಳಿದವರ ಧೋರಣೆ ಕಾರಣ. ಇದು ಕೇವಲ ದಕ್ಷಿಣಕರ್ನಾಟಕದ ರಾಜಕಾರಣಿಗಳ ಪೂರ್ವಗ್ರಹ ಎನ್ನುವುದಕ್ಕೂ ಆಧಾರಗಳಿಲ್ಲ. ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂತ ಉತ್ತರಕರ್ನಾಟಕದ `ಮಣ್ಣಿನ ಮಕ್ಕಳ~ ಕಾಲದಲ್ಲಿಯೂ ಈ ಅನ್ಯಾಯ ಮುಂದುವರಿದಿದೆ.

 

ಸರ್ಕಾರವೆಂದರೆ ಕೇವಲ ಮುಖ್ಯಮಂತ್ರಿ ಇಲ್ಲವೇ ವಿಧಾನಸೌಧದಲ್ಲಿ ಕೂತಿರುವ ಒಂದಷ್ಟು ಅಧಿಕಾರಿಗಳು ಮಾತ್ರ ಅಲ್ಲ. ಸರ್ವಾಧಿಕಾರಿಯೆಂದು ಆರೋಪಿಸುವಂತಹ ಸರ್ವಶಕ್ತ ಮುಖ್ಯಮಂತ್ರಿಗಳ ಕಾಲ ಕಳೆದುಹೋಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮುಖ್ಯಮಂತ್ರಿಯವರಿಗಿಂತ ಉಮೇಶ್ ಕತ್ತಿಯವರಂತಹ ಸಚಿವರು ರಾಜಕೀಯವಾಗಿ ಹೆಚ್ಚು ಬಲಶಾಲಿಯಾಗಿರುತ್ತಾರೆ.ಮನಸ್ಸು ಮಾಡಿದರೆ ಇಂತಹವರು ಸರ್ಕಾರದ ಮೇಲೆ ಒತ್ತಡ ಹೇರಿ ಎಂತಹ ಅಸಾಧ್ಯ ಕೆಲಸವನ್ನೂ ಮಾಡಿಸುವಷ್ಟು ಸಶಕ್ತರು. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮೂರು ವರ್ಷಗಳ ಹಿಂದಿನ ಅತಿವೃಷ್ಟಿಯಿಂದಾಗಿ ಮನೆಮಾರು ಕಳೆದುಕೊಂಡ ಬಹಳಷ್ಟು ಕುಟುಂಬಗಳು ಈಗಲೂ ಸ್ವಂತಕ್ಕೊಂದು ಸೂರು ಪಡೆಯಲಿಕ್ಕಾಗದೆ  ತಗಡುಶೀಟುಗಳ ತಾತ್ಕಾಲಿಕ ಮನೆಗಳಲ್ಲಿ ನರಕಯಾತನೆ ಅನುಭವಿಸುತ್ತಿವೆ.ಉತ್ತರ ಕರ್ನಾಟಕಕ್ಕೆ ಸೇರಿರುವವರೇ ಮುಖ್ಯಮಂತ್ರಿಗಳಾದರೂ ಅವರ ಬವಣೆ ಕೊನೆಗೊಂಡಿಲ್ಲ. ಪ್ರತ್ಯೇಕ  ರಾಜ್ಯದ ಬಗ್ಗೆ ಮಾತನಾಡುತ್ತಿರುವ ಉಮೇಶ್ ಕತ್ತಿಯವರು ಮೊದಲು ದನಿ ಎತ್ತಬೇಕಾಗಿರುವುದು ಈ ರೀತಿ ನೊಂದವರ ಪರವಾಗಿ ಅಲ್ಲವೇ?ಆಳುವವರ ಇಂತಹ ಅಸಂವೇದನಾಶೀಲ ಮನಸ್ಥಿತಿ ಬದಲಾಗದೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ಸೌಧದಲ್ಲಿ ಇನ್ನೊಂದು ಮುಖ್ಯಮಂತ್ರಿಯವರ ಕುರ್ಚಿಯನ್ನು  ಮಾಡಿಸಿ ಅದರಲ್ಲಿ ಕತ್ತಿ ಇಲ್ಲವೇ ಕೋರೆಯವರನ್ನು ಕೂರಿಸಿದರೂ ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲಾರದು. ಆದುದರಿಂದ ಇಂತಹ ದೂರಾಲೋಚನೆ ಇಲ್ಲವೇ ದುರಾಲೋಚನೆಯ `ಕತ್ತಿ~ಯನ್ನು ಒರೆಯಲ್ಲಿಡುವುದೇ ಕ್ಷೇಮ.  ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry