ಪ್ರಪಾತಕ್ಕೇ ಬಿದ್ದ ನಂತರ ಉಳಿಯಿತೇನು?

7

ಪ್ರಪಾತಕ್ಕೇ ಬಿದ್ದ ನಂತರ ಉಳಿಯಿತೇನು?

Published:
Updated:
ಪ್ರಪಾತಕ್ಕೇ ಬಿದ್ದ ನಂತರ ಉಳಿಯಿತೇನು?

ಇದೊಂದು ಬಾಕಿ ಉಳಿದಿತ್ತು. ಈಗ ಅದೂ ಆಯಿತು. ದಕ್ಷಿಣ ಭಾರತದಲ್ಲಿ ನಮ್ಮದೊಂದು ಸರ್ಕಾರ ಇರಲಿ ಎಂದು ಬಿಜೆಪಿ ಹಲವು ವರ್ಷಗಳಿಂದ ಹಾತೊರೆದಿತ್ತು. ಅದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಒಂದು ಕನಸಾಗಿತ್ತು. ಆ ಕನಸು ನನಸಾಗಿ ಹೀಗೆ ದುಃಸ್ವಪ್ನವಾದೀತು ಎಂದು ಅವರಿಗೆ ಗೊತ್ತಿರಲಿಲ್ಲ.

 

ದಕ್ಷಿಣದ ತಮ್ಮ ಮೊದಲ ಸರ್ಕಾರ ತಮ್ಮದೇ ಪಕ್ಷದ ಶಿಲ್ಪಕ್ಕೆ ಹಾಕಿದ ಸುತ್ತಿಗೆಯೇಟು ಒಂದೇ ಎರಡೇ? ಒಂದು ಏಟಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಏಟು. ಶಿಲ್ಪ ವಿಕಾರವಾಗಿ ಹೋಯಿತು; ಉತ್ತರ ಕೊಟ್ಟು ಕೊಟ್ಟು ಪಕ್ಷದ ನಾಯಕರಿಗೆ ಸಾಕು ಸಾಕಾಯಿತು. ಈಗ ಸಮರ್ಥನೆಗೆ ಅವರ ಬತ್ತಳಿಕೆಯಲ್ಲಿ ಯಾವ ಬಾಣವೂ ಉಳಿದಿಲ್ಲ. ಅದು ಬರಿದೋ ಬರಿದು.

 

ಹೀಗೂ ಆಗಬಹುದು ಎಂದು ಅವರು ಅಂದುಕೊಂಡಿರಲಿಲ್ಲವೇನೋ?

ಹೀಗೆಲ್ಲ ಆಗಬಹುದು ಎಂದು ಬಹುಶಃ ಯಾರೂ ಅಂದುಕೊಂಡಿರಲಿಲ್ಲ. ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲರು ಯಾರೂ ಮಾಡದ್ದೇನೂ ಮಾಡಿಲ್ಲ. ಇವೆಲ್ಲ ಮನುಷ್ಯ ಸ್ವಭಾವಕ್ಕೆ ಸಹಜವಾದ ನಡವಳಿಕೆಗಳು. ಆದರೆ, ಎಲ್ಲಿ ಏನು ಮಾಡಬೇಕು ಎಂಬ ತರತಮ ಅವರಿಗೆ ಗೊತ್ತಿರಲಿಲ್ಲ.

 

ಅವರಿಗೆ ಮಾತ್ರ ಗೊತ್ತಿರಲಿಲ್ಲವೇ? ಅವರ ಹಾಗೆ ಸದನದಲ್ಲಿಯೇ ಈ ಚಿತ್ರಗಳನ್ನು ಅನೇಕರು ನೋಡಿದ್ದರು. ಸಿಕ್ಕಿ ಬಿದ್ದವರು ಸವದಿ ಮತ್ತು ಪಾಟೀಲರು ಮಾತ್ರ. ಸವದಿಯವರು ಪಾಲೇಮಾರರನ್ನೂ ಎಳೆದು ತಂದು ಬಲಿ ಹಾಕಿದರು. ಇದು ಯಾವಾಗಲೂ ಹಾಗೆಯೇ. ಎಲ್ಲರೂ ತಪ್ಪು ಮಾಡುತ್ತಾರೆ ಎಂದು ನಾವೂ ತಪ್ಪು ಮಾಡಲು ಹೋದರೆ ನಾವು ಮಾತ್ರ  ಸಿಕ್ಕಿ ಬೀಳಬಹುದು ಎಂಬ ಎಚ್ಚರಿಕೆ ನಮ್ಮಲ್ಲಿ ಇರಬೇಕು. ಸವದಿ ಮತ್ತು ಪಾಟೀಲರು ಅದನ್ನು ಮರೆತರು.ಈ ಮೂವರು ಈಗ ರಾಜೀನಾಮೆ ಕೊಟ್ಟಿರಬಹುದು. ಆದರೆ, ಅವರ ಹೆಸರಿಗೆ ಅಂಟಿದ ಕಳಂಕ ಎಂದೆಂದಿಗೂ ಅಳಿಸಿ ಹೋಗುವುದಿಲ್ಲ. ಇತಿಹಾಸದಲ್ಲಿ ಈ ಮೂವರ ಹೆಸರು `ಸದನದಲ್ಲಿ ಬ್ಲೂ ಫಿಲಂ ನೋಡಿದವರು~ ಎಂದು ಉಳಿಯುತ್ತದೆಯೇ ಹೊರತಾಗಿ ಅವರು ಮಾಡಿದ ಇತರ ಯಾವ ಕೆಲಸದಿಂದಲೂ ಅಲ್ಲ. ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಆರ್.ಡಿ.ಕಿತ್ತೂರ್ ಮತ್ತು ದೇವೇಂದ್ರಪ್ಪ ಘಾಳಪ್ಪ ಅವರ ಹೆಸರುಗಳು ಅವರು ಸಿಕ್ಕಿ ಹಾಕಿಕೊಂಡ ಲೈಂಗಿಕ ಹಗರಣಗಳ ಕಾರಣದಿಂದಲೇ `ಉಳಿದಿವೆ.~ ಇದು ಇತಿಹಾಸದಲ್ಲಿ ಉಳಿಯುವ ರೀತಿಯಲ್ಲ. ಬ್ಲೂ ಫಿಲಂ ನೋಡುತ್ತ ಸಿಕ್ಕಿ ಬಿದ್ದ ಸಂಜೆ ಸವದಿ ಕೊಡುತ್ತಿದ್ದ ಸಮರ್ಥನೆ ಹಾಸ್ಯಾಸ್ಪದವಾಗಿತ್ತು, ಲಜ್ಜಾಸ್ಪದವಾಗಿತ್ತು. ಸದನದಲ್ಲಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ಪಾಟೀಲರ ಉತ್ತರ ಪ್ರಾಮಾಣಿಕವಾಗಿತ್ತು. `ನಾನು ತಪ್ಪು ಮಾಡಿದ್ದೇನೆ~ ಎಂದು ಅವರು ನೇರವಾಗಿ ಒಪ್ಪಿಕೊಂಡರು. ಅವರ ಉತ್ತರಕ್ಕೂ ಸವದಿ ಉತ್ತರಕ್ಕೂ ತಾಳೆಯಾಗುತ್ತಿರಲಿಲ್ಲ.

 

ಇಬ್ಬರೂ ಇತ್ತ ಟಿ.ವಿ ವಾಹಿನಿಗಳಲ್ಲಿ ತಮ್ಮ `ಘನಂದಾರಿ~  ಕೆಲಸ ಪ್ರಸಾರವಾಗುತ್ತಿದ್ದಾಗಲೇ ರಾಜೀನಾಮೆ ಕೊಟ್ಟು ಬಿಟ್ಟಿದ್ದರೆ ಒಂದಿಷ್ಟು ಗೌರವ ಉಳಿಯುತ್ತಿತ್ತೋ ಏನೋ? ತಪ್ಪು ಮಾಡಿದ ನಂತರ ಅದಕ್ಕೆ ಸುಳ್ಳಿನ ಸಮರ್ಥನೆ ಕೊಡುತ್ತ ಹೋಗುವುದರಲ್ಲಿ ಅರ್ಥವಿಲ್ಲ.

 

ಏಕೆಂದರೆ ಒಂದು ಸುಳ್ಳಿಗೆ ಮತ್ತೊಂದು ಸುಳ್ಳು ಕೊಂಡಿಯಾಗುತ್ತದೆಯೇ ಹೊರತು ಅದು ಸತ್ಯ ಆಗುವುದೇ ಇಲ್ಲ. ಸವದಿಯವರು ಮಾಧ್ಯಮಗಳ ಮುಂದೆ ಸುಳ್ಳು ಹೇಳುವಾಗ, `ನಾನು ನನ್ನ ಹೆಂಡತಿಗೆ, ಮಕ್ಕಳಿಗೆ ಏನು ಹೇಳಲಿ~ ಎಂದು ಕೇಳಿಕೊಂಡಿದ್ದರೆ ಅವರಿಗೆ ತಾವು ಮಾಡಿದ ತಪ್ಪು ಎಂಥದು ಎಂದು ಗೊತ್ತಾಗುತ್ತಿತ್ತು. ಅದಕ್ಕೆ ಆತ್ಮಸಾಕ್ಷಿ ಎಂಬುದು ಒಂದು ಇರಬೇಕಾಗುತ್ತದೆ.ಸಮಸ್ಯೆ ಏನು ಎಂದರೆ ಅಂಥ ಆತ್ಮಸಾಕ್ಷಿಯೇ ಈ ಸರ್ಕಾರಕ್ಕೆ ಸತ್ತು ಹೋಗಿರುವುದು. ಇವರು ಅಧಿಕಾರಕ್ಕೆ ಬರಲು ಏನೇನು ಮಾಡಲಿಲ್ಲ? ಅಧಿಕಾರದಲ್ಲಿ ಉಳಿಯಲು ಏನೇನು ಮಾಡಲಿಲ್ಲ? ಹಿಂದೆ ಯಾರಾದರೂ ಹೀಗೆ ಅಧಿಕಾರ ಹಿಡಿದಿದ್ದರೇ? ಯಾವ ರಾಜ್ಯದಲ್ಲಿ ಈ ಬಗೆಯ `ಆಪರೇಷನ್ ಕಮಲ~ದಂಥ ಪ್ರಯೋಗಗಳು ನಡೆದಿದ್ದುವು? ಪ್ರಜಾಪ್ರಭುತ್ವದ ಸಿದ್ಧ ಮಾದರಿಗಳನ್ನು ಈ `ಆಪರೇಷನ್ ಕಮಲ~ ಎಷ್ಟು ಬೇಗ ಒಡೆದು ಹಾಕಿತಲ್ಲ? ಆಗ ಅದು ತಪ್ಪು ಎಂದು ಹೇಳಿದ ಯಾರ ಮಾತನ್ನು ಬಿಜೆಪಿಯ ನಾಯಕರು ಕೇಳಿದರು? ಈಗ ಅದು ಸರಿಯಲ್ಲ ಎಂದು ಅವರಿಗೇ ಅನಿಸತೊಡಗಿದೆ.

 

ಏಕೆ?  ಈ ಸರ್ಕಾರದಲ್ಲಿ  ಇದ್ದವರು ಬರೀ ಪ್ರಜಾಪ್ರಭುತ್ವದ ಆಶಯಗಳಿಗೆ ಮಾತ್ರ ಧಕ್ಕೆ ಮಾಡಿದರೇ? ಇಲ್ಲವಲ್ಲ. ನಿಸರ್ಗವನ್ನು ಇವರ ಹಾಗೆ ಯಾರು ಕೊಳ್ಳೆ ಹೊಡೆದರು? ನಿಸರ್ಗದ ಹೊಟ್ಟೆಯನ್ನು ರಕ್ಕಸ ರೀತಿಯಲ್ಲಿ ಬಗೆದು ಅದು ತಂದ ಸಂಪತ್ತಿನ ಪ್ರದರ್ಶನವನ್ನು ಇವರಷ್ಟು ಲಜ್ಜಾಹೀನರಾಗಿ ಪ್ರದರ್ಶನ ಮಾಡಿದವರು ರಾಜ್ಯದಲ್ಲಿ ಹಿಂದೆ ಯಾರಾದರೂ ಇದ್ದರೇ? ಮುಂದೆ ಯಾರಾದರೂ ಬಂದಾರೆಯೇ?ಮೊದಲ ಬಾರಿಗೆ ಅಧಿಕಾರ ಸೂತ್ರ ಹಿಡಿದ ಬಿಜೆಪಿ ನಾಯಕರು ಎಷ್ಟು ಆಸೆಬುರುಕರಾದರಲ್ಲ? ಆರ್‌ಎಸ್‌ಎಸ್ ಮೂಲದಿಂದ ಬಂದ ನಾಯಕರೇ ಭ್ರಷ್ಟಾಚಾರದಲ್ಲಿ ತೊಡಗಿದ ನಂತರ ಉಳಿದವರಿಗೆ ಏನು ಭಯ? ನಗದು ಅಲ್ಲ, ಚೆಕ್‌ನಲ್ಲಿಯೇ ವ್ಯವಹಾರ ನಡೆದುಬಿಟ್ಟಿತಲ್ಲ?ಒಂದು ಸರ್ಕಾರಕ್ಕೆ ಮತ್ತು ಅದರಲ್ಲಿ ಇರುವವರಿಗೆ ಉದ್ದೇಶ ಎಂಬುದು ಇರಬೇಕು. ಈ ಸರ್ಕಾರದ ಬಹುತೇಕ ಯಾವ ಸಚಿವರಿಗೂ ಒಂದು ಉದ್ದೇಶ, ಗುರಿ ಇದ್ದಂತೆ ಕಾಣುವುದಿಲ್ಲ. ಅಧಿಕಾರ ಏಕೆ ಬೇಕು? ಮೆರೆಯಲು ಅಲ್ಲ.

 

ಜನರ ಸೇವೆ ಮಾಡಲು; ಹಾಗೆಂದೇ ಅಲ್ಲವೇ ಅವರು ಮತದಾರರ ಮುಂದೆ ಹೇಳಿದ್ದು? ಮತ ಕೇಳಿದ್ದು? ಸವದಿ ಮತ್ತು ಪಾಟೀಲರು ಬ್ಲೂ ಫಿಲಂ ನೋಡಿದ ದಿನವೇ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಅಲ್ಲಮಪ್ರಭು ಪಾಟೀಲರು ತೊಗರಿ ಬೆಳೆಗಾರರ ಸಂಕಷ್ಟದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದರು. ಸವದಿ ಮತ್ತು ಅವರ ಜತಗೆ ಇದ್ದ ಕೃಷಿ ಸಚಿವ ಉಮೇಶ ಕತ್ತಿ ನಗುತ್ತಿದ್ದರು.ಮೂಲತಃ ರೈತರಾದ ಸವದಿ ಮತ್ತು ಕತ್ತಿ ಅವರೇ ರೈತರ ಬಗ್ಗೆ ಇಷ್ಟು ಸಂವೇದನಾರಹಿತರಾಗಿಬಿಟ್ಟರೇ? `ರೈತರ ಶಾಪ ನಿಮಗೆ ತಟ್ಟುತ್ತದೆ~ ಎಂದ ಅಲ್ಲಮಪ್ರಭು ಅವರ ಶಾಪ ಸವದಿ ಅವರಿಗೆ ಅಷ್ಟು ಬೇಗ ತಟ್ಟಿಬಿಟ್ಟಿತೇ? ಪರಿಷತ್ತಿನಲ್ಲಿ ರೈತರ ಬಗ್ಗೆ ಉದಾಸೀನವಾಗಿ ನಡೆದುಕೊಂಡ ಸವದಿ ವಿಧಾನಸಭೆಗೆ ಬಂದು ಮಾಡಿದ್ದೇನು ಎಂದರೆ ಸೀಟಿನಲ್ಲಿ ಕುಳಿತು ಬ್ಲೂ ಫಿಲಂ ನೋಡಿದ್ದು.

 

ಪರಿಷತ್ತಿನಲ್ಲಿ ಕುಳಿತಿದ್ದಾಗಲೇ ಅವರ ಮನಸ್ಸು ತಮ್ಮ ಮೊಬೈಲ್‌ನಲ್ಲಿ ಕುಳಿತು ಕಾಡುತ್ತಿದ್ದ ನೀಲಿ ಚಿತ್ರದ ಕಡೆಗೆ ಇತ್ತೇ? ಮೊದಲ ಸಾರಿ ಅಧಿಕಾರಕ್ಕೆ ಬಂದ ಇವರಿಗೆಲ್ಲ ಇಷ್ಟೊಂದು ಅಹಂಕಾರ ಹೇಗೆ ಬಂತು? ಬಿಜೆಪಿ ನಾಯಕರು ಏನು ತಪ್ಪು ಮಾಡಿದರೂ ಜನರು ಅವರ ಕೈ ಬಿಡಲಿಲ್ಲ. ಒಂದಾದ ನಂತರ ಒಂದರಂತೆ ಬಂದ ಗೆಲುವು ಅವರಲ್ಲಿ ವಿನಯ ಬೆಳೆಸಲಿಲ್ಲ, ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಭಾವವನ್ನು ಮಾತ್ರ ಬೆಳೆಸಿತು.ಇವರಲ್ಲಿ ಅಹಂಕಾರ ಬೆಳೆಯಲು ಇನ್ನೊಂದು ಕಾರಣವೂ ಇತ್ತು. ಈಗಿನ ಸಂಪುಟದಲ್ಲಿ ಇರುವವರೆಲ್ಲ ಸಂಪುಟ ದರ್ಜೆಯವರೇ. ಎಲ್ಲರಿಗೂ ಒಂದೇ ಸಾರಿ ಬಡ್ತಿ ಸಿಕ್ಕು ಬಿಟ್ಟಿದೆ. ಮೊದಲಾದರೆ ಸಂಪುಟ ಮೂರು ಹಂತದಲ್ಲಿ ಇರುತ್ತಿತ್ತು. ಉಪ ಸಚಿವರು, ಸಹಾಯಕ (ರಾಜ್ಯ) ಸಚಿವರು ಮತ್ತು ಸಂಪುಟ ದರ್ಜೆ ಸಚಿವರು ಎಂದು. ಉಪ ಸಚಿವರಿಗೆ ರಾಜ್ಯ ಸಚಿವ ಆಗಬೇಕು, ರಾಜ್ಯ ಸಚಿವರಿಗೆ ಸಂಪುಟ ದರ್ಜೆ ಸಚಿವರಾಗಬೇಕು ಎಂಬ ಆಸೆ ಇರಬೇಕು. ಈಗ ಏನಿಲ್ಲ, ಬಡ್ತಿ ಬೇಕು ಎಂದರೆ ಇವರೆಲ್ಲ ಮುಖ್ಯಮಂತ್ರಿಗಳೇ ಆಗಬೇಕು! ಸಂಪುಟದಲ್ಲಿ ಹೀಗೆ ಮೂರು ಹಂತಗಳು ಇರುವುದು ಆಡಳಿತಗಾರನಿಗೆ ಇರಬೇಕಾದ ಪಕ್ವತೆ ದೃಷ್ಟಿಯಿಂದಲೂ ಬಹಳ ಮುಖ್ಯವಾದುದು. ಒಂದು ಸಾರಿ ಸಚಿವರಾದ ಮೇಲೆ ಅವರು ಸರ್ವಜ್ಞರೇ ಆದಂತೆ.  ಅವರಿಗೆ ಯಾವ ತರಬೇತಿಯೂ ಬೇಕಾಗಿಲ್ಲ.

 

ತರಬೇತಿ ಕೊಡಿಸುವ ವ್ಯವಸ್ಥೆಯನ್ನು ಶಾಸನಸಭೆಯಾಗಲೀ, ಸರ್ಕಾರವಾಗಲೀ ಮಾಡಲೂ ಇಲ್ಲ. ಒಂದು ಸಾರಿ ಸಚಿವರಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, `ಮೊಬೈಲ್‌ನ್ನು ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಡಿ, ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಅದರಲ್ಲಿ ಮಾತನಾಡಲೂಬೇಡಿ~ ಎಂದು ಹೇಳಿದ್ದರು. ಸವದಿ ಮತ್ತು ಪಾಟೀಲರು ಆ ಶಿಬಿರದಲ್ಲಿ ಭಾಗವಹಿಸಿದ್ದರು!ರಾಜ್ಯದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಠಗಳು ಅನಧಿಕೃತವಾಗಿ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಿದುವು. ರೇಣುಕಾಚಾರ್ಯ ಅವರು ನರ್ಸ್‌ವೊಬ್ಬರ ಜತೆಗೆ ಸಂಬಂಧವಿಟ್ಟುಕೊಂಡು ಆ ಸಂಬಂಧ ಚಿತ್ರಸಮೇತ ಜಗಜ್ಜಾಹೀರು ಆದರೂ ಅವರು ಸಚಿವರಾಗಿ ಮುಂದುವರೆಯಲು ಧಕ್ಕೆಯಾಗಲಿಲ್ಲ. ಹಾಗೆ ನೋಡಿದರೆ ಒಬ್ಬ ಮಠಾಧೀಶರ ಮಧ್ಯ ಪ್ರವೇಶದಿಂದಲೇ ಆ ನರ್ಸು ಕೇಸನ್ನು ವಾಪಸು ತೆಗೆದುಕೊಂಡರು. ನಿತ್ಯ ನೈತಿಕತೆ ಬೋಧಿಸುವ ಒಂದು ಪಕ್ಷಕ್ಕೆ ಸಚಿವರೊಬ್ಬರು ಹೀಗೆ ವಿವಾಹಬಾಹಿರ ಸಂಬಂಧವಿಟ್ಟುಕೊಂಡುದು ತಪ್ಪು ಎಂದು ತೋರಲಿಲ್ಲ.ಈಗ ಸಿ.ಸಿ.ಪಾಟೀಲರ ಪರವಾಗಿ ಪಂಚಮಸಾಲಿ ಮಠಾಧೀಶರು ಮಾತನಾಡಿರುವುದು ಕೂಡ ಸರ್ಕಾರ ಮತ್ತು ಮಠಗಳ ನಡುವಿನ ಸಂಬಂಧದ ಮುಂದುವರಿಕೆಯೇ ಆಗಿದೆ. ಮಠಾಧೀಶರು ಕನಿಷ್ಠ ಇಂಥ ವಿಚಾರಗಳಲ್ಲಿಯಾದರೂ ಸುಮ್ಮನಿರಬೇಕು.

ಅಧಿಕಾರ ಎನ್ನುವುದು ಯೋಗ್ಯತೆಯ ಆಧಾರದಲ್ಲಿ ಸಿಗಬೇಕು.

 

ಈಗಿನ ಸಂಪುಟದಲ್ಲಿ ಅದು ಎಷ್ಟು ಜನರಿಗೆ ಇದೆ ಎಂದು ಕೇಳಿದರೆ ಉತ್ತರ ಕೊಡುವುದು ಕಷ್ಟ. ಯೋಗ್ಯತೆಯಿಲ್ಲದ ಕಾರಣಕ್ಕಾಗಿಯೇ ಅನೇಕರ ತಲೆದಂಡವಾಗಿದೆ ಮತ್ತು ಅದು ನಿಯತವಾಗಿ ಮುಂದುವರಿಯುತ್ತಿದೆ. ಐದು ರಾಜ್ಯಗಳಲ್ಲಿ ಮಹತ್ವದ ಚುನಾವಣೆ ನಡೆಯುತ್ತಿರುವಾಗ ಬಿಜೆಪಿ ಹೈಕಮಾಂಡಿಗೆ ಇಂಥ ಸಂಕಷ್ಟ ಬರಬಾರದಿತ್ತು. ಒಂದು ವಿಷಬೀಜವನ್ನು ಬೆಳೆಯಲು ಬಿಟ್ಟು ನಂತರ ಅದನ್ನು ಕತ್ತರಿಸಲು ಹೋದರೆ ಅದೇ ನಮ್ಮ ಸುತ್ತ ಸುತ್ತಿಕೊಳ್ಳುತ್ತದೆ.

 

ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರದಿಂದ ಹೈಕಮಾಂಡಿನ ವರ್ಚಸ್ಸಿಗೆ ಏನಾದರೂ ಸಹಾಯವಾಗಿದೆಯೇ ಎಂದು ಕೇಳಿದರೆ ನಗು ಬರುತ್ತದೆ ಅಷ್ಟೇ. ಕೇಂದ್ರ ನಾಯಕರು ಎಂಥ ದುರವಸ್ಥೆ ತಲುಪಿದ್ದಾರೆ ಎಂದರೆ, ಅವರು ರಾಜಸ್ತಾನದಲ್ಲಿ ಕಾಂಗ್ರೆಸ್ ಸಚಿವರೊಬ್ಬರಿಂದ ಹತ್ಯೆಯಾದ ನರ್ಸ್ ಭಂವರಿದೇವಿ ಕಥೆಯನ್ನು, ಆಂಧ್ರಪ್ರದೇಶದ ರಾಜಭವನದಲ್ಲಿ ರಾಸಲೀಲೆಯಲ್ಲಿ ತೊಡಗಿದ್ದ ದೃಶ್ಯಗಳ ಸಮೇತ ಸಿಕ್ಕಿ ಬಿದ್ದು ರಾಜೀನಾಮೆ ಕೊಟ್ಟ ಎನ್.ಡಿ.ತಿವಾರಿ ಕಥೆಯನ್ನು ಹೇಳುತ್ತಾರೆ.ಅಂದರೆ ಏನು ಅರ್ಥ :
`ನೀವು ಮಾಡಿಲ್ಲವೇ~ ಎಂದು. ಕಾಂಗ್ರೆಸ್‌ನವರು ಮಾಡಿದ್ದನ್ನೇ ಮಾಡುವುದಾದರೆ ಬಿಜೆಪಿಯವರು ಏಕೆ ಬೇಕು? ಬೇಡ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry