ಪ್ರಳಯಾಂತಕ ಜೀವಿಯ ಹೊಸಯುಗ ಆರಂಭ

ಬುಧವಾರ, ಜೂಲೈ 17, 2019
25 °C

ಪ್ರಳಯಾಂತಕ ಜೀವಿಯ ಹೊಸಯುಗ ಆರಂಭ

ನಾಗೇಶ್ ಹೆಗಡೆ
Published:
Updated:

`ಓ ಅಲ್ಲಿ ನೋಡಿ: ಮೂರು ದೊಡ್ಡ ಬೆಟ್ಟಗಳು ಕಾಣುತ್ತವಲ್ಲ? ನಿಸರ್ಗ ಪ್ರೇಮಿಗಳು ಅಲ್ಲಿಗೆ ಹೋಗಬೇಕು. ಎಂತೆಂಥ ಅಪರೂಪದ ಗಿಡಮೂಲಿಕೆಗಳು, ಪಕ್ಷಿ ಪ್ರಾಣಿಗಳು....~

`ನಿಲ್ಲಿ, ಎರಡೇ ಬೆಟ್ಟಗಳು ಕಾಣುತ್ತವಲ್ಲ? ಮೂರನೆಯದು ಎಲ್ಲಿ?~`ಅದಾ.., ಅದನ್ನು ರೆಡ್ಡಿಗಳು ಅದುರಿನ ಪುಡಿ ಮಾಡಿ ಕಳಿಸಿದ್ದಾಯ್ತು! ಇನ್ನೆರಡನ್ನು ನೋಡುವುದಿದ್ದರೆ ತುಸು ಬೇಗನೇ ಹೋಗಿ~  ಬಳ್ಳಾರಿ ಜಿಲ್ಲೆಯ ದರೋಜಿ ಕಾನನಕ್ಕೆ ಹೋದ ಯುವ ಛಾಯಾಗ್ರಾಹಕರೊಬ್ಬರು ರೀ ಪ್ಲೇ ಮಾಡಿದ ಸಂಭಾಷಣೆ ಇದು.ಕಳೆದ 10-12 ವರ್ಷಗಳಲ್ಲಿ ಸಂಡೂರಿನ ಸುತ್ತ ಅದೆಷ್ಟೊ ಬೆಟ್ಟಗಳು ಹೀಗೆ ಕಣ್ಮರೆಯಾಗಿವೆ. ಅಲ್ಲಿನ ಶೂನ್ಯವನ್ನು ತುಂಬುವಂತೆ ಅದೆಷ್ಟೊ ಕತೆಗಳು, ಸ್ಥಳ ಪುರಾಣಗಳು ಹೀಗೆ ಹೊಸದಾಗಿ ಹುಟ್ಟಿಕೊಳ್ಳುತ್ತಿವೆ.ಇಲ್ಲೊಂದು ಬೆಟ್ಟ ಮಾಯವಾಗುವುದು, ಅಲ್ಲೊಂದು ನದಿ ಒಣಗುವುದು, ಹೊಸ ಪರ್ವತಮಾಲೆ ಸೃಷ್ಟಿಯಾಗುವುದು- ಇವೆಲ್ಲ ಪ್ರಕೃತಿಯಲ್ಲಿ ಇದ್ದದ್ದೇ. ಆದರೆ ಅವೆಲ್ಲ ತೀರಾ ನಿಧಾನವಾಗಿ, ಕೋಟಿಗಟ್ಟಲೆ ವರ್ಷಗಳಲ್ಲಿ ನಡೆಯುವ ಕ್ರಿಯೆಗಳು. ನಿಸರ್ಗದ ಮಂದಶಕ್ತಿಗಳೆನಿಸಿದ ಇಬ್ಬನಿ, ಮೆಲುಗಾಳಿ, ಚಳಿ, ಬಿಸಿಲು, ಮಳೆ, ಜೀವಿಗಳು, ಹಿಮಪಕಳೆಗಳೇ ಈ ಕೆಲಸವನ್ನು ಮೆಲ್ಲಗೆ ಕ್ಷಣಕ್ಷಣಕ್ಕೂ ಮಾಡುತ್ತಿರುತ್ತವೆ.ಉಗ್ರಶಕ್ತಿಗಳೆನಿಸಿದ ಜ್ವಾಲಾಮುಖಿ, ಭೂಕಂಪನ, ಸುನಾಮಿ, ಸುಂಟರಗಾಳಿಗಳು ಎಲ್ಲೋ ಅಪರೂಪಕ್ಕೊಮ್ಮೆ `ಧೀಮ್‌ಕಿಟ~ ಎಂದೆದ್ದು ಕುಣಿದು ಈ ಕೆಲಸವನ್ನು ಮಾಡುತ್ತವೆ. ಭೂಮಿಯ ಚಹರೆಯನ್ನು ಬದಲಿಸುವ ಈ ಶಕ್ತಿಗಳಿಗೆ `ಭೂವೈಜ್ಞಾನಿಕ ನಿಯೋಗಿಗಳು (ಜಿಯಾಲಜಿಕ್ ಏಜೆಂಟ್ಸ್)~ ಎನ್ನುತ್ತಾರೆ. ಆದರೆ ಮನುಷ್ಯನೆಂಬ ಪ್ರಳಯಾಂತಕ ಜೀವಿ ಇದೆಯಲ್ಲ, ಅದು ಪ್ರತಿ ಕ್ಷಣವೂ ಕೆಲಸ ಮಾಡುವ ಉಗ್ರಶಕ್ತಿಯಾಗಿ ಹೊಮ್ಮುತ್ತಿದೆ. ಪ್ರಕೃತಿಯ ಸಹಜ ವೇಳಾಪಟ್ಟಿಯ ಪ್ರಕಾರ 50 ಲಕ್ಷ ವರ್ಷಗಳಲ್ಲಿ ನೆಲಸಮವಾಗಬೇಕಿದ್ದ ಸಂಡೂರು ಬೆಟ್ಟವನ್ನು ಐದೇ ವರ್ಷಗಳಲ್ಲಿ ಸಪಾಟುಗೊಳಿಸುತ್ತದೆ. ಒಂದು ಬಟನ್ ಒತ್ತುವ ಮೂಲಕ ಶಾಂತಸಾಗರದ ದ್ವೀಪಸರಣಿಗಳನ್ನು ಚಿಂದಿ ಮಾಡುತ್ತದೆ; ಪೋಖ್ರಾನ್‌ನಲ್ಲಿ ಗುಡ್ಡವನ್ನು ನಿರ್ಮಿಸುತ್ತದೆ.ಭೂಮಿಯ ಕಳೆದ 450 ಕೋಟಿ ವರ್ಷಗಳ ಚರಿತ್ರೆಯಲ್ಲಿ ಅತ್ಯಂತ ಬಲಿಷ್ಠ `ಜಿಯಾಲಜಿಕ್ ಏಜೆಂಟ್~ ಆಗಿ ಮನುಷ್ಯ ಪ್ರಾಣಿ ಹೊರಹೊಮ್ಮಿದೆ.ಕೆನಡಾದ ಅಥಾಬಸ್ಕಾ ಎಂಬಲ್ಲಿ ತೈಲ ಕಂಪೆನಿಯೊಂದು ಮರಳಿನಿಂದ ತೈಲವನ್ನು ಹಿಂಡಿ ಬೇರ್ಪಡಿಸಲೆಂದು 30 ಶತಕೋಟಿ ಟನ್ ಮಣ್ಣನ್ನು ಎತ್ತಿ ಹಾಕುತ್ತಿದೆ. ಅಷ್ಟೆಂದರೆ ಎಷ್ಟು ಗೊತ್ತೆ? ಜಗತ್ತಿನ ಎಲ್ಲ ನದಿಗಳು ಸೇರಿ ಪ್ರತಿವರ್ಷ ಸಮುದ್ರಕ್ಕೆ ತಳ್ಳುತ್ತಿದ್ದ ಮೆಕ್ಕಲು ಮಣ್ಣಿನ ದುಪ್ಪಟ್ಟು ಪ್ರಮಾಣ ಅದು! `ತಳ್ಳುತ್ತಿದ್ದ~ ಎಂದರೆ, ಈಗ ನದಿಗಳು ಅಷ್ಟೊಂದು ಹೂಳನ್ನು ಸಮುದ್ರಕ್ಕೆ ತಳ್ಳುತ್ತಿಲ್ಲ.

 

ಏಕೆಂದರೆ ನಾವು ಸುಮಾರು 50 ಸಾವಿರ ಅಣೆಕಟ್ಟೆಗಳನ್ನು ನಿರ್ಮಿಸಿ, ನದಿಗಳ ಆ ಕೆಲಸಕ್ಕೂ ತಡೆ ಒಡ್ಡಿದ್ದೇವೆ. ಅವೆಷ್ಟೊ ನದಿಗಳು ಸಮುದ್ರಕ್ಕೆ ಮೆಕ್ಕಲು ಹಾಗಿರಲಿ, ನೀರನ್ನೂ ಪೂರೈಸುವ ಸ್ಥಿತಿಯಲ್ಲಿಲ್ಲ. ಆದರೆ ಸಮುದ್ರರಾಜನಿಗೆ ಮಹಾ ಹಸಿವೆ; ಆತ ನದಿಮುಖದ (ಡೆಲ್ಟಾಗಳ) ಹಳೇ ಹೂಳನ್ನೇ ಬಾಚಿ ತನ್ನೆಡೆ ಸೆಳೆದುಕೊಳ್ಳುತ್ತಿದ್ದಾನೆ. ಹೀಗಾಗಿ ಢಾಕಾ, ನ್ಯೂಆರ್ಲೀನ್ಸ್, ಶಾಂಘಾಯ್ ಮುಂತಾದ ನಗರಗಳು ನಿಂತಲ್ಲೇ ಮೆಲ್ಲಗೆ ಕುಸಿಯುತ್ತಿವೆ.ನಾಡಿದ್ದು ಜೂನ್ 5ರ `ವಿಶ್ವ ಪರಿಸರ ದಿನಾಚರಣೆ~ಯ ಸಂದರ್ಭದಲ್ಲಿ ಮನುಷ್ಯಕೃತ್ಯಗಳ ವಿರಾಟ್ ಚಿತ್ರಣವನ್ನು ಮುಂದಿಟ್ಟು ಯಾರನ್ನೂ ದಿಗಿಲುಗೊಳಿಸುವ ಉದ್ದೇಶ ಈ ಲೇಖನಕ್ಕಿಲ್ಲ. ಮನುಷ್ಯನ ಅಟಾಟೋಪದ ಈ `ಯುಗ~ಕ್ಕೆ ಒಂದು ಹೊಸ ಹೆಸರಿಡಲು ಭೂ ವಿಜ್ಞಾನಿಗಳು ಇದೀಗ ನಿರ್ಧರಿಸಿದ್ದಾರೆ. ಪಠ್ಯಪುಸ್ತಕಗಳಲ್ಲಿ ಹೊಸ ಅಧ್ಯಾಯ ಸೇರುತ್ತದೆ.ನಾಲ್ಕು ವರ್ಷಗಳ ಹಿಂದೆ ಪ್ಲುಟೊವನ್ನು `ಗ್ರಹ~ದ ಪಟ್ಟದಿಂದ ಕಿತ್ತು ಹಾಕಿದ ಹಾಗೆ.ಒಂದಿಷ್ಟು ಪಠ್ಯಪುಸ್ತಕದ ಹಾಳೆಗಳನ್ನು ಕಿತ್ತು ಹಾಕಬೇಕಾಗುತ್ತದೆ ವಿನಾ ಯಾರ ತಲೆ ಹೋಗುವಂಥದ್ದು ಏನೂ ಇಲ್ಲ, ಸದ್ಯ.   ಭೂಮಿಯ ಸುದೀರ್ಘ ಇತಿಹಾಸವನ್ನು ವಿಜ್ಞಾನಿಗಳು ಈಗಾಗಲೇ ಪ್ರಮುಖ ಆರು ಯುಗಗಳಾಗಿ (ಕಲ್ಪ) ವಿಂಗಡಿಸಿದ್ದಾರೆ.ಆರಂಭದಲ್ಲಿ ಹೇಡಿಯನ್ (ಅಧೋಯುಗ), ನಂತರ ಆರ್ಕೇನ್ (ಪ್ರಥಮ ಯುಗ), ಪ್ರೊಟೆರೊಝೊಯಿಕ್ (ಪೂರ್ವಜೀವ ಕಲ್ಪ), ಪೇಲಿಯೊಝೊಯಿಕ್ (ಪ್ರಾಗ್‌ಜೀವಕಲ್ಪ), ಮೆಸೊಝೊಯಿಕ್ (ಮಧ್ಯ ಜೀವಕಲ್ಪ), ಕೊನೆಗೆ ಕೈನೊಝೊಯಿಕ್ (ಸದ್ಯ ಜೀವಕಲ್ಪ).ಒಂದೊಂದು ಯುಗದ ಆರಂಭದಲ್ಲೂ ಕ್ರಾಂತಿಕಾರಿ ಘಟನೆಗಳು ಸಂಭವಿಸಿವೆ. ಉದಾಹರಣೆಗೆ: ಈ ಇಡೀ ಭೂ ಚರಿತ್ರೆಯನ್ನು ಗಡಿಯಾರದ ಒಂದು ಗಂಟೆಗೆ ಇಳಿಸಿದರೆ  - ಅದರ ಮೊದಲ ಕೆಲವು ನಿಮಿಷ (ನೂರು ಕೋಟಿ ವರ್ಷ) ಭೂಮಿ ತನ್ನನ್ನು ತಾನು ತಂಪು ಮಾಡಿಕೊಳ್ಳುತ್ತಿತ್ತು. 10ನೇ ನಿಮಿಷದಲ್ಲಿ ಪಾಚಿಜೀವಿಗಳು ಅವತರಿಸಿದವು. ಅವು ವಾಯುಮಂಡಲದ ಇಂಗಾಲವನ್ನೂ ಬಿಸಿಲನ್ನೂ ಹೀರಿಕೊಂಡು ಎಲ್ಲೆಡೆ ಆಮ್ಲಜನಕವನ್ನು ಕಕ್ಕಿದ್ದರಿಂದ. ಇಡೀ ಭೂಮಿಯೇ ಹಿಮದ ಚೆಂಡಿನಂತಾಯಿತು. ಜೀವಿಗಳೆಲ್ಲ ನಿರ್ನಾಮವಾಗುವ ಸ್ಥಿತಿಗೆ ಬಂತು. 25ನೇ ನಿಮಿಷದಲ್ಲಿ ಆಮ್ಲಜನಕ `ವಿಷ~ವನ್ನೇ ನುಂಗಿ ಬದುಕಬಲ್ಲ ಕ್ಷುದ್ರಜಂತುಗಳು ಅವತರಿಸಿದವು. ಅವು ದೀರ್ಘಕಾಲ (ಇನ್ನೂರು ಕೋಟಿ ವರ್ಷ) ಏಗುತ್ತ ಭೂಮಿಯನ್ನು ಮತ್ತೆ ಬೆಚ್ಚಗೆ ಮಾಡಿದವು. 50ನೇ ನಿಮಿಷದಲ್ಲಿ ಭೂಮಿಯ ಎಲ್ಲೆಡೆ `ಕೇಂಬ್ರಿಯನ್ ಕ್ರಾಂತಿ~ಯಾಗಿ ಬೆನ್ನುಮೂಳೆ ಇಲ್ಲದ ಜೀವಿಗಳು ಧುಮುಧುಮಿಸಿದವು. ಅವೆಲ್ಲ ನಾಶವಾಗಿ 55ನೇ ನಿಮಿಷದಲ್ಲಿ ಡೈನೊಸಾರ್‌ಗಳ ಯುಗ ಆರಂಭವಾಯಿತು. ಅವೆಲ್ಲ ಸರ್ವನಾಶವಾಗಿ (ಆರು ಕೋಟಿ ವರ್ಷಗಳ ಹಿಂದೆ) 58ನೇ ನಿಮಿಷದಲ್ಲಿ ಸಸ್ತನಿಗಳು ಅವತರಿಸಿದವು.ಅರ್ಧ ಸೆಕೆಂಡ್ ಹಿಂದಷ್ಟೇ ಮನುಷ್ಯ ಅವತರಿಸಿದ. 0.2 ಸೆಕೆಂಡ್ ಹಿಂದೆ ಪೆಟ್ರೋಲು, ಕಲ್ಲಿದ್ದಲು ಪತ್ತೆಯಾಗಿದ್ದೇ ತಡ, ಯುಗಪಲ್ಲಟ ಘಟನೆಗಳು ಜರುಗತೊಡಗಿದವು.ಜನಸಂಖ್ಯಾ ಸ್ಫೋಟವುಂಟಾಯಿತು. ಸಮತೋಲ ಸ್ಥಿತಿಯಲ್ಲಿದ್ದ ಜಲಚಕ್ರ, ಜೀವಚಕ್ರ, ಇಂಗಾಲದ ಚಕ್ರ, ಸಾರಜನಕ ಚಕ್ರ ಎಲ್ಲವೂ ತಾಳ ತಪ್ಪಿ ಚಲಿಸತೊಡಗಿದವು.ಸಾರಜನಕ ಚಕ್ರವನ್ನೇ ನೋಡಿ: ಸೂಕ್ಷ್ಮಜೀವಿಗಳು ವಾಯುಮಂಡಲದ ಸಾರಜನಕವನ್ನು ಪರಿವರ್ತಿಸಿ ಸಸ್ಯಗಳಿಗೆ ಉಣಿಸುತ್ತಿದ್ದವು. ಆ ಮೂಲಕ ಪ್ರಾಣಿಗಳಿಗೆ, ನಮಗೆ ಸಾರಜನಕ ಸಿಗುತ್ತಿತ್ತು.1828ರಲ್ಲಿ ಕಾರ್ಖಾನೆಯಲ್ಲಿ ಸಾರಜನಕ (ಯೂರಿಯಾ) ತಯಾರಾಯಿತು. ಕೃತಕ ರಸಗೊಬ್ಬರ ಸಿಕ್ಕಿದ್ದರಿಂದ ಮನುಷ್ಯನಿಗೆ ಹಾಗೂ ಸಾಕುಪ್ರಾಣಿಗಳಿಗೆ ಬೇಕಿದ್ದ ಸಸ್ಯಗಳೇ ಎಲ್ಲ ಕಡೆ ತುಂಬಿದವು. ಕಾಡುನಾಶ ಹಾಗೂ ಜನಸಂಖ್ಯಾ ಸ್ಫೋಟ ಒಟ್ಟೊಟ್ಟಿಗೇ ನಡೆಯಿತು. ಹೆಚ್ಚಿನ ಯೂರಿಯಾ ಕೆರೆ-ಸಮುದ್ರ ಸೇರಿ ಪಾಚಿ ಬೆಳೆದು ಕೆಲವೆಡೆ ಜೈವಿಕ ಮರುಭೂಮಿಗಳು ಸೃಷ್ಟಿಯಾದವು.ಏಳುನೂರು ಕೋಟಿ ಜನರ ಊಟಕ್ಕೆ, ಸಂಚಾರಕ್ಕೆ, ದುಡಿಮೆಗೆ, ಲಕ್ಷುರಿಗೆ, ಮನರಂಜನೆಗೆಂದು ಪೆಟ್ರೊಪದಾರ್ಥಗಳನ್ನು ಸುಟ್ಟು ವಾಯುಮಂಡಲದಲ್ಲಿ ಇಂಗಾಲ ಹೆಚ್ಚುತ್ತಿದೆ. ಭೂಮಿಯ ತಾಪಮಾನ ಏರುತ್ತಿದೆ. ಹಿಮ ಕರಗಿ ಜಲಚಕ್ರವೂ ಅಯೋಮಯ ಆಗುತ್ತಿದೆ. ಜೀವಿ ಪ್ರಭೇದಗಳ ನಿರ್ನಾಮದ ವೇಗ ಹಿಂದಿನ 300 ಕೋಟಿ ವರ್ಷಗಳ ಎಲ್ಲ ದಾಖಲೆಗಳನ್ನೂ ಮೀರಿದೆ. `ಜಗತ್ತಿನ ಎಲ್ಲ ಜ್ವಾಲಾಮುಖಿಗಳಿಗಿಂತ ಹೆಚ್ಚಿನ ಇಂಗಾಲದ ಡೈಆಕ್ಸೈಡನ್ನು ಮನುಷ್ಯರು ಕಕ್ಕುತ್ತಿದ್ದಾರೆ. ಜಗತ್ತಿನ ಎಲ್ಲ ನದಿಗಳು, ಭೂಕುಸಿತಗಳು, ಮಹಾಪೂರಗಳು ಸಾಗಿಸುವ ಮಣ್ಣಿಗಿಂತ ಹೆಚ್ಚು ಮಣ್ಣನ್ನು ಮನುಷ್ಯರೇ ಅತ್ತಿತ್ತ ಜರುಗಿಸುತ್ತಿದ್ದಾರೆ. ಪ್ರಕೃತಿಯ ಆಗುಹೋಗುಗಳ ಮೇಲೆ ಒಂದೇ ಜೀವಿ ಇಷ್ಟೊಂದು ಹಸ್ತಕ್ಷೇಪ ಮಾಡಿದ ಉದಾಹರಣೆ ಭೂಚರಿತ್ರೆಯಲ್ಲಿ ಬೇರೊಂದಿಲ್ಲ~ ಎನ್ನುತ್ತಾರೆ, ಶಿಲಾಪದರಗಳಲ್ಲಿ ಪುರಾತನ ಭೂ ದಾಖಲೆಗಳ ಅಧ್ಯಯನ ಮಾಡುವ ಬ್ರಿಟಿಷ್ ಆಯೋಗದ ಮುಖ್ಯಸ್ಥ ಡಾ. ಜಾನ್ ಜಲಾಸೆವಿಚ್.`ಆಂಥ್ರೊಪೊಸೀನ್~ ಹೆಸರಿನ ಈ ಹೊಸ ಯುಗದ ಗಡಿಯನ್ನು ಎಲ್ಲಿಂದ ಗುರುತಿಸಬೇಕು ಎಂಬ ಬಗ್ಗೆ ತಜ್ಞರಲ್ಲಿ ಜಿಜ್ಞಾಸೆ ನಡೆಯುತ್ತಿದೆ. ಮೊದಲ ಪೆಟ್ರೋಲ್ ಬಾವಿ ಕೊರೆದಲ್ಲಿಂದಲೆ? ಸಾರಜನಕವನ್ನು ಬಳಸಿ ಆಲ್‌ಫ್ರೆಡ್ ನೊಬೆಲ್ ಮಹಾಶಯ ಸ್ಫೋಟಕಗಳನ್ನು ಬಳಕೆಗೆ ತಂದಂದಿನಿಂದಲೆ? ಅಣುಬಾಂಬ್‌ಗಳ ಪರೀಕ್ಷೆ ನಡೆದಂದಿನಿಂದಲೇ? ಕೋಟಿ ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ಈ ಇಸವಿಗಳೂ ಶತಮಾನಗಳೂ ನಗಣ್ಯವಾಗುತ್ತವೆ ನಿಜ.

 

ಆದರೆ ದೂರ ಭವಿಷ್ಯದ ಆ ಶಿಲಾಪದರಗಳಲ್ಲಿ 20ನೇ ಶತಮಾನದ ಮನುಷ್ಯರ ಚರಿತ್ರೆಯೆಲ್ಲ ಕಾಂಕ್ರೀಟಿನ ದಪ್ಪ ಹಾಸಾಗಿ ಮುದ್ರಿತವಾಗಿರುತ್ತದೆ;  ಕೆರೆದಲ್ಲೆಲ್ಲ ವಿಕಿರಣಪೂರಿತ ಕಣಗಳಿರುತ್ತವೆ; ದನಕುರಿ, ಹಂದಿಗಳ ಅಕ್ಷೋಹಿಣಿ ಪಳೆಯುಳಿಕೆ ಇರುತ್ತವೆ. ಡೆಲ್ಟಾಗಳಲ್ಲಿ ಹೂತುಹೋದ ನಗರಗಳ ಅವಶೇಷಗಳಲ್ಲಿ ಭಾರೀ ಪ್ರಮಾಣದ ಕಂಬಿ, ಸಲಾಕೆಗಳಿರುತ್ತವೆ- ಸಂಡೂರಿನಂಥ ಅದಿರು ಬೆಟ್ಟಗಳನ್ನು ಕರಗಿಸಿ ಕುಟ್ಟಿದ್ದು.ಇಂದಿನ ಈ ದುಂದು ಬಹುಕಾಲ ಹೀಗೇ ಮುಂದುವರೆಯಲಾರದು ನಿಜ. ನಮಗೆ ಬುದ್ಧಿ ಬರುತ್ತಿದೆ. ಜೀವಮಂಡಲದ ರಕ್ಷಣೆಗೆ, ಬದಲೀ ಶಕ್ತಿಮೂಲಗಳಿಗೆ, ಸುಸ್ಥಿರ ತಂತ್ರಜ್ಞಾನಕ್ಕೆ ಆದ್ಯತೆ ಸಿಗತೊಡಗಿದೆ. ಅಂದಹಾಗೆ, ಇದೇ ಮೊದಲ ಬಾರಿಗೆ ವಿಶ್ವ ಪರಿಸರ ದಿನಾಚರಣೆಯ `ಆತಿಥೇಯ ರಾಷ್ಟ್ರ~ವೆಂದು ಭಾರತವನ್ನು ಆಯ್ಕೆ ಮಾಡಲಾಗಿದೆ (ಹಿಂದೆ ಮೆಕ್ಸಿಕೊ ಮತ್ತು ಚೀನಾಗಳಿಗೆ ಎರಡೆರಡು ಬಾರಿ ಈ ಗೌರವ ಲಭಿಸಿತ್ತು).ಈ ಬಾರಿ ಪೃಥ್ವಿರಕ್ಷಣೆ ಕುರಿತ ವಿಶ್ವಮಟ್ಟದ ಭಾಷಣಗಳೆಲ್ಲ ದಿಲ್ಲಿ-ಮುಂಬೈಯಲ್ಲಿ ನಡೆಯಲಿವೆ. ಜತೆಗೆ ಪರಿಸರ ರಕ್ಷಣೆಯಲ್ಲಿ ಭಾರತದ ಸಾಧನೆಗಳ ಶ್ಲಾಘನೆ ನಡೆಯಲಿದೆ. ಚಪ್ಪಾಳೆ ತಟ್ಟಿ ಕೂರೋಣವೆ? ಅಥವಾ ಭೂ ರಕ್ಷಣೆಗೆ ತುಸು ಕೈ ಜೋಡಿಸೋಣವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry