ಶನಿವಾರ, ಮೇ 8, 2021
21 °C

ಪ್ರಶಸ್ತಿಗಳ ಮಾಯಾಲೋಕದಲ್ಲಿ…

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಪ್ರಶಸ್ತಿಗಳ ಮಾಯಾಲೋಕದಲ್ಲಿ…

ಈ ಸಲದ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗಳ ಬಗ್ಗೆ ಒಂದು ನಿರ್ದಿಷ್ಟ ಕಾರಣಕ್ಕೆ ಕುತೂಹಲವಿತ್ತು:  ಪ್ರಶಸ್ತಿಯ ಬೆನ್ನು ಹತ್ತಿದ ಲೇಖಕರೊಬ್ಬರು ಹೈಕೋರ್ಟಿನ ಮೆಟ್ಟಿಲು ಹತ್ತಿದ್ದರು. ಈ ವಿಚಾರಣೆಯ ವಿವರಗಳು ಪತ್ರಿಕೆಗಳಲ್ಲಿ ಬರುತ್ತಿದ್ದವು. ರಾಜ್ಯೋತ್ಸವ ಪ್ರಶಸ್ತಿಯ ನೀತಿನಿಯಮಗಳನ್ನು ನಿರೂಪಿಸಲಾಗಿದೆಯೇ ಎಂದು ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಮೂರ್ತಿಗಳು ಕೇಳಿದ್ದರು. ಹಿಂದೊಮ್ಮೆ ಪ್ರಶಸ್ತಿಗಾಗಿ ಪರಿಗಣಿಸದಿದ್ದ ಅರ್ಜಿದಾರರ ಹೆಸರನ್ನು ಈ ಸಲ ಪ್ರಶಸ್ತಿಗೆ ಪರಿಗಣಿಸಲಾಗಿದೆಯೇ ಎಂದು ನ್ಯಾಯಮೂರ್ತಿಗಳು ಅಡಿಷನಲ್ ಅಡ್ವೊಕೇಟ್ ಜನರಲ್ ಅವರನ್ನು ಈಚೆಗೆ ಕೇಳಿದ್ದರು. ‘ಅವರ ಹೆಸರನ್ನು ಪರಿಗಣಿಸಲಾಗಿದೆ; ಆದರೆ ಅಂತಿಮ ಆಯ್ಕೆಯ ಪಟ್ಟಿ ನವೆಂಬರ್ ಒಂದರಂದು ಹೊರಬೀಳಲಿದೆ’ ಎಂದು ಎ.ಎ.ಜಿ. ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಅರ್ಜಿ ಇತ್ಯರ್ಥವಾಯಿತು. 

ಇದಕ್ಕಿಂತ ಮೊದಲೇ ಇಂಥದೊಂದು ಪ್ರಕರಣ ಹೈಕೋರ್ಟಿನ ಮುಂದೆ ಬಂದಿತ್ತು. 2013ರಲ್ಲಿ ಪರಿಸರವಾದಿಯೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಅಥವಾ ಯಾವುದಾದರೂ ಪ್ರಶಸ್ತಿಯನ್ನು ಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ರಾಜ್ಯ ಹೈಕೋರ್ಟನ್ನು ಕೋರಿದ್ದರು. ಆಗ ನ್ಯಾಯಾಲಯ ಕೊಟ್ಟ ತೀರ್ಪಿನ ಒಂದು ಭಾಗ ಹೀಗಿದೆ: ‘ಈ ನ್ಯಾಯಾಲಯ ಸಾಮಾನ್ಯವಾಗಿ ರಾಜ್ಯ ಪ್ರಶಸ್ತಿ ಇತ್ಯಾದಿಗಳ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ. ಅರ್ಜಿದಾರರೂ ಸೇರಿದಂತೆ ಯಾರೇ ಅರ್ಹ ವ್ಯಕ್ತಿಗಳಿರಲಿ, ರಾಜ್ಯ ಸರ್ಕಾರ ಅವರನ್ನು ಪರಿಗಣಿಸುತ್ತದೆ. ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಪ್ರಶಸ್ತಿಗೆ ಅರ್ಹ ರಾದವರು ಹಲವರಿರಬಹುದು; ಆದರೆ ಇಂಥ ಪ್ರಶಸ್ತಿಗ ಳನ್ನು ಎಲ್ಲ ಅರ್ಹರಿಗೂ ಕೊಡಲು ಸರ್ಕಾರಕ್ಕೆ ಆರ್ಥಿಕ ಹಾಗೂ ಇನ್ನಿತರ ಅಡಚಣೆಗಳಿಂದಾಗಿ ಸಾಧ್ಯವಾಗಲಾ ರದು…’ ಅರ್ಜಿದಾರರ ಪರ ವಕೀಲರು ‘ಈಗಾಗಲೇ ಕೆಲವು ಸಮಿತಿಗಳು ತಮ್ಮ ಕಕ್ಷಿದಾರರ ಪರವಾಗಿ ಮಾಡಿ ರುವ ಶಿಫಾರಸಿನ ಆಧಾರದ ಮೇಲೆ ಈ ಅರ್ಜಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನವನ್ನಾದರೂ ಕೊಡಬೇಕು’ ಎಂದು ಮಾಡಿದ ಕೋರಿಕೆಯನ್ನೂ ನ್ಯಾಯಾಲಯ ಪುರಸ್ಕರಿಸಲಿಲ್ಲ.

ತೀರ್ಪಿನ ಕೊನೆಯಲ್ಲಿ ನ್ಯಾಯಮೂರ್ತಿಗಳು ಬರೆದ ಮಾತು: ‘ಯಾರೇ ಆಗಲಿ, ಪ್ರಶಸ್ತಿಗಳನ್ನು ಕೊಡುವಂತೆ ಕೇಳಿಕೊಳ್ಳಬಾರದು ಅಥವಾ ಅದಕ್ಕಾಗಿ ವಿನಂತಿ ಮಾಡಿಕೊಳ್ಳಬಾರದು. ಅದು ನೀಡಲ್ಪಡಬೇಕು. ಗೌರವವನ್ನು ಯಾರೂ ಕೇಳಿ ಪಡೆಯಲಾಗದು ಅಥವಾ ಅದನ್ನು ಒತ್ತಾಯಪೂರ್ವಕವಾಗಿ ಪಡೆಯಲಾಗದು. ಪ್ರಶಸ್ತಿಗಳನ್ನು ಕೇಳಿ ಪಡೆಯುವ ಸನ್ನಿವೇಶ ಉದ್ಭವವಾಗಬಾರದಿತ್ತು. ಅರ್ಹರಿಗೆ  ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸರ್ಕಾರ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಕೋರಿಕೆಯನ್ನು ಪರಿಗಣಿಸಲು ರಾಜ್ಯ ಸರ್ಕಾರವನ್ನು ನಿರ್ದೇಶಿಸಲು ನಾವು ಬಯಸುವುದಿಲ್ಲ. ಆದ್ದರಿಂದ ಈ ಅರ್ಜಿಯನ್ನು ಇತ್ಯರ್ಥಗೊಳಿಸಲಾಗಿದೆ’. 

ಈ ಬರಹದ ಶುರುವಿನಲ್ಲಿ ಹೇಳಿದ ಪ್ರಕರಣದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕೋರ್ಟಿನ ಮೆಟ್ಟಿಲು ಹತ್ತಿದ್ದ ಸತ್ಯನಾರಾಯಣರಾವ್ ಹೆಸರು ಈ ಸಲದ ಪಟ್ಟಿಯಲ್ಲೂ ಇರಲಿಲ್ಲ. ತಮ್ಮ ಅರ್ಜಿಯಲ್ಲಿ ಲೇಖಕರು ಮಂಡಿಸಿದ ಕೆಲವು ಅರ್ಹತೆಗಳು ಕುತೂಹಲಕರವಾಗಿವೆ. ಅರ್ಜಿದಾರರು ತಮಗೆ ಪ್ರಶಸ್ತಿ ಪಡೆಯಲು ಇರುವ ಅನೇಕ ಅರ್ಹತೆಗಳ ಜೊತೆಗೆ ತಮ್ಮ ಪ್ರಕಟಿತ ಕೃತಿಗಳ ಸಂಖ್ಯೆ ಅರವತ್ತಕ್ಕೂ ಹೆಚ್ಚು ಎಂಬುದನ್ನು ಒತ್ತಿ ಹೇಳಿದ್ದರು. ಸಾಧಾರಣ ಸಂಘಸಂಸ್ಥೆಗಳು ತಮ್ಮ ಸಾಧನೆಯನ್ನು ಮೆಚ್ಚಿ ಕೊಟ್ಟ ಸರ್ಟಿಫಿಕೇಟುಗಳನ್ನು ಕೂಡ ಸಲ್ಲಿಸಿದ್ದರು. ಆದರೆ ಈ ಬಗೆಯ ಮಾನದಂಡಗಳ ಆಧಾರದ ಮೇಲೆ ಯಾವುದೇ ಪ್ರಶಸ್ತಿಯ ನಿರ್ಧಾರ ಸಾಧ್ಯವೆ? ಕೃತಿಗಳ ಸಂಖ್ಯೆಗಳನ್ನು ಪ್ರಶಸ್ತಿಗಳ ಮಾನದಂಡವಾಗಿಟ್ಟುಕೊಂಡರೆ, ‘ಪುಸ್ತಕ ಕಾರ್ಖಾನೆ’ಗಳಾಗಿರುವ ಬರಹಗಾರ ವೇಷಧಾರಿಗಳು ಅತಿವೇಗವಾಗಿ ಪುಸ್ತಕಗಳ ಸರಮಾಲೆಗಳನ್ನೇ ಹೆರುವ ಸಾಧ್ಯತೆ ಇದೆ! ವಿಶ್ವವಿದ್ಯಾಲಯಗಳಲ್ಲಿ ಬಡ್ತಿಗಾಗಿ ಯು.ಜಿ.ಸಿ. ರೂಪಿಸಿದ ಮಾನದಂಡಗಳ ಒತ್ತಡದಿಂದಾಗಿ ಏಕಾಏಕಿ ನೂರಾರು ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸುತ್ತಿರುವ ದಿಢೀರ್ ವಿದ್ವಾಂಸರ ಕಾಲ ಇದು! ಇಂಥ ‘ಬರಹಕಾರ್ಖಾನೆ’ಗಳ ಸದ್ದುಗದ್ದಲಗಳ ನಡುವೆ ಒಂದೋ ಎರಡೋ ಒಳ್ಳೆಯ ಕವನ ಸಂಕಲನಗಳನ್ನು ಪ್ರಕಟಿಸಿದ ಕಲಬುರ್ಗಿ, ರಾಯಚೂರಿನ ಕವಿ, ಕವಯಿತ್ರಿಯರು ಯಾರ ಕಣ್ಣಿಗೂ ಬೀಳದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಈ ಬಗೆಯ ಸಂಖ್ಯೆಗಳ ಕೆಟ್ಟ ರಾಜಕಾರಣವನ್ನು ವಸ್ತುನಿಷ್ಠ ವಿಮರ್ಶೆ ನಿಷ್ಠುರವಾಗಿ ಹಿಮ್ಮೆಟ್ಟಿಸುತ್ತಿರಬೇಕಾಗುತ್ತದೆ.

ಹಾಗೆಯೇ ಸಂಘ, ಸಂಸ್ಥೆಗಳ ಪ್ರಶಸ್ತಿಪತ್ರಗಳು, ಮುಲಾಜಿನ ಪ್ರಮಾಣ ಪತ್ರಗಳು ಸಾಹಿತ್ಯ ಕೃತಿಗಳ ಮೌಲ್ಯವನ್ನು ಗುರುತಿಸಬಲ್ಲವೆಂಬ ಭ್ರಮೆ ಯಾರಿಗೂ ಇರಬಾರದು. ಕೆಲವು ವರ್ಷಗಳ ಕೆಳಗೆ ಅಮೆರಿಕದ ಸಂಸ್ಥೆಗಳಿಂದ ಸಾರ್ವಜನಿಕ ವ್ಯಕ್ತಿಗಳಿಗೆ ಈ ಬಗೆಯ ಪತ್ರ ಬರುತ್ತಿತ್ತು: ‘ಅಭಿನಂದನೆಗಳು. ನಿಮ್ಮ ಸಾಧನೆಯನ್ನು ಗುರುತಿಸಿ ನಿಮಗೆ ‘ಮ್ಯಾನ್ ಆಫ್ ದಿ ಯಿಯರ್’ ಪ್ರಶಸ್ತಿ ಕೊಡುತ್ತಿದ್ದೇವೆ. ದಯಮಾಡಿ ಸ್ವೀಕರಿಸಿ’. ಕೆಲಬಗೆಯ ಮುಗ್ಧರು ಇದನ್ನು ಆನಂದದಿಂದ ಒಪ್ಪಿಕೊಂಡ ತಕ್ಷಣ, ಅತ್ತ ಕಡೆಯಿಂದ ‘ಪ್ರಶಸ್ತಿಯನ್ನು ನಿಮಗೆ ತಲುಪಿಸಲು ಕೇವಲ ನೂರು ಡಾಲರುಗಳ ಪೋಸ್ಟಲ್ ವೆಚ್ಚ ಕಳಿಸಿ’ ಎಂಬ ಪತ್ರ ಬರುತ್ತಿತ್ತು. ಹೀಗೆ ನೂರು ಡಾಲರ್ ಕಳಿಸಿ ‘ಮ್ಯಾನ್ ಆಫ್ ದಿ ಯಿಯರ್’ ಥರದ ಪ್ರಶಸ್ತಿಗಳನ್ನು ಪಡೆದು ತಮ್ಮ ಬಯೋಡೇಟದಲ್ಲಿ ಹಾಕಿಕೊಂಡವರೂ ಇದ್ದಾರೆ! ಇಂಥ ಪ್ರಶಸ್ತಿ ಕೊಟ್ಟವರು ಇವರನ್ನು ‘ಫೂಲ್ ಆಫ್ ದಿ ಯಿಯರ್’ ಎಂದು ನಕ್ಕಿದ್ದರೆ ಅಚ್ಚರಿಯಲ್ಲ!

ಇಂಥ ಕೃತ್ರಿಮಲೋಕದಲ್ಲಿ ಯಾವುದೋ ಪ್ರಮಾಣ ಪತ್ರವನ್ನು ಆಧರಿಸಿ ವ್ಯಕ್ತಿಯ ಸಾಧನೆಯನ್ನು ಅಳೆಯುವುದು ಹಾಸ್ಯಾಸ್ಪದವಾಗಬಲ್ಲದು. ಆದ್ದರಿಂದಲೇ ‘ಅರ್ಹತೆಯ ವಿವಿಧ ಮಾನದಂಡ ಮೂಲಕ ಗುರುತಿಸಬೇಕಾದ ಪ್ರಶಸ್ತಿಯಂಥ ವಿಷಯಗಳನ್ನು ನ್ಯಾಯಾಲಯದ ವ್ಯಾಪ್ತಿಗೆ ತರುವುದು ಕೋರ್ಟಿನ ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ’ ಎಂದು ಖ್ಯಾತ ವಕೀಲ ಸಿ.ಎಚ್.ಹನುಮಂತರಾಯರು ಹೇಳುತ್ತಾರೆ. ಅವರ ಪ್ರಕಾರ, ‘ಪ್ರಶಸ್ತಿಗಳನ್ನು ಕಾನೂನು ಮತ್ತು ತಾಂತ್ರಿಕ ಮಾನದಂಡಗಳಿಗೆ ಒಳಪಡಿಸಲಾಗದು. ನ್ಯಾಯಾಲಯದ ಆಚೆಗೆ ಇತ್ಯರ್ಥವಾಗಬೇಕಾಗಿರುವ ಇಂಥ ಅರ್ಜಿಗಳನ್ನು ನ್ಯಾಯಾಲಯ ಮಾನ್ಯ ಮಾಡದಿರುವ ಸಂದರ್ಭಗಳೂ ಇವೆ. ಕಾನೂನಿಗೆ ಹೊರತಾದ ಅನೇಕ ಅಂಶಗಳು ಪ್ರಶಸ್ತಿಗಳ ಸಂದರ್ಭದಲ್ಲಿ ಎದುರಾಗುತ್ತವೆ. ಉದಾಹರಣೆಗೆ, ಹಿರಿತನದ ಆಧಾರದ ಮೇಲೆ ಪ್ರಶಸ್ತಿ ಕೊಡಿ ಎಂದು ಒಬ್ಬರು ಕೇಳಬಹುದು; ಆದರೆ ಸಾಧನೆಗೆ ಹಿರಿತನವನ್ನು ಆಧಾರವಾಗಿರಿಸಿಕೊಳ್ಳಲು ಸಾಧ್ಯವೆ? ತಾರುಣ್ಯದಲ್ಲೇ ಅದ್ಭುತ ಸಾಧನೆ ಮಾಡಿದ ಹುಡುಗ, ಹುಡುಗಿಯರು ಪ್ರಶಸ್ತಿಗಾಗಿ ವಯಸ್ಸಾಗುವ ತನಕ ಕಾಯಬೇಕೆ? ಹಾಗೆಯೇ ವ್ಯಕ್ತಿಯೊಬ್ಬರ ಇಂಟಿಗ್ರಿಟಿಯನ್ನು ತೀರ್ಮಾನಿಸಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಆಗ ಕೋರ್ಟು ಅದನ್ನು ತೀರ್ಮಾನಿಸುವುದು ಕಷ್ಟ. ಕೋರ್ಟುಗಳು ವ್ಯಕ್ತಿನಿಷ್ಠ ಅಂಶಗಳನ್ನು ಗ್ರಹಿಸುವುದು ಕಷ್ಟ; ಅಲ್ಲಿ ವಸ್ತುನಿಷ್ಠ ಗ್ರಹಿಕೆಗಳಿಗೆ ಮಾತ್ರ ಅವಕಾಶವಿರುತ್ತದೆ.  ಪ್ರಶಸ್ತಿಗಳನ್ನು ತೀರ್ಮಾನಿಸುವಾಗ ಹಲಬಗೆಯ ವಿಶಾಲ ನೋಟಗಳ ಅಗತ್ಯವಿರುತ್ತದೆ. ಅವೆಲ್ಲವನ್ನೂ ಕೋರ್ಟು ಪರಿಗಣಿಸುವುದು ಕಷ್ಟ. ಸರ್ಕಾರವೊಂದು ಪ್ರಶಸ್ತಿ ನೀಡುವಾಗ ವಿಶೇಷ ಚೌಕಟ್ಟುಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಸಹಜ ನ್ಯಾಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯಗಳನ್ನು ಕೂಡ ಸರ್ಕಾರ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಇಂಥ ಅಂಶಗಳು ಕಾನೂನಿನ ಚೌಕಟ್ಟಿನ ಹೊರಗೆ ತೀರ್ಮಾನವಾಗುವಂಥವು’. ಹೀಗಾಗಿ ‘ಪ್ರಶಸ್ತಿಯಂಥ ವಿಚಾರಗಳನ್ನು ಕೋರ್ಟಿಗೆ ಒಯ್ಯುವುದು ಸಮಂಜಸವೂ ಅಲ್ಲ, ಅಪೇಕ್ಷಿತವೂ ಅಲ್ಲ’ ಎಂದು ಹನುಮಂತರಾಯರು ಖಚಿತವಾಗಿ ಹೇಳುತ್ತಾರೆ.

ಸಾರ್ವಜನಿಕ ಜೀವನವನ್ನು ಬಲ್ಲವರಿಗೆ ಸತ್ಯನಾರಾಯಣರಾವ್ ಪ್ರಕರಣ ಒಂದು ದೃಷ್ಟಿಯಿಂದ ಪ್ರಾತಿನಿಧಿಕ ಎಂಬುದು ಹೊಳೆದಿರಬಹುದು. ಅನೇಕ ಸಾರ್ವಜನಿಕ ವ್ಯಕ್ತಿಗಳು ತಮಗೆ ಸಲ್ಲಬೇಕಾದ ಪ್ರಶಸ್ತಿಗಳು ಸಂದಿಲ್ಲ ಎಂದು ಗೊಣಗುತ್ತಲೇ ಇರುವುದನ್ನು ನೀವು ನೋಡಿರಬಹುದು; ಅವರಲ್ಲಿ ಅನೇಕರು ಪ್ರಶಸ್ತಿಗಾಗಿ ಕೋರ್ಟಿನ ಮೆಟ್ಟಿಲು ಹತ್ತಲು ನಾಚುತ್ತಾರಾದರೂ ಗಾಳಿಸುದ್ದಿಗಳ ಹೀನಲೋಕದಲ್ಲಿ ಮುಳುಗೇಳುತ್ತಿರುತ್ತಾರೆ. ಆಯ್ಕೆ ಸಮಿತಿಯ ಸದಸ್ಯರ ಮೇಲೆ ಅಪಪ್ರಚಾರವೂ ಶುರುವಾಗುತ್ತದೆ. ಒಮ್ಮೆ ಕನ್ನಡ ಸಾಂಸ್ಕೃತಿಕ ಸಂಸ್ಥೆಯೊಂದರ ಮುಖ್ಯಸ್ಥರೊಬ್ಬರಿಗೆ ಯಾವುದೋ ಅನ್ಯಾಯವಾಯಿತು. ಈ ಮುಖ್ಯಸ್ಥರ ಮಿತ್ರರು ಅಂದಿನ ಸರ್ಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಸಾಹಿತಿಯೊಬ್ಬರನ್ನು ಕಂಡು ‘ಅವರಿಗೆ ಕೊಂಚ ಬೆಂಬಲವಾಗಿ ನಿಲ್ಲಿ’ ಎಂದು ಕೇಳಿದರು. ಆಗ ಸಾಹಿತಿ ಕೊಟ್ಟ ಉತ್ತರ: ‘ಅವನು ನನಗೆ ಪ್ರಶಸ್ತಿ ಬರಬೇಕಾದ ಸಮಯದಲ್ಲಿ ಸಹಾಯ ಮಾಡಲಿಲ್ಲ. ನಾನ್ಯಾಕೆ ಅವನಿಗೆ ಸಹಾಯ ಮಾಡಲಿ?’ ವಿಚಿತ್ರವೆಂದರೆ ಆ ಪ್ರಶಸ್ತಿಯ ಆಯ್ಕೆ ಸಂಸ್ಥೆಯ ಮುಖ್ಯಸ್ಥರ ಕೈಯಲ್ಲಿರುವುದಿಲ್ಲ ಎಂಬುದು ಈ ಸಾಹಿತಿಗೂ ಗೊತ್ತಿತ್ತು. ಇಂಥವರಿಗಿಂತ ತಮಗೆ ಪ್ರಶಸ್ತಿ ಕೊಡಬೇಕೆಂದು ಕೋರ್ಟಿಗೆ ಹೋಗುವವರು ಹೆಚ್ಚು ನೇರವಾದ ವ್ಯಕ್ತಿಗಳೆನ್ನಿಸುತ್ತದೆ!

ಆದರೂ ತಮಗೆ ಪ್ರಶಸ್ತಿ ತಪ್ಪಿತು ಎಂದು ನಿರ್ಲಜ್ಜವಾಗಿ ಮಾತಾಡುವವರು ಇದೆಲ್ಲ ಕೇಳುಗರಲ್ಲಿ ಅಸಹ್ಯ ಹುಟ್ಟಿಸುತ್ತದೆ ಹಾಗೂ ಜನರ ಕಣ್ಣಲ್ಲಿ ತಾವು ತಮಾಷೆಯ ವ್ಯಕ್ತಿಯಾಗುತ್ತಿರುತ್ತೇವೆ ಎಂಬುದನ್ನು ಅರಿತಿರುವುದಿಲ್ಲ! ಸ್ಕೂಲು, ಕಾಲೇಜುಗಳ ಮಕ್ಕಳು ಕ್ರೀಡಾಸ್ಪರ್ಧೆಯಲ್ಲಿ ಸೋತಾಗಲೆಲ್ಲ ಅಂಪೈರುಗಳ ಪಕ್ಷಪಾತದ ಬಗ್ಗೆ ಮಾತಾಡುವಂತೆ ಹಿರಿಯ ಲೇಖಕರೂ ಮಾತಾಡುವುದು ಅಚ್ಚರಿ ಹುಟ್ಟಿಸುತ್ತದೆ. ಈ ಸಲ ತನ್ನ ಕೃತಿ ಪ್ರಶಸ್ತಿಯೊಂದರ ಅಂತಿಮ ಸುತ್ತು ತಲುಪಿದ್ದರಿಂದ ಇನ್ನೊಂದು ಗುಂಪು ತನ್ನ ಕೃತಿಗಳ ವಿರುದ್ಧ ಬರೆಸಿತು ಎಂದು ಲೇಖಕರೊಬ್ಬರು ಗೊಣಗುತ್ತಿದ್ದರು; ತನ್ನ ಕೃತಿಗೆ ಯಾರೋ ಕಡಿಮೆ ಮಾರ್ಕ್ಸ್ ಹಾಕಿದರು ಎಂದು ಮತ್ತೊಬ್ಬರು ಕೊರಗುತ್ತಿದ್ದರು. ‘ಅಯ್ಯೋ! ಅವನಿಗೆ ಯಾವುದಾದರೂ ಒಂದು ಪ್ರಶಸ್ತಿ ಕೊಟ್ಟುಬಿಡ್ರೀ. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತಾನೆ’ ಎಂದು ಸಿನಿಮಾ ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಮಾಷೆ ಮಾಡುತ್ತಿದ್ದರು! ಇವೆಲ್ಲ ನಿತ್ಯ ನಡೆಯುವ ಸಾಂಸ್ಕೃತಿಕ ನಾಟಕದ ಕಾಯಂ ದೃಶ್ಯಗಳಂತಿವೆ!

ಆದರೆ ಪ್ರಶಸ್ತಿಗಳ ಬೇಟೆಗಿಂತ ಜೀವಂತ, ಪ್ರಾಮಾಣಿಕ ಕೃತಿಗಳನ್ನು ಸೃಷ್ಟಿಸುವುದರ ಬಗೆಗಿನ ಅಂತಿಮ ಬದ್ಧತೆ ಮಾತ್ರ ಲೇಖಕರನ್ನು ಪೊರೆಯಬಲ್ಲದು ಎಂಬ ಸತ್ಯವನ್ನು ನಾವು ಮರೆಯಬಾರದು. ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಬಗೆಯ ಪ್ರಶಸ್ತಿವಿಜೇತ ಕೃತಿಗಳ ಪಟ್ಟಿಗಳನ್ನು ಗಮನಿಸುತ್ತಿದ್ದರೆ, ಅವು ಯಾವ ಮಾನದಂಡದಿಂದಲೂ ನಾಳೆಗೆ ಉಳಿಯುವಂತೆ ಕಾಣುವುದಿಲ್ಲ; ಎಷ್ಟೋ ವರ್ಷಗಳಿಂದ ಅಂಥ ಅನೇಕ ಕೃತಿಗಳನ್ನು ಯಾರೂ ಓದಿದ್ದಾಗಲೀ, ಚರ್ಚಿಸಿದ್ದಾಗಲೀ ಕಾಣುವುದಿಲ್ಲ. ಆಯಾ ಬರಹಗಾರರ ಕ್ಷಣದ ವೈಭವವನ್ನು ಬಿಟ್ಟರೆ ಅವುಗಳಿಂದ ಇನ್ಯಾವ ಉದ್ದೇಶವೂ ಸಾಧಿತವಾದಂತೆ ತೋರುವುದಿಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ. ಗೋಕಾಕರ ಕೃತಿಗಳನ್ನು ಈಚಿನ ವರ್ಷಗಳಲ್ಲಿ ಯಾರೂ ಉಲ್ಲೇಖಿಸಿದ್ದನ್ನು ನಾನಂತೂ ಕಂಡಿಲ್ಲ. ಆದರೆ ಜ್ಞಾನಪೀಠ ಪ್ರಶಸ್ತಿ ಪಡೆಯದ ತೇಜಸ್ವಿ, ಲಂಕೇಶ್, ಗೋಪಾಲಕೃಷ್ಣ ಅಡಿಗರ ಕೃತಿಗಳ ತೇಜಸ್ಸು ಪ್ರತಿ ಸಲ ಓದಿದಾಗಲೂ ಹೆಚ್ಚುತ್ತಲೇ ಇರುವುದನ್ನು ಮಾತ್ರ ಕಾಣುತ್ತಲೇ ಇದ್ದೇನೆ!   

ಕೊನೆ ಟಿಪ್ಪಣಿ: ಪ್ರಶಸ್ತಿಯೋ? ಕಾಯಕದ ಧನ್ಯತೆಯೋ?

ನಾವೆಲ್ಲ ಮಕ್ಕಳಾಗಿದ್ದಾಗ ನಮ್ಮೊಳಗೆ ಏನಾದರೂ ವಿಶೇಷವಾದದ್ದನ್ನು ಮಾಡಿ ಬೇರೆಯವರ ಗಮನ ಸೆಳೆಯುವ ಆಸೆ ಪುಟಿಯುತ್ತಿರುತ್ತದೆ; ಅದು ದೊಡ್ಡವರಾದ ಮೇಲೂ ನಮ್ಮೊಳಗೆ ಉಳಿದಿರುತ್ತದೆ ಎಂಬುದು ಫ್ರಾಯ್ಡಿಯನ್ ಸೈಕಾಲಜಿಯನ್ನು ಬಲ್ಲವರಿಗೆಲ್ಲ ಗೊತ್ತಿರುತ್ತದೆ. ಆ ದೃಷ್ಟಿಯಿಂದ ನೋಡಿದಾಗ, ಪ್ರಶಸ್ತಿಗಳು ಲೇಖಕ, ಲೇಖಕಿಯರ ಅಥವಾ ಎಲ್ಲರ ಅಹಮ್ಮನ್ನು ತಣಿಸುತ್ತಿರುತ್ತವೆನ್ನುವುದು ನಿಜ. ಆದರೆ ‘ರೆಕಗ್ನಿಷನ್’ ಒಂದೇ ಅಂತಿಮ ಗುರಿಯೆಂದು ಭ್ರಮಿಸುವವರು ‘ಪ್ರಶಸ್ತಿರೋಗ’ಕ್ಕೆ ತುತ್ತಾಗಿ ತಮ್ಮ ಅಳಿದುಳಿದ ಸೃಜನಶೀಲತೆಯನ್ನೂ ಕಳೆದುಕೊಳ್ಳುತ್ತಿರುತ್ತಾರೆ. ನಿತ್ಯ ಉಪಯೋಗಿಯಾದ ವಸ್ತುಗಳನ್ನು ತಯಾರಿಸುವ ಬಡಗಿ, ಟೈಲರ್ ಮೊದಲಾದವರು ಸುಂದರ ವಸ್ತುಗಳನ್ನು ತಯಾರಿಸಿ ಕ್ಷಣ ಖುಷಿಯಾಗಿ, ನೋಡುಗರ ಮೆಚ್ಚುಗೆಯ ನೋಟ ಕಂಡು ಮುಗುಳ್ನಕ್ಕು, ಧನ್ಯತೆಯ ಭಾವದಿಂದ ಮತ್ತೆ ಆರಾಮಾಗಿ ತಮ್ಮ ಕೆಲಸಕ್ಕೆ ಮರಳುವ ಸಹಜ ರೀತಿಯಿಂದ ನಾವು ಕಲಿಯುವುದು ಸಾಕಷ್ಟಿದೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.