ಪ್ರಾದೇಶಿಕ ಚಿತ್ರಗಳ ಮೇಲೆ ದಬ್ಬಾಳಿಕೆ

7

ಪ್ರಾದೇಶಿಕ ಚಿತ್ರಗಳ ಮೇಲೆ ದಬ್ಬಾಳಿಕೆ

ಗಂಗಾಧರ ಮೊದಲಿಯಾರ್
Published:
Updated:

ಸ್ಕರ್‌ ಪ್ರಶಸ್ತಿಗೆ ಗುಜರಾತಿ ಚಿತ್ರ ‘ಗುಡ್‌ರೋಡ್‌’ ಆಯ್ಕೆಯಾಗುವ ಮೂಲಕ ಪ್ರಾದೇಶಿಕ ಚಿತ್ರಗಳ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ. ಇಡೀ ಭಾರತೀಯ ಚಿತ್ರರಂಗ ಎಂದರೆ ನಾನೇ ಎಂದು, ಭಾರತೀಯ ಸಿನಿಮಾವನ್ನೇ ಗುತ್ತಿಗೆ ಹಿಡಿದಂತೆ ವರ್ತಿಸುವ ಬಾಲಿವುಡ್‌, ‘ಗುಡ್‌ರೋಡ್‌’ ಆಯ್ಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ‘ಲಂಚ್‌ ಬಾಕ್‌ಸ’ ಎಂಬ ಹಿಂದೀ ಚಿತ್ರಕ್ಕೆ ಸಿಗಬೇಕಾದ ಮಾನ್ಯತೆ, ಪ್ರಾದೇಶಿಕ ಭಾಷಾ ಚಿತ್ರವೊಂದಕ್ಕೆ ಸಂದಿದ್ದು ಬಾಲಿವುಡ್‌ ಜನರಿಗೆ ಸಹಿಸಲಸಾಧ್ಯವಾದ ಸಂಗತಿಯಾಗಿದ್ದು, ಇಡೀ ಬಾಲಿವುಡ್‌ ಅಚ್ಚರಿ ಮತ್ತು ಆಘಾತದಲ್ಲಿ ಮುಳುಗಿದೆ. ಆದರೆ, ಅಮಿತಾಭ್‌ ಬಚ್ಚನ್‌ ‘ಗುಡ್‌ರೋಡ್‌’ ತಂಡವನ್ನು ಅಭಿನಂದಿಸಿದ್ದಾರೆ.

‘ಆಸ್ಕರ್‌ ಪ್ರಶಸ್ತಿ ಪರಮಗುರಿಯಾಗಬಾರದು. ಆಸ್ಕರ್‌ ಪ್ರಶಸ್ತಿ ಪಡೆದ ಎಷ್ಟೋ ಚಿತ್ರಗಳಿಗಿಂತ ಅತ್ಯುತ್ತಮ ಚಿತ್ರಗಳು ಭಾರತದಲ್ಲಿ ತಯಾರಾಗುತ್ತವೆ. ಆಸ್ಕರ್‌ ಹಂಬಲ ಭಾರತೀಯ ಚಿತ್ರರಂಗದವರಿಗೆ ಬೇಡ’ ಎಂದು ಅವರು ಕಿವಿಮಾತನ್ನು ಈ ಹಿಂದೆ ಹೇಳಿದ್ದರು. ಆದರೂ ನಮ್ಮ ಸಿನಿಮಾ ಮಂದಿ ಹೇಗಾದರೂ ಮಾಡಿ ಆಸ್ಕರ್‌ ತೆಗೆದುಕೊಳ್ಳಬೇಕೆಂದು ಹಾತೊರೆಯುತ್ತಾರೆ.

ಈ ಬಾರಿ ಕನ್ನಡದ ಎರಡು ಚಿತ್ರಗಳಾದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮತ್ತು ‘ಲೂಸಿಯಾ’ ಸೇರಿದಂತೆ 22 ಚಿತ್ರಗಳು ಆಯ್ಕೆ ಸಮಿತಿ ಮುಂದೆ ಬಂದು ನಿಂತಿದ್ದವು. ಬಂಗಾಳಿ ಚಿತ್ರ ‘ಶಬ್ದೊ’, ಹಿಂದಿ ಚಿತ್ರಗಳಾದ ‘ಭಾಗ್‌ ಮಿಲ್ಖಾ ಭಾಗ್‌’, ‘ಇಂಗ್ಲಿಷ್‌ ವಿಂಗ್ಲಿಷ್‌’, ‘ಲಂಚ್‌ ಬಾಕ್ಸ್’ -– ಬೇರೆ ಬೇರೆ ಕಾರಣಗಳಿಂದ ಸ್ಪರ್ಧೆಗಿಳಿದಿದ್ದವು.ರಿತೇಶ್‌ಬಾತ್ರಾ ನಿರ್ದೇಶನದ ಚೊಚ್ಚಿಲ ಚಿತ್ರ ‘ಲಂಚ್‌ ಬಾಕ್ಸ್’ಗೆ ಲಾಬಿ ಇತ್ತು. ಅತಿ ಹೆಚ್ಚಿನ ನಿರೀಕ್ಷೆಯನ್ನು ಚಿತ್ರತಂಡ ಇಟ್ಟುಕೊಂಡಿತ್ತು. ಹೀಗೆ ನಿರೀಕ್ಷೆ ಇಟ್ಟುಕೊಂಡ ಬಾಲಿವುಡ್‌ ಚಿತ್ರರಂಗದವರಿಗೆ ಗುಡ್‌ರೋಡ್‌ನ ನಿರ್ದೇಶಕ ಜ್ಞಾನ್‌ಕೊರಿಯಾ ಹೆಸರೂ ಗೊತ್ತಿಲ್ಲ. ಕಳೆದ ವರ್ಷವಷ್ಟೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ ಎನ್ನುವ ಸಂಗತಿಯೂ ಗೊತ್ತಿಲ್ಲ. ‘ಗುಡ್‌ರೋಡ್‌’ ಹೆಸರನ್ನೇ ನಾವು ಕೇಳಿರಲಿಲ್ಲ ಎಂಬ ಕುಹಕ ಕೂಡ ಬಾಲಿವುಡ್‌ನಲ್ಲಿ ವ್ಯಕ್ತವಾಗಿದೆ.

ಇದು ಪ್ರಾದೇಶಿಕ ಭಾಷಾ ಚಿತ್ರಗಳ ಬಗ್ಗೆ, ಹಿಂದಿ ಚಿತ್ರರಂಗದವರಿಗೆ ಇರುವ ಅಸಡ್ಡೆಗೆ ಒಂದು ಉದಾಹರಣೆಯಂತಿದೆ. ಹಾಗೆ ನೋಡಿದರೆ ಪ್ರಾದೇಶಿಕ ಭಾಷಾ ಚಿತ್ರಗಳೇ ಭಾರತೀಯ ಸಿನಿಮಾದ ಅಂತಃಸತ್ವ. ಸಮಕಾಲೀನ ವಸ್ತುಗಳು ಪ್ರತಿಫಲನವಾಗುತ್ತಿರುವುದು, ಗ್ರಾಮೀಣ ಬನಿ ಎದ್ದು ಕಾಣುತ್ತಿರುವುದು ಪ್ರಾದೇಶಿಕ ಚಿತ್ರಗಳಲ್ಲೇ. ಆದರೆ ಭಾರತೀಯ ಚಿತ್ರರಂಗ ಎಂದರೆ, ಅದು ಹಿಂದಿ ಎನ್ನುವ ಭಾವನೆಯನ್ನು ಹೇರಲಾಗಿದೆ.ಹಾಲಿವುಡ್‌ ಚಿತ್ರಗಳು ವಿಶ್ವದ ಎಲ್ಲ ದೇಶಗಳ, ಭಾಷೆಗಳ ಸಿನಿಮಾಗಳ ಮೇಲೆ ಆಕ್ರಮಣ ಮಾಡಿ ಸ್ವಾಮ್ಯ ಸ್ಥಾಪಿಸುತ್ತಿರುವಂತೆ, ಹಿಂದಿ ಚಿತ್ರಗಳು ಭಾರತದ ಪ್ರಾದೇಶಿಕ ಭಾಷಾ ಚಿತ್ರಗಳ ಮೇಲೆ ದಾಳಿ ಮಾಡುತ್ತಿವೆ. ಇಂತಹ ಆಕ್ರಮಣಕಾರಿ ಧೋರಣೆಯಿಂದಾಗಿ ಉತ್ತರ ಭಾರತದ ಪ್ರಾದೇಶಿಕ ಭಾಷಾ ಚಿತ್ರರಂಗ ಅವಸಾನವಾಗುತ್ತಿದೆ, ಹಿಂದಿಯ ಈ ರೀತಿಯ ಅನ್ಯಾಕ್ರಮಣದಿಂದಾಗಿ, ಒಂದು ಕಾಲದಲ್ಲಿ ಮರಾಠಿ ಚಿತ್ರರಂಗವೇ ಸ್ಥಗಿತಗೊಳ್ಳುವ ಪರಿಸ್ಥಿತಿ ತಲೆದೋರಿತ್ತು.

ನಂತರ ಚೇತರಿಸಿಕೊಂಡು ಹಿಂದಿಯ ದಬ್ಬಾಳಿಕೆಯ ವಿರುದ್ಧ ಮರಾಠಿ ಚಿತ್ರರಂಗ ಸೆಟೆದೆದ್ದು ನಿಂತಿತು. ಅದೇ ರೀತಿಯಲ್ಲೇ ಗುಜರಾತಿ ಸಿನಿಮಾ ಕೂಡ ಜನಪದದ ಗಟ್ಟಿ ಸೊಗಡನ್ನು ತನ್ನ ಆಂತರ್ಯದಲ್ಲಿ ಅಡಗಿಸಿಕೊಂಡು, ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದು ಉಳಿದುಕೊಂಡಿದೆ.ತೊಂಬತ್ತರ ದಶಕದಲ್ಲಿ ಗುಜರಾತಿ ಸಿನಿಮಾ ಎಷ್ಟು ಪ್ರಬಲವಾಗಿತ್ತೆಂದರೆ, ಹಿಂದಿ ಚಿತ್ರಗಳಿಗೆ ಚಿತ್ರಮಂದಿರ ಸಿಗುವುದೇ ದುಸ್ತರವೆನಿಸಿತ್ತು. ಕನ್ನಡ ಚಲನಚಿತ್ರರಂಗ ಕಣ್ಣು ತೆರೆಯುವ ಎರಡು ವರ್ಷ ಮುನ್ನವೇ (1932) ಗುಜರಾತಿ ಭಾಷೆಯಲ್ಲಿ ಮೊದಲ ಕಥಾ ಚಿತ್ರವಾಗಿ ‘ನರಸಿನ್ಹಮೆಹ್ತಾ’ ಬಿಡುಗಡೆ ಆಯಿತು. ಮುಂಬೈನ ವೆಸ್ಟ್ ಎಂಡ್‌ ಸಿನಿಮಾದಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ನಾನೂಭಾಯ್‌ ವಕೀಲ್‌ ನಿರ್ದೇಶಿಸಿದ್ದರು. ಮರಾಠಿ ನಟ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದುದು ವಿಶೇಷ.

1934ರಲ್ಲಿ ವಿಜಯ್‌ಭಟ್‌ ಎನ್ನುವವರು ಸಂತ ಮಹಾತ್ಮ ಮೂಲದಾಸ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿ ‘ಸಂಸಾರ ಲೀಲಾ’ ಎಂಬ ಚಿತ್ರವನ್ನು ತಯಾರಿಸಿದರು. 1934ರಲ್ಲಿ ಕನ್ನಡವೂ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಚಿತ್ರತಯಾರಿಕೆ ಆರಂಭವಾಗಿ ಬಿಟ್ಟಿತ್ತು. ರಂಗಭೂಮಿಯ ಪ್ರಭಾವ ಹೆಚ್ಚಾಗಿಯೇ ಇತ್ತು. ಭಾರತದ ಇತರ ಕಡೆ ನಡೆದಂತೆಯೇ ಗುಜರಾತಿನಲ್ಲೂ ಪೌರಾಣಿಕ ಮತ್ತು ಭಕ್ತಿ ಪ್ರಧಾನ ಚಿತ್ರಗಳೇ ಅತಿ ಹೆಚ್ಚಾಗಿ ತಯಾರಾದವು.1940ರಲ್ಲಿ ಚಂದೂಲಾಲ್‌ ಶಾ ಎನ್ನುವವರು ‘ಅಚ್ಯುತ್‌’ ಎನ್ನುವ ಚಿತ್ರವನ್ನು ನಿಮಿರ್ಸಿದರು. ಅಂದು ಸಾಮಾಜಿಕ ಪಿಡುಗಿನಂತಿದ್ದ ಅಸ್ಪೃಶ್ಯತೆಯನ್ನು ವಸ್ತುವಾಗುಳ್ಳ ಕತೆ ತಾಂತ್ರಿಕವಾಗಿಯೂ ಅಚ್ಚುಕಟ್ಟಾಗಿತ್ತು. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೈಲುಗಲ್ಲು ಎಂದೇ ಭಾವಿಸಲಾಗಿದೆ. 1945ರಲ್ಲಿ ವಿಷ್ಣುಕುಮಾರ್‌ ವ್ಯಾಸ್‌ ಎನ್ನುವವರು ನಿರ್ಮಿಸಿದ ‘ರಂಕಾದೇವಿ’ ಭಾರೀ ಯಶಸ್ಸು ಪಡೆಯಿತು. ಐತಿಹಾಸಿಕ ಹಾಗೂ ಜನಪದದ ಸಮ್ಮಿಶ್ರಣದಂತಿದ್ದ ಕತೆಯನ್ನುಳ್ಳ ‘ರಾಕಾದೇವಿ’ ಗುಜರಾತೀ ಚಿತ್ರರಂಗದ ಭವಿಷ್ಯವನ್ನೇ ಬದಲಿಸಿತು.

1947ರಲ್ಲಿ ತೆರೆಗೆ ಬಂದ ‘ಗುಣಸುಂದರಿ’ ಸಾಮಾಜಿಕ ಚಿತ್ರ. ನಿರೂಪಾರಾಯ್‌ ಈ ಚಿತ್ರದ ಮೂಲಕ ಯಶಸ್ಸಿನ ಏಣಿ ಏರಿದರು. 1948ರಲ್ಲಿ ನಿರ್ದೇಶಕ ಮನಹರ್‌ ರಾಸ್‌ಕಪೂರ್‌, ಕಲಾವಿದ ಅರವಿಂದ ಪಾಂಡ್ಯ ಮತ್ತು ಚಂಪಸೀಭಾಯ್‌ ನಾಗ್ಡಾ ಗುಜರಾತಿ ಸಿನಿಮಾಕ್ಕೆ ಭದ್ರ ಬುನಾದಿ ಹಾಕಿದರು. 1960ರಲ್ಲಿ ಗುಜರಾತ್‌ ರಾಜ್ಯ ರಚನೆಯಾದ ನಂತರ ಬಂದ ಮೊದಲ ಚಿತ್ರ ಗುಣವಂತರಾಯ್‌ ಆಚಾರ್ಯ ಅವರ ಕಾದಂಬರಿ ಆಧರಿಸಿದ ‘ಕಾಡು ಮಖಾನಿ’ ವಸ್ತುವಿನ ಜಾನಪದೀಯ ಗುಣದಿಂದಾಗಿ ಭಾರೀ ಯಶಸ್ಸು ಗಳಿಸಿತು. ಜನಪದ ಚಿತ್ರಗಳ ಟ್ರೆಂಡ್‌ ಅಲ್ಲಿ ಆರಂಭವಾಯಿತು. ಆನಂತರದ ದಿನಗಳಲ್ಲಿ ಹಿಂದೀ ಚಿತ್ರರಂಗದ ನಟರೂ ಕೂಡ ಗುಜರಾತೀ ಚಲನ ಚಿತ್ರಗಳಲ್ಲಿ ಅಭಿನಯಿಸಲಾರಂಭಿಸಿದರು. ಹಿಂದಿ ಚಿತ್ರ ನಟ ರಾಜೇಂದ್ರ ಕುಮಾರ್‌ ಅಭಿನಯಿಸಿದ ‘ಮೆಹಂದಿ ರಂಗ್‌ಲಗ್ಯಾ’ ಭರ್ಜರಿ ಯಶಸ್ಸನ್ನು ಗಳಿಸಿತು.1970ರಲ್ಲಿ ಭಾರತೀಯ ಚಿತ್ರರಂಗದಲ್ಲಿ ‘ಹೊಸ ಅಲೆ’ಯ ಕಾಲ, ಗುಜರಾತಿ ಚಿತ್ರರಂಗ ಕೂಡ, ಯುವ ನಿರ್ದೇಶಕರಿಗೆ ಬಾಗಿಲು ತೆರೆಯಿತು. ಕಾಂತಿಲಾಲ್‌ ರಾಥೋಡ್‌ ನಿರ್ದೇಶಿಸಿದ ‘ಕಂಕು’ ರಾಷ್ಟ್ರೀಯ ಪ್ರಶಸ್ತಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಪಡೆಯಿತು. ಆದರೂ, ಮುಖ್ಯವಾಹಿನಿ ಸಿನಿಮಾಗಳು ಜನಪದ ಕತೆ, ಹಾಡು, ನೃತ್ಯ ಇವುಗಳನ್ನು ಬಿಡದೆ ಅದನ್ನು ತೆರೆಯ ಮೇಲೆ ಮೂಡಿಸುತ್ತಾ ಬಂದರು.

ಈ ಸಮಯದಲ್ಲಿ ಸರ್ಕಾರವೂ ಚಿತ್ರರಂಗದ ನೆರವಿಗೆ ಬಂದಿದೆ. ಗುಜರಾತಿ ಚಲನಚಿತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿ, ಪ್ರಶಸ್ತಿ, ಹೀಗೆ ಸಹಾಯಹಸ್ತ ಚಾಚಿ ನೆರವಿಗೆ ಬಂದಿದೆ. ಗುಜರಾತಿನ ಜನಪದ ಸೊಗಡು ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಕೇತನ್‌ ಮೆಹ್ತಾ ನಿರ್ದೇಶನದ ‘ಭಾವ್ನಿ ಭವಾಯ್‌’. ರಾಷ್ಟ್ರೀಯ ಪ್ರಶಸ್ತಿ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೆಲ್ಲಾ ಪಡೆದ ಈ ಚಿತ್ರ ಸಾರ್ವಕಾಲಿಕವಾಗಿ ಅತ್ಯುತ್ತಮ ಚಿತ್ರ.

ಈಗ ಗುಡ್‌ರೋಡ್‌ ಮೂಲಕ ಮತ್ತೊಮ್ಮೆ ಹೊಸ ಹೊಳವನ್ನು ಗುಜರಾತಿ ಚಿತ್ರರಂಗ ನೀಡಿದೆ. ಇಂತಹ ಹಿನ್ನೆಲೆ ಹೊಂದಿರುವ ಗುಜರಾತಿ ಚಿತ್ರರಂಗದ ಬಗ್ಗೆ ಬಾಲಿವುಡ್‌ ಜನ ಅಪಹಾಸ್ಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಭಾರತದಲ್ಲೇ ಸ್ವರ್ಣಕಮಲ ಪ್ರಶಸ್ತಿಗೆ ಪೈಪೋಟಿ ಆರಂಭವಾದಾಗ ಬಂಗಾಳಿ, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ ಚಿತ್ರಗಳೇ ಮುಂದೆ ಇರುತ್ತವೆ. ಹಿಂದಿಗೆ ಅಂತಹ ಗುಣ ಇಲ್ಲ.ಹಿಂದೀ ಚಿತ್ರರಂಗದಲ್ಲಿ ಕಲೆಗಿಂತ, ಹಣವೇ ಮುಖ್ಯ. ಹಣದ ಮೂಲಕ ಅವರು ಬಲಾಢ್ಯರಾಗಿದ್ದಾರೆಯೇ ಹೊರತು ಕಲಾತ್ಮಕವಾಗಿ ಅಲ್ಲ.

‘ದಿ ಗುಡ್‌ ರೋಡ್‌’ ಚಿತ್ರವೇನೋ ಆಸ್ಕರ್‌ಗೆ ಅತ್ಯುತ್ತಮ ವಿದೇಶಿ ಚಿತ್ರ ಎಂಬ ವಿಭಾಗದ ಸ್ಪರ್ಧೆಗೆ ತೆರಳಿದೆ. ಕನ್ನಡ ‘ಸಂಗೊಳ್ಳಿ ರಾಯಣ್ಣ’ನಾಗಲಿ ‘ಲೂಸಿಯಾ’ ಆಗಲಿ ಯಾವುದೇ ಚಿತ್ರ ಹೋಗಿದ್ದರೂ ಭಾರತದ ಚಿತ್ರವೊಂದಕ್ಕೆ ಅಷ್ಟು ಸುಲಭವಾಗಿ ಆಸ್ಕರ್‌ ಪ್ರತಿಮೆ ಕೊಟ್ಟು ಕಳುಹಿಸುತ್ತಾರೆ ಎಂದು ನಾನು ನಂಬಿಲ್ಲ.

ಆಸ್ಕರ್‌ ತೀರ್ಪುಗಾರರ ಪ್ರಕಾರ ಭಾರತದಲ್ಲಿ ಚಲನಚಿತ್ರ ನಿರ್ಮಾಣವೇ ಕಳಪೆ! ಭಾರತದ ವಿಕೃತಿಗಳನ್ನು ಚಿತ್ರಿಸಿದ್ದರೆ ಅಂತಹದ್ದಕ್ಕೆ ಸ್ವಲ್ಪ ಆಸಕ್ತಿ ತೋರಿಸುತ್ತಾರೆ. ಭಾರತ ಮುಂದುವರೆದ ದೇಶ ಎನ್ನುವುದನ್ನು ಅವರು ಒಪ್ಪುವುದೇ ಇಲ್ಲ. ಅಮೆರಿಕ, ಬ್ರಿಟನ್‌ ಬಿಟ್ಟರೆ ಅವರಿಗೆ ಬೇರೇನೂ ಕಾಣಿಸುವುದಿಲ್ಲ.ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ನೂರು ವರ್ಷದ ಇತಿಹಾಸದಲ್ಲಿ ಆಸ್ಕರ್‌ಗೆ  ಮಕರಣವಾಗಿರುವುದು ನಾಲ್ಕೇ ಭಾರತೀಯ ಚಿತ್ರಗಳು ಎಂದರೆ ನಂಬುತ್ತೀರಾ? ಮದರ್‌ ಇಂಡಿಯಾ (1957), ಸಲಾಂ ಬಾಂಬೆ (1988) ಮತ್ತು ಲಗಾನ್‌ (2001), ಈಗ ಗುಡ್‌ರೋಡ್‌.

ಈ ನಾಲ್ಕು ಚಿತ್ರಗಳು ಗೆಲ್ಲಲಿಲ್ಲ. ಅಮೀರ್‌ಖಾನ್‌ರ ‘ಲಗಾನ್‌’ ಅಂತೂ ಎಷ್ಟೊಂದು ನಿರೀಕ್ಷೆ ಹುಟ್ಟಿಸಿತ್ತೆಂದರೆ, ಅಮೀರ್‌ಖಾನ್‌ ಆಸ್ಕರ್‌ ಪ್ರತಿಮೆಯನ್ನು ಕೈಯಲ್ಲಿ ಹಿಡಿದುಕೊಂಡೇ ಬರುತ್ತಾರೆ ಎಂಬ ಭ್ರಮೆಯನ್ನು ಮೂಡಿಸಲಾಗಿತ್ತು. ಭಾರತೀಯ ಚಿತ್ರರಂಗದ ಜನ ವಾಸ್ತವ ಸ್ಥಿತಿಯನ್ನು ಅರಿಯಲಿ. ನಮ್ಮ ಜನ ಮೆಚ್ಚಿಕೊಂಡರೆ ಅದೇ ನಿಜವಾದ ಆಸ್ಕರ್‌ ಎಂದು ಸಂಭ್ರಮಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry