ಪ್ರಾದೇಶಿಕ ಸಿನಿಮಾಗಳನ್ನು ಕೊಂದವರಾರು?

6

ಪ್ರಾದೇಶಿಕ ಸಿನಿಮಾಗಳನ್ನು ಕೊಂದವರಾರು?

ಗಂಗಾಧರ ಮೊದಲಿಯಾರ್
Published:
Updated:

 


ಭಾರತೀಯ ಸಿನಿಮಾ ಎಂದರೆ ಯಾವುದು? ಎನ್ನುವುದೊಂದು ಪ್ರಶ್ನೆ ಈಗ ಸಿನಿಮಾ ವಲಯದಲ್ಲಿ ಸದ್ದಿಲ್ಲದೆ ಚರ್ಚೆಗೆ ಒಳಗಾಗುತ್ತಿದೆ. ಹಿಂದಿ ಸಿನಿಮಾಗಳನ್ನು ಮಾತ್ರ `ಭಾರತೀಯ ಸಿನಿಮಾ ಎಂದು ಪರಿಗಣಿಸುತ್ತಿರುವ ಪರಿಪಾಠಕ್ಕೆ ನನ್ನ ವಿರೋಧವಿದೆ' ಎಂದು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಗಿರೀಶ್‌ಕಾಸರವಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಸಮಂಜಸ ಹಾಗೂ ಚರ್ಚೆಗೆ ಸಕಾಲಿಕ ವೇದಿಕೆಯನ್ನೊದಗಿಸಿದೆ.ದಕ್ಷಿಣ ಭಾರತೀಯ ಸಿನಿಮಾ ಎಂದರೆ ತಮಿಳು ಚಿತ್ರಗಳು ಎನ್ನುವ ಕಲ್ಪನೆ ಇರುವ ಹಾಗೆ ಭಾರತೀಯ ಚಿತ್ರರಂಗ ಎಂದರೆ ಅದು ಹಿಂದಿ ಸಿನಿಮಾಗಳು ಎನ್ನುವ ಆಗಿದೆ. ಹಿಂದಿಗೆ ಈ ರೀತಿಯ ಆಕ್ರಮಣಕಾರಿ ಪ್ರವೃತ್ತಿ ಇರುವುದರಿಂದಲೇ ಇಂದು ಪ್ರಾದೇಶಿಕ ಭಾಷಾ ಸಿನಿಮಾಗಳನ್ನು ಅದು ನುಂಗಿ ನೊಣೆದು ಅವನ್ನು ಮೂಲೆಗುಂಪಾಗಿಸಿದೆ.

 

ಹಾಗೆ ನೋಡಿದರೆ ಹಿಂದಿ ಭಾಷೆಗೆ ಒಂದು ಪ್ರದೇಶ ಎನ್ನುವುದೇ ಇಲ್ಲ. ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ ಭಾಷೆಗಳು ಒಂದೊಂದು ರಾಜ್ಯದಲ್ಲಾದರೂ ನೆಲೆಯೂರಿವೆ. ರಾಷ್ಟ್ರಭಾಷೆ ಎನಿಸಿಕೊಂಡರೂ ಹಿಂದಿಗೆ ಒಂದು ಪ್ರಾಂತ್ಯವಿಲ್ಲ. ಆದರೂ ಹಿಂದಿ ಬಲ್ಲವರು ಆಯಾ ಪ್ರದೇಶದ ಭಾಷೆಗಳ ಸಮ್ಮಿಶ್ರಣದೊಂದಿಗೆ ದೇಶವ್ಯಾಪಿಯಾಗಿ ಭಾಷೆಯನ್ನು ಅರ್ಥೈಸಿಕೊಳ್ಳಬಲ್ಲರು. ಈ ಕಾರಣದಿಂದ ಹಿಂದೀ ಸಿನಿಮಾಗಳು ದೇಶವ್ಯಾಪಿ ಮಾರುಕಟ್ಟೆನ್ನೊಂದಲು ಸಾಧ್ಯವಾಗಿದೆ.ಈ ಸಾಮರ್ಥ್ಯವನ್ನೇ ಆಧಾರವಾಗಿಟ್ಟುಕೊಂಡು ಭಾರತೀಯ ಸಿನಿಮಾ ಎಂದರೆ ಹಿಂದೀ ಎನ್ನುವ ಭಾವನೆಗಳನ್ನು ಮೂಡಿಸಿರುವುದು, ಒಂದು ರೀತಿಯಲ್ಲಿ ತಪ್ಪು ತಿಳಿವಳಿಕೆ. ಆದರೆ ಗಿರೀಶ್ ಕಾಸರವಳ್ಳಿ ಅವರು ಗೋವಾ ಚಲನಚಿತ್ರೋತ್ಸವದಲ್ಲಿ ಅಭಿಪ್ರಾಯಪಟ್ಟಂತೆ ಇದು ಮಾಧ್ಯಮಗಳಿಂದಾಗಿರುವ ಅಪಚಾರ ಎನ್ನುವ ಮಾತು ಪ್ರಚಾರದ ದೃಷ್ಟಿಕೋನದಿಂದ ಸರಿಯಾದ ಅಭಿಪ್ರಾಯವೇ ಹೊರತು, ವಾಸ್ತವ ಸತ್ಯ ಎನಿಸುವುದಿಲ್ಲ. ಕಾನ್ಸ್, ಬರ್ಲಿನ್ ಮತ್ತಿತರ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವ ಹಿಂದಿ ಸಿನಿಮಾಗಳನ್ನಷ್ಟೇ ಮಾಧ್ಯಮಗಳು ಗುರುತಿಸುತ್ತವೆ. ಅಂತಹವಕ್ಕೆ ಭಾರೀ ಪ್ರಚಾರ ನೀಡುತ್ತವೆ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತೀಯ ಸಿನಿಮಾ ಎಂದರೆ ಹಿಂದೀ ಸಿನಿಮಾ ಎಂಬ ಭಾವನೆ ಬೆಳೆದಿದೆ.ಷಾಜಿ ಕರಣ್, ಕೌಶಿಕ್ ಬ್ಯಾನರ್ಜಿ ಅವರಂತಹ ಪ್ರತಿಭಾವಂತ ನಿರ್ದೇಶಕರ ಚಿತ್ರಗಳಿಗೆ ಕೂಡ ಅಂತರರಾಷ್ಟ್ರೀಯ ಮನ್ನಣೆ ದೊರಕಿದೆ ಆದರೆ ಮಾಧ್ಯಮಗಳು ಇದನ್ನು ಉಪೇಕ್ಷಿಸಿವೆ, ಎಲ್ಲ ಭಾರತೀಯ ಸಿನಿಮಾಗಳಿಗೂ ಸಮಾನ ಬೆಂಬಲ ಮತ್ತು ಪ್ರಚಾರ ಸಿಗಬೇಕು” ಎಂದು ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಡುತ್ತಾರೆ. ಇದನ್ನು ಮಾಧ್ಯಮಗಳಿಂದಾದ ಉಪೇಕ್ಷೆ ಎಂದು ಹೇಳುವುದಕ್ಕಿಂತ ಹಿಂದಿ ಚಿತ್ರರಂಗದ ಯಾಜಮಾನ್ಯ ಪ್ರವೃತ್ತಿಯಿಂದಾಗಿರುವ ಹತ್ತಿಕ್ಕುವ ಕೆಲಸ ಎಂದು ಹೇಳಬಹುದು ಎನಿಸುತ್ತದೆ.

 

 ಷಾಜಿ ಕರಣ್, ಕೌಶಿಕ್ ಬ್ಯಾನರ್ಜಿ ಅವರಷ್ಟೇ ಅಲ್ಲ ಗಿರೀಶ್‌ಕಾಸರವಳ್ಳಿ ಅವರ ಸಿನಿಮಾಗಳ ಬಗ್ಗೆಯೂ ಇದೇ ಅನ್ಯಾಯ ಆಗಿದೆ. ಕರ್ನಾಟಕದಲ್ಲಿ ನಾವು ಗಿರೀಶ್‌ಕಾಸರವಳ್ಳಿ ಅವರ ಸಿನಿಮಾಗಳನ್ನು ಗೌರವಿಸುತ್ತೇವೆ. ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ಅವರು ನೀಡಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಸಿನಿಮಾಗಳ ಬಗ್ಗೆ ಚರ್ಚೆಯಾಗಿರುವುದು ಕಡಿಮೆ. ಒಂದು ಅರ್ಥದಲ್ಲಿ ಇದು ಮಾಧ್ಯಮಗಳಿಂದಲೂ ಆಗಿರುವ ಅಪಚಾರ.ಪ್ರಾದೇಶಿಕ ಭಾಷಾ ಚಿತ್ರಗಳ ಬೆಳವಣಿಗೆ ಬಗ್ಗೆ ಅರಿವು ಇಲ್ಲದಿರುವುದು. ಭಾರತದ ಇತರ ಭಾಷಾ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸದಿರುವುದು. ಇತರ ಭಾಷಾ ಪರ್ಯಾಯ ಚಿತ್ರಗಳ ಸಾಧನೆ ದೇಶದ ಇತರ ಭಾಗಗಳಿಗೆ ತಲುಪದಿರುವುದು ಇಂತಹ ಸಂವಹನದ ಕೊರತೆಯಿಂದಾಗಿ ಹಿನ್ನಡೆಯಾಗಿದೆ.ಇಲ್ಲದಿದ್ದರೆ ಸಂಸ್ಕಾರ, ಘಟಶ್ರಾದ್ಧ, ಹಂಸಗೀತೆ, ತಬರನಕಥೆ, ದ್ವೀಪ, ತಾಯಿಸಾಹೇಬ ಮೊದಲಾದ ಚಿತ್ರಗಳು ಜಗತ್ತಿನ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳದೇ ಇರುತ್ತಿರಲಿಲ್ಲ. ವಾಣಿಜ್ಯ ಚಿತ್ರಗಳದೇ ಮೇಲುಗೈ ಆಗುತ್ತಿದ್ದ ಸಮಯದಲ್ಲಿ ಅಭಿವ್ಯಕ್ತಿ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಆರಂಭವಾದ ಪರ್ಯಾಯ ಸಿನಿಮಾ, (ಹೊಸಅಲೆ) ನಿರ್ಮಾಣ ಕಾರ‌್ಯ ಪ್ರಾದೇಶಿಕ ಭಾಷಾ ಚಿತ್ರರಂಗದಲ್ಲಿ ಆದಂತೆ ಹಿಂದೀ ಸಿನಿಮಾರಂಗದಲ್ಲಿ ಆಗಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಕನ್ನಡ, ಮಲಯಾಳಂ ಮತ್ತು ಪಶ್ಚಿಮ ಬಂಗಾಳ, ಒಡಿಶಾ ಚಿತ್ರರಂಗದಲ್ಲಿ ತಯಾರಾದ ಹೊಸ ದೃಷ್ಟಿಕೋನದ ಚಿತ್ರಗಳು, ಭಾರತೀಯ ಚಿತ್ರರಂಗದ ಸೃಜನಶೀಲತೆಯನ್ನು ಉಳಿಸಿವೆ. ಅದನ್ನು ಕಲೆಯಾಗಿಯೇ ಉಳಿಸಲು ಯತ್ನಿಸುತ್ತಿವೆ. ಆದರೆ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳನ್ನು ಶಿಫಾರಸು ಮಾಡುವ ಸಂದರ್ಭ ಬಂದಾಗ ಹಿಂದೀ ಚಿತ್ರಗಳಿಗೇ ಆದ್ಯತೆಯಿರುತ್ತದೆ.ದೆಹಲಿಯಲ್ಲಿ ಕುಳಿತು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಿನಿಮಾ ನಿರ್ದೇಶನಾಲಯಕ್ಕೆ ಕಾಣುವುದು ಹಿಂದೀ ಚಿತ್ರಗಳಷ್ಟೇ, ಹಿಂದೀ ಚಿತ್ರರಂಗದ ಲಾಬಿ ಅಷ್ಟರಮಟ್ಟಿಗಿದೆ. ಲಗಾನ್ ಚಿತ್ರ ಅವರ ಕಣ್ಣಿಗೆ ಕಾಣುತ್ತದೆ. ಅದೇ ವಸ್ತುವನ್ನೊಳಗೊಂಡ “ಹಗಲು ವೇಷ” ಅವರ ಗಮನಕ್ಕೇ ಬರುವುದಿಲ್ಲ. ಲಾರೆಲ್ ಹಾರ್ಡಿ ಚಿತ್ರಗಳಂತೆ ಕಾಣುವ `ಬರ್ಫಿ' ಚಿತ್ರ ಅವರಿಗೆ ಅತ್ಯುತ್ತಮ ಚಿತ್ರವಾಗಿ ಕಾಣಿಸುತ್ತದೆ.ಜಾಗತೀಕರಣದ ನಂತರ ಎಲ್ಲ ವಲಯಗಳಲ್ಲಿ ಆಗುತ್ತಿರುವ ಸ್ಥಿತ್ಯಂತರ ಹಾಗೂ ಅದರ ಪರಿಣಾಮಗಳನ್ನು ಚಿತ್ರೀಕರಿಸಿರುವ ”ಕೂರ್ಮಾವತಾರ” ಅವರ ಕಣ್ಣಿಗೆ ಬೀಳುವುದೇ ಇಲ್ಲ. ಪ್ರಾದೇಶಿಕ ಭಾಷಾ ನಿರ್ಮಾಪಕರು ನಮ್ಮ ಚಿತ್ರ ಆಸ್ಕರ್‌ಗೆ ಶಿಫಾರಸ್ಸಾಗಿದೆ ಎಂದು ಕನವರಿಸಿಕೊಂಡದ್ದಷ್ಟೇ ಲಾಭ. ಹಿಂದಿ ಭಾಷಿಗ ನಿರ್ಮಾಪಕರ ಲಾಬಿಯ ಮುಂದೆ ಪ್ರಾದೇಶಿಕ ಭಾಷಾ ಸಿನಿಮಾಗಳು ಸೊರಗಿದ್ದು ಹೀಗೆ.

 

ಇದಿಷ್ಟೇ ಅಲ್ಲ. ಹಿಂದೀ ಚಿತ್ರಗಳು ಪ್ರಾದೇಶಿಕ ಚಿತ್ರಗಳ ಆಪೋಶನ ತೆಗೆದುಕೊಳ್ಳುತ್ತಿವೆ. 1960ರಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ವಿರೋಧಿ ಚಳವಳಿ ಆರಂಭವಾದದ್ದೇ ಹಿಂದೀ ಚಿತ್ರಗಳ ಹಾವಳಿಯಿಂದಾಗಿ. ಇಡೀ ಮೆಜೆಸ್ಟಿಕ್ ಪ್ರದೇಶದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಎಲ್ಲಿ ಸಿಗುತ್ತಿದ್ದವು? ಹಿಂದಿ ನಂತರದ ಸ್ಥಾನ ತಮಿಳಿನದ್ದಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗ ಅವಸಾನವಾಗುವ ಸ್ಥಿತಿಗೆ ಬಂದು ತಲುಪಿತ್ತು.ಆಗ ನಡೆದ ಹಿಂದಿ ವಿರೋಧಿ ಚಳವಳಿಯಿಂದಾಗಿ ರಾಜ್ಯದಲ್ಲೂ, ತಮಿಳುನಾಡಿನಲ್ಲೂ ಹಿಂದಿ ಚಿತ್ರಗಳನ್ನು ಯಶಸ್ವಿಯಾಗಿ ನಿಗ್ರಹಿಸಲು ಸಾಧ್ಯವಾಯಿತು. ಇಂದಿನ ಪರಿಸ್ಥಿತಿಯನ್ನೇ ನೋಡಿ. ಹಿಂದಿ ಚಿತ್ರಗಳು ಮತ್ತೆ ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಕಂಟಕವಾಗಿಯೇ ಪರಿಣಮಿಸುತ್ತಿವೆ. `ಜಬ್ ತಕ್ ಹೈ ಜಾನ್' ಚಿತ್ರ ಬಿಡುಗಡೆಯಾದಾಗ ಅದರ ಮುಂದೆ ಸ್ಪರ್ಧೆಗೆ ನಿಲ್ಲಲಾಗದೆ ನಾಲ್ಕು ಕನ್ನಡ ಚಿತ್ರಗಳು ಸೋತು ಹೋದವು.“ತಲಾಶ್‌” ಬಿಡುಗಡೆಯಾದ ದಿನದಂದೇ ಬಿಡುಗಡೆಯಾದ ಮೂರು ಕನ್ನಡ ಚಿತ್ರಗಳು, ತಲಾಶ್‌ನ ಒಂದು ದಿನದ ಗಳಿಕೆಯನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲ, ದೇಶದಲ್ಲೇ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಹಿಂದೀ ಚಿತ್ರಗಳು ನೆಲಸಮ ಮಾಡುತ್ತಿವೆ. ಮುಂಬೈ ನಗರವೇ ಹಿಂದೀ ಚಿತ್ರರಂಗದ ನೆಲೆ ಎಂದು ಮರಾಠಿ ಚಿತ್ರರಂಗದ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಹಿಂದೀ ಚಿತ್ರರಂಗ, ಮರಾಠೀ ಚಿತ್ರಗಳಿಗೇ ನೆಲೆಯಿಲ್ಲದಂತೆ ಮಾಡಿತು.ಮಹಾರಾಷ್ಟ್ರದ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಪೈಕಿ ಒಂದು ಮಂದಿರವನ್ನು ಮರಾಠೀ ಚಿತ್ರಗಳಿಗೇ ಮೀಸಲಿಡಬೇಕೆಂದು ಮಹಾರಾಷ್ಟ್ರ ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಮರಾಠಿ ಚಿತ್ರಗಳು ಉಸಿರಿಡಿದುಕೊಂಡಿವೆ. ಕರ್ನಾಟಕದಲ್ಲಿ ನವೆಂಬರ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ, ವರ್ಷಕ್ಕೆ 12 ವಾರ ಎಲ್ಲ ಚಿತ್ರಮಂದಿರಗಳೂ ಕನ್ನಡ ಚಿತ್ರಗಳ ಪ್ರದರ್ಶನವನ್ನು ಕಡ್ಡಾಯವಾಗಿ ಮಾಡಬೇಕೆಂಬ ನಿಯಮ, ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗಬೇಕೆಂಬ ನಿಯಮಗಳೆಲ್ಲ ಗಾಳಿಗೆ ತೂರಿ ಹೋಗಿ ನಾವೀಗ ಹಿಂದೀ ಚಿತ್ರಗಳಿಗೆ ಮಣೆ ಹಾಕಿದ್ದೇವೆ.

 

ಹಿಂದಿಯಲ್ಲಿ ತೆರೆಗೆ ಬರುತ್ತಿರುವ ಬಹುತೇಕ ಚಿತ್ರಗಳು ತೆಲುಗು, ತಮಿಳು ಭಾಷಾ ಚಿತ್ರಗಳ ರೀಮೇಕ್. ಅಲ್ಲಿ ದುಡಿಯುತ್ತಿರುವ ತಂತ್ರಜ್ಞರಲ್ಲಿ ಬಹುಪಾಲು ಮಂದಿ ದಕ್ಷಿಣ ಭಾರತೀಯರೇ. ನೃತ್ಯ ಕಲಾವಿದರು, ತಾಂತ್ರಿಕ ನಿರ್ದೇಶಕರು ಎಲ್ಲರೂ ದಕ್ಷಿಣ ಭಾರತದಿಂದ ಆಮದಾದವರು. ಆದರೂ ಅವರ ಅದ್ದೂರಿತನದಿಂದಾಗಿ ನಾವು ಅದಕ್ಕೆ ಬಲಿಯಾಗುತ್ತಿದ್ದೇವೆ. ಹಿಂದೀ ಸಿನಿಮಾ ತಯಾರಿಸುವಾಗಲೇ ನಿರ್ಮಾಪಕರು ಅವರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಮುದ್ರದಾಚೆಗೂ ಲೆಕ್ಕ ಹಾಕುತ್ತಾರೆ.ಖಾನ್‌ಗಳು, ಕೈಫ್‌ಗಳಿದ್ದರೆ ಹೇಗೆ ಮಾರುಕಟ್ಟೆ ವಿಸ್ತರಿಸಬಹುದೆಂದು ಲೆಕ್ಕಹಾಕುತ್ತಾರೆ. ದೇಶಿಯ ಮಾರುಕಟ್ಟೆಯಲ್ಲದೆ, ಈಗ ಕಾರ್ಪೊರೇಟ್ ಕಂಪೆನಿಗಳೂ ಕೂಡ ಹಿಂದೀ ಸಿನಿಮಾ ತಯಾರಿಕೆಗೆ ಕೈಹಾಕಿವೆ. ಅಂತರರಾಷ್ಟ್ರೀಯ ಹಾಗೂ ಅನಿವಾಸಿ ಭಾರತೀಯ ಇತ್ಯಾದಿ ವಲಯಗಳ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದೀ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳು ಅನಾಥವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry