ಪ್ರೀತಿಯ ಸಮುದ್ರ

7

ಪ್ರೀತಿಯ ಸಮುದ್ರ

ಗುರುರಾಜ ಕರ್ಜಗಿ
Published:
Updated:

ಈ ಘಟನೆ ನಡೆದದ್ದು ನೌಖಾಲಿಯಲ್ಲಿ, ಸ್ವಾತಂತ್ರ್ಯದ ಸಂಭ್ರಮದ ಜೊತೆಗೆ ಭೀಕರವಾಗಿ ನುಗ್ಗಿ ಬಂದ ಕೋಮು ಗಲಭೆ ಆ ಪ್ರದೇಶದ ಜನರನ್ನು ನಿರಾಸೆಯ ಅಂಚಿಗೆ ದೂಡಿತ್ತು.ಅವರಿಗೆ ಧೈರ್ಯ, ಸಾಂತ್ವನ ನೀಡಲು ಮಹಾತ್ಮ ಗಾಂಧಿ, ನೌಖಾಲಿಯ ಸುತ್ತ ಮುತ್ತಲಿನ ಹಳ್ಳಿಗಳಿಗೆ ನಡೆದುಕೊಂಡೇ ಹೋಗುತ್ತಿದ್ದರು. ಸೂರ್ಯೋದಯವಾದೊಡನೆ ಒಂದು ಹಳ್ಳಿಯಿಂದ ಹೊರಟು ದಾರಿಯಲ್ಲಿ ಮನೆ ಮನೆಗಳನ್ನು ಸಂದರ್ಶಿಸಿ ಸಂಜೆಯ ಹೊತ್ತಿಗೆ ಮತ್ತೊಂದು ಹಳ್ಳಿಯಲ್ಲಿ ತಂಗುತ್ತಿದ್ದರು. ಅಲ್ಲಿ ತಲುಪಿದೊಡನೆ ತಮ್ಮ ಕೆಲಸಗಳನ್ನು ಪೂರೈಸಿ ನಂತರ ಸ್ನಾನ ಮಾಡುವರು. ದೂಳಿನಲ್ಲಿ, ಬರಿಗಾಲಿನಲ್ಲಿ ನಡೆದಿದ್ದರಿಂದ ಕಾಲೆಲ್ಲ ಕೊಳೆಯಾಗಿರುತ್ತಿದ್ದವು. ಕಾಲುಗಳನ್ನು ತಿಕ್ಕಿಕೊಳ್ಳಲು ಅವರೊಂದು ಒರಟು ಕಲ್ಲನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು. ಅದು ಅವರ ಬಳಿ ಇದ್ದು ಇಪ್ಪತ್ತು ವರ್ಷಗಳೇ ಆಗಿದ್ದಿರಬೇಕು.ಒಂದು ಸಂಜೆ ಹಳ್ಳಿಯಲ್ಲಿ ಇವರ ಸ್ನಾನಕ್ಕೆ ಮನು ಸಿದ್ಧತೆ ಮಾಡುವಾಗ ಆ ಪುಟ್ಟ ಕಲ್ಲು ಇಲ್ಲದ್ದನ್ನು ಗಮನಿಸಿದಳು. ಎಲ್ಲೆಲ್ಲಿ ಹುಡುಕಾಡಿದರೂ ಅದು ಸಿಗಲಿಲ್ಲ. ಕೊನೆಗೆ ಆಕೆ ಗಾಂಧೀಜಿಗೆ ಹೇಳಿದಳು,  `ಬಾಪೂ, ಕಾಲು ತಿಕ್ಕಿಕೊಳ್ಳುವ ನಿಮ್ಮ ಪುಟ್ಟ ಕಲ್ಲು ಕಳೆದುಹೋಗಿದೆ. ಬಹುಶಃ ನಿನ್ನೆ ರಾತ್ರಿ ಉಳಿದುಕೊಂಡಿದ್ದೆವಲ್ಲ, ಆ ನೇಕಾರನ ಮನೆಯಲ್ಲಿಯೇ ಮರೆತು ಬಂದಿರಬೇಕು. ಬೇರೆ ಕಲ್ಲು ತಂದುಕೊಡಲೇ~.  ಗಾಂಧೀಜಿ ಕ್ಷಣಕಾಲ ಯೋಚಿಸಿ, `ಈಗ ಕತ್ತಲೆಯಾಗಿದೆ. ನಾಳೆ ಬೆಳಿಗ್ಗೆಯೇ ನೀನು ಆ ಹಳ್ಳಿಗೆ ಹೋಗಿ ಅದೇ ಕಲ್ಲು ತೆಗೆದುಕೊಂಡು ಬಾ. ಆಗಲೇ ನಿನಗೆ ಮತ್ತೊಮ್ಮೆ ನಿರ್ಲಕ್ಷ್ಯ ಮಾಡದಂತೆ ಬುದ್ಧಿ ಬರುತ್ತದೆ~ ಎಂದರು. ಮನು ಕೂಡ ಹದಿನಾರು ವರ್ಷದ ಪುಟ್ಟ ಹುಡುಗಿ. ಹಿಂದಿನ ಹಳ್ಳಿ ಸುಮಾರು ಆರೇಳು ಮೈಲಿ ದೂರ, ಒಬ್ಬಳೇ ಹೋಗುವುದಕ್ಕೆ ಹೆದರಿಕೆ. ಹೆದರುತ್ತ ಕೇಳಿದಳು,  `ಜೊತೆಗೆ ಇನ್ನಾರಾದರನ್ನೂ ಕರೆದುಕೊಂಡು ಹೋಗಲೇ~. ಗಾಂಧೀಜಿ ಖಚಿತವಾಗಿ ಹೇಳಿದರು,  `ಇಲ್ಲ, ನೀನೊಬ್ಬಳೇ ಹೋಗು, ಯಾವ ತೊಂದರೆಯೂ ಆಗುವುದಿಲ್ಲ~. ಪಾಪ! ಮನು ಗೊಣಗುತ್ತ ನಡೆದಳು. ತಾವು ನಿನ್ನೆ ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾ ಹೋಗಿ ಆ ಹಳ್ಳಿ ಸೇರಿದಳು.ನೇಕಾರನ ಹೆಂಡತಿ ಇವಳನ್ನು ಸಂತೋಷದಿಂದ ಬರಮಾಡಿಕೊಂಡಳು. ಒಂದು ಪುಟ್ಟ ಕಲ್ಲಿಗಾಗಿ ಇಷ್ಟು ದೂರ ಬಂದದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದಳು. ಇಬ್ಬರೂ ಸೇರಿ ಮನೆ ಎಲ್ಲ ಹುಡುಕಿದರೂ ಕಲ್ಲು ಸಿಗಲಿಲ್ಲ. ಬಹುಶಃ ಅದನ್ನು ತಾನು ತಿಪ್ಪೆಗೆ ಎಸೆದಿರಬೇಕು ಎನ್ನಿಸಿತು. ಸರಿ, ಇಬ್ಬರೂ ಸೇರಿ ತಿಪ್ಪೆಯನ್ನು ಕೆದರಿ ಹುಡುಕಿದರು. ಹ್ಞಾ. ಅಲ್ಲಿ ಬಿದ್ದಿತ್ತು ಆ ಪುಟ್ಟ ಕಲ್ಲು!ಮನುಗೆ ಕೊಹಿನೂರ್ ವಜ್ರ ಸಿಕ್ಕಷ್ಟು ಸಂತೋಷವಾಯಿತು. ಅದನ್ನು ತೆಗೆದುಕೊಂಡು ಮತ್ತೆ ನಡೆದು ಗಾಂಧೀಜಿ ಇದ್ದ ಹಳ್ಳಿಗೆ ಬಂದಳು. ಆಕೆಗೆ ಸಾಕಾಗಿ ಹೋಗಿತ್ತು. ಸುಮಾರು ಹದಿನೈದು ಮೈಲಿ ನಡೆದು ಆಯಾಸವಾಗಿದೆ, ಹಸಿವೆಯಾಗಿದೆ. ಅದರೊಂದಿಗೆ ಒಂದು ಪುಟ್ಟ ಕಲ್ಲಿಗಾಗಿ ತನಗೆ ಇಷ್ಟೊಂದು ಶ್ರಮ ಕೊಟ್ಟ ಗಾಂಧೀಜಿಯ ಮೇಲೆ ಸಿಟ್ಟು ಬಂದಿದೆ. ಬಂದವಳೇ ಅವರ ಮುಂದೆ ಆ ಕಲ್ಲನ್ನು ಕುಕ್ಕಿ `ತಗೊಳ್ಳಿ ನಿಮ್ಮ ಕಲ್ಲು~  ಎಂದಳು.ಗಾಂಧೀಜಿ ನಕ್ಕು ಅವಳನ್ನು ಹತ್ತಿರ ಕರೆದು ತಲೆ ನೇವರಿಸಿ ಹೇಳಿದರು.  `ನಿನಗೆ ಸುಸ್ತಾಗಿದೆ, ಸಿಟ್ಟು ಬಂದಿದೆ. ನನಗೆ ಗೊತ್ತು ಮಗೂ. ಈ ಕಲ್ಲು ನನ್ನ ಹತ್ತಿರ ಇದ್ದು ಇಪ್ಪತ್ತೈದು ವರ್ಷಗಳಾದವು. ನನಗೋಸ್ಕರ ಇದನ್ನು ಅಲ್ಲಿ ಇಲ್ಲಿ ಆರಿಸಿ ಪ್ರೀತಿಯಿಂದ ಕೊಟ್ಟದ್ದು ಮೀರಾ ಬೆಹೆನ್. ನನಗೆ ಅದು ಕಲ್ಲಲ್ಲ, ಅವಳ ಪ್ರೀತಿಯ, ಗೌರವದ ದ್ಯೋತಕ. ಪ್ರೀತಿಯ ಯಾವ ವಸ್ತುವನ್ನೂ ನಿರ್ಲಕ್ಷದಿಂದ ಕಾಣಬಾರದು, ಅದಕ್ಕೆ ಬೆಲೆ ಕಟ್ಟಬಾರದು. ಇನ್ನು ಮೇಲೆ ಪ್ರತಿಯೊಂದು ವಸ್ತುವಿನ ಬಗ್ಗೆ ಹೆಚ್ಚು ಗಮನ ನೀಡುತ್ತೀಯಲ್ಲ~ ಎಂದರು. ಮನು ತಲೆ ಅಲ್ಲಾಡಿಸಿದಳು. ಇದು ಗಾಂಧೀಜಿ ಬದುಕಿದ ರೀತಿ, ಅವರು ಪ್ರೀತಿಗೆ ಕೊಟ್ಟ ಮಹತ್ವ. ಪ್ರೀತಿಯಿಂದ ಕೊಟ್ಟ ಕಲ್ಲನ್ನು, ಚಿಕ್ಕ ಸೀಸದ ಕಡ್ಡಿಯನ್ನು, ಹರಿದ ಕಾಗದದ ಮೇಲೆ ಬರೆದ ಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಪ್ರೀತಿಯನ್ನು ಪಡೆದು ಪಡೆದು ಅದರಂತೆಯೇ ಜಗತ್ತಿಗೆಲ್ಲ ನೀಡಿ, ನೀಡಿ ಅವರೇ ಪ್ರೀತಿಯ ಸಾಗರವಾಗಿ ಹೋದರು. ಅವರ ನೆನಪಾದರೂ ನಮ್ಮ ಹೃದಯದಲ್ಲಿ ಪ್ರೀತಿಯ ಸೆಲೆ  ಉಕ್ಕಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry