ಪ್ರೀತಿ ಪ್ರೇಮದ ನಡುವೆ

7

ಪ್ರೀತಿ ಪ್ರೇಮದ ನಡುವೆ

Published:
Updated:

ಮನೆ ಮಗನಂತಿರುವ ಶಿಷ್ಯ ರವಿ ಎಂದಿನಂತೆ ಬಂದಿದ್ದ. ಗೊಣಗುತ್ತಾ ಮಾತಿಗೆ ಕೂತ. ಅವನು ಸದಾ ಹತ್ತಾರು ಪ್ರಶ್ನೆಗಳ ಪೆಂಡಿಯನ್ನೇ ಹೊತ್ತುಕೊಂಡು ಬರುತ್ತಾನೆ. ಅವನೆದೆಯೊಳಗೆ ನೂರಾರು ಗೊಂದಲಗಳು, ಏನೇನೋ ಹುಡುಕಾಟಗಳು ನಡೀತಾನೆ ಇರ್ತಾವೆ. ಬೇಡವೆಂದರೂ ಬೆಳೆಯುವ ಈತನ ಋಷಿಗಡ್ಡ ನೋಡಿದವರು ಈತ ಭಗ್ನಪ್ರೇಮಿಯೇ ಇರಬೇಕೆಂದು ಭಾವಿಸುತ್ತಾರೆ. ಎಲ್ಲಾ ಕಳೆದುಕೊಂಡ ಪಾಪರ್‌ಚೀಟಿ ಥರ ಕಾಣುತ್ತಾನೆ. ಜಗತ್ತಿನ ಜನ ಏನೆಂದುಕೊಳ್ಳುತ್ತಾರೆ ಎನ್ನುವ ವಿಷಯದಲ್ಲಿ ಅವನ್ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ.  ಇಂಥ ಪಟ್ಟಶಿಷ್ಯ ಒಮ್ಮಿಂದೊಮ್ಮೆಗೆ ‘ಸರ್ ನೀವು ಓದೋವಾಗ ಯಾರನ್ನಾದ್ರೂ ಲವ್ ಮಾಡಿದ್ರಾ?’ ಅಂತ ಸಡನ್ನಾಗಿ ಕೇಳಿಬಿಟ್ಟ. ಅವನ ಈ ದಿಢೀರ್ ಪ್ರಶ್ನೆಗೆ ನಾನು ತಬ್ಬಿಬ್ಬಾಗಿ ಹೋದೆ. ಎಲಾ ಇವನ ಮನೆ ಕಾಯ! ಶಿಷ್ಯನಾದವನು ಗುರುವಿಗೆ ಕೇಳುವ ಪ್ರಶ್ನೆನಾ ಇದು? ಇಲ್ಲೀ ತನಕ ಯಾರೂ ಹೀಗೆ ನನ್ನ ಖುಲ್ಲಂಖುಲ್ಲಾ ಎನ್‌ಕ್ವೈರಿ ಮಾಡಿರಲಿಲ್ಲ. ಇಂಥ ಮುಜುಗರದ ಪ್ರಶ್ನೆಗಳನ್ನು ಶಿಷ್ಯರಿಗೆ ಕೇಳುವ ಅಧಿಕಾರ ಇರುವುದು ನಮಗೆ ಮಾತ್ರ. ಅಂಥದ್ದರಲ್ಲಿ ಈತನೇ ನೇರಾನೇರಾ ಕೇಳುತ್ತಿದ್ದಾನೆಂದರೆ ಇವನಿಗೆಷ್ಟು ಪೊಗರಿರಬೇಡ? ಅದೂ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿ ಕೇಳುವವರಂತೆ ಕೇಳುತ್ತಿದ್ದಾನೆ! ಆ ಕ್ಷಣಕ್ಕೆ ನನ್ನ ಬಿಪಿ ಏರಿದರೂ ಇರಲಿ ಬಿಡೆಂದು ಸುಮ್ಮನಾದೆ. ನಿಧಾನಕ್ಕೆ ನನಗೇ ಅನ್ನಿಸ ಹತ್ತಿತು. ‘ಅವನು ಕೇಳಿದ್ದರಲ್ಲಿ ತಪ್ಪೇನಿದೆ?. ಯಾರೂ ಮಾಡದ, ಸೀಮ್ಯಾಗಿಲ್ಲದ ಪ್ರೇಮವಾ ನನ್ನದು. ಇಲ್ಲಿಯವರೆಗೆ ಗೆಳೆಯರ ಎದೆಯಲ್ಲಿ ಕೂತ ಬೆಚ್ಚನೆಯ ಪ್ರೇಮಕಥೆಗಳನ್ನೆಲ್ಲಾ ಅದೆಷ್ಟು ಮಜವಾಗಿ ನಾನು ಕಿತ್ತು ತಿಂದಿಲ್ಲ. ಈಗ ನನ್ನ ಸರದಿ ಬಂದಾಗ ಮಳ್ಳನಂತೆ ಮಾಡುತ್ತಿದ್ದೇನಲ್ಲಾ, ಇದು ಸರಿನಾ’ ಅಂತನ್ನಿಸಿತು.ಎದೆಯ ಮೂಲೆಯಲ್ಲಿ ದೂಳಿಡಿದು ಕೂತ ಹಳೆ ಕಡತಗಳ ಹಾಳಾದ ಮಾತುಗಳನ್ನು ಬಿಡಿಸಿಡುವುದು ಅಷ್ಟು ಸುಲಭದ ಕೆಲಸವಲ್ಲ. ಅದರ ಗಂಟು ಬಿಚ್ಚುವುದೇ ಒಂದು ಹರ ಸಾಹಸ.  ಅಂಥ ಮನದ ಮೂಲಕ್ಕೇ ರವಿ ಕೈ ಹಾಕುತ್ತಿದ್ದಾನಲ್ಲಾ! ಎಂದು ದಿಗಿಲಾಯಿತು. ‘ನದಿ ಮೂಲ, ಋಷಿ ಮೂಲ, ಇದ್ದಹಾಗೆ ಗುರು ಮೂಲ ಅಂತಾನೂ ಒಂದು ರೂಲ್ಸಿದೆ ಕಣೋ. ನೀನು ಅದನ್ನೆಲ್ಲಾ ಕೇಳೋ ಹಂಗಿಲ್ಲ. ನಿನ್ದೆ ಏನೋ ಶನಿಕಥೆಯೊಂದು ರೆಡಿ ಇದ್ದಂಗೆ ಕಾಣ್ತಿದೆ. ಮೊದಲು ಅದನ್ನು ಒದರು. ನನ್ನ ಸಹವಾಸಕ್ಕೆ ಮಾತ್ರ ಬರಬೇಡ’ ಎಂದು ಗುರಾಯಿಸಿದೆ.ಒಂದನೇ ತರಗತಿಯಿಂದಲೂ ಹುಡುಗರು ಒಂದೊಂದು ಹುಡುಗಿಯರನ್ನ ಹಂತಹಂತವಾಗಿ ಪ್ರೀತಿಸುತ್ತಾ ಬಂದಿರುತ್ತಾರೆ. ಅದನ್ನು ಯಾರಿಗೂ ಹೇಳದೆ ಮನದಲ್ಲಿ ಮುಚ್ಚಿಟ್ಟುಕೊಂಡಿರುತ್ತಾರೆ. ಹೀಗೆ ಲೆಕ್ಕ ಹಾಕಿದರೆ ಒಬ್ಬೊಬ್ಬರ ಜೀವನದಲ್ಲೂ ಎಂಟ್ಹತ್ತು ಪ್ರೇಮ ಕಥೆಗಳಿರುತ್ತವೆ. ಯಾರದ್ದೂ, ಮೊದಲ ಪ್ರೇಮ, ಶುದ್ಧ ಪ್ರೇಮ ಅಂತ ಇರೋದೆ ಇಲ್ಲ. ಈ ವಿಷಯದಲ್ಲಿ ಎಲ್ಲರೂ ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ. ಮೊದಲ ಪ್ರೀತಿಯನ್ನು ಪಡೆಯುವುದು ಬಲು ಕಷ್ಟದ ಕೆಲಸ. ಅದು ಪಕ್ಕಾ ಪ್ರೈಮರಿ ಶಾಲೆ ಪ್ರೀತಿ. ನಾವು ಬೆಳೆದಂತೆ ಪ್ರೀತಿ, ಪ್ರೇಮಗಳೂ ಬದಲಾಗುತ್ತಲೇ ಹೋಗಿರುತ್ತವೆ. ಸರಿಯಾದ ಬುದ್ಧಿ, ತಿಳಿವಳಿಕೆ, ಪಕ್ಕಾ ಜವಾಬ್ದಾರಿ ಮೂಡಿದ ಮೇಲೆ ಹುಟ್ಟುವ ಪ್ರೀತಿ, ಪ್ರೇಮಗಳು ಮಾತ್ರ ಒಂದಷ್ಟು ವರ್ಷ ಬಾಳಿ ಬದುಕುತ್ತವೆ. ಉಳಿದವೆಲ್ಲಾ ಗಾಳಿ ಗೋಪುರಗಳೇ. ನೆನಪು ಮಾಡಿಕೊಂಡು ಸುಖಿಸಲು, ದುಃಖಿಸಲಷ್ಟೇ ಅವು ಯೋಗ್ಯವಾಗಿರುತ್ತವೆ.ಇನ್ನು ನಮ್ಮ ರವಿಯ ಕತೆಗೆ ಬರೋಣ. ಈತ ಈಗಷ್ಟೇ ಪಿಜಿ ಮುಗಿಸಿಕೊಂಡು ಬಂದಿದ್ದ. ಸಿಕ್ಕಾಪಟ್ಟೆ ಗಜಿಬಿಜಿಗಳಲ್ಲಿ ಈತನಿರುವುದು ನನ್ನ ಮನಸ್ಸಿನ ಅರಿವಿಗೆ ಬರುತ್ತಿತ್ತು. ‘ಸನ್ಯಾಸಿ ಥರ ಗಡ್ಡ ಬೆಳೆಸಿಕೊಂಡು, ಅರ್ಥವಾಗದ ಕವಿತೆಗಳನ್ನು ಬರೀತಿದ್ದಾನೆ ಅಂದರೆ  ಇವನಿಗೆ ಪ್ರೀತಿ, ಪ್ರೇಮದ ಬಿಸಿ ತಾಗಿದೆ ಅಂತಾನೆ ಲೆಕ್ಕ. ಹೃದಯಕ್ಕೆ ಹೊಡೆತ ಬಿದ್ದ ಮನುಷ್ಯ ಮಾತ್ರ ಹೆಚ್ಚು ಒದ್ದಾಡುತ್ತಾನೆ. ಮಾತು ಮೌನದ ನಡುವೆ ತಡವರಿಸುತ್ತಾನೆ. ಹೇಳಿಕೊಳ್ಳಲಾಗದೆ ಚಡಪಡಿಸುತ್ತಾನೆ.ನಮ್ಮ ರವಿಗೂ ಇದೇ ಗತಿ ಬಂದಿರಬೇಕು. ವಿರಹದ ದಾರಿಯಲ್ಲಿ ಬಿದ್ದು ಅವನ ಸೊಂಟವೂ  ಮುರಿದಿರಬೇಕು’ ಎಂದು ತೀವ್ರವಾಗಿ ಅನ್ನಿಸತೊಡಗಿತು. ‘ತನ್ನ ಸ್ವಂತ ವಿಷಯ ಹೇಳಿಕೊಳ್ಳುವುದು ಬಿಟ್ಟು ಅಯೋಗ್ಯ ನನ್ನ ಮೀನಿನ ಬುಟ್ಟಿಗೇ ಕೈಹಾಕುತ್ತಿದ್ದಾನಲ್ಲಾ!. ಇವನು ಬಲ್‌ನನ್ಮಗ ಇದ್ದಾನೆ’ ಎಂದು ನಾನು ಗೊಣಗಿಕೊಳ್ಳುತ್ತಿರುವಾಗಲೇ, ರವಿ ಬಾಯಿ ತೆರೆದ. ‘ಸಾರ್ ಹೇಳಲೇ ಇಲ್ಲಾ. ನೀವು ಯಾರನ್ನಾದ್ರೂ ಇಷ್ಟಪಟ್ಟಿದ್ರಾ? ಇಲ್ಲಾ ಯಾರಾದ್ರೂ ನಿಮಗೇ ಬೆನ್ನು ಬಿದ್ದಿದ್ರಾ? ಅದನ್ನ ಹೇಳಲೇ ಇಲ್ಲವಲ್ಲಾ?’ ಅಂತ ಮತ್ತೆ ಕೊಕ್ಕೆ ಹಾಕಿದ. ನಂಗೂ ಒಂದು ಕ್ಷಣ ಹಳೆಯ ನೆನಪುಗಳು ಎದೆಯಾಳದಲ್ಲಿ ಕಲಕಾಡಿದವು. ಮುಖದ ಮೇಲೆ ನಗೆ ಮೂಡಿತು. ಅದನ್ನು ತೋರಗೊಡದೆ ‘ನನ್ನ ಡಬ್ಬಾ ಫ್ಲಾಶ್‌ಬ್ಯಾಕ್ ಸ್ಟೋರಿಯೆಲ್ಲಾ ಬಿಟ್ಟಾಕಪ್ಪ ತಂದೆ.ಅದೆಲ್ಲಾ ನನ್ನ ಹೆಂಡತಿ ಹತ್ರ ಹೇಳಿ ಈಗಾಗಲೇ ಉಗಿಸಿಕೊಂಡಿದ್ದೇನೆ. ನಿಂದೇನಾದ್ರೂ ಫ್ರೆಶ್ ಸ್ಟೋರಿ ಇದ್ರೆ ಈಚೆ ತೆಗೆಯಪ್ಪ. ಅದಕ್ಕೆ ಉಪ್ಪು, ಹುಳಿ, ಖಾರ, ಒಗ್ಗರಣೆ ನಾನು ಸೇರಿಸ್ತೀನಿ’ ಎಂದು ಹುರುಪು ತುಂಬಿದೆ. ನನ್ನ ಕಥೆ ಮೊದಲು ಕೇಳಿಕೊಂಡರೆ, ಆಮೇಲೆ ಅವನ ಕಥೆ ಹೇಳಿಕೊಳ್ಳಲು ಸಲೀಸಾಗುತ್ತೆ ಅನ್ನೋ ಪ್ಲಾನು ಅವನದು. ನಾನು ಬಿಡ್ತೀನಾ? ಮೊದಲು ನಿನ್ನ ಕಥೆ ಹೇಳು ಅಂದೆ. ಸುತ್ತಲ ಗಾಳಿಯನ್ನೆಲ್ಲಾ ಉಸಿರಿಗೆ ತುಂಬಿಕೊಂಡ ಅವನು ನಿಧಾನಕ್ಕೆ ತನ್ನ ಕಥೆಯ ಸುರುಳಿಗಳ ಬಿಚ್ಚತೊಡಗಿದ.‘ಓದೋವಾಗ ಹುಟ್ಟೋ ಪ್ರೀತಿ ಕಡೆವರೆಗೂ ಉಳಿಯುತ್ತೆ ಅನ್ನೋ ನಂಬಿಕೆ ನಂಗಿಲ್ಲ ಸಾರ್. ಉಳಿಸಿಕೊಳ್ಳೋಕೆ ಪ್ರಯತ್ನಪಟ್ರೂ ಜೀವನದಲ್ಲಿ ಅದಕ್ಕೆ ನ್ಯಾಯ ಒದಗಿಸೋಕೆ ಆಗೋದಿಲ್ಲ ಅನ್ನೊದು ನನ್ನ ಅಭಿಪ್ರಾಯ. ಓದೋವಾಗ ನಮಗೇ ಗೊತ್ತಾಗದಂಗೆ ಒಲವು ಅಂಟಿಕೊಂಡು ಬಿಡುತ್ತೆ. ಕೆಲವರು ಪ್ರೀತಿ, ಪ್ರೇಮ ಅಂತ ಏನೇನೋ ಬೊಗಳೇ ಬಿಟ್ಕೊಂಡು ಸುಳ್ಳುಸುಳ್ಳೇ ತಿರುಗ್ತಾರೆ ಸಾರ್. ಏನೂ ಹೇಳಕ್ಕಾಗದ ಪಾಪಿ ನನ್ಮಕ್ಕಳ ಕಥೆ ಪಕ್ಕಾ ಒನ್‌ವೇ ಥರಾ ಇರುತ್ತೆ ಸಾರ್. ಇತ್ತ ಪ್ರೀತಿನೂ ಬೇಕು, ಅತ್ತ ಜೀವನಾನೂ ಬೇಕು ಅನ್ನೋ ಪ್ರೇಮಿಗೆ ನನ್ನ ಥರದ ಫ್ರೀ ಗಡ್ಡ ಬಿಟ್ರೆ ಬೇರೇನೂ ಸಿಗಲ್ಲ ಸಾರ್’.‘ಒಂದು ಹುಡುಗಿಯ ಜತೆ ಒಬ್ಬ ಹುಡುಗ ಓಡಾಡ್ತಿದ್ರೆ ಸಾಕು. ನೋಡಿದೋರು ಅವರ ನಡುವೆ ಏನೋ ನಡೀತಾ ಇದೆ ಅಂತ ಗುಸುಗುಸು ಶುರುಮಾಡ್ತಾರೆ. ಈ ಗಾಳಿ ಸುದ್ದಿಗೆ ಮೊದಲು ಖುಷಿಯಾಗೋ ಪ್ರಾಣಿ ಹುಡುಗಾನೆ ಸಾರ್. ಆ ಬಕರ ನನ್ಮಗ ಅವಳ ಮೊಬೈಲ್‌ಗೊಂದು ಮೆಸೇಜ್ ಬಿಸಾಕ್ತಾನೆ. ‘ಒಂದು ವಿಷ್ಯ ಕೇಳ್ತೀನಿ ಬೇಜಾರಾಗಬಾರದು’ ಅಂತ ಒಂದು ಪೀಠಿಕೆ ಒಗೀತಾನೆ. ಆ ಹುಡುಗಿಗೆ ಒಳ್ಳೇ ಒಪಿನಿಯನ್ ಇದ್ದರೆ ಲವ್ ಛಕ್ಕಂತ ಫಿಕ್ಸ್ ಆಗುತ್ತೆ. ಇಲ್ಲಾ ಫುಲ್ ಫ್ಲಾಪ್ ಆಗುತ್ತೆ ಸಾರ್. ಹಿಂಗೆ ನನ್ನ ಲವ್ವೂ ಎರಡು ಮೂರು ಸಲ ಕಚ್ಕೊಂಡಿತ್ತು ಸಾರ್. ಆದ್ರೆ ಗ್ರಾಚಾರ ನೆಟ್ಟಗಿರಲಿಲ್ಲ.ಈ ಲವ್‌ಸ್ಟೋರಿಗಳು ಒಂಥರ ವಿಚಿತ್ರ ಇರುತ್ವೆ ಸಾರ್. ನಾವು ನೋಡಿ ಹುಡುಗ್ರು ದಡ್ಡಬಡ್ಡೀ ಮಕ್ಕಳು ಒಂದೇ ಸಿಮ್ ಹಿಡ್ಕೊಂಡು ಒಂದೇ ಹುಡುಗೀಗೆ  ಪ್ರ್ರಾಮಾಣಿಕವಾಗಿ ಲವ್‌ಚಾಟ್ ಮಾಡ್ತಿವಿ. ಹುಡುಗೀರ್ ಹತ್ರ ಎರಡು ಮೂರು ಸಿಮ್ ಇರ್ತಾವೆ ಸಾರ್. ಈ ಸುಡುಗಾಡು ಹುಡುಗೀರ ಹೃದಯ ಮಾತ್ರ ಒಂದು. ಸಿಮ್ ಹಾರ್ಟ್‌ಗಳು ಮಾತ್ರ ಸಿಕ್ಕಾಪಟ್ಟೆ ಇರ್ತಾವೆ ಸಾರ್. ಈಗಿನ ಲವ್ವು ನಿಮ್ ಜಮಾನ ಥರ ಪ್ಯೂರ್ ಇಲ್ಲಾ ಸಾರ್. ಈಗೇನಿದ್ರು ಸಿಮ್ ವಿತ್ ಕರೆನ್ಸಿ ಲವ್. ಮೊದಲ ದಿನ ಪಿಜಿ ಕ್ಲಾಸ್‌ಗೆ ಹೋದಾಗಲೇ ಯಾವ ಹುಡುಗಿ ಚೆನ್ನಾಗಿದ್ದಾಳೆ. ಯಾರ್ ನಮಗೆ ಸೆಟ್ ಆಗ್ಬಹುದೂಂತ ಹಂಗೆ ವಾರೆಗಣ್ಣಲ್ಲೇ ಸೋಸ್ಕೊಂಡು ಬಿಡ್ತೀವಿ ಸಾರ್. ಹಿಂಗೆಲ್ಲಾ ಮಾಡಬಾರದು ಅಂತ ಮನಸ್ಸು ಹೇಳಿದರೂ, ವಯಸ್ಸು ಕೇಳಬೇಕಲ್ಲಾ ಸಾರ್. ನಮ್ಮನ್ನ ಯಾರ್ ನೋಡಿ ಬ್ಯೂಟಿಫುಲ್ಲಾಗಿ ನಕ್ಕು ನಾಚ್ಕೆ ಚೆಲ್ತಾರೋ ಅವರನ್ನು ಮಾತಾಡಿಸಿ ಒಲಿಸಿಕೊಳ್ಳೋದಕ್ಕೆ ಟ್ರೈ ಮಾಡ್ತಿವಿ ಸಾರ್. ಆದ್ರೂ ನಮ್ಮ ಪಿಜಿ ಓದೋ ಹುಡುಗ್ರ ನಸೀಬೇ ಖರಾಬಾಗಿದೆ ಸಾರ್. ಇತ್ತಿತ್ತಲಾಗಿ ಅಷ್ಟೊಳ್ಳೆ ಫೇಸ್‌ಕಟ್ ಇರೋ ಹುಡ್ಗೀರೇ, ಪಿಜಿ ತಂಕ ಬರ್ತಾ ಇಲ್ಲಾ ಸಾರ್.ನನ್ನ ಕವಿತೆಗಳ ಮೊದಲ ಜೀವ ಆದವಳ ಹೆಸ್ರು ಶ್ವೇತಾ ಅಂತ ಸಾರ್. ನಾನು ಅವ್ಳ ಜೊತೆ ಹೆಚ್ಗೆ ಓಡಾಡ್ಲಿಲ್ಲ. ಮಾತಾಡಿದ್ದು ಕಡಿಮೇನೆ ಅನ್ಕಳಿ. ಕ್ಲಾಸಲ್ಲಿ ಕೂತಾಗ, ನಾನು ಅವಳ ಕಡೆ ಯಾವಾಗ ನೋಡ್ತಿದ್ದೆನೋ, ಅದೇ ಕ್ಷಣದಲ್ಲೇ ಅವಳೂನು ನನ್ನ ಕಡೆ ನೋಡುತ್ತಿದ್ದಳು ಸಾರ್. ಇದು ನಿಜ ಪ್ರೇಮವಲ್ಲದೆ ಮತ್ತೇನು? ಸಾರ್. ನಾವು ಒಟ್ಟಿಗೇ ಪರಸ್ಪರ ನೋಡ್ತೀವಲ್ಲಾ ಅಂತ ಕೇಳಿದರೆ ‘ಥೂ.. ನಿನ್ನ’ ಅಂದು ನಾಚಿ ಹೋಗುತ್ತಿದ್ದಳು ಸಾರ್. ಅವಳ ನಗು ಮತ್ತು ನಾಚಿಕೆ ಮೇಲೇನೆ ಎಷ್ಟೊಂದು ಕವಿತೆ ಬರೆದೆ ಸಾರ್. ನಿಜವಾಗಿಯೂ ಪ್ರೀತಿ ಅಂದ್ರೆ ಇದೇನಾ? ಅಂತ ಸಂಭ್ರಮ ಆಗ್ತಿತ್ತು. ಜೊತೆಜೊತೆಗೆ ಸಣ್ಣ ಹೆದರಿಕೆನೂ ಆಗ್ತಿತ್ತು ಸಾರ್.  ಕವಿತೆ ಬರಿಯೋಕೆ ಶ್ವೇತಾ ಕಾರಣವಾದಳು. ಹಳೇ ಸಿನಿಮಾಗಳನ್ನ ಸಿಕ್ಕಾಪಟ್ಟೆ ನೋಡಿದ್ದ ನಾನು ಆ ಸಿನಿಮಾಗಳ ಪ್ರಕಾರವೇ ಕವಿತೆ ಹೊಸೀತಿದ್ದೆ ಸಾರ್. ಅವಳಲ್ಲಿನ ಗುಣ ವಿಶೇಷಣಗಳಿಗೆ ರೂಪಕದ ಭಾಷೆ ಕೊಡುತ್ತಿದ್ದೆ. ಗೀಚಿದ ಭಾವನೆಗಳನ್ನೆಲ್ಲಾ ಮೆಸೇಜ್ ಮಾಡುತ್ತಿದ್ದೆ. ನನ್ನ ಕವಿತೆಗಳನ್ನು ಚೆನ್ನಾಗಿ ಮೆಚ್ಚಿಕೊಂಡ ಆಕೆ ಕೊನೆಗೆ ನನ್ನ ಮುಸುಡಿಯನ್ನು ಒಪ್ಪಿಕೊಳ್ಳಲೇ ಇಲ್ಲ ಸಾರ್. ಅಲ್ಲಿಗೆ ಅವಳ ಚಾಪ್ಟರ್ ಮುಗಿದೇ ಹೋಯಿತು ಸಾರ್. ನನ್ನ ಫಸ್ಟ್ ಲವ್ ಚಿಂದಿಯಾಗಿ ಹೋಯಿತು. ಅವಳಿಂದ ನಾನು ಕವಿಯಾದೆ.ಈ ನಡುವೆಯೇ ನನ್ನ ಗೆಳೆಯರಿಬ್ಬರು ಮೂವರಿದ್ದ ಹುಡುಗಿಯರ ಗುಂಪಿನಲ್ಲಿ ಇಬ್ಬರನ್ನು ಪಟಾಯಿಸಿದರು. ಅವರು ಪ್ರೀತಿಸದೇ ಉಳಿಸಿ ಬಿಟ್ಟ ಖಾಲಿ ಹುಡುಗಿಯೊಬ್ಬಳು ಆ ಗುಂಪಿನಲ್ಲಿ ಒಂಟಿಯಾಗಿದ್ದಳು. ಆ ಅಳಿದುಳಿದ ಒಬ್ಬಳ ಜೊತೆ ನನ್ನ ಹೊಸ ಪ್ರೇಮ ಮೂಡಲು ನನ್ನ ಗೆಳೆಯನೇ ನೆರವಾದ. ಮೊದಲೇ ಸೋತುಸುಣ್ಣವಾಗಿದ್ದ ನಾನು ಹೊಸಪ್ರೇಮ ಪಾಶಕ್ಕೆ ಬೀಳಲು ಹೆದರಿದೆ. ಗೆಳೆಯರೆಲ್ಲಾ ದಲ್ಲಾಳಿಗಳಂತೆ ಧೈರ್ಯ ತುಂಬಿದರು. ನಾನೇ ನೇರವಾಗಿ ಅವಳಲ್ಲಿ ಹೋಗಿ ಕೇಳಿದೆ. ನನ್ನ ಹಿಂದಿನ ಪ್ರೇಮದ ವಿಷಯವನ್ನು ಪ್ರಾಮಾಣಿಕವಾಗಿ ಅವಳಲ್ಲಿ ಹೇಳಿಕೊಂಡೆ. ಸದ್ಯ ಪ್ರೇಮವಿರಹಿ ಎಂದು ಪರಿಚಯಿಸಿಕೊಂಡೆ. ‘ನಾನು ನಿನ್ನ ಮದುವೆಯಾಗುತ್ತೇನೆ. ನೀನು ಒಪ್ಪಿಕೊಂಡರೆ, ನನಗೆ ಕೆಲ ಸಮಯ ಬೇಕು. ನಾನು ಜೀವನದಲ್ಲಿ ಮೊದಲು ನೆಲೆ ನಿಲ್ಲಬೇಕು. ದುಡಿಯುವ ದಾರಿ ಹುಡುಕಬೇಕು. ಅದಕ್ಕೆ ಅವಕಾಶ ಕೊಡುವೆಯಾ?’ ಎಂದು ವಿನಮ್ರವಾಗಿ ಕೇಳಿದೆ.ಒಪ್ಪಿಕೊಂಡ ಅವಳು, ತಕ್ಷಣಕ್ಕೆ ‘ನಿನ್ನ ಜಾತಿ ಯಾವುದು ರವಿ’ ಅಂತ ಮುಖಕ್ಕೆ ಹೊಡೆದಂತೆ ಕೇಳಿದಳು. ‘ಪ್ರೀತಿಗೂ ಜಾತಿಯ ಶನಿಯೆ?. ಥೂ! ಕರ್ಮವೇ’ ಅಂತನ್ನಿಸಿತು. ನಾನು ‘ನನಗೆ ಸುಡುಗಾಡು ಜಾತೀಲಿ ನಂಬಿಕೆಯಿಲ್ಲ. ಆದರೂ ನೀನು ಕೇಳ್ತಾ ಇದ್ದೀಯ ಅಂತ ಹೇಳ್ತಾ ಇದ್ದೇನೆ’ ಎಂದು ಮನಸ್ಸಿಗೆ ಕಹಿಯೆನಿಸಿದರೂ ನನ್ನ ಜಾತಿಯ ಹೆಸರು ಹೇಳಿದೆ. ನನ್ನ ಜಾತಿ ತಿಳಿದ ಅವಳು ಮುಖದ ವರಸೆ ಬದಲಿಸಿದಳು. ‘ನಮ್ಮ ಮನೇಲಿ ಬೇರೆ ಜಾತಿ ಹುಡುಗನ್ನ ಒಪ್ಪಿಕೊಳ್ಳೋದಿಲ್ಲ್ಲಪ್ಪ. ಐ ಯಾಮ್ ಸಾರಿ’ ಅಂದ್ಲು. ನನಗೆ ಎಂದಿನಂತೆ ಮತ್ತೆ ಆಘಾತವಾಯಿತು. ಆಕೆ ಮಾತ್ರ ‘ದಯವಿಟ್ಟು ಬೇಜಾರಾಗಬೇಡ ಐ ಲವ್ ಯೂ. ಬಟ್ ಐ ಮಿಸ್ ಯೂ’ ಎಂದು ನಗುತ್ತಾ ಹೇಳಿದಳು. ಆ ನಗು ನನ್ನ ಸಾವಿನಂತೆ ಕಾಣುತ್ತಿತ್ತು.ಕೊಲ್ಲುವ ಕತ್ತಿಯೂ ನಗುತ್ತದೆ ಎಂದು ನನಗೆ ಆ ದಿನವೇ ಗೊತ್ತಾಗಿದ್ದು ಸಾರ್. ಸದ್ಯ ಅದು  ನನ್ನ ಪಿಜಿ ಮುಗಿಯುವ ಕೊನೆಯ ದಿನಗಳು. ಆಗೋದೆಲ್ಲಾ ಒಳ್ಳೆಯದಕ್ಕೇ ಇರಬೇಕು ಸಾರ್. ಇಲ್ಲದಿದ್ದರೆ ನೋಡಿ. ಪ್ರೀತಿಸಿ ಮೋಸಹೋದ ನನ್ನ ಗೆಳೆಯ ಮಂಜು ಕೊನೆಗೆ ಹೇಗೆ ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಂಡ. ಅದೇ ಸಾವು ನಂದೂ ಆಗುತ್ತಿತ್ತು ಸಾರ್.ಇಷ್ಟೆಲ್ಲಾ ಅವಘಡಗಳು ಆದ ಮೇಲೆ ಈ ಪ್ರೀತಿ, ಪ್ರೇಮದ ಸಹವಾಸವೇ ಬೇಡವೆಂದು ನಾನು ನಿರ್ಧರಿಸಿದ್ದೆ. ಅಷ್ಟರಲ್ಲಿ ಮತ್ತೊಬ್ಬಳು ಚೆಲುವೆ ನನ್ನ ಜೀವನದಲ್ಲಿ ಥಟ್ಟಂತ ನುಸುಳಿಬಂದಳು.  ನನ್ನ ನಿಜವಾದ ಪ್ರೀತಿ, ಕಳೆದು ಹೋದ ನನ್ನ ಮನಸ್ಸಿನ ಭಾವನೆಗಳನ್ನ ಹುಡುಕುವುದರಲ್ಲಿ ಕಳೆದುಹೋಗಿದ್ದ ನಾನೇ ಅವಳ ಪ್ರೀತಿಯನ್ನ ನಯವಾಗಿ ತಿರಸ್ಕರಿಸಿಬಿಟ್ಟೆ. ಆಕೆ ಬೇಸರಗೊಳ್ಳಲಿಲ್ಲ.  ಒಳ್ಳೆಯ ಮನಸ್ಸಿನವಳು. ಹೀಗಾಗಿ, ಈ ಕ್ಷಣಕ್ಕೂ ನನಗೆ ಒಳ್ಳೆಯ ಸ್ನೇಹಿತೆಯಾಗಿ ಉಳಿದಿದ್ದಾಳೆ. ಜೀವನದಲ್ಲಿ ಕೈಕೊಡುವ ಪ್ರೇಮಿಗಳಿಗಿಂತ ಒಳ್ಳೆಯ ಗೆಳತಿಯರು ಇರೋದೇ ಒಳ್ಳೇದಲ್ವಾ ಸಾರ್.’ ಎಂದು ತನ್ನ ಸುದೀರ್ಘ ಕಥೆ ಹೇಳಿದ ರವಿ ವಿರಹದ ಗಡ್ಡದ ಮೇಲೆ ಕೈಯಾಡಿಸಿಕೊಂಡ. ಅವನ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಮೈ ಕಂಪಿಸುತ್ತಿತ್ತು.ಅವನ ಪ್ರೇಮ ಪುರಾಣ ಕೇಳಿ ನಾನು ಸುಸ್ತಾಗಿ ಹೋದೆ. ಒಳ್ಳೆ ಆಫರ್ ಬಂದಾಗ ಸಿಮ್‌ಕಾರ್ಡ್ ಬದಲಾಯಿಸುವಂತೆ ಪ್ರೀತಿ, ಪ್ರೇಮ, ಬದಲಾಯಿಸುವ ಈಗಿನ ಹುಡುಗರಿಗೆ ಏನು ಹೇಳುವುದು. ಇಲ್ಲಿ ಯಾವುದು ಪ್ರೀತಿ, ಯಾವುದು ನೀತಿ, ಯಾರು ಸರಿ, ಯಾವುದು ತಪ್ಪು? ನಾನೂ ಅರಿಯದಂತಾದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry