ಶುಕ್ರವಾರ, ಜೂಲೈ 3, 2020
28 °C

ಪ್ರೇಮ ಎಂದರೆ ಅದೇನು ಸಾಮಾನ್ಯ ಸಂಗತಿಯೇ?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಪ್ರೇಮ ಎಂದರೆ ಅದೇನು ಸಾಮಾನ್ಯ ಸಂಗತಿಯೇ?

ನಡುವೆ ಎಷ್ಟೊಂದು ಸಮುದ್ರ, ಎಷ್ಟೊಂದು ಭೂಮಿ? ಎಲ್ಲಿಯ ನ್ಯೂಜಿಲೆಂಡ್ ಎಲ್ಲಿಯ ಜೋರ್ಡಾನ್? ಪ್ರೇಮವೇ ಹಾಗೆ. ನ್ಯೂಜಿಲೆಂಡಿನ ಒಬ್ಬ ಚೆಲುವೆ ಜೋರ್ಡಾನಿನ ಬೊದುವಿಯಾನ್ ಬುಡಕಟ್ಟು ಯುವಕನಿಗೆ ಮರುಳಾದ ಕಥೆ ಇದು. ಅದು 1975ನೇ ಇಸವಿ. ಮಾರ್ಗರೆಟ್ ಎಂಬ 22ರ ಹರಯದ ಬೆರಗುಗಣ್ಣಿನ ಯುವತಿ ಗ್ರೀಸ್, ಈಜಿಪ್ಟ್ ಮತ್ತು ಜೋರ್ಡಾನಿನ ಪ್ರವಾಸಕ್ಕೆಂದು ಮನೆಯವರ ಜತೆಗೆ  ಹೊರಟಳು.ತಿಂಗಳುಗಟ್ಟಲೆ ಅವಧಿಯ ಸುದೀರ್ಘ ಪಯಣವದು. ತವರು ದೇಶ ನ್ಯೂಜಿಲೆಂಡಿನಿಂದ ಅದು ತನ್ನ ಕೊನೆಯ ಪಯಣ ಎಂದು ಆಕೆಗೆ ಗೊತ್ತಿರಲಿಲ್ಲ. ಗ್ರೀಸ್, ಈಜಿಪ್ಟ್ ಮುಗಿಸಿಕೊಂಡು ಜೋರ್ಡಾನಿಗೆ  ಬಂದರು. ಅದು ಅವರ ಪ್ರವಾಸದ ಕೊನೆ. ಜಗತ್ತಿನ ಅದ್ಭುತ ಶಿಲ್ಪ ಪೆಟ್ರಾ ನೋಡಲು ಬಂದರು. ಅಲ್ಲಿ ಅವರಿಗೆ ಮೊಹ್ಮದ್ ಎಂಬ ಯುವಕ ಎದುರಾದ. ಪೆಟ್ರಾದ ಸುತ್ತಮುತ್ತಲಿನ ಗುಹೆಗಳಲ್ಲಿ, ಬೆಟ್ಟದ ಪಕ್ಕದ ಟೆಂಟ್‌ಗಳಲ್ಲಿ ಜೋರ್ಡಾನಿನ ಬೊದುವಿಯಾನ್ ಬುಡಕಟ್ಟು ಜನ ವಾಸವಾಗಿದ್ದಾರೆ. ಮೊಹ್ಮದ್ ಕೂಡ ಅವರಲ್ಲಿ ಒಬ್ಬ.ಮಾರ್ಗರೆಟ್ ಮತ್ತು ಆಕೆಯ ಸಂಬಂಧಿಕರಿಗೆ ಆತ ತನ್ನ ಜತೆಗೆ ಇರಲು ಆಹ್ವಾನ ನೀಡಿದ. ಮನೆ ಮಠ ಎಂದರೆ ಏನೂ ಗೊತ್ತಿಲ್ಲದ ಬೊದುವಿಯಾನ್ ಜನರು ತಮ್ಮ ಬೆಚ್ಚನೆಯ ಪ್ರೀತಿಗೆ  ಹೆಸರಾದವರು. ಆತನ ಆಹ್ವಾನ ಒಪ್ಪಿಕೊಂಡ ಮಾರ್ಗರೆಟ್ ಮತ್ತು ಸಂಬಂಧಿಕರು ಆ ದಿನ ಅಲ್ಲಿಯೇ ಉಳಿದರು. ಆಗಲೂ ಮಾರ್ಗರೆಟ್‌ಗೆ ಆ ಗುಹೆಯೇ ತನ್ನ ಕಾಯಂ ಮನೆ ಆಗಬಹುದು ಎಂದು ಅನಿಸಿರಲಿಲ್ಲ. ವಿಚಿತ್ರ ಎಂದರೆ ಮೊಹ್ಮದ್ ಪಶ್ಚಿಮದ ಒಬ್ಬ ಹೆಣ್ಣುಮಗಳ ಜತೆಗೆ ಮದುವೆಯಾಗಬೇಕು ಎಂದು ಹುಡುಕುತ್ತಿದ. ಮಾರ್ಗರೆಟ್ ನೋಡಿ ಆತನ ಕಣ್ಣಿನಲ್ಲಿ ಸಣ್ಣ ಮಿಂಚು, ಸೆಳಕು.ಮಾರ್ಗರೆಟ್‌ಳ ಮನಸ್ಸಿನಲ್ಲಿಯೂ ಆತ ನೆಲೆ ನಿಂತ. ಹೊರಡುವ ದಿನ ಬಂದಾಗ ಮಾರ್ಗರೆಟ್ ತನ್ನ ತಾಯಿಗೆ ಹೇಳಿದಳು, `ನಾನು ಮೊಹ್ಮದ್‌ನನ್ನು ಮದುವೆಯಾಗುತ್ತೇನೆ~ ಎಂದು.  `ಹೋಗಿ, ಹೋಗಿ ಬುಡಕಟ್ಟಿನ ಯುವಕನನ್ನು ಮದುವೆಯಾಗುವುದೇ? ನಮ್ಮ ದೇಶದಲ್ಲಿ ಬೇಕಾದಂಥ ವರ ಸಿಗುತ್ತಿದ್ದ~ ಎಂದು ತಾಯಿ ಅಂದಕೊಂಡಿದ್ದರೆ ಅಚ್ಚರಿಯೇನೂ ಇರಲಿಲ್ಲ. ಆದರೆ, ಮಗಳು ಇಂಥ ಒಂದು ಯಡವಟ್ಟಿನ ಅಚ್ಚರಿ ಮಾಡಬಹುದು ಎಂಬ ಅನುಮಾನ ಆಕೆಗೆ ಇತ್ತು. `ಆಗಲಿ~ ಎಂದರು.ಮಾರ್ಗರೆಟ್ ಮತ್ತು ಮೊಹ್ಮದ್ ಒಂದು ಕೊಠಡಿ (!)ಯ ಗುಹೆಯಲ್ಲಿ ಸಂಸಾರ ಆರಂಭಿಸಿದರು. ಕುಸುಮದಷ್ಟು ಕೋಮಲೆಯಾದ ಹೆಣ್ಣಿನ ದಾಂಪತ್ಯ ತಣ್ಣಗೆ ಕೊರೆಯುವ ನೆಲದ ಮೇಲೆ ಹಾಸಿದ ಚಾಪೆಯ ಮೇಲೆಯೇ ಸಾಗಿತು. ರಾತ್ರಿ ಮಲಗುವಾಗ ಹಾಸಿದರು. ಬೆಳಿಗ್ಗೆ ಎದ್ದು ಸುತ್ತಿ ಮೂಲೆಯಲ್ಲಿ ಇಟ್ಟರು. ನ್ಯೂಜಿಲೆಂಡಿನ ತನ್ನ ಮನೆಯಲ್ಲಿ ಕೊಳಾಯಿಯಲ್ಲಿ ನೀರು ಬರುತ್ತಿತ್ತು. ಶೌಚಾಲಯ ಇತ್ತು. ಫ್ರಿಡ್ಜ್ ಇತ್ತು. ಏನಿರಲಿಲ್ಲ? ಇಲ್ಲಿ ಏನೆಂದರೆ ಏನೂ ಇರಲಿಲ್ಲ! ಹೊತ್ತು ಕಳೆಯಲು ಶಾಪ್, ಮಾಲ್, ರೆಸ್ಟಾರೆಂಟ್, ಬಾರ್ ಎಂದೆಲ್ಲ ತನ್ನ ದೇಶದಲ್ಲಿ ಎಲ್ಲಿ ಬೇಕೆಂದರೆ ಅಲ್ಲಿಗೆ ಹೋಗುತ್ತಿದ್ದಾಕೆಗೆ ಇಲ್ಲಿ ಏನೂ ಇರಲಿಲ್ಲ. ಸುತ್ತಲೂ ದಿಗಿಲು ಹುಟ್ಟಿಸುವ ಎತ್ತರದ ಕಲ್ಲು ಬೆಟ್ಟಗಳು, ನೀರವ ಮೌನ. ಆಗೀಗ ಬರುವ ಪ್ರವಾಸಿಗರು ಬಿಟ್ಟರೆ ಬೇರೆ ಬದುಕೇ ಇಲ್ಲ. ಮಾರ್ಗರೆಟ್‌ಗೆ ಗಂಡನ ಭಾಷೆಯೂ ಬರುತ್ತಿರಲಿಲ್ಲ!ಗಂಡನ ಜೀವನದ ವೇಗ ಬೇರೆಯೇ ಇತ್ತು. ಪೆಟ್ರಾ ನೋಡಲು ಬರುವ ಪ್ರವಾಸಿಗರಿಗೆ ಸ್ಮರಣಿಕೆ ಮಾರುವ ಅಂಗಡಿ ಇಟ್ಟುಕೊಂಡಿದ್ದ. ಈಕೆಯೂ ಆತನ ಜತೆಗೆ ಅಂಗಡಿಯಲ್ಲಿ ಹೋಗಿ ಕುಳಿತುಕೊಂಡಳು. ನೀರು ತಂದಳು. ತನಗೆ ಬಂದ ಅಡುಗೆ ಮಾಡಿದಳು. ಗಂಡನ ಜತೆಗೆ ಕುಳಿತುಕೊಂಡು ಊಟ ಮಾಡಿದಳು. ಆದರೂ ಹೊತ್ತು ಹೋಗಲಿಲ್ಲ. ಹಿಂದೆ ಯಾವಾಗಲೋ ನ್ಯೂಜಿಲೆಂಡಿನ ಒಂದು ಕ್ಲಿನಿಕ್‌ನಲ್ಲಿ ಕೆಲಸ ಮಾಡಿದ ನೆನಪಾಯಿತು. `ಇಲ್ಲಿ ಏಕೆ ತಾನು ನರ್ಸ್ ಆಗಿ ಕೆಲಸ ಮಾಡಬಾರದು~ ಅನಿಸಿತು. ಅಲ್ಲಿಯೇ ತರಬೇತಿ ಪಡೆದಳು. ನಂತರ ಅನೇಕ ವರ್ಷ ನರ್ಸ್ ಆಗಿ ಕೆಲಸ ಮಾಡಿದಳು. ಕ್ಲಿನಿಕ್‌ಗೆ ಬರುವ ಜನರ ಜತೆಗೆ ಮಾತನಾಡುತ್ತ ಬೊದುವಿಯಾನ್ ಭಾಷೆ ಕಲಿತಳು.ಮಧ್ಯದಲ್ಲಿ ಮೂರು ಮಕ್ಕಳಾದುವು. ಮೊಹ್ಮದ್ ಮೂತ್ರಪಿಂಡ ವೈಫಲ್ಯದಿಂದ ಸತ್ತು ಹೋದ. ಮಾರ್ಗರೆಟ್ ಈಗಲೂ ಪೆಟ್ರಾ ಪಕ್ಕದಲ್ಲಿ ಒಂದು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾಳೆ. ಮೂವರು ಮಕ್ಕಳಲ್ಲಿ ಇಬ್ಬರು ಜೋರ್ಡಾನಿನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ತಂದೆಯ ವ್ಯಾಪಾರ ಮುಂದುವರಿಸಿದ್ದಾನೆ.ಮೊನ್ನೆ ನಾನು ಜೋರ್ಡಾನಿಗೆ ಹೋದಾಗ ಆಕೆಯ ಅಂಗಡಿಗೆ ಹೋಗಿದ್ದೆ. ಪೆಟ್ರಾ ಸುತ್ತಲಿನ ಪರಿಸರದಲ್ಲಿ ಬರೀ ಬೊದುವಿಯಾನ್ ಸಮುದಾಯದ ಜನರಿಗೆ ಮಾತ್ರ ಮಳಿಗೆ ಹಾಕಿಕೊಂಡು ವ್ಯಾಪಾರ  ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅಲ್ಲಿ ಒಬ್ಬ ಬಿಳಿ ಹೆಣ್ಣುಮಗಳನ್ನು ನೋಡಿ ನನಗೆ ಅಚ್ಚರಿಯಾಯಿತು. ಈಗಲೂ ಅಷ್ಟೇ ಕುಸುಮ ಕೋಮಲೆ ಅನಿಸುವಂಥ ಕೋಲುಮುಖದ, ತಲೆಯ ಮೇಲೆ ಕ್ಯಾಪು ಧರಿಸಿದ ಮಾರ್ಗರೆಟ್ ಈಗ ಬೆಳ್ಳಿಯ ಕುಸುರಿ ಕೆಲಸದ ವಸ್ತುಗಳನ್ನು ಮಾರುತ್ತಿದ್ದಾಳೆ.ಒಂದೆರಡು ವಸ್ತುವಿನ ಬೆಲೆ ಕೇಳಿದೆ. ದುಬಾರಿ ಅನಿಸಿತು. ಅಲ್ಲಿಯವರೆಗೆ ನಾನು ಆಕೆಯನ್ನು ಗಮನಿಸಿರಲೇ ಇಲ್ಲ. ಅವಳ ಅಂಗಡಿಯಲ್ಲಿ ಕೆಲವು ಪುಸ್ತಕಗಳೂ ಇದ್ದುವು. ಅದು ಆಕೆ ಬರೆದ `ಮ್ಯಾರೀಡ್ ಟು ಬೊದುವಿಯಾನ್~ ಪುಸ್ತಕದ ಪ್ರತಿಗಳು. ಹಲವು ಮುದ್ರಣಗಳನ್ನು ಕಂಡಿರುವ ಈ ಪುಸ್ತಕ  ಬರೀ ಮಾರ್ಗರೆಟ್ ಮತ್ತು ಮೊಹ್ಮದ್‌ನ ಕಥೆ ಮಾತ್ರವಲ್ಲ. ಒಟ್ಟು ಬೊದುವಿಯಾನ್ ಸಮುದಾಯದ ಕಥೆ.ಗಂಡ ಸತ್ತ ಮೇಲೆ ಮಾರ್ಗರೆಟ್ ಬೊದುವಿಯಾನ್ ಬುಡಕಟ್ಟು ಜನರ ಉದ್ಧಾರಕ್ಕೆ  ಕಂಕಣ ತೊಟ್ಟಿದ್ದಾರೆ. ಈ ಬುಡಕಟ್ಟಿನ ಹೆಣ್ಣು ಮಕ್ಕಳಿಗೆ ಬೆಳ್ಳಿಯ ಕುಸುರಿ ಕೆಲಸದ ವಸ್ತುಗಳನ್ನು ತಯಾರಿಸಲು ಹೇಳಿದ್ದಾರೆ. ಆ  ವಸ್ತುಗಳನ್ನು ಮಾರ್ಗರೆಟ್ ಪ್ರವಾಸಿಗರಿಗೆ ಮಾರುತ್ತಿದ್ದಾರೆ. ಲಾಭದಲ್ಲಿ ಕೆಲವು ಪಾಲು ಆ ಹೆಣ್ಣು ಮಕ್ಕಳಿಗೆ  ಹೋಗುತ್ತಿದೆ. `ಹಾಗಾಗಿ ನಿಮಗೆ ವಸ್ತುಗಳು ಕೊಂಚ ದುಬಾರಿ ಎನಿಸುತ್ತವೆ~ ಎಂದು ಮಾರ್ಗರೆಟ್ ಮೃದುವಾದ ದನಿಯಲ್ಲಿ ಹೇಳಿದರು. ಆಕೆ ಹಾಗೆ ಹೇಳಿದ ಮೇಲೆ ಒಂದೆರಡು ವಸ್ತು ತೆಗೆದುಕೊಳ್ಳಬೇಕು ಅನಿಸಿತು. ಆದರೆ, ಕಿಸೆಗೆ ಅಷ್ಟು ಶಕ್ತಿ ಇರಲಿಲ್ಲ.

ಮನಸ್ಸು ನೊಂದಿತು. ಮುಂದೆ ಇನ್ನೊಂದು ಅಂಗಡಿಗೆ ಹೋದೆ. ಆದರೆ, ಮಾರ್ಗರೆಟ್ ಸುತ್ತಲೇ ಅದು ಸುತ್ತುತ್ತಿತ್ತು. ಏಕೋ ಏನೋ ವಾಷಿಂಗ್ಟನ್‌ನ ಶ್ವೇತಭವನದ ಎದುರು ಮೂವತ್ತು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿರುವ ಕಾನ್ನಿ ನೆನಪಾದಳು... ಮುಂದಿನ ಅಂಗಡಿಯಲ್ಲಿ ಅಬ್ದುಲ್ಲಾ ಎಂಬ 60ರ ಆಸುಪಾಸಿನ ವ್ಯಕ್ತಿ ಕುಳಿತಿದ್ದ.  ಆತನೂ ಬುಡಕಟ್ಟಿನ ಮನುಷ್ಯನೇ. ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ. `ಇಷ್ಟೊಂದು ಒಳ್ಳೆಯ ಇಂಗ್ಲಿಷ್ ಎಲ್ಲಿ ಕಲಿತೆ ಮಾರಾಯಾ~ ಎಂದೆ. `ಬರುತ್ತಾರಲ್ಲ, ನಿತ್ಯ ಪ್ರವಾಸಿಗರು. ಅವರ ಜತೆ ಮಾತನಾಡುತ್ತ ಕಲಿತೆ~ ಎಂದ.ನನ್ನ ಬೋಳುತಲೆ  ನೋಡಿ, `ನಿನಗೆ ಎಷ್ಟು ಮಂದಿ ಹೆಂಡಂದಿರು~ ಎಂದ. ಬೋಳುತಲೆಯವರಿಗೆ ಹೆಂಡಂದಿರು ಹೆಚ್ಚು ಎಂಬುದು ಅವನ ನಂಬಿಕೆ! `ನನಗೆ ಆ ಅದೃಷ್ಟವಿಲ್ಲ. ಒಬ್ಬಳೇ  ಹೆಂಡತಿ. ನಿನಗೆ?~ ಎಂದೆ. `ನನಗೆ ನಾಲ್ಕು ಮಂದಿ ಹೆಂಡಂದಿರು. ಒಬ್ಬರಿಗಿಂತ ಒಬ್ಬರು ನನ್ನನ್ನು ಹೆಚ್ಚು ಪ್ರೀತಿ ಮಾಡಿದರು.ನಾಲ್ಕನೆಯವಳನ್ನು ಕಟ್ಟಿಕೊಳ್ಳುವಾಗ ಮೂರನೆಯವಳು ನನ್ನ ಗಂಟಲಿಗೆ ಗುರಿಯಿಟ್ಟು ಗುಂಡು ಹಾರಿಸಿದಳು. ನೋಡು ಇಲ್ಲಿ~ ಎಂದು ತೋರಿಸಿದ. ಅವನ ಗಂಟಲಿಗೆ ಹಲವು ಹೊಲಿಗೆ  ಬಿದ್ದಿದ್ದವು. ದವಡೆ ಸ್ವಲ್ಪ ಸೊಟ್ಟಗಾಗಿತ್ತು. `ಗಂಟಲಿಗೆ ಗುಂಡಿಟ್ಟರೂ ಹೇಗೆ ಬದುಕಿದೆ~ ಎಂದು ಮತ್ತೆ ಕೇಳಿದೆ. `ಒಂದು ಕಡೆಯಿಂದ ಮತ್ತೊಂದು ಕಡೆ ಗುಂಡು ತೂರಿ ಹೋಯಿತು. ಆದರೆ, ಮೂರು ತಿಂಗಳು ಆಸ್ಪತ್ರೆಯಲ್ಲಿ ಇದ್ದೆ~ ಎಂದ. ನನಗೆ ಒಬ್ಬಳೇ  ಹೆಂಡತಿ ಎಂದರೆ ಆತನಿಗೆ ನಂಬಿಕೆಯೇ ಬರಲಿಲ್ಲ. `ಹಾಗಾದರೆ, ನಿನಗೆ ಎಷ್ಟು ಮಂದಿ ಗೆಳತಿಯರು~ ಎಂದ. `ನೀನು ಹೇಳುವ ಅರ್ಥದಲ್ಲಿ ಯಾರೂ ಇಲ್ಲ~ ಎಂದೆ. `ಅಂದರೆ ನೀನು ನಿನ್ನ ಹೆಂಡತಿಯನ್ನು ತುಂಬ ಪ್ರೀತಿ ಮಾಡುತ್ತಿರಬಹುದು~ ಎಂದು ಮತ್ತೆ ಕೆಣಕಿದ. `ಅದು ಅವಳಿಗೆ ಅರ್ಥವಾದರೆ ತಾನೇ?~ ಎಂದೆ. ಜೋರಾಗಿ ನಕ್ಕ. `ಹೌದು ಹೆಣ್ಣು ಮಕ್ಕಳೇ ಹಾಗೆ~ ಎಂದ. ತಾನು ಒಂಟೆಯ ಹಾಲು ಕುಡಿದು ಪ್ರೀತಿ ಮಾಡಿದ ಪೋಲಿ ಕಥೆಗಳನ್ನೆಲ್ಲ ಹೇಳತೊಡಗಿದ. 60ರ ಹರಯದ ಅಬ್ದುಲ್ಲಾನ ಜೀವನ ಪ್ರೀತಿ ಕಂಡು ದಂಗಾದೆ. ಎದುರು ಕಂಡರೆ ತಬ್ಬಿಕೊಳ್ಳುವ, ತಬ್ಬಿಕೊಳ್ಳಬೇಕು ಅನಿಸುವ ಇಂಥದೇ ಪ್ರೀತಿಗೆ ಮಾರ್ಗರೆಟ್ ಕೂಡ ಸೋತಿರಬೇಕು ಅನಿಸಿತು. ಪ್ರೇಮ ಎಂದರೆ ಅದೇನು ಸಾಮಾನ್ಯ ಸಂಗತಿಯೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.